ಚಿಟ್ಟೆಗಳದ್ದು ವರ್ಣಮಯ ಸಣ್ಣ ಬದುಕು. ಜೀವಿಸುವುದು ಕೆಲವೇ ದಿನಗಳಾದರೂ ಎಲ್ಲರ ಮನ ಸೆಳೆಯುವ ಮತ್ತು ಸೃಷ್ಟಿಯಲ್ಲಿ ತನ್ನ ಕರ್ತವ್ಯ ಪರಿಪಾಲಿಸುವ ಕೀಟಗಳ ಜಾತಿಗೆ ಸೇರಿದವು. ಈ ಗುಂಪಿನಲ್ಲಿ ಅಮೋಘ ಜೀವವೈವಿಧ್ಯತೆಯನ್ನು ಕಾಣಬಹುದು. ಅಂತಹ ಒಂದು ಪ್ರಭೇದವೆಂದರೆ ನಿಂಬಿ ಚಿಟ್ಟೆ (Lime butterfly).. ಪ್ರಾಣಿಶಾಸ್ತ್ರೀಯವಾಗಿ ಪ್ಯಾಪಿಲಿಯೋನಿಡೆ ಕುಟುಂಬಕ್ಕೆ ಸೇರಿದ ಈ ಚಿಟ್ಟೆಯ ವೈಜ್ಞಾನಿಕ ನಾಮಧೇಯ ಪ್ಯಾಪಿಲಿಯೋ ಡಿಮೋಲಿಯಸ್ (Papilio demoleus). ವಯಸ್ಕ ಚಿಟ್ಟೆಯ ಮೇಲಿನ ಭಾಗ ಕಪ್ಪಗಿದ್ದು, ಹಳದಿ ಬಣ್ಣದ ಚುಕ್ಕಿಗಳಿಂದಾಗಿರುತ್ತದೆ. ಹಿಂದಿನ ರೆಕ್ಕೆಗಳಲ್ಲಿ ನೀಲಿ ಬಣ್ಣದಿಂದ ಆವೃತವಾಗಿರುವ ರಕ್ತ-ಕೆಂಪು ಬಣ್ಣದ ದೊಡ್ಡ ಚುಕ್ಕೆಗಳಿರುತ್ತವೆ. ಮುಂದಿನ ಮತ್ತು ಹಿಂದಿನ ಎರಡೂ ರೆಕ್ಕೆಗಳಲ್ಲಿ ಅಲೆ ಅಲೆಯಂತಹ ತಿಳಿ ಹಳದಿ ಗುರುತುಗಳನ್ನು ಸಹ ಕಾಣಬಹುದು. ಮುಂದಿನ ರೆಕ್ಕೆಗಳ ಕೆಳಭಾಗ ಅಂದರೆ ಹರಡಿದಾಗ ಭೂಮಿಯ ಕಡೆಗಿರುವ ಭಾಗದಲ್ಲಿ ಕಪ್ಪು ಬಣ್ಣವಿದ್ದು ಏಳು ಹಳದಿ ಬಣ್ಣದ ಪಟ್ಟಿಗಳು ಮತ್ತು ಕೆಲವು ಕಿತ್ತಳೆ ಬಣ್ಣದ ಚುಕ್ಕೆಗಳಿರುತ್ತವೆ. ಹಿಂದಿನ ರೆಕ್ಕೆಯ ಮಧ್ಯದಲ್ಲಿ ನೀಲಿ-ಅಂಚಿರುವ ಕಿತ್ತಳೆ ಬಣ್ಣದ ಅಂಡಾಕಾರದ ಚುಕ್ಕೆಗಳು ಪ್ರಮುಖವಾಗಿ ಕಾಣುತ್ತವೆ. ರೆಕ್ಕೆಯು ಹರಡಿದಾಗ ಚಿಟ್ಟೆಯ ಗಾತ್ರ 8 ರಿಂದ 10 ಸೆಂ.ಮೀ.
ಭಾರತದಲ್ಲಿ ಇದು ಸಾಮಾನ್ಯವಾಗಿ ಕಾಣಸಿಗುತ್ತದೆ. ಕುರುಚಲು ಕಾಡು, ದಟ್ಟ ಕಾಡು ಮತ್ತು ಬೆಟ್ಟಗುಡ್ಡ ಪ್ರದೇಶಗಳಲ್ಲೂ ವಾಸಿಸುತ್ತವೆ. ಬಲಿಷ್ಟವಾದ ಹಾರಾಟಗಾರ. ನೂರಾರು ಗಂಡು ಚಿಟ್ಟೆಗಳು ರೆಕ್ಕೆ ಮುಚ್ಚಿಕೊಂಡು ಹಸಿ ಮಣ್ಣಿನಿಂದ ಲವಣಾಂಶಗಳನ್ನು ಹೀರಿಕೊಳ್ಳುವುದನ್ನು ಗಮನಿಸಬಹುದು. ಇದರ ಕಂಬಳಿ ಹುಳು ಕಡು-ಕಂದು ಬಣ್ಣವಿದ್ದು, ಮೈಮೇಲೆ ದೊಡ್ಡದಾದ ಬಿಳಿಮಚ್ಚೆಗಳಿರುತ್ತವೆ. ಸುಮ್ಮನೆ ನೋಡಿದರೆ ಹಕ್ಕಿಯ ಪಿಕ್ಕೆಯಂತೆ ಕಾಣುವುದು ಸಹ ಬೇಟೆಗಾರ ಹಕ್ಕಿಗಳಿಂದ ತಪ್ಪಿಸಿಕೊಳ್ಳಲು ಅನುಕೂಲ. ಕಂಬಳಿಹುಳು ಬೆಳೆದಂತೆ ತಿಳಿ ಹಳದಿ-ಮಿಶ್ರಿತ ಹಸಿರು ಮೈ ಮತ್ತು ಮಾಸಲು ಹಳದಿ-ಮಿಶ್ರಿತ ಕಂದು ತಲೆ ಕಂಡುಬರುತ್ತದೆ. ದೇಹದಲ್ಲೆಲ್ಲಾ ಬಿಳಿ, ಕಂದು ಮತ್ತು ಬೂದು ಬಣ್ಣದ ಪಟ್ಟಿಗಳಿರುತ್ತವೆ.
ನಿಂಬೆ, ಮೂಲಂಗಿ, ಕರಿಬೇವು, ಲಂಟಾನ ಮುಂತಾದ ಗಿಡಗಳ ಹೂಗಳಿಗೆ ಮಕರಂದಕ್ಕಾಗಿ ಭೇಟಿ ನೀಡುತ್ತವೆ. ನಿಂಬೆ ಗಿಡಗಳಲ್ಲಿ ಸಾಮಾನ್ಯವಾಗಿ ಬರುವ ಕೀಟಭಾದೆಗಳಲ್ಲಿ ಇದೊಂದು. ಸಣ್ಣಗಿಡಗಳಲ್ಲಿ ಮತ್ತು ನರ್ಸರಿಗಳಲ್ಲಿ ಇದರ ಕಂಬಳಿ ಹುಳುವಿನ ಬಾಧೆ ಇರಬಹುದು. ನಿಂಬೆ, ಕಿತ್ತಳೆ, ಮರ ಸೇಬು, ಕರಿಬೇವು ಮುಂತಾದ ಗಿಡಗಳು ಕಂಬಳಿ ಹುಳುವಿನ ಆಹಾರ ಸಸ್ಯಗಳು. ಅಕ್ಟೋಬರ್ ನಿಂದ ಫೆಬ್ರವರಿವರೆಗೆ ದಕ್ಷಿಣ ಭಾರತ ಮತ್ತು ಶ್ರೀಲಂಕಾಗಳಲ್ಲಿ ವಲಸೆ ಪರ್ವ.
ಭಾರತವಲ್ಲದೆ ಶ್ರೀಲಂಕಾ, ಪಾಕಿಸ್ತಾನ, ಅಪಘಾನಿಸ್ತಾನ, ಬಾಂಗ್ಲಾದೇಶ, ಇರಾನ್, ಇರಾಕ್, ಥೈಲಾಂಡ್, ದಕ್ಷಿಣ ಚೀನಾ, ಉತ್ತರ ಆಸ್ಟೇಲಿಯಾ ಮುಂತಾದ ದೇಶಗಳಲ್ಲು ಜೀವಿಸುತ್ತವೆ. ಮನೆಯ ಕೈತೋಟದಲ್ಲಿ ಅಥವಾ ಉದ್ಯಾನವನಗಳಲ್ಲಿ ನಡೆಯುತ್ತಿರುವಾಗ ಸೂಕ್ಷ್ಮವಾಗಿ ಗಮನಿಸಿದರೆ ಈ ಚಿಟ್ಟೆಗಳು ಕಣ್ಮನ ಸೆಳೆಯುತ್ತವೆ. ಪ್ರಕೃತಿಯ ಇಂತಹ ಅಮೋಘ ಸೃಷ್ಠಿಯನ್ನು ಕಣ್ತುಂಬಿಕೊಳ್ಳುವಂತೆಯೇ ಭೂಮಿಯಲ್ಲಿನ ಪ್ರತಿಯೊಂದು ಜೀವಿಯ ಬಗ್ಗೆ ಗೌರವಾದರಗಳು ಮೂಡಬೇಕಲ್ಲವೇ? ಹೆಚ್ಚುತ್ತಿರುವ ಕೀಟ ನಾಶಕಗಳ ಸಿಂಪಡಣೆ ಇವುಗಳ ಸಂತತಿಯನ್ನು ನಾಶ ಮಾಡುವುದಲ್ಲದೇ ಮನುಷ್ಯನ ಆರೋಗ್ಯದ ಮೇಲು ದುಷ್ಪರಿಣಾಮ ಉಂಟು ಮಾಡಿರುವುದು ಸುಳ್ಳಲ್ಲ.
– ಡಾ. ಎಸ್. ಶಿಶುಪಾಲ
ಸೂಕ್ಷ್ಮಜೀವಿಶಾಸ್ತ್ರ ವಿಭಾಗ, ದಾವಣಗೆರೆ ವಿಶ್ವವಿದ್ಯಾನಿಲಯ,
ಶಿವಗಂಗೋತ್ರಿ, ದಾವಣಗೆರೆ.
[email protected]