ಮಾರ್ಚ್ ತಿಂಗಳಲ್ಲಿ ಭಾರತಕ್ಕೆ ಕಾಲಿಟ್ಟ ಕೊರೊನಾ, ದೇಶಾದ್ಯಂತ ವ್ಯಾಪಿಸಿ ಜನರನ್ನು ಹೈರಾಣು ಮಾಡಿದೆ. ರೋಗಕ್ಕೆ ಸಿಲುಕಿ ಎಲ್ಲ ವರ್ಗದವರು ನಲುಗಿದ್ದಾರೆ. ಈಗ ರೋಗದ ವಿರುದ್ಧದ ಹೋರಾಟದ ಹೊರೆಗೆ ಸಿಲುಕಿ ನಂಜನಗೂಡಿನ ತಾಲ್ಲೂಕು ವೈದ್ಯಾಧಿಕಾರಿ ಡಾ. ನಾಗೇಂದ್ರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ವರದಿ ಬರುವಷ್ಟರಲ್ಲಿ ರೋಗದ ಕರಾಳ ಛಾಯೆ ತನ್ನ ಇನ್ನೊಂದು ಮುಖ ತೋರಿಸಿದೆ.
ರೋಗಕ್ಕಿಂತ ಔಷಧಿಯೇ ಬಲ ಎಂಬ ಮಾತಿದೆ. ಕೆಲವೊಮ್ಮೆ ರೋಗಕ್ಕಿಂತ ಔಷಧಿಯೇ ಭಯಂಕರ ಪರಿಣಾಮ ಬೀರಿದಾಗ ಈ ಪದ ಬಳಸಲಾಗುತ್ತದೆ. ಸದ್ಯದ ಪರಿಸ್ಥಿತಿಯಲ್ಲಿ ಸಾಕಷ್ಟು ಜನರು ಕೊರೊನಾಗಿಂತ ಕೊರೊನಾದ ಟೆಸ್ಟ್ ಎಂದರೆ ಬೆಚ್ಚಿ ಬೀಳುವಂತಾಗಿದೆ.
ಟೆಸ್ಟ್, ಟ್ರೀಟ್, ಟ್ರಾಕ್ (ಪರೀಕ್ಷಿಸಿ, ಚಿಕಿತ್ಸೆ ನೀಡಿ ಹಾಗೂ ಪತ್ತೆ ಮಾಡಿ) ಎಂಬ. ತ್ರಿವಳಿ ಸೂತ್ರ ಕೊರೊನಾ ವಿರುದ್ಧ ರಾಮಬಾಣ ಎಂದು ಭಾವಿಸುತ್ತಾ ಬರಲಾಗಿದೆ. ಈ ಪರೀಕ್ಷೆ, ಪತ್ತೆ ಹಾಗೂ ಚಿಕಿತ್ಸೆಯ ವೇಗ ಇತ್ತೀಚಿನ ದಿನಗಳಲ್ಲಿ ಗಣನೀಯವಾಗಿ ಹೆಚ್ಚಾಗಿದೆ. ಕೊರೊನಾ ಸೋಂಕು ತಡೆಯಲು ಟೆಸ್ಟ್ಗಳ ಸಂಖ್ಯೆ ಹೆಚ್ಚಿಸಿ ಎಂದು ವಿಶ್ವ ಆರೋಗ್ಯ ಸಂಸ್ಥೆ ನೀಡಿದ ಸಲಹೆಯನ್ನು ದೊಡ್ಡ ಪ್ರಮಾಣದಲ್ಲಿ ಪಾಲಿಸುತ್ತಿರುವ ಭಾರತ, ಈಗ ವಿಶ್ವದ ಮೂರು ಅತಿ ಹೆಚ್ಚು ಕೊರೊನಾ ಟೆಸ್ಟ್ಗಳನ್ನು ನಡೆಸಿದ ದೇಶಗಳಲ್ಲಿ ಒಂದಾಗಿದೆ.
ಆದರೆ, ಟೆಸ್ಟ್ಗಳನ್ನು ನಡೆಸುವುದರ ಹೊರೆಯಿಂದ ಆರೋಗ್ಯ ಸಿಬ್ಬಂದಿ ಹೈರಾಣಾಗಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಜೊತೆಗೆ, ರಾಪಿಡ್ ಟೆಸ್ಟ್ಗಳ ಸಂಖ್ಯೆ ಗಣನೀಯವಾಗಿ ಹೆಚ್ಚಿಸಿರುವುದರಿಂದ ಅವುಗಳ ನಂಬಿಕಾರ್ಹತೆಯ ಬಗ್ಗೆಯೂ ಅನುಮಾನಗಳು ಹುಟ್ಟಿಕೊಂಡಿವೆ. ಅವರಿವರಲ್ಲ, ಸ್ವತಃ ರಾಜಸ್ಥಾನದ ಆರೋಗ್ಯ ಸಚಿವ ರಘು ಶರ್ಮಾ ಅವರೇ, ರಾಪಿಡ್ ಟೆಸ್ಟ್ಗಳಿಗೆ ಹಣ ಖರ್ಚು ಮಾಡುವುದೆಂದರೆ ಹಣ ಪೋಲು ಮಾಡಿದಂತೆ ಎಂದಿದ್ದಾರೆ.
ಮೊದಲು ಕಳಂಕ ಹೇರಿ ನಂತರ ಟೆಸ್ಟ್ಗೆ ಆಹ್ವಾನ
ಕೊರೊನಾ ಸೋಂಕಿತರನ್ನು ಗುರುತಿಸುವಾಗ ಅವರ ಮನೆ ಮುಂದೆ ಗೇಟ್ ಹಾಕಿ, ಕೈಗೆ ಸೀಲ್ ಹಾಕಿ, ಅವರ ಪರಿಚಯವದರಿಗೆಲ್ಲಾ ಕರೆ ಮಾಡಿ ಕೊರೊನಾ ಸೋಂಕಿನ ಬಗ್ಗೆ ಮಾಹಿತಿ ಬಿತ್ತರಿಸುವ ಕಾರ್ಯಕ್ಕೆ ಸರ್ಕಾರ ಆದೇಶ ಹೊರಡಿಸಿತ್ತು. ಇದರಿಂದಾಗಿ ರೋಗಿಗಳ ಮನಸ್ಥಿತಿಯ ಮೇಲೆ ಆದ ಪರಿಣಾಮದ ಬಗ್ಗೆ ಯೋಚಿಸಲಾಯಿತೇ?
ಈ ರೀತಿಯ ವರ್ತನೆಯಿಂದಾಗಿಯೇ ಇಂದು ಟೆಸ್ಟ್ ಮಾಡುತ್ತೇನೆ ಎಂದರೆ ಜನರು ಹಾವು ಕಂಡ ರೀತಿಯಲ್ಲಿ ಬೆಚ್ಚಿ ಬೀಳುವಂತಾಗುತ್ತಿದೆ. ರೋಗವನ್ನು ಬಡಿದೋಡಿಸಲು ಅಗತ್ಯ ಕ್ರಮಗಳಿಗೆ ಭಾರತೀಯರು ಸದಾ ಸಹಕರಿಸುತ್ತಾ ಬಂದಿದ್ದಾರೆ. ನವಜಾತ ಶಿಶುಗಳನ್ನೂ ಸಹ ತಾಯಂದಿರು ನಿರ್ಭೀತರಾಗಿ ಲಸಿಕೆಗೆ ಒಳಪಡಿಸುತ್ತಾರೆ. ಆದರೆ, ಹಿರಿಯರೇ ಈಗ ಕೊರೊನಾ ಟೆಸ್ಟ್ ಎಂದರೆ ಓಡುವಂತೆ ಮಾಡಿದ್ದು ಯಾರು? ಎಂಬ ಪ್ರಶ್ನೆಗೆ ಮೊದಲು ಉತ್ತರ ಬೇಕಿದೆ.
ಚೀನಾದ ಕಂಪನಿಗಳ ರಾಪಿಡ್ ಟೆಸ್ಟ್ ಕಿಟ್ಗಳು ನಂಬಿಕಾರ್ಹವಲ್ಲ ಎಂದು ಈ ಹಿಂದೆ ಹೇಳಲಾಗಿತ್ತು. ಈಗ ದಕ್ಷಿಣ ಕೊರಿಯಾದ ಕಂಪನಿಗಳ ರಾಪಿಡ್ ಟೆಸ್ಟ್ ಕಿಟ್ಗಳೂ ನಂಬಿಕಾರ್ಹವಲ್ಲ ಎಂದವರು ಹೇಳಿದ್ದಾರೆ. ಆದರೆ, ಹಲವಾರು ರಾಜ್ಯಗಳಲ್ಲಿ ಅತಿಯಾಗಿ ರಾಪಿಡ್ ಟೆಸ್ಟ್ ಕಿಟ್ಗಳನ್ನೇ ಬಳಸುತ್ತಿರುವ ಬಗ್ಗೆ ಪರಿಣಿತರೂ ಸಹ ಕಳವಳಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಈ ರೀತಿ ನಂಬಿಕೆ ಕಡಿಮೆ ಇರುವ ಟೆಸ್ಟ್ಗಳನ್ನು ಹೆಚ್ಚಿಸಿದರೆ ಕೊರೊನಾ ತಡೆಯಲು ಸಾಧ್ಯವೇ? ಎಂಬ ಪ್ರಶ್ನೆ ಮುಂದಿಡಲಾಗುತ್ತಿದೆ.
ನಂಬಿಕೆ ಕಡಿಮೆ ಇರುವ ರಾಪಿಡ್ ಟೆಸ್ಟ್ಗಳನ್ನು ಹೆಚ್ಚಾಗಿ ಮಾಡಿದರೆ ಹೆಚ್ಚು ಹೆಚ್ಚು ತಪ್ಪು ಕೊರೊನಾ ಪಾಸಿಟಿವ್ ಫಲಿತಾಂಶ ಬರುವ ಸಾಧ್ಯತೆ ಇರುತ್ತದೆ. ಇದರಿಂದ ಮಾನಸಿಕ ಹಾಗೂ ಆರ್ಥಿಕ ಹೊರೆ ಹೆಚ್ಚಾಗುತ್ತದೆ. ರೋಗ ಇಲ್ಲದವನನ್ನು ಕೊವಿಡ್ ಆಸ್ಪತ್ರೆಗೆ ಕರೆದೊಯ್ದರೆ ಆತ ನಿಜವಾಗಿಯೂ ರೋಗಿಯಾಗುವ ಅಪಾಯ ಎದುರಾಗುತ್ತದೆ.
ಮನೋ ಪರಿಣಾಮ ಕಡೆಗಣಿಸುವ ಮಾನಸಿಕತೆ : ಪರೀಕ್ಷೆಯ ಪರಿಸ್ಥಿತಿ ಒಂದೆಡೆಯಾದರೆ, ಪರೀಕ್ಷೆ ನಡೆಸುವ ಸಿಬ್ಬಂದಿ ಹಾಗೂ ವೈದ್ಯರ ಮೇಲಿನ ಮಾನಸಿಕ ಒತ್ತಡದ ಬಗ್ಗೆ ಯೋಚಿಸಲಾಗಿದೆಯೇ? ಮನಸ್ಥಿತಿಯೂ ಸಹ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಜನವರಿ ವೇಳೆ ಚೀನಾದಲ್ಲಿ ಆರಂಭವಾದ ಕೊರೊನಾ, ಮಾರ್ಚ್ ವೇಳೆಗೆ ನಿಯಂತ್ರ ಣವಾಗಿದೆ ಎಂದು ಘೋಷಿಸಲಾಗಿತ್ತು. ಆದರೆ, ಅಷ್ಟರಲ್ಲೇ ಅಲ್ಲಿನ ವೈದ್ಯಕೀಯ ಸಿಬ್ಬಂದಿ ಅಪಾರ ಒತ್ತಡಕ್ಕೆಸಿಲುಕಿದ ಹಲವಾರು ವಿಡಿಯೋಗಳು ವೈರಲ್ ಆಗಿದ್ದವು.
ಭಾರತದಲ್ಲಿ ಕೊರೊನಾ ಬಂದು ಆರು ತಿಂಗಳಾಗುತ್ತಾ ಬಂದಿದೆ. ಫೆಬ್ರವರಿಯಿಂದಲೇ ಆರೋಗ್ಯ ಸಿಬ್ಬಂದಿ ರಜೆಗೆ ಕತ್ತರಿ ಹಾಕುತ್ತಾ ಬರಲಾಗಿತ್ತು. ಇಷ್ಟು ದೀರ್ಘ ಕಾಲ ಒತ್ತಡದಲ್ಲಿರುವ ಸಿಬ್ಬಂದಿ ಸ್ಥಿತಿ ಏನಾಗಿರಬಹುದು? ವಿಪರ್ಯಾಸ ಎಂದರೆ, ಮಾನಸಿಕ – ದೈಹಿಕ ರೋಗಗಳನ್ನು ಗುಣಪಡಿಸುವ ವೈದ್ಯ ನಾರಾಯಣರೇ ಈಗ ಹತಾಶರಾಗಿ ವ್ಯವಸ್ಥೆ ಶಪಿಸುವ ಸ್ಥಿತಿ ತಲುಪಿದ್ದಾರೆ. ಅವರೇ ಹೀಗಾದರೆ ರೋಗಿಗಳ ಗತಿ ಏನಾಗಬೇಕು?
ಬಿಡುವಿಲ್ಲದ ದುಡಿಮೆ, ಕುಟುಂಬದಿಂದ ದೀರ್ಘ ಕಾಲ ದೂರವಾಗಿರುವುದು, ಉನ್ನತರು ವಿಧಿಸಿದ ಗುರಿಗಳನ್ನು ತಲುಪುವ ಒತ್ತಡಗಳಿಂದಾಗಿ ಆರೋಗ್ಯ ಸಿಬ್ಬಂದಿಯೇ ಅನಾರೋಗ್ಯ ಪೀಡಿತರಾದರೆ, ರೋಗದಿಂದ ಜನರನ್ನು ರಕ್ಷಿಸುವವರು ಯಾರು?
ಕೊರೊನಾ ಟೆಸ್ಟ್ ಮಾಡುವುದೇ ಅವಾಂತರವಾಗುವ ಸ್ಥಿತಿ ಬಂದ ಮೇಲೆ ಅವರಿವರ ಮೇಲೆ ದೂಷಿಸಿದರೆ ಹೆಚ್ಚೇನೂ ಪ್ರಯೋಜನವಾಗದು. ಈಗ ತೇಪೆ ಹಚ್ಚುವ ರೀತಿಯಲ್ಲಿ ಅವರ ವರ್ಗಾವಣೆ, ಇವರ ಅಮಾನತ್ತು ಎಂದರೆ ಪ್ರಯೋಜನವಾಗದು. ಕೊರೊನಾ ಪತ್ತೆ ಮಾಡುವವರಲ್ಲಿ ಸ್ಥೈರ್ಯ ಹಾಗೂ ಧೈರ್ಯ ತುಂಬುವ ವಾತಾವರಣ ಸೃಷ್ಟಿಸಿದರೆ ಮಾತ್ರ ಕೊರೊನಾ ಪರೀಕ್ಷೆಯ ಬೃಹತ್ ಕಾರ್ಯ ಯಶಸ್ವಿಯಾಗುತ್ತದೆ.
– ಅಸ್ಮಿತ ಎಸ್. ಶೆಟ್ಟರ್
[email protected]