ಪ್ರಜಾಪ್ರಭುತ್ವದ ಕಟಕಟೆಯಲ್ಲಿ ದೈತ್ಯ ಜಾಲತಾಣ

ಆನ್‌ಲೈನ್ ದೈತ್ಯ ಸಾಮಾಜಿಕ ಜಾಲತಾಣ ವಾದ ಫೇಸ್‌ಬುಕ್‌ ಇನ್ನೊಮ್ಮೆ ಪ್ರಜಾಪ್ರಭುತ್ವದ ಕಟಕಟೆಯ ಎದುರು ಆರೋಪಿಯಾಗಿ ನಿಂತಿದೆ. ಆಡಳಿತಾರೂಢ ಬಿಜೆಪಿ ಪರ ನಾಯಕರು ಪ್ರಚೋದನಕಾರಿ ಹೇಳಿಕೆಗಳನ್ನು ದಾಖಲಿಸಿದರೂ ಸಹ, ಆಡಳಿತಾರೂಢರ ಅವಕೃಪೆಗೆ ಪಾತ್ರವಾಗಬಾರದು ಎಂಬ ಕಾರಣಕ್ಕೆ ಕ್ರಮ ತೆಗೆದುಕೊಂಡಿಲ್ಲ ಎಂಬ ಆರೋಪಗಳು ಈಗ ರಾಜಕೀಯ ವಲಯದಲ್ಲಿ ಬಿಸಿಯೇರಲು ಕಾರಣವಾಗಿದೆ.

ದಶಕಗಳ ಹಿಂದೆ ಅಂಬೆಗಾಲಿಡುತ್ತಿದ್ದ ಸಾಮಾಜಿಕ ಜಾಲತಾಣಗಳು ಈಗ ಪ್ರಪಂಚದ ಪ್ರಜಾಪ್ರಭುತ್ವದ ಅಡಿಪಾಯದ ಬೇರಿಗೇ ಕೈ ಹಾಕುವ ಅಪಾಯ ಎದುರಾಗುತ್ತಿದೆ. ಕೇವಲ ಭಾರತವಷ್ಟೇ ಅಲ್ಲ, ಚೀನಾದಿಂದ ಹಿಡಿದು ಅಮೆರಿಕದವರೆಗೆ ಹಲವಾರು ದೇಶಗಳು ಫೇಸ್‌ಬುಕ್‌ ವಿಷಯದಲ್ಲಿ ಸಮಸ್ಯೆಗಳನ್ನು ಎದುರಿಸಿವೆ. ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಗೆಲುವಿನ ಹಿಂದೆ ಫೇಸ್‌ಬುಕ್‌ ಹಾಗೂ ಕೇಂಬ್ರಿಡ್ಜ್ ಅನಲಿಟಿಕಾ ಡಾಟಾ ಬಳಸಿಕೊಂಡ ವಿಷಯ 2018ರಿಂದಲೂ ಚರ್ಚೆಯಲ್ಲಿದೆ.

ಭಾರತದಲ್ಲೂ ಸಹ ಕೇಂಬ್ರಿಡ್ಜ್ ಅನಲಿಟಿಕಾ ಡಾಟಾ ಅನ್ನು ರಾಜಕೀಯ ಪಕ್ಷಗಳು ಬಳಸಿಕೊಂಡ ವಿಷಯ ಚರ್ಚೆಗೆ ಬಂದಿತ್ತು. ಆದರೆ, ಆನಂತರದಲ್ಲಿ ಆ ವಿಷಯ ಹೆಚ್ಚೇನೂ ಪ್ರಗತಿ ಕಾಣಲಿಲ್ಲ.

ಮ್ಯಾನ್‌ಮಾರ್‌ನಲ್ಲಿ ರೋಹಿಂಗ್ಯಾ ಮುಸ್ಲಿಮರ ಹತ್ಯಾಕಾಂಡಕ್ಕೆ ಫೇಸ್‌ ಬುಕ್‌ ಬಳಕೆ ವ್ಯಾಪಕವಾಗಿತ್ತು. ಇದನ್ನು ತಡೆಯಲು ಫೇಸ್‌ಬುಕ್‌ ಸಾಕಷ್ಟು ಕ್ರಮಗಳನ್ನು ತೆಗೆದುಕೊಂ ಡಿರಲಿಲ್ಲ. ಇಷ್ಟು ಸಾಲದು ಎಂಬಂತೆ ರೋಹಿಂಗ್ಯಾ ಹತ್ಯಾಕಾಂಡದ ತನಿಖೆಗೆ ಫೇಸ್‌ಬುಕ್‌ ಅಡ್ಡಿಪಡಿಸುತ್ತಿದೆ ಎಂಬ ಆರೋಪಗಳೂ ಕೇಳಿ ಬರುತ್ತಿವೆ.

ಫೇಸ್‌ಬುಕ್ ಸೇರಿದಂತೆ ಹಲವು ಸಾಮಾಜಿಕ ಜಾಲತಾಣಗಳು ಮಾಹಿತಿ ಹಂಚಿ ಕೊಳ್ಳುವ ವೇದಿಕೆಗಳಾಗಿವೆ. ಇಲ್ಲಿ ಮುಕ್ತವಾಗಿ ಮಾಹಿತಿ ಹಂಚಿಕೊಳ್ಳಬಹುದು. ಈ ರೀತಿಯ ಮುಕ್ತತೆ ಹಿಂದೆಂದೂ ಇರಲಿಲ್ಲ. ಅದರಲ್ಲೂ ಸ್ಮಾರ್ಟ್‌ಫೋನ್ ಹಾಗೂ ಇಂಟರ್ನೆಟ್ ಬಳಕೆ ವ್ಯಾಪಕವಾದಂತೆ ಪ್ರತಿಯೊಬ್ಬರೂ ಮಾಹಿತಿಯ ಕಣಜವಾಗಿದ್ದಾರೆ. ಇದೇ ವೇಳೆ, ತಪ್ಪು ದಾರಿಗೆಳೆಯುವ ಮಾಹಿತಿ, ಹಿಂಸೆಗೆ ಪ್ರಚೋದಿಸುವ, ವೈಯಕ್ತಿಕವಾಗಿ ನಿಂದಿಸುವ ಪ್ರಕರಣಗಳೂ ವಿಪರೀತವಾಗುತ್ತಿವೆ.

ಇದನ್ನು ನಿಯಂತ್ರಿಸುವುದು ಹೇಗೆ? ಎಂಬ ಪ್ರಶ್ನೆಗೆ ಉತ್ತರ ಅಷ್ಟು ಸುಲಭವಿಲ್ಲ. ಚೀನಾದಂತಹ ಕೆಲ ಸರ್ವಾಧಿಕಾರಿ ದೇಶಗಳು ಅಂತರ್ಜಾಲವನ್ನು ಸಂಪೂರ್ಣವಾಗಿ ತಮ್ಮ ಹಿಡಿತದಲ್ಲಿಟ್ಟುಕೊಂಡಿವೆ. ಇಲ್ಲಿ ಜಾಲತಾಣಗಳಿಂದ ಸರ್ಕಾರಗಳೇ ತಮ್ಮ ತುತ್ತೂರಿಯನ್ನು ಬಾರಿಸಿಕೊಳ್ಳುತ್ತವೆ. ವಿರೋಧಕ್ಕೆ ಎಳ್ಳಷ್ಟೂ ಅವಕಾಶವಿಲ್ಲ.

ಇನ್ನೊಂದೆಡೆ ಭಾರತದಂತಹ ಹೆಚ್ಚು ಮುಕ್ತವಾಗಿರುವ ದೇಶದಲ್ಲಿ ಜಾಲ ತಾಣಗಳ ದುರ್ಬಳಕೆ ಮಾಡಿಕೊಂಡು ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದಂತಹ ಹಿಂಸಾಚಾರದ ಘಟನೆಗಳಿಗೆ ಕುಮ್ಮಕ್ಕು ನೀಡಲಾಗುತ್ತಿದೆ. ಮಕ್ಕಳ ಕಳ್ಳರಿದ್ದಾರೆ ಎಂಬ ಗಾಳಿ ಸುದ್ದಿ ಹರಡಿ ಗುಂಪು ಹತ್ಯೆಗೆ ಪ್ರಚೋದನೆ ನೀಡಲು ವಾಟ್ಸ್‌ಆಪ್‌ ಅನ್ನು ಬಳಸಿಕೊಂಡ ಹಲವಾರು ಘಟನೆಗಳು 2018ರಲ್ಲಿ ಹಲವು ಬಾರಿ ನಡೆದಿದ್ದವು.

ಸರ್ಕಾರಗಳೂ ಸಹ ಸಂಘಟಿತ ರೀತಿಯಲ್ಲಿ ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಂಡು ಜನರನ್ನು ಬೆದರಿಸುವ ಹಾಗೂ ದಿಕ್ಕು ತಪ್ಪಿಸುವುದು ವಿಶ್ವದಾದ್ಯಂತ ವ್ಯಾಪಕವಾಗಿದೆ. ಹಾಂಕಾಂಗ್ ಪ್ರತಿಭಟನೆಗಳು ನಡೆಯುವಾಗ ಚೀನಾ ಟ್ವಿಟ್ಟರ್ ಮೂಲಕ ವ್ಯಾಪಕ ಅಪಪ್ರಚಾರ ನಡೆಸಿತ್ತು. ನಂತರ ಟ್ವಿಟ್ಟರ್ ಚೀನಾ ಸರ್ಕಾರದ ಪರ ಅಪ ಪ್ರಚಾರ ನಡೆಸುತ್ತಿದ್ದ 1.70 ಲಕ್ಷದಷ್ಟು ಖಾತೆಗಳನ್ನು ಕಿತ್ತು ಹಾಕಿರುವುದಾಗಿ ತಿಳಿಸಿತ್ತು. ಇರಾನ್, ಇಂಡೋನೇಷಿಯಾ, ಇರಾಕ್, ಮ್ಯಾನ್ಮಾರ್, ಉತ್ತರ ಕೊರಿಯಾ, ಪಾಕಿಸ್ತಾನ, ವಿಯಟ್ನಾಂ ಸೇರಿದಂತೆ ಹಲವು ದೇಶಗಳು ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಸೈನ್ಯ ಹೊಂದಿವೆ.

ಸರ್ಕಾರಗಳ ಈ ರೀತಿಯ ದಮನಕಾರಿ ಚಟುವಟಿಕೆಗಳಿಗೆ ನೆರವಾಗದೇ ಇದ್ದಾಗ, ಸರ್ವಾಧಿಕಾರಿ ದೇಶಗಳು ಅವುಗಳ ಮೇಲೆ ನಿಷೇಧ ಹೇರುವುದೂ ನಡೆದಿದೆ. ಚೀನಾದಲ್ಲಿ ಗೂಗಲ್, ಯೂಟ್ಯೂಬ್, ಫೇಸ್‌ಬುಕ್‌, ವಿಕಿಪೀಡಿಯಾ ಸೇರಿದಂತೆ ಹಲವಾರು ಜನಪ್ರಿಯ ವೆಬ್ ತಾಣಗಳು ನಿಷೇಧಿಸಲ್ಪಟ್ಟಿವೆ.

ಹೀಗಾಗಿ ಸರ್ಕಾರಗಳನ್ನು ಎದುರು ಹಾಕಿ ಕೊಳ್ಳುವ ಜಾಲತಾಣಗಳು ನಾನಾ ರೀತಿಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಫೇಸ್‌ಬುಕ್‌ ಆಡಳಿತಾರೂಢರನ್ನು ಎದುರು ಹಾಕಿಕೊಳ್ಳಲು ಹಿಂಜರಿಯುವ ಮೂಲಕ ತನ್ನ ವೇದಿಕೆಯನ್ನು ಪಕ್ಷಪಾತಿ ಮಾಡಿದೆ ಎಂದು ಈಗ ಆರೋಪಿಸಲಾಗುತ್ತಿದೆ. ಅಮೆರಿಕದ ವಾಲ್‌ಸ್ಟ್ರೀಟ್ ಜರ್ನಲ್ ಪ್ರಕಟಿಸಿರುವ ವರದಿ ಫೇಸ್‌ಬುಕ್‌ ಕಾರ್ಯ ನಿರ್ವಹಣೆಯ ಕುರಿತು ಹಲವಾರು ಪ್ರಶ್ನೆಗಳನ್ನು ಹುಟ್ಟು ಹಾಕಿದೆ.

ಸಾಮಾಜಿಕ ಜಾಲತಾಣಗಳು ಈಗ ಸಮಾಜದ ಅನಿವಾರ್ಯ ಭಾಗದಂತಾಗಿವೆ. ಇವುಗಳಲ್ಲಿನ ಮಾಹಿತಿಗಳು ಜನರ ನಿರ್ಧಾ ರಗಳ ಮೇಲೆ ಅಪಾರ ಪರಿಣಾಮ ಬೀರುತ್ತವೆ ಎಂಬುದು ಇತ್ತೀಚಿನ ದಶಕದಲ್ಲಿ ಹತ್ತು ಹಲವು ಬಾರಿ ಸಾಬೀತಾಗಿದೆ. ಇಂತಹ ಸಂದರ್ಭದಲ್ಲಿ ಸಾಮಾಜಿಕ ಜಾಲತಾಣಗಳ ನಿಷ್ಪಕ್ಷಪಾತ ವರ್ತನೆ ಪ್ರಜಾಪ್ರಭುತ್ವಕ್ಕೆ ಅಗತ್ಯವಷ್ಟೇ ಅಲ್ಲದೇ ಅನಿವಾರ್ಯ ಸಹ ಆಗಿದೆ.


ಎಸ್.ಎ. ಶ್ರೀನಿವಾಸ್
[email protected]

error: Content is protected !!