`ಬಡಪಾಯಿ’ ಕೊರೊನಾ ಮೇಲೆ ಏಕಿಷ್ಟು ಕೋಪ…?

ಜಗವೆಲ್ಲಾ ಕೊರೊನಾ ಸೋಂಕನ್ನು ನೆನಪು ಹಾಕಿಕೊಂಡು ಹಿಡಿ ಶಾಪ ಹಾಕಲು ಕುಳಿತಿದೆ. ಅತ್ತ ಆರ್ಥಿಕತೆ ಸರಿ ಇಲ್ಲ, ಇತ್ತ ಆರೋಗ್ಯದ ಅಪಾಯವೂ ಸೇರಿಕೊಂಡಿತು. ಎಲ್ಲಿಂದ ಬಂತಪ್ಪಾ ಈ ಮಹಾಮಾರಿ ಎಂದು ಜನರೆಲ್ಲಾ ಬೈದುಕೊಳ್ಳುತ್ತಿದ್ದಾರೆ. ಸರಿ, ಎಲ್ಲರೊಳಗೊಂದಾಗ ಮಂಕುತಿಮ್ಮ ಎಂದು ನಾನೂ ಸಹ ಕೊರೊನಾವನ್ನು ಹಿಗ್ಗಾಮುಗ್ಗಾ ಬೈಯ್ಯಬೇಕು ಎಂದು ಅಂಕಿ ಅಂಶಗಳನ್ನು ಕಲೆ ಹಾಕಿಕೊಂಡು ಕುಳಿತುಕೊಂಡೆ.

ಆದರೆ, ಪಾಪಿ ಸಮುದ್ರಕ್ಕೆ ಹೋದರೂ ಮೊಣಕಾಲ ಗಂಟ ನೀರು ಅನ್ನುತ್ತಾರೆ ನೋಡಿ. ಆ ಪರಿಸ್ಥಿತಿ ನನಗೂ ಆಗುತ್ತಿದೆ. ಏನೆಲ್ಲಾ ಅಂಕಿ ಅಂಶಗಳನ್ನು ಜಾಲಾಡಿದರೂ ಕೊರೊನಾವನ್ನು ಹಿಗ್ಗಾಮುಗ್ಗ ಬೈಯಲು ಸರಕೇ ಸಿಗುತ್ತಿಲ್ಲ! ಉದಾಹರಣೆಗೆ ಇಟಲಿಯನ್ನೇ ನೋಡಿ. ಕೊರೊನಾದಿಂದ ಅತಿ ಭಯಂಕರವಾಗಿ ಪೀಡನೆಗೆ ಗುರಿಯಾಗಿದ್ದು ಇಟಲಿ. ಇಲ್ಲಿ 35,225 ಸಾವುಗಳು ಕೊರೊನಾದಿಂದ ಸಂಭವಿಸಿವುದು. ಆದರೆ, ಅಲ್ಲಿನ ಜನಸಂಖ್ಯೆ 6,03,17,116. ಕೊರೊನಾದ ಭೀಕರ ಅಲೆ ಬಂದು ಹೋಯಿತೂ ಎಂದರೂ ಅಲ್ಲಿನ ಜನಸಂಖ್ಯೆ ಬಹುತೇಕ ಅಷ್ಟೇ ಉಳಿದಿದೆ. ಕೊರೊನಾದಿಂದ ಜನಸಂಖ್ಯೆ ಮೇಲಾದ ಪರಿಣಾಮ ಶೇ.0.058. 

ಅಂದ ಹಾಗೆ, ಇಟಲಿಯಲ್ಲಿ ಪ್ರತಿ ವರ್ಷ ಸುಮಾರು 6 ಲಕ್ಷ ಜನರು ಸಾವನ್ನಪ್ಪುತ್ತಾರೆ ಎಂಬ ಅಂದಾಜಿದೆ. ಹೀಗಾಗಿ ಕೊರೊನಾದಿಂದ ಸಂಭವಿಸಿದ ಸಾವುಗಳ ಪ್ರಮಾಣ ಶೇ.5.52 ಮಾತ್ರ. ಇಟಲಿಯಲ್ಲಿ ವಯಸ್ಸಾದವರ ಸಂಖ್ಯೆ ಹೆಚ್ಚಾಗಿದೆ. ಅಲ್ಲಿನ ಸರಾಸರಿ ಆಯಸ್ಸು 80ಕ್ಕೂ ಹೆಚ್ಚಾಗಿದೆ.

ಭಾರತದಲ್ಲಿ ಶೇ.90ಕ್ಕೂ ಹೆಚ್ಚು ಜನರ ವಯಸ್ಸು 60ಕ್ಕೂ ಕಡಿಮೆ ಇದೆ. ಈ ವಯೋಮಾನದವರು ಕೊರೊನಾಗೆ ಸಿಲುಕಿ ಪ್ರಾಣ ಕಳೆದುಕೊಳ್ಳುವ ಪ್ರಮಾಣ ತೀರಾ ಕಡಿಮೆ. ಅಂದರೆ ಈ ವಯೋಮಾನದವರಲ್ಲಿ ಸೋಂಕಿಗೆ ಗುರಿಯಾದರೂ ನೂರಕ್ಕೆ 99 ಜನ ಸಂಸಾರ ತಾಪತ್ರಯಗಳಿಂದ ಖಂಡಿತಾ ಮುಕ್ತವಾಗುವುದಿಲ್ಲ! ಇಹಲೋಕ ಅವರನ್ನು ಕಾಡಲು ಖಂಡಿತಾ ಉಳಿಸಿಕೊಳ್ಳುತ್ತದೆ!!

ಹೋಗಲಿ ಬಿಡಿ, ಅಂತರರಾಷ್ಟ್ರೀಯ, ರಾಷ್ಟ್ರೀಯ ವಿಷಯ ಬಿಟ್ಟು ನಮ್ಮ ಜಿಲ್ಲೆಗೆ ಬರೋಣ. ಜಿಲ್ಲೆಯಲ್ಲಿ ಕೊರೊನಾ ಸೋಂಕಿತರಲ್ಲಿ ಸಾವಿನ ಸಂಖ್ಯೆ ಶೇ.2.7ರಷ್ಟಿದೆ. ಉಲ್ಟಾ ಹೇಳುವುದಾದರೆ ನೂರಕ್ಕೆ 97.3ರಷ್ಟು ಜನರ ಕೊರೊನಾ ಬಂದರೂ ಜಪ್ಪಯ್ಯ ಎನ್ನದೆ ಜೀವ ಉಳಿಸಿಕೊಳ್ಳುವ ಭಲೇ ಭಂಡರು! ದಾವಣಗೆರೆಯಲ್ಲಿ ಕೊರೊನಾ ಆಗಮನವಾಗಿ ಮೂರೂವರೆ ತಿಂಗಳು ಉರುಳಿವೆ. ಜಿಲ್ಲೆಯ ಸುಮಾರು 20 ಲಕ್ಷ ಜನಸಂಖ್ಯೆಯಲ್ಲಿ 110 ಜನರು ಕೊರೊನಾದಿಂದ ಅಸು ನೀಗಿದ್ದಾರೆ. ದೊಡ್ಡ ಸಂಖ್ಯೆಯೇ. ಆದರೆ, ಜಿಲ್ಲೆಯಲ್ಲಿ ಪ್ರತಿ ವರ್ಷ ಎಷ್ಟು ಜನ ಸಾಮಾನ್ಯವಾಗಿ ಸಾಯುತ್ತಿದ್ದರು ಗೊತ್ತೇ? ಭಾರತದಲ್ಲಿ ಪ್ರತಿ ವರ್ಷ ಸಾವಿರ ಜನಸಂಖ್ಯೆಗೆ ಸಾವಿನ ಸಂಖ್ಯೆ 7.5 ಆಗಿದೆ. (ಅಂದರೆ ಪ್ರತಿ ವರ್ಷ ಸಾವಿರಕ್ಕೆ 992.5 ಜನರು ಬದುಕುಳಿಯುತ್ತಾರೆ, ಜೊತೆಗೆ ಸಾವಿರ ಜನಸಂಖ್ಯೆಗೆ 18.2 ಮಕ್ಕಳು ಜನಿಸುವಂತೆ ಮಾಡುತ್ತೇವೆ. ಒಟ್ಟಾರೆ ಜನಸಂಖ್ಯೆ ಹೆಚ್ಚಳಕ್ಕೆ ಕೊಡುಗೆ ಕೊಟ್ಟೇ ತೀರುತ್ತೇವೆ)

ಇದೇ ಲೆಕ್ಕಾಚಾರದಲ್ಲಿ ಮುಂದುವರೆಯುವು ದಾದರೆ ಜಿಲ್ಲೆಯಲ್ಲಿ ಪ್ರತಿ ವರ್ಷ 14,202 ಸಾವುಗಳು ಸಂಭವಿಸುತ್ತವೆ ಎಂದು ಅಂದಾಜಿಸಬಹುದು. 14 ಸಾವಿರ ಸಾವಿಗೆ ಇಡೀ ಸಮಾಜ ಬೊಬ್ಬೆ ಹಾಕಿದ್ದರೆ ನಮ್ಮಪ್ಪನಾಣೆ. ಆದರೆ, ಕೊರೊನಾ ಎಂಬ ರೋಗಕ್ಕೆ ಅದೇಕೋ ಕಿರೀಟ ಹೊರಿಸಿ ನೂರು ಸಾವಿಗೇ ವೈಭವೀಕರಿಸಲಾಗುತ್ತಿದೆ. ಕಾರಣವೇನೆಂದು ನೀವೇ ಹೇಳಬೇಕು.

ಅಂದ ಹಾಗೆ ಪ್ರತಿ ಸಾವಿರ ಕಂದಮ್ಮಗಳು ಜನಿಸಿದಾಗ 29.94 ಹಸುಳೆಗಳು ಸಾವನ್ನಪ್ಪುತ್ತಿವೆ ಎಂದು ಒಂದು ಅಂದಾಜು. ಜೊತೆಗೆ ಅಪೌಷ್ಠಿಕತೆಯ ಸಮಸ್ಯೆಯೂ ಅಪಾರ. ವಿಶ್ವದ ಮೂರನೇ ಒಂದರಷ್ಟು ಅಪೌಷ್ಠಿಕ ಮಗು ಭಾರತದಲ್ಲಿದೆ. ಇದರಿಂದಾಗಿ ಕೋಟಿಗಟ್ಟಲೆ ಮಕ್ಕಳ ಭವಿಷ್ಯಕ್ಕೆ ಕುಂದಾಗುತ್ತಿದೆ. ಈ ಮಕ್ಕಳು ಬೆಳೆದ ಮೇಲೆ ಹೃದಯ ರೋಗ, ಸಕ್ಕರೆ ಕಾಯಿಲೆ, ಕ್ಯಾನ್ಸರ್ ಹಾಗೂ ಉಸಿರಾಟದ ಸಮಸ್ಯೆಗೆ ಸಿಲುಕುತ್ತಿದ್ದಾರೆ. ಯಾಕೆ ಸ್ವಾಮಿ ಚರ್ಚಿಸುತ್ತಿಲ್ಲ? ಬಡಪಾಯಿ ಕೊರೊನಾ ಮೇಲೇಕೆ ನಿಮಗೆ ಕೋಪ?

ಅಂದ ಹಾಗೆ, ಇಟಲಿಯಲ್ಲಿ 35,225 ಜನರು ಸಾವನ್ನಪ್ಪಿದರು ಎಂದೆನಲ್ಲ, ಅಲ್ಲಿ ಪ್ರತಿ ದಶಲಕ್ಷಕ್ಕೆ ಕೊರೊನಾ ಸಾವು 583 ಆಗಿತ್ತು. ನಮ್ಮ ಭಾರತದಲ್ಲಿ ಕೇವಲ 34 ಎಂದು ಅಧಿಕೃತ ಅಂಕಿ ಅಂಶಗಳು ತಿಳಿಸುತ್ತವೆ. ಆ ಲೆಕ್ಕಾಚಾರದಲ್ಲಿ ಇಟಲಿಗಿಂತ ಭಾರತದಲ್ಲಿ ಕೊರೊನಾ ಸಾವುಗಳ ಸಂಖ್ಯೆ ಸಾಕಷ್ಟು ಕಡಿಮೆ ಇದೆ.

ನಿಮಗೆ ಇನ್ನೂ ಅನುಮಾನವಿದ್ದರೆ ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾನಿಲಯದ ವೆಬ್ ತಾಣಕ್ಕೆ ಭೇಟಿ ನೀಡಿ ಪ್ರತಿ ಲಕ್ಷಕ್ಕೆ ಸಂಭವಿಸುತ್ತಿರುವ ಕೊರೊನಾ ಸಾವುಗಳ ಸಂಖ್ಯೆ ನೋಡಿ. ಭಾರತದ ಪರಿಸ್ಥಿತಿ ಎಷ್ಟೊಂದು ಉತ್ತಮವಾಗಿದೆ ಎಂಬುದು ನಿಮ್ಮ ಗಮನಕ್ಕೆ ಬರುತ್ತದೆ. 

ಹೀಗೆ ಲೋಕಲ್‌ನಿಂದ ಹಿಡಿದು ಗ್ಲೋಬಲ್‌ವರೆಗೆ ಏನೆಲ್ಲಾ ಜಾಲಾಡಿದರೂ ಅಂಕಿ ಅಂಶದ ಬಡಗಿ ಹಿಡಿದು ಕೊರೊನಾ ಹೊಡೆಯಲು ನನಗಂತೂ ಯಾವುದೇ ಅಂಶ ಸಿಗಲಿಲ್ಲ. ಬಡಪಾಯಿ ಕೊರೊನಾ ಮಾತ್ರ ಭಾರತವನ್ನು ಇಷ್ಟು ಕಡಿಮೆ ಕಾಡಿದರೂ ಜನ ಏಕೆ ನನ್ನನ್ನು ದೂರುತ್ತಿದ್ದಾರೆ ಎಂದು ಯೋಚಿಸಿದರೂ ಅಚ್ಚರಿ ಇಲ್ಲ! ಏನೋ ಸ್ವಾಮಿ, ನಾನಂತೂ ಅಲ್ಪಸ್ವಲ್ಪ ತಿಳಿದವನು. ತಿಳಿದಷ್ಟನ್ನು ಹೇಳುವ ಧೈರ್ಯ ಮಾಡಿದ್ದೇನೆ. ಉಳಿದದ್ದು ತಮ್ಮ ವಿವೇಚನೆಗೆ ಬಿಟ್ಟ ವಿಷಯ.


ಅಸ್ಮಿತ ಎಸ್. ಶೆಟ್ಟರ್
[email protected]

error: Content is protected !!