ಭ್ರೂಣದೊಳಗೆಯೇ ದಿವ್ಯಮಂತ್ರ: ತೊಳೀತಾ ಇರು… ತೊಳೀತಾ ಇರು…

ಪ್ರಕೃತಿ ಮತ್ತೊಮ್ಮೆ ಕದನಕ್ಕೆ ಕರೆದಿದೆ ತೊಡೆತಟ್ಟಿ. ಕಣ್ಣಿಗೆ ಕಾಣದ ಅತೀ ಸಣ್ಣ ಜೀವಿಯು ವಿಜ್ಞಾನ, ತಂತ್ರಜ್ಞಾನದ ಬುಡವನ್ನೇ ಅಲ್ಲಾಡಿಸಿತು. ನೋಡು ನೋಡುತ್ತಿದ್ದಂತೆಯೇ ತಿರುಗುತ್ತಿದ್ದ ಭೂಮಿ ನಿಂತಂತಾಯಿತು. ವಾಹನಗಳು ಚಕ್ರ ಮುರಿದು ನಿಂತರೆ, ಕಾರ್ಖಾನೆಗಳು ಕಾಲುಕಟ್ಟಿ ನಿಂತವು. ಅಂಗಡಿಗಳು ಗಂಟು ಮೂಟೆ ಕಟ್ಟಿ ನಡೆದರೆ, ಸಂತೆ ಸದ್ದಿಲ್ಲದೆ ಮಾಯವಾದವು. ಶಾಲಾ-ಕಾಲೇಜುಗಳು ವಿಳಾಸ ಮರೆತು ಹೋದರೆ,  ಸಿನಿಮಾ ಮಂದಿರಗಳಿಗೆ,  ಹೋಟೆಲ್- ರೆಸ್ಟೋರೆಂಟ್ – ಹೋಂಸ್ಟೇಗಳಿಗೆ ಕ್ಯಾನ್ಸರ್ ಬಡಿಯಿತು. ರಸ್ತೆಗಳು ಬೆತ್ತಲಾದರೆ,  ಕಚೇರಿಗಳು ಕತ್ತಲ ಮಡಿಲಲ್ಲಿ… ಹೀಗೆ ನಿತ್ಯದ ಓಟ ಥಟ್ಟನೆ ನಿಂತಿತು. ಒಂದರ್ಥದಲ್ಲಿ ಜಗತ್ತೇ ಸ್ತಬ್ಧವಾಯಿತು. 

ಆದರೆ ಒಂದು ಮಾತ್ರ ನಿರಂತರ ಕಾರ್ಯೋನ್ಮುಖವಾಗಿತ್ತು.  ದೇಶದ ಕಾರ್ಖಾನೆಗಳೇ ಉತ್ಪಾದನೆಯನ್ನು ಮರೆತು ನಿದ್ದೆ ಮಾಡುತ್ತಿದ್ದರೆ ಈ ಕಾರ್ಖಾನೆ ಮಾತ್ರ ಮೈ ಕೊಡವಿ ದುಡಿಯಲು ನಿಂತಿತ್ತು. ಹೇಳಬಲ್ಲಿರಾ ಕಾರ್ಖಾನೆ ಯಾವುದೆಂದು?  ನಿಮ್ಮ ಊಹೆ ಸರಿ..  ಅದೇ ನಮ್ಮ-ನಮ್ಮ  ಮನೆಗಳ ” ಅಡುಗೆ ಮನೆ “.   ದುಡಿದರೂ ಲಾಭ ತರದ ಕಾರ್ಖಾನೆಯೆಂದರೆ ಅದು `ಅಡುಗೆ ಮನೆ ‘ ಒಂದೇ  ಎನಿಸುತ್ತದೆ. ಶಿಕ್ಷಣ ಮಾತ್ರ ಅನುತ್ಪಾದಕ ಕ್ಷೇತ್ರ ಎನ್ನುವವರು ಅಡುಗೆಮನೆಯನ್ನು ಅನುತ್ಪಾದಕ ಕಾರ್ಖಾನೆಯೆಂದೇ  ಹೇಳಬೇಕು. ಏಕೆಂದರೆ ಈ  ಎರಡರ ಲಾಭಗಳು ಕೈಗೆ ಸಿಕ್ಕದ್ದು,  ಎಣಿಸಲಾಗದ್ದು, ತೂಗಲು ಆಗದ್ದು… ಅಲ್ಲವೇ? 

ನಾನು ವೃತ್ತಿಯಲ್ಲಿ  ಶಿಕ್ಷಕಿ. ಬೆಳಿಗ್ಗೆ ಒಂಬತ್ತಕ್ಕೆಲ್ಲ ಮನೆ ಬಿಟ್ಟರೆ ಸಂಜೆ ಆರಕ್ಕೆ ಮನೆ ಸೇರುವೆ. ಮಧ್ಯೆ ಸುಮಾರು ಎಂಟು ಗಂಟೆಗಳ ಸಮಯ ವೃತ್ತಿಗೆ ಮೀಸಲು. ಲಾಕ್ಡೌನ್ ನಂತರ ದುಡಿಮೆಯ ಈ ಅವಧಿ ಬಿಡುವಾಗಿ ಸಿಗುವುದೆಂದು ಹಿರಿಹಿರಿ ಹಿಗ್ಗಿದ್ದೆ.  ನನ್ನಂತೆಯೇ ಲಕ್ಷಾಂತರ ವೃತ್ತಿ ನಿರತ ಮಹಿಳೆಯರು ಹಿಗ್ಗಿರಬಹುದು. ಬಿಡುವಿನ ಅವಧಿಯನ್ನು ಪ್ರವೃತ್ತಿಗೆ ನೀಡಬಹುದೆಂದು ಕಾತರಿಸಿದ್ದೆ.  ಬರೋಬ್ಬರಿ ನಿತ್ಯ 8 ಗಂಟೆಗಳನ್ನು ಯಾವುದೇ ಪ್ರತಿಭಾವಂತ ತನ್ನ ಪ್ರವೃತ್ತಿಗಾಗಿ ಮೀಸಲಿಡುವುದೇ  ಆದರೆ ಸಮಾಜವೇ ಗುರುತಿಸುವಂತಹ ಸಾಧನೆ ಮಾಡಬಲ್ಲ. ಹಾಗೆಯೇ ಒಬ್ಬ ಸಾಮಾನ್ಯ ಕೂಡ ನಿತ್ಯ 8 ಗಂಟೆಗಳು ತನ್ನ ಹವ್ಯಾಸಗಳಲ್ಲಿ ತೊಡಗಿಸಿಕೊಂಡರೆ ಅಸಾಮಾನ್ಯ ಆಗಿ ಬಿಡಬಲ್ಲ. ಹೀಗೆ ಪ್ರವೃತ್ತಿ,  ಹವ್ಯಾಸಗಳ ಕನಸುಗಳ ಜೊತೆ ಜೊತೆಗೆ ಕೆಲಸಕ್ಕೆ ಹೋಗುವಾಗ ಮಾಡಲು ಸಾಧ್ಯವಿಲ್ಲದ ಬಿಡಲೂ ಆಗದ  ಒಳಗೊಳಗೇ ಕೊರೆಯುತ್ತಿದ್ದ ಚಿಕ್ಕ ಚಿಕ್ಕ ಕೆಲಸಗಳ ಪಟ್ಟಿ ಮಾಡಿಕೊಂಡೆ. ಅವೇನೆಂದರೆ  ಬೆಳಿಗ್ಗೆ ಮತ್ತು ಸಂಜೆ ಅರ್ಧ ಗಂಟೆ ವ್ಯಾಯಾಮ,  ಅರ್ಧ ಗಂಟೆ  ಪ್ರಾಣಾಯಾಮ, ತಲೆ ಕೂದಲ ಆರೈಕೆ,  ಮುಖಕ್ಕೆ ಮನೆಯಲ್ಲೇ  ಫೇಶಿಯಲ್ ಮಾಡಿಕೊಳ್ಳುವುದು,  ಎಣ್ಣೆಸ್ನಾನ, ಜ್ಯೂಸ್ ಮತ್ತು ಹಣ್ಣುಗಳಂತಹ  ಲಘು ಆಹಾರ ಸೇವಿಸುತ್ತಾ ತೂಕ ಇಳಿಸಿಕೊಳ್ಳುವುದು,  ಬರೆದಿರುವ ಲೇಖನಗಳ ಹುಡುಕಿಕೊಂಡು ಒಂದೆಡೆ ಜೋಪಾನವಾಗಿ ಇಟ್ಟುಕೊಳ್ಳುವುದು, ಗುಡ್ಡೆ ಹಾಕಿಕೊಂಡಿದ್ದ ಫೋಟೋಗಳನ್ನು ಸಿ. ಡಿ ಗೆ ಹಾಕಿ ಸಂಗ್ರಹಿಸಿಡುವುದು, ಒಂದಷ್ಟು ಚಿತ್ರ ಬಿಡಿಸುವುದು ಮನಸ್ಸಿಗೆ ಸಾಕಾಗುವಷ್ಟು ಸಾಹಿತ್ಯ  ಓದುವುದು ಹಾಗೂ ಮನಸೋ  ಇಚ್ಛೆ ಬರೆಯುವುದು…

ಹೀಗೆ… ಕೇವಲ ಇವೆಲ್ಲ ನಾನೊಬ್ಬಳು ಅಂದುಕೊಳ್ಳುವ ಕೆಲಸಗಳಲ್ಲ. ನನ್ನಂತಹ ಲಕ್ಷಾಂತರ ಹೆಣ್ಮನಸುಗಳು ಹಾಕಿಕೊಳ್ಳುವ ಯೋಜನೆಗಳು ಇವಾಗಿವೆ. ಏಕೆಂದರೆ ಇವೆಲ್ಲ ನಾವೇ ಮಾಡಿಕೊಳ್ಳಬೇಕಾದ ಬೇರಾರು ಮಾಡಿಕೊಡಲಾಗದ  ತೀರಾ ವೈಯಕ್ತಿಕ ಕೆಲಸಗಳು. ಒಂದು ಲೆಕ್ಕದಲ್ಲಿ ನಮ್ಮೊಳಗಿನ ಆಸೆಗಳು…  ವರ್ಷಾನುಗಟ್ಟಲೆ ಜಾರಿಗೆ ಬರದೇ ಕೇವಲ  ಆದೇಶಗಳಾಗಿ ಮೇಲಧಿಕಾರಿಗಳ ಕಚೇರಿಯಲ್ಲೇ ಉಳಿದಿರುವ  ಫೈಲುಗಳು… ಅನ್ನಬಹುದೇನೋ.? 

ಹೇಗೂ ನಾಳೆ ಬೇಗ ಏಳುವಂತಿಲ್ಲ… ಕಸಗುಡಿಸುವ ಶಾಸ್ತ್ರ ಮಾಡುವ,  ಗಡಿಬಿಡಿ ಸ್ನಾನ ಮಾಡುವ,  ತಡಮಾಡದೆ ತಿಂಡಿ ಅಡುಗೆ ತಯಾರಿಸುವ,  ಗಡಿಬಿಡಿ ವಸ್ತ್ರಾಲಂಕಾರ ಮಾಡಿಕೊಂಡು ನೆಟ್ಟಗೆ ತಿಂಡಿಯನ್ನೂ ತಿನ್ನದೇ   ಬಸ್ ಹೋಯಿತೋ  ಏನೋ  ಎಂದು ಏದುಸಿರು ಬಿಡುತ್ತಲೇ ಬಸ್ಟ್ಯಾಂಡ್ ಕಡೆಗೆ ಓಡುವ… ಇದ್ಯಾವುದು ಇಲ್ಲದ ಸುಖದ ದಿನಗಳ ಕನಸು ಕಾಣಲು ಕಣ್ಮುಚ್ಚುತ್ತಾ…  ಲಕ್ಷಾಂತರ ಮಹಿಳೆಯರ ಒಳದನಿಗೆ ಕಿವಿಯಾಗಿ ಬಂದು ಬಿಟ್ಟಿತೇನೋ ಈ  ಕೊರೋನಾ ಎಂದು ಧನ್ಯವಾದ ಹೇಳುತ್ತಾ  ದೇಶದ ಆರ್ಥಿಕ ವ್ಯವಸ್ಥೆ, ಕಾರ್ಮಿಕರು, ಬಡತನ ಯಾವುದನ್ನೂ ಯೋಚಿಸದ ಸ್ವಾರ್ಥಿಯಾಗಿ ಸಂತಸದಲ್ಲಿ ನಿದ್ದೆಗೆ ಇನ್ನೇನು ಜಾರಬೇಕು ಅಷ್ಟರಲ್ಲಿ ಪತಿರಾಯ, ” ನಾಳೆ ಬೆಳಿಗ್ಗೆ 7.30 ಕ್ಕೆ ಹೋಗ್ಬೇಕು ಡ್ಯೂಟಿಗೆ(ಪೊಲೀಸ್)… ತಿಂಡಿ ಬೇಗ ಆಗ್ಬೇಕು…”  ಅಂದಕೂಡಲೇ ಮನಸೊಳಗೆ ಆಟಂಬಾಂಬ್ ಸಿಡಿದಂತಾಯ್ತು. ಗೊಣಗುತ್ತಲೇ ಮಲಗಿ ಗೊಣಗುತ್ತಲೇ ಬೆಳಗ್ಗೆ ಎದ್ದರೆ ಮತ್ತದೇ ಗಡಿಬಿಡಿ… ಹೇಗೂ ಕೆಲಸಕ್ಕೆ ಹೋಗಲ್ಲ ಬೇಕಾದಷ್ಟು ಸಮಯವಿದೆ ಎನ್ನುತ್ತಾ ಒಳಗೆ ಬಂದರೆ ಸಿಂಕಿನೊಳಗೆ ರಾಶಿ ಪಾತ್ರೆಗಳ ಸುಗಮ  ಸಂಗೀತ ಗಾಯನ ಆರಂಭ! ಅದನ್ನು  ಮುಗಿಸುವಾಗಲೇ ಕೊರೊನಾ ಭಯಕ್ಕೆ ಮತ್ತೆ ಮತ್ತೆ  ನೆಲ ಗುಡಿಸುವ, ಒರೆಸುವ hygiene ಗೀಳು, ಅದಕ್ಕೆ ಮುಕ್ತಿ ನೀಡುವಷ್ಟರಲ್ಲಿ ಆಗಲೇ ಗಡಿಯಾರ “ಮಾರಾಯ್ತಿ 11:00 ಆಯ್ತು ಅಡುಗೆ ಮಾಡು “ಎಂದು ಆದೇಶ ಕೊಡುತಿತ್ತು.  ಅಡುಗೆಯೂ ಆಯ್ತು ಊಟವೂ ಆಯ್ತು ಉಸಿರು ಬಿಡುವಷ್ಟರಲ್ಲಿ ಎರಡನೇ ಸುತ್ತಿನ ಸುಗಮ ಸಂಗೀತ! ಇದನ್ನು ಮುಗಿಸುತ್ತಿರುವಾಗಲೇ  ಬಚ್ಚಲು ಮನೆಯಲ್ಲಿ ಮೈಲಿಗೆ ಬಟ್ಟೆಗಳ ಚೀರಾಟ! ನಮಗೆ ಸ್ನಾನ ಮಾಡಿಸೆಂದು…ಬಟ್ಟೆಗಳ ಮೈತೊಳೆದು ಬರುವ ಹೊತ್ತಿಗೆ ತಿನ್ನಲು ಏನಾದರೂ ಕೊಡೆಂದು ಜೋತುಬಿದ್ದ ಮಕ್ಕಳು! ಆಚೆ ಬರಲು ಕಾಯುತ್ತಿದ್ದ ಎಣ್ಣೆಯ ಬಾಣಲಿ-ಕೆಳಗಿಳಿಯಲು ಹವಣಿಸುತ್ತಿದ್ದ ಎಣ್ಣೆಯ  ಡಬ್ಬ..! ಒಲೆಯ ಮೇಲೆ ಭಕ್ಷ್ಯಗಳ ನರ್ತನ  ನಡೆಯುತಿದ್ದರೆ   ಮೈಯಲ್ಲೆಲ್ಲಾ ಬೆವರಿನ ಕಮಟು. ಕೆಲಸ  ಮುಗಿಯಿತೆಂದರೆ ಅದಾಗಲೇ  ಸಂಜೆ ಕಾಫಿ! ವಾಟ್ಸಪ್ ನೋಡಲು ಹೋದರೆ ಫೋನ್ ಕಿತ್ತುಕೊಳ್ಳುವ ಪುಟ್ಟ ಕೈಗಳು.. ಆಸೆಯಿಂದ ಪುಸ್ತಕ ಕೈಗೆತ್ತಿಕೊಂಡರೆ,  ಬಿಸಿಲಲ್ಲಿ ಚೆನ್ನಾಗಿ ಒಣಗಿಸಿ ಗರಿಗುಡುತ್ತಿದ್ದ ಬಟ್ಟೆಗಳಿಗೆ ತಮ್ಮ ಮನೆ ಸೇರುವ ತವಕ! ಅವರನ್ನೆಲ್ಲ ಅವರವರ ಮನೆಗೆ ಸೇರಿಸುವ ಹೊತ್ತಿಗೆ ದೇವರ ಮನೆಯಲ್ಲಿ ದೀಪಗಳ ಕೂಗು! ನಮ್ಮನ್ನು ಬೆಳಗಿಸುವೆಯೋ  ಇಲ್ಲವೋ ಎಂದು.  ದೀಪ ಬೆಳಗಿಸಿ ಬರುವ ಹೊತ್ತಿಗೆ ಕರ್ತವ್ಯ ಮುಗಿಸಿ ಯುದ್ಧ ಗೆದ್ದವರಂತೆ (ಕೊರೋನಾ ಸಮಯದಲ್ಲಿ ಒಂದೊಂದು ದಿನವೂ ಯುದ್ಧವೇ ಆಗಿದೆ) ಹಿಂತಿರುಗಿ ಬರುವ ಪತಿ. ಸೀದಾ ಬಚ್ಚಲು  ಮನೆಗೆ ಹೋಗಿ ಸ್ನಾನ (ಎರಡನೇ ಬಾರಿ) ಮಾಡಿ ಬಟ್ಟೆಗಳನ್ನು ಸರ್ಫ್‌ನಲ್ಲಿ  ನೆನೆಸಿಟ್ಟು ಈಗಲೇ ತೊಳೆದುಬಿಡು  ಇಲ್ಲವಾದರೆ ಅಪಾಯ ಎಂಬ ಎಚ್ಚರಿಕೆ  ಮತ್ತು  ಭಯ ತುಂಬಿದ ಆದೇಶ. ಆಯ್ತೆಂದು ಬಟ್ಟೆ ತೊಳೆದು ಬಂದು ಉಪಚಾರ ಮಾಡುವ ಹೊತ್ತಿಗೆ ಮತ್ತೆ ಜೋತುಬಿದ್ದ ಮಕ್ಕಳು “ಹಸಿವಾಯ್ತು ಊಟ ಕೊಡು” ಅಡುಗೆ ಮಾಡಿ ಊಟ ಬಡಿಸಿ ತಿರುಗಿದರೆ,  ಸಿಂಕಿನಲ್ಲಿ ಮತ್ತೆ ಪಾತ್ರೆಗಳ ಸಮ್ಮೇಳನ.. ಸಮ್ಮೇಳನ ಮುಗಿಸಿ ನಿಲ್ಲಲು ಆಗದೇ ಕೂರಲಾಗದೆ ದಿಂಬಿಗೆ ತಲೆಕೊಟ್ಟರೆ ಬೆನ್ನು  ರಾಮ ರಾಮ ಎಂದರೆ ಸೊಂಟ  ಶಿವ ಶಿವ ಎನ್ನುತ್ತವೆ. 

ಪ್ರವೃತ್ತಿ ಹಾಗಂದ್ರೆ ಏನು? !

ಹವ್ಯಾಸ… ಹಂಗಂದ್ರೆ ಏನು?!! (ನಗು ಮಿಶ್ರಿತ ಪ್ರಶ್ನೆ) ಅನಿಸದೇ ಇರುತ್ತದೆಯೇ..? 

ಎಲ್ಲಿ ಹೋಯಿತು ಆ ಎಂಟು ಗಂಟೆಗಳ ನಮ್ಮ ವೃತ್ತಿಯ ಸಮಯ? ತೀರ 8 ಗಂಟೆಯಲ್ಲದಿದ್ದರೂ ನಾಲ್ಕು ಗಂಟೆಯಾದರೂ ಬಿಡುವು  ಮಾಡಿಕೊಳ್ಳಬೇಕೆಂದು ಶತಾಯಗತಾಯ ಯತ್ನಿಸಿ ಇಂದು ವ್ಯಾಯಾಮ ಮಾಡಬೇಕೆಂದು ನಿರ್ಧರಿಸಿದ್ದರೆ ಗೆಳತಿಯರ (ಕೆಲಸಕ್ಕೆ ಹೋಗುವ ಸಮಯದಲ್ಲಿ ಮಾತಾಡಿಸಲು ಆಗದ) ಫೋನು, ನೆಂಟರ ಫೋನು. ಯಾವ ಕಷಾಯ ಮಾಡ್ತಿದ್ದೀರಾ? ಎಷ್ಟು ಸಾರಿ ಕುಡಿತೀರಾ?  ಹೆಂಗಾಯ್ತು ನೋಡಿ? ಸ್ಕೂಲಿನ ಕಥೆಯೇನು?  ಮಕ್ಕಳನ್ನು ತಡೆಯುವುದು ಕಷ್ಟ… ಹೀಗೆ ನಿತ್ಯ ಒಬ್ಬೊಬ್ಬರದ್ದು. ಎಲ್ಲರ ಕತೆಯು ಮುಗಿದು ಇನ್ನಾದರೂ ನನಗಾಗಿ ಕೆಲಸಗಳನ್ನು ಮಾಡಲು ನಿರ್ಧಾರ ಮಾಡಿದೆ. 

ಆಚೆನೂ ಕಳಿಸಲ್ಲ, ಯಾರನ್ನೂ ಬರೋಕೂ ಬಿಡಲ್ಲ  ನಾವೇನು ಮಾಡಬೇಕು?  ನಮ್ಮೊಟ್ಟಿಗೆ ಆಟ ಆಡಲು ಬರಲೇಬೇಕು ಎಂದು ಚಂಡಿಬಿದ್ದ ಮಕ್ಕಳ ಮುಂದೆ  ಬಾರದಿದ್ದ ನಗು ತೋರಿಸುತ್ತಾ ಸೊಂಟ ನೆಟ್ಟಗೆ ಮಾಡಿಕೊಂಡು ಚೌಕಾಭಾರ ಹಾವು-ಏಣಿ ಆಟದ ನಾಟಕ ಮಾಡಿ, ಮಕ್ಕಳ ಮುಖದ ನಗು ಕಂಡು ಇದೇ  ಸಾರ್ಥಕವೇನೋ  ಎಂದು ಹುಸಿ ಸಮಾಧಾನ ಮಾಡಿಕೊಳ್ಳುತ್ತಾ,  ಮತ್ತೆ ನಮಗಾಗಿ ಏನನ್ನು ಮಾಡಿಕೊಳ್ಳಲಾಗದ ಲಾಕ್‌ಡೌನ್ ದಿನಗಳು… ನಿಜಕ್ಕೂ  ಸತ್ಯದರ್ಶನ ಮಾಡಿಸಿದವು. 

ಇದೆಲ್ಲ ಮೇಲಿನ ಕಥೆ ಯಾರಿಗೂ ತಿಳಿಯದ ಹೊಸ ಕಥೆಯೇನೂ ಅಲ್ಲ. ನಾನು ಏಕೆ ಇಷ್ಟು ಚಿಕ್ಕ ಚಿಕ್ಕ ವಿಷಯಗಳನ್ನು ಹಂಚಿಕೊಂಡೆಯೆಂದರೆ  ಇದು ನಮ್ಮ ದೇಶದ ಅಥವಾ ನಮ್ಮ ಸಮಾಜದ ಶೇಕಡ  75ಕ್ಕೂ ಹೆಚ್ಚು ಮಹಿಳೆಯರ ಬದಲಾಯಿಸಲು ಸಾಧ್ಯವೇ ಇಲ್ಲದ ಪರಿಸ್ಥಿತಿ. ನಾವು ಯಾವುದೇ ಕ್ಷೇತ್ರದ ಸಾಧನಾ ಪಟ್ಟಿಯನ್ನು ತೆಗೆದು ನೋಡೋಣ. ಸಾಹಿತ್ಯ, ವಿಜ್ಞಾನ,  ತಂತ್ರಜ್ಞಾನ, ವೈದ್ಯಕೀಯ, ರಾಜಕೀಯ,  ಸಾಮಾಜಿಕ, ಆರ್ಥಿಕ ಹೀಗೆ ಸಾಧಕರ ಪಟ್ಟಿಯಲ್ಲಿ 100 ಜನ ಪುರುಷರಿಗೆ ಎರಡು ಅಥವಾ ಮೂರು ಮಹಿಳೆಯರ ಹೆಸರು  ಇದ್ದರೆ ಅದೇ ಹೆಚ್ಚು. ಕನ್ನಡಕ್ಕೆ ಒಂದು  ಜ್ಞಾನಪೀಠ ತಂದುಕೊಟ್ಟ ಮಹಿಳೆ ಇಲ್ಲ. ಮಹಿಳಾ ವಿಜ್ಞಾನಿಗಳ ಹೆಸರು ಹೇಳಿಯೆಂದರೆ  ಮೇಡಂ ಕ್ಯೂರಿ ಹೇಳಿ ಮುಗ್ಗರಿಸುತ್ತೇವೆ.  ರಾಜಕೀಯ ನಾಯಕಿಯರನ್ನು ಹೇಳಿ ಅಂದರೆ ಇಂದಿರಾಗಾಂಧಿ,  ಸುಷ್ಮಸ್ವರಾಜ್ ಹೇಳಿ ತಲೆ ಕೆರೆದುಕೊಳ್ಳುತ್ತಾ ನಿಲ್ಲುತ್ತೇವೆ. ಮಹಿಳಾ ತತ್ವಜ್ಞಾನಿಯ ಹೆಸರಂತೂ ಇದ್ದಂತಿಲ್ಲ. ಮಹಿಳಾ ಲೇಖಕಿಯರು ಎಂದರೆ ಅನುಪಮಾ ನಿರಂಜನ, ತ್ರಿವೇಣಿ ಹೇಳಿದರೆ ಮುಗಿಯಿತು. ವಚನಕಾರ್ತಿಯೆಂದರೆ  ಅಕ್ಕಮಹಾದೇವಿ ಮಾತ್ರ 

ಆರ್ಥಿಕ ತಜ್ಞೆ  ಎಂಬುದರ ಅಸ್ತಿತ್ವವೇ ಇಲ್ಲವೇನೋ!!  ಶಿಕ್ಷಣ ತಜ್ಞೆಯರ  ಹೆಸರು ಪಟ್ಟಿಯಲ್ಲಿ ನಾಪತ್ತೆ !

ಟಿವಿಯಲ್ಲಿ ಬರುವ ಧಾರಾವಾಹಿಗಳನ್ನು ಬಿಟ್ಟರೆ, ಚಲನಚಿತ್ರರಂಗವನ್ನು ಬಿಟ್ಟರೆ ಉಳಿದೆಲ್ಲ ಸಾಧನ ಕ್ಷೇತ್ರಗಳಲ್ಲಿ ಮಹಿಳೆಯರ ಪಾತ್ರ ಬಹಳ ಚಿಕ್ಕದೆಂದು ಹೇಳಬೇಕು. ಉದ್ಯಮಿಗಳಲ್ಲಿ ಸುಧಾಮೂರ್ತಿ,  ಕಿರಣ್ ಮಜುಮ್ದಾರ್ ಹೆಸರನ್ನು ಬಿಟ್ಟರೆ ಉಳಿದವರ ಹೆಸರಾದರೂ ಹೋಗಲಿ ಉದ್ಯಮಿಗಳಲ್ಲಿ ಮಹಿಳೆಯರು ಇರುತ್ತಾರೆ ಎಂಬ ಕಲ್ಪನೆಯೇ ಇದ್ದಂತೆ ಇಲ್ಲ. 

ಇದರರ್ಥ ಮಹಿಳೆಯರ  ಮತ್ತು ಪುರುಷನ ಬೌದ್ಧಿಕ ಮಟ್ಟದಲ್ಲಿ ವ್ಯತ್ಯಾಸವಿದೆ ಎಂದಲ್ಲ ,  ಮಹಿಳೆ-ಪುರುಷರ ದೈಹಿಕ ಶಕ್ತಿಯಲ್ಲಿ ಅಂತರವಿದೆ ಎಂದಲ್ಲ. ಇದೆಲ್ಲಕ್ಕೂ ಕಾರಣ ಪುರುಷ ತನ್ನ ನಿತ್ಯದ ಬದುಕನ್ನು ಅಥವಾ ದಿನದ ಸಮಯವನ್ನು ತನ್ನಿಚ್ಚೆಯಂತೆ design  ಮಾಡಿಕೊಳ್ಳಬಲ್ಲ. ಆದರೆ ಮಹಿಳೆಯರಿಗೆ ಮಾತ್ರ ಅದು ಸಾಧ್ಯವಾಗುವುದಿಲ್ಲ. ಶೇಕಡಾ 10ರಿಂದ 15ರಷ್ಟು ಮಹಿಳೆಯರು ಮಾತ್ರ ಅದರಲ್ಲಿಯೂ ಆರ್ಥಿಕವಾಗಿ ಅತ್ಯುತ್ತಮ ಸ್ಥಿತಿಯಲ್ಲಿರುವ ಮಹಿಳೆಯರು ಮಾತ್ರ ತಮ್ಮ ದಿನಚರಿಯನ್ನು ತಮ್ಮಿಚ್ಚೆಯಂತೆ  ರೂಪಿಸಬಲ್ಲರು.ಶೇಕಡಾ  80ರಿಂದ 85 ರಷ್ಟು ಮಹಿಳೆಯರ ದಿನಚರಿ ಸಮಾಜ ಹಾಗೂ ಸ್ವನಿಯಂತ್ರಣಕ್ಕೆ ಒಳಪಟ್ಟಿದೆ. ಸಮಾಜ ನಿಯಂತ್ರಿತ,  ಸ್ವನಿಯಂತ್ರಿತ ದಿನಚರಿಯಲ್ಲಿ ಸ್ವರ್ಗವನ್ನೂ,  ಸಾರ್ಥಕತೆಯನ್ನು ಕಾಣುವ ಮಹಿಳೆಯರ ಪ್ರಮಾಣ ಶೇಕಡ 50ರಷ್ಟು ಆದರೆ,  ತಮ್ಮೊಳಗಿನ ಪ್ರತಿಭೆಗೆ ಧ್ವನಿ ನೀಡಲಾಗದೆ   ಪ್ರವೃತ್ತಿಗೆ ವೇದಿಕೆ ಕೊಡಲಾಗದೆ ಕೊರಗುತ್ತಾ ಕಳೆಯುತ್ತಿರುವವರ ಮಹಿಳೆಯರ ಪ್ರಮಾಣ ಶೇಕಡ 30ರಷ್ಟು ಇದೆ ಎನ್ನಬಹುದೆ?? 

ಇದೆಲ್ಲ  ನಿಖರ ಅಂಕಿ ಅಂಶವಲ್ಲ. ನನ್ನ ಊಹ್ಯ ಲೆಕ್ಕಾಚಾರ ಅಷ್ಟೇ… ಹೀಗೆ ತನ್ನನ್ನು ತಾನು  ಪ್ರವೃತ್ತಿಗೆ ಸಾಧನೆಗೆ ಬಿಟ್ಟುಕೊಡಲಾಗದ ಬೇಗುದಿಯಿಂದ ಜೀವನ ಕಳೆಯುತ್ತಿರುವ ಮಹಿಳೆಯರ ಪರಿಸ್ಥಿತಿ ಬದಲಾಗಲು ಸಾಧ್ಯವೇ? 

ಮಹಿಳೆಯರು ಪುರುಷರಂತೆ ಸಂಪಾದಿಸುತ್ತಾರೆ ನಿಜ. ಹಾಗೆಯೇ ಪುರುಷರ  ಸಂಪಾದನೆಗೆ ಅವಲಂಬಿತವಾಗಿರುವ ಮಹಿಳೆಯರು ಇರುವಂತೆ ಮಹಿಳೆಯರ ಸಂಪಾದನೆಯಲ್ಲಿ ಬದುಕುವ ಕುಡುಕ  ಗಂಡಸರು ಅಷ್ಟೇ ಪ್ರಮಾಣದಲ್ಲಿ ಇದ್ದಾರೆ. ನಾನು ಅವರ ಬಗ್ಗೆ ಮಾತನಾಡುವುದೇ ಇಲ್ಲ. ಇಲ್ಲಿ ಸಂಪಾದನೆಯ ಮಾತು ನಗಣ್ಯ. ಸಂಪಾದನೆಯು ಬದುಕಿಗೆ ಸುಖ ಕೊಡಬಹುದೇ ಹೊರತು ಸೌಂದರ್ಯವನ್ನು ಅಲ್ಲ.ಬದುಕಿಗೆ  ಸೌಂದರ್ಯ ಬರುವುದು  ಪ್ರವೃತ್ತಿಯ ಸಮ ಘಮ ಘಮಿಸಿದಾಗ ಮಾತ್ರ. 

ನನ್ನೊಳಗಿನ ಒಬ್ಬ ಹಾಡುಗಾರ್ತಿಯ, ನೃತ್ಯಗಾರ್ತಿಯ,  ಲೇಖಕಿಯ, ಕವಯಿತ್ರಿಯ,  ಕಲಾಕಾರಿಣಿಯ,  ಆಟಗಾರ್ತಿಯ,  ರಾಜಕಾರಣಿಯ,  ಚಿಂತಕಿಯ,  ತಜ್ಞೆಯ ಅನಾವರಣ ಆದಾಗಷ್ಟೇ ಸಮಾಜದ ಸೌಂದರ್ಯ ಹೆಚ್ಚುವುದು. 

ಹೆಚ್ಚು ದುಡಿಮೆ ಸಮಾಜವನ್ನು ಶ್ರೀಮಂತ ಗೊಳಿಸಬಹುದೇ  ವಿನಹ ಸುಂದರಗೊಳಿಸಲು ಸಾಧ್ಯವೇ ಇಲ್ಲ.  ಕೇವಲ ಪುರುಷರ ಸಾಧನೆಯಿಂದ ಮಾತ್ರ ಸಮಾಜವು ಸೌಂದರ್ಯ ಗೊಳ್ಳಲು ಸಾಧ್ಯವಿಲ್ಲ. ಮಹಿಳೆಯರ ಇಂತಹ ಅನಿವಾರ್ಯದ ಇಕ್ಕಟ್ಟುಗಳು, ಭಾವನಾತ್ಮಕ ದೌರ್ಬಲ್ಯಗಳು, ಕೌಟುಂಬಿಕ ತ್ಯಾಗಗಳು   ಸಮಾಜದ ಸೌಂದರ್ಯದ ಕೊರತೆಗೆ ಕಾರಣವಾಗಬಹುದು.  

ಕುವೆಂಪು, ಬೇಂದ್ರೆಯಂತಹ  ಪುರುಷ ಸಾಹಿತಿಗಳಿಗೆಲ್ಲ ಸಿಕ್ಕ ಏಕಾಂತ, ಉದ್ಯಮಿಯೊಬ್ಬನಿಗೆ ಪರಿಶ್ರಮ ಹಾಕಲು ಸಿಗುವ ಸಮಯ, ಪುರುಷ ರಾಜಕಾರಣಿಗೆ ಸಿಗುವಷ್ಟು ಬೆಂಬಲ, ಯಾವುದೇ ಕ್ಷೇತ್ರದಲ್ಲಿ  ಸಾಧಿಸಲು ಬೇಕಾದ ಅನಿಯಂತ್ರಿತ ಮತ್ತು ಸಹಜ ಸ್ವಾತಂತ್ರ್ಯ ಮಹಿಳೆಗೆಲ್ಲಿ?  ವಿವಾಹಿತ ಮಹಿಳೆಗೆ ಒಂದಿಷ್ಟು ಸ್ವಾತಂತ್ರ್ಯ ಸಿಕ್ಕಿದ್ದರೆ ಅದು ಪತಿಯ ಹೆಮ್ಮೆಯ ಕಿರೀಟ ಆಗಿಬಿಡುತ್ತದೆ.

ಮಹಿಳೆಯರಿಗೂ ಸ್ವಾತಂತ್ರ್ಯ ಎಂಬುದು  ಒಂದು ಹೂವಿನ ಬಣ್ಣ, ಸುಗಂಧ ಹಾಗೂ ಸೌಂದರ್ಯದಂತೆ ಸಹಜವಾಗಿ ದೊರೆತರೆ  ಅದೆಷ್ಟು ಚಂದ !

ಆದರೆ ಸದ್ಯದ, ವಾಸ್ತವದ ಮಹಿಳೆಯರ ಪರಿಸ್ಥಿತಿ  ಹೀಗಿರುವಾಗ ಮಹಿಳೆಯರ ಪ್ರವೃತ್ತಿಗೆ ವೇದಿಕೆ ಒದಗಿಸಿ ಕೊಡಬೇಕಾದ ಸೌಜನ್ಯ ಯಾರದ್ದು?  ಗಂಡನದು ಮತ್ತು ಮಕ್ಕಳದು… ಅಲ್ಲವೇ?  ತಮ್ಮ ತಮ್ಮ ಬಟ್ಟೆಗಳನ್ನು ತಾವೇ ತೊಳೆದು ಕೊಂಡರೆ ( ಸಂವಿಧಾನಕ್ಕೆ ವಿರುದ್ಧ ಎಂದು ಭಾವಿಸುವ  ಪತಿಯರಂತೂ ಇದ್ದೇ ಇರುವರು ಧರ್ಮದ್ರೋಹ ಎಂದುಕೊಳ್ಳುವ ಪತ್ನಿಯರಿದ್ದಾರೆ! ) ಬೆಳಗಿನ ಮತ್ತು ಸಂಜೆಯ ಮನೆಕೆಲಸಗಳನ್ನು  ಗಂಡ ಹೆಂಡತಿ ಮತ್ತು ಮಕ್ಕಳು  ಹಂಚಿಕೊಂಡರೆ.. ಕಾಣದ ಈ  ಅನ್ಯಾಯಕ್ಕೆ ಕಡಿವಾಣ ಹಾಕಬಹುದೇ?  

ಅದ್ಯಾವುದು ಆಗದಿದ್ದರೂ ಕೊನೆ ಪಕ್ಷ ತನ್ನ ಹೆಂಡತಿಯನ್ನು ಕುರಿತು “ನಿನ್ನ ಹವ್ಯಾಸ ವೇನು? ನಿನಗೆ ನಿನ್ನ ಪ್ರವೃತ್ತಿಗೆ ಸಮಯ ಬೇಕಿದೆಯೇ? ಎಂದು ಕೇಳುವ ಸೌಜನ್ಯವನ್ನಾದರೂ ಗಂಡನು ತೋರದಿದ್ದರೆ… ಮಕ್ಕಳು ತನ್ನ ತಾಯಿಯನ್ನು “ಅಮ್ಮ ನೀನು ಒಂದಿಷ್ಟು ನಿನ್ನನ್ನು ನೋಡಿಕೋ,  ನಮ್ಮನ್ನು ನಾವು ನೋಡಿಕೊಳ್ಳುತ್ತೇವೆ” ಅನ್ನದಿದ್ದರೆ… ಅದೆಷ್ಟು ಲೇಖಕಿಯರ,  ತಜ್ಞೆಯರ,  ಕವಯಿತ್ರಿಯರ,  ರಾಜಕಾರಣಿಗಳ ಎಲ್ಲಾ ಕ್ಷೇತ್ರಗಳಲ್ಲಿನ ಸಾಧಕಿಯರ  ಕೊಲೆಯಾಗಬಹುದು!”

ಲೆಕ್ಕಕ್ಕೂ  ಸಿಗದ, ಕಣ್ಣಿಗೂ ಕಾಣದ,  ಎಣಿಸಲೂ  ಆಗದ, ಕಾನೂನಿನ ಚೌಕಟ್ಟಿನಲ್ಲಿ ಶಿಕ್ಷಿಸಲೂ ಆಗದ ಕೊಲೆ ಅಲ್ಲದೆ ಇದು ಮತ್ತೇನು? 

ಅಂದಿನಿಂದ ಇಂದಿನವರೆಗೂ,  ಮುಂದೆಯೂ ಪ್ರತಿ ಹೆಣ್ಣು ತಾನು ಭ್ರೂಣವಾಗಿದ್ದಾಗಿನಿಂದಲೇ ಕೇಳುತ್ತಾ ಬೆಳೆಯುವ ದಿವ್ಯಮಂತ್ರ ಇದೊಂದೇ.. “ತೊಳೀತಾ  ಇರು – ತೊಳೀತಾ ಇರು ” ಹೌದಲ್ಲವೇ….??


ಮಮತಾ ಪ್ರಭು 
ಹಾಸನ.
[email protected]

error: Content is protected !!