ಭಾನುವಳ್ಳಿಯ ಹೊಯ್ಸಳರ ಅದ್ಭುತ ಶಿಲ್ಪ ಶ್ರೀ ಲಕ್ಷ್ಮೀ ನಾರಾಯಣ

ರಾಜ್ಯದ ಶಿಲ್ಪಕಲಾ ವೈಭವ ಎಂದೊಡನೆ ಬಹುತೇಕ ಜನರಿಗೆ ನೆನಪಾಗುವುದೇ ಹೊಯ್ಸಳರ ಕಲಾ ದೇಗುಲಗಳು.  ಇವರ ಕಾಲದಲ್ಲಿ ನಿರ್ಮಾಣವಾದ ದೇವಾಲಯಗಳ ಹೊರಭಿತ್ತಿಯಲ್ಲಿನ ಕೆತ್ತನೆ ಎಲ್ಲರ ಗಮನ ಸೆಳೆಯುತ್ತದೆ.  ಆದರೆ ದೇವಾಲಯದ ಗರ್ಭಗುಡಿಯಲ್ಲಿಯೂ ಹಲವು ಸುಂದರ ಶಿಲ್ಪಗಳು ಹೊಯ್ಸಳರ ಮೇರು ಕೃತಿಗೆ ಸಾಕ್ಷಿಯಾಗಿದೆ.  ಇದರಲ್ಲಿ ಕೆಲವು ಶಿಲ್ಪಗಳು ಮೂಲ ಗರ್ಭಗುಡಿಯಲ್ಲಿ ಉಳಿದಿದ್ದರೆ, ಕೆಲವು ಶಿಲ್ಪಗಳಿಗೆ ಕಾಲದ ಓಟಕ್ಕೆ ಸಿಕ್ಕು ನಾಶವಾದ ಗರ್ಭಗುಡಿಯಲ್ಲಿ ಸಿಲುಕಿದೆ, ಇನ್ನು ಕೆಲವು ಮ್ಯೂಸಿಯಂಗಳಲ್ಲಿ ಸೇರಿದ್ದರೆ ಕೆಲವು ಶಿಲ್ಪಗಳಿಗೆ ಹೊಸ ದೇವಾಲಯದ ಸ್ಪರ್ಶ ಸಿಕ್ಕಿದೆ. ಅಂತಹ ಹಳೆಯ ಶಿಲ್ಪಕ್ಕೆ ಹೊಸದಾಗಿ ನಿರ್ಮಾಣವಾದ ದೇವಾಲಯದಲ್ಲಿ ಈ ದೇವಾಲವೂ ಮುಖ್ಯವಾದದ್ದು. ದಾವಣಗೆರೆ ಜಿಲ್ಲಿಯ ಹರಿಹರ ತಾಲ್ಲೂಕಿನಲ್ಲಿರುವ ಭಾನುವಳ್ಳಿಯ ನೋಡಲು ಹೊಸತಾಗಿ ಕಾಣುವ ದೇವಾಲಯದಲ್ಲಿ ಹೊಯ್ಸಳರ ಕಾಲದ ಅಪರೂಪದ ಸುಂದರ ಶಿಲ್ಪವಿದೆ.

ಇನ್ನು ಊರಿನ ಇತಿಹಾಸ ಗಮನಿಸಿದರೆ ಇತಿಹಾಸ ಪುಟದಲ್ಲಿ ಭಾನುವಳ್ಳಿ ಎಂಬ ಉಲ್ಲೇಖವಿದೆ. ಭಾನುವಳ್ಳಿ ಎಂದರೆ ಬಾನ್ + ಪ (ವ) ಳ್ಳಿ ಬಾನ್ವಳ್ಳಿ – ಭಾನವಳ್ಳಿ – ಭಾನುವಳ್ಳಿ ಎಂಬ ವಾಡಿಕೆ ಬಂದಿರಬಹುದು. ಭಾನವಳ್ಳಿ ಶ್ರೀ ಲಕ್ಷ್ಮೀ ನಾರಾಯಣಪುರ ಆಗಿ ಈಗ ಭಾನುವಳ್ಳಿಯಾಗಿ ಪರಿವರ್ತಿತವಾಗಿದೆ. 1224ರ ಪೋಲಾಳ್ವ ದಂಡನಾಥನ ಶಾಸನದಲ್ಲಿ ಭಾನುವಳ್ಳಿಯನ್ನು ಸ್ವರ್ಗ ಸಮಾನವಾದ ಅಗ್ರಹಾರ ಎಂದು ಬಣ್ಣಿಸುತ್ತದೆ. ಒಂದಾನೊಂದು ಕಾಲದಲ್ಲಿ ಅಗ್ರಹಾರವಾಗಿದ್ದ ಇಲ್ಲಿ ನೂರಾ ನಾಲ್ಕು ಬ್ರಾಹ್ಮಣರಿದ್ದರು ಎಂಬ ಉಲ್ಲೇಖವಿದೆ. ಇದನ್ನು ಗಮನಿಸಿದರೆ ಬಾನುವಳ್ಳಿ ಆ ಕಾಲದ ಪ್ರಮುಖ ಅಗ್ರಹಾರವಾಗಿದ್ದು ಎಂಬುದರಲ್ಲಿ ಅತಿಶಯವಿಲ್ಲ. ಇಲ್ಲಿನ ಕೆರೆಯ ಉದ್ದಾರಕ್ಕಾಗಿ ತಿಪ್ಪರಸ ದತ್ತಿ ನೀಡಿದ ಉಲ್ಲೇಖವಿದೆ.

ಇಲ್ಲಿ ಹೊಯ್ಸಳ ಚಕ್ರವರ್ತಿ ಇಮ್ಮುಡಿ ನರಸಿಂಹನ ಮೊಮ್ಮಗ ವೀರ ಸೋಮೇಶ್ವರನ ಪ್ರಧಾನ ದಂಡನಾಯಕ  ಆಂಧ್ರಪ್ರದೇಶದ ನಾರಾಯಣ ಪುರದ ಅತ್ತಿರಾಜ ಮಾತು ನಿವಿಲಾಡೇಯಕ್ಕರ ಪುತ್ರನಾದಂತಹ ಪೂಳ್ವಾಲ ದಂಡನಾಥನು ಕ್ರಿ. ಶ. 1224ರಲ್ಲಿ ಶ್ರೀ ಲಕ್ಷ್ಮೀ ನಾರಯಣ ದೇಗುಲವನ್ನು ನಿರ್ಮಿಸಿ ಈ ಗ್ರಾಮಕ್ಕೆ ಶ್ರೀ ಲಕ್ಷ್ಮೀ ನಾರಾಯಣಪುರ ಎಂದು ನಾಮಕರಣ ಮಾಡಿ ಇಲ್ಲಿ 104 ಬ್ರಾಹ್ಮಣರಿಗೆ ಹಲವು ಗ್ರಾಮಗಳನ್ನು ದತ್ತಿ ನೀಡಿದ ಉಲ್ಲೇಖವಿದೆ. ಹರಿಹರ ದೇವಾಲಯದ ಶಾಸನದ ಉಲ್ಲೇಖ ಗಮನಿಸುವಾಗ ಭಾನುವಳ್ಳಿಯ ಈ ದೇವಾಲಯದ ಉಲ್ಲೇಖ ನಮಗೆ ಸಿಗುತ್ತದೆ. ಹಾಗಾಗಿ ಆ ಸಮಯದಲ್ಲಿ ಇದೊಂದು ಪ್ರಮುಖ ದೇವಾಲಯ ಆಗಿತ್ತು.

ಮೂಲತಹ ಹೊಯ್ಸಳರ ಕಾಲದಲ್ಲಿ ನಿರ್ಮಾಣವಾದ ಈ ದೇವಾಲಯ ಗರ್ಭಗುಡಿ, ಅಂತರಾಳ ಹಾಗೂ ನವರಂಗ ಹೊಂದಿತ್ತು.  ಗರ್ಭಗುಡಿಯಲ್ಲಿ ಸುಂದರವಾದ ಲಕ್ಷ್ಮೀನಾರಾಯಣನ ವಿಗ್ರಹ ಇದ್ದರೆ ನವರಂಗದಲ್ಲಿ ಹೊಯ್ಸಳರ ಕಾಲದ ತಿರುಗಣೆ ಕಂಬಗಳಿದ್ದವು.  ಗರ್ಭಗುಡಿಯ ಪ್ರವೇಶದ ಲಲಾಟದಲ್ಲಿ ಗಜಲಕ್ಷ್ಮೀಯ ಕೆತ್ತೆನೆ ಇತ್ತು.  ಆದರೆ ಕಾಲ ಸರಿದಂತೆ ನಿರ್ವಹಣೆಯ ಕೊರತೆಯಲ್ಲಿ ದೇವಾಲಯ ವಿನಾಶ ಅಂಚಿನತ್ತ ಸಾಗಿತು. ಆದರೆ ಈಚೆಗೆ ಊರಿನವರ ಸಹಕಾರದಿಂದ ದೇವಾಲಯವನ್ನು ನವೀಕರಿಸಲಾಗಿದೆ. ಆದರೆ ಹಳೆಯ ದೇವಾಲಯದ ಯಾವ ಕುರುಹು ನಮಗೆ ಈಗ ಕಾಣಸಿಗುವುದಿಲ್ಲ,  ಗತ ವೈಭವದ ಕೊಂಡಿಯಾಗಿ ಉಳಿದಿರುವುದು ಈಗ ಗರ್ಭಗುಡಿಯಲ್ಲಿನ ಮೂಲ ಮೂರ್ತಿ ಮಾತ್ರ.

ಅವನತಿಯತ್ತ ಸಾಗಿದ ಇಲ್ಲಿನ ದೇವಾಲಯವನ್ನು ನವೀಕರಸಲಾಗಿದ್ದು  ನವೀಕರಣ ಸಮಯದಲ್ಲಿ ಹಳೆಯದಾದ ದೇವಾಲಯವನ್ನು ತೆರುವುಗಳಿಸಿ  ಮೂಲ ಮೂರ್ತಿಯನ್ನು ಹಾಗೇ ಉಳಿಸಿಕೊಳ್ಳಲಾಗಿದೆ. ನವೀಕರಣಗೊಂಡ ದೇವಾಲಯದ ಗರ್ಭಗುಡಿಯಲ್ಲಿ ಸುಂದರವಾದ 8 ಅಡಿ ಎತ್ತರದ ಸುಂದರವಾದ ಹೊಯ್ಸಳರ ಕಾಲದ ಪುರಾತನ ಶ್ರೀ ಲಕ್ಷ್ಮೀನಾರಯಾಣನ ಮೂರ್ತಿ ಇದೆ. ತನ್ನ ಎಡ ಭಾಗದಲ್ಲಿ ಶ್ರೀ ಲಕ್ಷ್ಮೀಯನ್ನು ಕೂಡಿಸಿಕೊಂಡಿರುವಂತೆ ಕೆತ್ತಲಾಗಿದೆ. ಶ್ರೀ ಲಕ್ಷ್ಮೀ ನಾರಾಯಣನನ್ನು ನೋಡುವಂತೆ ಕೆತ್ತಲಾಗಿರುವ ಮೂರ್ತಿ ಶಂಖ ಚಕ್ರಾಧಾರಿಯಾಗಿದ್ದಾನೆ. ಪ್ರಭಾವಳಿಯಲ್ಲಿ ಸುಂದರ ದಶಾವತಾರದ ಸುಂದರ ಕೆತ್ತನೆ ಇದ್ದು ಮೂರ್ತಿಯ ಕಿರಿಟದ ಕೆತ್ತನೆ ಕಲಾತ್ಮಕವಾಗಿದೆ. ದಶಾವತಾರದಲ್ಲಿನ ಬುದ್ಧನ ಕೆತ್ತನೆ ಗಮನ ಸೆಳೆಯುತ್ತದೆ. ಕೊರಳಲ್ಲಿನ ಹಾರ, ಕಾಲಿನ ಬೆರಳಿನ ಸೂಕ್ಷ್ಮ ಕೆತ್ತನೆ ಗಮನ ಸೆಳೆಯುತ್ತದೆ. ಪೀಠದಲ್ಲಿ ಹೊಯ್ಸಳರ ಲಾಂಚನದ ಕೆತ್ತನೆ ನೋಡಬಹದು. ನವೀಕರಣಗೊಂಡ ದೇವಾಲಯದ ನೂತನ ಸೇರ್ಪಡೆಯಲ್ಲಿನ ತೆರೆದ ಮಂಟಪದಲ್ಲಿನ ಉಬ್ಬು ಶಿಲ್ಪಗಳ ಕೆತ್ತೆನೆ ಗಮನ ಸೆಳೆಯುತ್ತದೆ.

ನೊಳಂಬರ ಕಾಲದಲ್ಲಿ ಅವರ ಆಳ್ವಿಕೆಗೆ ಒಳಪಟ್ಟಿದ್ದ ಈ ಗ್ರಾಮ ನಂತರ ಹಲವು ರಾಜರ ಆಳ್ವಿಕೆಗೆ ಒಳಪಟ್ಟು ಈಗ ಗ್ರಾಮವಾಗಿ ಉಳಿದಿದೆ. ಇಲ್ಲಿ ಕಲ್ಲೇಶ್ವರ ದೇವಾಲಯವೂ ಇದ್ದು ಗರ್ಭಗುಡಿಯಲ್ಲಿ ಶಿವಲಿಂಗ ಹಾಗೂ ನಂದಿಯ ಶಿಲ್ಪಗಳಿವೆ.  ಈ ದೇವಾಲಯದ ಬಗ್ಗೆ ಉಲ್ಲೇಖವಿರದಿದ್ದರೂ ಗಮನ ಸೆಳೆಯುವ ದೇವಾಲಯ ಇದಾಗಿದೆ.
ಮಾರ್ಗ : ಹರಿಹರ – ಶಿವಮೊಗ್ಗ ಮಾರ್ಗದಲ್ಲಿ 8 ಕಿ. ಮೀ. ದೂರದಲ್ಲಿ ನಂದಿಗುಡಿಗೆ ಹೋಗುವ ಮಾರ್ಗದಲ್ಲಿ ತಿರುಗಿ ಸುಮಾರು 3 ಕಿ. ಮೀ. ದೂರಕ್ಕೆ ಹೋದರೆ ಈ ದೇವಾಲಯವನ್ನು ತಲುಪಬಹುದು.


ಶ್ರೀನಿವಾಸ ಮೂರ್ತಿ ಎನ್. ಎಸ್.
[email protected]

 

error: Content is protected !!