ಕುವೆಂಪು ವಿಶ್ವ ಮಾನವ ಸಂದೇಶ

ಕನ್ನಡದ ಕವಿವರ್ಯ, ಕರ್ನಾಟಕ ರತ್ನ, ರಾಷ್ಟ್ರಕವಿ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕುವೆಂಪು ಅವರ ಜನನ 29.12.1904 ರಂದು. ಇಂದು ಕುವೆಂಪು ಅವರ 116ನೇ ಜನ್ಮ ದಿನಾಚರಣೆಯನ್ನು ನಾಡಿನಾದ್ಯಂತ ಆಚರಿಸುತ್ತೇವೆ.  ಸಾಹಿತ್ಯ ಸಾಧನೆಯ ಮೇರು ಪರ್ವತವಾದ ಅವರ ವ್ಯಕ್ತಿತ್ವವನ್ನು ಹೇಳುವುದೆಂದರೆ ಹಿರಿದಾದ ಆನೆಯನ್ನು ಕಿರಿದಾದ ಕನ್ನಡಿಯಲ್ಲಿ ಸೆರೆಹಿಡಿದಂತಾಗುತ್ತದೆ. 

ಎಂದೆಂದಿಗೂ ಪ್ರಸ್ತುತವೆನಿಸುವ ಕವಿಯ ವಿಶ್ವ ಮಾನವ ಸಂದೇಶವನ್ನು ಪ್ರತಿಯೊಬ್ಬರೂ ತಿಳಿಯಬೇಕು. ಆಗ ನಾವು ಅವರಿಗೆ ನಿಜವಾದ ನಮನ ಸಲ್ಲಿಸಿದಂತಾಗುತ್ತದೆ. ಕುವೆಂಪು ಅವರ ಜೀವನ ವ್ಯಕ್ತಿತ್ವ ಇಂದಿನ ಯುವ ಪೀಳಿಗೆಗೆ ಅತ್ಯವಶ್ಯಕ ಎಂಬ ಮಹತ್ವ ಅರಿತು, ವಿಶ್ವಮಾನವ ಸಂದೇಶವನ್ನು ತಿಳಿಸಲಿಚ್ಚಿಸುತ್ತೇವೆ.

ಹುಟ್ಟುವಾಗ ವಿಶ್ವಮಾನವನಾಗಿಯೇ ಹುಟ್ಟಿದ ಮಗುವನ್ನು ನಾವು ದೇಶ, ಭಾಷೆ, ಮತ, ಜಾತಿ, ಜನಾಂಗ, ವರ್ಣ ಇತ್ಯಾದಿ ಉಪಾಧಿಗಳಿಂದ ಬದ್ಧನನ್ನಾಗಿ ಮಾಡುತ್ತೇವೆ. ಅವೆಲ್ಲವುಗಳಿಂದ ಪಾರಾಗಿಸಿ, ಅವನನ್ನು ಬುದ್ಧನನ್ನಾಗಿ ಅಂದರೆ ವಿಶ್ವಮಾನವನನ್ನಾಗಿ ಪರಿವರ್ತಿಸುವುದೇ ನಮ್ಮ ವಿದ್ಯೆ, ಸಂಸ್ಕೃತಿ, ನಾಗರಿಕತೆ ಎಲ್ಲದರ ಆದ್ಯ ಕರ್ತವ್ಯವಾಗಬೇಕು. ಪ್ರಪಂಚದ ಮಕ್ಕಳೆಲ್ಲ ಅನಿಕೇತನರಾಗಬೇಕು. ಲೋಕ ಉಳಿದು, ಬಾಳಿ ಬದುಕಬೇಕಾದರೆ, ಮಾನವ ವಿಕಾಸದ ಹಾದಿಯಲ್ಲಿ ಆಯಾ ಕಾಲದ ಅಗತ್ಯವನ್ನು ಪೂರೈಸಲು ಮಹಾಪುರುಷರು ಸಂಭವಿಸಿ ಹೋಗಿದ್ದಾರೆ. ಅವರಲ್ಲಿ ಕೆಲವರ ವಾಣಿ ವಿಶಿಷ್ಟ ಧರ್ಮವಾಗಿ ರೂಪುಗೊಂಡು, ಕಡೆಗೆ ಮತವಾಗಿ ಪರಿಮಿ ತವಾಯಿತು. ಮಾನವರನ್ನು ಕೂಡಿಸಿ ಬಾಳಿಸಬೇಕೆಂಬ ಸದುದ್ದೇಶದಿಂದ ಹುಟ್ಟಿಕೊಂಡ ಮಹಾತ್ಮರ ವಾಣಿ ಮತವಾಗಿ ಮಾದಕವಾಯಿತು. ಒಂದು ಯುಗಕ್ಕೆ ಅಗತ್ಯ ವೆನಿಸಿದ ಧರ್ಮ ಕಾಲಾನುಕಾಲಕ್ಕೆ ಮತವಾಗಿ ನಿರುಪಯುಕ್ತವೆನಿಸಿ ಮತ್ತೊಂದು ಹೊಸ ವಿಚಾರ ಕ್ರಾಂತಿಗೆ ಆಹ್ವಾನ. 

ಮನುಜಮತ, ವಿಶ್ವಪಥ, ಸರ್ವೋದಯ, ಸಮನ್ವಯ, ಪೂರ್ಣ ದೃಷ್ಟಿ ನಮಗೆ ಇನ್ನು ಬೇಕಾದುದು ಆ ಮತ, ಈ ಮತ ಅಲ್ಲ, ಮನುಜ ಮತ. ಆ ಪಥ ಈ ಪಥ ಅಲ್ಲ ವಿಶ್ವಪಥ, ಆ ಒಬ್ಬರ, ಈ ಒಬ್ಬರ ಉದಯ ಮಾತ್ರವಲ್ಲ, ಸರ್ವರ ಸರ್ವಸ್ತರ ಉದಯ. ಪರಸ್ಪರ ವಿಮುಖವಾಗಿ ಸಿಡಿದು ಹೋಗುವುದಲ್ಲ, ಸಮನ್ವಯಗೊಳ್ಳುವುದು. 

ಯಾವ ಭಾವನೆಗಳು ಜಗತ್ತಿನಲ್ಲಿ ಎಲ್ಲಾ ಮಾನವರಿಗೂ ಅನ್ವಯವಾಗಬಹುದೋ ಅಂತಹ ಭಾವನೆ, ಅಂತಹ ದೃಷ್ಟಿ ಬರಿಯ ಯಾವುದೋ ಒಂದು ಜಾತಿಗೆ, ಮತಕ್ಕೆ, ಗುಂಪಿಗೆ, ಒಂದು ದೇಶಕ್ಕೆ ಮಾತ್ರ ಅನ್ವಯವಾಗುವುದಿಲ್ಲ. ಸರ್ವಕಾಲಕ್ಕೂ ಅನ್ವಯವಾಗುವ ಇವು ಮೂಲ ಮೌಲ್ಯಗಳು. ಗುಂಪುಗಾರಿಕೆಗೆಂದೂ ಇವು ತೊಡಗುವುದಿಲ್ಲ, ಅದೇನಿದ್ದರೂ ರಾಜಕೀಯದ ಕರ್ಮ. ವ್ಯಕ್ತಿ ಸ್ವಾತಂತ್ರ್ಯವನ್ನು ನೀಡಿಯೂ, ಸಮಷ್ಟಿಯ ಉದ್ದಾರದ ದೃಷ್ಟಿ ಇವರದು. ಈ ದೃಷ್ಟಿಗೆ ವ್ಯಕ್ತಿಗಳೆಷ್ಟೋ ಅಷ್ಟೂ ಸಂಖ್ಯೆಯ ಮತಗಳಿರುವುದು ಸಾಧ್ಯ. ಅಷ್ಟೂ ವ್ಯಕ್ತಿಗಳು ಸಮಷ್ಟಿಯ ವಿಕಾಸಕ್ಕೆ ಸಾಧಕವಾಗುವುದೂ ಸಾಧ್ಯ. 

ಈ ದರ್ಶನವನ್ನೇ ವಿಶ್ವಮಾನವ ಗೀತೆ ಸಾರುತ್ತದೆ. ವಿಶ್ವಮಾನವರಾಗಲು ನಾವು ಸಾಧಿಸಲೇಬೇಕಾದ ಮೂಲಭೂತ ಸ್ವರೂಪದ ತತ್ವ ಪ್ರಣಾಳಿಕೆ ಸಪ್ತ ಸೂತ್ರಗಳು * `ಮನುಷ್ಯ ಜಾತಿ ತಾನೊಂದೆ ವಲಂ’ ಎಂಬುದನ್ನು ನಿರೂಪಾಧಿಕವಾಗಿ ಸ್ವೀಕರಿಸಬೇಕು.

* ವರ್ಣಾಶ್ರಮವನ್ನು ತಿದ್ದುವುದಲ್ಲ, ಅದನ್ನು ಸಂಪೂರ್ಣವಾಗಿ ತೊಲಗಿಸಬೇಕು. ಅಂದರೆ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ, ಅಂತ್ಯಜ, ಷಿಯಾ, ಸುನ್ನಿ, ಪ್ರಾಟಿಸ್ಟೆಂಟ್, ಕ್ಯಾಥೋಲಿಕ್, ಸಿಖ್, ನಿರಹಂಕಾರಿ ಇತ್ಯಾದಿ. ವಿಭಜನೆಯನ್ನು ನಿರ್ನಾಮ ಮಾಡಬೇಕು. 

* ಎಲ್ಲಾ ದೇಶಗಳಲ್ಲಿ ಮತ್ತು ಎಲ್ಲಾ ಮತಗಳಲ್ಲಿರುವ ಜಾತಿ ಪದ್ಧತಿಯನ್ನು ಸಂಪೂರ್ಣವಾಗಿ, ನಿರಾಕರಿಸಿ, ವಿನಾಶಗೊಳಿಸಬೇಕು. 

* ಮತ ತೊಲಗಿ ಅಧ್ಯಾತ್ಮ ಮಾತ್ರ ವೈಜ್ಞಾನಿಕ ತತ್ವವಾಗಿ ಮಾನ್ಯತೆ ಪಡೆಯಬೇಕು.

* ಮತ ಮನುಜ ಮತವಾಗಬೇಕು, ಪಥ ವಿಶ್ವಪಥವಾಗಬೇಕು, ಮನುಷ್ಯ ವಿಶ್ವಮಾನವನಾಗಬೇಕು.

* ಮತ ಗುಂಪು ಕಟ್ಟುವ ವಿಷಯವಾಗಬಾರದು. ಯಾರೂ ಯಾವ ಒಂದು ಮತಕ್ಕೂ ಸೇರದೆ, ಪ್ರತಿಯೊಬ್ಬನೂ ತಾನು ಕಂಡುಕೊಳ್ಳುವ ತನ್ನ ಮತಕ್ಕೆ ಮಾತ್ರ ಸೇರಬೇಕು. ಅಂದರೆ ಜಗತ್ತಿನಲ್ಲಿ ಎಷ್ಟು ವ್ಯಕ್ತಿಗಳಿದ್ದಾರೋ ಅಷ್ಟೇ ಸಂಖ್ಯೆಯ ಮತಗಳಿರುವಂತಾಗುತ್ತದೆ. ಯಾರೊಬ್ಬರೂ ಇನ್ನೊಬ್ಬರ ಮತಕ್ಕೆ ಸೇರಿ ಗುಂಪು ಕಟ್ಟಿ ಜಗಳ ಹಚ್ಚುವಂತಾಗಬಾರದು.

* ಯಾವ ಒಂದು ಗ್ರಂಥವೂ `ಏಕೈಕ ಪರಮಪೂಜ್ಯ’ ಧರ್ಮ ಗ್ರಂಥವಾಗಬಾರದು. ಪ್ರತಿಯೊಬ್ಬ ವ್ಯಕ್ತಿಯೂ ತನಗೆ ಸಾಧ್ಯವಾದುವುಗಳನ್ನೆಲ್ಲಾ ಓದಿ ತಿಳಿದು ತನ್ನ ದರ್ಶನವನ್ನು ತಾನೇ ನಿರ್ಣಯಿಸಿ ಕಟ್ಟಿಕೊಳ್ಳಬೇಕು.


ಕುವೆಂಪು ವಿಶ್ವ ಮಾನವ ಸಂದೇಶ - Janathavaniಜೆಂಬಿಗಿ ಮೃತ್ಯುಂಜಯ
ಕನ್ನಡ ಉಪನ್ಯಾಸಕರು, ದಾವಣಗೆರೆ.

 

error: Content is protected !!