ಪುನರಪಿ ಜನನಂ, ಪುನರಪಿ ಮರಣಂ…

ಮಹಾಭಾರತ ನಡೆದಿದ್ದು ಎಷ್ಟು ನಿಜವೋ, ಸುಳ್ಳೋ ಅದು ಅವರವರ ನಂಬಿಕೆಗೆ ಬಿಟ್ಟ ವಿಚಾರ. ಆದರೆ ಅದರಲ್ಲಿ ಹೇಳುವ ಜೀವನ ಮೌಲ್ಯಗಳು ಅಪಾರ ಮತ್ತು ಅದು ಸಾರ್ವತ್ರಿಕ ಹಾಗೂ ಸಾರ್ವಕಾಲಿಕ ಸತ್ಯ ಎಂಬುದಂತೂ ಶತಷಃ ನಿಜ.ಇದನ್ನು, ಎಂತಹ ನಾಸ್ತಿಕನೂ ಕೂಡ, ಆಂತರಂಗಿಕವಾಗಿಯಾದರೂ ಒಪ್ಪುತ್ತಾನೆ.

ತಿಳಿದವರು ಹೇಳಿದಂತೆ ಮಹಾಭಾರತದ ಮುಖ್ಯಸಾರ, ಒಂದು ಕೃಷ್ಣನ ನಲ್ನುಡಿಯಾದ ಭಗವದ್ಗೀತೆ, ಮತ್ತೊಂದು ಅಂತ್ಯಕಾಲದಲ್ಲಿ ವಿಶೇಷವಾಗಿ ಭೀಷ್ಮರು ಭಕ್ತಿಯ ಬಸಿರಿನಿಂದ ಯುಧಿಷ್ಠಿರನಿಗೆ ಉಸಿರಿದ ವಿಷ್ಣುಸಹಸ್ರನಾಮ. ಇವೆರಡೂ ಹಲವರಿಗೆ ಕಟು ಕಷಾಯವಾದರೆ, ಕೆಲವರಿಗೆ ರಸಪಾಕ. ಇನ್ನು ನಮ್ಮಂತಹ ಅರೆಬೆಂದ ಮೆದುಳಿನವರಿಗೆ, ಸುರುಳಿ ಮಾಡೊಗೆದ ದಾರದುಂಡೆಯಂತೆ ಗೋಜಲು. ಆದರೆ, ಸಾಧಕರಿಗೆ ನಿಷ್ಕಂಟಕ, ನಿಷ್ಕಳಂಕ, ನಿಷ್ಕಪಟ ಮತ್ತೆ ಮರಳಿಬಾರ ದಾರಿ. ದಾರಿ ತಿಳಿದವನು ಮಾತ್ರ ಸರಿದಾರಿ ತೋರಲು ಸಾಧ್ಯ ಅಲ್ಲವೇ? ಅದನ್ನೇ ಶ್ರೀಕೃಷ್ಣ, ತಾನೇ ಸ್ವತಃ ತನ್ನ ನಲ್ನುಡಿಯಲ್ಲಿ ಹೇಗೆ ಮುಕ್ತಿಮಾರ್ಗಕ್ಕೆ ಕೈಮರವಾಗುತ್ತಾನೆ ಎಂಬುದನ್ನು ಗೀತಾಜಯಂತಿ ಶುಭಾವಸರದಲ್ಲಿ ಒಂದು ಶ್ಲೋಕದಿಂದ ತಿಳಿಯಲು ಪ್ರಯತ್ನಿಸೋಣ. ಭಗವದ್ಗೀತೆಯ ಮೂರನೆ ಅಧ್ಯಾಯ 35ನೇ ಶ್ಲೋಕ ಹೀಗಿದೆ.

ಶ್ರೇಯಾನ್‌ ಸ್ವಧರ್ಮೋ ವಿಗುಣಃ ಪರಧರ್ಮಾತ್‌ ಸ್ವನಿಷ್ಠಿತಾತ್|
ಸ್ವಧರ್ಮೇ ನಿಧನಂ ಶ್ರೇಯಃ ಪರಧರ್ಮೋ ಭಯಾವಹಃ ||

ನಾವು ಸರಿಯಾದ ಅರಿವಿಲ್ಲದ ಮತ್ತೊಂದು ಧರ್ಮವನ್ನು ಆಸೆ, ಆಮಿಷ, ಪ್ರೇಮ, ಕಾಮ ಹೀಗೆ ಕಾರಣಾಂತರಗಳು ಏನೇ ಆಗಿದ್ದರೂ, ಅದನ್ನ ಆಶ್ರಯಿಸಲು ಹೋದರೆ ಇದರ ಪರಿಣಾಮ ಮಾತ್ರ ಅತಿಘೋರ. ಪುರಪುಣ್ಯವೆಲ್ಲವೂ ಪರಧರ್ಮ ರೂಪದಲ್ಲಿ ಪರಲೋಕ ಸೇರಿಬಿಡುತ್ತದೆ. ಅದಕ್ಕಿಂತಲೂ, ನಾವು ಹುಟ್ಟಿನಿಂದ ನಂಬಿಕೊಂಡು ಬಂದಂತಹ ಧರ್ಮಗಳಲ್ಲಿ ಅಲ್ಪಸ್ವಲ್ಪ ನ್ಯೂನತೆಯಿದ್ದರೂ ಕೂಡ ಅದರಲ್ಲೇ ನಂಬಿಕೆಯಿಟ್ಟು ಧರ್ಮಾಚರಣೆ ಮಾಡುತ್ತಾ, ಅದರಲ್ಲಿಯೇ ಮರಣ ಹೊಂದುವುದು ಎಷ್ಟೋ ಉತ್ತಮ.

ಇದಕ್ಕೆ ಮಹಾಭಾರತದ ಪ್ರಸಂಗವೊಂದನ್ನು ವ್ಯಾಸಮುನಿಗಳು ಹೀಗೆ ನಮ್ಮ ಮುಂದಿಡುತ್ತಾರೆ.ಘೃತಾಚೀ ಮತ್ತು ಭರದ್ವಾಜರ ಮಗ ದ್ರೋಣಾಚಾರ್ಯರು. ಕೃಪಿ ಮತ್ತು ದ್ರೋಣರ ಮಗ ಅಶ್ವತ್ಥಾಮ. ಈ ತಂದೆ ಮಕ್ಕಳು ಹುಟ್ಟಿನಿಂದ ಬ್ರಾಹ್ಮಣರು. ತಂದೆ ಭರದ್ವಾಜರಲ್ಲಿ ಶಸ್ತ್ರಾಭ್ಯಾಸ ಮಾಡಿದ್ದರೂ, ಗೆಳೆಯ ದೃಪದನ ಮೇಲುಂಟಾದ ಕೋಪದಿಂದ ಪರಶುರಾಮರ ಬಳಿ, ಅನೇಕ ನೂರು ವರ್ಷಗಳ ಕಾಲ ಶಸ್ತ್ರಾಭ್ಯಾಸ ಮಡುತ್ತಾರೆ, ಕಾಲಘಟ್ಟದಲ್ಲಿ ಶಸ್ತ್ರ-ಶಾಸ್ತ್ರಗಳ ತಾಕಲಾಟದಲ್ಲಿ ಶಾಸ್ತ್ರ ದೀರ್ಘವನ್ನು ಕಳೆದುಕೊಂಡು, ಅವರು ಕಲಿತ  ಆ ಎರಡೂ ವಿದ್ಯೆ ಶಸ್ತ್ರಾಸ್ತ್ರಗಳಾಗಿ ಬಿಡುತ್ತವೆ. ಧನಸ್ಸಿನ ಠೇಂಕಾರಕ್ಕೆ ಅಂಜಿ ತಾಳೆಗರಿಗಳು ಗೂಡು ಸೇರಿದರೆ, ಬತ್ತಳಿಕೆಯಿಂದ ಬಾಣಗಳು ಹೊರಬರುತ್ತವೆ. ಹಾಲಿನ ನೆಪವೇ ಹಾಲಾಹಲವಾಗಿ, ಸಂದರ್ಭದ ಶಿಶುವಾಗಿ, ಸರ್ವಧನುರಾಚಾರ್ಯರೆಂದೇ ಪ್ರಸಿದ್ಧರಾದರೆಂದು ವ್ಯಾಸರು ದ್ರೋಣರ ಪಾತ್ರ ಪರಿಚಯವನ್ನು ಮಹಾಭಾರತದಲ್ಲಿ ಮಾಡಿಕೊಡುತ್ತಾರೆ. ಈ ಪರಿವರ್ತನೆಗೆ, ಅಶ್ವತ್ಥಾಮನೂ ಹೊರತಾಗುವುದಿಲ್ಲ. ಹೀಗೆ ಉಭಯರೂ ಬ್ರಾಹ್ಮಣ್ಯ ಧರ್ಮದಿಂದ ಕ್ಷತ್ರಿಯ ಧರ್ಮಕ್ಕೆ ಮಗ್ಗಲು ಬದಲಾಯಿಸುತ್ತಾರೆ. ಇದರ ಪರಿಣಾಮ?

ಮುಂದೆ ಇದೇ ದ್ರೋಣರು, ಕುರು-ಪಾಂಡವ ವಂಶದಲ್ಲಿ ನಡೆವ ಅನೇಕಾನೇಕ ಘಟನೆಗಳಿಗೆ ಮೂಕ ಪ್ರೇಕ್ಷಕರಾಗುತ್ತಾರೆ ಮತ್ತು ಧರ್ಮ ಮೌನವಾಗಿಬಿಡುತ್ತದೆ. ಒಕ್ಕೊರಲಿನಿಂದ ಬರಬೇಕಾಗಿದ್ದ ಧರ್ಮಾಧರ್ಮದ ವಿವೇಚನಾಯುಕ್ತವಾದ ಮಾತುಗಳು ಗಂಟಲಲ್ಲೇ ಹುದುಗಿಹೋಗಿ, ಬ್ರಾಹ್ಮಣ್ಯದ ಸಾತ್ವಿಕತೆ ಸತ್ತುಹೋಗುತ್ತದೆ. ಮುಂದೆ ಮಹಾಭಾರತ ಯುದ್ಧ ಪ್ರಸಂಗದಲ್ಲಿ ನಿರಾಯುಧನಾದ ಅಭಿಮನ್ಯುವನ್ನು ಕೊಲ್ಲುವಾಗ ಇದ್ದ ಕ್ಷಾತ್ರಕಾಠಿಣ್ಯ, ಮಗನಾದ ಅಶ್ವತ್ಥಾಮನು ಹತನಾದನೆಂಬ ವಾರ್ತಾಶ್ರವಣ ಮಾತ್ರದಿಂದಲೇ ಕೆರಳಿಕನಲಬೇಕಾಗಿದ್ದ ಅವರು, ಶಸ್ತ್ರತ್ಯಾಗ ಮಾಡಿ, ಮಾರ್ದವತೆಗೆ ಒಳಗಾಗಿ ಕ್ಷಾತ್ರಧರ್ಮವನ್ನು ಮರೆಯುತ್ತಾರೆ. ಇವರನ್ನು ನಂಬಿದ್ದ ದುರ್ಯೋಧನನ ಸ್ಥಿತಿ ಅತಂತ್ರವಾಗುತ್ತದೆ.

ಇತ್ತ ಅಶ್ವತ್ಥಾಮನದೋ ಇನ್ನೊಂದು ಕಥೆ. ಇವನೂ ಸಹ, ತಂದೆಯಿಂದ ಉಭಯ ಶಾಸ್ತ್ರಗಳನ್ನು ಕಲಿತಿದ್ದರೂ, ಅತಿಯಾದ ಆತ್ಮವಿಶ್ವಾಸ, ಬೇಜವಾಬ್ದಾರಿತನ ಮತ್ತು ಹುಂಬತನ ಇವುಗಳಿಂದಾಗಿ ಇವನೂ ಕೂಡ ತಂದೆಯ ಹಾದಿಯಲ್ಲೇ ಸಾಗುತ್ತಾನೆ.

ವೈಶಂಪಾಯನ ಸರೋವರದ ಬಳಿ ಭೀಮನ ಗದಾಘಾತದಿಂದ ದೇವಸಮಾಗಮ ಸಮಯವನ್ನು ನಿರೀಕ್ಷಿಸುತ್ತಿದ್ದ ದುರ್ಯೋಧನನ ಬಳಿ ಬಂದ ಅಶ್ವತ್ಥಾಮ, ಅವನಿಗೆ ಸದ್ಗತಿಯಾಗಲೆಂದು ಪ್ರಾರ್ಥಿಸುವುದನ್ನು ಬಿಟ್ಟು, ಮರೆವಿನಿಂದಲೋ ಅಥವಾ ಮರುಕದಿಂದಲೋ ದುರ್ಯೋಧನನ ಎಲ್ಲಾ ಕೋರಿಕೆಗಳಿಗೆ ಅಸ್ತು ಎಂದನು. ಇದರ ಫಲಶೃತಿ ಮರಣಶಯ್ಯೆಯಲ್ಲಿದ್ದ ಉರಗಪತಾಕನು ಮಾಡಿದ ಧೂಳಿನಿಂದಲೇ ಸೇನಾಪತ್ಯದಲ್ಲಿ ಅಭಿಷಿಕ್ತನಾದ, ಅಶ್ವತ್ಥಾಮನ ವಿವೇಕ ಮಸುಕಾಗುತ್ತದೆ. ಅವನ ಮಡದಿಯಾದ ಭಾನುಮತಿಯಲ್ಲಿ ಸಂತತಿಯನ್ನು ಹುಟ್ಟಿಸಿಯಾದರೂ ಅವರ ಮುಖಾಂತರ, ಪಾಂಡವರನ್ನು ನಾಶ ಮಾಡಬೇಕೆಂಬ ಕೋರಿಕೆಯನ್ನು ಮುಂದಿಟ್ಟಾಗ ಮೌನಕ್ಕೆ ಶರಣಾಗುತ್ತಾನೆ ಈ ಬ್ರಹ್ಮಜ್ಞಾನಿ (ಇದು ನೆರವೇರುವುದಿಲ್ಲ ಅದು ಮುಂದಿನ ಮಾತು). ಪಾಂಡವರ ಸರ್ವನಾಶ ಮಾಡುತ್ತೇನೆ ಎಂದು ಪ್ರತಿಜ್ಞೆಗೈದ ಈ ದ್ರೌಣಿ ಅರ್ಧರಾತ್ರಿ ವೇಳೆ ಪಾಂಡವರ ಶಿಬಿರಕ್ಕೆ ನುಗ್ಗುವುದು ಇವನು ಯಾವ ಕ್ಷತ್ರಿಯನೂ ಮಾಡದ ಅಕಾರ್ಯಕ್ಕೆ ಪ್ರವೃತ್ತನಾದ. ಇಲ್ಲೊಂದು ಸ್ವಾರಸ್ಯವೆಂದರೆ, ಕ್ಷತ್ರಿಯರಿಗೆ ಅವರದ್ದೇ ಆದ ಕೆಲವು ಧರ್ಮದ ಕಟ್ಟುಪಾಡುಗಳಿವೆ. ರಾತ್ರಿವೇಳೆ ಯುದ್ಧ ಮಾಡುವ ಹಾಗಿಲ್ಲ. ಶತ್ರುವು ನಿರಾಯುಧನಾಗಿ ಎದುರಿಗೆ ಬಂದಾಗ ಅವನನ್ನು ಕೊಲ್ಲದೇ ಬಂಧಿಸಬೇಕು, ಮಲಗಿರುವ ವೈರಿಯನ್ನು, ಚಿಕ್ಕಮಕ್ಕಳನ್ನು, ಶರಣಾಗತರಾದವರನ್ನು ಕೊಲ್ಲುವ ಹಾಗಿಲ್ಲ ಮತ್ತು ಶತೃವಿನ ಶಿಬಿರಕ್ಕೆ ಬೆಂಕಿ ಹಚ್ಚುವುದು ಇವೆಲ್ಲವೂ ಕ್ಷತ್ರಿಯ ಧರ್ಮಕ್ಕೆ ವಿರುದ್ಧವಾದ ನಡೆಗಳು ಬ್ರಾಹ್ಮಣನಾದ ಅಶ್ವತ್ಥಾಮ ಪರಧರ್ಮದ ಸೆಳೆತಕ್ಕೆ ಒಳಗಾಗಿ ಮಲಗಿದ್ದ ನಿಶ್ಶಸ್ತ್ರರಾಗಿದ್ದ ನಾಳೆಯ ಮಪುರಿಗೆ ಪಯಣಿಸಬೇಕಿದ್ದ ಅನೇಕ ಯೋಧರನ್ನು ಉಪಪಾಂಡವರನ್ನು ಕೊಂದು, ಶಿಬಿರಕ್ಕೆ ಬೆಂಕಿಹಚ್ಚಿದ. ತನ್ನ ಕೊನೆ ಪ್ರಯತ್ನವೆಂಬಂತೆ ಉತ್ತರೆಯ ಗರ್ಭಸ್ಥ ಭ್ರೂಣಕ್ಕೆ ಬ್ರಹ್ಮಾಸ್ತ್ರವನ್ನು ಪ್ರಯೋಗಿಸಿ, ಶಿಶುಹತ್ಯೆಗೆ ಪ್ರಯತ್ನಿಸುತ್ತಾನೆ, ಎಲ್ಲರಿಗೂ ನೀತಿಬೋಧನಾಗಬೇಕಿದ್ದ ಈ ಅಶ್ವತ್ಥಾಮ ಹೀಗೆ ಸ್ವಧರ್ಮಕ್ಕೆ ನಿಷ್ಠೆ ತೋರಲಾಗದೆ, ಪರಧರ್ಮವನ್ನೂ ಸರಿಯಾಗಿ ತಿಳಿಯದೆ ಸರ್ವರಿಂದಲೂ ಪೂಜಿತನಾಗಿದ್ದವನು, ಅವರಿಂದಲೇ ತಿರಸ್ಕೃತನಾಗಿ, ಉಭಯ ಧರ್ಮಭ್ರಷ್ಟನಾಗಿ ಅಲೆಮಾರಿಯಂತೆ ತಿರುಗಬೇಕಾಗುತ್ತದೆ.

ನಮ್ಮಗಳ ಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಲ್ಲ, ನಾವು ಹುಟ್ಟಿ, ಬೆಳೆದ ಅಥವಾ ಬೆಳೆಯುತ್ತಿರುವ ಮತ, ಧರ್ಮಗಳಲ್ಲಿರುವ ಸಣ್ಣಪುಟ್ಟ ಕುಂದುಕೊರತೆಗಳನ್ನೇ ದೊಡ್ಡ ಲೋಪವೆಂದು ಭಾವಿಸಿ, ಅದರ ಬಗ್ಗೆ ಆಂತರಿಕ ಸೆಳೆತವಿದ್ದರೂ ಕೂಡ ಯಾವುದೋ ಬಾಹ್ಯಾಕರ್ಷಣೆ, ಧನದ ಮುಂದೆ ಸರ್ವವೂ ಸತ್ಯಮಾರ್ಗವೆಂದು ಇರುವುದೊಂದು ಜಗತ್ತಿನಲ್ಲಿ ಸುಖದ ಭ್ರಮೆಯಲ್ಲಿ, ಭೃಂಗದ ಬೆನ್ನೇರಿ ಹೋಗುತ್ತೇವೆ, ಕೊನೆಗೆ ಭ್ರಮನಿರಸನಕ್ಕೆ ಒಳಗಾದಾಗ ಸಾಧನೆಯ ದಾರಿ ಕವಲು ಕಳೆದು ಹೋಗಿರುತ್ತದೆ. ಮತ್ತೆ ಪುನರಪಿ ಜನನಂ, ಪುನರಪಿ ಮರಣಂ ತಪ್ಪುವುದಿಲ್ಲ. ಇದನ್ನೇ ಗೀತಾಚಾರ್ಯ ಹೇಳಿದ್ದು, ಸ್ವಧರ್ಮೇ ನಿಧನಂ ಶ್ರೇಯಃ, ಪರಧರ್ಮೋ ಯಾವುದೋ  ಆಕರ್ಷಣೆ, ಯೌವ್ವನದ ಉನ್ಮಾದ, ಸನ್ನಿವೇಶ, ಸಂದರ್ಭಗಳು ಅಶ್ವತ್ಥಾಮನನ್ನು ಪರಧರ್ಮ ಸೆಳೆದಂತೆ ನಮ್ಮನ್ನೂ ಸೆಳೆಯುತ್ತದೆ. ಆದರೆ, ಅದರ ಸುಳಿಗೆ ಸಿಕ್ಕವರು ಮತ್ತೆ ಮೇಲೆ ಬರುವುದು ಶವವಾಗಿ ಅಥವಾ ಜೀವಚ್ಛವವಾಗಿ. ಇದಕ್ಕೆ ದಣಿಯುವಷ್ಟು ದೃಷ್ಟಾಂತಗಳು ನಮಗೆ ಸಮಾಜದಲ್ಲಿ ದೃಗ್ಗೋಚರವಾಗುತ್ತವೆ. ಧರ್ಮ-ಧರ್ಮಗಳ ನಡುವೆ ಪರಸ್ಪರ ಗೌರವ, ಸೌಹಾರ್ದತೆ ಇರಬೇಕೇ ವಿನಃ ಖಡ್ಗಗಳ ಝಳಪಲ್ಲ.

ಇದನ್ನೇ ಯದುನಂದನ ಭಗವದ್ಗೀತೆಯಲ್ಲಿ ಬೋಧನೆಯ ಬುತ್ತಿಯನ್ನು ನಮ್ಮ ಮುಂದೆ ಬಿಚ್ಚಿಟ್ಟಿದ್ದಾನೆ. ಆದರೆ ಯಾಕೋ, ಅದನ್ನುಣ್ಣುವ ಹಸಿವೇ ನಮಗಿಲ್ಲ. ಪಕ್ಕದ ಎಲೆಯ ಮೇಲಿರುವ ಚಿತ್ತಾಕರ್ಷಕ ಬಣ್ಣದ, ಶುಚಿ-ರುಚಿ ತಿಳಿಯದ, ಊಟದ ಮೇಲೇ ಕಣ್ಣು. ಊಟದ ಅಸಲಿಯತ್ತು ತಿಳಿಯುವುದೇ ಅದು ಉದರ ಸೇರಿದಾಗ. ನಮ್ಮ ಬುತ್ತಿ ನಮಗಿರಲಿ, ಅವರ ಮೃಷ್ಟಾನ್ನ ಅವರಿಗಿರಲಿ.ಇದೆ ಈ ಶ್ಲೋಕದ ಸಾರಸರ್ವಸ್ವ.

ಇಷ್ಟು ಹೇಳಿದ ಮೇಲೂ ಶ್ರೀಕೃಷ್ಣ ಹೇಳುವುದು `ಯಥೇಚ್ಛಸಿ ತಥಾ ಕುರು’ (ನಿನಗೆ ಇಷ್ಟಬಂದಂತೆ ಮಾಡು). ಇದನ್ನು ಅರಿವುದು ಬಿಡುವುದು ನಮಗೆ ಬಿಟ್ಟ ವಿಚಾರ.


ಜಯತೀರ್ಥಾಚಾರ್ ವಡೇರ್
ದಾವಣಗೆರೆ.
[email protected]

error: Content is protected !!