ಭಾನುವಾರ ಬಂತಮ್ಮ, ಈ ದಿನ ರಜಾ ಕಂಡೆನು ನಿಜ ಅದೇನು ರಾ……ಜ||

ಹೀಗೆ ಹಾಡುತ್ತಾ ಭಾನುವಾರ ಕಳೆಯಬೇಕೆಂದು ನನ್ನ ಆಸೆ. ಆದರೆ, ನಾನು ಹೇಳಿ ಕೇಳಿ ಗೃಹಿಣಿ. ಮನೆ ಕೆಲಸಕ್ಕೆ ಬಿಡುವೇ ಇಲ್ಲ.

ಒಂದು ದಿನವೂ ರಜೆ ಇಲ್ಲ. ನನ್ನಾಸೆಯಂತೆ ಭಾನುವಾರ ನಿಧಾನವಾಗಿ ಹಾಸಿಗೆ ಬಿಟ್ಟೇಳಬೇಕು. ಯಾವ ಯೋಚನೆಯೂ ಇಲ್ಲದೇ, ಬೆಳಗಿನ ಕಾರ್ಯ ಮುಗಿಸಿದಾಗ ಯಾರಾದರೂ ಬಿಸಿಬಿಸಿ ಸ್ಟ್ರಾಂಗ್ ಕಾಫಿ ಕೊಡಬೇಕು. ಬೆಳಗಿನ ಏರುತ್ತಿರುವ ರವಿಯ ಕಿರಣಗಳನ್ನು ನೋಡುತ್ತಾ ನಭದ ಸೌಂದರ್ಯ ಸವಿಯುತ್ತಾ ಮುಗಿಲಾಚೆಗೆ ತೇಲುತ್ತಾ ಕಾಫಿ ಸಿಪ್ ಬೈ ಸಿಪ್ ಹೀರಬೇಕು. 

ಮೊಬೈಲ್, ಪೇಪರ್ ಎಲ್ಲಾ ದೂರದಲ್ಲಿ ಇಟ್ಟಿರಬೇಕು. ಯಾವುದನ್ನು ಭಾನುವಾರ ಮುಟ್ಟಲೇಬಾರದು. ನಂತರ ಅಡುಗೆಯವರು ಬಿಸಿ ಬಿಸಿ ತಿಂಡಿ ಕೊಡಬೇಕು. ಯಾವ ಕೆಲಸವನ್ನೂ ಮಾಡದೇ ಪ್ರಕೃತಿಯ ಸೌಂದರ್ಯ ಸವಿಯುತ್ತಿರಬೇಕು. ಅದಕ್ಕೆ ಯಾವ ಅಡೆತಡೆಯೂ ಇರಬಾರದು. ನಂತರ ಒಂದು ಸಣ್ಣ ನಿದ್ದೆ. ನಂತರ ಎದ್ದು ಹಳೆಯ ಮಧುರ ಗೀತೆಗಳನ್ನು ರೇಡಿಯೋದಲ್ಲಿ ಕೇಳುತ್ತಾ ಬಿಸಿ ಬಿಸಿ ಊಟ ನಂತರ ಹಾಸಿಗೆ ಮೇಲೆ ಮೈಚೆಲ್ಲಿ ನನ್ನಿಷ್ಟದ ಒಂದು ಪ್ರೇಮ ಕಾದಂಬರಿ ಹಿಡಿದು ಓದುತ್ತಾ ಅದರಲ್ಲೇ ತಲ್ಲೀನಳಾಗಿ ಜೋಂಪು ಹತ್ತಬೇಕು. 

ಸಂಜೆ ಮಾತ್ರ ಲಾಂಗ್ ಡ್ರೈವ್‌ ಹೋಗಬೇಕು. ಯಾವುದಾದರೂ ಒಂದು ಹತ್ತಿರದ ಸೈಡ್‌ ಸೀಯಿಂಗ್ ಜಾಗಕ್ಕೆ ಹೋಗಿ ಅಲ್ಲೇ ತಣ್ಣನೆ ಗಾಳಿಯಲ್ಲಿ ಹುಲ್ಲಿನ ಹಾಸಿಗೆ ಮೇಲೆ ಕುಳಿತು ಏನನ್ನಾದರೂ ಕುರುಕುರು ತಿನ್ನುತ್ತಾ ಪ್ರಕೃತಿ ಸೌಂದರ್ಯ ಸವಿದು ಕತ್ತಲಾದ ಮೇಲೆ ಮನೆಗೆ ಬಂದು ಊಟ ಮಾಡಿ ಮಲಗಬೇಕು. ಏಕಾಂತ ನನಗೆ ಬಹಳ ಇಷ್ಟ. ಅದರಲ್ಲೂ ಪ್ರಕೃತಿಯ ಮಡಿಲಲ್ಲಿ ಕಾಲ ಕಳೆದರೆ ನನಗೆ ತುಂಬಾ ಇಷ್ಟ. ಹದಿನೈದು ದಿನಕ್ಕೊಮ್ಮೆ ಒಂದು ಸುಂದರ ಜಾಗಕ್ಕೆ ಹೋಗಿ ಅಲ್ಲೇ ವೀಕೆಂಡ್ ಕಳೆಯುವುದು ತುಂಬಾ ಇಷ್ಟ. 

ಅಮ್ಮ ಅಮ್ಮ ಏಳು ಬೇಗ ಹಾಲು ಕೊಡು ಎಂದು ಮಗ ಕೂಗಿದಾಗ  ಮೈಕೊಡವಿ ಎದ್ದೆ ಬೆಳಗಾಗಿತ್ತು. ಕನಸು ಮುಗಿದಿತ್ತು, ಭಾನುವಾರ ಆದರೇನು ಸೋಮವಾರವಾದರೇನು ಗೃಹಿಣಿಗೆ ಎಲ್ಲಾ ದಿನವೂ ಒಂದೇ ಎಂಬ ಅರಿವಾ ಯಿತು. ಬೇಗ ಬೇಗ ಎಲ್ಲರ ಕಾಫಿ, ತಿಂಡಿ ತಯಾರಿಗೆ ಸೆರಗು ಕಟ್ಟಿನಿಂತೆ.


ಕೋಮಲ ವಸಂತ ಕುಮಾರ್
ದಾವಣಗೆರೆ.

error: Content is protected !!