ಚುನಾವಣೆಯ ಮೂಲಕ ಪ್ರತಿನಿಧಿಗಳು ಅಶಿಕ್ಷಿತ ಸಾರ್ವಜನಿಕ ಅಭಿಪ್ರಾಯವನ್ನು ತಮ್ಮ ಅನುಕೂಲಕ್ಕೆ ತಿರುಗಿಸಿಕೊಳ್ಳಲೋಸುಗ ಅತಿ ಕ್ಲಿಷ್ಟ ಸಮಸ್ಯೆಗಳನ್ನು ಬೆಳೆಸುತ್ತಾ ತಮ್ಮ ತಮ್ಮ ನೇರಕ್ಕೆ ಪ್ರಚುರಪಡಿಸುತ್ತಾರೆ. ಮತದಾರರನ್ನು ಮುಗ್ಧಗೊಳಿಸಿ ಮತಗಳನ್ನು ದೋಚಿಕೊಂಡು ಹೋಗುವ ಗಾರುಡಿ ವಿದ್ಯೆಯನ್ನು ಶಾಸ್ತ್ರೀಯವಾಗಿ ಬೆಳೆಸಿಕೊಳ್ಳುತ್ತಿರುವುದು ನಿಜಕ್ಕೂ ವಿಷಾದನೀಯ ಸ್ಥಿತಿಯಾಗಿದೆ. ಮತದಾರರಲ್ಲಿ ಸ್ವಭಾವ ಜನ್ಯವಾದ ಆಸೆ, ನಿರಾಶೆ, ಕ್ರೌರ್ಯ ಮುಂತಾದ ಪ್ರವೃತ್ತಿಗಳನ್ನೇ ಹೆಚ್ಚು ಎಚ್ಚರಗೊಳಿಸಿ, ಅವನನ್ನು ಉದ್ದೇಶಿಸಿ ಒಕ್ಕಟ್ಟಿಗೆ ಭಂಗ ತಂದು ಚುನಾವಣಾ ನಿಯಮಗಳನ್ನು, ಧೋರಣೆಗಳನ್ನು, ವ್ಯಕ್ತಿಯ ನಿಷ್ಠೆಯನ್ನು ಸಹಜವಾಗಿ ಸಾರ್ವಭೌತ್ವವನ್ನು ಸಾಧಿಸಲು ಹೊಂಚು ಹಾಕುವುದನ್ನು ಕಾಣಬಹುದಾಗಿದೆ. ನಮ್ಮ ದೇಶದಲ್ಲಿ ದುರಾದೃಷ್ಟವಶಾತ್ ಸ್ಥಳೀಯ ಸಂಸ್ಥೆಗಳು ರಾಜಕೀಯ ಪಕ್ಷಗಳ ಜಂಜಾಟಕ್ಕೆ ಸಿಕ್ಕಿ ಗ್ರಾಮ ಜೀವನದ ಅಭಿವೃದ್ಧಿಗೆ ನೀಡಬೇಕಾದ ನೆರವನ್ನು ನೀಡಲಾರದಾಗಿವೆ.
ವ್ಯಕ್ತಿ, ಸಮಾಜ ಮತ್ತು ರಾಷ್ಟ್ರದ ಅಭಿವೃದ್ಧಿ ಹಾಗೂ ವಿಕಾಸಗಳಿಗೆ ಚುನಾವಣೆಯ ಮೂಲಕ ಸ್ಪರ್ಧೆಗೊಳಗಾಗಿ ಪ್ರತಿನಿಧಿಗಳು ಪ್ರಜಾಪ್ರಭುತ್ವದ ಹಿನ್ನೆಲೆಯಲ್ಲಿ ಯೋಜನೆಗಳನ್ನು ಕೈಗೊಳ್ಳಬೇಕಾಗುತ್ತದೆ. ಯೋಜನೆ ಮತ್ತು ಯೋಚನೆ ಮಾನವನು ಹುಟ್ಟಿದಾಗಿನಿಂದಲೂ ನಡೆದುಬಂದ ಗುಣಗಳಾಗಿರುತ್ತವೆ. ಆದರೆ, ಅವು ಸುಸಜ್ಜಿತ ರೀತಿಯಲ್ಲಿ ನಡೆದು ಬಾರದೇ ಇದ್ದಾಗ ಅವುಗಳಿಗೆ ಹೊಸ ಸ್ವರೂಪವನ್ನು ಕೊಟ್ಟು ಸುಸಜ್ಜಿತತನಕ್ಕೆ ಕ್ರಮ ಪ್ರಾಪ್ತವಾಗುವಂತೆ ಮಾಡಬೇಕಾಗುತ್ತದೆ. ಇದಕ್ಕೆ ಪೂರಕವಾಗಿ ವಚನಕಾರರು, ದಾಸರು, ಸಂತರು, ಅವಧೂತರು, ಸೂಫಿಗಳು ನಮ್ಮ ನಾಡನ್ನು ‘ನೆಮ್ಮದಿಯ ನಾಡು’ (Welfare State)ಆಗುವಂತೆ ಮತ್ತು ‘ಆದರ್ಶ ರಾಜ್ಯವು (Ideal State)’ ಆಗುವಂತೆ ಮಾಡಲು ಶತಪತ ಪ್ರಯತ್ನಿಸಿದ ಸಾಕ್ಷಿಭೂತವೇ ಅವರ ಸಾಹಿತ್ಯ. ಆಯ್ಕೆಯಾದ ಪ್ರತಿನಿಧಿಗಳು ಕಾರ್ಯೋನ್ಮುಖರಾಗಿ, ಸಮಾಜ ಪ್ರೇಮಿಗಳಾಗಿ ಮಾನವ ಕುಲ ಪ್ರೇಮಿಗಳಾಗಿ ಸ್ವತಂತ್ರ ವಿಚಾರವಾದಿಗಳಾಗಿ ಸತ್ಯ ನಿಷ್ಠರಾಗಿ ಯೋಜಕರಾಗಿ, ರಾಜಕಾರಣಿಗಳಾಗಿ (States Man) ಶೀಲ ಸಂಪಾದಕರಾಗಿ (Character Building) ಸಮಯಾ ಚಾರಿಗಳಾದಾಗ ನ್ಯಾಯವನ್ನು (Justice) ಸರ್ವರಿಗೂ ಸಮಾನವಾಗಿ ಸತ್ಯವಾಗಿ ದೊರಕಿಸಲು ಸಮರ್ಥರಾಗುತ್ತಾರೆ. ಈ ಸಮಾಪಕ (Finate) ಶಕ್ತಿಯನ್ನು ಗ್ರಾಮ ಪಂಚಾಯಿತಿ ಚುನಾವಣೆ ಮತ್ತು ಆಯ್ಕೆಯಾ ಗುವ ಪ್ರತಿನಿಧಿಗಳು ಅರ್ಥೈಸಿಕೊಳ್ಳಬೇಕಾ ಗಿದೆ. ಡಾರ್ವಿನ್‍ರ ‘ಮಂಗನಿಂದ ಮಾನವ ವಿಕಾಸ ವಾದಂತೆ’ ಚುನಾವಣೆಯಿಂದ ಆಯ್ಕೆಯಾದ ಪ್ರತಿನಿಧಿಗಳು ವಿಕಾಸ ಹೊಂದಿ ಗ್ರಾಮಾಭಿವೃದ್ಧಿಗೆ ವಿಕಾಸದ ಪ್ರಥಮ ಸೋಪಾನವಾಗಬೇಕಾಗಿದೆ.
ಗ್ರಾಮ ಪಂಚಾಯಿತಿ ಚುನಾವಣೆಗೆ ರಾಜ್ಯಶಾಸ್ತ್ರ ಪ್ರಾಜ್ಞರ ವಿಚಾರಗಳನ್ನು ಅವಶ್ಯಕವಾಗಿ ತಿಳಿಯಬೇಕಾಗಿರುತ್ತದೆ. ಖ್ಯಾತ ಬರಹಗಾರನಾದ ಲಾರ್ಡ್ ಬ್ರೈಸ್, ಪ್ರೊ. ಸೀಲೆ, ಅಬ್ರಾಹಂ ಲಿಂಕನ್, ಪ್ರೊ. ಜೆ.ಎನ್. ಮಿಲ್, ಮ್ಯಾಜಿನಿ, ಸರ್ ಸ್ಟ್ಯಾಫರ್ಡ್ ಕ್ರಿಪ್ಸ್, ಮಹಾತ್ಮಗಾಂಧೀಜಿ, ಸರ್ದಾರ್ ವಲ್ಲಭಬಾಯಿ ಪಟೇಲ್, ರಾಜಾಜಿ, ಆಚಾರ್ಯ ಕೃಪಲಾನಿ, ಬಿಪಿನ್‍ಚಂದ್ರ ಪಾಲ್, ಮಹದೇವ ರಾನಡೆ ಮುಂತಾದವರ ವಿಚಾರಧಾರೆ ‘ಅತೀ ಶ್ರೇಷ್ಠ, ಅನುಭವ ಹಾಗೂ ಬುದ್ದಿವಂತರ ಮುಂದಾಳತ್ವದಲ್ಲಿ ಎಲ್ಲರ ಪ್ರಗತಿಯು ಎಲ್ಲರ ಮುಖಾಂತರ ಆಗುವುದೇ ಪ್ರಜಾಪ್ರಭುತ್ವ’ ಎಂದು ಸಿದ್ಧಾಂತಿಕರಿಸಿರುವುದನ್ನು ಇಂದಿನ ಗ್ರಾಮ ಪಂಚಾಯಿತಿ ಚುನಾವಣಾ ಅಂಗಳಕ್ಕೆ ದುಮು ಕಿರುವ ಸ್ಪರ್ಧಾ ಪ್ರತಿನಿಧಿಗಳು ಅರಿತುಕೊಂ ಡಾಗ ಕಲ್ಯಾಣ ಗ್ರಾಮದ ಪರಿಕಲ್ಪನೆ ಸುಸಜ್ಜಿತವಾಗುವುದರಲ್ಲಿ ಸಂಶಯವಿಲ್ಲ.
‘ಹೊನ್ನಬಿತ್ತೇವು ಹೊಲಕ್ಕೆಲ್ಲಾ ; ಕಾಳ ಕೊಟ್ಟೇವು ಮನಿಗೆಲ್ಲ’ ಎಂಬ ಜನಪದನೊಂದಿಗೆ ಪಯಣಗೈದಾಗ ಭವ್ಯ ಭಾರತದ ದಿವ್ಯ ಗ್ರಾಮಗಳ ಬೆಳ್ಗಾಂತಿಯನ್ನು ಕಾಣಬಹುದು. ಆದ ಕಾರಣ ದೊಡ್ಡಂಪ (ದೊಡ್ಡವರ ರಂಪಾಟ), ಚಿಕ್ಕಂಪ (ಚಿಕ್ಕವರ ರಂಪಾಟ), ಗುಬ್ಬಲಾಟ (ಗುಬ್ಬಚ್ಚಿಯ ಗಲಾಟೆ)ಗಳು ನಿರ್ವೀರ್ಯವಾಗಿ ಸತ್ವಹೀನವಾಗುವುದರಲ್ಲಿ ಎರಡು ಮಾತಿಲ್ಲ.
ಪ್ರೊ. ಬಾತಿ ಬಸವರಾಜ್
ಶೈಕ್ಷಣಿಕ ಸಲಹೆಗಾರರು,
ದವನ ಕಾಲೇಜು, ದಾವಣಗೆರೆ.
ಮೊ: 8884527130