ಇತ್ತೀಚೆಗೆ ಲಯನ್ಸ್ಗೇಟ್ ಪ್ಲೈ ಆಪ್ ಜಾಹೀರಾತೊಂದನ್ನು ಬಿಡುಗಡೆ ಮಾಡಿದೆ. ಆ ಜಾಹೀರಾತಿನಲ್ಲಿ ಯಾವ ಕಾರ್ಯಕ್ರಮ ನೋಡಬೇಕು ಎಂಬ ಪ್ರಶ್ನೆ ಜೋಡಿಯೊಂದರ ನಡುವೆ ಬರುತ್ತದೆ. ಆಗ ಹುಡುಗಿ, ಹುಡುಗನ ಕಪಾಳಕ್ಕೆ ರಪರಪನೆ ಬಾರಿಸಿ ತನಗೆ ಬೇಕಾದ ಪ್ರೋಗ್ರಾಂ ನೋಡುತ್ತಾಳೆ! ಕೌಟುಂಬಿಕ ಹಿಂಸಾಚಾರ ವೈಭವೀಕರಿಸುವ ಈ ಜಾಹೀರಾತು ನೋಡಿದವರಾರೂ ಸೈ ಎಂದಿಲ್ಲ. ಆದರೂ, ಕಂಪನಿ ಇನ್ನೂ ಇದೇ ಜಾಹೀರಾತು ಮುಂದುವರೆಸಿದೆ.
ಒಂದು ವೇಳೆ ಇದೇ ಕಂಪನಿ ಹುಡುಗಿಗೆ ಹುಡುಗ ಬಾರಿಸಿ ತನಗೆ ಬೇಕಾದ ಕಾರ್ಯಕ್ರಮ ನೋಡಲು ಮುಂದಾಗಿದ್ದರೆ ಜಾಹೀರಾತು ಇಷ್ಟು ದಿನ ಉಳಿಯುತ್ತಿತ್ತೇ? ಎಂಬ ಪ್ರಶ್ನೆಯನ್ನು ಹಲವು ನೆಟಿಜೆನ್ಗಳು ಕೇಳಿದ್ದಾರೆ. ಆದರೆ, ಜಾಹೀರಾತು ಮಾತ್ರ ಎರಡನೇ ವಾರದಲ್ಲೂ ಅಮೋಘವಾಗಿ ಬಿತ್ತರವಾಗುತ್ತಿದೆ.
ಟ್ವಿಟ್ಟರ್ನಲ್ಲಿ ಜಾಹೀರಾತಿಗೆ ಆಕ್ಷೇಪಿಸಿರುವ ಕೆಲವರು, ಸ್ತ್ರೀವಾದಿಗಳು ಈಗೇನು ಮಾಡುತ್ತಿದ್ದಾರೆ? ಎಂಬ ಪ್ರಶ್ನೆ ಕೇಳಿದ್ದಾರೆ. ಪುರುಷರನ್ನು ಅವಮಾನಿಸುವ ಜಾಹೀರಾತು ಬಂದಾಗ ಮಹಿಳೆಯರೇ ಬಂದು ಕಾಪಾಡಬೇಕು ಎಂಬ ನಿರೀಕ್ಷೆಯ ಮಟ್ಟಿಗೆ ಪುರುಷರು ಬಂದಿದ್ದಾರೆಯೇ? ಎಂಬುದು ಈಗಿನ ವಿಡಂಬನೆ.
ಕಳೆದ ತಿಂಗಳು ನವೆಂಬರ್ 19ರಂದು ಪುರುಷರ ದಿನಾಚರಣೆಯೂ ಬಂದಿತ್ತು, ಯಾರಿಗಾದರೂ ನೆನಪಿದೆಯೇ? ನಮಗೆ ನಿಮಗಲ್ಲ ಬಿಡಿ ಸಾಕ್ಷಾತ್ ಗೂಗಲ್ಗೂ ನೆನಪಿರಲಿಲ್ಲ! ಮಹಿಳಾ ದಿನಾಚರಣೆಯ ದಿನ ತನ್ನ ಶೋಧನಾ ಡೂಡಲ್ ಬದಲಿಸಿದ್ದ ಗೂಗಲ್, ಪುರುಷರ ದಿನಾಚರಣೆ ದಿನ ಮೌನವಾಗಿದ್ದುದು ಟೀಕೆಗೂ ಕಾರಣವಾಗಿತ್ತು.
ಇತ್ತೀಚೆಗೆ ಸುಪ್ರೀಂ ಕೋರ್ಟ್ ಹಿಂದೂ ಮಹಿಳೆಯರಿಗೆ ಪಿತ್ರಾರ್ಆಸ್ತಿಯಲ್ಲಿ ಸಮಾನ ಹಕ್ಕಿನ ತೀರ್ಪು ನೀಡಿತ್ತು. ಸಮಾನತೆ ಸರಿಯೇ. ಆದರೆ, ತೀರ್ಪಿನಲ್ಲಿ ಗಂಡು ಮಕ್ಕಳು ಮದುವೆಯಾಗುವವರೆಗೆ ಮಾತ್ರ ಮಕ್ಕಳು, ಹೆಣ್ಣು ಮಕ್ಕಳು ಕೊನೆವರೆಗೂ ಮಕ್ಕಳಾಗಿರುತ್ತಾರೆ ಎಂದು ಟಿಪ್ಪಣಿ ಸೇರಿಸಲಾಗಿತ್ತು. ಯಾರಾದರೂ ಈ ತಾರತಮ್ಯದ ಟಿಪ್ಪಣಿಗೆ ಆಕ್ಷೇಪಿಸಿದರಾ?
ಶಿಕ್ಷಣದಿಂದ ಹೆಣ್ಣು ಮಕ್ಕಳು ವಂಚಿತರಾಗಿದ್ದಾಗ ಸಮಾನತೆ ತರಲು ಹಲವಾರು ಪ್ರಯತ್ನಗಳನ್ನು ನಡೆಸಲಾಯಿತು. ಈಗಲೂ ಸಹ ಮಹಿಳಾ ಶಿಕ್ಷಣಕ್ಕೆ ಸಾಕಷ್ಟು ಉತ್ತೇಜನಗಳಿವೆ. ಈ ಎಲ್ಲ ಪ್ರಯತ್ನಗಳ ನಂತರ ಕಳೆದ ಕೆಲ ದಶಕಗಳಲ್ಲಿ ವಿದ್ಯಾರ್ಥಿನಿಯರೇ ಶಿಕ್ಷಣದಲ್ಲಿ ಮೇಲುಗೈ ಸಾಧಿಸಿದ್ದಾರೆ.
ರಾಂಕ್ಗಳಲ್ಲಿ ಬಹುತೇಕವು ವಿದ್ಯಾರ್ಥಿನಿಯರ ಪಾಲಾಗುತ್ತಿವೆ. ಉನ್ನತ ಶಿಕ್ಷಣದಲ್ಲಿ ಮಹಿಳಾ ಪ್ರಾತಿನಿಧ್ಯ ಪುರುಷರಿಗಿಂತ ಹೆಚ್ಚಾಗುತ್ತಿದೆ. ಆದರೆ, ಹಿಂದೆ ಬಿದ್ದ ವಿದ್ಯಾರ್ಥಿಗಳಗೆ ನೆರವಾಗಿ ಸಮಾನತೆ ತರುವ ಮಾತುಗಳನ್ನು ಎಲ್ಲಾದರೂ ಕೇಳಿದ್ದೀರಾ? ಸದ್ಯಕ್ಕೆ ಕೇಳುವ ಲಕ್ಷಣಗಳೂ ಕಾಣುತ್ತಿಲ್ಲ.
ಜಾತಿ, ಜನಾಂಗ, ಸಮುದಾಯ, ಇತ್ಯಾದಿಗಳ ಆಧಾರದ ಮೇಲೆ ನೂರೆಂಟು ಸಂಘಟನೆಗಳಿವೆ. ಆದರೆ, ಪುರುಷರಿಗೆ ಸಂಘಟನೆಗಳೇ ಇಲ್ಲ ಎನ್ನಬಹುದು. ಸಂಘಟನೆಯೇ ಇಲ್ಲ ಎಂದ ಮೇಲೆ ವೋಟ್ ಬ್ಯಾಂಕ್ ಇಲ್ಲ. ವೋಟ್ ಬ್ಯಾಂಕ್ ಇಲ್ಲ ಎಂದ ಮೇಲೆ ಪುರುಷ ಆಯೋಗವೂ ಇಲ್ಲ. ಇದ್ಯಾವೂ ಇಲ್ಲದಿರುವಾಗ ಪುರುಷರ ಬಗ್ಗೆ ವಿಚಾರ ಮಾಡಬೇಕು ಎಂಬ ಯೋಚನೆಯಾದರೂ ಆಡಳಿತಾರೂಢರಿಗೆ ಹೇಗೆ ಬರಬೇಕು…?
ಕೊರೊನಾ ಲಸಿಕೆ ಪಡೆಯಬೇಕಾದವರ ಪಟ್ಟಿಯನ್ನು ರಚಿಸಲು ಕೇಂದ್ರ ಸರ್ಕಾರ ಸೂಚಿಸಿದೆ. ಮಹಿಳೆಯರಿಗೆ ಹೋಲಿಸಿದರೆ ಕೊರೊನಾದಿಂದ ಸಾಯುವ ಪುರುಷರ ಸಂಖ್ಯೆ ಎರಡೂವರೆ ಪಟ್ಟು ಹೆಚ್ಚಾಗಿದೆ. ಕೊರೊನಾ ಸಾವಿನಲ್ಲಿ ಶೇ.70ರಷ್ಟು ಪಾಲು ಪುರುಷರದ್ದೇ ಆಗಿದೆ. ಇಷ್ಟಾದರೂ, ಲಸಿಕೆ ಪಡೆಯುವ ನಿರ್ದಿಷ್ಟ ವರ್ಗದವರನ್ನು ಗುರುತಿಸುವಾಗ ಪುರುಷರಿಗೆ ಆದ್ಯತೆ ನೀಡುವಂತೆ ಯಾವೊಬ್ಬ ಪರಿಣಿತ ಸಹ ಉಸಿರೆತ್ತಿಲ್ಲ.
ಕೇಂದ್ರ ಸರ್ಕಾರ ಈ ಹಿಂದೆ 2018ರಲ್ಲಿ ಅತ್ಯಾಚಾರದ ವಿರುದ್ಧ ಕಠಿಣ ಶಿಕ್ಷೆಗಾಗಿ ಜಾರಿಗೆ ತಂದಿದ್ದ ಸುಗ್ರೀವಾಜ್ಞೆಯಲ್ಲೂ ಸಹ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ನಡೆದಾಗ ಹೆಚ್ಚು ಶಿಕ್ಷೆ, ಅಪ್ರಾಪ್ತ ಬಾಲಕನ ಮೇಲೆ ಅತ್ಯಾಚಾರ ನಡೆದಾಗ ಕಡಿಮೆ ಶಿಕ್ಷೆಯ ಅಂಶವಿತ್ತು. ಅತ್ಯಾಚಾರದಂತಹ ದೌರ್ಜನ್ಯದ ವಿಷಯದಲ್ಲಾದರೂ ಲಿಂಗ ಸಮಾನತೆ ಇರಲಿ ಎಂಬ ಕೂಗಿಗೆ ಸಂಸತ್ತು ಕಿವಿಗೊಡುತ್ತಿಲ್ಲ.
ಇದಕ್ಕೆಲ್ಲ ಪ್ರಮಖ ಕಾರಣ ಎಂದರೆ ಪುರುಷರ ಪರ ಮಾತನಾಡುವುದು ಫ್ಯಾಷನ್ ಆಗಿಲ್ಲ. ಗಂಡಸರು ಮೊದಲೇ ಸಂಘಟಿತರಾಗಿಲ್ಲ. ಜಾತಿ, ಜನಾಂಗ, ಸಮುದಾಯ, ಇತ್ಯಾದಿಗಳ ಆಧಾರದ ಮೇಲೆ ನೂರೆಂಟು ಸಂಘಟನೆಗಳಿವೆ. ಆದರೆ, ಪುರುಷರಿಗೆ ಸಂಘಟನೆಗಳೇ ಇಲ್ಲ ಎನ್ನಬಹುದು. ಸಂಘಟನೆಯೇ ಇಲ್ಲ ಎಂದ ಮೇಲೆ ವೋಟ್ ಬ್ಯಾಂಕ್ ಇಲ್ಲ. ವೋಟ್ ಬ್ಯಾಂಕ್ ಇಲ್ಲ ಎಂದ ಮೇಲೆ ಪುರುಷ ಆಯೋಗವೂ ಇಲ್ಲ. ಇದ್ಯಾವೂ ಇಲ್ಲದಿರುವಾಗ ಪುರುಷರ ಬಗ್ಗೆ ವಿಚಾರ ಮಾಡಬೇಕು ಎಂಬ ಯೋಚನೆಯಾದರೂ ಆಡಳಿತಾರೂಢರಿಗೆ ಹೇಗೆ ಬರಬೇಕು?
ಎಸ್.ಎ. ಶ್ರೀನಿವಾಸ್
[email protected]