ಚಿಕಾಗೋ ಉಪನಗರಗಳಲ್ಲಿ ಒಂದಾದ ಹಿನ್ಸ್‍ಡೇನಲ್ಲಿ ಚಿನ್ಮಯ ಮಿಷನ್ ನವರ ಆಶ್ರಮವೊಂದಿದೆ. ಕೆಲವು ವರ್ಷಗಳ ಹಿಂದೆ ನಾವು ಅಲ್ಲಿ ಕೆಲವು ಕನ್ನಡಿಗರು ಸೇರಿ ಮಕ್ಕಳಿಗಾಗಿ ಕನ್ನಡ ಶಾಲೆಯೊಂದನ್ನು ಭಾನುವಾರದಂದು ನಡೆಸುತ್ತಿದ್ದೆವು. ಅಲ್ಲಿ ಸ್ವಾಮಿ ಚಿನ್ಮಯಾನಂದರು ಬರೆದಿರುವ KINDLE LIFE ಎನ್ನುವ ಪುಸ್ತಕದ ಅಧ್ಯಾಯಗಳನ್ನು ಓದಿ ವಿಮರ್ಶೆ ಮಾಡಲು ಉಪಯೋಗಿಸಿಕೊಳ್ಳುತ್ತಿದ್ದೆವು. ಈ ಪುಸ್ತಕದಲ್ಲಿ ಸ್ವಾಮಿ ಚಿನ್ಮಯಾನಂದರು ನಮ್ಮ ಗೀತೋಪನಿಷತ್ತುಗಳಲ್ಲಿ ಒದಗುವ ಜೀವನಸಾರವನ್ನು – ಮುಖ್ಯವಾಗಿ ಮಾನವ ತನ್ನ ಸುಖ, ಸಂತೋಷಕ್ಕಾಗಿ ತೊಟ್ಟಿಲಿನಿಂದ ಸಮಾಧಿಯವರೆಗೂ ಮಾಡುವ ಬೇಟೆಯನ್ನು, ತನ್ನ ಜೀವನದಲ್ಲಿ ಬರುವ ಏರಿಳಿತಗಳಿಗೆ ಸ್ಪಂದಿಸಿ ಮನಸ್ಸಿಗೆ ಉಲ್ಲಾಸವನ್ನು ತಂದುಕೊಳ್ಳುವ ಉಪಾಯಗಳನ್ನು – ಸಾಮಾನ್ಯ ಜನರಿಗೂ, ಪಾಶ್ಚಾತ್ಯರಿಗೂ ಸುಲಭವಾಗಿ ಅರ್ಥವಾಗುವಂತಹ ರೀತಿಯಲ್ಲಿ ಉತ್ತಮವಾದ ಉದಾಹರಣೆಗಳ ಮೂಲಕ ವಿವರಿಸಿರುತ್ತಾರೆ. ಎರಡೆರಡೇ ಪುಟಗಳ ಒಂದೊಂದು ಅಧ್ಯಾಯವನ್ನೂ ನಮ್ಮ ಸ್ವಾನುಭಾವಗಳ ಹಿನ್ನೆಲೆಯಲ್ಲಿ ಚರ್ಚಿಸಿ, ವಿಮರ್ಶಿಸಿಕೊಳ್ಳಲು ಸುಮಾರು ಎರಡು ಮೂರು ಭಾನುವಾರಗಳಂದು ಸಿಕ್ಕುವ ಪೂರ್ಣ ಅವಧಿಗಳೇ ಬೇಕಾಗುತ್ತಿದ್ದವು. ಆ ದಿನಗಳಲ್ಲಿ ನಡೆದ ವಿಚಾರ ವಿನಿಮಯಗಳಲ್ಲಿ ನಾನು ಗಳಿಸಿಕೊಂಡ ಜ್ಞಾನವನ್ನು ಈಗಲೂ ಸಮಯ ಒದಗಿ ಬಂದಾಗಲೆಲ್ಲ ನಮ್ಮ ಕನ್ನಡ ಕವಿಗಳ, ಸಾಹಿತಿಗಳ ಲೇಖನಗಳನ್ನು ಓದಿ ಬೆಳೆಸಿಕೊಳ್ಳುವುದಕ್ಕೆ ಪ್ರಯತ್ನಿಸುತ್ತಿರುತ್ತೇನೆ.
ಕನ್ನಡದ ಪ್ರಖ್ಯಾತ ಸಾಹಿತಿ, ಶ್ರೀ ನಿಸಾರ್ ಅಹಮದ್ ಅವರ, ಸ-ರಸೋಕ್ತಿಗಳ ಸಂಗಾತಿ ಎನ್ನುವ ಕೃತಿಯಲ್ಲಿ,
ಬಾಳುವುದೆ ಬದುಕಲ್ಲ; ಬದುಕಿನರ್ಥವ ತಿಳಿವ ಚಿಂತನೆಯ
ನಿಜ ಬದುಕು ನರ ಜೀವಿಗೆ;
ಬದುಕಲಿಕೆ ಇಹ ಕಲಿಕೆ, ಅನ್ಯರನುಭವ ಗಳಿಕೆ:
ವಿಶ್ವವಿದು ರೂಪುಗೊಳಲೊಂದಾವಿಗೆ’
– ಎನ್ನುವ ನುಡಿಗಳಲ್ಲಿ ಅನ್ಯರ ಅನುಭವಗಳಿಂದ ನಮ್ಮ ಬಾಳನ್ನು ರೂಪಿಸಿಕೊಳ್ಳುವ ಸೊಗಸಾದ ಸೂಚನೆಯಿದೆ. ನಮ್ಮ ಸಾಹಿತ್ಯ ಭಂಡಾರ ಸಾಗರದಷ್ಟು ವಿಶಾಲವಾಗಿದೆ. ಈ ಭಂಡಾರದಲ್ಲಿ ನನಗೆ ಬಹಳ ಪ್ರಿಯವಾಗಿ ಹಿಡಿಸಿದ್ದು ಎಂದರೆ ನಮ್ಮ ಕನ್ನಡದ ಅತ್ಯುತ್ತಮ ಸಾಹಿತಿಗಳಲ್ಲಿ ಒಬ್ಬರಾದ ಡಾ|| ಡಿ. ವಿ. ಗುಂಡಪ್ಪನವರ ಕಗ್ಗಗಳು. ಮಂಕುತಿಮ್ಮನಿಗೆ ಸಾಕಷ್ಟು ಕಗ್ಗಗಳನ್ನು ಹೇಳಿಯಾದ ನಂತರ ಮರುಳು ಮುನಿಯನ ಕಡೆ ಅವರ ಗಮನ ಹರಿಯಿತು. ಈ ಕಗ್ಗ ಸಂಗ್ರಹಗಳು ಕನ್ನಡದ ಭಗವದ್ಗೀತೆಯೆಂದೇ ಪ್ರಸಿದ್ಧಿಯಾಗಿವೆ. ಈ ಕಗ್ಗಗಳು ಭಗವದ್ಗೀತೆಯ ಹಿನ್ನೆಲೆಯಲ್ಲಿ, ಸ್ವಾನುಭವದಿಂದಲೋ ಪರಾನುಭವದಿಂದಲೋ ಸ್ಪೂರ್ತಿಹೊಂದಿ, ಮೂಡಿ ಬಂದಿರುವ `ಅನುಭವೋಕ್ತಿ’ ಗಳೆಂದು ಹೇಳಬಹುದು. ಇಲ್ಲಿರುವುದು ಸಾರಸ್ವತ ಅನುಭವ ಭಂಡಾರ. ನಮಗೆ ಬೇಕಾದದ್ದನ್ನು ಆರಿಸಿಕೊಳ್ಳಲು ಅನುವಿದೆ. ಅವುಗಳಲ್ಲಿ ಕೆಲವನ್ನು ಆರಿಸಿಕೊಂಡು ಅವುಗಳ ಬಗ್ಗೆ ನನ್ನ ಅನಿಸಿಕೆಗಳನ್ನು ನಿಮ್ಮೊಡನೆ ವಿಚಾರ ಮಾಡುವ ಪ್ರಯತ್ನ ಮಾಡುತ್ತಿದ್ದೇನೆ.
ಏನೇನೋ ನಡೆದಿಹುದು ವಿಜ್ಞಾನ ಸಂಧಾನ|
ಮಾನುಷ್ಯ ಬಾಂಧವ್ಯವೊಂದು ಮುರಿದಿಹುದು||
ತಾನೊಡರ್ಚಿದ ಹೊನ್ನಸರವೇ ನರನ ಕೊರಳ್ಗೆ|
ನೇಣಾಗಿಹುದು ನೋಡು – ಮರುಳ ಮುನಿಯ||
– ಡಿ. ವಿ. ಜಿ. ಯವರ ಈ ಪದಗಳು ಇಂದಿನ ಜಗತ್ತಿನ ಪ್ರಸ್ತುತ ಪರಿಸ್ಥಿತಿಯನ್ನು ಎಷ್ಟು ಪ್ರಬಲವಾಗಿ ನಿರೂಪಿಸುತ್ತಿವೆ ನೋಡಿ. ಜ್ಞಾನದ ಪರಿಮಿತಿಯನ್ನು ಮುಟ್ಟುವ ತವಕದಲ್ಲಿ ಆಗುತ್ತಿರುವ ಅಪಘಾತವೆಂದರೆ ಪರಸ್ಪರ ಬಾಂಧವ್ಯ – ಅಂದರೆ ಮಾನವ ಸಂಬಂಧಗಳೇ ಮುರಿದು ಬೀಳುತ್ತಿವೆ. ನಾವು ವಿನ್ಯಾಸ ಕೊಟ್ಟು ಅಕ್ಕಸಾಲಿಗನಿಂದ ಮಾಡಿಸಿಕೊಂಡಿರುವ ಬಂಗಾರದ ಸರ ಇಂದು ನಮ್ಮ ಕುತ್ತಿಗೆಗೇ ನೇಣಾಗಿರುವಂತಹ ಪರಿಸ್ಥಿತಿ ತಲೆದೋರಿದೆ. ಜನಗಳು ಮಿಡಿಯುತ್ತಿರುವ ಜೀವಂತ ಹೃದಯಕ್ಕೆ ಸ್ಪಂದಿಸುವ ಬದಲು ಬಡಿಯುತ್ತಿರುವ ನಿರ್ಜೀವ ಯಂತ್ರಗಳೊಡನೆ ಬಾಂಧವ್ಯ ಕಲ್ಪಿಸಿಕೊಳ್ಳುತ್ತಿದ್ದಾರೆ.
ಏನೇನೋ ನಡೆದಿಹವು ಮಾನುಷ್ಯ ಸಿದ್ಧಿಯಲಿ|
ಯಾನಗಳು ಯಂತ್ರಗಳು ರಸ ನಿರ್ಮಿತಿಗಳು||
ಭಾನುಗೋಲಕ್ಕೇಣಿಕಟ್ಟಲೆಳಸುವ ನರನು|
ತಾನಿಳಿಯುತಿಹನೇಕೋ – ಮರುಳ ಮುನಿಯ||
ಏನೆಲ್ಲ ಸಾಧನೆಗಳಾಗಿವೆ ಮಾನವನ ಮನೋಕುಶಲತೆಯಿಂದ! ಸಂಚಾರಕ್ಕೆ ದಿನಗಟ್ಟಳೇ ಎಳೆಯುತ್ತಿದ್ದ ಎತ್ತಿನ ಬಂಡಿಗಳು, ಜಟಕಾ ಗಾಡಿಗಳು ಮರೆಯಾಗುತ್ತಿವೆ. ಕಾರುಗಳು, ಬಸ್ಸುಗಳು, ರೈಲು ಬಂಡಿಗಳು ಅತಿ ಶೀಘ್ರಗತಿಯಲ್ಲಿ ನಮಗೆ ಬೇಕಾದ ಕಡೆಗೆ ನೆಲದ ಮೇಲೆ. ನೆಲದ ಕೆಳಗೆ, ಗುಡ್ದ ಬೆಟ್ಟಗಳ ಹೊಟ್ಟೆಗಳೊಳಗೆ, ನದಿಗಳ ಕೆಳಗಿಂದ, ಮೇಲ್ಗಡೆಯಿಂದ ನಮ್ಮನ್ನು ಸಾಗಿಸುತ್ತಿವೆ. ಹಡಗುಗಳು ಸಮುದ್ರ, ಸಾಗರಗಳನ್ನು ದಾಟಿಸುತ್ತಿವೆ. ವಿಮಾನಯಾನದಿಂದ ಸರ್ವೇ ಸಾಮಾನ್ಯವಾಗಿ ದೇಶ-ವಿದೇಶಗಳು ಅಕ್ಕ ಪಕ್ಕದ ಊರು ಗಳಾಗುತ್ತಿವೆ. ಕ್ಷಿಪಣಿಗಳು ಗಗನ ತಲುಪಿ ಬರುತ್ತಿವೆ. ಇಷ್ಟೆಲ್ಲ ಸಾಧನೆಗಳನ್ನು ಮಾಡಿ ಸೂರ್ಯಮಂಡಲಕ್ಕೆ ಏಣಿಯನ್ನು ಹಾಕುತ್ತಿರುವ ಮಾನವ ಒಂದು ವಿಚಾರದಲ್ಲಿ ಮಾತ್ರ ಏಣಿಯನ್ನು ಹತ್ತಲಾರದೆ, ನಿರಂತರ ಕೆಳಗಿಳಿಯುತ್ತಿದ್ದಾನೆ. ಅದೇನೆಂದು ಯೋಚಿಸಿ ನೋಡಿ. ಅದೇ ಮೇಲೆ ಹೇಳಿದ ಮಾನವ ಬಾಂಧವ್ಯ ಹಾಗೂ ಹೃದಯ ವೈಚಾರಿಕತೆಗೆ ಹಾಕಿರುವ ಏಣಿ! ಪ್ರಕೃತಿಯನ್ನು ನೋಡಿ ನಲಿಯಬೇಕಾದ ಮಾನವ, ಅದನ್ನು ಸಿಗಿದು, ಸೀಳಿ ಅದರ ಒಳಗೆ ಏನಿದೆ ಎಂದು ನೋಡುವ ಕುತೂಹಲವುಳ್ಳವನಾಗಿದ್ದಾನೆ. ಸೃಷ್ಟಿಕರ್ತನ ಕಾರ್ಯಗಳಿಗೇ ಸಂಚಕಾರ ಹಾಕುತ್ತಿದ್ದೇವೆ ನಾವಿಂದು.
ಅಡವಿಯನು ಕಡಿಯುವನು ಬೆಟ್ಟಗಳನಿಡಿಯುವನು!
ಪೆಡವಿಯನು ಪಾತಾಳಮುಟ್ಟಿ ಕೊರೆಯುವನು||
ಕಡಲುಗಳ ಹಾಯುವನು ಉಡುಪಥವ ಸೀಳುವನು|
ದುಡುಕನೇ ಸೃಷ್ಟಿಯೆಡೆ – ಮರುಳ ಮುನಿಯ||
– ಸಾಮಾಜಿಕ ಜೀವನವಿಂದು ಯಾಂತ್ರಿಕ ಜೀವನವಾಗಿದೆ. ವಿಜ್ಞಾನ
ಪ್ರೇರಿತವಾದ ಈ ಜಗತ್ತಿನಲ್ಲಿ ಮಾನವನಿಗೆ ತನ್ನ ಆತ್ಮಶಾಂತಿಗೋಸ್ಕರ ಕಿಂಚಿತ್ತು ಪಾಲು ಸಿಕ್ಕುವುದೂ ಅಪರೂಪವಾಗುತ್ತಿದೆ. ಇಂತಹ ಸನ್ನಿವೇಶದಲ್ಲಿ ಸುಖ ಎಂದರೇನು ಎನ್ನುವ ಪ್ರಜ್ಞೆಯಾದರೂ ಅವನಿಗಿದೆಯೇ? ಅಂತಹುದೊಂದಿದೆ, ಅದು ಎಲ್ಲಿ ಸಿಕ್ಕುತ್ತದೆ ಎಂದು ನಿರಂತರವಾಗಿ ಹುಡುಕುತ್ತಲೇ ಇದ್ದಾನೆ. ಸುಖದ ಶೋಷಣೆ ಇಂದು, ನಿನ್ನೆಯದಲ್ಲ. ಈ ಜಗತ್ತಿನ್ನು ಸೃಷ್ಟಿಸಿ ಜೊತೆಗೇ ಸುಖದ ಅನ್ವೇಷಣೆಯೂ ಸೃಷ್ಟಿಯಾಗಿರುವುದು ನಿಜ. ವ್ಯತ್ಯಾಸವಿಷ್ಟೇ – ಅದು ಸುಲಭವಾಗಿ ದಕ್ಕುತ್ತಿತ್ತು ಆಗ, ಅದರ ಸ್ವರೂಪ ಏನು ಎನ್ನುವ ಅರಿವಿತ್ತು ಅಂದಿನ ಜನಕ್ಕೆ; ಅದೆಂತದು ಎನ್ನುವ ಅರಿವಿಲ್ಲ ಈ ಜನಕ್ಕೆ, ಅದು ಇಲ್ಲಿದೆ, ಅಲ್ಲಿದೆ ಎನ್ನುವ ಅಂಧಕಾರ ಇಂದಿನ ಜನಕ್ಕೆ. ಇದ್ದದ್ದನ್ನು ಅನುಭವಿಸುವುದಿಲ್ಲ, ಇಲ್ಲದ್ದನ್ನು ಬಯಸುವುದು ಬಿಡುವುದಿಲ್ಲ – ಇದು ನಮ್ಮ ಬವಣೆ. ಆಸೆಗಳು ನೂರಾರು. ಆ ನೂರರಲ್ಲಿ ಒಂದು ಕಡಿಮೆಯಾದರೂ, ನಿರಾಸೆ, ದುಃಖ, ವ್ಯಥೆ ಇದು ನಮ್ಮ ಕಥೆ!
ಅಬ್ಬಬ್ಬ! ಲೋಕವೇ ಬೊಬ್ಬಿರಿಯುತಿಹುದಿಂತು|
ಮಬ್ಬಿನೊಳ್ ಪ್ರೇತಗಳ್ ಪೆೀರಿ ಚೀರ್ವಂತೆ||
ಅಭ್ಯುದಯವಿದಕುಂಟೆ ಸಭ್ಯತೆಗೆ ನೆಲೆಯುಂಟೆ|
ದಿಬ್ಬಣವಿದಂತಕನಿಗೆ – ಮರುಳ ಮುನಿಯ!!
– ಅಬ್ಬಬ್ಬಾ, ಮಬ್ಬು ಹೊತ್ತಿನಲ್ಲಿ ಭೂತ ಪ್ರೇತಗಳು ಚೀರಿಕೊಳ್ಳುವಂತೆ, ಜನಗಳು ತಮ್ಮಲ್ಲಿ ಇಲ್ಲದಿರುವುದನ್ನು ನೋಡಿಕೊಂಡು, ಅಯ್ಯೋ ನನ್ನ ದುರಾದೃಷ್ಟ, ನನ್ನ ಕರ್ಮ ನನಗೆ ಸುಖವಿಲ್ಲ, ನನ್ನ ಮನಸ್ಸಿಗೆ ನೆಮ್ಮದಿಯಿಲ್ಲ -ಹೀಗೆಲ್ಲಾ ಅಂದುಕೊಂಡು ಗೋಳಿಡುತ್ತಾರೆ. ಹೀಗೆ ಅಳುತ್ತಾ ಕೂರುವುದರಿಂದ ಅವರಿಗೇನಾದರು ಒಳ್ಳೆಯದಾಗುತ್ತದೆಯೇ? ಇವರ ಗೋಳಿನ ಮಧ್ಯೆ ಸಭ್ಯತೆ ಎನ್ನುವುದು ಹತ್ತಿರ ಸುಳಿಯುವುದಾದರೂ ಉಂಟೇ. ಸಾಧ್ಯವೇ ಇಲ್ಲ. ಇವರು ಮಾಡುತ್ತಾ ಇರೋ ರೀತಿ ಅವಸರ ಪಟ್ಟು ಯಮರಾಜನಿಗೆ ದಿಬ್ಬಣ ಕೊಟ್ಟು ಕರೆಸಿಕೊಳ್ಳುವಂತಹುದು ಎಂದು ಡಿ. ವಿ. ಜಿ. ಇಲ್ಲಿ ಅಚ್ಚರಿಪಡುತ್ತಾರೆ.
ಸುಖ ಬೇರೆಲ್ಲೂ ಇಲ್ಲ. ನಿಮ್ಮೊಳಗೇ ಅಡಗಿದೆ. ನಿಮಗೆ ಗೋಚರಿಸುತ್ತಿಲ್ಲ ಅಷ್ಟೇ. ಸುಖ ಸಿಕ್ಕುವುದು ಸಿರಿ ಸಂಪತ್ತಿನಿಂದಲ್ಲ.
ಅಹಂಭಾವ ಮನದಲ್ಲಿ ಮೂಡಿದಾಗ ಮಾತಿನಲ್ಲಿ ಕೊಂಕು, ವ್ಯಂಗ್ಯ, ಮೋಸಗಾರಿಕೆ ಇವೆಲ್ಲವುಗಳು ಬಿರುಗಾಳಿಯಂತೆ ಹುಟ್ಟಿಕೊಳ್ಳುತ್ತವೆ. ಜ್ಞಾನದ ಬೆಳಕಿಗೆ ಬದಲಾಗಿ ಅಜ್ಞಾನ ತನ್ನ ಅಂಧಕಾರವನ್ನು ಮೆರೆಸುತ್ತದೆ. ಇದಕ್ಕೆ ಬಲಿಯಾದ ಬಲ್ಲಿದರೆನ್ನಿಸಿಕೊಂಡ ಗಣ್ಯ ವ್ಯಕ್ತಿಗಳೂ ತಾಮಸಿಗರಾಗಿ ಕೆಡುವುದರಲ್ಲಿ ಸಂದೇಹವಿಲ್ಲ ಎಂದು `ಅಹಂ’ ನಿಂದ ದೂರವಿರಲು ಎಚ್ಚರಿಕೆ ಕೊಟ್ಟಿದ್ದರು. ನೋಡಿ, ಸುಖ ಎಲ್ಲಿದೆ ಎಂದು ಹುಡುಕಿಕೊಂಡು ಹೋಗುವುದರ ಅನರ್ಥಗಳು ಒಂದಕ್ಕೊಂದು ಅಂಟಿಕೊಂಡಂತೆ ಹೊರಬರುತ್ತವೆ. ಇದಕ್ಕೇ ಮನಸ್ಸನ್ನು ಹದ ಮಾಡಿಕೊಂಡು ಕಡಿವಾಣ ಹಾಕಿಟ್ಟಿರಬೇಕು. ಅದು ಎಲ್ಲೆಲ್ಲೋ ಓಡುತ್ತದೆ, ಏನೇನನ್ನೋ ಬಯಸುತ್ತದೆ.
ಸಿರಿಯೇಕೊ ಸೌಖ್ಯಕ್ಕೆ? ಅರುಣಂಗೆ ಬಾಡಿಗೆಯೆ?|
ಧರೆಯ ದಿನದಿನದ ಬಣ್ಣಗಳಿಗೇಂ ಬೆಲೆಯೆ? ||
ಹರುಷವಂಗಡಿ ಸರಕೆ? ಹೃದಯದೊಳಚಿಲುಮೆಯದು|
ಸರಸತೆಯೇ ಸಿರಿತನವೋ – ಮರುಳ ಮುನಿಯ||
ಈ ಪದಗಳಲ್ಲಿ ಮಾನ್ಯ ಡಿ. ವಿ. ಜಿ. ಯವರು ಬದುಕಿನ ಸತ್ಯವನ್ನು ಕನ್ನಡಿ ಹಿಡಿದು ತೋರಿಸುತ್ತಿದ್ದಾರೆ. ಸಿರಿತನ ಒಂದಿದ್ದರೆ ಸಾಕು, ಅದೇ ನನಗೆ ಸುಖ ಅಂದುಕೊಂಡಿರುವವರಿಗೆ ಅವರು ಕೆಲವು ಪ್ರಶ್ನೆಗಳನ್ನು ಮುಂದಿಡುತ್ತಾರೆ. ಸೂರ್ಯನ ಬೆಳಕನ್ನು ಆಸ್ವಾದಿಸಿ ಆನಂದ ಪಡುವುದಕ್ಕೆ ಬಾಡಿಗೆ ಏನಾದರು ಕೊಡಬೇಕೆ? ಇಲ್ಲ, ಅದು ಧಾರಾಳವಾಗಿ ಪ್ರತಿಯೊಬ್ಬರಿಗೂ ದೊರಕುತ್ತದೆ.
ಭೂಮಿ ತಾಯಿಯ ಮಡಿಲಲ್ಲಿ ಮೂಡಿಬರುವ ದಿನನಿತ್ಯ ತಲೆದೋರುವ ರಂಗು ರಂಗಿನ ಪ್ರದರ್ಶನವನ್ನು ನೋಡಿ ಮೈ ಮರೆಯಲು ದುಡ್ಡು ಕೊಡಬೇಕಿಲ್ಲ. `ಹೃದಯದೊಳಚಿಲುಮೆಯಿದು’ ನಮ್ಮೆಲ್ಲರ ಹೃದಯಗಳಲ್ಲಿ ನೆಲಸಿರುವ, ಎಂದಿಗೂ ಬತ್ತಲಾರದಂತಹ ಒಳ ಕಾರಂಜಿಯಿದು. ಇದು ಅಂಗಡಿಗಳಲ್ಲಿ ಮಾರಾಟವಾಗುವಂತಹ ಸರಕಲ್ಲ. ನಮ್ಮ ಸರಳತೆ, ಸರಸತೆ, ರಸಿಕತೆ ಇವುಗಳನ್ನು ಉಪಯೋಗಿಸಿಕೊಂಡು ಆನಂದಪಟ್ಟುಕೊಳ್ಳುವಂತಹ, ನಮ್ಮೊಳಗೇ ಇರುವ ನಿತ್ಯ ಸತ್ಯವಿದು.
ಬಂದ ಸುಖವನು ಬಿಡದೆ ಬಾರದುದ ಬೇಕೆನದೆ|
ದಂದುಗಂಬಡದೆ ಮನದೆಚ್ಚರವ ಬಿಡದೆ||
ಸಂದುದನದೇಕೆನದೆ ಮುಂದದೇಂಗತಿಯೆನದೆ|
ಹೊಂದಿಕೊಳ್ಳೊ ಬಂದುದಕೆ – ಮರುಳ ಮುನಿಯ||
ತಾನಾಗಿ ಒದಗಿ ಬಂದ ಸುಖವನ್ನು ಅನುಭವಿಸು, ತಪ್ಪಿಸಿಕೋ ಬೇಡ. ಬರದೆ ಇರೋದಕ್ಕೆ ಬಯಕೆ ಪಡಬೇಡ. ತಾಳು! ತಪ್ಪರ್ಥ ಕಲ್ಪಿಸಿಕೊಳ್ಳಬೇಡ! ಅನುಭವಿಸು, ಆದರೆ ಒಂದನ್ನು ಜ್ಞಾಪಕದಲ್ಲಿಟ್ಟುಕೋ. ಮನಸ್ಸಿನ ಮಂಗಾಟಕ್ಕೆ ಅವಕಾಶ ಕೊಡಬೇಡ. ನಿನ್ನ ಎಚ್ಚರ ನಿನ್ನಲ್ಲಿರಲಿ. ನನಗೇ ಇದು ಯಾಕೆ ಆಗುತ್ತಿದೆ ಅಂತ ಹೆದರಿಕೋ ಬೇಡ, ವಿಚಾರ ಮಾಡು! ಮುಂದೇನು ಗತಿ ಅಂತ ಒದ್ದಾಡಬೇಡ. ಏನು ದೈವದತ್ತವಾಗಿ ಬಂದಿದೆಯೋ ಅದಕ್ಕೆ ಹೊಂದಿಕೊಂಡು ಹೋಗು. ಇಲ್ಲಿ ಡಿ. ವಿ. ಜಿ. ಯವರು ಹೇಳ್ತಾ ಇರೋದರಲ್ಲಿ ಸಾಮಾನ್ಯವಾದ ಅರ್ಥಕ್ಕಿಂತ ಸಮಯೋಚಿತವಾದ ಅರ್ಥ ಬಹಳ ಇದೆ. ಅವಸರಪಟ್ಟುಕೊಂಡು, ಬಂದಿದ್ದನ್ನು ಅನುಭವಿಸದೇ ಬಿಡಬೇಡ ಅಂತ ಅವರು ಹೇಳಿದಾರೆ, full licence ಸಿಕ್ಕಿದೆ ಅಂದುಕೋ ಬಾರದು. ಖಂಡಿತಾ ಅವರು ಅದನ್ನು ಹೇಳ್ತಾ ಇಲ್ಲ. ಅವರು ಹೇಳ್ತಾ ಇರೋದು, ಜೀವನದಲ್ಲಿ ದೇವರು ನಮ್ಮ ಬೇಡಿಕೆಗಳಿಗೆ ಒಂದಿಲ್ಲೊಂದು ರೀತಿಯಲ್ಲಿ – ಮುಳುಗುತ್ತಿರುವ ವ್ಯಕ್ತಿಗೆ ಒಂದು ಹಗ್ಗದ ತುದಿ ಎಸೆದಂತೆ – ಸಹಾಯ, ಪರಿಹಾರ ಪಕ್ಕದಲ್ಲೇ ಒದಗಿಸುತ್ತಾನೆ. ಆದರೆ ನಮ್ಮ ಪರಿಸ್ಥಿತಿ ಹೇಗಿದೆ ಅಂದರೆ, ನಮ್ಮ ಮುಂದಿರುವ ಯಾವುದಾದರೂ ಬಾಗಿಲು ಮುಚ್ಚಿಕೊಳ್ತು ಅಂದುಕೊಳ್ಳಿ. ಆ ಮುಚ್ಚಿರೋ ಬಾಗಿಲನ್ನೇ ಬಿಡದೆ ನೋಡ್ತಾ ಕುಳಿತುಬಿಡುತ್ತೇವೆ. ಪಕ್ಕದಲ್ಲಿ ಹಲವಾರು ಬಾಗಿಲುಗಳನ್ನು ದೇವರು ತೆರೆದೇ ಇರುತ್ತಾನೆ, ತೆಗೆಯುತ್ತಲೇ ಇರುತ್ತಾನೆ. ನಮ್ಮ ದುರ್ಬಲತೆ – ನಾವು ತೆರೆದಿರುವ ತೆರೆಯುತ್ತಿರುವ ಬಾಗಿಲುಗಳನ್ನು ಗಮನಿಸುವುದೇ ಇಲ್ಲ. ಸುಮ್ಮನೆ ದೂಷಿಸುತ್ತೇವೆ. ನಮ್ಮ ಕರ್ಮ, ನಮ್ಮ ಹಣೇ ಬರಹ ಅಂದುಕೊಂಡು ಅಳ್ತಾ ಕುಳಿತುಬಿಡುತ್ತೇವೆ. ಒದಗಿ ಬರುವ ಅವಕಾಶಗಳನ್ನ ತಪ್ಪಿಸಿಕೊಳ್ಳಬಾರದು, ಉಪಯೋಗಿಸಿಕೊಳ್ಳಬೇಕು. ಅದು ಯಾಕೆ, ಎಲ್ಲಿಂದ ಬಂತು ಎನ್ನುವುದರ ಬಗ್ಗೆ ತಲೆ ಕೆಡಿಸಿಕೊಳ್ಳುವ ಪ್ರಯತ್ನ ಬೇಡ. ಇದು ದೈವದಾಟ. ಇದನ್ನು ಪ್ರಶ್ನಿಸುವುದು ಬೇಡ. ಇದನ್ನು ಅರ್ಥ ಮಾಡಿಕೊಂಡು ಪರಿಸ್ಥಿತಿಗೆ ಹೊಂದಿಕೊಳ್ಳಬೇಕು.
ನನ್ನ ಕತೆ ಮುಗೀತು. ಎಲ್ಲಾ ಕಳೆದು ಹೋಯ್ತು. ನನ್ನದೇನೂ ಇಲ್ಲ. ನಾನು ಆವಾಗ ಅದು ಮಾಡಬೇಕಿತ್ತು, ಮಾಡಲಿಲ್ಲ. ಹೀಗೆ ಅಂದುಕೊಂಡು ಒದ್ದಾಡೋದು ನಮ್ಮಗಳ ಬವಣೆ. ಆದರೆ ಡಿ.ವಿ.ಜಿ. ಏನು ಹೇಳ್ತಾರೆ –
ನಾಳೆಯೊಂದಿಹುದು ನಿನ್ನೆಯವೋಲೆ ಬಾಳಿನಲಿ ||
ಬೀಳಾಯ್ತು ನಿನ್ನೆಯದೆಂದಳುವುದೇಕೆ? ||
ಮೇಲು ಮಾಡಲ್ಕಂದು ಸಮಯವದಕಾಣೆಯೇಂ |
ಪಾಳೊಂದುಮಿಲ್ಲವೆಲೊ – ಮರುಳ ಮುನಿಯ ||
ನಾಳೆ ಎನ್ನುವುದೂ ಒಂದಿದೆ ನಿನ್ನ ಬಾಳಿನಲ್ಲಿ. ನಿನ್ನೆ ಕತೆ ಮುಗಿದು ಹೋಯ್ತು, ಅದರ ವಿಷಯ ಬಿಟ್ಟು ಬಿಡು. ಅದು ಹಾಳಾಯ್ತು, ಎಲ್ಲಾ ಕಳೆದುಕೊಂಡೆ,. ಅದನ್ನು ಮಾಡಬೇಕಿತ್ತು, ಮಾಡಲಿಲ್ಲ, ಮುಂದೇನು ಗತಿ? ಅಂತ ನೆಮ್ಮದಿ ಕಳೆದು ಕೊಂಡು ಅದರ ಬಗ್ಗೆ ಕೊರಗ್ತಾ ಕೂರಬೇಡ. ಹಾಳಾಗಿರೋದನ್ನ ಉದ್ಧಾರ ಮಾಡಲಿಕ್ಕೆ ಒಂದು ಸಮಯ ಬಂದೇ ಬರುತ್ತೆ. ಪ್ರಪಂಚದಲ್ಲಿ ಹಾಳು ಎನ್ನುವುದು ಯಾವುದೂ ಇಲ್ಲ. ಬರುವ ನಾಳೆಯ ಕಡೆ ಗಮನ ಹಾಯಿಸು ಎಂದು ಎಚ್ಚರಿಕೆ ಕೊಡುತ್ತಾರೆ.
ಸರಸತಿಯ ಸತ್ರ ಬಳಿಯಿರೆ ತೊರೆದು ದೂರದಾ |
ಸಿರಿದೇವಿಯಂಗಡಿಯನರಸಿ ತಟವಟಿಸಿ ||
ಹೊರ ಹೊಳಪಿನಾಸೆಯಿಂದೊಳಮಬ್ಬನಪ್ಪುವನು |
ಕುರುಡನೇ ಕಂಡವನೊ – ಮರುಳ ಮುನಿಯ ||
ಎಷ್ಟೋ ಸಲ, ಸರಸ್ವತಿ ನೆಲೆಸಿರುವ ನಮ್ಮ ಈ ಚತ್ರ (ಶರೀರ) ನಮ್ಮ ಸಮೀಪದಲ್ಲಿಯೇ ನಮ್ಮ ಬಳಿಯಲ್ಲಿಯೇ ಇದ್ದರೂ, ಆ ಕಡೆ ಗಮನವನ್ನೇ ಹರಿಸದೆ ಎಲ್ಲೋ ದೂರದಲ್ಲಿರುವ ಲಕ್ಷ್ಮಿಯ ಅಂಗಡಿಯನ್ನು ಹುಡುಕಿಕೊಂಡು ಹೋಗ್ತೇವೆ. ಹೊರಗಡೆ ಕಾಣಿಸುವ ತಳುಕು ಬಳುಕು ಹೊಳಪಿಗೆ ಮಾರು ಹೋಗಿ, ನಮ್ಮ ಒಳಗಡೆಗೆ, ನಮ್ಮ ಆಂತರ್ಯಕ್ಕೆ ಮಬ್ಬು ಅಂದರೆ ಅಂಧಕಾರವನ್ನು, ಅಸ್ಪಷ್ಟತೆಯನ್ನು ನಾವೇ ಕೊಂಡು ತಂದು ಕೂರಿಸಿಕೊಳ್ಳುತ್ತೇವೆ, ಇದಕ್ಕೇನನ್ನೋಣ? ಕಣ್ಣಿದ್ದೂ ಕುರುಡರಲ್ಲವೇ ನಾವು? ನಮಗೆ ಅಂಟಿಕೊಂಡಿರುವ ಸುಖದ ಪರಿವೆಯೇ ಇಲ್ಲದೆ, ದೂರದಲ್ಲಿ ಬೆಂಕಿ ಹುಳದಂತೆ ಆಗೊಮ್ಮೆ ಈಗೊಮ್ಮೆ ಮಿಂಚಿದ ವ್ಯಥೆಯ ವ್ಯಾಧಿಯನ್ನು ನಮ್ಮ ಬಾಳಿನಲ್ಲಿ ತಂದುಕೊಂಡು ಅದಕ್ಕೆ ವಸತಿ ನೀಡುತ್ತೇವಲ್ಲ, ನಾವು ದಡ್ಡರಲ್ಲವೇ?
ಮನುಷ್ಯನ ಚಿಂತನೆ ಯಾವಾಗಲೂ ಸ್ವಸುಖಮುಖಿ ಯಾಗಿರಬಾರದು. ಅದರಿಂದ ಸುಖವಿಲ್ಲ. `ಬದುಕಿನಲ್ಲಿ ಬರಿಯ ಒಳಿತನ್ನೇ ಅಪೇಕ್ಷಿಸುವುದು ಸರಿಯಾದ ನಿಲುವಲ್ಲ. ಬದುಕು ಹಿತ–ಅಹಿತಗಳ ಮಿಶ್ರಣ. ಹಾಲು ಬೇಕೆನ್ನುವವನು ಆಕಳ ಒದೆಗಳನ್ನೂ ಸಹಿಸಿಕೊಳ್ಳಲು ಸಿದ್ಧನಿರಬೇಕು’
[ನಿಸಾರ್ ಅಹಮದ್, ಸ-ರಸೋಕ್ತಿಗಳ ಸಂಗಾತಿ ಯಲ್ಲಿ].
ನಮ್ಮ ನಗು ಮುಖ ನಮಗೆ ಕಾಣಿಸುವುದು ಕಷ್ಟ. ಬೇರೆಯವರ ಮುಖದ ಮೇಲಿನ ನಗು ನಮಗೆ ಸುಲಭವಾಗಿ ಕಾಣಿಸುತ್ತದೆ. ಸುಲಭವಾಗಿ ಲಭಿಸುವ ಆ ನಗುವಿನಲ್ಲಿ ಸುಖ ಕಾಣುವುದು ಸಮಂಜಸವಲ್ಲವೇ? ಎಲ್ಲವೂ ನಮಗೇ ಮೊದಲು ದಕ್ಕಬೇಕು ಎನ್ನುವ ದುರ್ವ್ಯಾಮೋಹ ನಮಗೆ ಬೇಡ.
ಮೊದಲು ನಾನೆನಗೆ ಮೊದಲೂಟ ಮೊದಲಿನ ಪೀಠ |
ಮೊದಲು ನಾನೆನ್ನವರು ಬಳಿಕ ಉಳಿದವರು ||
ಇದು ಲೋಕದೆಲ್ಲ ಕಲಹಗಳ ದುಃಖದ ಮೂಲ |
ಅದುಮಿಕೊ ಅಹಂತೆಯನು – ಮರುಳ ಮುನಿಯ ||
ನಾನೇ ಮೊದಲು. ನನಗೇ ಮೊದಲ ಊಟವಾಗಬೇಕು, ನನಗೇ ಮೊದಲ ಪೀಠ ಸಲ್ಲತಕ್ಕದ್ದು. ಏನೇ ಆಗಲಿ ನಾನು, ನನ್ನವರು ಎಲ್ಲದರಲ್ಲೂ ಮೊದಲಿಗರು. ಬಳಿಕ ಉಳಿದವರು. ಮಾನವನ ಈ ತರದ ಧೋರಣೆಗಳೇ ಇಂದಿನ ಜಗತ್ತಿನ ಎಲ್ಲಾ ಕಲಹಗಳಿಗೂ, ತಿಕ್ಕಾಟಗಳಿಗೂ ಮೂಲ ಕಾರಣ, ದುಃಖಕ್ಕೆ ನಾಂದಿ, ಸುಖಕ್ಕೆ ಕಂಟಕ. ಇದಕ್ಕೆ `ಅಹಂ’ ಎಂದು ಕರೆಯುತ್ತಾರೆ. ಇದು ಸ್ವಾಭಿಮಾನವಲ್ಲ – ಸಂಕುಚಿತ ಸ್ವಾಭಿಮಾನ ಎಂದು ಕರೆಯಬಹುದೇನೊ? ಈ `ಅಹಂ’ ರೋಗಕ್ಕೆ ಬಲಿಯಾದವರಿಗೆ ಪರಿಸರದ ಪರಿವೆಯೇ ಇರುವುದಿಲ್ಲ. `ಅಹಂ’ ಇತ್ತೀಚೆಗೆ ಬಂದಿರುವ ಜಾಡ್ಯವೇನಲ್ಲ. 12ನೆಯ ಶತಮಾನದಲ್ಲಿಯೇ ಅಲ್ಲಮ ಪ್ರಭುಗಳು ತಮ್ಮ ವಚನವೊಂದರಲ್ಲಿ ಹೀಗೆ ಹೇಳಿದ್ದುಂಟು. `ನಾನೆಂಬಹಂಕಾರ ತಲೆದೋರಿದಲ್ಲಿ ಅಟಮಟ ಕುಟಿಲ ಕುಹಕವೆಂಬ ಬಿರುಗಾಳಿ ಹುಟ್ಟಿತ್ತು. ಆ ಬಿರುಗಾಳಿ ಹುಟ್ಟಿದೊಡನೆ ಜ್ಞಾನಜ್ಯೋತಿ ಕೆಟ್ಟಿತ್ತು. ಜ್ಞಾನಜ್ಯೋತಿ ಕೆಡಲೊಡನೆ ನಾ ಬಲ್ಲೆ ಬಲ್ಲಿದರೆಂಬ ಅರು ಹಿರಿಯರೆಲ್ಲರು ತಾಮಸಕ್ಕೊಳಗಾಗಿ ಸೀಮೆದಪ್ಪಿ ಕೆಟ್ಟರು ಕಾಣಾ ಗುಹೇಶ್ವರಾ
ಅಹಂಭಾವ ಮನದಲ್ಲಿ ಮೂಡಿದಾಗ ಮಾತಿನಲ್ಲಿ ಕೊಂಕು, ವ್ಯಂಗ್ಯ, ಮೋಸಗಾರಿಕೆ ಇವೆಲ್ಲವುಗಳು ಬಿರುಗಾಳಿಯಂತೆ ಹುಟ್ಟಿಕೊಳ್ಳುತ್ತವೆ. ಜ್ಞಾನದ ಬೆಳಕಿಗೆ ಬದಲಾಗಿ ಅಜ್ಞಾನ ತನ್ನ ಅಂಧಕಾರವನ್ನು ಮೆರೆಸುತ್ತದೆ. ಇದಕ್ಕೆ ಬಲಿಯಾದ ಬಲ್ಲಿದರೆನ್ನಿಸಿಕೊಂಡ ಗಣ್ಯ ವ್ಯಕ್ತಿಗಳೂ ತಾಮಸಿಗರಾಗಿ ಕೆಡುವುದರಲ್ಲಿ ಸಂದೇಹವಿಲ್ಲ ಎಂದು `ಅಹಂ’ ನಿಂದ ದೂರವಿರಲು ಎಚ್ಚರಿಕೆ ಕೊಟ್ಟಿದ್ದರು. ನೋಡಿ, ಸುಖ ಎಲ್ಲಿದೆ ಎಂದು ಹುಡುಕಿಕೊಂಡು ಹೋಗು ವುದರ ಅನರ್ಥಗಳು ಒಂದಕ್ಕೊಂದು ಅಂಟಿಕೊಂಡಂತೆ ಹೊರ ಬರುತ್ತವೆ. ಇದಕ್ಕೇ ಮನಸ್ಸನ್ನು ಹದ ಮಾಡಿಕೊಂಡು ಕಡಿವಾಣ ಹಾಕಿಟ್ಟಿರ ಬೇಕು. ಅದು ಎಲ್ಲೆಲ್ಲೋ ಓಡುತ್ತದೆ, ಏನೇನನ್ನೋ ಬಯಸುತ್ತದೆ.
ಮನಸು ಬೆಳೆದಂತೆಲ್ಲ ಹಸಿವು ಬೆಳೆಯುವುದಯ್ಯ |
ಪಣಿಸಲದನೊಗೆಯುವುದು ಬಗೆಬಗೆಯ ಯುಕ್ತಿ ||
ಮನುಜನೇಳಿಗೆಯದರಿನ್ ; ಆ ಮನಸಿನೇಳಿಗೆಗೆ |
ಕೊನೆಯಲ್ಲಿ ? ಚಿಂತಿಸೆಲೋ – ಮಂಕುತಿಮ್ಮ ||
ಇಲ್ಲಿ ಡಿ. ವಿ. ಜಿ. ಯವರು ಹೇಳುತ್ತಿರುವ ಮನಸ್ಸು `ಆಸೆ’ಗೆ ಬೆಂಬತ್ತಿರುವ ಮನಸ್ಸು. ಆಸೆಗೆ ತಕ್ಕಂತೆ ಅದರ ಶಮನಕ್ಕಾಗಿ ಹಸಿವೂ ಬೆಳೆಯುತ್ತದೆ. ಈ ಹಸಿವು ಒಡಲಿನ ಹಸಿವಲ್ಲ. ಮನಸ್ಸಿನ ಹಸಿವು. ಒಡಲಾಸೆಗೆ ಒಂದು ಮಿತಿಯುಂಟು. ಆದರೆ ಮನದಾಸೆ ಕಲ್ಪನಾತೀತವಾದ ಆಸೆ. ಅದರ ವಿಸ್ತೀರ್ಣ ಅಪಾರ. ಇದಕ್ಕೆ ಕೊನೆಯಿಲ್ಲ. ಆ ಸಿಗಲಾರದ ಕೊನೆ ಹುಡುಕುವ ವ್ಯಕ್ತಿಗೆ ಸುಖ ಇಲ್ಲ. ಆದ್ದರಿಂದ ಆಸೆಗೆ ಬಲಿಯಾಗದೆ ಇರುವಷ್ಟರಲ್ಲಿ ತೃಪ್ತಿಪಟ್ಟುಕೊಂಡರೆ ಆಗಷ್ಟೆ ಸುಖದ ಅರಿವು ತಾನೇ ತಾನಾಗಿ ಉಂಟಾಗುತ್ತದೆ ಎನ್ನುವ ಗೂಢಾರ್ಥ ಈ ಪದಗಳಲ್ಲಿ ಅಡಗಿದೆ.
ಸುಖ ಜೀವನಕ್ಕೆ ಯಾವುದೂ ಅತಿಯಾಗಿರುವುದು ಬೇಡ
ಸ್ಮಿತವಿರಲಿ ವದನದಲಿ, ಕಿವಿಗೆ ಕೇಳಿಸದಿರಲಿ |
ಹಿತವಿರಲಿ ವಚನದಲಿ, ಋತವ ಬಿಡದಿರಲಿ ||
ಮಿತವಿರಲಿ ಮನಸಿನುದ್ವೇಗದಲಿ, ಭೋಗದಲಿ |
ಅತಿ ಬೇಡವೆಲ್ಲಿಯುಂ – ಮಂಕುತಿಮ್ಮ ||
ಅತಿಯಾಗಿ ಯಾವುದನ್ನೂ ನಮ್ಮ ಬಳಿಯಿಟ್ಟುಕೊಳ್ಳಬಾರದು. ಇದ್ದವರು ಇಲ್ಲದವರ ಜೊತೆ ಸ್ವಲ್ಪ ಹಂಚಿಕೊಂಡರೆ, ಅವರ ಖಾತೆಯೇನೂ ಬರಿದಾಗಲಾರದು. ಆದರೆ ಅದರಿಂದ ಇನ್ನೊಂದು ಜೀವವೇ ಉಳಿದುಕೊಳ್ಳಬಹುದು. ಕೊಡುವುದರಲ್ಲಿರುವ ಸುಖ, ಸಂತೋಷ, ತೆಗೆದುಕೊಳ್ಳುವುದರಲ್ಲಿರುವುದಿಲ್ಲ. ಈ ಸತ್ಯ ಸಾಮಾನ್ಯವಾಗಿ ಪ್ರತಿಯೊಬ್ಬರಿಗೂ ಒಂದಲ್ಲ ಒಂದು ಸಮಯದಲ್ಲಿ ಗೋಚರವಾಗೇ ಇರುತ್ತದೆ. Happiness is not an endowment and not an acquisition. It is a state or condition of mind and not a commodity to be bought or sold in the market. ಸಂತೆಪೇಟೆಯ ಹಾದಿಯಲ್ಲಿ ಮಲಗಿರುವ ಚಿಂದಿ ಹೊದ್ದಿರುವ ಒಬ್ಬ ಭಿಕ್ಷುಕ, ಅರಮನೆಯ ಸುಪ್ಪತ್ತಿಗೆಯ ಮೇಲೆ ಮಲಗಿರುವ ಸಾಹುಕಾರನಿಗಿಂತ ಸುಖವಾಗಿ ನಿದ್ರಿಸುತ್ತಾನೆ. ಇಲ್ಲಿ ತಾನನುಭವಿಸುವ ಸಿರಿವಂತಿಕೆ ಆ ಭಿಕ್ಷುಕನಲ್ಲಿದೆ, ಸಾಹುಕಾರನಲ್ಲಿಲ್ಲ. ಸಾಹುಕಾರನ ಬಳಿಯಿರುವುದು ಪ್ರದರ್ಶನಕ್ಕೆ ಯೋಗ್ಯವಾದ ಸಿರಿವಂತಿಕೆಯೇ [exhibition quality richness] ಹೊರತು ಅನುಭವಿಸುವ ಸಿರಿವಂತಿಕೆಯಲ್ಲ. ಆದ್ದರಿಂದ ಸುಖಾನ್ವೇಷಣೆಗೆ ಸಮಯ ವ್ಯರ್ಥ ಮಾಡುವ ಬದಲು ನಮ್ಮ ನಮ್ಮ ಕಾಯಕಗಳಲ್ಲಿ ನಮ್ಮನ್ನು ತೊಡಗಿಸಿಕೊಂಡರೆ, ಸುಖವೇ ನಮ್ಮನ್ನು ಅನ್ವೇಷಣೆ ಮಾಡಿ ನಮ್ಮ ಬಳಿ ಓಡೋಡಿ ಬರುತ್ತದೆ. ಕಾಯಕವೇ ಕೈಲಾಸ!
ಅಣ್ಣಾಪುರ್ ಶಿವಕುಮಾರ್, ಲಿಬರ್ಟಿವಿಲ್
ಇಲಿನಾಯ್, ಯುಎಸ್ಎ.
[email protected]