ಕೊನೆಗೂ ಪೊಲೀಸ್‌ ಠಾಣೆಯ ಸಭೆಗೆ ಬಂದ ಕಾರಂತಜ್ಜ

ಕಡಲತೀರದ ಭಾರ್ಗವ ಎಂದೇ ಪ್ರಸಿದ್ಧಿಯಾಗಿದ್ದ ಕನ್ನಡದ ಮೇರು ಸಾಹಿತಿ ಕೋಟಾ ಶಿವರಾಮ ಕಾರಂತರವರು ನಮ್ಮನ್ನಗಲಿ ಇಂದಿಗೆ 23 ವರ್ಷಗಳು ಸಂದಿವೆ. ನಡೆದಾಡುವ ವಿಶ್ವಕೋಶದಂತಿದ್ದ ಕಾರಂತಜ್ಜ ಅವರು ಕನ್ನಡ ಸಾಹಿತ್ಯ-ಸಂಸ್ಕೃತಿಯ ವಕ್ತಾರ, ಕವಿ, ಕಾದಂಬರಿಕಾರ, ನಾಟಕಕಾರ, ಅನುವಾದಕ, ವೈಜ್ಞಾನಿಕ ಬರಹಗಾರ ಹೀಗೆ ನಾನಾ ಪ್ರಾಕಾರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಅಕ್ಷರ ಲೋಕವನ್ನು ಸಮೃದ್ಧಗೊಳಿಸಿದವರು. ಸಾಹಿತ್ಯ ಕೃಷಿಯಲ್ಲದೇ ಯಕ್ಷಗಾನ, ಪರಿಸರ ಕಾಳಜಿಯೂ ಅವರ ಆಸಕ್ತಿಗಳಾಗಿದ್ದವು. ಅವರ ಪುಣ್ಯಸ್ಮರಣೆಯ ಪ್ರಯುಕ್ತ ಹೀಗೊಂದು ಲೇಖನ….

ಕಾರಂತಜ್ಜನ ಒಡನಾಟದಿಂದ ನಾನು ಸೂಕ್ಷ್ಮವಾಗಿ ಅರ್ಥ ಮಾಡಿಕೊಂಡಂತೆ, ಅವರಿಗೆ ಮೊದ ಮೊದಲು ಪೊಲೀಸರ ಬಗ್ಗೆ ಒಂದು ಬಗೆಯ ತಾತ್ಸಾರ, ಸಣ್ಣ ಪ್ರಮಾಣದ ಸಿಟ್ಟೂ ಇದ್ದಂತಿತ್ತು. ಅದಕ್ಕೊಂದು ಪುಟ್ಟ ಹಿನ್ನೆಲೆಯೂ ಇದೆ. 1983-84ರ ಆಸುಪಾಸಿನಲ್ಲಿ ಒಮ್ಮೆ ಶಿವರಾಮ ಕಾರಂತರ ಮನೆಯಲ್ಲಿ ಕಳ್ಳತನವಾಗಿತ್ತಂತೆ. ಸ್ವಲ್ಪ ದುಬಾರಿ ಮೌಲ್ಯದ ಸರುಕುಗಳೇ ಕಾಣೆಯಾಗಿದ್ದವು. ಪೊಲೀಸರಿಗೆ ದೂರನ್ನೂ ಕೊಟ್ಟಿದ್ದರು. ಆದರೆ ಕಳ್ಳತನವನ್ನು ಭೇದಿಸುವಲ್ಲಿ ಪೊಲೀಸರು ಅಷ್ಟೇನು ಮುತುವರ್ಜಿ ತೋರಿಸಿರಲಿಲ್ಲವಂತೆ. ಇದರಿಂದ ಪೊಲೀಸ್ ಇಲಾಖೆಯ ಮೇಲೆಯೇ ಅವರಿಗೆ ಒಂದು ಬಗೆಯ ತಾತ್ಸಾರ ಮಡುಗಟ್ಟಿತ್ತು. 1987 ಅಕ್ಟೋಬರ್ 2 ರಂದು ಗಾಂಧಿ ಜಯಂತಿಯ ಶುಭ ದಿನದಂದು ಕೋಟಾ ಪೊಲೀಸ್ ಠಾಣೆಯ ಸಬ್‌ಇನ್ಸ್‌ಪೆಕ್ಟರ್ ಆಗಿ ನಾನು ಚಾರ್ಜ್ ತೆಗೆದುಕೊಂಡಾಗ, ಕನ್ನಡ ಸಾಹಿತ್ಯದ ಕುರಿತು ಅಪಾರ ಅಭಿರುಚಿ ಇರುವ ನನಗೆ ಸಹಜವಾಗಿಯೇ ನಮ್ಮದೇ ಠಾಣಾ ವ್ಯಾಪ್ತಿಯ ಸಾಲಿಗ್ರಾಮದಲ್ಲಿ ನೆಲೆಸಿರುವ ಕಾರಂತಜ್ಜನನ್ನು ಭೇಟಿ ಮಾಡಬೇಕೆಂಬ ಹಂಬಲ ಮೂಡಿತು. ನನ್ನ ಈ ಬಯಕೆಯನ್ನು ಅರಿತ ಸಿಬ್ಬಂದಿಗಳು, ಸಾರ್, ಕಾರಂತರಿಗೆ ಪೊಲೀಸರೆಂದರೆ ಅಷ್ಟಕ್ಕಷ್ಟೇ, ಯಾಕೆ ಅವರ ಉಸಾಬರಿಗೆ ಹೋಗಿ ಮುಖಭಂಗ ಮಾಡಿಸಿಕೊಳ್ತೀರಿ ಅನ್ನೋ ಗೀತೋಪದೇಶ ಮಾಡಿದರು. ಆದರೆ ನಾನು ಜಗ್ಗಲಿಲ್ಲ. 

ಒಂದು ದಿನ ಕಾರಂತಜ್ಜನ ಮನೆ `ಸುಹಾಸ್’ ಮೆಟ್ಟಿಲು ತುಳಿದೇಬಿಟ್ಟೆ. ತುಸು ಅಳುಕಿನಿಂದಲೇ ಒಳನಡೆದೆ. ನಮ್ಮ ಸಿಬ್ಬಂದಿಗಳು ಯಾವ ಪರಿ ಭಯವನ್ನು ನನ್ನಲ್ಲಿ ಮೂಡಿಸಿದ್ದರೆಂದರೆ, ನನ್ನ ಮೈಮೇಲಿನ ಸಮವಸ್ತ್ರ ನೋಡುತ್ತಿದ್ದಂತೆಯೇ ಕ್ಯಾಕರಿಸಿ ಉಗಿದು ಕಳಿಸಿಬಿಡುತ್ತಾರೇನೋ ಎಂಬ ಆತಂಕ ನನ್ನಲ್ಲಿತ್ತು. ನಮ್ಮ ಸಿಬ್ಬಂದಿಗಳಷ್ಟೇ ಅಲ್ಲ, ನನಗೆ ಪರಿಚಯವಿದ್ದ ಅದೇ ಸಾಲಿಗ್ರಾಮದ ಅನೇಕರು ಸೂಕ್ಷ್ಮ ಸ್ವಭಾವದ ಕಾರಂತರನ್ನು ಮಾತನಾಡಿಸುವುದಕ್ಕೇ ಹೆದರಿಕೊಳ್ಳುತ್ತಿದ್ದ ಅನುಭವಗಳನ್ನೂ ನಾನು ಕೇಳಿದ್ದೆ. ಆದರೆ ಅಂತದ್ದೇನೂ ಘಟಿಸಲಿಲ್ಲ. ಮನೆಯಲ್ಲೇ ಇದ್ದ ಅವರು ನನ್ನನ್ನು ಆತ್ಮೀಯತೆಯಿಂದಲೇ ಸ್ವಾಗತಿಸಿದರು. ಅಷ್ಟೇ ತಲ್ಲೀನತೆಯಿಂದ ನನ್ನೊಂದಿಗೆ ಲೋಕಾರೂಢಿ ಹರಟಿದರು. ಅಲ್ಲಿಂದಾಚೆಗೆ ಆಗಾಗ್ಗೆ ಅವರ ಮನೆಗೆ ಭೇಟಿ ನೀಡಿ, ಅವರು ವಿರಾಮದಿಂದಿದ್ದರೆ ಹರಟೆ ಹೊಡೆದು ಬರುವ ಪರಿಪಾಠ ಬೆಳೆಸಿಕೊಂಡೆ. 

ಸಾಮಾನ್ಯವಾಗಿ ಎಲ್ಲಾ ಪೊಲೀಸ್ ಠಾಣೆಗಳಲ್ಲಿ ಪ್ರತಿ ತಿಂಗಳಿಗೊಮ್ಮೆ ನಾಗರಿಕ ಸಮಿತಿ ಸಭೆ ನಡೆಸುವ ಪ್ರತೀತಿ ಇದೆ. ಅಂತೆಯೇ ಕೋಟ ಪೊಲೀಸ್ ಠಾಣಾ ಪ್ರಭಾರ ವಹಿಸಿಕೊಂಡ ನಂತರ ಮೊದಲ ನಾಗರಿಕ ಸಮಿತಿ ಸಭೆಗೆ ಏನಾದರೂ ಮಾಡಿ ಡಾ. ಶಿವರಾಮ ಕಾರಂತರನ್ನು ಕರೆಸಲೇಬೇಕೆಂದು ಮನಸ್ಸಿನಲ್ಲಿ ಕಾಡುತ್ತಿತ್ತು. ಹಾಗಾಗಿ ನಾಗರಿಕ ಸಮಿತಿಯ ಮೂವತ್ತು  ಸದಸ್ಯರ ಪಟ್ಟಿಯನ್ನು ನವೀಕರಿಸಲು ನಿರ್ಧರಿಸಿದೆ. ಈ ಪಟ್ಟಿಗೆ ಕಾರಂತಜ್ಜರನ್ನು ಸೇರಿಸುವುದು ನನ್ನ ಇರಾದೆಯಾಗಿತ್ತು. ಒಂದು ಸಂಜೆ ಅವರ ಮನೆಗೆ ಹೋಗಿ ಅಳುಕಿನಿಂದಲೇ ಅವರ ಅನುಮತಿ ಕೇಳಿದೆ. ಸಭೆಯ ವಿಚಾರ, ಕಾರ್ಯವೈಖರಿ, ಉದ್ದೇಶ ಮೊದಲಾದವುಗಳನ್ನು ನನ್ನೊಂದಿಗೆ ಚರ್ಚಿಸಿ ನಂತರ ಒಪ್ಪಿಗೆ ಕೊಟ್ಟರು. ನನಗೋ ಎಲ್ಲಿಲ್ಲದ ಖುಷಿ. 1987ರ ನವೆಂಬರ್ ತಿಂಗಳ ಒಂದು ದಿನ ಸಭೆಯ ದಿನಾಂಕ ಗೊತ್ತು ಮಾಡಿ ಎಲ್ಲರಿಗೂ ಸುದ್ದಿ ತಲುಪಿಸುವ ವ್ಯವಸ್ಥೆ ಮಾಡಿದೆ.

ಕಾರಂತಜ್ಜ ಈ ಪೊಲೀಸ್ ಸಭೆಗೆ ಬರುತ್ತಿರೋ ವಿಚಾರ ಕೇಳಿ ಇತರೆ ಸದಸ್ಯರೆಲ್ಲಾ ಅಚ್ಚರಿ ವ್ಯಕ್ತಪಡಿಸಿದರು. ‘ಇಲ್ಲಾ, ಅವರು ಬರೋಲ್ಲ’ ಬಿಡಿ ಎಂಬ ನಕಾರಾತ್ಮಕ ಮಾತುಗಳನ್ನೇ ಆಡಿದರು. ಆದರೆ ನನಗೆ ವಿಶ್ವಾಸವಿತ್ತು. ಈ ಕೌತುಕ ನೋಡುವುದಕ್ಕೋ ಏನೋ, ಸಭೆಯ ದಿನ ಪಟ್ಟಿಯಲ್ಲಿದ್ದ ಮೂವತ್ತು ಸದಸ್ಯರ ಪೈಕಿ ದಾಖಲೆಯ ಇಪ್ಪತ್ತೇಳು ಜನ ಅವಧಿಗೂ ಮುನ್ನವೇ ಠಾಣೆಯಲ್ಲಿ ಬಂದು ಜಮಾಯಿಸಿದರು. ಅವರ ಉತ್ಸಾಹ ಕಂಡು ನನಗೂ ಕೊಂಚ ದಿಗಿಲು ಶುರುವಾಯ್ತು. ಕಾರಂತಜ್ಜ ಕೊನೇ ಘಳಿಗೆಯಲ್ಲಿ ಮನಸ್ಸು ಬದಲಾಯಿಸಿಬಿಟ್ಟರೆ, ಇವರೆದುರಿಗೆ ಮುಜುಗರ ಅನುಭವಿಸಬೇಕಾಗುತ್ತದಲ್ಲ ಅಂತ ಒಳಗೊಳಗೇ ಗಲಿಬಿಲಿಗೊಂಡೆ. ಕಾರಂತರನ್ನು ಕರೆತರಲು ಒಬ್ಬ ಎ.ಎಸ್.ಐ.ಗೆ ಹೇಳಿ ಕಾರಿನ ವ್ಯವಸ್ಥೆ ಮಾಡಿ ಕಳಿಸಿದೆ.

ಕೊನೆಗೂ ಕಾರಂತರು ಸಭೆಗೆ ಬಂದೇ ಬಿಟ್ಟರು. ಎಲ್ಲರಿಗೂ ಆಶ್ಚರ್ಯ! ನನಗೆ ಮಾತ್ರ ನಿಟ್ಟುಸಿರು!!. ಹಾರ ಹಾಕಿ ಸ್ವಾಗತಿಸಿ ಸಭೆ ಶುರು ಮಾಡಿದೆವು. ಸುಮಾರು ಎರಡು ಗಂಟೆ ಕಾಲ ನಡೆದ ಸಭೆಯುದ್ದಕ್ಕೂ ಉಪಸ್ಥಿತರಿದ್ದ ಕಾರಂತಜ್ಜ ಅಪರಾಧ ತಡೆ, ಸುಗಮ ಸಂಚಾರ ಸುವ್ಯವಸ್ಥೆ ಹಾಗೂ ಸಾಮಾಜಿಕ ಪಿಡುಗುಗಳನ್ನು ಹತ್ತಿಕ್ಕುವ ಬಗ್ಗೆ ಬಹಳಷ್ಟು ಉಪಯುಕ್ತ ಸಲಹೆ ನೀಡಿದರು. ಕೊನೆಗೆ, ಕಾರಿನಲ್ಲೇ ಅವರನ್ನು ಬೀಳ್ಕೊಡುವ ವ್ಯವಸ್ಥೆ ಮಾಡಿದೆವು. ಅಂತೂ ಕಾರಂತರನ್ನು ಠಾಣೆಗೆ ಕರೆಸಿದ ನನ್ನ ‘ಸಾಹಸ’(!)ವನ್ನು ಎಲ್ಲರು ಅವತ್ತು ಕೊಂಡಾಡಿದ್ದೇ, ಕೊಂಡಾಡಿದ್ದು!! ನಾನೂ ಹಿರಿಹಿರಿ ಹಿಗ್ಗಿ ಹೋದೆ. ಮಾರನೇ ದಿನ `ಉದಯವಾಣಿ’ ಪತ್ರಿಕೆಯಲ್ಲಿ ಕೋಟ ಪೊಲೀಸ್ ಠಾಣೆಯಲ್ಲಿ ಡಾ.ಶಿವರಾಮ ಕಾರಂತರು ಎನ್ನುವ ಶೀರ್ಷಿಕೆಯಲ್ಲಿ ನಾಗರಿಕ ಸಮಿತಿ ಸಭೆಯ ನಡವಳಿಗಳ ಕುರಿತು ಲೇಖನ ಪ್ರಕಟವಾಗಿತ್ತು.

ನನ್ನ ಪಾಲಿನ ಅತಿದೊಡ್ಡ ದುರದೃಷ್ಟಕರ ಸಂಗತಿಯೆಂದರೆ,ಈ ಖಾಕಿ ಸಮವಸ್ತ್ರದ ಹೊಣೆ ಹೊತ್ತೇ ನಾನು ಅವರ ಅಂತ್ಯಸಂಸ್ಕಾರದ ಬಂದೋಬಸ್ತ್ ಡ್ಯೂಟಿಯನ್ನೂ ಮಾಡಬೇಕಾಗಿ ಬಂದದ್ದು. 1997 ರಲ್ಲಿ ನಾನು ಕಾರ್ಕಳದ ಸರ್ಕಲ್ ಇನ್ಸ್‌ಪೆಕ್ಟರ್ ಆಗಿ ಕೆಲಸ ಮಾಡುತ್ತಿದ್ದೆ. ಡಿಸೆಂಬರ್ 9 ರ ಮುಂಜಾನೆ ಉಡುಪಿಯ ಎಸ್.ಪಿ.ಯವರು ಫೋನ್ ಮಾಡಿ, ‘ಶಿವರಾಮ ಕಾರಂತರು ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದಿದ್ದಾರೆ. ಅವರ ಹುಟ್ಟೂರು ಕೋಟಾದಲ್ಲೇ ಅಂತ್ಯಸಂಸ್ಕಾರ ನಡೆಯಲಿದ್ದು, ಕೂಡಲೇ ಸ್ಥಳಕ್ಕೆ ಹೋಗಿ ಬಂದೋಬಸ್ತ್ ಉಸ್ತುವಾರಿ ವಹಿಸಿ’ ಎಂದರು. ಎರಡು ದಿನದ ಹಿಂದಷ್ಟೇ, ಅವರು ಆಸ್ಪತ್ರೆಗೆ ದಾಖಲಾಗಿದ್ದಾಗ, ಯೋಗಕ್ಷೇಮ ವಿಚಾರಿಸಲೆಂದು ಬಂದಿದ್ದ ಅಂದಿನ ಮುಖ್ಯಮಂತ್ರಿ ಜೆ.ಎಚ್.ಪಟೇಲರು ಹಾಗೂ ಸಚಿವರಾಗಿದ್ದ ಅನಂತನಾಗ್ ಅವರ ಸಂಗಡ ನಾನೂ ಹೋಗಿ ಹಾಸಿಗೆ ಮೇಲೆ ಪ್ರಜ್ಞಾಹೀನರಾಗಿ ಮಲಗಿದ್ದ ಕಾರಂತಜ್ಜರನ್ನು ಕಣ್ತುಂಬಿಕೊಂಡು ಬಂದಿದ್ದೆ. ಆದಷ್ಟು ಬೇಗ ಅವರು ಗುಣಮುಖರಾಗಲಿ ಎಂಬ ನನ್ನ ಮನವಿ ದೇವರನ್ನು ತಲುಪುವ ಮೊದಲೇ, ಕಾರಂತರ ಅಗಲಿಕೆಯ ಬೇಸರದ ವಾರ್ತೆ ನನ್ನನ್ನು ದುಃಖಕ್ಕೀಡು ಮಾಡಿತ್ತು.

ಉಡುಪಿ-ಕುಂದಾಪುರ ಮುಖ್ಯರಸ್ತೆಯಲ್ಲಿರುವ ಶ್ರೀ ಶಿವರಾಮ ಕಾರಂತರವರ ಹಳೆಯ ಮನೆ ಬಳಿ ಸೂಕ್ತ ಪೊಲೀಸ್ ಸಿಬ್ಬಂದಿಗಳನ್ನು ಕರ್ತವ್ಯಕ್ಕೆ ನಿಯೋಜಿಸಿದೆ.  ಬೆಳಿಗ್ಗೆ ಸುಮಾರು 11 ಗಂಟೆಗೆ  ಡಾ.ಶಿವರಾಮ ಕಾರಂತರ ಪಾರ್ಥಿವ ಶರೀರವು ಆಂಬ್ಯುಲೆನ್ಸ್ ಮೂಲಕ ಬಂದು ತಲುಪಿತು. ಅವತ್ತು ಕಾರಂತಜ್ಜನಿಗೆ ವಿದಾಯ ಹೇಳಲು ಸುಮಾರು ನಾಲ್ಕೈದು ಸಾವಿರ ಜನ ನೆರೆದಿದ್ದರು. ಸಾರ್ವಜನಿಕ ದರ್ಶನದ ನಂತರ ಸಂಜೆ ಸುಮಾರು 5-30ಕ್ಕೆ ಮನೆಯ ಹಿಂಭಾಗದ ತೋಟದಲ್ಲಿ ಮೊದಲೇ ಸಿದ್ದಪಡಿಸಿದ್ದ ಚಿತೆಯೇರಿದ ಕಾರಂತಜ್ಜನ ಶರೀರ ತನ್ನೆಲ್ಲಾ ಚೇತನವನ್ನು ನಮ್ಮಲ್ಲೇ ಉಳಿಸಿ, ನಿಸರ್ಗದಲ್ಲಿ ಲೀನವಾಯ್ತು. ಇತ್ತ ಚಿತೆಯ ಕೆನ್ನಾಲೆಗಳು ಕಡಲ ಭಾರ್ಗವನನ್ನು ತಬ್ಬಲು ಮುಗಿಲತ್ತ ಮುಖ ಮಾಡಿ ಸ್ಪರ್ಧೆಗಿಳಿದಿದ್ದರೆ, ಅತ್ತ ಪಡುವಣ ದಿಕ್ಕಿನಲ್ಲಿ ನೇಸರ ಕೂಡಾ ಭಾರವಾದ ಮನಸ್ಸಿನಿಂದ ಕಡಲಾಳದಲ್ಲಿ ಲೀನವಾಗುತ್ತಿದ್ದ.


ಕೊನೆಗೂ ಪೊಲೀಸ್‌ ಠಾಣೆಯ ಸಭೆಗೆ ಬಂದ ಕಾರಂತಜ್ಜ - Janathavani– ಜಿ.ಎ. ಜಗದೀಶ್,
ಪೊಲೀಸ್ ಅಧೀಕ್ಷಕರು (ನಿ)
ದಾವಣಗೆರೆ.

error: Content is protected !!