ಕೆಂಗಪ್ಪು ಚುಕ್ಕೆ ಪಾತರಗಿತ್ತಿಯ ಚಿತ್ತಾರ….

ಪಾತರಗಿತ್ತಿಗಳ ವರ್ಣ ಸಂಕರದಲ್ಲಿ ವಿಶೇಷತೆಯಿದೆ. ಪ್ರಾಣಿಗಳಲ್ಲಿ ಅತೀ ಹೆಚ್ಚು ವೈವಿಧ್ಯತೆಯನ್ನು ಹೊಂದಿರುವ ಕೀಟ ಪ್ರಪಂಚದ ಸದಸ್ಯರು ಈ ಪಾತರಗಿತ್ತಿಯರು.  ತಮ್ಮ ವರ್ಣ ಸಂಯೋಜನೆಯಲ್ಲಿ ಸಸ್ಯ ಲೋಕದ ಹೂಗಳೊಂದಿಗೆ ಪೈಪೋಟಿಯಿದೆಯೇನೋ ಎನ್ನಿಸುತ್ತದೆ.  ಅಂತಹ ಗುಂಪಿನ ಸದಸ್ಯ ಕೆಂಪು-ಕಪ್ಪು ಚುಕ್ಕೆ ಚಿಟ್ಟೆ (Red Pierrot). ತನ್ನಲ್ಲಿರುವ ಮೂರು ಬಣ್ಣಗಳನ್ನೇ ಉಪಯೋಗಿಸಿ ತನ್ನದೇ ವೈಶಿಷ್ಟ್ಯತೆಯನ್ನು ಹೊಂದಿದೆ.

ಈ ಚಿಟ್ಟೆಗಳ ಮೇಲ್ಭಾಗ ಕಪ್ಪು ಮಿಶ್ರಿತ ಕಂದು. ಹಿಂದಿನ ರೆಕ್ಕೆಯ ಎರಡನೇ ಮೂರರಷ್ಟು ಕೆಳಭಾಗ ಕೆಂಪು ಅಥವಾ ಕಿತ್ತಳೆ-ಕೆಂಪು ಬಣ್ಣದಿಂದ ಕೂಡಿದ್ದು ಬಿಳಿ ಚುಕ್ಕೆಗಳಿವೆ.  ತುದಿಯಲ್ಲಿ ಸೂಕ್ಷ್ಮವಾದ ಕಂದು ಬಾಲವಿರುವುದು. ದೇಹದ ಕೆಳಗಿನ ಭಾಗವು ಬಿಳಿ ಬಣ್ಣದಿಂದ ಕೂಡಿದ್ದರೂ ಮುಂದಿನ ರೆಕ್ಕೆಗಳ ಅಂಚಿನಲ್ಲಿ ಕಪ್ಪು ಪಟ್ಟಿಯಿದ್ದು, ಬಿಳಿ ಚುಕ್ಕೆಗಳನ್ನು ಹೊಂದಿದೆ. ಹಿಂದಿನ ರೆಕ್ಕೆಯಲ್ಲಿ ಕಿತ್ತಳೆ-ಕೆಂಪು ಅಂಚಿದ್ದು, ಬಿಳಿ ಚುಕ್ಕೆಗಳಿವೆ. ಉಳಿದಂತೆ ಎರಡು ರೆಕ್ಕೆಗಳು ಬಿಳಿ ಬಣ್ಣದಿಂದಿದ್ದು ಕಪ್ಪು ಚುಕ್ಕೆಗಳನ್ನು ಕಾಣಬಹುದು. 

ಗಾತ್ರದಲ್ಲಿ ಸಣ್ಣ ಚಿಟ್ಟೆಯಾಗಿದ್ದು, ರೆಕ್ಕೆ ಹರಡಿದಾಗ ಗರಿಷ್ಠ ಮೂರುವರೆ ಸೆಂಟಿಮೀಟರ್ ಇರುತ್ತದೆ. ಸಾಧಾರಣ ಮತ್ತು ನಿಧಾನ ಹಾರಾಟಗಾರ. ಹೆಚ್ಚು ಎತ್ತರಕ್ಕೇರದೆ ನೆಲದ ಹತ್ತಿರ ಮೆಲ್ಲಗೆ ಹಾರಾಡುತ್ತಿರುತ್ತವೆ.

ಇದರ ಕಂಬಳಿ ಹುಳು ಪೇಲವ-ಹಳದಿ ಅಥವಾ ಬಿಳಿ ಬಣ್ಣದ್ದಾಗಿದ್ದು, ಮೈತುಂಬಾ ಸಣ್ಣ ಕೂದಲುಗಳನ್ನು ಹೊಂದಿರುತ್ತದೆ. ತಲೆ ಸಣ್ಣಗಿದ್ದು, ದೇಹದ ಕೆಳಭಾಗದಲ್ಲಿ ನಾಲ್ಕು ಚುಕ್ಕೆಗಳಿರುವ ಉಂಗುರಗಳು ಕಾಣಸಿಗುತ್ತವೆ. ಕೆಳಭಾಗದಲ್ಲಿ ತೆಳ್ಳನೆಯ ಹಸಿರು ಗೆರೆಯಿರುತ್ತದೆ. ದೇಹದ ಪಾರ್ಶ್ವಗಳಲ್ಲಿ ಒಂಬತ್ತು ಚುಕ್ಕೆಗಳಿರುತ್ತವೆ.

ಕುರುಚಲು ಕಾಡು ಮತ್ತು ನಿತ್ಯ ಹರಿದ್ವರ್ಣ ಕಾಡುಗಳಲ್ಲಿಯೂ ಪ್ರಮುಖವಾಗಿ ಕಾಣಸಿಗುವ ಈ ಚಿಟ್ಟೆಗಳು ಲೈಕಾನಿಡೆ (Lycaenidae) ಕುಟುಂಬಕ್ಕೆ ಸೇರಿವೆ.  ಪ್ರಾಣಿಶಾಸ್ತ್ರೀಯವಾಗಿ ಟೆಲಿಕಾಡ ನೈಸೆಯಿಸ್ ನೈಸೆಯಿಸ್ (Talicada nyseus nyseus)  ಎಂದು ಕರೆಯಲ್ಪಡುತ್ತವೆ.

ದಕ್ಷಿಣ ಭಾರತದ ರಾಜ್ಯಗಳಲ್ಲದೆ ಒರಿಸ್ಸಾ, ಅಸ್ಸಾಂ ಮತ್ತು ಇತರೆ ಈಶಾನ್ಯ ಭಾರತದ ರಾಜ್ಯಗಳಲ್ಲಿಯೂ ಕಾಣಸಿಗುತ್ತವೆ. ಬೇರೆ ದೇಶಗಳಾದ ಶ್ರೀಲಂಕಾ, ಪಾಕಿಸ್ತಾನ, ಬಾಂಗ್ಲಾದೇಶ, ಮಯನ್ಮಾರ್ ನಲ್ಲಿಯೂ ವಾಸಿಸುತ್ತವೆ.

ಮೂರು-ನಾಲ್ಕು ದಿನಗಳ ಜೀವನದಲ್ಲಿ ಬಣ್ಣದ ಚಿತ್ತಾರ ಮೂಡಿಸಿ, ಸಸ್ಯಗಳ ಬೀಜಾಂಕುರಕ್ಕೆ ಸಹಾಯ ಮಾಡಿ, ಕಣ್ಮನ ತಣಿಸಿ ಮರೆಯಾಗುವ ಚಿಟ್ಟೆಗಳ ಜೀವನದ ಸಾರ್ಥಕತೆ ಮಾನವ ಬದುಕಿನ ಪರಿಗೊಂದು ಅರ್ಥ/ಅಪಾರ್ಥ ಕಲ್ಪಿಸುವುದಲ್ಲವೇ?


– ಡಾ. ಎಸ್. ಶಿಶುಪಾಲ, 
ಪ್ರಾಧ್ಯಾಪಕರು
ಸೂಕ್ಷ್ಮಜೀವಿಶಾಸ್ತ್ರ ವಿಭಾಗ, ದಾವಣಗೆರೆ.
[email protected]

error: Content is protected !!