ಶಿಕ್ಷಣದ ಬಾಗಿಲು ಮುಚ್ಚಿದರೆ ದೌರ್ಭಾಗ್ಯ

ದೀಪಾವಳಿಯ ಮಾರ್ಕೆಟ್, ಚುನಾವಣಾ ದಾಂಧಲೆ, ದೆಹಲಿ ಪ್ರತಿಭಟನೆಗಳ ಗದ್ದಲ ಎಲ್ಲೂ ಬಾರದ ಕೊರೊನಾ, ಶಾಲೆಗಳ ಅಂಗಳದಲ್ಲಿ ಹೊಂಚು ಹಾಕಿ ಸಂಚು ನಡೆಸಿದೆ ಎಂಬಂತಿದೆ ಈ ಜನರ ವರ್ತನೆ. 

ಕೊರೊನಾ ಬಂತೆಂದು ಶಾಲೆ ಮುಚ್ಚಿಬಿಡಿ ಎನ್ನುವವರಿಗೆ ಸಾರ್ವತ್ರಿಕ ಶಿಕ್ಷಣ ಕೇವಲ ಎಂಬ ಭಾವನೆ ಇದೆಯೇ ಎಂಬ ಭಾವನೆಯೂ ಕಾಡುತ್ತಿದೆ. ಏಕೆಂದರೆ ಮನುಷ್ಯ ನಾಗರಿಕನಾದ ನಂತರ ಸಮಾಜದ ಎಲ್ಲ ವರ್ಗಗಳಿಗೆ ಶಿಕ್ಷಣ ತಲುಪಲು ಹತ್ತಾರು ಸಾವಿರ ವರ್ಷಗಳೇ ಬೇಕಾದವು!

ಪುರೋಹಿತಶಾಹಿಗಳು, ಪಟ್ಟಭದ್ರರು, ಸಿರಿವಂತರು ಶಿಕ್ಷಣವನ್ನು ತಮ್ಮ ವೈಯಕ್ತಿಕ ಆಸ್ತಿ ಮಾಡಿಕೊಂಡಿದ್ದರು. ಉನ್ನತರ ಕಪಿಮುಷ್ಠಿಯಲ್ಲಿದ್ದ ಶಿಕ್ಷಣವನ್ನು ಶೂದ್ರರು, ಅಸ್ಪೃಶ್ಯರು, ಮಹಿಳೆಯರು ಪಡೆಯಲಿಕ್ಕಾಗಿ ಶತಮಾನಗಳ ಹೋರಾಟವನ್ನೇ ನಡೆಸಬೇಕಾಯಿತು.

ಈಗ ಕೊರೊನಾ ಬಂತೆಂದು ಸಾವಿರಾರು ವರ್ಷಗಳ ಹೋರಾಟದ ಫಲ ಕಹಿ ಎಂದುಕೊಳ್ಳಬೇಕೇ? 2020 ಇಡೀ ವರ್ಷ ಸರ್ಕಾರಿ ಶಾಲಾ ಮಕ್ಕಳು ನೇರ ಶಿಕ್ಷಣದಿಂದ ವಂಚಿತರಾಗಿದ್ದಾರೆ. ಉಳ್ಳವರು, ಪಟ್ಟಣದಲ್ಲಿರುವವರು ಆನ್‌ಲೈನ್‌ ಮೂಲಕ ಮಕ್ಕಳ ಶಿಕ್ಷಣವನ್ನು ಅಷ್ಟೋ ಇಷ್ಟೋ ಉಳಿಸಿಕೊಳ್ಳಲು ಯಶಸ್ವಿಯಾಗಿದ್ದಾರೆ.

ಇದು ಇನ್ನಷ್ಟು ದಿನ ಮುಂದುವರೆದರೆ ಹಳ್ಳಿಗಾಡಿನ, ದಲಿತರ, ಬಡವರ ಮಕ್ಕಳು ಶಿಕ್ಷಣದಲ್ಲಿ ಸಂಪೂರ್ಣ ಹಿಂದೆ ಬೀಳಲಿದ್ದಾರೆ. ನಂತರ ಅವರನ್ನು ಒಂದು ಹಂತಕ್ಕೆ ತರುವಷ್ಟರಲ್ಲಿ ಆನ್‌ಲೈನ್‌ ಮಕ್ಕಳು ಶಿಕ್ಷಣದಲ್ಲಿ ನಾಗಾಲೋಟಕ್ಕೆ ಹೋಗುತ್ತಾರೆ. ನಂತರ ಉಳ್ಳವರು – ಬಡವರ ಮಕ್ಕಳ ನಡುವೆ ಶಿಕ್ಷಣದಲ್ಲಿ ನೀಗಿಸಲಾಗದ ಅಸಮಾನತೆಯ ಬಿರುಕು ಉಂಟಾಗುವ ಅಪಾಯವೂ ಇದೆ.

ಶಿಕ್ಷಣ, ಸಂಘಟನೆ ಹಾಗೂ ಹೋರಾಟ ಎಂಬುದು ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಮೂಲ ಮಂತ್ರಗಳಾಗಿದ್ದವು. ಸಂಘಟನೆ ಹಾಗೂ ಹೋರಾಟಗಳು ಆರಂಭವಾಗವುದೇ ಶಿಕ್ಷಣದಿಂದ. ಶಿಕ್ಷಣವೇ ಸಮಾನತೆಗೆ ಮೂಲ ಆಧಾರ. ಶಿಕ್ಷಣವೇ ಭವಿಷ್ಯದ ಬಾಗಿಲು ತೆರೆಯುವ ಕೀಲಿ. ಅಂತಹ ಶಿಕ್ಷಣವನ್ನು ಕಡೆಗಣಿಸಿದ ಪೀಳಿಗೆ ದೌರ್ಭಾಗ್ಯದ ಕೂಪಕ್ಕೆ ಬೀಳುವುದರಲ್ಲಿ ಸಂಶಯವಿಲ್ಲ. 


ಎಸ್.ಎ. ಶ್ರೀನಿವಾಸ್‌
[email protected]

 

error: Content is protected !!