ಹನ್ನೆರಡನೆಯ ಶತಮಾನದಲ್ಲಿ ಮಹಿಳೆಯರ ಸಬಲೀಕರಣ ಕ್ರಾಂತಿ

ಪೆಣ್ಣಿಂದ ಪೆರ್ಮೆಗೊಂಡನು ಹಿಮವಂತನು
ಪೆಣ್ಣಿಂದ ಭೃಗು ಪೆರ್ಚಿದನು
ಪೆಣ್ಣಿಂದ ಜನಕರಾಯನು ಜಸವಡೆದನು
ಪೆಣ್ಣ ನಿಂದಿಸಲೇಕೆ ಪೆರರು?
ಪೆಣ್ಣಲ್ಲವೇ ನಮ್ಮನ್ನೆಲ್ಲ ಪಡೆದ ತಾಯಿ
ಪೆಣ್ಣಲ್ಲವೇ ನಮ್ಮನೆಲ್ಲ ಪೊರೆದವಳು
ಪೆಣ್ಣು ಪೇಣ್ಣೆಂದು ಬೀಳುಗಳೆವರೇಕೆ
ಕಣ್ಣು ಕಾಣದ ಗಾವಿಲರು.

– ನಮ್ಮೆಲ್ಲರನ್ನು ಹಡೆದು, ಸಾಕಿ, ಸಲಹಿ ಪೋಷಿಸಿದವಳು ಹೆಣ್ಣಲ್ಲವೇ? ಹೀಗಿದ್ದೂ ಹೆಣ್ಣನ್ನು ಮೂದಲಿಸುವ ಈ ಜನ ಕಣ್ಣಿದ್ದೂ ಕುರುಡರಾದ ಮೂಢರಲ್ಲವೇ? ಎಂದು ಪ್ರಶ್ನಿಸಿದ್ದಾಳೆ. ಹದಿನಾರನೆಯ ಶತಮಾನದಲ್ಲಿ ಮೈಸೂರಿನ ಅರಸರಾಗಿದ್ದ ಚಿಕ್ಕದೇವರಾಜ ಒಡೆಯರ ಊಳಿಗದಲ್ಲಿದ್ದ ಸಂಚಿ ಹೊನ್ನಮ್ಮ. ಗೃಹಿಣಿಯರಿಗಾಗಿ `ಹದಿಬದೆಯ ಧರ್ಮ’ ಎಂಬ ಧರ್ಮ ಕೈಪಿಡಿಯೊಂದನ್ನು ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಒದಗಿಸಿ ಪ್ರಸಿದ್ಧಿಯಾದವಳು ಈಕೆ. ಸ್ತ್ರೀಯರ ಬಗ್ಗೆ ಆಗ ಇದ್ದ ಈ ಸನ್ನಿವೇಶ ಇಂದು ಬದಲಾಗಿದೆಯೇ? ಸರ್ವ ಕ್ಷೇತ್ರಗಳಲ್ಲಿಯೂ ಮಹಿಳೆಯ ಸಾಧನೆ ಕಂಡು ಬಂದರೂ ಸಮಾಜದಲ್ಲಿ ಆಕೆಯ ಬಗ್ಗೆ ಇರುವ ಮನೋಭಾವದಲ್ಲಿ ಇನ್ನೂ ಕೊರತೆಯಿರುವುದಂತೂ ಖಂಡಿತ. ಮಹಿಳೆಯರ ಹಕ್ಕು, ಬಾಧ್ಯತೆಗಳಿಗೆ ಬಸವ ಪ್ರೇರಿತ ಶರಣ ಸಮಾಜ ಹನ್ನೆರಡನೆಯ ಶತಮಾನದಲ್ಲಿಯೇ ಒಂದು ದೊಡ್ಡ ಕ್ರಾಂತಿಯನ್ನೇ ಮಾಡಿತು.

ಹನ್ನೆರಡನೆಯ ಶತಮಾನ ಭಾರತ ದೇಶದ ಒಂದು ಮಹತ್ವ ಪೂರ್ಣ ಕಾಲ ಎನ್ನಬಹುದು. ಆಗ ಜನಾಂಗದಲ್ಲಿ `ನಾನ್ಹೆಚ್ಚು-ನೀ ಕೀಳು’ ಎನ್ನುವ ಅಹಂ ಮನೋಭಾವ ತುಂಬಿ ತುಳುಕಿತ್ತು. ಮನುಸ್ಮೃತಿಯಿಂದ ಪ್ರಚೋದಿತವಾದ ಸಮಾಜ ಸ್ತ್ರೀಯರನ್ನು ವರ್ಣಾಶ್ರಮ ಧರ್ಮದ ನಾಲ್ಕನೆಯ ಸ್ಥಾನದಲ್ಲಿದ್ದ ಶೂದ್ರವರ್ಣಕ್ಕೆ ಇಳಿಸಿತ್ತು. ಮನುವಿನ ಪ್ರಕಾರ ಸ್ತ್ರೀಯಾದವಳು ಜನ್ಮಪೂರ್ತಿ ಪರಾಧೀನಳು. ಬಾಲ್ಯದಲ್ಲಿ ತಂದೆಯ ಅಧೀನದಲ್ಲಿ, ಮದುವೆಯ ಬಳಿಕ ಗಂಡನ ಊಳಿಗದಲ್ಲಿ, ವೃದ್ಧಾಪ್ಯದಲ್ಲಿ ಮಗನ ಅಧೀನದಲ್ಲಿರತಕ್ಕವಳು ಎನ್ನುವ ನಿಯಮ ಪಾಲನೆಯಲ್ಲಿತ್ತು. ಪೂಜೆ ಮಾಡಲಾಗಲೀ, ತಪಸ್ಸು ಮಾಡುವುದಾಗಲೀ, ತೀರ್ಥಯಾತ್ರೆಗೆ ಹೋಗುವುದಾಗಲೀ, ಮಂತ್ರಗಳನ್ನು ಪಠಿಸುವುದಾಗಲೀ ಅವಳಿಗೆ ಸಲ್ಲದ ಕಾರ್ಯಗಳಾಗಿದ್ದವು. ದೇವರ ಜೊತೆಯ ನೇರ ಸಂಪರ್ಕಕ್ಕೆ ಆಕೆ ಅನರ್ಹಳಾಗಿದ್ದಳು. ಬೌದ್ಧ ಮತ್ತು ಜೈನ ಧರ್ಮಗಳು ಸ್ತ್ರೀ ಹೀಯಾಳಿಕೆಯನ್ನು ಮೆಲುವಾಗಿ ಖಂಡಿಸಿದರೂ, ಅವಳ ಸ್ಥಿತಿಗತಿಗಳನ್ನು ಸುಧಾರಿಸುವಲ್ಲಿ ವಿಫಲವಾಗಿದ್ದವು. ಇಂತಹ ಕಾಲದಲ್ಲಿ ಹುಟ್ಟು ಬ್ರಾಹ್ಮಣ ಕುಲದಲ್ಲಿ ಜನಿಸಿದ್ದ ಬಸವಣ್ಣನವರು ಉಪನಯನದ ಸಮಯದಲ್ಲಿ `ತನ್ನ ಅಕ್ಕನಿಗಿಲ್ಲದ ಜನಿವಾರ ತನಗೇಕೆ?’ ಎಂದು ಪ್ರಶ್ನಿಸಿ, ಧರಿಸಿದ್ದ ಜನಿವಾರವನ್ನು ಕಿತ್ತೆಸೆದು ಮನೆಯಿಂದ ಹೊರಬಂದು ತಮ್ಮದೇ ಆದ ಜಾತ್ಯತೀತ ಸಮಾಜವೊಂದನ್ನು ಸ್ಥಾಪಿಸಿದರು.

ಹನ್ನೆರಡನೆಯ ಶತಮಾನ ಹಲವಾರು ದೃಷ್ಟಿಯಿಂದ ಭಾರತದ ಇತಿಹಾಸದಲ್ಲಿ ಒಂದು ಸುವರ್ಣಕಾಲ ಎಂದೇ ಪರಿಗಣಿಸಬಹುದು. ಬಸವಣ್ಣನವರ ನೇತೃತ್ವದಲ್ಲಿ ಹಲವಾರು ಶಿವಶರಣರು `ಕಲ್ಯಾಣ’ ವೆಂಬ ನಗರದಲ್ಲಿ `ಅನುಭವ ಮಂಟಪ’ವೆನ್ನುವ ವಿಚಾರ ವೇದಿಕೆಯಲ್ಲಿ ಸೇರಿ, ತಮ್ಮ ತಮ್ಮ ದೈನಂದಿನ ಅನುಭವಗಳನ್ನೇ ಹಿನ್ನೆಲೆಯಾಗಿಟ್ಟುಕೊಂಡು `ವಚನ ಸಾಹಿತ್ಯ’ದ ಉಗಮಕ್ಕೆ ನಾಂದಿಯಾದರು. ಈ ಅನುಭವ ಗೋಷ್ಠಿಯಲ್ಲಿ ಮೇಲು-ಕೀಳು, ಹೆಣ್ಣು-ಗಂಡು, ಜ್ಞಾನಿ-ಅಜ್ಞಾನಿ, ಪಂಡಿತ-ಪುಡಾರಿ ಇಂತಹ ಪಂಗಡಿಕೆಗೆ ಅವಕಾಶವೇ ಇರಲಿಲ್ಲ. `ಸರ್ವ ಸಮಾನತೆ’ ಮಂಟಪದ ಧ್ಯೇಯವಾಗಿತ್ತು. ಜಾತಿ ಮತದ ಗೊಂದಲದಲ್ಲಿ ಸಿಲುಕಿಗೊಳ್ಳದೆ ನಡೆಯುತ್ತಿದ್ದ ಈ ವಿಚಾರ ವೇದಿಕೆಯಲ್ಲಿ ಎಲ್ಲರೂ ಬಸವಣ್ಣನ `ಎನಗಿಂತ ಕಿರಿಯರಿಲ್ಲ, ಶಿವಭಕ್ತರಿಗಿಂತ ಹಿರಿಯರಿಲ್ಲ’ ಎನ್ನುವ ಆದರ್ಶವನ್ನು ಪಾಲಿಸಿಕೊಂಡು, `ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ, ಮುನಿಯ ಬೇಡ, ಅನ್ಯರಿಗೆ ಅಸಹ್ಯಪಡಬೇಡ, ತನ್ನ ಬಣ್ಣಿಸಬೇಡ, ಇದಿರ ಹಳಿಯಲು ಬೇಡ’ ಎನ್ನುವ ಸಪ್ತಪದಿಗಳನ್ನು ತಮ್ಮ ತಮ್ಮ ಜೀವನಕ್ಕೆ ಅಳವಡಿಸಿಕೊಂಡಿದ್ದರು. ಸಮಾಜದಲ್ಲಿ ರಾರಾಜಿಸುತ್ತಿದ್ದ ಮಹಿಳಾ ಶೋಷಣೆ, ಹೀಯಾಳಿಕೆ, ದಬ್ಬಾಳಿಕೆಗಳನ್ನು ನಿಲ್ಲಿಸಿ `ಸ್ತ್ರೀ’ ಎನ್ನುವ ಪದಕ್ಕೆ ಅಂಟಿಕೊಂಡಿದ್ದ `ಶೂದ್ರತೆ’ಯ ಕಳಂಕವನ್ನು ಹೊಡೆದೋಡಿಸಿ `ಮಾತೃತ್ವ’ದ ಪವಿತ್ರ ಕಲ್ಪನೆಯನ್ನು ಮೂಡಿಸುವಲ್ಲಿ ಯಶಸ್ವಿಯಾದರು.

ಸಮಾಜ ಹಿಂದುಳಿದವರೆಂದು ಪರಿಗಣಿಸಿದ್ದ ಜಾತಿ, ಪಂಗಡಗಳಿಂದ ಬಂದು ಶರಣ ಸಮುದಾಯಕ್ಕೆ ಸೇರಿದ್ದ ಅಕ್ಕಮ್ಮ, ಆಮ್ಮುಗೆ ರಾಮಮ್ಮ, ಆಯ್ದಕ್ಕಿ ಲಕ್ಕಮ್ಮ, ಕಾಳವ್ವೆ, ಮಸಣಮ್ಮ, ದೇವಮ್ಮ, ರೇಚವ್ವ, ಸೂಳೆ ಸಂಕವ್ವೆ, ಗೊಗ್ಗವ್ವೆ ಇಂತಹವರೆಲ್ಲರೂ ಅನುಭವ ಮಂಟಪದಲ್ಲಿ ಸಮಾನ ಸ್ಥಾನ ಪಡೆದುಕೊಂಡಿದ್ದರು. ಸಾಹಿತ್ಯ ಒಂದು ಜನಾಂಗದ ಸಂಸ್ಕೃತಿಯ ಪ್ರತೀಕವೆಂಬುದು ನಿಜ. ಶರಣ ಸಂಸ್ಕೃತಿಯ ಪ್ರತೀಕವಾಗಿ `ವಚನ ಸಾಹಿತ್ಯ’ ಪ್ರಚಲಿತವಾಯಿತು. ಅನುಭವ ಮಂಟಪದಲ್ಲಿ ಅಸಂಖ್ಯಾತ ಸ್ತ್ರೀಯರು ಜಾತಿ ಭೇದಗಳ ಅರಿವಿಲ್ಲದೆ, ಹಂಗಿಲ್ಲದೆ ಮುಕ್ತರಾಗಿ ತಮ್ಮ ಅನುಭವಗಳಿಂದ ಕಲಿತ ಪಾಠಗಳನ್ನೇ ವಚನ ರೂಪದಲ್ಲಿ ಮಂಡಿಸಿ ಅಲ್ಲಮಪ್ರಭು, ಬಸವಣ್ಣ, ಅಕ್ಕ ಮಹಾದೇವಿ ಇಂತಹ ಮಹಾನುಭಾವಿಗಳ ಜೊತೆ ಜೊತೆಯಾಗಿ ಚರ್ಚಿಸಿ ಕನ್ನಡ ಸಾಹಿತ್ಯಕ್ಕೆ ಅಪೂರ್ವವಾದ ಕಾಣಿಕೆಯಿತ್ತರು ಎಂದರೆ ಉತ್ಪ್ರೇಕ್ಷೆಯೇನಲ್ಲ. ಬಸವ ನೇತೃತ್ವದ ಆ ಸಮಾಜ 900 ವರ್ಷಗಳ ಹಿಂದೆಯೇ `ಮಹಿಳಾ ವಿಮೋಚನಾ ಕಾರ್ಯಾಚರಣೆ’ (the women’s liberation movement)ಗೆ ನಾಂದಿ ಹಾಕಿ ಒಂದು ದೊಡ್ಡ ಸಾಮಾಜಿಕ ಕ್ರಾಂತಿಯನ್ನೇ ನಡೆಸಿತು. ಇದು ಜಗತ್ತಿನ ಇತಿಹಾಸದಲ್ಲಿಯೇ ಸಂಭವಿಸಿದ ಪ್ರಪ್ರಥಮ `ಮಹಿಳಾ ವಿಮೋಚನಾ ಕ್ರಾಂತಿ’! ಇದು ನಮ್ಮ ಕನ್ನಡ ತಾಯ್ನಾಡು ಜಗತ್ತಿಗೆ ನೀಡಿದ ಒಂದು ಅಮೂಲ್ಯ ಕೊಡುಗೆ ಅಥವಾ ತೋರು ದೀವಿಗೆ ಎನ್ನಬಹುದು. ಪ್ರಥಮ ಬಾರಿಗೆ ಮಹಿಳೆ ಗಂಡಸಿನ ಸರಿಸಮಾನಳಾಗಿ ನಿಂತು ಚರ್ಚಿಸಿದಳು, ದೇವಾಲಯಗಳಲ್ಲಿ ಪೂಜಿಸಿದಳು, ಸೂತಕಗಳಿಗೆ ಕೊನೆಯೆಂದಳು, ಅಬಲೆ ಸಬಲೆಯಾದಳು. 

ಅನುಭವ ಮಂಟಪದ ಪ್ರಧಾನ ವೇದಿಕೆಯ ಮೇಲೆ ಮಿಂಚಿದವರು ಬಸವಣ್ಣ, ಅಲ್ಲಮ ಪ್ರಭು, ಚೆನ್ನಬಸವಣ್ಣ, ಅಕ್ಕಮಹಾದೇವಿ ಇವರಷ್ಟೇ ಅಲ್ಲ. ಕನ್ನಡ ಕಾಯಕದ ರೇವಮ್ಮ, ಭಕ್ತಾದಿಗಳ ಮನೆಯಂಗಳಗಳನ್ನು ಗುಡಿಸಿ ಜೀವನ ಸಾಗಿಸುತ್ತಿದ್ದ ಜಂಬೂರ ಸತ್ಯಕ್ಕ, ಹಗ್ಗ ಹೊಸೆಯುವ ಕಾಯಕದ ಕಾಲಕಣ್ಣಿಯ ಕಾಯಮ್ಮ, ಭತ್ತ ಕುಟ್ಟಿ ಕೊಡುತ್ತಿದ್ದ ಸೋಮಮ್ಮ, ವೇಶ್ಯಾವೃತ್ತಿಯಾದರೂ ಅದನ್ನೇ ನಿಯತ್ತಿನಿಂದ ವ್ರತದಂತೆ ನಡೆಸುತ್ತಿದ್ದ ಸೂಳೆ ಸಂಕವ್ವೆ, ಸೋಮವ್ವೆ, ಗಂಗವ್ವೆ. ಇವರೆಲ್ಲರೂ `ಕಾಯಕವೇ ಕೈಲಾಸ’ ಎನ್ನುವ ಬಸವ ತತ್ವವನ್ನು ತಮ್ಮ ತಮ್ಮ ದೈನಿಕ ಆಚರಣೆಗಳಲ್ಲಿ ಮೈಗೂಡಿಸಿಕೊಂಡು ಸಾಹಿತ್ಯಿಕವಾಗಿಯೂ ಚರ್ಚಾಕೂಟಗಳಲ್ಲಿ ಮಿಂಚಿ ಮೆರೆದರು. ಈ ಶರಣೆಯರಲ್ಲಿ ಪ್ರವಹಿಸುತ್ತಿದ್ದ ಕಾಯಕ ಶ್ರದ್ಧೆ, ದಾಸೋಹ ಪ್ರಜ್ಞೆಗೆ ಕೆಲವು ನಿದರ್ಶನಗಳನ್ನು ನೋಡೋಣ.ಒಮ್ಮೆ ಮಾರಯ್ಯನೆಂಬ ಶರಣನೊಬ್ಬ ಅನುಭವ ಮಂಟಪದಲ್ಲಿ ನಡೆಯುತ್ತಿದ್ದ ಗೋಷ್ಠಿಯಲ್ಲಿ ಮೈ ಮರೆತು ಸಂವಾದವೊಂದರಲ್ಲಿ ನಿರತನಾಗಿದ್ದಾಗ, ಆತನ ಹೆಂಡತಿ ಲಕ್ಕಮ್ಮ ಅವನಿರುವಲ್ಲಿಗೆ ಬಂದು,

`ಕಾಯಕ ನಿಂದಿತ್ತು ಹೋಗಯ್ಯ ಎನ್ನಾಳ್ದನೆ
ಭಾವಶುದ್ಧವಾಗಿ ಮಹಾಶರಣರ
ತಿಪ್ಪೆಯ ತಪ್ಪಲ ಅಕ್ಕಿಯ ತಂದು
ನಿಶ್ಚೈಸಿ ಮಾಡಬೇಕು ಮಾರಯ್ಯಪ್ರಿಯ ಅಮರೇಶ್ವರ ಲಿಂಗಕ್ಕೆ
ಬೇಗ ಹೋಗು ಮಾರಯ್ಯ’

-ಎಂದು ನಯವಾಗಿಯೇ ಅವನಿಗಿರಬೇಕಾದ ಕಾಯಕ ಪ್ರಜ್ಞೆಯನ್ನು ಜಾಗೃತಿಗೊಳಿಸುತ್ತಾಳೆ. ಹೆಂಡತಿಯ ಮಾತಿನಿಂದ ಎಚ್ಚೆತ್ತ ಮಾರಯ್ಯ ದಡಬಡನೆ ಎದ್ದು ತನ್ನ ಕಾಯಕವಾದ ಮಹಾಮನೆಯಲ್ಲಿ ಬಿದ್ದಿದ್ದ ಅಕ್ಕಿ ಆರಿಸುವುದಕ್ಕೆ ಓಡುತ್ತಾನೆ. ಅಂದು ದಿನನಿತ್ಯಕ್ಕಿಂತಲೂ ಹೆಚ್ಚು ಅಕ್ಕಿ ಬಿದ್ದಿದೆ. ಒಂದೇ ಕ್ಷಣ ತನ್ನ ಕಾಯಕದ ನಿಯಮವನ್ನು ಮರೆತ ಮಾರಯ್ಯ ನಾಳೆ ಆಯುವ ಶ್ರಮ ತಪ್ಪಿತಲ್ಲ ಎಂದುಕೊಂಡು ಅಲ್ಲಿ ಚೆಲ್ಲಿದ್ದ ಎಲ್ಲ ಅಕ್ಕಿಯನ್ನೂ ಆರಿಸಿಕೊಂಡು ಮನೆಗೆ ಬಂದು ಪತ್ನಿ ಲಕ್ಕಮ್ಮನಿಗೆ ಕೊಡುತ್ತಾನೆ. ಅಷ್ಟು ಅಕ್ಕಿಯನ್ನು ನೋಡಿದ ಲಕ್ಕಮ್ಮನಿಗೆ ಗಂಡನ ಮೇಲೆ ಅಸಾಧ್ಯ ಸಿಟ್ಟು ಬರುತ್ತದೆ. `ಒಮ್ಮನವ ಮೀರಿ, ಇಮ್ಮನದಲ್ಲಿ ತಂದಿರಿ, ಈಸಕ್ಕಿಯಾಸೆ ನಿಮಗೇಕೆ? – ಒಂದು ಮಾನ (ಅಳತೆ) ಅಕ್ಕಿಯಷ್ಟೆ ನಮಗೆ ಬೇಕಿತ್ತು, ನೀವು ಇಮ್ಮನ (ಎರಡು ಅಳತೆ) ತಂದಿದ್ದೀರಿ. ಏಕೆ ಇಷ್ಟು ಆಸೆ? ಹೋಗಿ ಅಲ್ಲಿಯೇ ಸುರಿದು ಬನ್ನಿ ಎಂದು ಕಳಿಸುತ್ತಾಳೆ. ಇಲ್ಲಿ ಶರಣರಿಗಿದ್ದ ಕಾಯಕದ ಮಹತ್ವ ಎದ್ದು ಕಾಣಿಸುತ್ತದೆ. ಕಾಯಕದ ನಿಜವಾದ ಅರ್ಥ ಅಂದಿನಂದಿನ ಅಗತ್ಯಕ್ಕೆ ಬೇಕಾದಷ್ಟು ಮಾತ್ರ ಪರಿಶುದ್ಧ ಮನಸ್ಸಿನಿಂದ ಸಂಪಾದಿಸಬೇಕು (ಶುದ್ಧ ಕಾಯಕ). ಹೀಗೆ ಶುದ್ಧ ಕಾಯಕದಿಂದ ಗಳಿಸಿದ ಸಂಪತ್ತನ್ನು ಮಾತ್ರ ದಾಸೋಹಕ್ಕೆ ಅಂದರೆ ದಾನ ಮಾಡುವುದಕ್ಕೆ ಉಪಯೋಗಿಸಬೇಕು. ಆಸೆಯಿಂದ ಗಳಿಸಿದ ಸಂಪತ್ತು ಯಾವತ್ತೂ ದಾಸೋಹಕ್ಕೆ ಸಲ್ಲದು, `ಈಶ್ವರನೊಪ್ಪ ಮಾರಯ್ಯಪ್ರಿಯ ಅಮರೇಶ್ವರ ಲಿಂಗಕ್ಕೆ ದೂರ ಮಾರಯ್ಯ’ ಎನ್ನುತ್ತಾಳೆ ಈ ಶಿವ ಶರಣೆ ಲಕ್ಕಮ್ಮ! ಕಾಯಕವೇ ಕೈಲಾಸ ಎನ್ನುವ ಬಸವ ತತ್ವವನ್ನು ಸಮರ್ಥಿಸಿಕೊಂಡು, 

ಕಾಯಕದಲ್ಲಿ ನಿರತನಾದಡೆ ಗುರುದರ್ಶನವಾದರೂ ಮರೆಯಬೇಕು
ಲಿಂಗಪೂಜೆಯಾದರೂ ಮರೆಯಬೇಕು,
ಜಂಗಮ ಮುಂದಿರ್ದಡೂ ಹಂಗು ಹರಿಯಬೇಕು
ಕಾಯಕವೇ ಕೈಲಾಸವಾದ ಕಾರಣ
ಅಮರೇಶ್ವರ ಲಿಂಗವಾಯಿತ್ತಾದರೂ ಕಾಯಕದೊಳಗು’

ಎಂದು ಹೇಳುವಲ್ಲಿ ಕಾಯಕವೆನ್ನುವುದು ಎಲ್ಲ ಬಾಹ್ಯ ಪೂಜೆ, ಪದ್ಧತಿ, ಆಚಾರಗಳಿಗಿಂತಲೂ ಮಿಗಿಲಾದದ್ದು ಎಂದು ವಾದಿಸುತ್ತಾಳೆ ಲಕ್ಕಮ್ಮ. ಪುರುಷ ಸಂಕೋಲೆಯಿಂದ ಮುಕ್ತರಾದ ಬಸವ ಬಳಗದ ಈ ಮಹಿಳೆಯರ ಸುಪ್ತ ಸಾಹಿತ್ಯಿಕ, ಸಾಂಸ್ಕೃತಿಕ ಶಕ್ತಿ ವಿಶಿಷ್ಟವಾಗಿ ಪ್ರಕಾಶಿತವಾಗಿರುವುದನ್ನು ಗಮನಿಸಬಹುದು.

ಹೆಣ್ಣಿನ ಶೋಷಣೆಯನ್ನು ಕುರಿತು, ಶಿವನಿಗೆ ಧೂಪ ಹಾಕುವ ಕಾಯಕದ ಶರಣೆ ಗೊಗ್ಗವ್ವೆ, `ಮೊಲೆ ಮುಡಿ ಬಂದರೆ ಹೆಣ್ಣೆಂಬರು, ಮೀಸೆ ಕಾಸೆ ಬಂದಡೆ ಗಂಡೆಂಬರು, ಈ ಉಭಯದ ಜ್ಞಾನ ಹೆಣ್ಣೋ ಗಂಡೋ ನಾಸ್ತಿನಾಥ?’ ಎಂದು ಸ್ತ್ರೀ ಪುರುಷ ಸಮಾನತೆಗೆ ಪೀಠಿಕೆ ಹಾಕಿ,`ಗಂಡು ಮೋಹಿಸಿ ಹೆಣ್ಣ ಹಿಡಿದರೆ ಅದು ಒಬ್ಬರ ಒಡವೆ ಎಂದು ಅರಿಯಬೇಕು. ಹೆಣ್ಣು ಮೋಹಿಸಿ ಗಂಡ ಹಿಡಿದಡೆ ಉತ್ತರವಾವುದೆಂದರಿಯಬೇಕು?’ ಎಂದು ಸೂಚ್ಯವಾಗಿ ಸಮಾಜದ ನ್ಯಾಯ, ನೀತಿಯನ್ನು ಪ್ರಶ್ನಿಸಿದ್ದಾಳೆ. ಮೊಲೆ ಮೀಸೆಗಳಿಂದ ಬಾಹ್ಯದಲ್ಲಿ ಗಂಡು ಹೆಣ್ಣು ಎಂದು ಗುರುತಿಸ ಬಹುದಾದರೂ `ಒಳಗೆ ಸುಳಿವಾತ್ಮವನು ಹೆಣ್ಣೂ ಅಲ್ಲ ಗಂಡೂ ಅಲ್ಲ ರಾಮನಾಥ’ ಎಂದು ಸಮರ್ಥಿಸಿದ್ದಾನೆ ಜೇಡರ ದಾಸಿಮಯ್ಯ.

ಮಹಿಳೆಯನ್ನು ದಬ್ಬಾಳಿಕೆಯ ಪ್ರಭಾವದಿಂದ ಹೊರಗೆಳೆದು ತಂದ ಶರಣ ಸಮಾಜ, `ಸತಿಪತಿಗಳೊಂದಾದ ಭಕ್ತಿ ಹಿತವಾಗಿಪ್ಪುದು ಶಿವಂಗೆ’ ಎನ್ನುವ ಹಿತವಚನವನ್ನು ಮನಗಂಡು ಬದುಕಿನ ಎಲ್ಲಾ ರಂಗಗಳಲ್ಲೂ ಸಮಾನತೆಯ ಕಲ್ಪನೆಯನ್ನು ಮೂಡಿಸುವಲ್ಲಿ ಸಫಲರಾದರು. ಅನ್ಯ ಮಹಿಳೆಯರಲ್ಲಿಯೂ ತಾಯಿ ಅಥವಾ ಅಕ್ಕನನ್ನು ಕಂಡುಕೊಂಡರು. `ಎನ್ನ ತಾಯಿ ನಿಂಬವ್ವೆ ನೀರನೆರೆಯೆಂಬಳು, ಎನ್ನಕ್ಕ ಕಂಚಿಯಲ್ಲಿ ಬಾಣಸವ ಮಾಡುವರು’ ಎಂದು ಮಹಿಳೆಯನ್ನು ಗೌರವಿಸಿದರು ಬಸವಣ್ಣನವರು. `ಪರವಧುವನು ಮಹಾದೇವಿಯೆಂಬೆ’ ಎಂಬುವಲ್ಲಿ, `ಮಹಾದೇವಿ ಅಕ್ಕನ ಪಾದಕ್ಕೆ ನಮೋ ನಮೋ ಎಂಬೆ’ ಎನ್ನುವ ಉಕ್ತಿಗಳಲ್ಲಿ ಶರಣರು ಮಹಿಳೆಗಿತ್ತ ಪ್ರಾಧಾನ್ಯತೆಯನ್ನು ಕಾಣಬಹುದು.

ಹೆಣ್ಣು ಒಂದು ಮಾಯೆ, ಜಗತ್ತಿನ ತೊಂದರೆಗಳಿಗೆ ಆ ಮಾಯೆಯೇ ಕಾರಣ ಎನ್ನುತ್ತಿತ್ತು ಶರಣ ಪೂರ್ವ ಸಮಾಜ!

`ಹೆಣ್ಣು ಮಾಯೆಯೆಂಬರು, ಮಣ್ಣು ಮಾಯೆಯೆಂಬರು
ಹೊನ್ನು ಮಾಯೆಯೆಂಬರು
ಹೆಣ್ಣು ಮಾಯೆಯಲ್ಲ, ಹೊನ್ನು ಮಾಯೆಯಲ್ಲ
ಮಣ್ಣು ಮಾಯೆಯಲ್ಲ; ಮನದ ಮುಂದಣ
ಆಶೆಯೇ ಮಾಯೆ ಕಾಣಾ ಗುಹೇಶ್ವರಾ
ಎಂದು ಹೆಣ್ಣನ್ನು ಅತ್ಯುನ್ನತ ಸ್ಥಾನಕ್ಕೇರಿಸಿದರು ಅನುಭವ ಮಂಟಪದ ಪೀಠಾಧಿಪತಿಗಳಾದ ಅಲ್ಲಮ ಪ್ರಭುದೇವರು! ಆಗ ಆಕೆಗೆ ಸಂದ ಗೌರವ ಇಂದಿಗೂ ಎಂದೆಂದಿಗೂ ಶಾಶ್ವತವಾಗಿ ಇರಲಿ ಎಂದು ಆಶಿಸೋಣವೇ?


ಅಣ್ಣಾಪುರ್‌ ಶಿವಕುಮಾರ್, ಲಿಬರ್ಟಿವಿಲ್
ಇಲಿನಾಯ್, ಯುಎಸ್ಎ.
[email protected]

error: Content is protected !!