ಹರಿಯಾಣ ಸರ್ಕಾರ ತನ್ನ ಸರ್ಕಾರಿ ವೈದ್ಯಕೀಯ ಕಾಲೇಜುಗಳ ಶುಲ್ಕವನ್ನು ಈಗಿರುವ ವಾರ್ಷಿಕ 50 ಸಾವಿರ ರೂ.ಗಳಿಂದ 10 ಲಕ್ಷ ರೂ.ಗಳಿಗೆ ಹೆಚ್ಚಿಸಿದೆ. ಇದರಿಂದಾಗಿ ಎಂ.ಬಿ.ಬಿ.ಎಸ್. ವಿದ್ಯಾರ್ಥಿಗಳು ನಾಲ್ಕು ವರ್ಷದ ಕೋರ್ಸ್ಗಳಿಗೆ 40 ಲಕ್ಷ ರೂ. ಪಾವತಿಸಬೇಕಿದೆ.
ರಾಜ್ಯ ಸರ್ಕಾರದ ಕ್ರಮವನ್ನು ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ತರಾಟೆಗೆ ತೆಗೆದುಕೊಂಡಿದ್ದು, ಇದರಿಂದ ಬಡ ವಿದ್ಯಾರ್ಥಿಗಳಿಗೆ ಕಾಲೇಜುಗಳ ಪ್ರವೇಶ ಪಡೆಯುವುದು ಕಷ್ಟವಾಗುತ್ತದೆ ಎಂದು ತಿಳಿಸಿದೆ.
ಸರ್ಕಾರ ನಿಗದಿ ಪಡಿಸಿರುವ ಶುಲ್ಕವನ್ನು ಪಾವತಿಸಲು ಸಾಧ್ಯವಾಗದೇ ಇರುವವರಿಗೆ ಪ್ರತಿ ವರ್ಷ ಹತ್ತು ಲಕ್ಷ ರೂ.ಗಳ ಬಾಂಡ್ ಮೂಲಕ ಸಾಲ ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಒಂದು ವೇಳೆ ವೈದ್ಯಕೀಯ ವಿದ್ಯಾರ್ಥಿ ನಂತರದಲ್ಲಿ ಸರ್ಕಾರಿ ಉದ್ಯೋಗ ಪಡೆದರೆ ಸಾಲದ ಕಂತುಗಳನ್ನು ಸರ್ಕಾರವೇ ಏಳು ವರ್ಷಗಳಲ್ಲಿ ಪಾವತಿಸಲಿದೆ.
ಸರ್ಕಾರದ ಕ್ರಮವನ್ನು ಪ್ರಶ್ನಿಸಿ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ನಲ್ಲಿ ಅರ್ಜಿ ದಾಖಲಿಸಲಾಗಿದ್ದು, ಇದು ಕ್ಯಾಪಿಟೇಷನ್ ಶುಲ್ಕ ಎಂದು ದೂರಲಾಗಿದೆ.
ಸರ್ಕಾರದ ನಿರ್ಧಾರವನ್ನು ವಿರೋಧಿಸಿ ವೈದ್ಯಕೀಯ ವಿದ್ಯಾರ್ಥಿಗಳು ಪ್ರತಿಭಟನೆಗಳನ್ನೂ ನಡೆಸುತ್ತಿದ್ದಾರೆ. ಮತ್ತೊಂದೆಡೆ ಹರಿಯಾಣ ಸರ್ಕಾರ ತನ್ನ ಕ್ರಮವನ್ನು ಸಮರ್ಥಿಸಿಕೊಂಡಿದ್ದು, ಉತ್ತೀರ್ಣರಾದ ವೈದ್ಯಕೀಯ ವಿದ್ಯಾರ್ಥಿಗಳಿಗೆ ಸರ್ಕಾರ ಉದ್ಯೋಗ ಕಲ್ಪಿಸಲಿದೆ ಎಂದು ತಿಳಿಸಿದೆ. ಈ ಬೆಳವಣಿಗೆಯು ಹಲವಾರು ಪ್ರಶ್ನೆಗಳಿಗೆ ಕಾರಣವಾಗಿದೆ.
ಶಿಕ್ಷಣ ಉಚಿತವೇ?
ರಾಜ್ಯ ಸರ್ಕಾರಗಳು ಪ್ರತಿ ವೈದ್ಯಕೀಯ ವಿದ್ಯಾರ್ಥಿಗಳಿಗೆ ಅರ್ಧ ಕೋಟಿ ರೂ.ಗಳಷ್ಟನ್ನು ಖರ್ಚು ಮಾಡುತ್ತದೆ. ಅದಾದ ನಂತರ ಸರ್ಕಾರಿ ಸೇವೆಗೆ ಲಭ್ಯವಾಗುವ ಗ್ಯಾರಂಟಿ ಇಲ್ಲ. ಅವರು ಖಾಸಗಿಗೆ ಹೋಗಬಹುದು, ಇಲ್ಲವೇ ದೇಶ ಬಿಟ್ಟೇ ಹೊರ ದೇಶಕ್ಕೆ ಹೋಗಿ ಅಲ್ಲಿ ಸೇವೆಗೆ ಮುಂದಾಗಬಹುದು. ಹೀಗಾಗಿ ಭಾರತದಂತಹ ಬಡ ದೇಶದ ಸರ್ಕಾರ ಇಂತಹ ವಿದ್ಯಾರ್ಥಿಗಳ ಮೇಲೆ ಹಣ §ಪೋಲು’ ಮಾಡುವುದರಲ್ಲಿ ಅರ್ಥವಿದೆಯೇ? ಎಂಬ ಪ್ರಶ್ನೆ ಹಳೆಯದೇ.
ಕರ್ನಾಟಕ ಸರ್ಕಾರವು ವೈದ್ಯಕೀಯ ಪಿ.ಜಿ. ವಿದ್ಯಾರ್ಥಿಗಳಿಗೆ ಒಂದು ವರ್ಷ ಕಡ್ಡಾಯ ಸರ್ಕಾರಿ ಸೇವೆ ನಿಗದಿ ಪಡಿಸಿ ಆದೇಶ ಹೊರಡಿಸಿದೆ. ಇದನ್ನು ಪ್ರಶ್ನಿಸಿ 281 ವಿದ್ಯಾರ್ಥಿಗಳು ಹೈಕೋರ್ಟ್ ಮೊರೆ ಹೋಗಿದ್ದು, 75 ಲಕ್ಷ ರೂ.ಗಳವರೆಗಿನ ದುಬಾರಿ ಶುಲ್ಕ ಕಟ್ಟಿ ಶಿಕ್ಷಣ ಪಡೆದ ಮೇಲೆ ಕಡ್ಡಾಯ ಸೇವೆ ಏಕೆ? ಎಂದು ಕೇಳಿದ್ದಾರೆ. ಅಲ್ಲದೇ, ತಾವು ಪ್ರವೇಶ ಪಡೆದಾಗ ಈ ನಿಯಮ ಇರಲಿಲ್ಲ, ನಂತರ ಹೇರಲಾಗಿದೆ ಎಂದು ಹೇಳಿದ್ದಾರೆ.
ಸಾಮಾನ್ಯವಾಗಿ ಸರ್ಕಾರಗಳು ಖಾಸಗಿ ಶಿಕ್ಷಣ ಸಂಸ್ಥೆಗಳ ಶುಲ್ಕವನ್ನು ನಿಯಂತ್ರಿಸಲು, ಇಲ್ಲವೇ ಕಡಿಮೆ ಮಾಡಲು ಮುಂದಾಗುವುದು ವಾಡಿಕೆ. ಆದರೆ, ಹರಿಯಾಣ ಸರ್ಕಾರ ತದ್ವಿರುದ್ಧ ದಿಕ್ಕಿಗೆ ಸಾಗಿ, ಸರ್ಕಾರಿ ಕಾಲೇಜುಗಳ ವೈದ್ಯಕೀಯ ಶುಲ್ಕವನ್ನು ಖಾಸಗಿಯವರಿಗೆ ಸವಾಲೆಸೆಯುವ ರೀತಿಯಲ್ಲಿ ಹೆಚ್ಚಿಸುವ ಮೂಲಕ ಹೊಸ ಹೆಜ್ಜೆ ಇಟ್ಟಿದೆ.
ಇತರರಿಗೆ ಮುಕ್ತವೇ?
ಕೇವಲ ವೈದ್ಯಕೀಯ ವಿದ್ಯಾರ್ಥಿಗಳಷ್ಟೇ ಅಲ್ಲದೇ ಸರ್ಕಾರ ಇತರೆ ವಲಯಗಳ ವಿದ್ಯಾರ್ಥಿಗಳಿಗೆ §ಸಬ್ಸಿಡಿ’ಯಲ್ಲಿ ಶಿಕ್ಷಣ ನೀಡುತ್ತಿದೆ. ಸಮಾಜದ ಹಲವಾರು ಹಿಂದುಳಿದ ವರ್ಗಗಳಿಗೆ ಸಂಪೂರ್ಣ ಉಚಿತವಾಗಿ ಶಿಕ್ಷಣ ನೀಡುವ ಜೊತೆಗೆ, ಉಚಿತ ಸೌಲಭ್ಯಗಳನ್ನೂ ಕಲ್ಪಿಸುತ್ತಿದೆ.
ಹಾಗಾದರೆ ಅವರಿಂದ ಸರ್ಕಾರ ಏಕೆ ಬಾಂಡ್ಗಳನ್ನು ಪಡೆಯಬಾರದು, ಕೇವಲ ಸರ್ಕಾರಿ ವೈದ್ಯಕೀಯ ವಿದ್ಯಾರ್ಥಿಗಳಿಗಷ್ಟೇ ಏಕೆ ಈ ಬಾಂಡ್ ಬಂಧನ? ಎಂಬ ಪ್ರಶ್ನೆಯೂ ಉದ್ಭವಿಸುತ್ತದೆ.
ವ್ಯಕ್ತಿಯೋ, ಸಮಾಜವೋ?
ದುರ್ಬಲ ವರ್ಗಕ್ಕೆ ಸೇರಿದ ಪ್ರತಿಭಾವಂತರಿಗೆ ಸರ್ಕಾರ ಸಬ್ಸಿಡಿಯಲ್ಲಿ ಇಲ್ಲವೇ ಉಚಿತವಾಗಿ ಶಿಕ್ಷಣ ನೀಡಿದ ಮಾತ್ರಕ್ಕೆ ಅವರು ಸರ್ಕಾರದ ಮೂಲಕ ಸಮಾಜಕ್ಕೆ ಸೇವೆ ಸಲ್ಲಿಸಬೇಕು ಎಂಬುದು ವೈಯಕ್ತಿಕ ಸ್ವಾತಂತ್ರ್ಯದ ಉಲ್ಲಂಘನೆ ಎಂಬ ವಾದವೂ ಇದೆ.
ಸಮಾಜದ ಕಡು ಬಡವರನ್ನೂ ಬಿಡದೇ ತೆರಿಗೆ ವಸೂಲಿ ಮಾಡಿದ ಹಣದಿಂದ ಸರ್ಕಾರ ಸಬ್ಸಿಡಿಯಲ್ಲಿ ವೈದ್ಯಕೀಯ ಶಿಕ್ಷಣ ನೀಡಿರುತ್ತದೆ. ಹೀಗಾಗಿ ವೈಯಕ್ತಿಕ ಸ್ವಾತಂತ್ರ್ಯಕ್ಕಿಂತ ಸಮಾಜವೇ ಮುಖ್ಯ ಎಂಬ ಸಮಾಜವಾದವೂ ಇದೆ.
ಕೊರೊನಾದ ಈ ಸಂದರ್ಭದಲ್ಲಿ ವೈದ್ಯಕೀಯ ಸಿಬ್ಬಂದಿಯ ಮೌಲ್ಯ ಎಲ್ಲರಿಗೂ ತಿಳಿದಿದೆ. ದೇಶದಲ್ಲಿ 6 ಲಕ್ಷಕ್ಕೂ ಹೆಚ್ಚು ವೈದ್ಯರ ಕೊರತೆ ಇದೆ ಎಂದು ಸಮೀಕ್ಷೆಗಳು ತಿಳಿಸಿವೆ. ದೇಶದಲ್ಲಿ ಪ್ರತಿ ಹತ್ತು ಸಾವಿರ ಜನರಿಗೆ ಒಬ್ಬ ವೈದ್ಯರು ಮಾತ್ರ ಇದ್ದಾರೆ. ಆರೋಗ್ಯ ಕಾಪಾಡಲು ಪ್ರತಿ ಸಾವಿರಕ್ಕೆ ಒಬ್ಬ ವೈದ್ಯರ ಅಗತ್ಯವಿದೆ ಎಂದು ವಿಶ್ವ ಆರೋಗ್ಯ ಸಂಘಟನೆ ತಿಳಿಸಿದೆ.
ಇಂತಹ ಸಂದರ್ಭದಲ್ಲಿ ಹರಿಯಾಣ ಸರ್ಕಾರದ ಕ್ರಮ ಮುಂದಿನ ದಿನಗಳಲ್ಲಿ ವೈದ್ಯಕೀಯ ಶಿಕ್ಷಣದ ಹೊಸ ಹಾದಿಗೆ ಕಾರಣವಾಗಲಿದೆಯೇ ಅಥವಾ ರಾಜ್ಯ ಸರ್ಕಾರವೇ ಹಳೆಯ ಹಾದಿಗೆ ಮರಳಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.
ಎಸ್.ಎ. ಶ್ರೀನಿವಾಸ್
[email protected]