ಆಪ್ತಮಿತ್ರನ ಅಗಲಿಕೆ

ನಾವಿಬ್ಬರೂ ಏಕವಚನದ ಗೆಳೆಯರು. ನಮ್ಮ ಗೆಳೆತನಕ್ಕೆ ಏನಿಲ್ಲವೆಂದರೂ ಅಜಮಾಸು ಮೂರು ದಶಕಗಳಿಗೂ ಮಿಗಿಲಾದ ಆಯಸ್ಸು. 

ಧಾರವಾಡಕ್ಕೊ, ಬೆಳಗಾವಿಗೋ, ಕಾರವಾರದ ಕಡೆಗೆ ಹೋಗುವಾಗ, ಕೆಲವೊಮ್ಮೆ ಮುದ್ದಾಂ ದಾವಣಗೆರೆಗೆ ಬಂದಾಗ ನಮ್ಮನೆಗೆ ಬಂದೇ ಬರುತ್ತಿದ್ದ. ಸೊಗಸಾಗಿ ಊಟ ಮಾಡಿಯೇ ಹೋಗುತ್ತಿದ್ದ. ನಮ್ಮಿಬ್ಬರದು ರಾತ್ರಿ ಒಂದೆರಡು ಗಂಟೆತನಕ ಮಾತು ಮಾತು. ಅವನ ಭೆಟ್ಟಿಗಾಗಿ ನಮ್ಮನೆ ಮುಂದೆ ಜನಜಾತ್ರೆ. ಹೊರಗೆ ಬಂದು ಅವರೊಂದಿಗೆ ಮತ್ತೆ ತಾಸೊಪ್ಪತ್ತು ಖಾಸ್ ಬಾತಿನಂತದೇ ಮಾತುಕತೆಗಳು.

ಬೆಳಗೆರೆಯ ಸಮಗ್ರ ಸಾಹಿತ್ಯ ಕುರಿತು ದಾವಣಗೆರೆಯಲ್ಲಿ ನಾನು ವಿಚಾರ ಸಂಕಿರಣ ಏರ್ಪಡಿಸಿದಾಗ ರವಿ ಜತೆ ಸೀತಾನದಿ ಸುರೇಂದ್ರ,  ಇನ್ನೊಂದಿಬ್ಬರು ಗೆಳೆಯರು ಬಂದಿದ್ದರು. ಗೆಳೆಯರಾದ ಅಗಸನಕಟ್ಟೆ, ರಾಘವೇಂದ್ರ ಪಾಟೀಲ, ಬಿ. ಎಲ್. ವೇಣು ಬೆಳಗೆರೆಯ ಕೃತಿಗಳ ಕುರಿತು ಪ್ರಬಂಧ ಮಂಡಿಸಿದರು. ಆಗ ಬೆಳಗೆರೆ ಪತ್ರಿಕೆ ಬರವಣಿಗೆಯ ಉಕ್ಕಿ ಹರಿಯುವ ಹರೆಯ ಮತ್ತು ಹವಾ. ಕಿಕ್ಕಿರಿದ ಜನಸಂದಣಿ. ಸಮಾರಂಭದ ಕಡೆಯಲ್ಲಿ ರವಿ ತನ್ನ ಕೃತಿಗಳ ಕುರಿತು ಮಾತಾಡಿದ್ದೆ ಹಿಟ್ ಆಗಿತ್ತು. ಕಿವಿಗಡಚಿಕ್ಕುವ ಕರತಾಡನಗಳು.

ಹಾಯ್ ಬೆಂಗಳೂರ್ ಆರಂಭದ ಐದಾರು ವರ್ಷಗಳ ಕಾಲ ವಿವಿಧ ಬಗೆಯ ಲೇಖನಗಳನ್ನು ಅವನ ಪ್ರೀತಿಯ ಮೇರೆಗೆ ಬರೆಯುತ್ತಿದ್ದೆ. 

ದಾವಣಗೆರೆ ಕುರಿತು ಬರೆದಂತೆ ಎಲ್ಲಿ ಹುಡುಕಲಿ ಜೀವದುಸಿರಿನ ನನ್ನೂರು ಎಂಬ ನನ್ನ ಹುಟ್ಟೂರು ಕಡಕೋಳ ಕುರಿತು ನನ್ನಿಂದ ಬರೆಸಿದ್ದ. ತುಂಬಾ ಸೂಕ್ಷ್ಮ ಮನಸಿನ ಅವನು ಮನುಷ್ಯ ಸಂಬಂಧಗಳ ಕುರಿತು ಭಾರೀ ಭಾವುಕನಾಗಿದ್ದ. 

ಒಂದು ಅಮವಾಸ್ಯೆ ದಿನ ಕಾರಲ್ಲಿ ಬೆಂಗಳೂರಿಂದ ತಾನೇ ಡ್ರೈವ್ ಮಾಡಿಕೊಂಡು ಮೂರೇ ತಾಸಲ್ಲಿ ದಿಢೀರಂತ ದಾವಣಗೆರೆಯ ನಮ್ಮನೆ ಮುಂದೆ ಬಂದು ಹಾರ್ನ್ ಮಾಡಿ “ಏಯ್ ಬಾರೋ ಉಕ್ಕಡಗಾತ್ರಿ ದೆವ್ವಗಳ ದರ್ಶನಾ ತಗೊಂಬರೋಣ ಬಾ” ಅಂದ. ನಿಂತ ಪೆಟ್ಟಿನಲ್ಲೇ ನಾನೂ ಹೊರಟು ನಿಂತೆ. ನಮ್ಮ ರವೀಂದ್ರ ಹಂದಿಗನೂರ ಕಾಕಾನ ಗಝಲ್ ಕ್ಯಾಸೆಟ್ ಕೇಳಿ ಪಡೆದ. ಕಾಕಾನ ಎಂತು ವಿರತಿಯೋ ಸಂತಿ ಸೂಳೆಮಗನೇ ನಿನ್ನಂತರಂಗದ ಅನುವನರಿಯೋ  ಎಂಬ ಕಡಕೋಳ ಮಡಿವಾಳಪ್ಪನವರ ತತ್ವಪದವನ್ನು ರವಿಕಾಕಾನ ಸಿರಿಕಂಠದಲ್ಲಿ ಮತ್ತೆ ಮತ್ತೆ ಕೇಳುವುದೇ ಬೆಳಗೆರೆ ರವಿಗೆ ಬಲುಖುಷಿ. ಉಕ್ಕಡಗಾತ್ರಿ ಮುಟ್ಟುವ ತನಕ ಅದೇ ಹಾಡನ್ನು ಮತ್ತೆ, ಮತ್ತೆ  ತಿರು ತಿರುಗಿಸಿ ಆಲಿಸುತ್ತಿದ್ದ.

ಬೆಂಗಳೂರಿಗೆ ಹೋಗುವಾಗ ಕ್ಯಾಸೆಟ್ ತಗೊಂಡು ಹೋದ. ಎಷ್ಟೋ ಬಾರಿ ನಟ್ಟ ನಡುರಾತ್ರಿ ಮತ್ತವನ ಮಿತಿ ಮೀರಿದ ಮದ್ಯರಾತ್ರಿಗಳ ನಡುವೆ ರವೀಂದ್ರ ಕಾಕಾನ ಗಝಲ್ ಕೆಸೆಟ್ ಹಾಕಿ ಫೋನಲ್ಲಿ ನನಗೆ ಕೇಳಿಸುತ್ತಿದ್ದ. ಒಂದು ಬಾರಿ ರವೀಂದ್ರ ಕಾಕಾ ಬೆಳಗೆರೆಯ ಕಚೇರಿಗೆ  ಹೋಗಿ ಮೂರುತಾಸು ಹಾಡಿಬಂದ.

ಅದರ ಮುಂದಿನವಾರ ಕಾಕಾನ ಫೋಟೋ ಹಾಕಿ ಖಾಸ್ ಬಾತ್ ತುಂಬೆಲ್ಲಾ ತುಂಬಿ ತುಳುಕಾಡುವ ಅವನ ಅಂಕಣ ಬರಹ. ಹೀಗೆ ಬೆಳಗೆರೆಯದು ನನ್ನೊಂದಿಗೆ ಅನನ್ಯತೆಯ ಸಾಂಸ್ಕೃತಿಕ ಒಡನಾಟ. ಅಂತಹ ಅನನ್ಯತೆಯ ಕೊಂಡಿ ಕಳಚಿ ಬಿತ್ತು.


– ಮಲ್ಲಿಕಾರ್ಜುನ ಕಡಕೋಳ

error: Content is protected !!