ಮಧ್ಯ ಕರ್ನಾಟಕ ಮತ್ತು ಕನ್ನಡ…

ನಮ್ಮ ಮನದಾಳದ ಮಾತನ್ನು ಹೊರತರಲು ಕೇವಲ ಮಾತೃಭಾಷೆಯಿಂದ ಮಾತ್ರ ಸಾಧ್ಯ. ಕನ್ನಡ ನಮಗೆ ಬರೀ ಭಾಷೆ ಯಾಗಿ ಉಳಿದಿಲ್ಲ. ಅದು ನಮ್ಮ ಬದುಕು. ಅತ್ಯಂತ ಪ್ರಾಚೀನವೂ ಮತ್ತು ಅತ್ಯಂತ ಸುಂದರ ಲಿಪಿಯನ್ನು ಹೊಂದಿರುವ ಇಂತಹ ಭಾಷೆಯನ್ನು ನಾವು ಮಾತನಾಡುತ್ತೇವೆ ಎನ್ನುವುದೇ ಕನ್ನಡಿಗರಾದ ನಮಗೆ ಹೆಮ್ಮೆ.

ಕರ್ನಾಟಕ ರಾಜ್ಯ ಏಕೀಕರಣವಾದ ನಂತರ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದೆ. ಅದರಲ್ಲಿ ಗಡಿ ಸಮಸ್ಯೆ, ನದಿ ನೀರಿನ ಹಂಚಿಕೆ ಸಮಸ್ಯೆ, ಭಾಷಾವಾರು ಪ್ರಾಂತ್ಯಗಳ ಸಮಸ್ಯೆ ಹೀಗೆ ಹಲವಾರು ಸಮಸ್ಯೆಗಳು ಇದ್ದರೂ ಸಹ ಇವುಗಳ ಬಿಸಿ ಮಧ್ಯ ಕರ್ನಾಟಕಕ್ಕೆ ತಟ್ಟುವುದಿಲ್ಲ. ಅದೇ ರೀತಿ ಕನ್ನಡದ ಮೇಲಿನ ಬೇರೆ ಭಾಷೆಗಳ ದಬ್ಬಾಳಿಕೆಯು ಮಧ್ಯಕರ್ನಾಟಕದ ನಾಲ್ಕೈದು ಜಿಲ್ಲೆಗಳಿಗೆ ಅಷ್ಟಾಗಿ ಇಲ್ಲ. ಆದ್ದರಿಂದ ಮಧ್ಯ ಕರ್ನಾಟಕದ ಜನ ಭಾಷೆ ವಿಷಯದಲ್ಲಿ ಆತಂಕಕ್ಕೊಳಪಡುವ ಸನ್ನಿವೇಶಗಳು ಕಡಿಮೆಯೇ.

ಇಲ್ಲಿ ಬೇರೆ ಭಾಷೆಗಳ ಮೇಲಿನ ವ್ಯಾಮೋಹ ಕಡಿಮೆಯೇನಿಲ್ಲ. ಇಲ್ಲಿನ ಜನರೂ ಸಹ ಇಂಗ್ಲಿಷ್ ಮಾಧ್ಯಮದ ಶಿಕ್ಷಣಕ್ಕೆ ಆದ್ಯತೆ ಕೊಡುತ್ತಾರೆ. ಆದರೂ ಇಲ್ಲಿನ ಜನರ ಬದುಕು ಕನ್ನಡ ಭಾಷೆಯಲ್ಲಿ ಬೆರೆತುಹೋಗಿದೆ. ಇಲ್ಲಿ ಅನ್ಯಭಾಷಿಗರು ಬಂದರೆ ಅವರು ಕನ್ನಡ ಕಲಿಯದೆ ಬೇರೆ ವಿಧಿ ಇಲ್ಲ.

ಜಾಗತಿಕ ಮಟ್ಟದಲ್ಲಿ ಒಂದು ವರದಿಯ ಪ್ರಕಾರ ಅತಿ ಶೀಘ್ರವಾಗಿ ನಶಿಸುತ್ತಿರುವ ಭಾಷೆಗಳಲ್ಲಿ ಕನ್ನಡವೂ ಒಂದು ಎಂದು ಹೇಳಲಾಗುತ್ತದೆ. ಆದರೆ, ಮಧ್ಯಕರ್ನಾಟಕದ ಕನ್ನಡಕ್ಕೆ ನಿಜವಾಗಲೂ ಆ ಸ್ಥಿತಿ ಇಲ್ಲ.  ಇಲ್ಲಿ ಸಾವಿರ ಸಾವಿರ ವರ್ಷಗಳು ಕಳೆದರೂ ಕನ್ನಡ ಹೀಗೆ ಇರುತ್ತದೆ. ಕೇವಲ ಇಂಗ್ಲಿಷ್ ಕಲಿತ ಮಾತ್ರಕ್ಕೆ ನಮ್ಮ ಚಿಂತನೆಗಳು, ನಮ್ಮ ವ್ಯಕ್ತಿತ್ವ ಬದಲಾಗುವುದಿಲ್ಲ ಅದು ನಮ್ಮ ಹುಟ್ಟಿನ ಜೊತೆಯೇ ಅಂದರೆ ಮಾತೃಭಾಷೆಯಲ್ಲಿಯೇ ಬಂದಿರುತ್ತದೆ.

`ಯಾವ ಕಲಿಕೆ ಮಾನವನನ್ನು ಸಕಲ ಅಜ್ಞಾನಗಳಿಂದ ಪಾರು ಮಾಡಿ ಸಂರಕ್ಷಿಸುತ್ತದೆಯೋ ಅದೇ ನಿಜವಾದ ವಿದ್ಯೆ’ ಎಂದು ಉಪನಿಷತ್‌ನಲ್ಲಿ ಹೇಳಲಾಗಿದೆ. ಇಲ್ಲಿ ನಾವು ಮಕ್ಕಳಿಗೆ ಶಿಕ್ಷಣವನ್ನು ಇಂಗ್ಲಿಷ್ ಅಥವಾ ಕನ್ನಡ ಮಾಧ್ಯಮದಲ್ಲಿ ಕೊಟ್ಟೆವು ಎಂಬುದು ಮುಖ್ಯ ಅಲ್ಲವೇ ಅಲ್ಲ.

ಕನ್ನಡ ನಶಿಸುತ್ತಿದೆ. ಕನ್ನಡವನ್ನು ಉಳಿಸಿ ಉಳಿಸಿ ಎಂದು ಬೊಬ್ಬಿಡುವ ಜನಗಳು ಒಂದು ಕಡೆಯಾದರೆ, ಕನ್ನಡ ಸಂಘಗಳನ್ನು ಕಟ್ಟಿಕೊಂಡು ಕನ್ನಡಕ್ಕಾಗಿ ಹೋರಾಡುವವರು ಇನ್ನೊಂದು ಕಡೆ. ಇಂಥವರನ್ನು ನೋಡಿ ಚಾಣಕ್ಯ ಒಂದು ಕಡೆ ಹೇಳುತ್ತಾನೆ… ಜಗತ್ತು ಕೆಟ್ಟಿದೆ ಎಂದು ಹೇಳುವುದರಲ್ಲಿ ವಾಸ್ತವಿಕತೆ ಇರಬಹುದಾದರೂ ಅದನ್ನು ಕೆಡಿಸಿದ ಪ್ರಕ್ರಿಯೆಯಲ್ಲಿ ನಮ್ಮ ಪಾಲು ಇದೆ. ಇಂತಹ ಹೋರಾಟ ಮಾಡುವ ಜನರು ಎಷ್ಟು ಜನ ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಸೇರಿಸಿ, ಮಾತೃಭಾಷೆಯಲ್ಲಿ ಶಿಕ್ಷಣ ಕೊಡಿಸುತ್ತಿದ್ದಾರೆ? ಹೋರಾಟ ಕಡೆಯ ಹಂತ. ಅದಕ್ಕಿಂತ ಮೊದಲು ಸಮಸ್ಯೆಗಳನ್ನು ಸರಿಪಡಿಸಲು ಬೇಕಾದಷ್ಟು ಮಾರ್ಗಗಳಿವೆ, ಅವುಗಳನ್ನು ಆರಿಸಿಕೊಳ್ಳಬೇಕು ಅಷ್ಟೇ. 

ಕನ್ನಡ ನಾವು ಮೊದಲು ಬೇರೆಯವರೊಂದಿಗೆ ಸ್ಪಂದಿಸಿದ ಭಾಷೆ ಇದನ್ನು ಬಿಟ್ಟು ನಮಗೆ ಬದುಕಿಲ್ಲ. ಆದ್ದರಿಂದ ಈ ಭಾಷೆ ಅವನತಿ ನಮ್ಮೆಲ್ಲರ ಅವನತಿ. ಆದ್ದರಿಂದ ಇದನ್ನು ನಾವು ಶುದ್ಧವಾಗಿ ಬಳಸಿದರೆ ಅದು ಬೆಳೆಯುತ್ತದೆ.

`ಜನರು ಭಾಷೆಯಿಂದಲೇ ಮುಂದಕ್ಕೆ ಬರಬಲ್ಲರು. ಇತರೆ ಭಾಷೆಯಿಂದ ಕಲಿಯುವುದನ್ನು ಕಲಿಯೋಣ, ಅದರ ವಿಷಯದಲ್ಲಿ ದ್ವೇಷ ಬೇಡ. ಆದರೆ, ನಾವು ಮುನ್ನಡೆಯಬೇಕಾದರೆ ನಮ್ಮ ಭಾಷೆಯೇ ರಾಜಮಾರ್ಗ’ ಎಂದು ಬಂಕಿಮಚಂದ್ರ ಚಟರ್ಜಿ ಹೇಳುತ್ತಾರೆ.


ಮಧ್ಯ ಕರ್ನಾಟಕ ಮತ್ತು ಕನ್ನಡ... - Janathavani– ಪದ್ಮ ರವಿ, ಬೆಂಗಳೂರು
[email protected]

error: Content is protected !!