‘ಸ್ವಚ್ಛ’ವಾದರೂ ಕೊಳಕು ಬಿಡದ ಭಾರತ

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತ, ಚೀನಾ ಹಾಗೂ ರಷ್ಯಾಗಳನ್ನು ‘ಕೊಳಕು’ ದೇಶಗಳೆಂದು ಟೀಕಿಸುವ ಮೂಲಕ ಜಾಗತಿಕ ಮಟ್ಟದಲ್ಲಿ ವಾಯುಮಾಲಿನ್ಯದ ಕುರಿತು ಚರ್ಚೆಗಳು ನಡೆಯುವಂತೆ ಮಾಡಿದ್ದಾರೆ. 

ಆದರೆ, ಪ್ರಧಾನ ಮಂತ್ರಿ ನರೇಂದ್ರ ಮೋದಿ §ಸ್ನೇಹಿತ’ ಟ್ರಂಪ್ ಆಡಿದ ಮಾತುಗಳನ್ನು ಮುಂದಿಟ್ಟುಕೊಂಡು ಪ್ರಧಾನಿಯ ಕಾಲೆಳೆಯುವ ಕೆಲಸವನ್ನು ಕೆಲವರು ಮಾಡಿದ್ದು, ಬಿಟ್ಟರೆ ಭಾರತದಲ್ಲಿ ಹೆಚ್ಚೇನೂ ಇದುವರೆಗೂ ಸಾಧ್ಯವಾಗಿಲ್ಲ.

2014ರಲ್ಲಿ ಪ್ರಧಾನಿ ಮೋದಿ ಸ್ವಚ್ಛ ಭಾರತ ಅಭಿಯಾನ ಆರಂಭಿಸಿ, ಈಗಾಗಲೇ ಮುಗಿಸಿದ್ದೂ ಆಗಿದೆ. ಇಷ್ಟಾದ ನಂತರವೂ ಭಾರತವನ್ನು ‘ಕೊಳಕು’ ಎಂದು ಟ್ರಂಪ್ ಹೇಳಿದ್ದು, ಅದನ್ನು ಕಹಿ ಗುಳಿಗೆಯಂತೆ ಆಡಳಿತಾರೂಢರು ನುಂಗಿ ತೆಪ್ಪಗೆ ಕುಳಿತುಕೊಳ್ಳುವ ಪರಿಸ್ಥಿತಿ ಬಂದಿರುವುದು ಭಾರತ ನಿಜಕ್ಕೂ ‘ಸ್ವಚ್ಛವೇ’? ಎಂಬ ಪ್ರಶ್ನೆ ಹುಟ್ಟಲು ಕಾರಣವಾಗಿದೆ.

ಪ್ರಧಾನಿ ಮೋದಿ ಆರಂಭಿಸಿದ ಸ್ವಚ್ಛ ಭಾರತ ಅಭಿಯಾನ ಶೌಚಕ್ಕೆ ಸಂಬಂಧಿಸಿದ ಸ್ವಚ್ಛತೆ ತಂದಿರಬಹುದೇ ಹೊರತು, ಉಸಿರಿನ ಸ್ವಚ್ಛತೆ ಇನ್ನೂ ಸಾಧ್ಯವಾಗಿಲ್ಲ. ಮಲಿನವಾದ ನೀರು, ಅಂತರ್ಜಲ, ಘನ ತ್ಯಾಜ್ಯ, ಪ್ಲಾಸ್ಟಿಕ್, ಎಲೆಕ್ಟ್ರಾನಿಕ್ ತ್ಯಾಜ್ಯ ಸೇರಿದಂತೆ, ಯಾವೊಂದು ಸಮಸ್ಯೆಯೂ ಇನ್ನೂ ಬಗೆಹರಿದಿಲ್ಲ.

ಅದರಲ್ಲೂ ವಾಯು ಮಾಲಿನ್ಯಕ್ಕೆ ಸಂಬಂಧಿಸಿದ ಯಾವುದೇ ಜಾಗತಿಕ ಅಧ್ಯಯನ ಪರಿಗಣಿಸಿದರೂ §ಕೊಳಕಿನಲ್ಲಿ’ ಭಾರತೀಯ ನಗರಗಳಿಗೆ ಮೊದಲ ಟಾಪ್ 10ನಲ್ಲಿ ಸ್ಥಾನಗಳು ಕಟ್ಟಿಟ್ಟಿದ್ದೆ. ಕೆಲ ಸಮೀಕ್ಷೆಗಳಲ್ಲಿ ಎಲ್ಲಾ ಹತ್ತು ಸ್ಥಾನಗಳೂ ಭಾರತದ ನಗರಗಳಿಗೆ ದಕ್ಕಿವೆ!

ಚಳಿಗಾಲದ ಹೊಸ್ತಿಲಲ್ಲಿ ರಾಜಧಾನಿ ದೆಹಲಿ ಮತ್ತೆ ವಾಯುಮಾಲಿನ್ಯದ ತೆಕ್ಕೆಗೆ ಸಿಲುಕಿ, ಉಸಿರು ಗಟ್ಟುವ ವಾತಾವರಣ ಎದುರಿಸುವ ಅಪಾಯ ಇರುವಾಗ ಭಾರತ §ಕೊಳಕಲ್ಲ’ ಎಂದು ಹೇಳುವ ಧೈರ್ಯ ಅಧಿಕಾರಸ್ಥರಿಗೆ ಇರುವಂತಿಲ್ಲ. ಪಿಎಂ2.5 ಕಣಗಳ ಮಾಲಿನ್ಯದಲ್ಲಿ ವಿಶ್ವದಲ್ಲೇ ಮೊದಲ 15 ಕೊಳಕು ನಗರಗಳಲ್ಲಿ ಭಾರತದ 14 ನಗರಗಳಿದ್ದು, ಇದರಲ್ಲಿ ದೆಹಲಿಯೂ ಸೇರಿದೆ ಎಂದು ವಿಶ್ವ ಆರೋಗ್ಯ ಸಂಘಟನೆಯ 2018ರ ವರದಿ ತಿಳಿಸಿದೆ.

ನ್ಯುಮೋನಿಯಾ, ಪಾರ್ಶ್ವವಾಯು, ಹೃದ್ರೋಗ, ಶ್ವಾಸಕೋಶ ಕ್ಯಾನ್ಸರ್, ಉಸಿರಾಟದ ರೋಗಗಳಿಂದಾಗಿ ಜನರು ತೀವ್ರವಾಗಿ ಬಳಲುವಂತಾಗಿದೆ. ಲಕ್ಷಾಂತರ ಜನರು ಪ್ರಾಣವನ್ನೇ ಕಳೆದುಕೊಳ್ಳುತ್ತಿದ್ದಾರೆ ಎಂದು ವಿಶ್ವ ಆರೋಗ್ಯ ಸಂಘಟನೆಯ ಅಧ್ಯಯನಗಳು ತಿಳಿಸುತ್ತಿವೆ.

ಉಸಿರಾಡುವ ಗಾಳಿಯೇ ಮಲಿನವಾಗಿರುವ ವೇಳೆಯೇ ಕೊರೊನಾ ಸಹ ಬಂದಿದೆ. ಮಲಿನ ಗಾಳಿ ಹಾಗೂ ಕೊರೊನಾ ಸೇರಿಕೊಂಡರೆ ಏನಾಗಬಹುದು? ಎಂಬ ಪ್ರಶ್ನೆಗೆ ರಾಜಧಾನಿ ದೆಹಲಿಯಲ್ಲಿ ಉತ್ತರ ಸಿಗಲಿದೆ ಎಂದು ಹಲವಾರು ಆರೋಗ್ಯ ಪರಿಣಿತರು ಕಳವಳದಿಂದ ಹೇಳುತ್ತಿದ್ದಾರೆ.

ಜರ್ಮನಿಯ ಮ್ಯಾಕ್ಸ್ ಪ್ಲಾಕ್ ಇನ್‌ಸ್ಟಿಟ್ಯೂಟ್ ಫಾರ್ ಕೆಮಿಸ್ಟ್ರಿ ಸಂಶೋಧಕರ ಪ್ರಕಾರ ಪೂರ್ವ ಏಷಿಯಾದಲ್ಲಿ ಕೊರೊನಾದಿಂದ ಸಂಭವಿಸಿದ ಶೇ.27ರಷ್ಟು ಸಾವುಗಳಿಗೆ ವಾಯು ಮಾಲಿನ್ಯ ಪ್ರಮುಖ ಕಾರಣವಾಗಿದೆ.

ದೀರ್ಘ ಕಾಲದವರೆಗೆ ಮಲಿನ ಗಾಳಿ ಉಸಿರಾಡುವುದರಿಂದ ಶ್ವಾಸಕೋಶಗಳ ಮೇಲೆ ಪರಿಣಾಮವಾಗಿರುತ್ತದೆ. ಇಂತಹ ಶ್ವಾಸಕೋಶದ ಮೇಲೆ ಕೊರೊನಾ ಎರಗಿದಾಗ ಹೃದಯ ಹಾಗೂ ರಕ್ತನಾಳಗಳ ಮೇಲೆ ವಿಪರೀತ ಪರಿಣಾಮವಾಗಿ ಸಾವಿನ ಸಾಧ್ಯತೆ ಹೆಚ್ಚಾಗುತ್ತದೆ ಎಂದು ಸಂಶೋಧಕರು ಹೇಳಿದ್ದಾರೆ.

ಮಾರ್ಚ್ ತಿಂಗಳಲ್ಲಿ ಕೊರೊನಾ ಕಾರಣದಿಂದಾಗಿ ಹೇರಲಾದ ಲಾಕ್‌ಡೌನ್‌ ಕಾರಣದಿಂದಾಗಿ ದೇಶದ ಜನರು ಅಲ್ಪಕಾಲ ಸ್ವಚ್ಛ ಗಾಳಿಯನ್ನು ಕಾಣಲು ಸಾಧ್ಯವಾಯಿತು. 

ಆದರೆ, ಆ ಸಂತೋಷ ಅಲ್ಪಾಯುಷಿಯಾಗಿದ್ದು, ನಗರಗಳಲ್ಲಿ ಮತ್ತೆ §ಸಾಮಾನ್ಯ ಕೊಳಕು’ ಗಾಳಿಯ ವಾತಾವರಣ ಕಂಡು ಬರುತ್ತಿದೆ. ಟ್ರಾಫಿಕ್‌ಜಾಮ್‌ಗಳು ಹೆಚ್ಚಾಗುತ್ತಿವೆ.

ಸ್ವಚ್ಛ ಭಾರತ ಎಂಬುದು ಕೇವಲ ಶೌಚ ಸ್ವಚ್ಛತೆಗೆ ಸೀಮಿತವಾದರೆ ಆಗದು, ಆರೋಗ್ಯಕರ ಗಾಳಿ, ನೀರು, ಬೆಳಕು, ವಸತಿಗಳೆಲ್ಲವೂ ಸಿಗುವಂತಾದರೆ ಮಾತ್ರ, ಸ್ವಚ್ಛ ಭಾರತ ಎಂಬುದಕ್ಕೊಂದು ಅರ್ಥ ಸಿಗಲಿದೆ. ಉಸಿರಾಡುವ ಗಾಳಿಯನ್ನೇ ವಿಷ ಮಾಡಿ ಭಾರತ ಸ್ವಚ್ಛವಾಗಿದೆ ಎಂದರೆ ಅದು ಅಧಿಕಾರಸ್ಥರು ಸ್ವಚ್ಛತೆಗೆ ಲೇವಡಿ ಮಾಡಿದಂತಷ್ಟೇ.


ಎಸ್.ಎ. ಶ್ರೀನಿವಾಸ್‌,
[email protected]

error: Content is protected !!