ಕೊರೊನಾ ಬಂದಾಗಿಂದ ಒಂದಿಲ್ಲೊಂದು ಸಮಸ್ಯೆ ನಮ್ಮನ್ನು ಕಾಡುತ್ತಲೇ ಇವೆ. ಇಂತಹ ಸಂದಿಗ್ಧ ಸಮಯದಲ್ಲಿ ಸರ್ಕಾರ ಮಕ್ಕಳಿಗೋಸ್ಕರ ಅವರ ಶೈಕ್ಷಣಿಕ ಮಟ್ಟ ಕುಸಿಯಬಾರದು ಎಂಬ ಸದುದ್ದೇಶದಿಂದ ಮಾಡಿದ ವಿನೂತನ ಕಾರ್ಯಕ್ರಮವೇ `ವಿದ್ಯಾಗಮ’. ಇಲ್ಲಿಯ ವರೆಗೆ ಬರೀ ಅನ್ನಭಾಗ್ಯ, ಶಾದಿಭಾಗ್ಯ, ಕ್ಷೀರಭಾಗ್ಯ ಮುಂ ತಾದ ಭಾಗ್ಯಗಳನ್ನೇ ನೋಡಿದ ನಮಗೆ, ಈ ಕಾರ್ಯಕ್ರಮ ನಮ್ಮ ಮಕ್ಕಳ ಅದರಲ್ಲೂ ಗ್ರಾಮೀಣ ಮಕ್ಕಳ ಸೌಭಾಗ್ಯ ಎಂಬುದು ನಮಗ್ಯಾರಿಗೂ ಅರಿವಿಗೆ ಬರಲಿಲ್ಲ.
ಇಡೀ ಜಗತ್ತೇ ಕಣ್ಣಿಗೆ ಕಾಣದ ಮಹಾಮಾರಿ ಯಾವಾಗ ಬೇಕಾದರೂ ಭಯಂಕರ ರೂಪ ತಾಳಬ ಹುದು ಎಂಬ ಆತಂಕದಲ್ಲಿದೆ. ಲಸಿಕೆ ಸಿಗದೇ ಇದಕ್ಕೆ ಪರಿಹಾರವೇ ಇಲ್ಲ. ಆದ್ದರಿಂದ ಇಂತಹ ಸಮಯದಲ್ಲಿ ಸಣ್ಣ ಸಣ್ಣ ಅವಕಾಶಗಳನ್ನು ಸದುಪಯೋಗಪಡಿಸಿ ಕೊಳ್ಳುವುದೇ ನಮಗಿರುವ ಸುವರ್ಣಾವಕಾಶ ಎಂದು ನಾವು ಭಾವಿಸಬೇಕಾಗಿತ್ತು. ಆದರೆ, ನಾವು ಮಾತ್ರ ಹಾಗೇ ಮಾಡದೆ ಸಮಸ್ಯೆಗಳನ್ನು ದೊಡ್ಡದಾಗಿ ಬಿಂಬಿಸುತ್ತಾ ಹೋದೆವು. ಅದಕ್ಕೆ ದಾರ್ಶನಿಕರು ಹೇಳುತ್ತಾರೆ “ಜಗತ್ತಿನಲ್ಲಿ ಸಮಸ್ಯೆಗಳು ಹೇರಳವಾಗಿರುವುದಕ್ಕೆ ಕಾರಣ ಸಮಸ್ಯೆಗಳನ್ನು ಮಹತ್ವದ್ದಾಗಿಸಿರುವುದು”
ಸುಮಾರು ನಾಲ್ಕೈದು ತಿಂಗಳಿಂದ ಮನೆಯಲ್ಲೇ ಇದ್ದ ಮಕ್ಕಳಿಗೆ ಈ ಕಾರ್ಯಕ್ರಮದಿಂದ ದೈನಂದಿನ ಶಿಸ್ತಿನ ಜೊತೆಗೆ ಪಠ್ಯಗಳ ಅಭ್ಯಾಸವು ನಡೆಯುತ್ತಿತ್ತು ಮತ್ತು ಶಿಕ್ಷಕರು ಮತ್ತು ಮಕ್ಕಳ ಸಂಬಂಧ ಬೇರೆ ರೀತಿಯ ವಾತಾವರಣದಲ್ಲಿ ಇನ್ನೊಂದು ಹಂತಕ್ಕೆ ಹೋಗಿ ನಿಲ್ಲುತ್ತಿತ್ತೋ ಏನೊ ?.. ಆದರೆ, ಒಳ್ಳೆಯ ಮರಕ್ಕೆ ಕೊಡಲಿಯೇಟು ಎನ್ನುವ ಹಾಗೆ ಒಳ್ಳೆಯ ಕಾರ್ಯಕ್ರಮಕ್ಕೆ ಅನೇಕ ಕಾರಣಗಳನ್ನು ಮುಂದಿಟ್ಟು ದೊಡ್ಡದಾಗಿ ಬಿಂಬಿಸಿ, ಅದನ್ನು ನಿಲ್ಲಿಸಲಾಯಿತು. ಆದರೆ, ಇದೇ ರೀತಿ ಜೀವಗಳನ್ನು ಪಣಕ್ಕಿಟ್ಟು ದಿನನಿತ್ಯ ಕೆಲಸ ಮಾಡುತ್ತಿರುವ ಎಷ್ಟೋ ಕ್ಷೇತ್ರದ ಜನರಿದ್ದಾರೆ. ಅವರೆಲ್ಲರ ಪ್ರಾಣಗಳು ಮುಖ್ಯವೇ ತಾನೇ…
ಶಿಕ್ಷಕರು ಈ ಮೊದಲು ಈ ರೀತಿಯ ಕಾರ್ಯಕ್ರಮ ಗಳನ್ನು ಮಾಡಿದ ಇತಿಹಾಸವೇ ಇಲ್ಲ. ಆದರೆ, ಕೆಲವೊಂದು ಸಮಸ್ಯೆಗಳು ಬಂದಾಗ ಹೊಸ ಪ್ರಯೋಗ ಗಳ ಮೂಲಕ ಅವುಗಳನ್ನು ಬಳಸಿಕೊಳ್ಳಬೇಕಾಗುತ್ತದೆ. ಇಲ್ಲಿ ಗುರಿ ಬದಲಾಗಲಿಲ್ಲ, ಗುರಿ ತಲುಪುವ ದಾರಿ ಬದಲಾಯಿತು ಅಷ್ಟೇ. ಕೊರೊನಾದಿಂದ ಆದ ಶಿಕ್ಷಕರ ಸಾವುಗಳು ಈ ಕಾರ್ಯಕ್ರಮದ ಸ್ಥಗಿತಕ್ಕೆ ಕಾರಣವಾದವು. ಆದರೆ, ಕೊರೊನಾದಿಂದ ಕೇವಲ ಶಿಕ್ಷಕರು ಮಾತ್ರ ಸಾಯಲಿಲ್ಲ, ಬದಲಾಗಿ ವೈದ್ಯರು, ನರ್ಸುಗಳು, ಪೌರ ಕಾರ್ಮಿಕರು, ಪೊಲೀಸರು ಹೀಗೆ ನಮ್ಮ ನಡುವೆ ಇರುವ ಅದೆಷ್ಟೋ ಮಂದಿ ಸತ್ತರು. ಅವುಗಳನ್ನು ನಾವು ನಿಲ್ಲಿಸಲಿಲ್ಲ ಏಕೆ ? ಇನ್ನು ಬ್ಯಾಂಕುಗಳ ಸಿಬ್ಬಂದಿಯಂತೂ ಲಾಕ್ಡೌನ್ ಇದ್ದಾಗಿನಿಂದಲೂ ಕೆಲಸ ಮಾಡುತ್ತಲೇ ಇದ್ದಾರೆ.
ಮಕ್ಕಳು ಮತ್ತು ಶಿಕ್ಷಕರ ಆರೋಗ್ಯ ಮುಖ್ಯ ನಿಜ. ಆದರೆ, ಗ್ರೀಕ್ ತತ್ವಜ್ಞಾನಿಯ ಪ್ರಕಾರ ಎಷ್ಟೇ ಪ್ರಬಲ ರಾಷ್ಟ್ರವಾದರೂ ಅಲ್ಲಿನ ಶಿಕ್ಷಣ ವ್ಯವಸ್ಥೆಯನ್ನು ಹಾಳು ಮಾಡಿದರೆ, ಆ ದೇಶ ನಾಶವಾದಂತೆ ಎಂದಿದ್ದಾನೆ. ಅದ ಕ್ಕಾಗಿ ಇಂತಹ ಅಮೂಲ್ಯ ಕ್ಷೇತ್ರದಲ್ಲಿ ಅದರಲ್ಲೂ ಇಂ ತಹ ಸಂದಿಗ್ಧ ಸಮಯದಲ್ಲಿ ಆಶಾದಾಯಕವಾಗಿ ಬಂದ ಈ ಕಾರ್ಯಕ್ರಮಕ್ಕೆ ನಮ್ಮ ಮಕ್ಕಳ ನಾಳಿನ ಭವಿಷ್ಯಕ್ಕಾಗಿ ಪೋಷಕರೂ ಸಹ ಇದರ ಜವಾಬ್ದಾರಿಯನ್ನು ಹೊರಬೇಕಿತ್ತು. ತಮ್ಮ ಮನೆ ಅಂಗಳಕ್ಕೆ ಬಂದ ಶಿಕ್ಷಕರಿಗೆ ಸಂಪೂರ್ಣ ಸುರಕ್ಷತೆಯ ಜೊತೆಗೆ ಸಹಕಾರವನ್ನು ನೀಡಬೇಕಿತ್ತು. ಕೆಲಸಗಳಿಗೆ ನಾವೇ ಹೊಣೆಗಾರರಾದಾಗ ಮಾತ್ರ ಶ್ರೇಷ್ಠ ಕೆಲಸಗಳನ್ನು ಮಾಡಲು ಸಾಧ್ಯ.
ಮಾಧ್ಯಮಗಳೇನೋ ನಾವೇ ಮೊದಲು ಬ್ರೇಕ್ ಮಾಡಿದ್ದು ಎಂದು ಅಬ್ಬರಿಸಿ, ಏನೋ ಸಾಧನೆ ಮಾಡಿದಂತೆ ಬಿಂಬಿಸಿಕೊಂಡವು. ಆದರೆ,… `ಹಡಗು ಬಂದರಿನಲ್ಲಿ ಇದ್ದರೆ ಅಪಾಯ ಇಲ್ಲ. ಆದರೆ, ಹಡಗಿನ ಉದ್ದೇಶ ಅದಲ್ಲ’ ಅದೇ ರೀತಿ ನಮ್ಮೆಲ್ಲರ ಜೀವನದ ಉದ್ದೇಶಗಳು ಬೇರೆ ಬೇರೆ ಇರುವುದರಿಂದ ಇಂತಹ ಸಮಯದಲ್ಲಿ ರಿಸ್ಕ್ ತಿಳಿದುಕೊಳ್ಳಲೇಬೇಕು.Take risk in your life If you win you can lead, If you lose you can guide… ಎಂದು ವಿವೇಕಾನಂದ ಹೇಳಿದ್ದಾರೆ
ಇಂತಹ ಅದ್ಭುತ ಕಾರ್ಯಕ್ರಮವನ್ನು ಕರ್ನಾಟಕ ದಲ್ಲಿ ನಾವೆಲ್ಲರೂ ಹೊಣೆಗಾರರಾಗಿ ಗೆಲ್ಲಿಸಿದ್ದರೆ ಇಡೀ ದೇಶಕ್ಕೇ ಮಾದರಿ ಆಗುತ್ತಿದ್ದೆವು.
– ಪದ್ಮ ರವಿ, ಬೆಂಗಳೂರು
[email protected]