ಬದುಕಿನ ಮಜಲನ್ನು ಕಟ್ಟಿಕೊಟ್ಟ ಇಮ್ತಿಯಾಜ್ ಹುಸೇನರ `ಹೆಜ್ಜೆ ಗುರುತುಗಳು’

ಆತ್ಮ ಕಥನಗಳು ಈಗಾಗಲೇ ಅನೇಕ ಖ್ಯಾತ ಸಾಹಿತಿಗಳಿಂದ ಪ್ರಕಟವಾಗಿವೆ. ಲಂಕೇಶರ `ಹುಳಿ ಮಾವಿನ ಮರ’, ಕುಂವೀ ಅವರ `ಗಾಂಧೀ ಕ್ಲಾಸು’, ಯು.ಆರ್. ಅನಂತಮೂರ್ತಿ ಅವರ `ಸುರಗಿ’, ಡಾ. ವಿಜಯಮ್ಮ ಅವರ `ಕುದಿ ಎಸರು’, ಎಸ್.ಎಲ್. ಭೈರಪ್ಪನವರ `ಭಿತ್ತಿ’   ಹೀಗೆ ಇನ್ನೂ ಹಲವರು ತಮ್ಮ ಆತ್ಮ ಕಥನವನ್ನು ನಿವೇದನೆ ಮಾಡಿಕೊಂಡಿದ್ದಾರೆ. ಇಮ್ತಿಯಾಜ್ ಹುಸೇನ್‌ರವರ `ಹೆಜ್ಜೆ ಗುರುತುಗಳು’ಇಂಥ ಸಾಲಿನಲ್ಲಿ ನಿಲ್ಲುವಂಥದ್ದು. 

ಭಾರತದಲ್ಲಿ ಬಡವರ ಬದುಕಿನಲ್ಲಿ ನಡೆಯುವ ಎಲ್ಲಾ ಸಂಗತಿಗಳು ಆಕಸ್ಮಿಕದಂತೆ ಕಂಡರೂ, ಈ ದೇಶದಲ್ಲಿ ಬಡತನವೇ ಅನೇಕರ ಪಾಲಿಗೆ ಮುಂದೆ ಕಾಣುವ ಯಶೋಗಾಥೆ ಆಗುತ್ತದೆ. ಮನೆಯಲ್ಲಿಯ ಹಿಂಸೆಯ ವಾತಾವರಣ, ನಾಳೆ ಏನೋ ಎಂಬ ಅನುಮಾನದ ಹುತ್ತದಲ್ಲಿಯೇ ದಿನ ದೂಡಬೇಕಾದ ಸಂದಿಗ್ಧ ಪರಿಸ್ಥಿತಿ. ಈ ಸಾಮಾಜಿಕ ಕಟ್ಟುಪಾಡುಗಳ ಮೂಲಕ ಕನ್ನಡ ಸಾರಸ್ವತ ಲೋಕಕ್ಕೆ ಅಪರೂಪದ ಪರಿಚಯದ ಅನುಭವ ಲೋಕವೊಂದು ವೈವಿಧ್ಯಮಯ ಚಿತ್ತಾರಗಳೊಂದಿಗೆ ಅರ್ರಂಗೇಟ್ರಂ ಮಾಡಿಕೊಂಡಿದೆ. ಅದು `ಹೆಜ್ಜೆ ಗುರುತುಗಳು’ ಎಂಬ ಅಭಿದಾನದಲ್ಲಿ.

ಮುನ್ನುಡಿಯಲ್ಲಿ ಸನತ್‌ಕುಮಾರ ಬೆಳಗಲಿ ಅವರು ಇಮ್ತಿಯಾಜ್ ಹುಸೇನ್‌ರವರ ಆತ್ಮ ನಿವೇದನೆ ವೈಯಕ್ತಿಕ ಅನುಭವಗಳ ನಿರೂಪಣೆ, ಅಂದರೆ ಇದು ಆತ್ಮ ಕಥೆಯಾಗಿ ಉಳಿದಿಲ್ಲ, ಇದು ಅವರ ವೈಯಕ್ತಿಕ ಬದುಕನ್ನು ದಾಟಿ ಆಚೆಗೆ ವಿಸ್ತಾರಗೊಂಡಿದೆ. ವೈಯಕ್ತಿಕದಿಂದ ಸಾರ್ವತ್ರಿಕ ರೂಪ ಪಡೆದಿದೆ ಎಂಬ ಅನಿಸಿಕೆ ವ್ಯಕ್ತ ಪಡಿಸಿದ್ದಾರೆ. ಹೌದು ಅದು ಏಕಾಂತದಿಂದ ಲೋಕಾಂತದವರೆಗೂ ಅನುಭವ ಜನ್ಯ ಎನಿಸಿದೆ. ಇಲ್ಲಿನ ಹತಾಶೆ, ಸಂಕಟಗಳು, ಅವಮಾನಗಳು, ಹುಂಬತನ, ಸಾಹಸಗಳು, ಕನಸುಗಳು, ನನಸುಗಳು ಇರುವಂತೆ ಒಂದು ಕಾಲದ ಸಮಾಜದ, ಪ್ರದೇಶದ, ಇತಿಹಾಸ ಎಲ್ಲವೂ ಇಡಿಕಿರಿದಿದೆ. ಈ ಪುಸ್ತಕಕ್ಕೆ ಅಭಿಪ್ರಾಯ ಬರೆದಿರುವ ರಂಜಾನ್ ದರ್ಗಾ ಅವರು ಇಮ್ತಿಯಾಜ್ ಹುಸೇನ್ ಅವರ ಆತ್ಮಕಥೆ 50 ವರುಷಗಳ ನಮ್ಮ ಸಮಾಜದಲ್ಲಿನ ವಿವಿಧ ಜಾತಿ, ಧರ್ಮಗಳ ಮತ್ತು ರಾಜಕೀಯ ಚಿಂತನೆಗಳ ಚರಿತ್ರೆಯೂ ಆಗಿದೆ ಎನ್ನುತ್ತಾರೆ. ಶ್ರೀಮಂತರಿಂದ ಬಡವರ ಮೇಲಿನ ದೌರ್ಜನ್ಯ, ಸವರ್ಣೀಯರಿಂದ ದಲಿತರ ಮೇಲೆ ಗದಾ ಪ್ರಹಾರ, ಪುರೋಹಿತಶಾಹಿಗಳಿಂದ ಅಮಾಯಕರ ಮೇಲೆ ಮೌಢ್ಯ ಹೇರಿಕೆ, ಮಾಲೀಕರಿಂದ ಕಾರ್ಮಿಕರ ಮೇಲೆ ಶೋಷಣೆ ಹೀಗೆ ಬಹುಶೃತವಾದದ ದಬ್ಬಾಳಿಕೆ, ದಮನಿಕೆಗಳಿಂದ ಸ್ವಾತಂತ್ರ್ಯಪೂರ್ವ ಭಾರತ ನಲುಗಿತ್ತು. ಅದು ಆಮೇಲೆಯೂ ಮುಂದುವರೆದಿದೆ.

ಹಿಂದೂಗಳಲ್ಲಿ ದಲಿತರು ಅನುಭವಿಸುವ ನೋವನ್ನೇ ಅವರು, ಅನೇಕ ಸಲ ಸ್ವಧರ್ಮೀಯರಿಂದ ಅನುಭವಿಸಿದರು. ಅವರು ಕಮುನಿಸ್ಟ್ ಪಕ್ಷವನ್ನು ಬಿಟ್ಟರೂ ಮಾನವೀಯ ಸಿದ್ಧಾಂತವನ್ನು ಬಿಡಲಿಲ್ಲ. ಅದೇ ಅವರಿಗೆ ಮುಂದೆ ಹುದ್ದೆಯನ್ನೂ, ಗೌರವವನ್ನೂ ತಂದು ಕೊಟ್ಟಿತು. ಭದ್ರವಾದ ಬದುಕನ್ನು ಕಟ್ಟಿಕೊಳ್ಳಲು ಬೇರೆ ಪಕ್ಷದ ತೆಕ್ಕೆಗೆ ಬಂದರೂ ಹಿಂತಿರುಗಿ ನೋಡುವ ಸೂಕ್ಷ್ಮತೆ, ಬದ್ಧತೆ ಇದ್ದರೆ ಯಶಸ್ಸು ಹುಡುಕಿಕೊಂಡು ಬರಬಹುದು. ಮಾನವೀಯತೆಯ ತುಡಿತವೇ ನಾವು ಎಲ್ಲಿದ್ದರೂ ದಡ ಸೇರಿಸುವ ಪರಮ ಸತ್ಯ. ಈ ದೇಶದ ಖ್ಯಾತ ಕಮ್ಯುನಿಸ್ಟರಾಗಿದ್ದ ಕಾಮ್ರೆಡ್ ಇ.ಎಂ.ಎಸ್. ನಂಬೂದ ರಿಪಾಡ್ ಮೊದಲು ಕಾಂಗ್ರೆಸ್ಸಿಗರಾಗಿದ್ದು, ಆಮೇಲೆ ಕಮ್ಯುನಿಸ್ಟ್ ಆದರು ಎಂಬುದನ್ನು ನಾವು ಗಮನಿಸಬೇಕು. ಅನಿವಾರ್ಯ ತೆಯ ಕಾರಣದಿಂದ ಬೇರೆ ಪಕ್ಷಕ್ಕೆ ಹೋಗಬೇಕಾದರೂ ಸಿದ್ಧಾಂತ, ಹೋರಾಟಗಳು, ಮಾನವೀಯ ತುಡಿತಗಳಿಂದ ಎಂದೂ ವಿಮುಖರಾಗಬಾರದು. ಹೀಗಾಗಿ ಇಮ್ತಿಯಾಜ್ ಹುಸೇನರು ಕಮ್ಯುನಿಸ್ಟ್ ಪಕ್ಷದಿಂದ ಬಹುಜನ ಸಮಾಜವಾದಿ ಪಕ್ಷ ಸೇರಿ ಕೊನೆಗೆ ಕಾಂಗ್ರೆಸ್ ಅಪ್ಪಿಕೊಂಡಾಗಲೂ ಅವರು ನಂಬಿದ ಸಿದ್ಧಾಂತಗಳಿಗೆ ತಿಲಾಂಜಲಿ ಇಡಲಿಲ್ಲ.

ಬದುಕಲು ಹೆಣಗುತ್ತಲೇ ಸುತ್ತಮುತ್ತಲ ಬದುಕನ್ನು ಗ್ರಹಿಸುವ ಶಕ್ತಿ ಕಮ್ಯುನಿಸ್ಟ್ ಪಕ್ಷದ ಸಹವಾಸದಿಂದ ದೊರೆಯಿತು. ಇದರ ಪರಿಣಾಮ ಭಾಷಣ ಮಾಡುವುದು ಕಲಿತೆ, ನಾಟಕ ಕಲಿತೆ, ಓದುವುದು ಕಲಿತೆ, ಬರೆಯುವುದನ್ನೂ ಕಲಿತೆ, ಅದು ನನ್ನ ಪಾಲಿನ ವಿಶ್ವವಿದ್ಯಾಲಯ ಆಯಿತು. ಹೀಗಾಗಿ ಎಲ್ಲಾ ರಂಗದವರ ಸಹವಾಸ ದೊರೆಯಿತು ಎನ್ನುತ್ತಾರೆ ಲೇಖಕರು. ಒಳ್ಳೆಯ ಸ್ನೇಹಿತರ ಸಂಪರ್ಕ, ಹಲವಾರು ಸಂಘಟನೆಗಳ ಸಖ್ಯ ಅದು ಮುಕ್ತ ವಿಶ್ವವಿದ್ಯಾಲಯ ಇದ್ದಂತೆ. ಕಾಮ್ರೆಡ್ ಇಮ್ತಿಯಾಜ್‌ರವರು ನಾನು ಎಸ್.ಎಸ್.ಎಲ್.ಸಿ. ಎಂದು ಹೇಳಿಕೊಳ್ಳಲು ಸಂಕೋಚವಾಗುತ್ತಿತ್ತು ಎಂದಿದ್ದಾರೆ. ಅನೇಕ ಪ್ರಖ್ಯಾತ  ಸಾಹಿತಿಗಳು, ಸಮಾಜ ಸುಧಾರಕರು, ಯಾವುದೇ ಅಕಾಡೆಮಿಕ್ ಹಿನ್ನೆಲೆಯಿಲ್ಲದೆ ಬಹುದೊಡ್ಡ ಸಾಧನೆ ಮಾಡಿರುವುದು ನಮ್ಮ ಕಣ್ಣ ಮುಂದಿದೆ. ಸಾಹಿತ್ಯದಲ್ಲಿ ಶಿವರಾಮ ಕಾರಂತರು, ಸಮಾಜ ಸುಧಾರಣೆಯಲ್ಲಿ ರಾಮಸ್ವಾಮಿ ಪೆರಿಯಾರ್‌ರವರು, ಅಧ್ಯಾತ್ಮದಲ್ಲಿ ಸಂತ ಶಿಶುನಾಳ ಷರೀಫರು, ಉನ್ನತ ವ್ಯಾಸಂಗ ಮಾಡಿದವರಲ್ಲ. ಆದ್ದರಿಂದ ಸಾಧನೆ ಮಾಡಲು ಹೆಚ್ಚಿನ ಸಾಕ್ಷರತೆ ಮಾನದಂಡ ಅಲ್ಲವೇ ಅಲ್ಲ. ಬದುಕೇ ಎಲ್ಲವನ್ನೂ ಕಲಿಸುತ್ತದೆ. ಹೀಗಾಗಿ ಅದು ಒಂದು ಪಾಠ ಶಾಲೆಯೇ ಹೌದು. 

ಕಾಂ. ಇಮ್ತಿಯಾಜ್‌ ಹುಸೇನ್‌ರವರ ಹೆಜ್ಜೆ ಗುರುತುಗಳಲ್ಲಿ ಅವರೇ ನಿವೇದಿಸಿಕೊಂಡ ಬಾಲ್ಯದ ಕಡು ಕಷ್ಟಗಳು, ಶಿಕ್ಷಣ ಪಡೆಯಲು ಆದ ಪಡಿಪಾಟಲು, ಬಾಲ್ಯ ಸಹಜ ತುಂಟಾಟಗಳು, ದಾಯಾದಿಗಳ ಅವಕೃಪೆ, ಸಿನಿಮಾದ ಆಕರ್ಷಣೆ ಇವೆಲ್ಲವೂ ಬಹುಪಾಲು ಆರ್ಥಿಕ ರೇಖೆಯ ಕೆಳಗಿನವರ ಅನುಭವಗಳೇ ಆಗಿರುತ್ತವೆ. ಆನಂತರ ಅವರು ಚಿತ್ರದುರ್ಗದಿಂದ ದಾವಣ ಗೆರೆಗೆ ಬದುಕು ಅರಸಿಕೊಂಡು ಬಂದಿದ್ದು ಒಂದು ಟರ್ನಿಂಗ್ ಪಾಯಿಂಟ್ ಎನ್ನಬಹುದು. ಕಾರ್ಮಿಕರೇ ತುಂಬಿರುವ ನಗರಸಭೆಯಲ್ಲಿ ದಿನಗೂಲಿ ಕಾಯಕದಿಂದ ಶುರುವಾದ ಅವರ ಜೀವನ ಅನವರತವೂ ಅವರ ಅಭ್ಯುದಯಕ್ಕಾಗಿ ಶ್ರಮಿಸಿದ್ದು ಅವರಿಗೆ ಇನ್ನೊಂದು ಪ್ಲಸ್ ಪಾಯಿಂಟ್ ಆಯಿತೆನ್ನಬಹುದು. ಮಾನವೀಯತೆಯ ಹಂಬಲ ಅಲ್ಲಿ ಚಿಗುರೊಡೆದು, ಮುಂದೆ ಅದು ನಿಷ್ಠಾವಂತ ಕಮ್ಯುನಿಸ್ಟ್‌ ಆಗಿ ಪರಿವರ್ತನೆ ಆಗಿದ್ದು ಮತ್ತೊಂದು ಮಜಲು. ಈ ಸಂಘಟನೆಯಲ್ಲಿಯೇ ಅವರ ಅಸ್ಮಿತೆಗೊಂದು ಸ್ಪಷ್ಟ ನೆಲೆ ದೊರಕಿದ್ದು. 

ಪತ್ರಿಕೆ ಓದುವುದೆಂದರೆ ಲೋಕಾನುಭವದ ಬಹುರೂಪಿ ದರ್ಶನವಾದಂತೆ. ಅದರ ಆಕರ್ಷಣೆ ಮತ್ತು ಓಘಕ್ಕೆ ಸ್ಪರ್ಶ ಸುಖ ಅನುಭವಿಸಿದವರು ಕೊನೆಗೊಂದು ಸಾರಿ ಒಳ್ಳೆಯ ವ್ಯಕ್ತಿಯಾಗಿ ಪರಿವರ್ತಿತ ಆಗಲೇ ಬೇಕು. ಆ ತರಹದ ಸಮ್ಮೋಹಕ ಶಕ್ತಿ ಅದಕ್ಕೆ ಇದೆ. ಅದಕ್ಕೆ ಡಾ. ಅಂಬೇಡ್ಕರ್‌ ಹೇಳುವುದು `ನಾನು ಪ್ರತಿಮೆಗಳಲ್ಲಿ ಅಲ್ಲ, ಪುಸ್ತಕಗಳಲ್ಲಿ ಸಿಗುತ್ತೇನೆ. ನಾನು ಪೂಜೆ ಮಾಡುವುದರಿಂದ ಅಲ್ಲ, ಓದುವುದರ ಮೂಲಕ ಸಿಗುತ್ತೇನೆ’ ಎಂದಿರುವುದು. ಕಾಮ್ರೆಡ್‌ ಇಮ್ತಿಯಾಜ್‌ರವರು ಪತ್ರಿಕೆಗೆ ಬರೆಯುತ್ತಾ ಕೊನೆಗೆ ತಾವೇ ಒಂದು ಪತ್ರಿಕೆಗೆ ಸಂಪಾದಕರಾಗುವುದು ಆ ಹಿನ್ನೆಲೆಯಲ್ಲಿ. ಆನಂತರ ನಾಟಕ ಮಾಡುವುದು, ಸಮುದಾಯದಂತಹ ಸಾಂಸ್ಕೃತಿಕ ಸಂಘಟನೆಯಲ್ಲಿ ತೊಡಗಿಸಿಕೊಳ್ಳುವುದು ಅವರ ವ್ಯಕ್ತಿತ್ವ ಗಟ್ಟಿಗೊಳ್ಳಲು ಕಾರಣವಾಗುತ್ತವೆ. ಎಪ್ಪತ್ತರ ದಶಕದಲ್ಲಿ ದಾವಣಗೆರೆಯಲ್ಲಿ ಕಮ್ಯುನಿಸ್ಟ್ ಪಕ್ಷದ ಪರಮೋಚ್ಛ ಕಾಲ ಎಂದೇ ಹೇಳಬಹುದು. ಅಂತಹ ಕಾಲಘಟ್ಟದಲ್ಲಿ ಆಗಲೇ ಕಮ್ಯುನಿಸ್ಟ್ ತೆಕ್ಕೆಗೆ ಬಿದ್ದಿದ್ದ ಇಮ್ತಿಯಾಜ್‌ರವರು ಕಾರ್ಮಿಕರಿ ಗಾಗಿ ಏನೇನು ಮಾಡಬೇಕೋ ಅದೆಲ್ಲವನ್ನು ಪ್ರಾಂಜಲಪೂ ರ್ವಕವಾಗಿ ಮಾಡಿದರು. ಅವರ ಕಷ್ಟ, ಸುಖಕ್ಕೆ ಆಸರೆಯಾದರು, ಅವರ ದುಃಖ, ದುಮ್ಮಾನಗಳಲ್ಲಿ ಭಾಗಿಯಾದರು,  ಅವರ ಕಣ್ಣೀರು ಒರೆಸಲು ಸಫಲರಾದರು. ಹೀಗಾಗಿ ತಮ್ಮ ಹಿರಿಯ ನಾಯಕರಿಗೆ ಆದರ್ಶವಾಗುವ ರೀತಿಯಲ್ಲಿ ಪಕ್ಷ ಬೆಳೆಸಿದರು ಮತ್ತು ಅವರ ಪ್ರೀತಿ, ಗೌರವ ಗಳಿಸಿದರು.

ಕಮ್ಯುನಿಸಂ ಪಿತಾಮಹಾ ಕಾರ್ಲ ಮಾರ್ಕ್ಸ್‌ಗಿಂತಲೂ ಪೈಗಂಬರರು ಶ್ರಮಿಕರ ಬಗ್ಗೆ ಹೇಳಿದ ಮಾತು ಔಚಿತ್ಯವೆನಿಸುತ್ತದೆ. `ಬಡವನು ಒಡೆದ ಕಟ್ಟಿಗೆಯ ಶ್ರಮದಿಂದ ಅವನ ಬೆವರು ಭೂಮಿಗೆ ಬೀಳುವ ಮುನ್ನವೇ ಅವನ ಕೂಲಿಯನ್ನು ಕೊಟ್ಟು ಬಿಡು’ ಎಂದು ಮಹಮ್ಮದ್ ಪೈಗಂಬರ್ (ಸ) ಅವರು ಹೇಳುತ್ತಿದ್ದರು. ಪ್ರವಾದಿಯವರ ಈ ಮಾತು ಕಾರ್ಲ್ ಮಾರ್ಕ್ಸ್‌ನ ಶ್ರಮಿಕ ಕಾರ್ಮಿಕರಿಗೆ ಇರುವ ಪ್ರೀತಿಗಿಂತಲೂ ಮೊದಲೇ ವ್ಯಕ್ತವಾಗಿತ್ತು. ಈ ಪುಸ್ತಕಕ್ಕೆ ಬೆನ್ನುಡಿ ಬರೆದಿರುವ ಪ್ರೊ. ಸಿ.ಕೆ. ಮಹೇಶ್‌ರವರು ಕೃತಿಗೊಂದು ಚೆಂದದ ಪ್ರಭಾವಳಿ ಕಟ್ಟಿದ್ದಾರೆ. `ಇಮ್ತಿಯಾಜ್‌ಗೆ ಬಡತನವು ಎಲ್ಲಿಯೂ ನೆಗೆಟಿವ್ ಆಗಿ ಪ್ರಭಾವ ಬೀರಿಲ್ಲ. ಬದಲಿಗೆ ಅದೊಂದು ಸಂಘರ್ಷ ಮತ್ತು ಸವಾಲಾಗಿ ಪ್ರೇರಣೆ ನೀಡಿದೆ. ಯಾರ ಬದುಕೂ ಸರಳ ರೇಖಾತ್ಮಕವಾಗಿರುವುದಿಲ್ಲ. ವೃತ್ತಾಕಾರದಲ್ಲಿ ವೃದ್ಧಿಸುತ್ತಾ ಸಾಗುತ್ತಿರುತ್ತದೆ. ಬದುಕು ಸುಮ್ಮನಿರುವುದಿಲ್ಲ. ಸದಾ ಕ್ರಿಯಾಶೀಲವಾಗಿರುತ್ತದೆ. ಕೆಡವುತ್ತಾ, ಕಟ್ಟುತ್ತಾ ಮುಂದೆ ಮುಂದೆ ಹೆಜ್ಜೆ ಇಡುತ್ತದೆ’ ಎಂದಿದ್ದಾರೆ. ಕಾಲಚಕ್ರ ತಿರುಗುತ್ತಲೇ ಇರುತ್ತದೆ. ಬಡತನ, ಸಿರಿತನ, ಕಷ್ಟ, ಸುಖ, ಸೋಲು, ಗೆಲುವು, ಅವಮಾನ, ಬಹುಮಾನ, ಸನ್ಮಾನ ಹೀಗೆ ನಿರಂತರ ಸಾಗುವ ಬದುಕಿನಲ್ಲಿ ಏರಿಳಿತಗಳ ಸೂಚ್ಯಂಕ ಇದ್ದೇ ಇರುತ್ತದೆ. ಒಳ್ಳೆಯದನ್ನು ನಗದೀಕರಿಸಿಕೊಳ್ಳುವ ತಾಳ್ಮೆ, ಛಲ ಇದ್ದರೆ ಯಶಸ್ಸು ಸಿಕ್ಕೇ ಸಿಗುತ್ತದೆ. ಅದು ಇಮ್ತಿಯಾಜ್ ಅವರ ಬದುಕಿನಲ್ಲಿ ಹಾಸು ಹೊಕ್ಕಾಗಿದೆ. 

ಹಲವು ಕಾರಣಗಳಿಂದ ಕಮ್ಯುನಿಸ್ಟ್ ಪಕ್ಷದಲ್ಲಿನ ವೈರುಧ್ಯಗಳಿಂದ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರ ಒತ್ತಾಸೆಯ ಮೇರೆಗೆ ಕಾಂ. ಇಮ್ತಿಯಾಜ್ ಅವರು ಕೊನೆಗೂ ಕಾಂಗ್ರೆಸ್ ಪಕ್ಷ ಸೇರಿ ಸ್ವಲ್ಪ ದಿನಗಳಲ್ಲಿ ಅಲ್ಲಿಯ ನಾಯಕರ ಮನ ಗೆದ್ದು ಒಳ್ಳೆಯ ಕಾರ್ಯಕರ್ತನಾಗಿ ಜನಪ್ರಿಯರಾಗುತ್ತಾರೆ. ಅದರ ಫಲ ಆಶ್ರಯ ಸಮಿತಿಯ ಅಧ್ಯಕ್ಷ ಸ್ಥಾನ ಹುಡುಕಿಕೊಂಡು ಬರುತ್ತದೆ. ಶ್ರಮಜೀವಿಗಳಿಗೆ, ಅರ್ಹರಿಗೆ ಸೂರು ನೀಡುವಲ್ಲಿ ಅಹರ್ನಿಶಿ ಕೆಲಸ ಮಾಡಿ ಹೆಸರು ಗಳಿಸುತ್ತಾರೆ, ಕರುಬುವವರ ಕೆಂಗಣ್ಣಿಗೂ ಗುರಿಯಾಗುತ್ತಾರೆ. `ಕಮ್ಯುನಿಸ್ಟ್ ಚಳುವಳಿಯಿಂದ ಕಾಂಗ್ರೆಸ್ ಬಳುವಳಿವರೆಗೆ’ ಹೀಗೆ ಅವರ ಹೆಜ್ಜೆ ಗುರುತುಗಳು ಸಾಗುತ್ತವೆ. ಒಳ್ಳೆಯ ಮುಖಪುಟದಿಂದ ಪುಸ್ತಕದ ಆಕರ್ಷಣೆ ಹೆಚ್ಚಿದೆ. ಅಲ್ಲಲ್ಲಿ ಸುಳಿದಿರುವ ಅಕ್ಷರ ರಾಕ್ಷಸರನ್ನು ತಹಬಂದಿಗೆ ತರಬಹುದಿತ್ತು. ದಿವಂಗತ ಈಶ್ವರ ಪ್ರಸಾದರ ಗೆಳೆಯ, ನನ್ನ ಆತ್ಮೀಯರೂ ಆದ ಕಾಮ್ರೆಡ್ ಇಮ್ತಿಯಾಜ್ ಹುಸೇನ್ ಅವರು ಮುಂದೆ ಹಲವಾರು ಕೃತಿಗಳ ವಾರಸುದಾರರಾಗಲಿ ಎಂದು ಶುಭ ಕೋರುತ್ತೇನೆ.


ಡಿ. ರಾಮನಮಲಿ
ಹರಪನಹಳ್ಳಿ.

error: Content is protected !!