ಲಾಕ್‌ಡೌನ್‌ ‘ಲಾಠಿ’ಯಿಂದ ಕೊರೊನಾ ಗೆಲ್ಲಲಾಗದು

ಕೆಲವೇ ದಿನಗಳ ಹಿಂದಷ್ಟೇ ಕೇಂದ್ರ ಸರ್ಕಾರ ವಿಶ್ವ ಆರೋಗ್ಯ ಸಂಘಟನೆ ಕೊರೊನಾ ಕುರಿತು ನೀಡಿದ ವರದಿಗಳನ್ನು ಮುಂದಿಟ್ಟುಕೊಂಡು, ಭಾರತದಲ್ಲಿ ಕೊರೊನಾ ಸೋಂಕುಗಳು ಹಾಗೂ ಮರಣದ ಪ್ರಮಾ ಣಗಳು ವಿಶ್ವದಲ್ಲೇ ಅತ್ಯುತ್ತಮ ಸ್ಥಿತಿಯಲ್ಲಿದೆ ಎಂದು ಸಾರಿ ಸಾರಿ ಹೇಳಿತ್ತು. ಮತ್ತೊಂದೆಡೆ ಕರ್ನಾಟಕದಲ್ಲಿ ಲಾಕ್‌ಡೌನ್‌… ಲಾಕ್‌ ಡೌನ್‌… ಎಂಬ ಅಪಸ್ವರ ಕೇಳಿ ಬರುತ್ತಿದೆ!

ಈ ಎರಡೂ ವರದಿಗಳು ಅದೇಕೋ ಟ್ಯಾಲಿಯೇ ಆಗುತ್ತಿಲ್ಲ. ಒಂದರಲ್ಲಿ ಭಾರತದ ಸ್ಥಿತಿ ವಿಶ್ವದಲ್ಲೇ ಚೆನ್ನಾಗಿದೆ ಎಂದು ಆಕಾಶದತ್ತತ್ತ ಏರಿಸಿದರೆ, ಮತ್ತೊಂದೆಡೆ ಕರ್ನಾಟಕದಲ್ಲಿ ಮತ್ತೆ ಲಾಕ್‌ಡೌನ್‌ ಹೇರುತ್ತಾ ಪಾತಾಳದಿತ್ತಿತ್ತ ಜಾರಿಸಲಾಗುತ್ತಿದೆ.

ಏನಿದರ ಮರ್ಮ? ಕೊರೊನಾ ವರ್ಲ್ಡೋ ಮೀಟರ್ ಸಂಗ್ರಹಿಸಿರುವ ಮಾಹಿ ತಿಯ ಪ್ರಕಾರ ಪ್ರತಿ ದಶಲಕ್ಷ ಜನಸಂಖ್ಯೆಗೆ ವಿಶ್ವದಲ್ಲಿ ಸಂಭವಿಸುತ್ತಿರುವ ಸರಾಸರಿ ಸಾವುಗಳ ಪ್ರಮಾಣ 1,699. ಈ ಸಾವುಗಳ ಸಂಖ್ಯೆ ಭಾರತದಲ್ಲಿ 17 ಆಗಿದ್ದರೆ, ಕರ್ನಾಟಕ ದಲ್ಲಿ 8.8 ಆಗಿದೆ.

ದಶಲಕ್ಷ ಜನಸಂಖ್ಯೆಗೆ ಸೋಂಕುಗಳ ಪ್ರಮಾಣ ಪರಿಗಣಿಸಿದಾಗ ವರ್ಲ್ಡೋಮೀಟರ್ ಅಂಕಿ ಅಂಶಗಳ ಪ್ರಕಾರ ಕತಾರ್ 37,045 ಸಂಖ್ಯೆಯೊಂದಿಗೆ ಮೊದಲ ಸ್ಥಾನದಲ್ಲಿದೆ. ಭಾರತದಲ್ಲಿ ಪ್ರತಿ ದಶಲಕ್ಷ ಜನಸಂಖ್ಯೆಗೆ ಸೋಂಕಿತರ ಪ್ರಮಾಣ 658 ಆಗಿದ್ದರೆ, ರಾಜ್ಯದಲ್ಲಿ 680 ಆಗಿದೆ.

ದಶಲಕ್ಷ ಜನಸಂಖ್ಯೆಗೆ ಹೋಲಿಕೆ ಮಾಡಿ ದಾಗ ಕರ್ನಾಟಕ ‍ಇಷ್ಟೊಂದು §ಉತ್ತಮ’ ಸ್ಥಿತಿಯಲ್ಲಿರುವಾಗ ಲಾಕ್‌ಡೌನ್‌ ಹೇರಿಕೆ ಏಕೆ? ಎಂಬ ಪ್ರಶ್ನೆ ಉದ್ಭವಿಸದೇ ಇರದು. ಯಾರಿಗಾದರೂ ಫೋನ್ ಮಾಡಿದರೆ §ದೇಶ ಈಗ ಅನ್‌ಲಾಕ್‌ ಪ್ರಕ್ರಿಯೆಯಲ್ಲಿದೆ…’ ಎಂಬ ರಾಗ ಕೇಳಿ ಬರುತ್ತದೆ. ಆದರೆ, ಸರ್ಕಾರಿ ಮಂದಿ ಮಾತ್ರ ಲಾಕ್‌ ಪ್ರಕ್ರಿಯೆಯಲ್ಲಿ ತೊಡಗಿದ್ದಾರೆ!

ಮತ್ತೆ ಲಾಕ್‌ಡೌನ್‌ ಹೇರಿಯೇ ಬಿಡೋಣ ಎಂದು ಹೇಳುತ್ತಿರುವ ಜನಪ್ರತಿನಿಧಿಗಳ ಸಂಖ್ಯೆಯೇನೂ ಕಡಿಮೆ ಇಲ್ಲ. ಆದರೆ, ಭಾರತ ಸರ್ಕಾರ ನಮ್ಮ ದೇಶದ ಪರಿಸ್ಥಿತಿ ಅತ್ಯುತ್ತಮವಾಗಿದೆ ಎಂದು ಹೇಳುತ್ತಿರುವಾಗ, ಅದೇ ಸರಾಸರಿ ಯಲ್ಲಿ ಲಾಕ್‌ಡೌನ್ ಹೇರುವುದಾದರೆ ಪರಿಸ್ಥಿತಿ ಉತ್ತಮವಾಗಿದೆ ಎಂದು ಹೇಳುವುದರಲ್ಲಿ ಏನರ್ಥ? ಒಂದು ವೇಳೆ ಪರಿಸ್ಥಿತಿ ಕೆಟ್ಟಿದೆ ಎಂದರೆ ನಾವು ನಿಭಾಯಿಸುವಲ್ಲಿ ವಿಫಲರಾಗಿದ್ದೇವೆ ಎಂದು ಲಕ್ಷಣವಾಗಿ ಒಪ್ಪಿಕೊಳ್ಳಬಾರದೇ?

ಜನರು ನಮ್ಮ ಕೊರೊನಾ ನಿಯಂತ್ರಣ ಕಾರ್ಯಕ್ಕೆ ಸಹಕರಿಸುತ್ತಿಲ್ಲ ಎಂಬುದು ಈಗ ಸರ್ಕಾರಿ ಮಂದಿಯಿಂದ ಕೇಳಿ ಬರುತ್ತಿರುವ ಆಕ್ಷೇಪಣೆ. ವಾಸ್ತವವಾಗಿ ವಿಶ್ವದಲ್ಲೇ ಕಠಿಣ ಲಾಕ್‌ಡೌನ್‌ ಹೇರಿಕೆ ಮಾಡಿದ್ದು ಭಾರತ. ಇಲ್ಲಿಯಷ್ಟು ಸುದೀರ್ಘ ಹಾಗೂ ಕಠಿಣ ಲಾಕ್‌ಡೌನ್ ಅನ್ನು ವಿಶ್ವದ ಬೇರೆ ಯಾವುದಾದರೂ ದೇಶದಲ್ಲಿ ಹೇರಿಕೆ ಮಾಡಿದ ಉದಾಹರಣೆ ಇದುವರೆಗೂ ಕಂಡು ಬಂದಿಲ್ಲ.

ಜನ ತಲೆ ಕೆಡುವ ಹಂತದವರೆಗೂ ಮನೆಯಲ್ಲೇ ಕುಳಿತಿದ್ದರು. ಮನೆಯಲ್ಲಿ ಸಾವು ಸಂಭವಿಸಿದಾಗಲೂ ಒಂದೆರಡು ದಿನ ಮನೆಯಲ್ಲಿ ಇರದವರೂ ಸಹ ತಿಂಗಳುಗಟ್ಟಲೆ ಮನೆಯಲ್ಲಿದ್ದರು. ಇನ್ನೆಷ್ಟರ ಮಟ್ಟಿಗಿನ ಸಹಕಾರವನ್ನು ಸರ್ಕಾರ ಬಯಸುತ್ತಿದೆ? ಎಂಬುದು ಗೊತ್ತಾಗುತ್ತಿಲ್ಲ. ಇತ್ತೀಚೆಗಂತೂ ಶಾಸಕರು, ಸಂಸದರು ಹಾಗೂ ಸಚಿವರಿಗೇ ಕೊರೊನಾ ಬರುತ್ತಿದೆ. ಹಾಗಾದರೆ ಅವರೂ ಸಹ ಸಾಮಾಜಿಕ ಅಂತರ ಗಾಳಿಗೆ ತೂರಿದ್ದರು ಎಂದು ಹೇಳಲು ಸರ್ಕಾರ ಸಿದ್ಧವಿದೆಯೇ?

ಜುಲೈ 13ರ ಪ್ರಕಾರ ರಾಜ್ಯದಲ್ಲಿ ಸಕ್ರಿಯ ಕೊರೊನಾ ಸೋಂಕಿತರ ಸಂಖ್ಯೆ 24,572 ಹಾಗೂ ಐ.ಸಿ.ಯು.ನಲ್ಲಿರುವರ ಸಂಖ್ಯೆ 545. ಸರ್ಕಾರದ ವಾರ್‌ರೂಮ್ ವರದಿಯ ಪ್ರಕಾರ ಶೇ.80.6ರಷ್ಟು ರೋಗಿಗಳ ಅಸಿಂಪ್ಟಮೆಟಿಕ್ (ಸೋಂಕು ಲಕ್ಷಣವಿಲ್ಲದವರು). ಸರ್ಕಾರದ ಲೆಕ್ಕಾಚಾರ ಹಿಡಿದು ನೋಡುವುದಾದರೆ ರಾಜ್ಯದಲ್ಲಿ ಸುಮಾರು ನಾಲ್ಕು ಸಾವಿರ ಜನರಲ್ಲಷ್ಟೇ ಸೋಂಕು ಲಕ್ಷಣಗಳಿವೆ. ಇಷ್ಟು ಸಂಖ್ಯೆಯ ಜನರಿಗೆ ಚಿಕಿತ್ಸೆ ನಿಭಾಯಿಸಲು ಸರ್ಕಾರದಿಂದ ಸಾಧ್ಯವಿಲ್ಲವೇ? ಎಂಬ ಪ್ರಶ್ನೆಯೂ ಮೂಡುತ್ತದೆ.

ಲಾಕ್‌ಡೌನ್‌ ಮಾಡಿದ ತಕ್ಷಣ ರೋಗ ಹರಡುವುದು ನಿಲ್ಲದು ಎಂಬುದು ಈ ಹಿಂದೆ ಹೇರಲಾದ ಸತತ ಲಾಕ್‌ಡೌನ್‌ಗಳಿಂದ ಗೊತ್ತಾಗಿದೆ. ಈಗ ಮತ್ತೆ ವಾರೊಪ್ಪತ್ತಿನ ಲಾಕ್‌ಡೌನ್‌ ಹೇರಲಾಗುತ್ತಿದೆ. ಇದರಿಂದ ಆರೋಗ್ಯ ವ್ಯವಸ್ಥೆ ಸುಧಾರಿಸುತ್ತದೆಯೇ? ಅಥವಾ ಸೋಂಕಿನ ಪ್ರಮಾಣ ಕಡಿಮೆಯಾಗುತ್ತದೆಯೇ?

ಯಾವುದಾದರೂ ದೇಶ ಕೊರೊನಾ ಗೆದ್ದಿದೆ ಎಂದರೆ ಕೊರೊನಾ ಸೋಂಕಿತರ ಸಂಖ್ಯೆ ಕಡಿಮೆ ಮಾಡಿ ಅಲ್ಲ, ಕೊರೊನಾ ಸೋಂಕಿತರಿಗೆ ಸಮರ್ಪಕ ಚಿಕಿತ್ಸೆ ನೀಡಿ ಎಂಬುದು ಜಾಗತಿಕ ದಾಖಲೆಗಳು ಹೇಳುತ್ತಿವೆ. ಮುಂದುವರೆದ ದೇಶಗಳಲ್ಲೂ ಕೊರೊನಾ ಸಂಖ್ಯೆ ಪ್ರತಿ ದಶಲಕ್ಷಕ್ಕೆ ಭಾರತಕ್ಕಿಂತ ಅತಿ ಹೆಚ್ಚಿನ ಪ್ರಮಾಣದಲ್ಲೇ ಇದೆ.

ನಮ್ಮ ಸರ್ಕಾರ ಮಾತ್ರ ಆರೋಗ್ಯ ವ್ಯವಸ್ಥೆಯ ಅಸ್ತ್ರವನ್ನು ಬಿಟ್ಟು ಜನರನ್ನು ನಿಯಂತ್ರಿಸುವ ಮೂಲಕ ಕೊರೊನಾ ಕಡಿಮೆ ಮಾಡುವ ಉಲ್ಟಾ ಪ್ರಯತ್ನ ನಡೆಸುತ್ತಿರುವಂತೆ ಕಾಣುತ್ತಿದೆ. ಇದರಿಂದ ಜನರ ಆರೋಗ್ಯ ಸುಧಾರಿಸುತ್ತದೋ ಇಲ್ಲವೋ ಗೊತ್ತಿಲ್ಲ, ಆರ್ಥಿಕತೆಯಂತೂ ಮಕಾಡೆ ಮಲಗುತ್ತದೆ. ಸರ್ಕಾರ ಆದಷ್ಟು ಬೇಗ ಲಾಕ್‌ಡೌನ್ ಮೂಲಕ ಜನರ ನಿಯಂತ್ರಣ ಬಿಟ್ಟು ಆರೋಗ್ಯ ವ್ಯವಸ್ಥೆ ಒಂದು ಹಂತಕ್ಕೆ ತರಬೇಕಿದೆ. ಇಲ್ಲವಾದರೆ, ಕೊರೊನಾಗಿಂತ ಲಾಕ್‌ಡೌನ್‌ ಕಾರಣಕ್ಕೆ ಜನ ಹಾಗೂ ಆರ್ಥಿಕತೆ ಅಧೋಗತಿಗೆ ತಲುಪುವಲ್ಲಿ ಸಂಶಯವೇನೂ ಇಲ್ಲ.


ಎಸ್.ಎ. ಶ್ರೀನಿವಾಸ್‌
9583641532
[email protected]

error: Content is protected !!