ಕಲೆ ಬೇಕು – ಮಾನವ ಜೀವಿತದ ಸಾರ್ಥಕತೆಗೆ…

ನಾವಿಂದು ಅತಿಯಾದ ಒತ್ತಡದಲ್ಲಿ ಬದುಕುತ್ತಿದ್ದೇವೆ. ಚಿಕ್ಕ ಮಕ್ಕಳಿಂದ ತೊಡಗಿ ವೃದ್ಧರಾದಿಯಾಗಿ ಎಲ್ಲರೂ ಒಂದಿಲ್ಲೊಂದು ಒತ್ತಡವನ್ನು ಎದುರಿಸುತ್ತಲೇ ದಿನ ದೂಡುವ ಸಂದರ್ಭ ಇವತ್ತಿನದಾಗಿದೆ. ಜೀವನದಲ್ಲಿ ಮಿತಿಮೀರಿದ ಪೈಪೋಟಿಯನ್ನು ಎದುರಿಸಬೇಕಾದ ಪರಿಸ್ಥಿತಿಯ ಪರಿಣಾಮವಾಗಿ ರಕ್ತದೊತ್ತಡ, ಮಧುಮೇಹ, ಹೃದಯ ಸಂಬಂಧಿ ಕಾಯಿಲೆಗಳು, ಮಾನಸಿಕ ಖಿನ್ನತೆ ಇವೇ ಮೊದಲಾದ ರೋಗಗಳಿಂದ ಬಳಲುವವರ ಸಂಖ್ಯೆ ಹೆಚ್ಚುತ್ತಿದೆ.  ಧನಿಕರಾಗುವುದೇ ಮುಖ್ಯ ಎಂಬ ಮನೋಭಾವ ಸಾಮಾಜಿಕರಲ್ಲಿ ಉದ್ಭವಿಸಿರುವುದರಿಂದ ವೈಯಕ್ತಿಕ ಮತ್ತು ಸಾಮಾಜಿಕ ನೆಮ್ಮದಿ ಮರೀಚಿಕೆಯಾಗುತ್ತಿದೆ. 

  ಒತ್ತಡ ಸನ್ನಿವೇಶವನ್ನು ಸಹಜವಾಗಿ, ಸಮಾಧಾನವಾಗಿ ಸ್ವೀಕರಿಸಿ, ಮಾನಸಿಕ ನೆಮ್ಮದಿಯನ್ನು, ಸ್ವಾಸ್ಥ್ಯವನ್ನು ಕಾಯ್ದುಕೊಂಡು ಸಂತಸಯುಕ್ತ ಜೀವನವನ್ನು ಸಾಗಿಸುವ ಬಗೆಯನ್ನು  ಕೆಲವು ಪ್ರಜ್ಞಾವಂತ, ಸಾಮಾಜಿಕ ಕಳಕಳಿಯ ಮನಸ್ಸುಗಳು, ಸಾಮಾಜಿಕ ಸಂಘಟನೆಗಳು ಯೋಗ-ಧ್ಯಾನ ಶಿಬಿರಗಳು, ನೃತ್ಯ, ಸಂಗೀತ, ಚತ್ರಕಲೆಯ ಕಮ್ಮಟಗಳು/ಕಾರ್ಯಾಗಾರಗಳ ಮೂಲಕ ತಿಳಿಸಿಕೊಡುವ ಪ್ರಯತ್ನ ಮಾಡುತ್ತಿವೆ. ಇವೆಲ್ಲ ಸಮಾಜದಲ್ಲಿ ಏರ್ಪಡುತ್ತಿರುವ ಸ್ವಾಗತಾರ್ಹ ಬೆಳವಣಿಗೆಗಳು ಮತ್ತು ಕಲೆಗೂ ಮಾನವ ಬದುಕಿಗೂ ಇರುವ ಅವಿನಾಭಾವ ಸಂಬಂಧದ ದ್ಯೋತಕಗಳು.

ಬದುಕು ಎಲ್ಲಾ ಚಿಂತೆ, ಜಂಜಡಗಳ ನಡುವೆ ನೆಮ್ಮದಿಯಿಂದ ಕೂಡಿರಬೇಕೆಂದರೆ ಒಂದಿಲ್ಲೊಂದು ಲಲಿತಕಲಾ ಆರಾಧನೆ ದಿನನಿತ್ಯದ ಪ್ರಮುಖ ಅಂಗವಾಗಿ ಅಳವಡಿಕೆಯಾಗಬೇಕಾದುದು ಅತ್ಯಂತ ಅಗತ್ಯ. ಏಕೆಂದರೆ ಲಲಿತಕಲೆ ಯಾವುದೇ ಇರಲಿ, ಅದರಲ್ಲಿ ಅಂತರ್ಗತವಾಗಿರುವ ಲಯ, ಸಂತುಲನತೆ, ಲಾಸ್ಯ, ಬಗೆ ಬಗೆಯ ಸಂವೇದನಾ ಸ್ಫುರಣ ಭಾವತರಂಗೋತ್ಪತ್ತಿ ಸಾಮರ್ಥ್ಯ ಇವೆಲ್ಲಾ ಅಂಶಗಳೂ ಮಾನವ ಜೀವಿಯನ್ನು ಒಂದಿಷ್ಟು ಸಮಯದ ಮಟ್ಟಿಗಾದರೂ ಒಂದು ವಿಶಿಷ್ಟವಾದ, ಅನನ್ಯವಾದ ರಸಲೋಕಕ್ಕೆ ಕೊಂಡೊಯ್ಯಬಲ್ಲವುಗಳಾಗಿರುತ್ತವೆ. ಆ ಸಮಯದಲ್ಲಿ ಮನಸ್ಸಿಗೆ ಒದಗುವ ಪ್ರಫುಲ್ಲತೆಯ ಸಕಾರಾತ್ಮಕ ಪರಿಣಾಮ ದೇಹದ ನರ ಮಂಡಲದ ಮೇಲೆ ಉಂಟಾಗುವುದರಿಂದ ಆ ಮುೂಲಕ ಮನಸ್ಸು ಮತ್ತು ದೇಹಕ್ಕೆ ಸ್ಫೂರ್ತಿ ದೊರೆತು, ಅದರಿಂದ ನಿತ್ಯ ಜೀವನದ ಧಾವಂತವನ್ನು ಸಮಾಧಾನಿಸಿಕೊಳ್ಳುವ ಮತ್ತು ಎದುರಿಸುವ ಶಕ್ತಿ ಕೂಡ ಮಾನವರ ವ್ಯಕ್ತಿತ್ವದಲ್ಲಿ ಸಂಚಯನಗೊಳ್ಳುತ್ತದೆಂಬುದಾಗಿ ಮನಃ ಶಾಸ್ತ್ರಜ್ಞರ ಅಭಿಮತ.

ಬಹುಶಃ ಆ ಕಾರಣಕ್ಕಾಗಿಯೇ ಏನೋ ಜಗದ್ವಿಖ್ಯಾತ ಅನೇಕ ಮೇಧಾವಿಗಳು ತಮ್ಮಗಳ ನಿತ್ಯದ ಬದುಕಿನಲ್ಲಿ ಕಲೆಗೂ ಸ್ಥಾನ ನೀಡಿದ್ದುಂಟು. ಉದಾ-ಭಾರತದ ಶ್ರೇಷ್ಠ ಅಣುವಿಜ್ಞಾನಿ ಹೋಮಿ ಬಾಬಾ ಉತ್ತಮ ರೇಖಾಚಿತ್ರ ರಚಿಸುತ್ತಿದ್ದರು. ಇನ್ನೋರ್ವ ಶ್ರೇಷ್ಠ ವಿಜ್ಞಾನಿ ಡಾ. ರಾಜಾ ರಾಮಣ್ಣ ಕೆಲವು ಸಂಗೀತವಾದ್ಯ ನುಡಿಸುವುದನ್ನು ಹವ್ಯಾಸವಾಗಿರಿಸಿಕೊಂಡಿದ್ದರು. ಸದ್ಯದಲ್ಲಿ -ವಿಜ್ಞಾನ ಲೇಖಕರಾಗಿರುವ ನಾಗೇಶ್ ಹೆಗಡೆ ಕೂಡ ಚಿತ್ರಕಲೆಯಲ್ಲಿ ಆಸಕ್ತರು.          

ಭಾರತೀಯ ಪರಂಪರೆ ಕಲೆಗೆ ತುಂಬಾ ಪ್ರಾಮುಖ್ಯತೆ ನೀಡಿದೆ. ಪ್ರಾಚೀನ ಭಾರತೀಯರು ಭರತ ಮುನಿ ಕೃತ ನಾಟ್ಯಶಾಸ್ತ್ರವನ್ನು “ನಾಟ್ಯವೇದ”ಎಂದು ಕರೆದರು. ಅದನ್ನು ಪಂಚಮವೇದ ಎಂತಲೂ ವರ್ಣಿಸಿದರು. 

ಚಿತ್ರಕಾರರು, ಶಿಲ್ಪಿಗಳು, ವಾಸ್ತು ಶಿಲ್ಪಜ್ಞರನ್ನು ದೇವಶಿಲ್ಪಿ ವಿಶ್ವಕರ್ಮನ ಅಂಶಜರೆಂದು ಗೌರವಿಸಿದರು. ಸಂಸ್ಕೃತ ಭಾಷೆಯ ಸುಭಾಷಿತ ಕಲೆಯ ಮಹತ್ವವನ್ನು ಈ ರೀತಿ ವ್ಯಾಖ್ಯಾನಿಸಿದೆ. “ಸಾಹಿತ್ಯ ಸಂಗೀತ ಕಲಾ ವಿಹೀನಹ ಸಾಕ್ಷಾತ್ ಪಶುಹು ಪುಚ್ಛ ವಿಷಾಣ ಹೀನಹ, ತೃಣಮ್ ನ ಖಾದನ್ನಪಿ ಜೀವಮಾನಹ ತತ್ ಭಾಗದೇಯಂ ಪರಮಮ್ ಪಶೂನಾಮ್”ಎಂದು. ಅದರ ಅರ್ಥವಿಷ್ಟೇ-ಸಾಹಿತ್ಯ, ಸಂಗೀತ, ಕಲಾದಿಗಳಲ್ಲಿ ಆಸಕ್ತಿ ಇರದವನು ಕೊಡು, ಬಾಲವಿಲ್ಲದ ಪಶುವೇ ಸರಿ. ಪಶುಗಳಾದರೂ ಅಂತಹವರುಗಳಿಗಿಂತ ಮೇಲು ಏಕೆಂದರೆ ಪಶುಗಳು ತಿನ್ನುವ ಮೇವನ್ನು ಇವರುಗಳಿಂದ ತಿನ್ನಲು ಆಗುವುದಿಲ್ಲ .      

ನಮ್ಮ ಪ್ರಾಚೀನ ಭಾರತೀಯರು ಕಲೆಯನ್ನು ದಿನನಿತ್ಯದ ಬದುಕಿನಲ್ಲಿ ಹಾಸುಹೊಕ್ಕಾಗಿಸಿ ಕೊಂಡಿದ್ದರು. ನಿತ್ಯ ಕೈಯಾರೆ ಸುಂದರ ರಂಗೋಲಿ ಹಾಕುವುದು, ತಾಂಬೂಲ ಕರಡಿಗೆ ಮೇಲ್ಮೈಯನ್ನು ಕುಸುರು ನಕ್ಷೆಗಳಿಂದ ಒಪ್ಪಾಗಿರಿಸುವುದು. ಈ ಎಲ್ಲಾ ಸಾಮಾನ್ಯ ವಸ್ತುಗಳಲ್ಲೂ ಕಲಾತ್ಮಕತೆ ಮೆರೆಸುತ್ತಿದ್ದರು. ಹಾಗಾಗಿ ಅವು ಮನಸ್ಸಿಗೆ ಖುಷಿ ನೀಡುತ್ತಿದ್ದವು.

ಒಟ್ಟಿನಲ್ಲಿ ಮನಸ್ಸು ಮುದವಾಗಿರಲು, ಬದುಕು ಆನಂದಮಯವಾಗಿರಲು ಒಂದಲ್ಲಾ ಒಂದು ಲಲಿತಕಲಾ ಪ್ರಕಾರ ಮಾನವ ಜೀವಿಯ ಬದುಕಿನಲ್ಲಿ ಅಳವಡಿಕೆಯಾಗಿರಬೇಕು. ಹಾಗಾದಾಗ ಮಾತ್ರ ಮನುಷ್ಯ ಜೀವಿಗೆ ದೈಹಿಕ ಮತ್ತು ಮಾನಸಿಕ ಆರೋಗ್ಯ ಪ್ರಾಪ್ತಿಯಾಗುತ್ತದೆ, ಬದುಕು ಧನ್ಯವೆನಿಸುತ್ತದೆ.


ದತ್ತಾತ್ರೇಯ ಎನ್.ಭಟ್
ದಾವಣಗೆರೆ.
[email protected]

error: Content is protected !!