ಆಚಾರ್ಯರಾಗುವುದೆಂದರೆ…..

ಅಲ್ಲಮಪ್ರಭುವಿನ ವಚನವೊಂದು ಗುರು-ಶಿಷ್ಯರ ನಡುವಿನ ಬಾಂಧವ್ಯದ ಬೌದ್ಧಿಕ ಏರಿಳಿತ ಕುರಿತು ವಿಶಿಷ್ಟವಾಗಿ ಹೇಳುತ್ತದೆ.  ನಾಲ್ಕು ಯುಗಗಳಲ್ಲಿ ಗುರುವು ಶಿಷ್ಯನಿಗೆ ಕ್ರಮವಾಗಿ ಬಡಿದು, ಬಯ್ದು, ಝಂಕಿಸಿ ಕೊನೆಗೆ ವಂದಿಸಿ ಬುದ್ಧಿ  ಹೇಳಿದರೆ  ಶಿಷ್ಯ ಎಲ್ಲಾ ಯುಗದಲ್ಲೂ `ಆಗಲಿ ಮಹಾಪ್ರಸಾದ’ ಎನ್ನುತ್ತಾನೆ.  ಯಾವ ಯುಗದಲ್ಲೂ ಕಲಿಕಾರ್ಥಿಯ ಮನೋಧರ್ಮದಲ್ಲಿ ಬದಲಾಗಿಲ್ಲ. ಆದರೆ, ಕಲಿಸುವ ಗುರುವಿನ ಭೌತಿಕ ವರ್ತನೆ, ಆತನ  ಬದಲಾದ ಬೌದ್ಧಿಕ ದಾರಿದ್ರ್ಯದ  ಸ್ಥಿತಿಯನ್ನು ಸಂಕೇತಿಸುತ್ತದೆ.

ಈ ವಚನದ ವಿಶ್ಲೇಷಣೆ ಮಾಡುವಾಗ ಸಾಮಾನ್ಯವಾಗಿ `ಕಲಿಗಾಲ ಎಷ್ಟು ಕೆಟ್ಟು ಹೋಗಿದೆ ನೋಡಿ, ಗುರುಗಳು ವಿದ್ಯಾರ್ಥಿಗಳಿಗೆ ನಮಸ್ಕರಿಸಿ ಪಾಠ ಮಾಡಬೇಕಾದ ಪರಿಸ್ಥಿತಿ ಬಂದಿದೆ’ ಎಂದು ವಿದ್ಯಾರ್ಥಿ ಸಮುದಾಯದ ಮನೋಧರ್ಮವನ್ನು ಹೀಗಳೆದು ಮಾತಾಡುವುದು ರೂಢಿಯಲ್ಲಿದೆ.

ನಮ್ಮ ಭಾರತ ವಿಶ್ವಗುರುವಿನ ಸ್ಥಾನದಲ್ಲಿದೆ ಎಂದು ಹೆಮ್ಮೆ ಪಡುತ್ತಿರುವ ಸಂದರ್ಭವಿದು. ಆ  ಗುರುವಿನ  ಮಹತ್ವಾಕಾಂಕ್ಷೆ ಮತ್ತು  ಕಾಳಜಿ ಹೆಚ್ಚು ಸೂಕ್ಷ್ಮವೂ, ಸಂವೇದನಾಶೀಲವೂ, ಜವಾಬ್ದಾರಿಯುತವೂ ಆಗಿರಬೇಕಾದ ಹೊತ್ತು ಕೂಡ ಹೌದು. ಜಗತ್ತಿನಲ್ಲಿ  ಅತಿ  ಹೆಚ್ಚು ಯುವ ಸಂಪನ್ಮೂಲವನ್ನು  ಹೊಂದಿದ ದೇಶ ಭಾರತ. ಯುವ ಜನರ ಉತ್ಸಾಹವನ್ನು ಎಲ್ಲರನ್ನೂ  ಒಳಗೊಳ್ಳುವ    ಸದೃಢ ವಿವೇಕಯುತ  ಸಮಾಜ ನಿರ್ಮಾಣಕ್ಕೆ ಬಳಸಿಕೊಳ್ಳುವುದು ಮಾಹಿತಿ ತಂತ್ರಜ್ಞಾನದಿಂದ ಸಾಧ್ಯವಾದೀತೇ? ಭೌತಿಕ ಸಂಪತ್ತನ್ನು  ಬೌದ್ಧಿಕ ಸಂಪನ್ನತೆಯ    ಪರ್ಯಾಯವೆಂದು ಭಾವಿಸಬಹುದೇ? ಕಂಪ್ಯೂಟರ್,  ಇಂಟರ್ನೆಟ್  ಮತ್ತು ಮೊಬೈಲ್ ಗಳನ್ನು ಮೀರಿದ ನೈತಿಕ ಅನುಸಂಧಾನವೊಂದು ದೇಶದ ಭಾವನಾತ್ಮಕ ಸಹಜೀವನವನ್ನು, ಅದರೆಲ್ಲಾ ವೈವಿಧ್ಯಗಳೊಂದಿಗೆ ಕಾಪಾಡುವ ಸಂಜೀವಿನಿಯಾಗ ಬಲ್ಲುದು ಎಂಬ      ಹೊಣೆಯರಿತ ಗುರು ಮಾತ್ರ  ಧರಣಿ ದಿನಮಣಿ ತಾರೆ ನಿಹಾರಿಕೆಯ ನೇಮಿಯ ಮೀರಿ ಗ್ರಹಿಸಿ ಆಲೋಚಿಸುವ ವಿದ್ಯಾರ್ಥಿ ಸಮುದಾಯವನ್ನು ಮುನ್ನಡೆಸಬಲ್ಲ. Teachers are powerful promoters of good things. 

ಆದರೆ ಬಹು ಮಾಧ್ಯಮ ಯುಗದಲ್ಲಿ ಕಲಿಯುತ್ತಿರುವ ವಿವಿಧ ಹಂತದ ವಿದ್ಯಾರ್ಥಿಗಳ ಆಸಕ್ತಿ ಕೇಂದ್ರಗಳೂ ಬಹುಮುಖಿಯಾಗಿರುವುದು ಸಹಜ. ಅದರಲ್ಲೂ ತಂತ್ರಜ್ಞಾನ ತೆರೆದು ಕೊಟ್ಟಿರುವ ಅಪರಿಮಿತ ಮಾಹಿತಿ ಜಗತ್ತಿನಲ್ಲಿ ಗುರುವಿನ ಪ್ರಸ್ತುತತೆಯನ್ನು ಪ್ರಶ್ನಿಸುವ  ಆಲೋಚನೆಗಳು ಹುಟ್ಟಿಕೊಳ್ಳುತ್ತಿವೆ. ಇದು ಗುರುವಿಗೆ ಸವಾಲಿನ ಕಾಲಘಟ್ಟ.

ಆನ್‌ಲೈನ್ ತರಗತಿಗಳ ಅಗತ್ಯವನ್ನು ತಂದೊಡ್ಡಿರುವ ಕೊರೊನಾದ ಆತಂಕದ ಸಮಯದಲ್ಲಿ, ವಿದ್ಯಾರ್ಥಿಗಳನ್ನು ಮಾಹಿತಿಪೂರ್ಣವಾಗಿ ತಲುಪುವುದಷ್ಟೇ ಜರೂರಾಗಿದೆ. ಇಂತಹ ಜರೂರುಗಳು ಚಿಂತನಾಶೀಲ ಅಧ್ಯಾಪಕರ ಕ್ರಿಯಾತ್ಮಕತೆಯನ್ನು ಅಣಕಿಸುವಂತೆ ಕಾಣುವುದು ನಿಜವಾದರೂ ತತ್ಕಾಲದ ಅನಿವಾರ್ಯತೆಯನ್ನು ಅರ್ಥ ಮಾಡಿಕೊಂಡು ಮುನ್ನಡೆಯಬೇಕಾಗಿದೆ. ಆದರೆ ಗುರು-ಶಿಷ್ಯರ ನಡುವೆ ಕೇವಲ ಮಾಹಿತಿಗಳ ವಿನಿಮಯವಾಗುತ್ತಾ ಅಂಕ ಗಳಿಕೆಯಿಂದ ಮಾತ್ರ  ವಿದ್ಯಾರ್ಥಿಗಳ ಪ್ರತಿಭಾ ಸಂಪನ್ನತೆಯನ್ನು ಅಳೆಯುವ ಅಪಾಯವನ್ನು ಕಳೆದ ಎರಡು ದಶಕಗಳಿಂದ ಎದುರಿಸುತ್ತಿದ್ದೇವೆ. ತೊಂಬತ್ತರ ದಶಕದ ಆರಂಭದಲ್ಲಿಯೇ ಹುಟ್ಟಿಕೊಂಡ  ಶೇಕಡಾ ಐವತ್ತೈದಕ್ಕಿಂತ ಹೆಚ್ಚು ಅಂಕಗಳು ಬೇಕು ಎಂಬ ವಿದ್ಯಾರ್ಥಿ ಸಮುದಾಯದ ಅಘೋಷಿತ ಆಗ್ರಹ ಉನ್ನತ ಶಿಕ್ಷಣದ ಏರುದಾರಿಯನ್ನು ಬದಲಾಯಿಸಿಬಿಟ್ಟಿತೋ ಏನೋ.  ಸಾಮಾಜಿಕವಾದ ಏನೇನೋ ಕಾರಣಗಳು ರಾಜಕೀಕರಣ ಗೊಂಡು  ವಿಶ್ವವಿದ್ಯಾಲಯಗಳಿಂದ ಪದವಿ, ಸ್ನಾತಕೋತ್ತರ ಪದವಿ ಪಡೆದ ವಿದ್ಯಾರ್ಥಿಗಳು  ಸಮಾನ ಪ್ರತಿಭಾವಂತ ರಾಗಿ ಹೊರಬರುವುದು ಸಾಧ್ಯವಾಯಿತು. ಇದು ಅನಪೇಕ್ಷಿತ ಪೈಪೋಟಿಗೆ ಕಾರಣವಾದಂತೆ ಡಿಸ್ಟಿಂಕ್ಷನ್ಡ್ ನಿರುದ್ಯೋಗಿಗಳ ಸಂಖ್ಯೆ ಹೆಚ್ಚಾಗಲೂ ಕಾರಣವಾಗಿದೆ.

ಗುರುವಿನ ಉದ್ಬೋಧಕ ಶಕ್ತಿಯನ್ನು ತಾತ್ಸಾರದಿಂದ ಅನುಮಾನಿಸಿದ ಸಮಾಜ ಮತ್ತು  ತನ್ನ ಸೃಜನಶೀಲತೆಯನ್ನು ಕಾಲದ ಅಪೇಕ್ಷೆಗಳಿಗೆ ಅನುಗುಣವಾಗಿ ಆತ್ಯಂತಿಕಗೊಳಿಸಿಕೊಳ್ಳದ ಗುರುವಿನ ಉಡಾಫೆ ಇದಕ್ಕೆ ಕಾರಣ. ಈ ಬಿಕ್ಕಟ್ಟನ್ನು ನಮ್ಮ ಭಾರತೀಯ ಗುರುಪರಂಪರೆಯ ಒಳಗಿನಿಂದಲೇ ಪಡೆಯಬಹುದಾದ ಪರಿಹಾರಗಳಿಂದ ಎದುರಿಸಬಹುದು. ಪರಶುರಾಮ ಮತ್ತು ದ್ರೋಣರಂತಹ ಗುರುಗಳ ವಿದ್ವತ್ತು ಮತ್ತು ಶ್ರದ್ಧೆಯನ್ನು ರೂಪಕವಾಗಿ ನೋಡುವ ಕ್ಷಣವು, ಅವರ ಜ್ಞಾನನಿರಾಕೃತ  ಸಾಮಾಜಿಕ ನಡೆಯುವ ಸಮಕಾಲೀನ ನಿರಾಕರಣೆಯ ಆಯುಧವಾಗಿ ಪ್ರಯೋಗವಾಗದಂತೆ ಕಾಯುವ ಕ್ಷಣವಾಗಿ ಬರಬೇಕು. ಭಾರತೀಯ ಪುರಾತನಾಚಾರ್ಯರ  ಸಾಮಾಜಿಕ ನಡೆಗಳು ವರ್ತಮಾನದ ಆಶಯಗಳಾಗಿರಬೇಕೇ ಎಂಬ ಆತ್ಮಾವಲೋಕನ  ಸಾಧ್ಯವಾಗುತ್ತಾ ಅವರ ಜ್ಞಾನಶ್ರದ್ಧೆಗೆ ಮಿಗಿಲಾದ ಮಾದರಿಗಳನ್ನು ಹುಡುಕಿಕೊಳ್ಳಬೇಕಾಗಿದೆ.

ಗುರು ತರಗತಿಯ ಅಪೇಕ್ಷೆಗಳನ್ನು ಪೂರೈಸುತ್ತಲೇ, ತರಗತಿಯ ಮಿತಿಗಳನ್ನು ದಾಟಿ ಬಹುಶ್ರುತ ಜ್ಞಾನದಾಹಿಯಾಗಿ ರೂಪುಗೊಳ್ಳುವ ಆಚಾರ್ಯನಾಗಲು ಪ್ರಯತ್ನಶೀಲನಾಗಬೇಕು. ವಿದ್ಯಾರ್ಥಿಗಳು ಇಂಥವರಿಂದ ಹೆಚ್ಚು ಅಪೇಕ್ಷಿಸುತ್ತಾರೆ. ಕಾತರದ ಕಣ್ಣುಗಳಿಂದ ಕಲಿಯುತ್ತಾ ಕನಸುಗಳನ್ನು ಸೃಷ್ಟಿಸುತ್ತಾರೆ. ಕನಸುಗಳು ಆಲೋಚನೆಗಳಾಗಿ, ಆಲೋಚನೆಗಳು ಕ್ರಿಯೆಗೆ ಕಾರಣವಾಗುತ್ತವೆ.

ಕುವೆಂಪು ಅವರೆ `ಬೆರಳ್‌ಗೆ ಕೊರಳ್’ ನಾಟಕದಲ್ಲಿ ಏಕಲವ್ಯನಿಂದ ಗುರುದಕ್ಷಿಣೆಯಾಗಿ ಬಲಗೈ ಹೆಬ್ಬೆರಳನ್ನು ಪಡೆಯಬಂದ ದ್ರೋಣಾಚಾರ್ಯರು ಗಗನಪಕ್ಷಿಯೊಂದನ್ನು ಹೊಡೆದುರುಳಿಸಲು ಹೇಳುತ್ತಾರೆ.  `ಅಪರಾಧಮಿಲ್ಲದಾ ಸಾಧುವಂ ಕೊಲಲ್ಕಲ್ತು, ಆಚಾರ್ಯ, ಆ ವಿದ್ಯೆಯಂ ನೀನಿತ್ತುದೆನಗೆ’ ಎಂದಾಗ ದ್ರೋಣರಿಗೆ ಎದೆತುಂಬಿ ಬರುತ್ತದೆ. `ಎನ್ನ ಹಿರಿಮೆಯನೆನಗೆ ತೋರಿದಯ್; ನೀನು ಗುರುವೆಂದೊಲಿದೆ ನನಗೆ ಗುರುತನವನಿತ್ತೆ. ಮೇಣ್, ಗುರುವಾದೆ.’ ಎಂದು ಪುಳಕಿತರಾಗುತ್ತಾರೆ. ಕಲಿಕೆಯಿಂದ ದತ್ತವಾದ ಉದಾತ್ತ ಚಿಂತನೆಯಿಂದ ಶಿಷ್ಯ  ಗುರುವನ್ನು ಆವರಿಸಿಕೊಂಡರೆ, ಶಿಷ್ಯ ಒಲಿದಿತ್ತ  ಗುರು ಪದವಿಯನ್ನು ಒಪ್ಪಿಕೊಂಡು  ವಿನೀತನಾಗುತ್ತಾನೆ.

ಗುರುವಿನಿಂದ ಪಡೆದ ಅಣುಮಾತ್ರದಿಂದ ಅಪಾರವನ್ನು ಸೃಷ್ಟಿಸುವ ವಿದ್ಯಾರ್ಥಿಗಳು, ಗುರುತನದ ಗುರುತ್ವವನ್ನು ಕಾಪಾಡುತ್ತಾರೆ. ಬೇಟೆಯೇ ಬದುಕಾಗಿರುವವನ ಹೃದಯದಿಂದ ಅಹಿಂಸೆಯ ಮಹತ್ವ ಹೊಮ್ಮುತ್ತದೆ. ಗುರು-ಶಿಷ್ಯರಿಬ್ಬರೂ ಧನ್ಯರಾಗುತ್ತಾರೆ. ಅಂತಹವರನ್ನು ಒಳಗೊಂಡ ಸಮಾಜವೂ ಸಭ್ಯವಾಗುತ್ತದೆ.

ಅಂಕ ಕಲಿತನವನ್ನು ಉತ್ಪಾದಿಸುವ ವಿಶ್ವವಿದ್ಯಾಲಯಗಳ ನೆಲೆ, ಸಮಾಜಮುಖಿ ಆಲೋಚನೆ ಮತ್ತು ಮಾನವೀಯ ಕ್ರಿಯೆಗಳನ್ನು ಬಿತ್ತಿ ಬೆಳೆಯುವ ಫಲವತ್ತಾದ ನೆಲವಾಗಬೇಕು. ನಮ್ಮ ಪರಂಪರೆಯನ್ನು ದಕ್ಕಿಸಿಕೊಳ್ಳದೆ ವರ್ತಮಾನವನ್ನು ಕಟ್ಟಲಾಗುವುದಿಲ್ಲ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕಿದೆ. ಪರಂಪರೆ ಪಿತ್ರಾರ್ಜಿತ ಆಸ್ತಿಯಂತೆ ಸಲೀಸಾಗಿ ದಕ್ಕುವುದಿಲ್ಲ. ಅದನ್ನು ಪಡೆಯಬೇಕೆಂದರೆ  ಕಡುಕಷ್ಟದ ನಿಷ್ಠೂರ ಹಾದಿಯನ್ನು ಆರಿಸಿಕೊಳ್ಳಬೇಕು. ಈ ಜವಾಬ್ದಾರಿಯನ್ನು ಹೊರಬೇಕಾದವರು ಯಾರು?

ಗುರುವಿನ ಗೆರೆ ದಾಟಿ ಆಚಾರ್ಯರಾದವರು ಹಲವರಿದ್ದಾರೆ. ಆಚಾರ್ಯರಾಗಿ ದಣಿಯದೆ ದುಡಿದು ಸಮಾಜಕ್ಕೆ, ದೇಶಕ್ಕೆ ಜಗತ್ತಿಗೇ ಸುಂಟರಗಾಳಿಯ ನಡುವೆಯೂ ಹಣತೆ ಬೆಳಗಿದ ಋಷಿಸದೃಶ ಮಹಾಮಹಿಮರು ಕೆಲವರು ಮಾತ್ರ. ಬುದ್ಧ, ಸಾಕ್ರಟೀಸ್, ಬಸವಣ್ಣ,  ಗೆಲಿಲಿಯೋ, ವಿವೇಕಾನಂದರು, ಗಾಂಧಿ, ಐನ್ ಸ್ಟೈನ್, ಅಂಬೇಡ್ಕರ್, ಕುವೆಂಪು ಅಂತಹವರು ಸತ್ಯಶೋಧನೆಯ ನಿಷ್ಠೂರ ಹಾದಿಯಲ್ಲಿ ಮಾನವತೆಗೆ ಶ್ರೇಷ್ಠತೆ ತಂದವರು. ಜ್ಞಾನ ದರ್ಶನದ ಮಹಾಯಾನದಲ್ಲಿ ತೊಡಗಿಸಿಕೊಂಡ ಗುರು-ಶಿಷ್ಯರಿಬ್ಬರೂ   ಅಂತಹವರ   ಸಾಲಿನಲ್ಲಿ ನಿಲ್ಲುವುದಕ್ಕೆ ಪ್ರಯತ್ನಿಸಬೇಕು.  ಸಾಧ್ಯವಾಗದಿದ್ದರೆ ಅವರ ಶಾಲೆಗಾದರೂ ಸೇರುವ ಆಸಕ್ತಿ ತೋರಬೇಕಾಗಿದೆ.

ಅಲ್ಲಮ ವಿದ್ಯಾರ್ಥಿಗಳಿಗೆ ವಂದಿಸಿ, ಬುದ್ಧಿಯ ಹೇಳುವ ಗುರುವಿನ ಸ್ಥಿತಿ ಕಂಡು ಮರುಕ ಪಡುತ್ತಿದ್ದಾನೆ. ಅವನು ಹೇಳಿದ ಕಲಿಗಾಲ ಮುಗಿದಂತಿಲ್ಲ. ಕಾಲನ ಕಲಿತನಕ್ಕೆ ನಾವೂ ಬೆರಗಾಗಬೇಕು…


ಆಚಾರ್ಯರಾಗುವುದೆಂದರೆ..... - Janathavani

 

ದಾದಾಪೀರ್ ನವಿಲೇಹಾಳ್
ಮೊ. 94813-09075

 

error: Content is protected !!