ಅಮೆರಿಕದಲ್ಲಿ ವಿಮೆ ಆಧರಿತ ಚಿಕಿತ್ಸಾ ವ್ಯವಸ್ಥೆ ಪ್ರಚಲಿತದಲ್ಲಿದೆ. ಅಲ್ಲಿ ಬೇರೆ ದೇಶಗಳ ರೀತಿಯಲ್ಲಿ ಸರ್ಕಾರದ ಮೂಲಕ ಚಿಕಿತ್ಸೆ ಸಿಗುವುದು ಕಡಿಮೆ. ಈ ಸಮಸ್ಯೆ ನೀಗಿಸಲು ಬರಾಕ್ ಒಬಾಮಾ ಅಧ್ಯಕ್ಷರಾಗಿರುವಾಗ ವಿಮೆ ಹೊಂದಿರದವರಿಗೂ ಆರೋಗ್ಯ ಸೇವೆ ಒದಗಿಸಲು ಅಫೋರ್ಡೆಬಲ್ ಕೇರ್ ಆಕ್ಟ್ (ಎ.ಸಿ.ಎ.) ಜಾರಿಗೆ ತಂದಿದ್ದರು. ಇದು ಒಬಾಮಾ ಕೇರ್ ಎಂದೇ ಹೆಸರಾಗಿತ್ತು.
ಈಗ ಟ್ರಂಪ್ ಆಡಳಿತ ಯೋಜನೆಗೆ ಬ್ರೇಕ್ ಹಾಕಲು ಹೊರಟಿದ್ದಾರೆ. ಇದರಿಂದಾಗಿ ಅಮೆರಿಕದ 23 ದಶಲಕ್ಷ ಜನರು ಆರೋಗ್ಯ ಸೇವೆ ಕಳೆದುಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ.
ವಿಶ್ವದ ಮುಂದುವರೆದ ದೇಶಗಳಲ್ಲಿ ಸಾರ್ವತ್ರಿಕವಾಗಿ ಎಲ್ಲರಿಗೂ ಆರೋಗ್ಯ ಸೇವೆಯ ಗ್ಯಾರಂಟಿ ಇದೆ. ಇದಕ್ಕೆ ಅಮೆರಿಕ ಮಾತ್ರ ಅಪವಾದದಂತಿದೆ. ಇಲ್ಲಿನ ಸಾಕಷ್ಟು ಜನರು ಉದ್ಯೋಗದಲ್ಲಿರುವಾಗ ತಮ್ಮ ಮಾಲೀಕರಿಂದ ವಿಮಾ ಸೌಲಭ್ಯ ಪಡೆದಿರುತ್ತಾರೆ. ಉದ್ಯೋಗ ಹೋಯಿತು ಎಂದರೆ ವಿಮೆ ಇಲ್ಲದೇ, ಚಿಕಿತ್ಸೆಗಾಗಿ ಸ್ವಂತ ಹಣ ಖರ್ಚು ಮಾಡಬೇಕಾಗುತ್ತದೆ. ಇನ್ನು ಅಮೆರಿಕದ ಆರೋಗ್ಯ ಸೇವೆ ಬಲು ದುಬಾರಿ.
ಅಮೆರಿಕದ ಮೈಖೆಲ್ ಫೋರ್ ಎಂಬುವವರು ಕೊರೊನಾದಿಂದ ತೀವ್ರ ಅನಾರೋಗ್ಯ ಪೀಡಿತರಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಅವರ ಚಿಕಿತ್ಸೆಯ ಬಿಲ್ ಬರೋಬ್ಬರಿ 8.30 ಕೋಟಿ ರೂ. ಬಂದಿತ್ತು. ದಿನವೊಂದಕ್ಕೆ ಐ.ಸಿ.ಯು. ವೆಚ್ಚ 7.35 ಲಕ್ಷ ರೂ. ಎಂದು ತಿಳಿಸಲಾಗಿತ್ತು.
ನ್ಯೂಯಾರ್ಕ್‌ನ 33 ವರ್ಷದ ಜಾನೆಟ್ ಮೆಂಡೆಜ್ ಅವರ ಕೊರೊನಾ ಚಿಕಿತ್ಸಾ ಬಿಲ್ 3 ಕೋಟಿ ರೂ.ಗಳ ಗಡಿ ದಾಟಿದೆ. ಈ ಮೇಲಿನ ಎರಡೂ ರೋಗಿಗಳು ವಿಮೆ ಹೊಂದಿದ್ದು, ತಮ್ಮ ಮೇಲೆ ಹೊರೆ ಬರುವುದಿಲ್ಲ ಎಂದುಕೊಂಡಿದ್ದಾರೆ.
ಇಂತಹ ಸಂದರ್ಭದಲ್ಲೇ ಒಬಾಮಾ ಕೇರ್ ಎಂಬ ಎ.ಸಿ.ಎ. ನೆರವಿಲ್ಲದೇ 23 ದಶಲಕ್ಷ ಜನರ ಪರಿಸ್ಥಿತಿ ಚಿಂತಾಜನಕವಾಗಲಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಆರೋಗ್ಯ ವಿಮೆ ಇಲ್ಲದವರ ಪರಿಸ್ಥಿತಿ ಅಮೆರಿಕದಲ್ಲಿ ಘೋರವಾಗಿದೆ. 2005ರಲ್ಲಿ ವಿಮೆ ಇಲ್ಲದ ಕಾರಣಕ್ಕೆ ಅಮೆರಿಕದ 45 ಸಾವಿರ ಜನರು ಸಾವನ್ನಪ್ಪಿದ್ದರು ಎಂದು ಹೇಳಲಾಗಿತ್ತು. ಕೊರೊನಾ ಸಂದರ್ಭದಲ್ಲಿ ವಿಮೆ ಇಲ್ಲದಿದ್ದರೆ ಸ್ಥಿತಿ ಇನ್ನಷ್ಟು ಘೋರವಾಗಲಿದೆ ಎಂದು ಪರಿಣಿತರು ಹೇಳುತ್ತಿದ್ದಾರೆ.
ಭಾರತಕ್ಕೂ ಎಚ್ಚರಿಕೆ : ಬಹುತೇಕ ದೇಶಗಳಲ್ಲಿ ಆರೋಗ್ಯದ ವೆಚ್ಚವನ್ನು ಸರ್ಕಾರಗಳೇ ಭರಿಸುತ್ತವೆ. ಆದರೆ, ಭಾರತದಲ್ಲಿ ಆರೋಗ್ಯ ವೆಚ್ಚದ ಬಹುಪಾಲನ್ನು ಜನರು ತಮ್ಮ ಜೇಬಿನಿಂದಲೇ ಭರಿಸುತ್ತಿದ್ದಾರೆ. ಈ ಬಗ್ಗೆ ಸಾಕಷ್ಟು ವರ್ಷಗಳಿಂದಲೂ ಕಳವಳ ವ್ಯಕ್ತವಾಗುತ್ತಲೇ ಇದೆ.
ಆಯುಷ್ಮಾನ್ ಭಾರತ್ ರೀತಿಯ ವಿಮಾ ಯೋಜನೆಗಳ ಮೂಲಕ ಜನರಿಗೆ ಆರೋಗ್ಯ ಖಾತ್ರಿಯನ್ನು ನೀಡಲಾಗುತ್ತಿದೆ ಎಂದು ಸರ್ಕಾ ರಗಳು ಹೇಳುತ್ತಿವೆಯಾದರೂ, ವಾಸ್ತವವಾಗಿ ಯೋಜನೆಗಳು ಇನ್ನೂ ಪೂರ್ಣ ಫಲ ನೀಡಿಲ್ಲ.
ಇತ್ತೀಚಿನ ವರ್ಷಗಳಲ್ಲಿ ಸರ್ಕಾರಿ ಆರೋಗ್ಯ ವಲಯಕ್ಕಿಂತ ಖಾಸಗಿ ವಲಯವೇ ಅತಿ ವೇಗವಾಗಿ ಬೆಳೆಯುತ್ತಿದೆ. ಬಡವರಿಗಂತೂ ಖಾಸಗಿ ಸೇವೆ ಕನಸಿನ ಮಾತೇ ಆಗಿದೆ.
ಊರೆಲ್ಲ ಕೊರೊನಾ ಹರಡಿರುವಾಗ ಬಡವರಿಗೆ ಆಸ್ಪತ್ರೆ ಬಾಗಿಲು ಬಂದ್ ಮಾಡಲು ಹೊರಟರೆ ಏನಾಗುತ್ತದೆ ? ಇಂತಹ ಒಂದು ಪ್ರಯೋಗವನ್ನು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾಡಲು ಹೊರಟಿರುವಂತಿದೆ.
ಸರ್ಕಾರಿ ಮರ್ಜಿ : ಇದು ಸಾಲದು ಎಂಬಂತೆ ಆರೋಗ್ಯ ಸೇವೆಯನ್ನು ಸರ್ಕಾರ ಗಳು ತಮಗೆ ಸರಿ ಎನಿಸಿದ ರೀತಿ ಬದಲಿಸು ತ್ತಲೂ ಇರುತ್ತವೆ. ಇದು ಆರೋಗ್ಯ ಸೇವೆ ಮೇಲೆ ಪರಿಣಾಮ ಬೀರುತ್ತಲಿದೆ. ರಾಜ್ಯ ಸರ್ಕಾರದ ಯಶಸ್ವಿನಿ ಆರೋಗ್ಯ ಯೋಜನೆ ಜನಪ್ರಿಯ ವಾಗಿತ್ತು. ಆಡಳಿತದ ಮಂದಿ ಇದ್ದಕ್ಕಿ ದ್ದಂತೆ ಅದನ್ನು ರದ್ದುಗೊಳಿಸಿದರು. ಎಲ್ಲರಿಗೂ ಉಚಿತ ಆರೋಗ್ಯ ಸೇವೆ ಎನ್ನುತ್ತಲೇ ಎಪಿಎಲ್ ಹಾಗೂ ಬಿಪಿಎಲ್ ಎಂಬ ಭೇದ ಮಾಡಿದರು.
ಕೇಂದ್ರ ಸರ್ಕಾರ ಸಹ ನಿರ್ದಿಷ್ಟ ವರ್ಗದ ವರಿಗೆ ಮಾತ್ರ ಆಯುಷ್ಮಾನ್ ಭಾರತ್ ಯೋಜನೆ ಸೀಮಿತಗೊಳಿಸಿದೆ. ಉಳಿದವರ ಪರಿಸ್ಥಿತಿ ಈಗಲೂ ಅತಂತ್ರವಾಗಿದೆ. ಕೊರೊನಾ ದಂತಹ ಸ್ಥಿತಿಯಲ್ಲಿ ಎಪಿಎಲ್‌ನಲ್ಲಿದ್ದವರು, ಬಿಪಿಎಲ್‌ಗೆ ಬರಲು ಹೆಚ್ಚೇನೂ ಸಮಯ ಹಿಡಿ ಯುವುದಿಲ್ಲ. ಹೀಗಾಗಿ ಈ ಭೇದ ಆರೋಗ್ಯ ಸೇವೆಗೆ ಅನ್ವಯಿಸುವುದು ಸಮಂಜಸವೇ ಅಲ್ಲ.
ಸರ್ಕಾರಿ ಆಸ್ಪತ್ರೆಗಳ ಸಬಲೀಕರಣ : ಅಮೆರಿಕದಂತಹ ದೇಶವೇ ಖಾಸಗಿ ಆರೋಗ್ಯ ವಲಯವನ್ನು ಅವಲಂಬಿಸಿ ಬಸವಳಿದಿದೆ. ಹೀಗಿರುವಾಗ ಭಾರತದಂತಹ ಬಡ ದೇಶ ಖಾಸಗಿ ಆರೋಗ್ಯ ಸೇವೆಯ ಮೂಲಕ ಸಾರ್ವ ತ್ರಿಕ ಆರೋಗ್ಯ ಕಲ್ಪಿಸುವುದು ದೂರದ ಮಾತು. ಹೀಗಾಗಿ ಸರ್ಕಾರಿ ಆಸ್ಪತ್ರೆಗಳ ಸಬಲೀಕರಣ ಈಗ ಅನಿವಾರ್ಯದ ಹಾದಿಯಾಗಿದೆ.
ಕೊರೊನಾ ಸಂದರ್ಭ ನಮ್ಮ ಆರೋಗ್ಯ ವ್ಯವಸ್ಥೆಯ ಲೋಪಗಳನ್ನು ಬಟಾ ಬಯಲು ಮಾಡಿದೆ. ದುರ್ಬಲಗೊಳಿಸಲಾಗಿದ್ದ ಸರ್ಕಾರಿ ಆಸ್ಪತ್ರೆಗಳು ಕೊರೊನಾ ಚಿಕಿತ್ಸೆಯಲ್ಲಿ ಮುಂಚೂಣಿಯಲ್ಲಿವೆ. ಸಾಮಾನ್ಯ ಸಂದರ್ಭದಲ್ಲೂ ಸಹ ಈ ಆಸ್ಪತ್ರೆಗಳು ಮುಂಚೂಣಿಯಲ್ಲಿರುವಂತೆ ಮಾಡಿದರೆ ಮಾತ್ರ ಎಲ್ಲರಿಗೂ ಆರೋಗ್ಯ ಕಲ್ಪಿಸುವ ಆಶಯ ಈಡೇರಿಸಲು ಸಾಧ್ಯ.
ಅಸ್ಮಿತಾ ಎಸ್. ಶೆಟ್ಟರ್
ದಾವಣಗೆರೆ.