ಕರೊನಾ ಬಂದಾಗಿನಿಂದ ನಮ್ಮೆಲ್ಲರ ಜೀವನ ಅನಿಶ್ಚಿತತೆಯಿಂದ ಕೂಡಿದೆ. ದಿನ ಬೆಳಗಾದರೆ ಭಯದಿಂದ ಬದುಕುವಂತಾಗಿದೆ. ಈ ಭಯಕ್ಕೆ ಕಾರಣ ನಮ್ಮ ನಡುವೆ ಆಗುತ್ತಿರುವ ಸಾವುಗಳು. ಕಳೆದ ಎರಡು ದಿನಗಳಿಂದ ನಾವು ಇಬ್ಬರು ಮಹಾನ್ ವ್ಯಕ್ತಿಗಳನ್ನು ಕಳೆದುಕೊಂಡಿದ್ದೇವೆ. ಉತ್ತರ ಕರ್ನಾಟಕದ ಸರಳ ಸಜ್ಜನಿಕೆಯ ರಾಜಕಾರಣಿ ಸುರೇಶ್ ಅಂಗಡಿ ಮತ್ತು ಪದಗಳಲ್ಲಿ ವರ್ಣಿಸಲು ಸಾಧ್ಯ ಆಗದಂತಹ ಪ್ರತಿಭೆಯುಳ್ಳ ಸಂಗೀತ ಸಾಮ್ರಾಟ ಬಾಲಸುಬ್ರಹ್ಮಣ್ಯಂ.
`ಈ ಜಗತ್ತಿನಲ್ಲಿ ಅತ್ಯಂತ ಸುಂದರ ವಸ್ತುಗಳನ್ನು ನೋಡಲು ಮತ್ತು ಮುಟ್ಟಲು ಸಾಧ್ಯವಿಲ್ಲ. ಫೀಲ್ ಮಾಡಿಕೊಳ್ಳಬೇಕಷ್ಟೇ’ ಎಂದು ಹೆಲೆನ್ ಕೆಲರ್ ಹೇಳುತ್ತಾರೆ. ಅದೇ ರೀತಿ ಶ್ರೇಷ್ಠ ವ್ಯಕ್ತಿಗಳು ಮಾಡುವ ಕೆಲಸಗಳು ಕೂಡ ಸಾಮಾನ್ಯ ಜನರಿಗೆ ಮುಟ್ಟಲಾಗುವುದಿಲ್ಲ ಅವುಗಳ ಉಪಯೋಗ ಪಡೆಯಬಹುದು ಅಷ್ಟೇ….
ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರು, ಸಂಗೀತ ಲೋಕದ ಒಂದು ದಂತಕಥೆ. ದಶಕಗಳ ಕಾಲ ಭಾರತ ಸಂಗೀತ ಕ್ಷೇತ್ರವನ್ನು ಆಳಿದ ಸಂಗೀತ ಸಾಮ್ರಾಟ !! ಕಲೆ ಯೋಗ್ಯರನ್ನು ಮಾತ್ರ ಆರಿಸಿಕೊಳ್ಳುತ್ತದೆ ಎಂಬುದಕ್ಕೆ ನಿಜವಾದ ಸಾಕ್ಷಿ ಬಾಲಸುಬ್ರಮಣ್ಯಂ. ವ್ಯಕ್ತಿ ಬೆಳೆಯುತ್ತಾ ಅವನ ವ್ಯಕ್ತಿತ್ವವು ಬೆಳೆಯುತ್ತಾ ಹೋಗುತ್ತದೆ. ಹೀಗೆ ಬೆಳೆದ ವ್ಯಕ್ತಿತ್ವಗಳು ಗುರಿಮುಟ್ಟುವ ದಾರಿಯಲ್ಲಿ ಸಭ್ಯತೆ ಮತ್ತು ಸಂಸ್ಕಾರಗಳನ್ನು ಉಳಿಸಿಕೊಳ್ಳುವುದು ಬಹಳ ಕಷ್ಟ. ಇದನ್ನು ಉಳಿಸಿಕೊಂಡರೆ ಮಾತ್ರ ಅವರು ಮಾಡಿದ ಸಾಧನೆ ಸಾಧನೆಯಾಗಿಯೇ ಉಳಿಯುತ್ತದೆ.
ಮಾತೃಭಾಷೆ ತೆಲುಗು ಆದರೂ ಸಹ ಕಲೆ ಎಲ್ಲಾ ಭಾಷೆ, ಸೀಮೆ, ಗಡಿಗಳನ್ನು ದಾಟಿ ಬೆಳೆಯುತ್ತದೆ ಎಂಬುದಕ್ಕೆ ಬಾಲಸುಬ್ರ ಹ್ಮಣ್ಯಂ ಅವರು ಸುಮಾರು 16 ಭಾಷೆಗಳಲ್ಲಿ 40 ಸಾವಿರಕ್ಕಿಂತ ಹೆಚ್ಚು ಹಾಡುಗಳನ್ನು ಹಾಡಿರುವುದೇ ಸಾಕ್ಷಿ. ಸುಮಧುರ ಭಾಷೆ, ಮಧುರ ಮಾತು, ಸೌಹಾರ್ದಯುತ ನಡವಳಿಕೆ, ಹೊಸದನ್ನು ಕಲಿಯುವ ಹಂಬಲ ಅವರ ವ್ಯಕ್ತಿತ್ವವನ್ನು ಅಷ್ಟು ಎತ್ತರಕ್ಕೆ ಕೊಂಡೊಯ್ದಿತು ಎಂದು ಅವರನ್ನು ಬಲ್ಲವರು ಹೇಳುತ್ತಾರೆ. ಬಾಲಸುಬ್ರಮಣ್ಯಂ ನಮ್ಮೆಲ್ಲರ ನೆಚ್ಚಿನ ಗಾಯಕ. ನಾವು ದಿನಕ್ಕೆ ಒಮ್ಮೆಯಾದರೂ ಅವರ ಹಾಡುಗಳನ್ನು ಕೇಳಿ ಕೊಳ್ಳುತ್ತೇವೆ. ಸತತ 50 ವರ್ಷಗಳಿಂದ ಹಾಡುತ್ತಲೇ ಬಂದಿದ್ದ ಈ ಗಾಯಕ ಪಡೆದ ಪ್ರಶಸ್ತಿ ಪುರಸ್ಕಾರಗಳಿಗೆ ಕೊರತೆಯಿಲ್ಲ. ಅವರನ್ನು ಬಲ್ಲವರು ಹೇಳುವ ಪ್ರಕಾರ ದಿನಕ್ಕೆ 15 ರಿಂದ 18 ಹಾಡುಗಳನ್ನು ರೆಕಾರ್ಡ್ ಮಾಡುತ್ತಿದ್ದರಂತೆ. ನಾವು ಇದರಿಂದ ಕಲಿಯಬೇಕಾದದ್ದು ಏನೆಂದರೆ ಅವರಿಗೂ ಇದ್ದದ್ದು ದಿನದ 24 ಗಂಟೆಗಳು ವರ್ಷದ 365 ದಿನಗಳು. ಆದರೆ, ಅವರ ಸಾಧನೆ ಮಾತ್ರ ಹಿಮಾಲಯದಷ್ಟು. ಸ್ನೇಹಿತರೆ ನಮಗೆಲ್ಲರಿಗೂ ಇರುವುದು 24 ಗಂಟೆಗಳೇ ಆದ್ದರಿಂದ ನಾವೆಲ್ಲರೂ ನಮ್ಮ ನಮ್ಮ ಕ್ಷೇತ್ರಗಳಲ್ಲಿ ಸಮಯವನ್ನು ಸದ್ವಿನಿಯೋಗಪಡಿಸಿಕೊಳ್ಳೊಣ. `ನಾನು ರಾಜನೇ ಆಗಿರಬಹುದು. ಆದರೆ, ಒಂದೇ ಒಂದು ನಿಮಿಷವನ್ನು ವ್ಯರ್ಥವಾಗಿ ಕಳೆಯುವಷ್ಟು ಶ್ರೀಮಂತನಲ್ಲ ಎಂದು ಜೋರ್ಡಾನ್ ದೊರೆ ಹೇಳುತ್ತಾನೆ’. ನಾವು ಈಗ ಇರುವ ಸಮಯದಲ್ಲಿ (2020) ತುಂಬಾ ಸವಾಲುಗಳು ಇರುವುದರಿಂದ ಸಮಯವನ್ನು ಅನಿವಾರ್ಯವಾಗಿ ಒಳ್ಳೆಯದಕ್ಕೆ ಉಪಯೋಗಿಸಲೇ ಬೇಕಾಗಿದೆ.
ನಮ್ಮೆಲ್ಲರ ಹುಟ್ಟಿನಲ್ಲಿ ಯಾವ ವ್ಯತ್ಯಾಸವೂ ಇಲ್ಲ. ಆದರೆ, ನಮ್ಮ ಸಾವು ಮಾತ್ರ ಹಾಗಲ್ಲ. ಅದಕ್ಕೆ ಒಂದು ಹೆಸರು, ಅಸ್ತಿತ್ವ ಒಳ್ಳೆಯದು-ಕೆಟ್ಟದ್ದು, ಸೋಲು-ಗೆಲುವು ಎಲ್ಲವನ್ನು ಒಳಗೊಂಡಿರುತ್ತದೆ. ಹುಟ್ಟು ಖಂಡಿತಾ ನಮ್ಮ ಕೈಯಲ್ಲಿಲ್ಲ ನಿಜ. ಆದರೆ, ಸಾವು ಮಾತ್ರ ನಮ್ಮ ಇಡೀ ಜೀವನವನ್ನು ಅದರ ಕೈಯಲ್ಲಿ ಹಿಡಿದಿರುತ್ತದೆ ಮತ್ತು ಜಗತ್ತಿಗೆ ನೀನೇನು ಎಂಬುದನ್ನು ತೋರಿಸುತ್ತದೆ. ಪ್ರತಿಯೊಂದು ಸಾವುಗಳು ಸಂಭವಿಸಿದಾಗಲೂ ನಾವು ಅಂದುಕೊಳ್ಳು ವುದು ಛೇ… ಜೀವನ ಇಷ್ಟೇ ಅಲ್ವಾ!! ಅಂತ. ಆದರೆ, ಕಠೋರವಾದ ಸತ್ಯ ಏನೆಂದರೆ ಮನುಷ್ಯ ಹುಟ್ಟಿದಾಗಿನಿಂದ ಅವನು ಬಾಲ್ಯ, ವಿದ್ಯಾಭ್ಯಾಸ, ಮದುವೆ ಕೆಲಸ ಯಾವುದರ ಬಗ್ಗೆಯೂ ಅವನಿಗೆ ತಿಳಿದಿರುವುದಿಲ್ಲ. ಆದರೆ, ನಾನು ಒಂದು ದಿನ ಸಾಯಲೇ ಬೇಕು ಎಂಬ ಸತ್ಯ ಮಾತ್ರ ತಿಳಿದಿರುತ್ತದೆ.
ನಾವು ಎಷ್ಟು ದಿನ ಬದುಕಿದೆವು ಎಂಬುದಕ್ಕಿಂತ ಮುಖ್ಯ ನಾವು ಹೇಗೆ ಬದುಕಿದೆವು ಎಂಬುದು, ಇಂತಹ ಗಣ್ಯ ವ್ಯಕ್ತಿಗಳ ಸಾವು ಸಂಭವಿಸಿದಾಗ ಅವರು ಬದುಕಿದ ರೀತಿ ಮಾಡಿದ ಸಾಧನೆ ನಮಗೆಲ್ಲ ಸ್ಫೂರ್ತಿಯಾಗಬೇಕು. ಜೀವನ ಇಷ್ಟೇ ಅಲ್ವಾ !! ಅನ್ನೋರೂ.. ನಾವು ಇರುವವರೆಗೆ ನಮ್ಮ ನಮ್ಮ ಕ್ಷೇತ್ರಗಳಲ್ಲಿ ಏನನ್ನಾದರೂ ಸಾಧಿಸಬೇಕು ಎನ್ನುವ ಜೀವನ ಪ್ರೀತಿಯನ್ನು ಕಲಿಸಬೇಕು. ಅದಕ್ಕೆ ಶರಣರು ಹೇಳಿದ್ದು `ಮರಣವೇ ಮಹಾನವಮಿ’ ಎಂದು.
ಪದ್ಮ ರವಿ
ಬೆಂಗಳೂರು.
[email protected]