ಭೂತ ಭವಿಷ್ಯತ್ತಿನ ಸಂಗತಿಗಳನ್ನು ವರ್ತಮಾನಕ್ಕೆ ಪರಿವರ್ತಿಸುವ ಅತ್ಯದ್ಭುತ ಸಮೂಹ ಮಾಧ್ಯಮ – ಪತ್ರಿಕೆ

ಜಗತ್ತಿನಲ್ಲಿ ನಡೆಯುವ ವಿವಿಧ ಘಟನೆಗಳನ್ನು ಏಕಕಾಲದಲ್ಲಿ ಅಸಂಖ್ಯಾತ ಜನರಿಗೆ ಅಥವಾ ಸಮೂಹಕ್ಕೆ ತಲುಪಿಸುವ ತಾಂತ್ರಿಕ ಸಾಧನೆಗಳೇ ಸಮೂಹ ಸಂಪರ್ಕ ಮಾಧ್ಯಮ. ಅದರಲ್ಲಿ ಮೊದಲ ಸ್ಥಾನ `ಪತ್ರಿಕೆ’

ಕರ್ನಾಟಕದಲ್ಲಿ ಮೊದಲ ಬಾರಿಗೆ 1827 ರಲ್ಲಿ ಬಳ್ಳಾರಿ ಯಲ್ಲಿ ಈ ಉದ್ಯಮ ಪ್ರಾರಂಭವಾಯಿತು. “ಸಮಾಚಾರ” ಎಂಬ ದಿನಪತ್ರಿಕೆ 1942 ರಲ್ಲಿ ಮಂಗಳೂರಿನಲ್ಲಿ ಪ್ರಕಟಗೊಂಡಿತು. ಇತ್ತೀಚೆಗೆ ಜಿಲ್ಲಾ ಕೇಂದ್ರಗಳಲ್ಲಿ ದಿನಪತ್ರಿಕೆಗಳು ಪ್ರಕಟಗೊಳ್ಳುತ್ತಿದ್ದು, ಪ್ರಾದೇಶಿಕ ಭಾಷೆಗಳಲ್ಲಿ ವೈವಿಧ್ಯಮಯ ಬಣ್ಣದ ಪುಟಗಳಿಂದ ಹೊರಬರುತ್ತಿವೆ. ಭಿನ್ನ ಮನೋಭಾವ, ಅಭಿರುಚಿ ಹಾಗೂ ಆಸಕ್ತಿಯ ಜನರಿಗೆ ಹೊಂದುವಂತಹ ವಿವಿಧ ವಿಷಯಗಳನ್ನು ಆಕರ್ಷಣೀಯವಾಗಿ ಪ್ರಕಟಿಸುತ್ತದೆ.

ಸಾರ್ವತ್ರಿಕವಾಗಿ ವಿಶ್ವದಲ್ಲಿ ನಡೆಯುವ ವಿವಿಧ ಘಟನೆ ಗಳನ್ನು ತಾಜಾ ಸುದ್ದಿಯಾಗಿ ಜನತೆಗೆ ಸಾಮೂಹಿಕ ವಾಗಿ ಮುಟ್ಟಿಸುವ ತಾಂತ್ರಿಕ ಸಾಧನವೇ ಪತ್ರಿಕೆ.

ಇತ್ತೀಚೆಗೆ ಇವುಗಳ ಸಂಖ್ಯೆ ದಿನೇ ದಿನೇ ಅಧಿಕ ಗೊಂಡು ಜಿಲ್ಲೆ ಹಾಗೂ ತಾಲ್ಲೂಕು ಮಟ್ಟದಲ್ಲಿನ ಸುದ್ದಿಗಳನ್ನು ಸ್ಥಳೀಯ ಭಾಷೆಯಲ್ಲಿ ಪ್ರಸಾರ ಗೊಳಿಸುತ್ತಿವೆ.ಜನಜೀವನದ ವಿವಿಧ ಮುಖಗಳನ್ನು ಪರಿಚಯಿಸಲು ಕಥೆ, ಕವನ, ನಾಟಕ, ಕಾದಂಬರಿ, ವಿಮರ್ಶೆ ಇತ್ಯಾದಿಗಳನ್ನು ಪ್ರಕಟಿಸುತ್ತವೆ. ಇವು ಜನತೆಗೆ ಭಾಷಾ ಸಾಮರ್ಥ್ಯವನ್ನು, ಸಾಮಾಜಿಕ ಪ್ರಜ್ಞೆ ಹಾಗೂ ಜನತಂತ್ರದ ಮೌಲ್ಯವನ್ನು ಹೆಚ್ಚಿಸುವಲ್ಲಿ ತುಂಬಾ ನೆರವಾಗುತ್ತವೆ.

ಸಮಾಜದಲ್ಲಿ ನಡೆಯುವ ಆರ್ಥಿಕ, ಸಾಮಾಜಿಕ, ರಾಜಕೀಯ, ಶೈಕ್ಷಣಿಕ, ಸಾಂಸ್ಕೃತಿಕ ಬದಲಾವಣೆಗಳನ್ನು ಜನತೆಗೆ ಮುಟ್ಟಿಸುತ್ತವೆ. ಪತ್ರಿಕೆ, ಜನತಂತ್ರ ವ್ಯವಸ್ಥೆಯ ಭದ್ರ ಬುನಾದಿಗೆ ಜೀವನಾಡಿ. ವ್ಯಾವಹಾರಿಕ ಹಾಗೂ ಮನರಂಜನೀಯ ಸುದ್ದಿಯನ್ನು ಓದುಗರಿಗೆ ಮುಟ್ಟಿಸುತ್ತವೆ.ರಾಷ್ಟ್ರೀಯ, ಅಂತರರಾಷ್ಟ್ರೀಯ ಸಂಗತಿಗಳನ್ನು ಪ್ರಾದೇಶಿಕ ಭಾಷೆಯಲ್ಲಿ ಪ್ರಕಟಿಸಿ ಜನಸಾಮಾನ್ಯರಲ್ಲಿ ವಿಚಾರ ಶಕ್ತಿ ಹೆಚ್ಚಿಸಿ ಅರಿವು ಮೂಡಿಸುತ್ತದೆ. ಪತ್ರಿಕೆಯ ಮೂಲಕ ಉತ್ಸಾಹಿ ಬರಹಗಾರರು, ಲೇಖಕರು, ಪಂಡಿತರು, ಸಾಹಿತಿಗಳು, ವಿಮರ್ಶಕರನ್ನು ಬೆಳಕಿಗೆ ತರುತ್ತದೆ.  ನಾಡು ನುಡಿ, ಸಾಹಿತ್ಯ, ಸಂಸ್ಕೃತಿ, ಕಲೆ, ಆಚಾರ, ವಿಚಾರ, ಸಂಪ್ರದಾಯಗಳ ಬೆಳವಣಿಗೆಗೆ ಪರೋಕ್ಷವಾಗಿ ಪ್ರೋತ್ಸಾಹ ನೀಡುವುದು. ರಾಷ್ಟ್ರೀಯ ಐಕ್ಯತೆ ಬೆಳೆಸುತ್ತದೆ. ಅಂತರರಾಷ್ಟ್ರೀಯ ಅರಿವು ಮೂಡಿಸುತ್ತದೆ. ಎಲ್ಲ ಕ್ಷೇತ್ರಗಳಲ್ಲಿ ಸಕಾಲಕ್ಕೆ ಸೂಕ್ತ ಮಾಹಿತಿ ನೀಡುತ್ತದೆ.

ಪತ್ರಿಕೆ ಬರೀ ಸುದ್ದಿ ಮುಟ್ಟಿಸುವ ಕೆಲಸ ಅಷ್ಟೇ ಅಲ್ಲ, ಜನರಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸುತ್ತಿದೆ. ಇಂತಹ ಮಹತ್ವದ ಪಾತ್ರ ವಹಿಸಿರುವ ಪತ್ರಿಕೆ ಇಂದು ಜನಸಾಮಾನ್ಯರೆಲ್ಲರ ಬದುಕಿನ ಅವಿಭಾಜ್ಯ ಅಂಗವಾಗಿದೆ.

ವರ್ಷಕ್ಕೆ ನಾಲ್ಕು ದಿನ ಮಾತ್ರ ರಜಾ ಇರುವ ಈ ಉದ್ಯಮದಲ್ಲಿ ಇಂತಹ ಲಾಕ್‌ಡೌನ್ ಪರಿಸ್ಥಿತಿಯಲ್ಲೂ ಸಹ ಪತ್ರಿಕೆಯನ್ನು ಮನೆ ಮನೆಗೆ ಸರಿಯಾದ ವೇಳೆಗೆ ತಲುಪಿಸುವ ಪತ್ರಿಕಾ ಮಿತ್ರರಿಗೆ ನಮ್ಮ  ನಮನ.


ಡಾ. ಅನಿತಾ ಹೆಚ್. ದೊಡ್ಡಗೌಡರ್
ಸಹಾಯಕ ಪ್ರಾಧ್ಯಾಪಕರು
ಶ್ರೀಮತಿ ಸರ್ವಮಂಗಳಮ್ಮ ಮಾಗನೂರು ಬಸಪ್ಪ ಶಿಕ್ಷಣ ಮಹಾವಿದ್ಯಾಲಯ.
ದಾವಣಗೆರೆ. 99021 98655

error: Content is protected !!