ಪತ್ರಿಕಾ ದಿನಾಚರಣೆ ಒಂದು ಮೆಲುಕು….

ಪತ್ರಿಕೋದ್ಯಮ ಸಂವಿಧಾನದ ನಾಲ್ಕನೇ ಅಂಗ. ಪತ್ರಿಕೋದ್ಯಮ ಒಂದು ವೃತ್ತಿ, ಒಂದು ಶಿಸ್ತು. ಸಮಾಜದಲ್ಲಿ ನಮ್ಮ ನಡೆ-ನುಡಿಗಳನ್ನು ರೂಪಿಸುವಲ್ಲಿ ಪತ್ರಿಕೆಯ ಪಾತ್ರ ಮಹತ್ವಪೂರ್ಣವಾದುದು. ಕಾನೂನು ವಿಧಿಸುವ ಸೂತ್ರವನ್ನು, ಚೌಕಟ್ಟನ್ನು, ಪಂರಪರೆಯ ಕರ್ತವ್ಯಗಳನ್ನು ಪಾಲಿಸಬೇಕಾಗುತ್ತದೆ.

ಪತ್ರಿಕೆ ಹೇಗಿರಬೇಕು? ಇಂದಿನ ಸ್ಪರ್ಧಾ ಪ್ರಪಂಚದಲ್ಲಿ ಪತ್ರಿಕೆಯಲ್ಲಿಯೂ ಬಹಳ ಪೈಪೋಟಿ ಇರುವುದನ್ನು ಇಂದು ನೋಡುತ್ತಿದ್ದೇವೆ. ನಮ್ಮ ಪತ್ರಿಕೆ ಓದುಗರನ್ನು ಆಕರ್ಷಿಸಬೇಕು. ಹೆಚ್ಚು ಜನಪ್ರಿಯವಾಗಬೇಕು ಎಂಬ ನಿಟ್ಟಿನಲ್ಲಿ ಎಲ್ಲಾ ಪತ್ರಿಕೆಗಳು ಜನಪ್ರಿಯತೆ ಪಡೆಯಲು ಮುನ್ನಡೆ ಸಾಧಿಸಲು ಸ್ಪರ್ಧಾತ್ಮಕವಾಗಿ ತಮ್ಮ ಕಾರ್ಯ ನಿರ್ವಹಿಸುತ್ತಿವೆ.

ಸತ್ಯವಾಗಿರಬೇಕು : ಪತ್ರಿಕೆಯಲ್ಲಿ ವರದಿಗಾರರು ಬರೆದ ಸುದ್ದಿ ಸತ್ಯವಾಗಿರಬೇಕು. ಸಮಾಜವನ್ನು, ಜನತೆಯನ್ನು, ರಾಷ್ಟ್ರವನ್ನು ಮುನ್ನಡೆಸುವ ಅಂಶಗಳಿಗೆ ಹೆಚ್ಚಿನ ಮಹತ್ವ  ನೀಡಬೇಕು. ಸುದ್ದಿ ಸುಳ್ಳಾಗದಂತೆ ಎಚ್ಚರವಹಿಸಬೇಕು. ಪತ್ರಿಕೆಯಲ್ಲಿ ಪ್ರಕಟವಾದ ಸುದ್ದಿ ಸತ್ಯವೆಂದು ಜನರು ನಂಬುತ್ತಾರೆ. ವರದಿಗಾರರು ತಾವು ಬರೆಯುತ್ತಿರುವುದು ಸತ್ಯವೆಂದೂ, ಸತ್ಯ ಮಾತ್ರವೆಂದು ಶತಸಿದ್ಧಗೊಂಡಿರಬೇಕು. ಅಷ್ಟು ಮನದಟ್ಟಾಗಿರಬೇಕು.

ನಿಖರವಾಗಿರಬೇಕು : ಕೆಲವೊಮ್ಮೆ ವರದಿಗಾರರು ಬರೆಯುವುದು ಸತ್ಯವಾಗಿಯೂ ನಿಖರವಾಗಿರದ ಸಾಧ್ಯತೆಗಳಿವೆ. ನಿಖರತೆ ಸತ್ಯದ ಭಾಗವೇ ಆಗಿದೆ. ನಿಖರವಾಗಿಲ್ಲದ ಸತ್ಯ ಸುಳ್ಳುಗಳಿಗೆ ಸಮ. ಓದುಗರು ನಮಗಿಂತ ಬುದ್ಧಿವಂತರು ಎಂಬ ಪ್ರಜ್ಞೆ ಇರಬೇಕು. ಸದಾ ಎಚ್ಚರಿಕೆಯಿಂದ ಕಾರ್ಯ ನಿರ್ವಹಿಸಬೇಕು.

ವಸ್ತುನಿಷ್ಠತೆ : ಸುದ್ದಿಯ ನಿರ್ಣಾಯಕ ಅಂಶಗಳಲ್ಲಿ ಸತ್ಯ ಹಾಗೂ ನಿಖರತೆಯಷ್ಟೇ ಮುಖ್ಯವಾದುದು ವಸ್ತು ನಿಷ್ಠತೆ. ಪತ್ರಿಕೋದ್ಯಮವು ಆರಂಭದಿಂದಲೂ ಪಾಲಿಸಿಕೊಂಡು ಬಂದ ರೀತಿಯಲ್ಲಿ ವಸ್ತುನಿಷ್ಠತೆ ಒಂದು. ವರದಿ ಸತ್ಯವಾಗಿದ್ದು, ನಿಖರವೂ ಆಗಿದ್ದು, ಆದರೆ ವಸ್ತು ನಿಷ್ಠವಾಗಿ ತೋರದಿದ್ದರೆ ಸರ್ವ ಗುಣವನ್ನು ಮನೆ ನುಂಗಿತು ಎಂಬಂತಾಗುತ್ತದೆ. ಸುದ್ದಿ ಮುಡಿಯಿಂದ ಅಡಿಯವರೆಗೆ ವಸ್ತುನಿಷ್ಠವಾಗಿರಬೇಕು.

ಸಕಾಲಿಕವಾಗಿರಬೇಕು : ಸಕಾಲಕ್ಕೆ ಸರಿಯಾದ ಸುದ್ದಿಯನ್ನು ಸಮಗ್ರವಾಗಿ ಓದುಗರಿಗೆ ಒದಗಿಸುವುದು ಪತ್ರಿಕೆಯ ಜವಾಬ್ದಾರಿ. ಸತ್ಯ, ನಿಖರ, ವಸ್ತುನಿಷ್ಠ ಇವೆಲ್ಲಾ ಆಗಿದ್ದು, ಸಕಾಲಿಕವಾಗಿಲ್ಲದಿದ್ದರೆ ಪ್ರಯೋಜನವಿಲ್ಲ. ಆದ್ದರಿಂದ ವರದಿಗಾರರು ಸಕಾಲಿಕವಾದ ಸುದ್ದಿಗೆ ಹೆಚ್ಚು ಮಹತ್ವಕೊಟ್ಟು ಪ್ರಕಟಣೆ ಮಾಡಬೇಕು.

ಬರೆವ  ಸುದ್ದಿಗೆ ಸಾಮಾಜಿಕ ಮುಖವಿರಬೇಕು : ಸುದ್ದಿಗೆ ಸಾರ್ವಜನಿಕ ಮುಖವಿರಬೇಕು. ಓದುಗರ ಕೈಗನ್ನಡಿಯಾಗಿ, ಸಮಾಜಮುಖಿ ವಿಚಾರಗಳನ್ನು ವಾಸ್ತವ ಅಂಶಗಳನ್ನು ಮನಗಂಡು ಅಮೂಲ್ಯವಾದ ಸಾಮಾಜಿಕ ಕಳಕಳಿಯನ್ನು ಹೊಂದಿ ಸುದ್ದಿಯನ್ನು ಪ್ರಕಟಿಸಬೇಕು.

ಸುದ್ದಿ ಬರೆಯುವ ಪ್ರತಿ ಹಂತದಲ್ಲೂ ವರದಿಗಾರರು ತಾವು ಬರೆಯುವ ಸುದ್ದಿ ಸತ್ಯವೇ, ನಿಖರವೇ, ವಸ್ತು ನಿಷ್ಠವೇ, ಸಕಾಲಿಕವೇ ಹಾಗೂ ಸಾರ್ವಜನಿಕವೇ ಎಂಬ ಈ ಐದು ಪ್ರಶ್ನೆಗಳನ್ನು ತಮಗೆ ತಾವೇ ಕೇಳಿಕೊಳ್ಳಬಹುದಾದರೆ, ಸುದ್ದಿ ಬರಹ ದಾರಿ ತಪ್ಪಲು ಸಾಧ್ಯವೇ ಇಲ್ಲ. ಪತ್ರಿಕೋದ್ಯಮ ಪಾಲಿಸಿಕೊಂಡು ಬಂದ ನೀತಿಯಲ್ಲಿ ಸುದ್ದಿಗೆ ಈ ನಿರ್ಣಾಯಕ ಪ್ರಶ್ನೆಗಳು ಬಹಳ ಮುಖ್ಯ.


ಜೆಂಬಿಗಿ ಮೃತ್ಯುಂಜಯ
ಕನ್ನಡ ಉಪನ್ಯಾಸಕರು
ದಾವಣಗೆರೆ.

error: Content is protected !!