ನವಿರಾಗಿ ನೆನಪಿನ ಕೋಶದಿಂದ ಎದ್ದು ಬಂದ ವೈದ್ಯರು…

ಸೃಷ್ಟಿ ರಹಸ್ಯದಷ್ಟೇ ಅದ್ಭುತವೂ, ಆಶ್ಚರ್ಯವೂ ಆದುದು ಆರೋಗ್ಯದ ರಹಸ್ಯ. ಮೊದ ಮೊದಲು ರೋಗದ ಲಕ್ಷಣಗಳು ಅಮೂರ್ತವಾಗಿ ಅನಂತರ ಮೂರ್ತಗೊಂಡು ನಿವಾರಣಾ ಕ್ರಮಕ್ಕೆ ಆವಿರ್ಭವಿಸುತ್ತವೆ. ಅಂದರೆ, ವೈದ್ಯರ ಪ್ರತಿಭೆಯೂ ಕಡೆಗೋಲು ನವನೀತವನ್ನು, ತೆಗೆಯುವಂತೆ. ಅರೆಮರೆವು ಮಾಡುವ, ತನಗರಿಯದೇ ಮೂಡಿದ ಸಂದರ್ಭದಲ್ಲಿ ತನ್ನದೇ ಆದ ವಿಶಿಷ್ಟ ಸವಿರಾಗ ಬೆರೆಸಿದ ಚಿಕಿತ್ಸೆ ನೀಡುವುದರ ಮೂಲಕ ಸಮಾಜದಲ್ಲಿ ಚಿರಂತನ ಸೊಗಸುಗಾರರಾಗಿದ್ದಾರೆ. 

ಮನುಷ್ಯನ ಜನನ ಮತ್ತು ಮರಣಗಳನ್ನು ನಿಯಂತ್ರಿಸುವ ಅಗೋಚರ ಶಕ್ತಿಯೊಂದಿದೆ ಎಂಬುದು ಸರ್ವಮಾನ್ಯ. ಸಾವು ಬದುಕನ್ನು ಬೆನ್ನೆಟ್ಟಿ ಬಂದಿರುವುದು ಇಂದಿಗೂ ಕೂಡ ಪ್ರಶ್ನೆಯಾಗಿಯೇ ಇದೆ. ಸಾವಿನಿಂದ (ರೋಗಗಳಿಂದ) ಭೀತರಾದ ಜನಕ್ಕೆ ಧೈರ್ಯ ಹಾಗೂ ಸಾಂತ್ವನ ವೈದ್ಯರಿಂದ ಮಾತ್ರ ಸಾಧ್ಯ. 

`ರಹಸ್ಯಂ ಚ ಪ್ರಕಾಶಂ ಚ ಯದ್ವತ್ತಂ ತಸ್ಯ ಧೀಮತಃ’ ಎಂಬುದಾಗಿ ಬ್ರಹ್ಮ ವಾಲ್ಮೀಕಿಯನ್ನು ಅನುಗ್ರಹಿಸಿದ. ‘ನಿನಗೆ ರಾಮಾಯಣದಲ್ಲಿನ ಸೂಕ್ಷ್ಮಾತಿಸೂಕ್ಷ್ಮ ದೃಶ್ಯಗಳು-ಅವು ರಹಸ್ಯವೇ ಆಗಿರಲಿ; ಅಗೋಚರವೇ ಆಗಿರಲಿ ಎಲ್ಲದೂ ಸಂಪೂರ್ಣ ವೇದ್ಯವಾಗಲಿ’ ಎಂದು ಹರಿಸಿದ. ಬ್ರಹ್ಮನ ಅನುಗ್ರಹದಂತೆಯೇ ವಾಲ್ಮೀಕಿ ಧರ್ಮವಿರ್ಯೇಣು ರಾಮಾಯಣದಲ್ಲಿನ ಒಂದೊಂದು ದೃಶ್ಯವೂ ನಯನಗೋಚರವಾಯಿತು. ಹಾಗೆಯೇ ವೈದ್ಯಶಾಸ್ತ್ರ ಭಾರತೀಯ ಮೂಲಪದ್ಧತಿ ವೇದಗಳಷ್ಟೇ ಪ್ರಾಚೀನ ಪುರಾಣ ಪರಂಪರೆಯ ಪ್ರಕಾರ (Genre). ಇದು ಬ್ರಹ್ಮನಿಂದ ದಕ್ಷಣಿಗೆ, ಅನಂತರ ಅಶ್ವಿನಿ ದೇವತೆಗಳಿಗೆ ಉಪದೇಶಿತವಾಗಿ ಪರಿಗತವಾಯಿತು. ರೂಪ ಮತ್ತು ಗುಣ (Form & Content)ಗಳಿಂದ ನಿರ್ಧರಿತವಾಗಿ, ಒಂದು ಕಾಲದಿಂದ ಮತ್ತೊಂದು ಕಾಲಕ್ಕೆ ವಿನ್ಯಾಸ (Structure)  ಹೊಂದಿ, ಒಂದು ಘಟ್ಟದಲ್ಲಿ ಸ್ವೀಕರಿಸಲ್ಪಟ್ಟು ಏಕರೂಪ (Sameness) ದಲ್ಲಿ ಅಥವಾ ಕಾರ್ಯ (Experiment)  ದಲ್ಲಿ ಮನುಷ್ಯ ಭೇಷಜದೊಂದಿಗೆ ಬದುಕುತ್ತಾನೆ (Man has to live a medicine) ಎಂದು ಭಾವಿಸಲಾಯಿತು. ಇದೇ ವೈದ್ಯಶಾಸ್ತ್ರ; ವೈದ್ಯಶಾಸ್ತ್ರದ ಪಳೆಯುಳಿಕೆಗಳೇ ವೈದ್ಯರುಗಳು. 

ಯಾರು ತಮ್ಮ ಅಸೀಮ ಆತ್ಮಶಕ್ತಿಯಿಂದ ನಿತ್ತರಿಸಿದರೋ; ಯಾರು ತಮ್ಮ ವರ್ಚಸ್ವಿ ವ್ಯಕ್ತಿತ್ವದಿಂದ ರೂಕ್ಷಜೀವಿಗಳಿಗೆ ಹದವನ್ನೂ ಹರಹನ್ನೂ ನೀಡಿ ರೂಪಿಸಿದರೋ ಆ ಜೀವ ದೇವರುಗಳಿಗೆ ಕೃತಜ್ಞತಾಭಾವದಿಂದ ನಿವೇದಿಸಲೋಸುಗ ಜುಲೈ 1 ರಂದು ವೈದ್ಯರ ದಿನವೆಂದು ಆಚರಿಸುವಲ್ಲಿ ಪೂರ್ಣತ್ವವಿದೆ. 

ವೈದ್ಯ ವಿಜ್ಞಾನ ಅನಾದಿ ಕಾಲದ ಪ್ರಾಚೀನ ಪರಂಪರೆಯನ್ನೊಳಗೊಂಡ ‘ಅಥರ್ವವೇದ’ದ ‘ಭೈಷಜ್ಯ’ ಸೂಕ್ತಗಳು ವಿಕಾಸಗೊಂಡು ನವ್ಯ ಸಂಶೋಧನೆಗಳಿಗೆ ಸ್ಫೂರ್ತಿ ನೀಡಿದ ಮಹಾನ್ ವೈದ್ಯ ವಿಜ್ಞಾನಿಗಳನ್ನು ನೆನೆಯುವುದು ಆದ್ಯ ಕರ್ತವ್ಯ. 2000 ವರ್ಷಗಳ ಹಿಂದೆ ಸುಶ್ರುತ ಮೊದಲಿಗೆ ಕಾಣಿಸಿಕೊಂಡು, ಹಿಪೋಕ್ರೇಟಿಸ್-ಆಧುನಿಕ ವೈದ್ಯ ಪದ್ಧತಿಯ ಪಿತಾಮಹಾನೆನಸಿಕೊಂಡು, ಕ್ರಿ.ಪೂ.ದಲ್ಲಿ ಚರಕ-ಹಿಂದೂ ವೈದ್ಯ ಸಂಹಿತೆಯ ಹರಿಕಾರನಾಗಿ, ಪ್ಯಾರಾಸೆಲ್ಸಸ್-ರಸಾಯನ ವಿಜ್ಞಾನ ವೈದ್ಯಕೀಯದಲ್ಲಿ, ಆಂಬ್ರೋಯಿಸ್ ಪಾರೆ-ಶಸ್ತ್ರ ವೈದ್ಯ ವಿಜ್ಞಾನದ ಪಿತಾಮಹಾನಾಗಿ, ಆಂಡ್ರಿಯಾಸ್ ವೆಸೇಲಿಯಸ್-ಅಂಗರಚನಾ ಶಾಸ್ತ್ರದ ಆದಿ ಪುರುಷನಾಗಿ, ಮಾರ್ಚಲ್ಲೋ ಮಲ್ಪೀಗಿ-ವಿಶ್ವದ ಮೊದಲ ಊತಕ ಶಾಸ್ತ್ರಜ್ಞನಾಗಿ, ಆಯೆನ್ ಬ್ರಗ್ಗರ್-ಪರ್ಕಷನ್ ಪರೀಕ್ಷೆಯ ಹರಿಕಾರನಾಗಿ-ಎಡ್ವರ್ಡ್ ಜನ್ನರ್-ದೇವಿ ಹಾಕುವ ಆದಿ ಪ್ರವರ್ತಕನಾಗಿ-ಹಯಾಸಿಂಥ್ ಲೆನೆಕ್ – ಸ್ಟೆಥಾಸ್ಕೋಪ್ ಜನಕನಾಗಿ, ಕ್ಲಾಡ್ ಬೆರ್ನಾಡ್ – ಆಹಾರ ಜೀರ್ಣಕ್ರಿಯೆಯ ಸಂಶೋಧಕನಾಗಿ, ಹೊರೇಸ್ ವೆಲ್ಸ್ – ಅರಿವಳಿಕೆಯ ಹರಿಕಾರನಾಗಿ,-ಹೆನ್ರಿ ಗ್ರೇ – ಅಂಗರಚನಾ ವಿಜ್ಞಾನದ ಪ್ರವರ್ತಕನಾಗಿ, ಜೋಸೆಫ್ ಲಿಸ್ಟರ್-ಆಂಟಿಸೆಫ್ಟಿಕ್ ಯುಗ ಪ್ರವರ್ತಕನಾಗಿ, ರಾಬರ್ಟ್ ಕೋಹ್-ಕ್ಷಯ ರೋಗಾಣು ಶೋಧಕನಾಗಿ, ಕಾನ್ರಾಡ್ ರೋಂಟೆಗೆನ್-ಎಕ್ಸರೇ ಜನಕನಾಗಿ, ಇವಾನ್ ಪಾವ್ ಲೋವ್-ಅನಿಶ್ಚಿತ ಪ್ರತಿವರ್ತನೆಗಳ ಪ್ರತಿಪಾದಕನಾಗಿ,-ಸಿಗ್ಮಂಡ್ ಫ್ರಾಯ್ಡ್‌-ಮನೋವಿಶ್ಲೇಷಣೆಯ ಹರಿಕಾರನಾಗಿ, ವ್ಲಾಡಿಮರ್ ಹಾಫ್‍ಕಿನ್-ಸೋಂಕು ರೋಗಗಳ ನಿರೋಧಕ ಶೋಧಕನಾಗಿ, ಕಾರ್ಲ್ ಲ್ಯಾಂಡ್ ಸ್ಟೀನರ್-, ರಕ್ತ ಗುಂಪುಗಳ ಸಂಶೋಧಕನಾಗಿ, ಅಲೆಗ್ಸಾಂಡರ್ ಪ್ಲೇಮಿಂಗ್-ಪೆನ್ಸಿಲಿನ್ ಪ್ರವರ್ತಕನಾಗಿ, ಫ್ರೆಡರಿಕ್ ಬ್ಯಾಂಟಿಂಗ್-ಇನ್ಸುಲಿನ್ ಸಂಶೋಧಕನಾಗಿ, ವರ್ನರ್ ಫಾರ್ಸ್‍ಮಿನ್ – ಕಾರ್ಡಿಯಕ್ ಕೆಥೀಟರೈಸೇಶನ್ ಪ್ರವರ್ತಕನಾಗಿ, ಆಲ್ಬರ್ಟ್ ಸ್ಯಾಬಿನ್-ಪೋಲಿಯೋ ಬಾಯಿ ಲಸಿಕೆ ಜನಕನಾಗಿ, ರಿನೇ ಜೆರೋನಿಮೋ ಫಾವಲೊರೋ-ಹೃದಯದ ಬೈಪಾಸ್ ಶಸ್ತ್ರ ಚಿಕಿತ್ಸೆಯ ಪ್ರಥಮನಾಗಿ :- ಇನ್ನೂ ಅನೇಕ ಮಹೋನ್ನತ ವ್ಯಕ್ತಿಗಳನ್ನು ವೈದ್ಯಕೀಯ ವಿಭಾಗ ತನ್ನ ಮಡಿಲಿನಲ್ಲಿ ಮೆಲ್ಲನೆ ಕಾವು ಕೊಟ್ಟು ಸಂಶೋಧಕರನ್ನು ಸಂರಕ್ಷಿಸಿದೆ ಎಂದರೆ ಅತಿಶಯೋಕ್ತಿಯಾಗಲಾರದು. 

ತಮಿಳುನಾಡಿನ ರಾಣಿಪೇಟೆಯಲ್ಲಿ ಡಿಸೆಂಬರ್-9 ರಂದು ‘ಈಡಾ’ ಜನಿಸಿ, ಈ ನೆಲದ ಹೆಣ್ಣು ಮಕ್ಕಳ ಭವಿಷ್ಯವನ್ನೇ ಬದಲಿಸಿ ವೈದ್ಯರುಗಳ ಬಾಗಿಲು ಬಡಿದು ತೆರೆಯಿಸಿದವಳು ಡಾ. ಈಡಾ ಸೋಫಿಯಾ ಸ್ಕಡರ್. ಸಂಪ್ರದಾಯಬದ್ಧ ಭಾರತದಲ್ಲಿ ಮಹಿಳೆಯರು ಪುರುಷ ವೈದ್ಯರ ಬಳಿ ತಮ್ಮ ಶಾರ್ಬಸ್ಥೆ (ಬಸಿರು) ಬೆಸಲ್ (ಹೆರಿಗೆ) ಆಗುವ ವಿಚಾರಗಳನ್ನು ಹೇಳುವಂತಿರಲಿಲ್ಲ. ಮಹಿಳೆಯರ ಈ ಹೀನ ಸ್ಥಿತಿಯನ್ನು ಕಂಡು ಹೀಡಾ ಮಹಿಳೆಯರಿಗಾಗಿಯೇ ವೈದ್ಯಳಾಗಿ, 1900ರಲ್ಲಿ ಒಂದು ಹಾಸಿಗೆಯ ಕ್ಲಿನಿಕ್ಕನ್ನು ತೆರೆದದ್ದು ಇಂದು ಅತ್ಯಂತ ಪ್ರತಿಷ್ಠಿತ ‘ವೆಲ್ಲೂರೂ ಆಸ್ಪತ್ರೆ’ ಸಂಸ್ಥೆಯಾಗಿ, ಬೆಳೆದು ಸಾವಿರ-ಸಾವಿರ ಜನರ ನೋವಿಗೆ ನೆರಳಾಗಿದೆ. 

ನೆನಪಿನ ಕೋಶದಿಂದ ನವೀರಾಗಿ ಎದ್ದು ಬಂದ ಡಾ. ದ್ವಾರಕನಾಥ ಶಾಂತರಾಮ ಕೊಟ್ನಿಸ್, ಇದೊಂದು ಅಮರ ಕಥೆಯಾಗಿದೆ; ಅಲ್ಲದೇ ಭಾರತ-ಚೀನಾದ ಮಧುರ ಸಂಬಂಧಕ್ಕೆ ಭಾಷ್ಯ ಬರೆದ ಕಥೆಯಾಗಿದೆ. ಇಡೀ ಚೀನಾದಲ್ಲಿ ಭಾರತದವರ ಎರಡು ಪ್ರತಿಮೆಗಳಿವೆ. ಒಂದು ಬುದ್ಧನದು, ಎರಡನೇಯದು ಡಾ. ಕೊಟ್ನಿಸ್‍ರವರದು. 1910 ರಲ್ಲಿ ಸೊಲ್ಲಾಪುರದಲ್ಲಿ ಹುಟ್ಟಿ, ಮುಂಬೈ ವೈದ್ಯಕೀಯ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮುಗಿಸಿ, 1938 ರಲ್ಲಿ ಚೀನಾಕ್ಕೆ ತೆರಳಿದಾಗ 28 ವರ್ಷ ಕೊಟ್ನಿಸ್‍ರವರಿಗೆ. ಸಾವು-ಬದುಕಿನೊಡನೆ ಹೋರಾಡುತ್ತಿದ್ದ ಚೀನಾ ಸೈನಿಕರಿಗೆ ತನ್ನ ಸರ್ವಸ್ವವನ್ನರ್ಪಿಸುತ್ತಾ, ತನ್ನೊಂದಿಗಿದ್ದ ನರ್ಸ್ ಗೋಕ್ವಿಂಗ್ಲಾನ್‍ಳನ್ನು ಮದುವೆಯಾಗಿ, ಬಿಡುವಿಲ್ಲದ ಕೆಲಸದಿಂದ ದೇಹದ ದಣಿವು ಕಾಯಿಲೆಗೆ ಈಡು ಮಾಡಿ, 1942 ಡಿಸೆಂಬರ್ 9 ರಂದು ಕಾಲವಾದರು. ಇಂದೂ ಸಹ ಪ್ರತಿ ವರ್ಷ ಚೀನಿಯರು ‘ಕ್ವಿಂಗ್‍ಮಿಂಗ್’ ಎಂಬ ಹಿರಿಯರ ಹಬ್ಬದಲ್ಲಿ ಸ್ಮರಣೆಗೈಯ್ಯುತ್ತಾರೆ. ಡಾ. ಕೊಟ್ನಿಸ್ ನಿಧನರಾಗಿ 16 ವರ್ಷಗಳ ನಂತರ ಹೆಂಡತಿ ಮಗನನ್ನು ಕರೆದುಕೊಂಡು ಸೋಲ್ಲಾಪುರಕ್ಕೆ ಬಂದಾಗ ಭಾಷೆ, ಸಂಸ್ಕೃತಿ ಗೊತ್ತಿಲ್ಲದಿದ್ದರೂ, ಡಾ. ಕೊಟ್ನಿಸ್ ಎಂಬ ಬಂಧ ಅತ್ತೆ-ಸೊಸೆಯರಿಬ್ಬರನ್ನು ಬೆಸೆದಿತ್ತು; ಸುತ್ತಲಿದ್ದವರು ಅಳುತ್ತಿದ್ದರು; ನಂತರ ಚೀನಾಕ್ಕೆ ಹೊರಡುವಾಗ ಒಂದು ಗಿಡವನ್ನು ಮನೆಯ ಮುಂದೆ ನೆಟ್ಟಳು; ಮಗ ಯಿನ್‍ಹುವಾ (ಯಿನ್-ಇಂಡಿಯಾ, ಹುವಾ-ಚೀನಾ) ನೀರೆರೆದ. ಆ ವೃದ್ಧ ಮಾತೆ ಗೊಳೋ ಎಂದು ಅಳುತಿದ್ದಳು. ಇದೊಂದು ಮನಕಲಕುವ ಪ್ರಸಂಗ. ಆ ಪುಣ್ಯಾತ್ಮ ಚೀನಾದಲ್ಲಿ ಇಂದಿಗೂ ದಂತಕಥೆಯಾದುದು ಬುದ್ಭುದಾದ್ಭುತ. 

ಡಾ|| ವಿಲಿಯಂ ಓಸ್ಪರ್ ಕೆನಡಾದ ಮೊಂಟ್ರೊಲಿಯನ್ ವೈದ್ಯಕೀಯ ವಿದ್ಯಾಲಯದಲ್ಲಿ ವಿದ್ಯಾಭ್ಯಾಸ ಮುಗಿಸಿ ವೈದ್ಯರಾದರು. ಯೇಲ್ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳನ್ನುದ್ದೇಶಿಸಿ ಭಾಷಣದಲ್ಲಿ ‘ನಮ್ಮ ಅತೀ ಮುಖ್ಯವಾದ ಕರ್ತವ್ಯ ಸಮೀಪದಲ್ಲಿರುವ ಕಾರ್ಯವನ್ನು ಯಶಸ್ವಿಯಾಗಿ ನಿರ್ವಹಿಸುವುದರಲ್ಲಿದೆ. ದೂರದ ದಿಗಂತದಲ್ಲಿ ಅಸ್ಪಷ್ಟವಾಗಿ ಗೋಚರಿಸುವ ಭವಿಷ್ಯದೆಡೆ ನೋಡುವುದರಲ್ಲಿ ಅಲ್ಲ’ (Our main business is not to see what lies dimly at distance, but to do what lies clearly at hand)  ಎಂದು ಹೇಳಿ ಆಕ್ಸ್‍ಫರ್ಡ್ ವಿಶ್ವವಿದ್ಯಾನಿಲಯದ ಮಹಾಪ್ರಾಧ್ಯಾಪಕನಾಗಿ ಪ್ರಸಿದ್ಧನಾದನು.

ಪಶ್ಚಿಮ ಬಂಗಾಳದ ಬಂಕಿಪಟ್ಟಣದಲ್ಲಿ 1882 ರ ಜುಲೈ 1 ರಂದು ಜನಿಸಿ, ಕಲ್ಕತ್ತಾ ವಿಶ್ವವಿದ್ಯಾನಿಲಯದ ವೈದ್ಯಕೀಯ ವಿದ್ಯಾಲಯದಲ್ಲಿ ಅಭ್ಯಾಸ ಮುಗಿಸಿ, ಫಿಜಿಷಿಯನ್ನಾಗಿ, ಮುಖ್ಯಮಂತ್ರಿಯಾಗಿ, ಭಾರತ ರತ್ನ ಪ್ರಗಲ್ಭನಾಗಿ ಅಪಾರ ಸೇವೆ ಸಲ್ಲಿಸಿದ ಡಾ. ಬಿ.ಸಿ ರಾಯ್ ಜನ್ಮ ದಿನದ ಪುನರ್ ನೆನಪಿನ ಪ್ರಣೀತಾ ಪ್ರಾಂಗಣವಾಗಲಿ ಎಂಬ ಸದುದ್ದೇಶದಿಂದ ಆಚರಣಾ ಪರ್ಬವನ್ನು ನಡೆಸುತ್ತಿರುವುದು ಔಚಿತ್ಯದಾಯಕ. 

ಅಮರತೆಯ ವಾಸನೆ ಮರ್ತ್ಯಕ್ಕೆ, ಮರ್ತ್ಯದ ಶಾ ಅಮರತೆಗೆ ಬದುಕುವುದೆಂದರೆ ನೋವು ಕೊಡುವುದು; ಬದುಕಿ ಉಳಿಯುವುದೆಂದರೆ ನೋವಿನಲ್ಲಿ ಅರ್ಥ ಕಂಡು ಕೊಳ್ಳುವುದು. ಸುಮಧುರತೆಯು, ಸುಶಾಂತತೆಯು ಲಭಿಸಲೆಂದು, ಉದ್ಬುದ್ಧ ಶುದ್ಧ ಮಂದಾರವೃಂದ ವೈದ್ಯರಿಗೆ, ಇದೋ! ವಂದನೆಗಳು…


ಪ್ರೊ. ಬಾತಿ ಬಸವರಾಜ್
ಶೈಕ್ಷಣಿಕ ಸಲಹೆಗಾರರು, ದವನ ಕಾಲೇಜು, ದಾವಣಗೆರೆ.
ಮೊ: 8884527130

 

error: Content is protected !!