ಇಡೀ ದೇಶದಲ್ಲಿ ಕರ್ನಾಟಕ ರಾಜ್ಯ ಪೊಲೀಸ್ ಬಗ್ಗೆ ಅಪಾರ ಘನತೆ, ಗೌರವವಿದೆ. ನಮ್ಮ “ಕರ್ನಾಟಕ ರಾಜ್ಯ ಪೊಲೀಸ್ ನಮ್ಮ ಹೆಮ್ಮೆ” ಎನ್ನುವ ಮಾತು ಜನಜನಿತವಾಗಿದೆ. ಕರ್ನಾಟಕ ರಾಜ್ಯ ಪೊಲೀಸರು ಅಪರಾಧ ಪತ್ತೆ ಹಾಗೂ ನಿಯಂತ್ರಣ, ಕಾನೂನು ಶಾಂತಿ-ಸುವ್ಯವಸ್ಥೆ, ಸಂಚಾರ ಸುವ್ಯವಸ್ಥೆ, ಗಣ್ಯಾತಿಗಣ್ಯರ ಭದ್ರತೆ ಹಾಗೂ ಪ್ರಕರಣಗಳ ವೈಜ್ಞಾನಿಕ ತನಿಖೆ ಇನ್ನೂ ಮುಂತಾದ ಕ್ಷೇತ್ರದಲ್ಲಿ ಅತ್ಯುತ್ತಮ ಸಾಧನೆಗೈದಿರುವುದು ಗಮನಾರ್ಹ ಅಂಶವಾಗಿದೆ.
ಕರ್ನಾಟಕ ರಾಜ್ಯದಲ್ಲಿ ನೂರಕ್ಕೂ ಹೆಚ್ಚು ಕರ್ತವ್ಯದಲ್ಲಿರುವ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಕೊರೊನಾ ಸೋಂಕಿತರಾಗಿದ್ದು, ಅವರಲ್ಲಿ ಮೂವರು ಪೊಲೀಸ್ ಸಹೋದ್ಯೋಗಿಗಳು ಸಾವನ್ನಪ್ಪಿರುವುದು ವಿಷಾದನೀಯ ಹಾಗೂ ನೋವಿನ ಸಂಗತಿಯಾಗಿದೆ.
ಪ್ರತಿಯೊಬ್ಬರು ಕೊರೊನಾ ವೈರಸ್ ಮಹಾಮಾರಿ ಬಗ್ಗೆ ಎಚ್ಚರಿಕೆ ವಹಿಸಲು ಕೋರುತ್ತಿದ್ದೇನೆ. ಇತರೆ ಯಾವುದೇ ಕಾಯಿಲೆ ಬಂದರೆ ಔಷಧಿಗಳು ಇವೆ. ಆದರೆ ಕೊರೊನಾಗೆ ಯಾವುದು ಔಷಧಿ ಇಲ್ಲ ಎಂಬುದು ನೆನಪಿರಲಿ. ದಯವಿಟ್ಟು ಸಹೋದ್ಯೋಗಿ ಮಿತ್ರರೇ, ತಮ್ಮ ಹಾಗೂ ತಮ್ಮನ್ನೇ ನಂಬಿರುವ ಕುಟುಂಬದವರೆಲ್ಲರ ಆರೋಗ್ಯದ ಬಗ್ಗೆ ಎಚ್ಚರಿಕೆ ವಹಿಸಿರಿ. ಅತ್ಯಂತ ಜಾಗರೂಕತೆಯಿಂದಿರಲು ಕೋರುತ್ತೇನೆ. ನಮ್ಮ ಆರೋಗ್ಯ ನಮ್ಮ ಕೈಯಲ್ಲಿದೆ. ಜೀವ – ಜೀವನ ಈ ಎರಡರಲ್ಲಿ ಪ್ರಸ್ತುತ ಜೀವವೇ ಮುಖ್ಯ ಎಂಬುದನ್ನು ನಾವ್ಯಾರೂ ಮರೆಯಬಾರದು.
ಕರ್ತವ್ಯದಲ್ಲಿರುವ ಕೆಲವು ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ತಮ್ಮ ಆರೋಗ್ಯದ ಬಗ್ಗೆ ತಾವೇ ಗಮನಹರಿಸವುದಿಲ್ಲ. ಕೆಲವರು ಈ ಕೊರೊನಾ ನಮ್ಮನ್ನು ಏನು ಮಾಡುತ್ತದೆ ಎನ್ನುವ ಮನೋಭಾವ ಹೊಂದಿರುವವರೂ ಇದ್ದಾರೆ, ಈ ಭಾವನೆ ಸರಿಯಲ್ಲ. ಕೊರೊನಾ ಯಾರಿಗೂ ರಿಯಾಯಿತಿ ತೋರಿಸುವುದಿಲ್ಲ. ಕೊರೊನಾ ಬಗ್ಗೆ ಅಸಡ್ಡೆ – ನಿರ್ಲಕ್ಷ್ಯ ಸರಿಯಲ್ಲ. ಪೂರ್ಣ ಸಮವಸ್ತ್ರದಲ್ಲಿ ಸಂಚಾರ ಕರ್ತವ್ಯದಲ್ಲಿ ರಸ್ತೆಯಲ್ಲಿ ನಿಂತಿರುವ ಬಹುತೇಕ ಪೊಲೀಸರು, ನಮಗೆ ಯಾವುದೇ ವಾಹನ ಅಪಘಾತ ಮಾಡಲು ಸಾಧ್ಯವೇ ಇಲ್ಲ ಎನ್ನುವ ಬಲವಾದ ನಿಲುವು ಹೊಂದಿರುತ್ತಾರೆ.
ವಾಹನ ಚಾಲಕರಲ್ಲಿ ಒಬ್ಬಿಬ್ಬರಾದರೂ ಮದ್ಯಪಾನ ಸೇವಿಸಿರುತ್ತಾರೆ ಹಾಗೂ ಒಂದೆರಡು ವಾಹನಗಳಿಗಾದರೂ ಯಾಂತ್ರಿಕ ದೋಷವಿರುತ್ತದೆ ಎನ್ನುವ ಕಲ್ಪನೆ ಕನಸು ಮನಸ್ಸಿನಲ್ಲಿಯೂ ಇರುವುದಿಲ್ಲ. ಈ ಮನೋಭಾವ ಸರಿಯಲ್ಲ. ಅದೇ ರೀತಿ ಪೊಲೀಸರು ತಮ್ಮ ಕರ್ತವ್ಯದಲ್ಲಿ ಈ ಅಪಾಯಕಾರಿ “ಕೊರೊನಾ ಮಹಾಮಾರಿಯು” ಇದೆ ಎನ್ನುವುದನ್ನು ಪ್ರತಿಕ್ಷಣ ನೆನಪಿಟ್ಟುಕೊಂಡಿರುವುದಿಲ್ಲ. ಇದು ನಮಗ್ಯಾಕೆ ಬರುತ್ತದೆ ಎನ್ನುವ ಮನೋಭಾವ ಸರಿಯಲ್ಲ. ಕರ್ತವ್ಯ ಪ್ರಜ್ಞೆಯ ಜೊತೆಗೆ ವಾಸಿಯಾಗದೇ ಇರುವ ಅಪಾಯಕಾರಿ `ಕೊರೊನಾ’ ಬಗ್ಗೆ ಅರಿವು ಇರಬೇಕು.
ನಾವೀಗ ವೈದ್ಯರು, ನರ್ಸ್‌ಗಳ ಜೊತೆಗೆ ಕೊರೊನಾ ವಾರಿಯರ್ಸ್ ಎಂಬುದನ್ನು ಮರೆಯಬಾರದು. ನಾವುಗಳು ಕರ್ತವ್ಯ ನಿರ್ವಹಿಸುತ್ತಿರುವ ಸ್ಥಳ ಯುದ್ಧಭೂಮಿ ಎಂದೇ ಭಾವಿಸಬೇಕು ಯುದ್ಧಭೂಮಿಯಿಂದ ಹೆದರಿ ಭಯಭೀತರಾಗಿ ಓಡಿ ಹೋಗುವ ಪ್ರಶ್ನೆಯೇ ಇಲ್ಲ. ಯುದ್ಧ ಭೂಮಿಗೆ ಇಳಿದಿದ್ದಾಗಿದೆ. ಧೈರ್ಯದಿಂದ ಕೊರೊನಾ ವೈರಸ್ ವಿರುದ್ಧ ಪ್ರಬಲ ಹೋರಾಟ ನಡೆಸಲೇಬೇಕು. ಪ್ರಸ್ತುತ ಯುದ್ಧಭೂಮಿಯಲ್ಲಿ ಇರುವಾಗ ನಮ್ಮ ಬದ್ಧ ವೈರಿಗಳಾದ ಕೊರೊನಾ ವೈರಸ್ ಬಗ್ಗೆ ಮೈತುಂಬಾ ಕಣ್ಣಿರಬೇಕು. ಸ್ವಲ್ಪ ಮೈ ಮರೆತರೂ ನಮಗೆ ಅಪಾಯ ನಿಶ್ಚಿತ ಎಂಬುದನ್ನು ಮರೆಯಬಾರದು.
ನಾವೀಗ ವೈದ್ಯರು, ನರ್ಸ್‌ಗಳ ಜೊತೆಗೆ ಕೊರೊನಾ ವಾರಿಯರ್ಸ್ ಎಂಬುದನ್ನು ಮರೆಯಬಾರದು. ನಾವುಗಳು ಕರ್ತವ್ಯ ನಿರ್ವಹಿಸುತ್ತಿರುವ ಸ್ಥಳ ಯುದ್ಧಭೂಮಿ ಎಂದೇ ಭಾವಿಸಬೇಕು ಯುದ್ಧಭೂಮಿಯಿಂದ ಹೆದರಿ ಭಯಭೀತರಾಗಿ ಓಡಿ ಹೋಗುವ ಪ್ರಶ್ನೆಯೇ ಇಲ್ಲ. ಯುದ್ಧ ಭೂಮಿಗೆ ಇಳಿದಿದ್ದಾಗಿದೆ. ಧೈರ್ಯದಿಂದ ಕೊರೊನಾ ವೈರಸ್ ವಿರುದ್ಧ ಪ್ರಭಲ ಹೋರಾಟ ನಡೆಸಲೇಬೇಕು. ಎದೆಗುಂದುವ ಅವಶ್ಯಕತೆ ಇಲ್ಲ. ಪ್ರಸ್ತುತ ಯುದ್ಧಭೂಮಿಯಲ್ಲಿ ಇರುವಾಗ ನಮ್ಮ ಬದ್ಧ ವೈರಿಗಳಾದ ಕೊರೊನಾ ವೈರಸ್ ಬಗ್ಗೆ ಮೈತುಂಬಾ ಕಣ್ಣಿರಬೇಕು. ಸ್ವಲ್ಪ ಮೈ ಮರೆತರೂ ನಮಗೆ ಅಪಾಯ ನಿಶ್ಚಿತ ಎಂಬುದನ್ನು ಮರೆಯಬಾರದು. ನಾವುಗಳು ಅತ್ಯಂತ ಜಾಗರೂಕರಾಗಿ ನಮ್ಮ ಸಮುದಾಯದ ಬೆಂಬಲ ಪಡೆದು ಕೊರೊನಾ ವೈರಸ್ ಶತ್ರುಗಳನ್ನು ಹಿಮ್ಮೆಟ್ಟಿಸಲೇಬೇಕು.
ಕೊರೊನಾ ತಡೆಗೆ ವ್ಯಾಕ್ಸಿನ್ ಕಂಡುಹಿಡಿಯುವವರೆಗೂ ನಿಯಂತ್ರಣ ಸಾಧ್ಯವೇ ಇಲ್ಲ. ಕೊರೊನಾ ವೈರಸ್ ನಿರ್ಮೂಲನೆಗೆ ವರ್ಷಗಳೇ ಬೇಕಾಗಬಹುದು. ಈಗ ವೈರಸ್ ಜೊತೆಗೇ ಬದುಕುವುದು ಅನಿವಾರ್ಯ, ನಮ್ಮ ವೈಯಕ್ತಿಕ ಜವಾಬ್ದಾರಿ ಬಹಳ ಮುಖ್ಯವಾಗಿದೆ.
ಈಗಾಗಲೇ ಕೊರೊನಾ ವೈರಸ್ ಸೋಂಕು ಸಮುದಾಯ ಮಟ್ಟದಲ್ಲಿ ಹರಡುವಿಕೆಯ (Community transmission) ಲಕ್ಷಣಗಳು ಗೋಚರಿಸುತ್ತಿವೆ. ಪ್ರಸ್ತುತ ಇನ್ನೂ ಹೆಚ್ಚು ಎಚ್ಚರಿಕೆಯಿಂದ ಕರ್ತವ್ಯ ನಿರ್ವಹಿಸಬೇಕಾದ ಅನಿವಾರ್ಯತೆ ಇದೆ.
“ಕೊರೊನಾ ವೈರಸ್ಸನ್ನು” ಮಾತ್ರ ದ್ವೇಷಿಸಬೇಕೇ ಹೊರತು, ಕೊರೊನಾ ಸೋಂಕಿತ ಜನರನ್ನು ಅಲ್ಲ ಎಂಬುದನ್ನು ನಾವೀಗ ಸಾರ್ವಜನಿಕರಿಗೆ ಮನವರಿಕೆ ಮಾಡಿಕೊಡಬೇಕು.
ಈ ಕೆಳಕಂಡ ಎಲ್ಲಾ ಮಾರ್ಗದರ್ಶನದ ಸರಳ ಸೂತ್ರಗಳನ್ನು ನಾವುಗಳೆಲ್ಲರೂ ತಪ್ಪದೇ ಪಾಲಿಸೋಣ.
* ಸಾಮಾಜಿಕ ಅಂತರ ತಪ್ಪದೇ ಕಾಪಾಡಬೇಕು * ಉತ್ತಮ ಗುಣಮಟ್ಟದ ಮಾಸ್ಕ್ ಬಳಸಬೇಕು * ಆಗಾಗ್ಗೆ ತಪ್ಪದೇ ಸ್ಯಾನಿಟೈಸರ್ ಬಳಸಬೇಕು * ಕಣ್ಣು, ಮೂಗು, ಬಾಯಿ ಪದೇ ಪದೇ ಮುಟ್ಟಿಕೊಳ್ಳಬೇಡಿ
* ಆಗಾಗ್ಗೆ ಸೋಪು ಬಳಸಿ ತಮ್ಮ ಕೈಗಳನ್ನು ಚೆನ್ನಾಗಿ ತೊಳೆಯಿರಿ * ಸದ್ಯ ಆದಷ್ಟೂ ಹೋಟೆಲ್ ಊಟ, ತಿಂಡಿಗಳಿಂದ ದೂರವಿರಿ.
* ಯಾವಾಗಲೂ ಬಿಸಿ ನೀರು ಕುಡಿಯಬೇಕು
* ನಿಯಮಿತವಾಗಿ ವಾಕಿಂಗ್, ವ್ಯಾಯಾಮ, ಯೋಗಾಸನ ಮಾಡಿ * ತಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಿ * ಉತ್ತಮ ವಿಟಮಿನ್ ಯುಕ್ತ ಆಹಾರ ಪದಾರ್ಥಗಳನ್ನು ಬಳಸಿರಿ * ಧೂಮಪಾನ ಹಾಗೂ ಮದ್ಯಪಾನದಿಂದ ದೂರವಿರಿ. * ಬಂಧುಗಳ ಹಾಗೂ ಗೆಳೆಯರ ವಿವಾಹ ಕಾರ್ಯಕ್ರಮ ಹಾಗೂ ಇತರೆ ಶುಭ ಸಮಾರಂಭಗಳಿಗೆ ಹೋಗುವುದನ್ನು ಕಡಿಮೆ ಮಾಡಿ * ಕರ್ತವ್ಯದಲ್ಲಿರುವಾಗ ಪ್ರತಿಕ್ಷಣ ಹೆಜ್ಜೆ ಹೆಜ್ಜೆಗೂ ಅಪಾಯಕಾರಿ ಕೊರೊನಾ ನಮ್ಮ ಸುತ್ತಮುತ್ತ ಇದೆ ಎನ್ನುವ ಅರಿವು ಇರಬೇಕು.
ಜಿ. ಎ.ಜಗದೀಶ್
ಪೊಲೀಸ್ ಅಧೀಕ್ಷಕರು(ನಿ)
[email protected]