ಇಂದು ವಿಶ್ವ ತೊನ್ನು ರೋಗ ದಿವಸ

ವಿಶ್ವ ತೊನ್ನು ರೋಗ ದಿನ (World Vitiligo day) ವನ್ನು ಪ್ರತಿ ವರ್ಷ ಜೂನ್‌ 25 ರಂದು ಆಚರಿಸಲಾಗುವುದು. ಇದರ ಉದ್ದೇಶ ಜನರಲ್ಲಿರುವ ತೊನ್ನು ರೋಗದ ಬಗ್ಗೆ ಇರುವ ಅಪನಂಬಿಕೆ ಮತ್ತು ಮೂಢನಂಬಿಕೆ ತೊಲಗಿಸುವುದು ಮತ್ತು ರೋಗದ ಲಕ್ಷಣಗಳು, ಚಿಕಿತ್ಸೆಯ ಬಗ್ಗೆ ತಿಳುವಳಿಕೆ ನೀಡುವುದು. ಸರಿಸುಮಾರು ವಿಶ್ವದಲ್ಲಿ 0.5-2% ಜನರು ಈ ಕಾಯಿಲೆ ಹೊಂದಿದ್ದಾರೆ. ಉದಾಹರಣೆಗೆ ವಿಶ್ವಪ್ರಸಿದ್ಧ ಮಹಾನ್‌ ವ್ಯಕ್ತಿಗಳು, ಚಿತ್ರಕಲಾವಿದರು ಮತ್ತು ರಾಜಕಾರಣಿಗಳು ಕೂಡ ಈ ಕಾಯಿಲೆ ಹೊಂದಿದ್ದು ಅದಕ್ಕೆ ಸೂಕ್ತ ಚಿಕಿತ್ಸೆ ಪಡೆದುಕೊಂಡಿದ್ದಾರೆ.

ತೊನ್ನು ರೋಗ (ವಿಟಿಲಿಗೊ) ಒಂದು ರೀತಿಯ ತ್ವಚೆಯ ಕಾಯಿಲೆಯಾಗಿದ್ದು, ಚರ್ಮಕ್ಕೆ ಬಣ್ಣ ನೀಡುವ ಮೆಲನೋಸೈಟ್‌ (Melanosite) ಇರುವುದಿಲ್ಲ. ಇದರಿಂದಾಗಿ ಹಾಲಿನ ಬಣ್ಣದ ಬಿಳಿ ಮಚ್ಚೆಗಳು ಕಾಣಿಸಿಕೊಳ್ಳುತ್ತವೆ ಮತ್ತು ಆ ಭಾಗದ ಮೇಲಿನ ಕೂದಲುಗಳು ಕೂಡ ಬಣ್ಣವನ್ನು ಕಳೆದುಕೊಳ್ಳುತ್ತವೆ ಮತ್ತು ಬಿಳಿ ಬಣ್ಣವಾಗುತ್ತದೆ. ವರ್ಣದ್ರವ್ಯ ಹೊರತುಪಡಿಸಿ ತೊನ್ನು ಬಾಧಿತ ತ್ವಚೆ ಪೂರ್ತಿ ಸಾಮಾನ್ಯವಾಗಿ ಕಾಣುತ್ತದೆ. ಸಾಮಾನ್ಯವಾಗಿ ಬಾವು ಬರುವುದಾಗಲೀ ಮತ್ತು ತುರಿಕೆಯಾಗಲೀ ಕಂಡು ಬರುವುದಿಲ್ಲ.

ತೊನ್ನು ರೋಗಕ್ಕೆ ಅನೇಕ ಕಾರಣ ಗಳಿದ್ದು, ಅದರಲ್ಲಿ ಪ್ರಮುಖವಾಗಿ ಮಾನಸಿಕ ಮತ್ತು ದೈಹಿಕ ಒತ್ತಡ, ಆತ್ಮ ಘಾತಿ ಪ್ರಕ್ರಿಯೆ (Autoimmune) ಮತ್ತು ಕೆಲವೇ ಜನರಲ್ಲಿ ಮಾತ್ರ ಅನುವಂಶೀಯತೆ ಕಾರಣ ವಾಗಿರುತ್ತದೆ.

ಹಲವು ಜನರಿಗೆ ತೊನ್ನು ರೋಗಕ್ಕೆ ಚಿಕಿತ್ಸೆ ಇಲ್ಲ ಎಂಬ ಅಪನಂಬಿಕೆ ಇದೆ. ಆದರೆ, ತೊನ್ನು ರೋಗಕ್ಕೆ ಸೂಕ್ತ ಚಿಕಿತ್ಸೆಯ ವಿಧಾನಗಳಿವೆ. ಚಿಕಿತ್ಸೆಯಿಂದ ತ್ವಚೆಯ ಬಣ್ಣವನ್ನು ಕಾಪಾಡಿಕೊಳ್ಳಲು ಮತ್ತು ಮತ್ತಷ್ಟು ಹರಡುವಿಕೆಯನ್ನು ತಡೆಗಟ್ಟಬಹುದು. ಇದಕ್ಕೆ ಹಲವು ರೀತಿಯ ಮುಲಾಮುಗಳು ಟ್ಯಾಕ್ರೊಲಿಮಸ್‌, ಸ್ಟಿರಾಯಿಡ್‌ (Steroid)ಗಳಿದ್ದು, ಇವುಗಳನ್ನು ವೈದ್ಯರ ಸಲಹೆ ಮೇಲೆ ಮಾತ್ರ ಪಡೆದುಕೊಳ್ಳಬೇಕು. ವಿವಿಧ ರೀತಿಯ ನೀಲಾತೀತ ಕಿರಣಗಳ ಚಿಕಿತ್ಸೆಗಳಿದ್ದು, ಅವುಗಳೆಂದರೆ NBUVB, PUVA ಚಿಕಿತ್ಸೆಗಳು ಬಿಳಿ ಬಣ್ಣದ ಮಚ್ಚೆಯನ್ನು ಹರಡದಂತೆ ಮತ್ತು ತ್ವಚೆಯ ಬಣ್ಣ ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಇತ್ತೀಚೆಗೆ ವೈದ್ಯರ ನಿರಂತರ ಪ್ರಯತ್ನದಿಂದ ವಿವಿಧ ರೀತಿಯ ಶಸ್ತ್ರ ಚಿಕಿತ್ಸೆಗಳಿದ್ದು, ಇದನ್ನು ಕಾರ್ಯರೂಪಕ್ಕೆ ತರಲು ಬಿಳಿ ಬಣ್ಣದ ಮಚ್ಚೆಗಳು ಸುತ್ತಮುತ್ತಲಿನ ಜಾಗಕ್ಕೆ ಹರಡದಂತೆ ಮತ್ತು ಹೊಸ ಬಿಳಿ ಬಣ್ಣದ ಮಚ್ಚೆಗಳು ಬರದಂತೆ ಕನಿಷ್ಠ 6 ತಿಂಗಳಿನಿಂದ 1 ವರ್ಷವಾಗಿರಬೇಕು.

ಚಿಕಿತ್ಸೆ ಜೊತೆಗೆ ಸಾಮಾನ್ಯವಾಗಿ ಪಾಲಿಸಬೇಕಾದ ಕ್ರಮಗಳೆಂದರೆ ಎಳೆ ಸೂರ್ಯನ ಬಿಸಿಲಿಗೆ ಮೈ ಒಡ್ಡುವುದು. ಧೂಮಪಾನ ಮತ್ತು ಮದ್ಯಪಾನ ತ್ಯಜಿಸುವುದು, ಖಿನ್ನತೆ, ಬೇಸರ ಮತ್ತು ಪ್ರತ್ಯೇಕತೆಯ ಭಾವನೆಗಳ ಸಮಯದಲ್ಲಿ ನಿಮ್ಮ ಕುಟುಂಬ ಸ್ನೇಹಿತರು ಮತ್ತು ವೈದ್ಯರೊಂದಿಗೆ ಚರ್ಚಿಸಿ ನಿಯಮಿತವಾಗಿ ಚಾಚೂ ತಪ್ಪದೇ ಚರ್ಮ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆದುಕೊಳ್ಳಬೇಕು.

ವಿಟಿಲಿಗೊ ತ್ವಚೆಗಾಗಿ ಸ್ವಯಂ ಉಪಚಾರದ ಸಲಹೆ ಗಳೆಂದರೆ ಸಕಾರಾತ್ಮಕ ಭಾವನೆ ಹೊಂದಲು ಯೋಗಾ ಸನ, ಧ್ಯಾನ ಮಾಡಿ, ಗಾಯದ ಜಾಗದಲ್ಲಿ ಹೊಸದಾಗಿ ಬಿಳಿ ಮಚ್ಚೆಗಳು ಉಂಟಾಗುವ ಸಂಭವವಿರುವುದರಿಂದ ತ್ವಚೆಗೆ ಯಾವುದೇ ಗಾಯ ಮಾಡಿಕೊಳ್ಳಬೇಡಿ. ಟ್ಯಾಟು (Tatoo) ಹಾಕಿಸಿಕೊಳ್ಳಬೇಡಿ, ಸೌಮ್ಯ ಸಾಬೂನು ಮತ್ತು ಸೌಮ್ಯ ತ್ವಚೆಯ ಸ್ಕ್ರಬ್‌ ಬಳಸಿ.

ತೊನ್ನು ರೋಗವು ಸಾಂಕ್ರಾಮಿಕ ರೋಗವಲ್ಲ ಮತ್ತು ಹಿಂದಿನ ಜನ್ಮದ ಪಾಪ ಪುಣ್ಯದಿಂದ ಬರುವುದಿಲ್ಲ. ಇದೊಂದು ಚರ್ಮದ ಕಾಯಿಲೆಯಾಗಿದ್ದು ಮತ್ತು ಸೂಕ್ತ ಚಿಕಿತ್ಸೆ ಇರುವುದರಿಂದ ರೋಗಿಗಳು ಖಿನ್ನತೆಗೆ ಒಳಪಡುವ ಅವಶ್ಯಕತೆಯಿಲ್ಲ. ಬಿಳಿ ಬಣ್ಣದ ಮಚ್ಚೆಗಳಿಗೆ ಹಲವು ಕಾರಣಗಳಿದ್ದು, ಅದಕ್ಕಾಗಿ ನೀವು ಚರ್ಮ ರೋಗ ವೈದ್ಯರನ್ನು ಸಂಪರ್ಕಿಸಿ, ನಿಮ್ಮ ಸಂದೇಹವನ್ನು ನಿವಾರಿಸಿಕೊಳ್ಳಿ ಮತ್ತು ಸೂಕ್ತ ಚಿಕಿತ್ಸೆ ಪಡೆದುಕೊಂಡು ತೊನ್ನು ರೋಗವನ್ನು ಮೆಟ್ಟಿ ನಿಲ್ಲಬೇಕು ಮತ್ತು ಇತರೆ ಜನರಿಗೆ ಇದರ ಬಗ್ಗೆ ಅರಿವು ಮೂಡಿಸಬೇಕು.


ಡಾ|| ಸೂಗಾರೆಡ್ಡಿ
ಚರ್ಮರೋಗ ವಿಭಾಗದ ಮುಖ್ಯಸ್ಥರು,
ಜೆಜೆಎಂ ಮೆಡಿಕಲ್‌ ಕಾಲೇಜ್, ದಾವಣಗೆರೆ.
ಡಾ|| ಪರಮೇಶ್ವರ
ಚರ್ಮರೋಗ ಸ್ನಾತಕೋತ್ತರ ವಿದ್ಯಾರ್ಥಿ.
ಮೊ: 63635 76220

error: Content is protected !!