ಸಿಕಲ್‌ ಸೆಲ್ ರಕ್ತ ರೋಗ…

ಸಿಕಲ್‌ ಸೆಲ್ ರಕ್ತ ರೋಗವು ಅನುವಂಶೀಯವಾಗಿದ್ದು, ಜನ ಸಾಮಾನ್ಯರಲ್ಲಿ ಅರಿವು ಮೂಡಿಸುವುದು ಈ ಲೇಖನದ ಉದ್ದೇಶವಾಗಿದೆ.

ಸಾಮಾನ್ಯವಾಗಿ ಬಿಲ್ಲೆಯಕಾರದ ಕೆಂಪು ರಕ್ತಕಣಗಳು ಮೆದುವಾಗಿದ್ದು, ದೇಹದ ರಕ್ತ ಪರಿಚಲನೆಯಲ್ಲಿ ಎಂತಹ ಸಣ್ಣ ರಕ್ತನಾಳಗಳ ಮೂಲಕ ಚಲಿಸುವ ಸಾಮರ್ಥ್ಯ ಹೊಂದಿರುತ್ತವೆ. ಮೂಳೆ ಮಜ್ಜೆಯಲ್ಲಿ ಜನಿಸುವ ಕೆಂಪು ರಕ್ತ ಕಣಗಳು 120 ದಿನಗಳು ಎಡಬಿಡದೆ ಆಮ್ಲಜನಕ ಸರಬರಾಜು ಮಾಡಿ ನಮ್ಮನ್ನು ಚೈತನ್ಯ ಯುಕ್ತರನ್ನಾಗಿಸಿ ಆರೋಗ್ಯದಿಂದಿಡುತ್ತವೆ. ಕೆಂಪು ರಕ್ತ ಕಣಗಳಲ್ಲಿರುವ ಹಿಮೋಗ್ಲೋಬಿನ್ ಎಂಬ ಕೆಂಪು ದ್ರವ್ಯ ಕಬ್ಬಿಣ ಅಂಶವನ್ನು ಹೊಂದಿ, ಗ್ಲೋಬಿನ್ ಎಂಬ ಪ್ರೋಟೀನುಗಳ ಸರಪಳಿಗಳಿಂದ ಆರೋಗ್ಯವಂತ HbA (A2 B2) ಹಿಮೊಗ್ಲೋಬಿನ್ ಉತ್ಪತ್ತಿಯಾಗುತ್ತದೆ. ವಂಶವಾಹಿನಿಗಳಲ್ಲಾಗುವ ನ್ಯೂನ್ಯತೆಯಿಂದಾಗಿ ಗ್ಲೋಬಿನ್ ಸರಪಳಿಯಲ್ಲಿ ವ್ಯತ್ಯಯ ಉಂಟಾಗಿ HbF  ಎಂಬ ಅಸಮರ್ಥ ಹಿಮೊಗ್ಲೋಬಿನ್ ಅಧಿಕ ಪ್ರಮಾಣದಲ್ಲಿ ಉತ್ಪತ್ತಿಯಾಗುತ್ತದೆ. ಇದು ಕೆಂಪು ರಕ್ತಕಣಗಳಲ್ಲಿ ಕಲ್ಲಿನಂತಾಗಿ (ಪಾಲಿಮರೈಝೇಷನ್) ಬಿಲ್ಲೆ ಆಕಾರದ ಕೆಂಪು ರಕ್ತಕಣ ಕುಡುಗೋಲಿನ ಆಕಾರ ತಾಳುತ್ತವೆ. ಇದು ರೈತರು ಹೊಲಗಳಲ್ಲಿ ಬೆಳೆಗಳನ್ನು ಕತ್ತರಿಸಲು ಉಪಯೋಗಿಸುವ ಕುಡುಗೋಲಿನಂತೆ ಕಾಣುವುದರಿಂದ ಈ ರೋಗಕ್ಕೆ ಸಿಕಲ್‌ಸೆಲ್ ರಕ್ತಹೀನತೆ ರೋಗ ಎಂಬ ಹೆಸರು ಬಂದಿತು. ಇಂತಹ ಅಸಹಜ ರೋಗ ಆಫ್ರಿಕಾ ಖಂಡದಲ್ಲಿ, ಕೆರೇಬಿಯನ್ ದೇಶಗಳಲ್ಲಿ ಹೆಚ್ಚು ಕಂಡು ಬರುತ್ತಿದ್ದು, ಬುಡಕಟ್ಟು ಜನಾಂಗಗಳಲ್ಲಿ ಈ ರೋಗ ಹೆಚ್ಚಾಗಿ ಕಾಣಿಸುತ್ತದೆ. ನಮ್ಮ ದೇಶದಲ್ಲಿಯೂ ಮಧ್ಯಪ್ರದೇಶ, ರಾಜಸ್ಥಾನ, ಗುಜರಾತ್, ಬಿಹಾರ, ತಮಿಳುನಾಡು ಮತ್ತು ಕರ್ನಾಟಕ ರಾಜ್ಯಗಳ ಕೆಲವು ಪ್ರಾಂತಗಳಲ್ಲಿ ಕಾಣಿಸಿಕೊಂಡಿದೆ.

ಕುಡುಗೋಲಿನಾಕಾರದ ಈ ಕೆಂಪು ರಕ್ತಕಣಗಳು ರಕ್ತ ಪರಿಚಲನೆಗೆ ಅಡ್ಡವಾಗುತ್ತವೆ. ಸಣ್ಣ ರಕ್ತನಾಳಗಳು ಒಡೆದು ರೋಗಿಯು ನಾನಾ ವ್ಯತಿರಿಕ್ತ ಪರಿಣಾಮಗಳ ನೋವಿನಿಂದ ನರಳುತ್ತಾನೆ. ಅಲ್ಲದೇ, 120 ದಿನಗಳ ಜೀವಿತ ಅವಧಿಗಿಂತ ಮುಂಚೆಯೇ ರಕ್ತ ಕಣಗಳು ನಶಿಸುವುದರಿಂದ ರಕ್ತಹೀನತೆಗೆ ಈ ರೋಗಿಗಳು ಒಳಗಾಗುತ್ತಾರೆ.

ಸಾಮಾನ್ಯವಾಗಿ ಈ ರೋಗಿಗಳು ಈ ಕೆಳಗಿನ ಗುಣ ಲಕ್ಷಣಗಳನ್ನು ಹೊಂದಿರುತ್ತಾರೆ.

* ರಕ್ತ ಹೀನತೆ, ಬಿಳುಚಿಕೊಳ್ಳುವುದು, ಸುಸ್ತಾಗುವುದು.
* ಶ್ವಾಸಕೋಶದ ರಕ್ತ ನಾಳಗಳು ಘಾಸಿಕೊಂಡು ಪದೇ ಪದೇ ಸೋಂಕು (ನೀಮೋಕಾಕಲ್ ಭ್ಯಾಕ್ಟೀರಿಯಾಗಳ ) ಮತ್ತು ರಕ್ತನಾಳಗಳ ಸ್ತಂಭನಕ್ಕೊಳಗಾಗಿ ವಿಷಮ ಸ್ಥಿತಿಗೆ ತಲುಪುತ್ತಾರೆ.
* ಹೃದಯ ರಕ್ತ ನಾಳಗಳ ಸ್ತಂಭನೆ ಮತ್ತು ಹೃದಯ ಸಂಬಂಧಿ ರೋಗಗಳು.
* ಮಿದುಳಗಳ ರಕ್ತ ಸಂಚಾರಕ್ಕೆ ಅಡೆತಡೆಗಳಾಗಿ ಪಾಶ್ರ್ವವಾಯುಗಳಿಗೆ ತುತ್ತಾಗಬಹುದು.
* ಪಾರ್ವೋವೈರಸ್ ಸೊಂಕಿನಿಂದಾಗಿ ಕೀಲು ಮೂಳೆಗಳಲ್ಲಿ ಸದಾ ನೋವು.
 * ಬೆಳವಣಿಗೆ ಕುಂಠಿತವಾಗುತ್ತದೆ.

ರೋಗ ಲಕ್ಷಣಗಳು ಮತ್ತು ಡಯಾಗ್ನೋಸಿಸ್:
ಮಗುವಿನ ಒಂದು ವರ್ಷದ ವಯಸ್ಸಿಗೆ ಕೆಲವು ಸೊಚನೆಗಳು ಕಾಣಿಸಿಕೊಳ್ಳಲಾರಂಭಿಸುತ್ತದೆ.

* ಕಿರಿಕಿರಿ ಮಾಡುವ ಮಗು, ಬಿಳುಚಿಕೊಂಡು, ಸುಸ್ತಾಗುವುದು.
* ವೈದ್ಯರನ್ನು ಸಂಪರ್ಕಿಸಲಾಗಿ, ಪರೀಕ್ಷೆಗೊಳಪಡುವ ಮಗುವಿಗೆ ರಕ್ತಹೀನತೆಯಾಗಿದೆ ಎಂದು ಕೆಲವು ರಕ್ತ ಪರೀಕ್ಷೆಗೊಳಪಡಿಸುತ್ತಾರೆ.
* ರಕ್ತ ಪರೀಕ್ಷೆಗಳಲ್ಲಿ ಹಿಮೊಗ್ಲೋಬಿನ್ ಪ್ರಮಾಣ ಕುಸಿದಿರುವುದು, ರಕ್ತದ ಸ್ಮಿಯರ್ ನಲ್ಲಿ ಕುಡುಗೊಲಿನಾಕಾರದ ಕೆಂಪು ರಕ್ತ ಕಣಗಳು ಮೈಕ್ರೋಸ್ಕೋಪ್‍ನಲ್ಲಿ ಗೋಚರಿಸುತ್ತವೆ.
* ಮುಂದುವರಿದು, Hb ಎಲೆಕ್ಟ್ರೋಫೊರಿಸಿಸ್ ನಲ್ಲಿ HbFಈ ಅಂಶ ಅಧಿಕವಾಗಿ ಕಾಣಿಸಿಕೊಂಡಿರುವುದು.
* ಅನುವಂಶಿಕ ಪರೀಕ್ಷೆಗಳು, ವಂಶವಾಹಿನಿಗಳ ಪರೀಕ್ಷೆ ಅಗತ್ಯ.

ಅನುವಂಶಿಕ ಹಿನ್ನೆಲೆ:
ಸಿಕಲ್ ಸೆಲ್ ರೋಗವು ಆಟೋಸೋಮಲ್ ರಿಸಿಸಿವ್ ಅನುವಂಶೀಯತೆ ಹೊಂದಿದೆ. ಅಂದರೆ, ಈ ರೋಗವು ಇಬ್ಬರೂ ತಂದೆ ತಾಯಿ ನೀಡುವ ತಲಾ ಒಂದೊಂದು ನ್ಯೂನ್ಯತೆಗೊಂಡ ವಂಶವಾಹಿನಿಗಳನ್ನು ಪ್ರಸಾರ ಮಾಡಿದಲ್ಲಿ ಆ ಮಗುವು  ಸಿಕಲ್ ಸೆಲ್ ರೋಗ ಪೀಡಿತವಾಗುತ್ತದೆ. ವ್ಯತ್ಯಯಗೊಂಡ HBBನ ಒಂದು ಪ್ರತಿಯನ್ನು ಮಾತ್ರ ತನ್ನ ತಾಯಿ ಅಥವಾ ತಂದೆಯಿಂದ ಪಡೆದ ಮಗು ಸಿಕಲ್ ಸೆಲ್ ರೋಗದಿಂದ ಬಳಲುವುದಿಲ್ಲ. ಇವರಿಗೆ ಕೇವಲ ಸಿಕಲ್ ಸೆಲ್ ಟ್ರೇಟ್ (ಲಕ್ಷಣ ಯುಕ್ತ ವ್ಯಕ್ತಿ) ಎನ್ನುತ್ತಾರೆ.

* ನ್ಯೂನ್ಯತೆಗೊಂಡ ವಂಶವಾಹಿನಿ ಪ್ರತಿಯನ್ನೊಳಗೊಂಡ (ಟ್ರೇಟ್ಸ್ ಅಥವ ವಾಹಕರು) ಗಂಡು ಹೆಣ್ಣು ಮದುವೆಯಾದಲ್ಲಿ, ಅವರಿಗೆ ಜನಿಸುವ ಮಕ್ಕಳಲ್ಲಿ – 25% ಸಿಕ್ಕಲ್ ಸೆಲ್ ರೋಗಿಷ್ಟ ಮಗು, 25% ಆರೋಗ್ಯವಂತ ಮಗು ಮತ್ತು 50% ವಾಹಕ ಮಕ್ಕಳು ಹುಟ್ಟುವ ಸಾಧ್ಯತೆ ಇರುತ್ತದೆ.

* ಆರೋಗ್ಯವಂತ ಗಂಡು ವಾಹಕಿ ಹೆಣ್ಣು ಮದುವೆಯಾದಲ್ಲಿ ಅವರಿಗೆ ಜನಿಸುವ ಮಕ್ಕಳಲ್ಲಿ – 50% ಆರೋಗ್ಯವಂತ ಮಕ್ಕಳು, 50% ವಾಹಕ ಮಕ್ಕಳು ಹುಟ್ಟುವ ಸಾಧ್ಯತೆ ಇರುತ್ತದೆ.
* ಆರೋಗ್ಯವಂತ ಹೆಣ್ಣು ಸಿಕಲ್‌ ಸೆಲ್ ರೋಗಿಷ್ಟ ಗಂಡನ್ನು ಮದುವೆಯಾದಲ್ಲಿ, ಅವರಿಗೆ 100% ವಾಹಕ ಮಕ್ಕಳು ಹುಟ್ಟುವ ಸಾಧ್ಯತೆ ಇರುತ್ತದೆ.
* ವಾಹಕಿ ಹೆಣ್ಣು ಮತ್ತು ಸಿಕಲ್‌ ಸೆಲ್ ರೋಗಿಷ್ಟ ಗಂಡುವಿನ ನಡುವೆ ಮದುವೆಯಾದಲ್ಲಿ ಅವರಿಗೆ ಹುಟ್ಟುವ ಮಕ್ಕಳು 50% ಸಿಕಲ್‌ ಸೆಲ್ ರೋಗಿಷ್ಟ ಮಕ್ಕಳು ಮತ್ತು 50% ಸಿಕಲ್‌ ವಾಹಕ ಮಕ್ಕಳು ಹುಟ್ಟುವ ಸಾಧ್ಯತೆ ಇರುತ್ತದೆ.
* ಇಬ್ಬರೂ ಸಿಕಲ್‌ ಸೆಲ್ ರೋಗಿಷ್ಟರು ಮದುವೆಯಾದಲ್ಲಿ ಅವರಿಗೆ 100% ಸಿಕಲ್‌ ಸೆಲ್ ರೋಗಿಷ್ಟ ಮಕ್ಕಳು ಹುಟ್ಟುವ ಸಾಧ್ಯತೆ ಇರುತ್ತದೆ.

ಚಿಕಿತ್ಸೆ: ಸಿಕ್ಕಲ್ ಸೆಲ್ ರೋಗಿಗಳ ಚಿಕಿತ್ಸೆ ಜೀವನ ಪರ್ಯಂತವಾಗಿರುವುದರಿಂದ ತಙ್ಞರ ಸಮೂಹದ ಸಲಹೆ, ಚಿಕಿತ್ಸಾ ಕ್ರಮಗಳು, ವ್ಯತಿರಿಕ್ತ / ಗಂಭೀರ ಪರಿಣಾಮಗಳ ನಿಭಾಯಿಸುವಿಕೆ ಮತ್ತು ಮನೋಸಾಮಾಜಿಕ ಬೆಂಬಲ ಅತ್ಯಗತ್ಯ. ರಕ್ತಹೀನತೆಗೆ ಜೀವನ ಪರ್ಯಂತ ಕೆಂಪು ರಕ್ತಕಣಗಳ ಪೂರಣೆಗೊಳಗಾಗಬೇಕಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಈ ರೋಗಗಳನ್ನು ಸಂಪೂರ್ಣ ಗುಣ ಪಡಿಸಲು ಮೂಳೆ ಮಜ್ಜೆ ವರ್ಗಾವಣೆ ಮತ್ತು ನ್ಯೂನ್ಯತೆಗೊಂಡ ವಂಶವಾಹಿನಿಗಳನ್ನೇ ಚಿಕಿತ್ಸೆಗೊಳಪಡಿಸುವ ಜೀನ್ ಥೆರಪಿ ಕುಟುಂಬವರ್ಗದವರಲ್ಲಿ ಆಶಾಬಾವನೆ ಹುಟ್ಟಿಸಿದೆ.

ನಿಯಂತ್ರಣ: ಇಂತಹ ಅನುವಂಶಿಕ ರೋಗಗಳಿಗೆ ಜೀವನ ಪರ್ಯಂತ ನರಳಬೇಕಾದ ಅನಿವಾರ್ಯತೆ ಮತ್ತು ನಿರಂತರ ಚಿಕಿತ್ಸೆ ಈ ರೋಗಿಗಳ ಜೀವನವನ್ನು ದುರ್ಬರಗೊಳಿಸಿದೆ. ಪೋಷಕರು ಮತ್ತು ಕುಟುಂಬವರ್ಗದವರು ಮನೋಸಾಮಾಜಿಕ ಒತ್ತಡಕ್ಕೆ ಒಳಗಾಗುತ್ತಾರೆ. ಅಲ್ಲದೆ, ದೇಶದ ಆರೋಗ್ಯ ವ್ಯವಸ್ಥೆ ಮೇಲೆಯೂ ಗಂಭೀರ ಪರಿಣಾಮ ಬೀರುತ್ತವೆ. ಆದ್ದರಿಂದ ಇಂತಹ ಅನುವಂಶಿಕ ರೋಗಗಳ ನಿಯಂತ್ರಣ ಅತ್ಯಂತ ಸಮಯೋಚಿತ.

* ಸಮಾಜದಲ್ಲಿ ರಕ್ತ ಸಂಬಂಧಿಗಳಲ್ಲಿ ಆಗುವ ಮದುವೆಗಳನ್ನು ಆಗುವ ಪದ್ದತಿಯನ್ನು ತಡೆಯಬೇಕು. ಅದರಲ್ಲೂ ಸಿಕ್ಕಲ್ ಸೆಲ್ ರೋಗಿಗಳ ಕುಟುಂಬಗಳಲ್ಲಿ ವಾಹಕ ವಾಹಕಿಯರ ನಡುವೆ ಮದುವೆ ನಿಷಿದ್ಧಗೊಳಿಸಬೇಕು.
* ಸಿಕ್ಕಲ್ ಸೆಲ್ ರೋಗಿಗಳ ಕುಟುಂಬವರ್ಗದಲ್ಲಿ ಅನುವಂಶಿಕ ಪರೀಕ್ಷೆಗಳಿಗೆ ಒಳಪಡಿಸಿ ವಾಹಕ ವಾಹಕಿಯರನ್ನು ಗುರುತಿಸಿ ಅವರಿಗೆ ಅವಶ್ಯಕ ಅನುವಂಶಿಕ ಸಮಾಲೋಚನೆ ಮತ್ತು ಮಾರ್ಗದರ್ಶನ ನೀಡಬೇಕು.
* ಸಿಕ್ಕಲ್ ಸೆಲ್ ರೋಗಿಗಳ ಕುಟುಂಬವರ್ಗದಲ್ಲಿ ಗರ್ಭಿಣಿಯರಿಗೆ ಪ್ರಸವೋತ್ತರ ಭ್ರೂಣದ ಅನುವಂಶಿಕ ಪರೀಕ್ಷೆಗೊಳಪಡಿಸಿ, ರೋಗಿಷ್ಟ ಭ್ರೂಣವಾಗಿದ್ದಲ್ಲಿ ಕಾನೂನು ಬದ್ಧವಾಗಿ ಗರ್ಭಪಾತಕ್ಕೆ ಅವಕಾಶವಿದೆ.

ಸಿಕ್ಕಲ್ ಸೆಲ್ ರೋಗ ಮತ್ತು ಕೋವಿಡ್ 19:

ಕೋವಿಡ್ 19 ಮಹಾಮಾರಿ ಹಬ್ಬುತ್ತಿರುವ ಈ ದಿನಗಳಲ್ಲಿ ಸಿಕ್ಕಲ್ ಸೆಲ್ ರೋಗಿಗಳು ಬಹು ಎಚ್ಚರಿಕೆಯಿಂದ ಇರಬೇಕಾಗುತ್ತದೆ. ಸಿಕ್ಕಲ್ ಕೆಂಪು ರಕ್ತ ಕಣಗಳಿಂದ ರಕ್ತನಾಳಗಳು ಘಾಸಿಯಾಗುವ ಸಂಭವವಿರುವುದರಿಂದ, ಅದರಲ್ಲೂ ಶ್ವಾಸಕೋಶ ಸೋಂಕಿಗೊಳಗಾಗುವ ಭೀತಿ ಇರುವುದರಿಂದ, ಕೊರೋನ ವೈರಾಣು ಇವರ ವಿಷಮ ಸ್ಥಿತಿಗೆ ಕಾರಣವಾಗಬಹುದು.

ಸಿಕ್ಕಲ್ ಸೆಲ್ ರೋಗ ಮತ್ತು ಸ್ವಯಂಪ್ರೇರಿತ ರಕ್ತದಾನಿಗಳು:

ಕೋವಿಡ್ 19 ಪರಿಸ್ಥಿತಿ ರಕ್ತ ನಿಧಿಗಳ ಮೇಲೆ ಗಂಭೀರ ಪರಿಣಾಮಗಳನ್ನು ಬೀರಿದೆ. ಕೊರೋನ ಭೀತಿಯಿಂದಾಗಿ ಸ್ವಯಂಪ್ರೇರಿತ ರಕ್ತದಾನಿಗಳ ಸಂಖ್ಯೆ ಗಣನೀಯವಾಗಿ ಇಳಿಮುಖವಾಗಿದೆ. ರಕ್ತಪೂರಣೆಯ ಮೇಲೆಯೇ ಅವಲಂಬಿತವಾಗಿರುವ ಸಿಕ್ಕಲ್ ಸೆಲ್ ಮತ್ತು ಥಲಸ್ಸೀಮಿಯಾ ರೋಗಿಗಳು ರಕ್ತ ದೊರೆಯದೇ ಕಂಗಾಲಾಗಿದ್ದಾರೆ. ಆದ್ದರಿಂದ ಯುವ ಜನಾಂಗ ರಕ್ತ ನಿಧಿಗಳಿಗೆ ಸ್ವಯಂಪ್ರೇರಿತರಾಗಿ ಧಾವಿಸಿ ರಕ್ತದಾನ ಮಾಡಿ ಈ ಮಕ್ಕಳ ಜೀವ ಉಳಿಸಬೇಕಾಗಿದೆ.

ಜೀವನ ಪರ್ಯಂತ ರಕ್ತಪೂರಣೆಯ ಮೇಲೆ ಜೀವಿಸುತ್ತಿರುವ ಈ ಮಕ್ಕಳಿಗೆ ರಕ್ತ ಮತ್ತು ರಕ್ತಾಂಶಗಳನ್ನು ಸಂಪೂರ್ಣ ಉಚಿತವಾಗಿ ನೀಡಬೇಕೆಂದು ಕೇಂದ್ರ ರಕ್ತಪರಿಚಲನಾ ಪರಿಷತ್ ಆದೇಶಿಸಿದೆ. ಈ ರೋಗಗಳನ್ನು ಕೇಂದ್ರ ಸರ್ಕಾರ ಅಂಗವಿಕಲರ ಅಧಿನಿಯಮದಡಿ ಸೇರಿಸಿ ಇವರಿಗೆ ಚಿಕಿತ್ಸೆ, ಸಾಮಾಜಿಕ ಭದ್ರತೆ ನೀಡುವಲ್ಲಿ ಕ್ರಮ ತೆಗೆದುಕೊಳ್ಳಲಾಗಿದೆ. ರಾಷ್ಟ್ರೀಯ ಆರೋಗ್ಯ ಅಭಿಯಾನವು ಈ ಮಕ್ಕಳ ಉಚಿತ ಚಿಕಿತ್ಸೆ ಮತ್ತು ಪುನರ್ವಸತಿ ಸೇವೆಗಳಿಗಾಗಿ ಜಿಲ್ಲಾ ಆಸ್ಪತ್ರೆಗಳಲ್ಲಿ ಪ್ರತ್ಯೇಕ ವಾರ್ಡ್‍ಗಳನ್ನು ಮೀಸಲಿರಿಸಿ ಸೇವೆ ಸಲ್ಲಿಸಲು ಕ್ರಮ ಕೈಗೊಂಡಿರುವುದು ಈ ಕುಟುಂಬಗಳಿಗೆ ಧೈರ್ಯ ತಂದಿದೆ.


ಸಿಕಲ್‌ ಸೆಲ್ ರಕ್ತ ರೋಗ... - Janathavaniಡಾ. ಸುರೇಶ್ ಹನಗವಾಡಿ
ಪ್ರಾಧ್ಯಾಪಕರು, ಪೆಥಾಲಜಿ ವಿಭಾಗ,
ಜ. ಜ. ಮು. ವೈದ್ಯಕೀಯ ಮಹಾವಿದ್ಯಾಲಯ,
ದಾವಣಗೆರೆ.
[email protected]

error: Content is protected !!