ಕೊರೊನಾ ಸೋಂಕು ಹರಡುವುದನ್ನು ತಡೆಯಲು ಅತ್ಯಂತ ಪರಿಣಾಮಕಾರಿ ಆಯುಧವೆಂದರೆ ಸಾಮಾಜಿಕ ಶಿಸ್ತನ್ನು ನಮ್ಮ ದೈನಂದಿನ ಜೀವನದಲ್ಲಿ ಅಳವಡಿಸಿಕೊಳ್ಳುವುದು. ಇದು ವೈಜ್ಞಾನಿಕವಾಗಿ ಸಾಬೀತಾಗಿರುವ ಅಂಶ.
1918ರಲ್ಲಿ ಜಗತ್ತನ್ನು 15 ತಿಂಗಳುಗಳ ಕಾಲ ತೀವ್ರವಾಗಿ ಕಾಡಿದ ಸ್ಪ್ಯಾನಿಷ್ ಫ್ಲೂ ಪಿಡುಗು 5 ಕೋಟಿ ಜನರನ್ನು ಬಲಿ ತೆಗೆದುಕೊಂಡಿತ್ತು. ಉತ್ತರ ಅಮೆರಿಕದ ಸೆಂಟ್‌ಲೂಯಿಸ್ ನಗರದಲ್ಲಿ ಸಾಮಾ ಜಿಕ ಅಂತರವನ್ನು ಪಾಲಿಸುವ ಮೂಲಕ ಈ ಪಿಡು ಗಿನ ಹಾವಳಿಯನ್ನು ಯಶಸ್ವಿಯಾಗಿ ಹತೋಟಿಗೆ ತರಲಾಗಿತ್ತು. ಚೀನಾದ ನೆರೆಯ ರಾಷ್ಟ್ರವಾದ ವಿಯೆಟ್ನಾಂ, ಇಂದು ಕೊರೊನಾ ಸೋಂಕು ನಿಯಂತ್ರಣದಲ್ಲಿ ಇತರೆ ದೇಶಗಳಿಗೆ ಮಾದರಿಯಾಗಿದೆ. ಸುಮಾರು ಹತ್ತು ಕೋಟಿ ಜನಸಂಖ್ಯೆ ಹೊಂದಿರುವ ಈ ಪುಟ್ಟ ದೇಶದಲ್ಲಿ ಈವರೆಗೆ ಕೇವಲ 328 ಸೋಂಕಿತರು ಪತ್ತೆಯಾಗಿದ್ದು, ಒಂದು ಸಾವು ಕೂಡ ವರದಿಯಾಗಿಲ್ಲ. ಇದಕ್ಕೆ ಪ್ರಮುಖ ಕಾರಗಣಗಳು ಆ ದೇಶದ ಸರ್ಕಾರದ ಸಮಯೋಚಿತ ನಿರ್ಧಾರಗಳು ಮತ್ತು ಸಾಮಾಜಿಕ ಕಳಕಳಿ, ಜವಾಬ್ದಾರಿ ಹೊಂದಿರುವ ನಾಗರಿಕರು.
ನಮ್ಮ ದೇಶದಲ್ಲೂ ಕೂಡ, ಕೊರೊನಾ ಸೋಂಕು ಪ್ರಾರಂಭದ ದಿನಗಳಿಂದಲೇ, ಸಾಮಾಜಿಕ ಅಂತರದ ಮಹತ್ವದ ಬಗ್ಗೆ ಜನರಲ್ಲಿ ಅರಿವು ಮೂಡಿಸಲು, ದೈನಂದಿನ ಪತ್ರಿಕೆ, ದೂರದರ್ಶನ, ದೂರವಾಣಿ, ಸಾಮಾಜಿಕ ಜಾಲತಾಣ, ಹೀಗೆ ಹಲವಾರು ಮಾಧ್ಯಮಗಳ ಮೂಲಕ ನಿರಂತರವಾಗಿ ಪ್ರಯತ್ನಗಳು ನಡೆಯುತ್ತಿವೆ. ಇದರ ಜೊತೆಗೆ ಕಡ್ಡಾಯವಾಗಿ ಮಾಸ್ಕ್ ಧರಿಸುವುದು ಮತ್ತು ಪದೇ ಪದೇ ಕೈತೊಳೆಯುವುದರ ಬಗ್ಗೆ ಕೂಡ ಜನರಿಗೆ ಬಾರಿ ಬಾರಿ ಹೇಳಲಾಗಿದೆ.
ಕೊರೊನಾ ಸೋಂಕು ತಗುಲದಂತೆ ಲಸಿಕೆಯಾಗಲಿ, ಬಂದ ನಂತರ ಯಶಸ್ವಿಯಾಗಿ ಗುಣಪಡಿಸಲು ಬೇಕಾಗುವ ನಿಖರವಾದ ಔಷಧಿಗಳು ಇರದ ಹಿನ್ನೆಲೆಯಲ್ಲಿ ಸೋಂಕು ಹರಡುವುದನ್ನು ನಿಯಂತ್ರಿಸಲು, ದೇಶಾದ್ಯಂತ ಮಾರ್ಚ್ 24 ರಿಂದ ಲಾಕ್‌ಡೌನ್ ಜಾರಿಗೆ ತರಲಾಯಿತು. ವ್ಯಕ್ತಿಗಳ ನಡುವೆ ಸಾಮಾಜಿಕ ಅಂತರ ಪಾಲನೆ ಮಾಡುವ ಮೂಲ ಉದ್ದೇಶದಿಂದ ಲಾಕ್‌ಡೌನ್ ಜಾರಿಗೆ ತರಲಾಗಿತ್ತು.
ಸೋಂಕು ಹರಡುವ ತೀವ್ರತೆ ಲಾಕ್‌ಡೌನ್‌ನ ಪ್ರಾರಂಭದ ದಿನಗಳಲ್ಲಿ ಕಡಿಮೆ ಇತ್ತು. ನಿರೀಕ್ಷಿಸಿದಂತೆ, ಲಾಕ್‌ಡೌನ್ ಸಡಿಲವಾಗುತ್ತಿದ್ದಂತೆ ಸೋಂಕು ನಾಗಾಲೋಟದಲ್ಲಿ ಹರಡುತ್ತಿದೆ. ಇದು ಮುಂಬರುವ ದಿನಗಳಲ್ಲಿ, ಇನ್ನೂ ತೀವ್ರಗೊಳ್ಳುವ ಆತಂಕವಿದೆ. ಇದಕ್ಕೆ ಕಾರಣ ನಮ್ಮ ಜನರ ಬೇಜ ವಾಬ್ದಾರಿ ನಡವಳಿಕೆ. ಕೆಲವರು ಅನಿವಾರ್ಯತೆ ಯಿಂದ, ಹಲವರು ಅಸಡ್ಡೆ, ಅಜ್ಞಾನದಿಂದ, 2 ತಿಂಗಳುಗಳ ಕಾಲ ಹೇಳಿದ ಪಾಠವನ್ನು ಗಾಳಿಗೆ ತೂರಿ, ಬೇಕಾ ಬಿಟ್ಟಿ ತಿರುಗುತ್ತಿದ್ದಾರೆ. ಈ ವೈರಾಣು ಇನ್ನು ಹಲವಾರು ತಿಂಗಳುಗಳ ಕಾಲ ನಮ್ಮನ್ನು ಸತಾಯಿಸುವುದು ಖಚಿತ.
ಕೊರೊನಾ ಸೋಂಕು ಎಬೋಲಾ (Ebola) ಅಥವಾ ಪ್ಲೇಗ್‌ನಂತಹ ಭಯಂಕರ ಕಾಯಿಲೆಯಲ್ಲ. ಪ್ರತಿ ನೂರು ಸೋಂಕಿತರಲ್ಲಿ 3 ರಿಂದ 4 ವ್ಯಕ್ತಿಗಳು ಯಮನ ಪಾದ ಸೇರುತ್ತಿದ್ದಾರೆ, ಇನ್ನು 8 ರಿಂದ 10 ಜನರಿಗೆ ಸೋಂಕು ತೀವ್ರತರ ಮಟ್ಟಕ್ಕೆ ಹೋಗುತ್ತಿದ್ದು, ಗುಣಮುಖರಾಗಲು 2 ರಿಂದ 3 ವಾರ ಬೇಕಾಗುತ್ತಿದೆ. ಉಳಿದವರೆಲ್ಲ ಶೀಘ್ರವಾಗಿ ಗುಣಮುಖರಾಗುತ್ತಿದ್ದಾರೆ. ಆದರೆ ಸೋಂಕು ಮಾತ್ರ ಕಾಡ್ಗಿಚ್ಚಿನಂತೆ ವೇಗವಾಗಿ ಹರಡುತ್ತಿದೆ. ಜಾತಿ, ಮತ, ವಯಸ್ಸು, ಅಂತಸ್ತು, ಭೇದ ಇಲ್ಲದೇ ಯಾರಿಗಾದರೂ ಸೋಂಕು ಬರಬಹುದು. ವಯೋವೃದ್ಧರಲ್ಲಿ, ಡಯಾಬಿಟಿಸ್, ಹೃದ್ರೋಗ, ಕ್ಯಾನ್ಸರ್, ರಕ್ತದ ಏರೋತ್ತಡ, ಮುಂತಾದ ದೀರ್ಘಾವಧಿ ರೋಗಗಳಿಂದ ಬಳಲುವವರಲ್ಲಿ, ಕೊರೋನಾ ಸೋಂಕು ತೀವ್ರ ಸ್ವರೂಪ ತಾಳಬಹುದು. ಸೋಂಕು ನಮ್ಮ ಮನೆ ಬಾಗಿಲು ತಟ್ಟಿದಾಗ ಈ ಎಲ್ಲಾ ಅಂಕಿ ಅಂಶಗಳು ಮಹತ್ವ ಕಳೆದು ಕೊಳ್ಳುತ್ತವೆ.
ಜನರೇ, ಎಚ್ಚೆತ್ತುಕೊಳ್ಳಿ. ನನ್ನ ಮತ್ತು ನನ್ನ ಕುಟುಂಬದ ಸದಸ್ಯರ ಆರೋಗ್ಯ ನನ್ನ ಜವಾಬ್ದಾರಿ ಎಂಬುದನ್ನು ಮರೆಯಬೇಡಿ. ಸೋಂಕು ಬಂದು ಆರೋಗ್ಯ ಹದಗೆಟ್ಟಾಗ, ಸರ್ಕಾರ, ವ್ಯವಸ್ಥೆಯನ್ನು ದೂಷಿಸುವುದರಿಂದ ಯಾವ ಪ್ರಯೋಜನವೂ ಇಲ್ಲ. ನಮ್ಮ ಕರ್ತವ್ಯ ಮತ್ತು ಜವಾಬ್ದಾರಿಗಳತ್ತ ಗಮನ ಹರಿಸೋಣ. ಇನ್ನು ಕೆಲವೊಂದು ತಿಂಗಳುಗಳ ಕಾಲ ನಮ್ಮ ನಡವಳಿಕೆಯನ್ನು, ಅಭ್ಯಾಸಗಳನ್ನು ಬದಲಾಯಿಸಿ ಕೊಳ್ಳುವುದು ಅತೀ ಅವಶ್ಯ ಮತ್ತು ಅನಿವಾರ್ಯ. ಬನ್ನಿ, ಕೊರೊನಾ ವೈರಾಣು ಜೊತೆ ಬದುಕಲು ಕಲಿಯೋಣ. ನಮ್ಮ ನಮ್ಮ ಕೆಲಸಗಳನ್ನು ನೆಮ್ಮದಿಯಿಂದ ಸುರಕ್ಷಿತವಾಗಿ ಮಾಡುವುದನ್ನು ಕಲಿಯೋಣ. ನಾವೆಲ್ಲ ಪಾಲಿಸಬೇಕಾದ ತ್ರಿವಳಿ ಸೂತ್ರಗಳ ಬಗ್ಗೆ ಅಗತ್ಯವಾದ ಮಾಹಿತಿಯನ್ನು ಅರಿತುಕೊಳ್ಳೋಣ.
ನನ್ನ ಆರೋಗ್ಯ, ನನ್ನ ಜವಾಬ್ದಾರಿ ಎಂಬುದನ್ನು ಅಕ್ಷರಶಃ ಪಾಲಿಸಿ. ಇದು ನನ್ನ ಕುಟುಂಬ,
ಸಮಾಜ ಮತ್ತು ದೇಶಕ್ಕೆ ನಾನು ಕೊಡುವ ಕಿರು ಕಾಣಿಕೆ ಎಂದು ಭಾವಿಸಿ. ಜನಗಳೇ,
ನಮ್ಮನ್ನು ನಾವು ಸ್ವಲ್ಪ ಬದಲಾಯಿಸಿಕೊಂಡು ನಮ್ಮ ಎಲ್ಲ ಕೆಲಸಗಳನ್ನು ಜವಾಬ್ದಾರಿಯಿಂದ ನಿಭಾಯಿಸೊಣ
1) ಇಬ್ಬರ ನಡುವೆ ಕನಿಷ್ಟ 6 ಅಡಿ ಅಂತರ ಕಾಯ್ದುಕೊಂಡು ನಿರ್ವಹಿಸಬಹುದಾದ ಎಲ್ಲಾ ಕೆಲಸಗಳನ್ನು ಮಾಡಿ ಮತ್ತು ಆ ಸ್ಥಳಗಳಿಗೆ ಅವಶ್ಯ ಕತೆಯಿದ್ದರೆ ನೆಮ್ಮದಿಯಿಂದ ಹೋಗಿ. ಗುಂಪು ಗುಂ ಪಾಗಿ ಜನ ಸೇರಬಹುದಾದ ಸ್ಥಳಗಳಲ್ಲಿ ಸಾಮಾಜಿಕ ಅಂತರ ಪಾಲನೆ ಕಷ್ಟ ದೇವಸ್ಥಾನ, ಸಿನಿಮಾ ಮಂ ದಿರ, ಜಾತ್ರೆ, ಮಾರ್ಕೆಟ್, ಕ್ರೀಡಾಂಗಣ ಇಂತಹ ಸ್ಥಳಗಳಿಂದ ಸ್ವಲ್ಪ ತಿಂಗಳುಗಳ ಕಾಲ, ಮನಸ್ಸಿಗೆ ಕಡಿವಾಣ ಹಾಕಿ ದೂರ ಇರಲು ಪ್ರಯತ್ನಿಸಿ.
ನಿಮ್ಮ ಹತ್ತಿರ ಇರುವ ವ್ಯಕ್ತಿಗೆ ಸೋಂಕು ಇದೆಯೋ, ಇಲ್ಲವೋ ಎಂದು ಚಿಂತಿಸುವ ಅಗತ್ಯವಿಲ್ಲ. ಶೇ.70 ರಿಂದ 80 ಕೊರೋನಾ ವೈರಾಣು ಸೋಂಕಿತರಿಗೆ ಕಾಯಿಲೆಯ ಲಕ್ಷಣಗಳೇ ಇರುವುದಿಲ್ಲ. ಪರೀಕ್ಷೆಗೆ ಒಳಗಾಗದಿದ್ದರೆ ಸ್ವತಃ ಆ ವ್ಯಕ್ತಿಗೂ ತನ್ನಲ್ಲಿ ಸೋಂಕು ಇರಬಹುದು ಎಂದು ಗೊತ್ತಾಗುವುದಿಲ್ಲ. ಕಾರಣ, ಎಲ್ಲಾ ಜಾಗಗಳಲ್ಲಿಯೂ, ಎಲ್ಲಾ ವ್ಯಕ್ತಿಗಳಿಂದ, ಅಂತರ ಕಾಪಾಡಿಕೊಳ್ಳುವುದು ಕ್ಷೇಮಕರ.
2) ನಮ್ಮ ಬತ್ತಳಿಕೆಯಲ್ಲಿ ಕೊರೊನಾ ಸೋಂಕಿನ ವಿರುದ್ಧ ಹೋರಾಡಲು ಇರುವ ಎರಡನೆಯ ಅಸ್ತ್ರವೆಂದರೆ ಕಡ್ಡಾಯವಾಗಿ ಮಾಸ್ಕ್ ಧರಿಸುವುದು. ಜನಸಾಂದ್ರತೆ ಕಡಿಮೆ ಇರುವ ಸ್ಥಳಗಳಲ್ಲಿ ಮಾಸ್ಕ್ ಧರಿಸುವ ಅವಶ್ಯಕತೆ ಇಲ್ಲ. ಮಾಸ್ಕ್ ಮೂಗು ಮತ್ತು ಬಾಯಿ ಎರಡನ್ನೂ ಮುಚ್ಚುವಂತಿರಬೇಕು. ಹತ್ತಿ ಬಟ್ಟೆ ಮಾಸ್ಕ್ ಸಾಮಾನ್ಯ ಜನರ ಅವಶ್ಯಕತೆಯನ್ನು ಪೂರೈಸುತ್ತದೆ. ಪ್ರತಿದಿನವೂ ಮಾಸ್ಕ್‌ನ್ನು ಸ್ವಚ್ಛವಾದ ನೀರು ಮತ್ತು ಸೋಪಿನಿಂದ ತೊಳೆಯುವುದು ಅಗತ್ಯ.
ಮಾಸ್ಕ್ ಧರಿಸುವುದರಿಂದ, ನಿಮ್ಮ ಸುತ್ತ ಮುತ್ತ ಸೋಂಕಿತ ವ್ಯಕ್ತಿ ಕೆಮ್ಮು ಅಥವಾ ಸೀನುವುದರಿಂದ, ಆ ವ್ಯಕ್ತಿಯೂ ಮಾಸ್ಕ್ ಧರಿಸಿದ್ದರೆ, ವೈರಾಣು ಎರಡು ಮಾಸ್ಕ್‌ಗೆ ಜಿಗಿದು, ನಿಮ್ಮ ಶ್ವಾಸಕೋಶದೊಳಗೆ ತೂರುವ ಸಂಭವ ಬಹುತೇಕ ಕಡಿಮೆಯಾಗುತ್ತದೆ. ನಿಮಗೆ ಸೋಂಕು ಇದ್ದರೆ ನಿಮ್ಮಿಂದ ಬೇರೆಯವರಿಗೆ ವೈರಾಣು ಹರಡುವುದು ಕಡಿಮೆಯಾಗುತ್ತಿದೆ. ಎರಡು ವರ್ಷದ ಮೇಲ್ಪಟ್ಟ ಪ್ರತಿಯೊಬ್ಬ ವ್ಯಕ್ತಿಯೂ, ಮಾಸ್ಕ್ ಧರಿಸಬೇಕೆಂದು Centre for Disease Control ಸಲಹೆ ಕೊಟ್ಟಿದೆ.
3) ದಿನಕ್ಕೆ ಎಷ್ಟು ಬಾರಿ, ಪ್ರತಿ ಬಾರಿ ಎಷ್ಟು ಸಮಯ, ಯಾವಾಗ, ಯಾವುದರಿಂದ ಕೈತೊಳೆಯಬೇಕೆಂದು ಸರಳವಾಗಿ ತಿಳಿದು ಕೊಳ್ಳೋಣ. ದಿನಕ್ಕೆ ಕನಿಷ್ಟ 6-10 ಬಾರಿ, ಪ್ರತಿ ಬಾರಿ 20 ಸೆಕೆಂಡ್ ಸೋಪ್ ಅಥವಾ ಸ್ಯಾನಿಟೈಸರ್‌ನಿಂದ ಕೈ ತೊಳೆಯಬೇಕು. ಪದೇ ಪದೇ ಕೈ ತೊಳೆಯುವುದರಿಂದ, ಕೊರೋನಾ ಸೋಂಕು ಖಚಿತವಾಗಿ ಬರುವ ಸಾಧ್ಯತೆ ಕಡಿಮೆಯಾಗುತ್ತದೆ ಎಂದು ವೈದ್ಯಕೀಯ ಪತ್ರಿಕೆಗಳಲ್ಲಿ ಕೂಡ ಪ್ರಕಟವಾಗಿದೆ. ಸೋಂಕು ಇರುವ ವ್ಯಕ್ತಿಯ ಮೂಗು ಮತ್ತು ಬಾಯಿಂದ ಬರುವ ಸ್ರವಿಸುವಿಕೆ (Secretion) ಹತ್ತಿರ ಇರುವ ವಸ್ತುಗಳ ಮೇಲೆ ಬೀಳಬಹುದು ಮತ್ತು ವೈರಾಣು ಸ್ವಲ್ಪ ಕಾಲ ಈ ವಸ್ತುಗಳ ಮೇಲೆ ಜೀವಂತ ಇರಬಹುದು ಎಂಬ ಅನುಮಾನ ಇದೆ. ಈ ಪರೋಕ್ಷ ದಾರಿಯಿಂದ ರೋಗ ಹರಡುವ ಸಂಭಾವ್ಯ ಕಡಿಮೆ. ಆದರೂ, ಕೆಮ್ಮು ಅಥವಾ ಸೀನಿದ ನಂತರ, ಮುಖ, ಮೂಗು, ಬಾಯಿ ಮುಟ್ಟಿಕೊಳ್ಳುವ ಮೊದಲು ತಪ್ಪದೇ ಕೈ ತೊಳೆಯಿರಿ. ಹಣ್ಣು ತರಕಾರಿ, ATM Card, ನೋಟ್ ಏನು ಮುಟ್ಟಿದರೂ, ಕೊರೊನಾ ವೈರಸ್ ನಮ್ಮ ದೇಹದೊಳಗೆ ಪ್ರವೇಶಿಸುತ್ತದೆ ಎಂದು ಭಯ ಬಿಡಿ. ಎಂದಿನಂತೆ ಎಲ್ಲವನ್ನೂ ಮುಟ್ಟಿ, ಆದರೆ ಕೈ ತೊಳೆಯಿರಿ.
ನನ್ನ ಆರೋಗ್ಯ, ನನ್ನ ಜವಾಬ್ದಾರಿ ಎಂಬುದನ್ನು ಅಕ್ಷರಶಃ ಪಾಲಿಸಿ. ಇದು ನನ್ನ ಕುಟುಂಬ, ಸಮಾಜ ಮತ್ತು ದೇಶಕ್ಕೆ ನಾನು ಕೊಡುವ ಕಿರು ಕಾಣಿಕೆ ಎಂದು ಭಾವಿಸಿ. ಜನಗಳೇ, ನಮ್ಮನ್ನು ನಾವು ಸ್ವಲ್ಪ ಬದಲಾಯಿಸಿಕೊಂಡು ನಮ್ಮ ಎಲ್ಲ ಕೆಲಸಗಳನ್ನು ಜವಾಬ್ದಾರಿಯಿಂದ ನಿಭಾಯಿಸೊಣ ಮತ್ತು ಕೊರೊನಾ ನಿಯಂತ್ರ ಣಕ್ಕೆ ನಾವೂ ಕೂಡ ಕೈ ಜೋಡಿಸೋಣ.
ಡಾ. ನಾಗಮಣಿ, ಅಗರವಾಲ್
ದಾವಣಗೆರೆ.
[email protected]