ಸ್ವಾಮೀಜಿ, ನಾವು ಪರೀಕ್ಷೆ ಬರೆಯಲು ಸಿದ್ಧರಿದ್ದೇವೆ. ಆದರೆ ಕೊರೊನಾ ಭಯವಿದೆಯಲ್ಲ ಏನು ಮಾಡುವುದು?…ಸ್ವಾಮೀಜಿ, ಮಕ್ಕಳು ಪರೀಕ್ಷೆ ಬಂತೆಂದರೆ ಹೆದರುತ್ತಾರೆ. ಅವರಲ್ಲಿನ ಭಯ ಓಡಿಸುವುದು ಹೇಗೆ?… ಹೀಗೆ ವಿದ್ಯಾರ್ಥಿಗಳು, ಪೋಷಕರಿಂದ ಪುಂಖಾನು ಪುಂಖವಾಗಿ ಪ್ರಶ್ನೆಗಳ ಸುರಿಮಳೆಯೇ ಸುರಿಯಿತು.
ಹೌದು ಇಡೀ ವಿಶ್ವವನ್ನೇ ತಲ್ಲಣಕ್ಕೆ ದೂಡಿರುವ ಕೊರೊನಾ ಹೆಮ್ಮಾರಿ ಕೇವಲ ರೋಗವಾಗಿಯಷ್ಟೇ ಕಾಡದೆ, ಯಾವ ಕ್ಷೇತ್ರವನ್ನೂ ಬಿಡದೆ ತನ್ನ ಕಬಂಧ ಬಾಹುಗಳನ್ನು ಚಾಚುವ ಮೂಲಕ ಸಮಸ್ಯೆಗಳನ್ನು ತಂದೊಡ್ಡಿದೆ. ಅದರಲ್ಲಿ ಮುಖ್ಯವಾಗಿ ಶಿಕ್ಷಣ ಕ್ಷೇತ್ರ.
ಭಾರತಕ್ಕೆ ಕೊರೊನಾ ಕಾಲಿಡುವಷ್ಟರಲ್ಲಿ ಪದವಿ ಪೂರ್ವ ಪರೀಕ್ಷೆಗಳಲ್ಲಿ ಇಂಗ್ಲಿಷ್ ಭಾಷಾ ಪತ್ರಿಕೆ ಪರೀಕ್ಷೆಯೊಂದು ಉಳಿದುಕೊಂಡಿತ್ತು. ಇನ್ನು ಎಸ್ಸೆಸ್ಸೆಲ್ಸಿ ಪರೀಕ್ಷೆಯಂತೂ ಪ್ರಾರಂಭವೇ ಆಗಿರಲಿಲ್ಲ. ಸರ್ಕಾರ ಅಂತೂ ಇಂತೂ ಧೈರ್ಯ ಮಾಡಿ ಕೊರೊನಾ ಕರಿನೆರಳಡಿಯಲ್ಲೇ ಜೂನ್ 18 ರಂದು ಪಿಯು ಇಂಗ್ಲಿಷ್ ಹಾಗೂ ಜೂನ್ 25 ರಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನು ನಡೆಸಲು ಸಿದ್ಧತೆ ನಡೆಸಿಕೊಂಡಿದೆ.
ಇಂತಹ ಸಂದರ್ಭದಲ್ಲಿ ವಿದ್ಯಾರ್ಥಿಗಳಲ್ಲಿ, ಪೋಷಕರಲ್ಲಿ ಉದ್ಭವಿಸಿರುವ ಸಂದೇಹಗಳಿಗೆ ಡಾ. ಶಿವಮೂರ್ತಿ ಮುರುಘಾ ಶರಣರು ಫೇಸ್‌ಬುಕ್ ಮತ್ತು ಯೂಟ್ಯೂಬ್ ಚಾನೆಲ್ ಮೂಲಕ 1.30 ಗಂಟೆಗಳ ಕಾಲ ಉತ್ತರಿಸಿ, ಅವರಲ್ಲಿ ಧೈರ್ಯ ತುಂಬುವ ಕೆಲಸ ಮಾಡಿದ್ದಾರೆ. ಕೊರೊನಾ ಸಂದರ್ಭದಲ್ಲಿ ಪರೀಕ್ಷೆ ಕುರಿತು ನೀವು ಏನು ಹೇಳುವಿರಿ? ಎಂಬ ಪ್ರಶ್ನೆಯನ್ನು ವಾಟ್ಸಾಪ್ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಲಾಗಿತ್ತು, ರಾಜ್ಯದ ಮೂಲೆ ಮೂಲೆಗಳಿಂದ ಸುಮಾರು 650ಕ್ಕೂ ಹೆಚ್ಚು ಜನರು ಪ್ರಶ್ನೆಗಳನ್ನು ಕೇಳಿ ಅವರ ಸಂದೇಹ ನಿವಾರಿಸಿಕೊಂಡಿದ್ದಾರೆ.
ಜಗಳೂರಿನ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿ ರುದ್ರೇಶ್ ಹಾಗು ಇನ್ನಿತರರ ಪ್ರಶ್ನೆಯೆಂದರೆ `ನಾವು ಪರೀಕ್ಷೆ ಬರೆಯಲು ಸಿದ್ಧರಿದ್ದೇವೆ. ಸಾಮಾಜಿಕ ಅಂತರದೊಂದಿಗೆ ಪರೀಕ್ಷೆ ಬರೆದರೂ ಕೊರೊನಾ ಭಯವಿದೆಯಲ್ಲಾ?’ ಎಂಬುದಾಗಿತ್ತು.
ಸ್ವಾಮೀಜಿ, ಮಾನವ ನಿರ್ಮಿತ ಕೊರೊನಾ ಸಂಕಷ್ಟದಿಂದ ಸಾಕಷ್ಟು ಬದುಕಿನ ಅನುಭವವಾಗಿದೆ. ತಮ್ಮ ಅಭಿಪ್ರಾಯ?
ಹೌದು, ಅದು ಜೀವನದ ಪಾಠ ಹೇಳಿಕೊಟ್ಟಿದೆ. ವಸ್ತು, ವಾಹನ, ಸಮಯ, ಮಾನವ ಸಂಬಂಧ ಹಾಗೂ
ಜೀವನದ ಬೆಲೆಯನ್ನು ಹೇಳಿಕೊಟ್ಟಿದೆ. ಜೀವವನ್ನು ಕೊಡಲು, ಕೊಡಿಸಲು ಬರುವುದಿಲ್ಲ. ಜೀವನ ಪ್ರೀತಿಯನ್ನು ಕಲಿತುಕೊಳ್ಳಿ ಎಂದು ತಿಳಿ ಹೇಳಿದೆ.
ಇದಕ್ಕೆ ಶ್ರೀಗಳ ಉತ್ತರ- ವಯಸ್ಕರಾದವರು ಬದುಕಿನ ಪರೀಕ್ಷೆಗೆ ಕುಳಿತುಕೊಂಡಿದ್ದಾರೆ. ದಿನವೂ ಪರೀಕ್ಷೆ ಎದುರಿಸಬೇಕು. ಪರೀಕ್ಷೆ ಅನಿವಾರ್ಯ. ಮುನ್ನೆಚ್ಚರಿಕೆಯ ಜೊತೆಯಲ್ಲಿ ಸಾಗಿದರೆ ಭಯಪಡಬೇಕಿಲ್ಲ. ತರಗತಿ-ನಿಮ್ಮ ಪ್ರಗತಿ. ಮುಂದಿನ ತರಗತಿಗೆ ಹೋಗಬೇಕೆಂದರೆ ಪರೀಕ್ಷೆಗೆ ಹೋಗಲೇಬೇಕು ಎಂದು ಉತ್ತರಿಸಿದ್ದಾರೆ.
ಹಿರೇಮಾಗಡಿ ಅನುಷ ಇನ್ನಿತರರ ಪ್ರಶ್ನೆಯೆಂದರೇ, ಪರೀಕ್ಷೆಗೆ ನಾವು ಹೆದರುವುದಿಲ್ಲ. ಆದರೆ ನಮ್ಮ ತಂದೆ-ತಾಯಿ ಕೊರೊನಾ ಸಂಬಂಧ ಹೆದರುತ್ತಿದ್ದಾರೆ ಏನು ಮಾಡುವುದು?
ಶ್ರೀಗಳು-ಯಾರೂ ಪರೀಕ್ಷೆಗೆ ಹೆದರಬೇಡಿ. ಕೆಲವರಿಗೆ ಪರೀಕ್ಷಾ ಭಯ, ಕೆಲವರಿಗೆ ಕೊರೊನಾ ಭಯ. ನೀವು ನಿರ್ಭಯಕ್ಕೆ ಒಳಗಾಗಿ. ಇದು ಅಂತರದ ಕಾಲ. ಮಕ್ಕಳು ಪರೀಕ್ಷಾ ಕೊಠಡಿಗೆ ಹೋಗಿ ಧೈರ್ಯವಾಗಿ ಪರೀಕ್ಷೆ ಬರೆಯುವಂತೆ ಮಾಡಿ.
ಇನ್ನು ಮೊಳಕಾಲ್ಮೂರು ಪಿ. ಶ್ರೀನಿವಾಸ್, ಮುಂತಾದವರ ಪ್ರಶ್ನೆ, ಓದಿದ್ದು ಮರೆತು ಹೋಗುತ್ತದೆ. ಮೊದಲಿನಂತೆ ಸ್ನೇಹಿತರ ಜೊತೆ ಓದಲು ಬಿಡುತ್ತಿಲ್ಲ ಏನು ಮಾಡುವುದು?
ಶ್ರೀಗಳು-ಸದ್ಯದ ಪರಿಸ್ಥಿತಿಯಲ್ಲಿ ಸಮೂಹ ವಿದ್ಯಾಭ್ಯಾಸಕ್ಕೆ ಅವಕಾಶ ಇಲ್ಲ. ಒಂಟಿಯಾಗಿ ಓದಬೇಕು. ಕೆಲವರಿಗೆ ನಾಲ್ಕೈದು ಬಾರಿ ಓದಿದಾಗ ನೆನಪಿನಲ್ಲಿ ಉಳಿಯುತ್ತದೆ. ಅರ್ಥವಾಗದಿದ್ದರೆ ಗಟ್ಟಿಯಾಗಿ ಓದಿಕೊಳ್ಳಿ. ಬರೆಯುತ್ತಾ ಓದಿಕೊಳ್ಳಬೇಕು. ಓದಿದ ನಂತರ ಜ್ಞಾಪಿಸಿಕೊಳ್ಳಿರಿ. ಗ್ರಹಿಸಿಕೊಳ್ಳುವುದು ಬಹುಮುಖ್ಯ.
ಚಿತ್ರದುರ್ಗದ ಟಿ. ಪರಶುರಾಮ್, ಇನ್ನಿತರರ ಪ್ರಶ್ನೆ, ಸ್ವಾಮೀಜಿ ಶಿಕ್ಷಣ ಸಚಿವ ಬಿ. ಸುರೇಶ್ ಕುಮಾರ್ ಅವರಿಗೆ ಹೇಳಿ ಪರೀಕ್ಷಾ ಸಮಯವನ್ನು ಒಂದು ತಾಸು ಹೆಚ್ಚಿಸುವಂತೆ.
ಶ್ರೀಗಳು- ಇದನ್ನು ಸಚಿವರ ಗಮನಕ್ಕೆ ಪತ್ರ ಬರೆಯುವ ಮೂಲಕ ತರುತ್ತೇವೆ.
ಸಿರಗುಪ್ಪದ ಹೆಚ್. ವಿಜಯಕುಮಾರ್, ಇನ್ನಿತರ ಪ್ರಶ್ನೆಯೆಂದರೇ 6 ವಿಷಯಗಳ ಪರೀಕ್ಷೆ ಒಂದೇ ಕೊಠಡಿಯಲ್ಲಿ ನಡೆಯಲಿದೆಯೇ? ಹಾಗಿದ್ದಲ್ಲಿ ನಮಗೆ ಕೊರೊನಾ ಭಯವಿರುವುದಿಲ್ಲ.
ಶ್ರೀಗಳು- ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ. ವಿಷಯಾಧಾರದ ಮೇಲೆ ಬದಲಾಗಬಹುದು. ಕೊಠಡಿ ಯಾವುದೇ ಇರಲಿ. ಪರೀಕ್ಷೆ ಬರೆಯಲು ಸಿದ್ಧರಾಗಬೇಕು. ಅಂತರ ಕಾಪಾಡಿಕೊಳ್ಳಿ.
ಬಿಳಿಚೋಡು ಕೆ. ದಿನೇಶ್, ಮುಸ್ಟೂರು ಎ. ರವಿಕುಮಾರ್ ಸೇರಿದಂತೆ ಹಲವರ ಪ್ರಶ್ನೆ ಇದಾಗಿತ್ತು. ಸ್ವಾಮೀಜಿ ನಾವು ಚೆನ್ನಾಗಿಯೇ ಓದುತ್ತೇವೆ. ಮರೆತು ಹೋಗುತ್ತದೆ. ಆ ಭಯದಿಂದ ಪರೀಕ್ಷೆ ಬರೆಯಲು ಮತ್ತಷ್ಟು ಹೆದರಿಕೆ. ನಿಮ್ಮ ಸಲಹೆ ಏನು?
ಶ್ರೀಗಳು- ಯಾರಾದರೂ ಬೈದರೆ ಅದನ್ನು ನಾವು ಮರೆಯುವುದಿಲ್ಲ. ಕಾರಣ ಅದನ್ನು ತುಂಬಾ ಸೀರಿಯಸ್ಸಾಗಿ ತೆಗೆದುಕೊಳ್ಳುತ್ತೇವೆ. ಅದು ಬೇಗ ನೋಂದಣಿಯಾಗುತ್ತದೆ. ಪಾಠವನ್ನು ಸಹ ಗಂಭೀರವಾಗಿ ಪರಿಗಣಿಸಿದರೆ ನೆನಪಿನಲ್ಲಿರುತ್ತದೆ. ಮರೆವು ಹೋಗಲು ಧ್ಯಾನ, ಏಕಾಗ್ರತೆ ಮುಖ್ಯ. ಮಿತ ಆಹಾರ ಸೇವಿಸಿ, ಹಣ್ಣುಗಳನ್ನು ಹಾಗೂ ಬಾದಾಮಿಯನ್ನು ಸೇವಿಸಿರಿ.
ಬಿ.ಜಿ. ಕೆರೆಯ ಎಂ. ಶ್ರೀನಿವಾಸ್ ಇನ್ನಿತರರ ಪ್ರಶ್ನೆ ಎಂದರೇ ಕೊರೊನಾಗೆ ಜನರೇ ಭಯಭೀತರಾಗಿದ್ದಾರೆ. ಈ ಸಮಯದಲ್ಲಿ ನಾವು ಊರಿಂದೂರಿಗೆ ಹೋಗಿ ಪರೀಕ್ಷೆ ಬರೆಯುವುದು ಸರಿಯೇ?
ಶ್ರೀಗಳು- ಹಾಗಂತ ಪರೀಕ್ಷೆಯನ್ನು ನಿಮ್ಮ ಊರಲ್ಲಿಯೇ ಬರೆಯಲು ಸಾಧ್ಯವಿಲ್ಲ. ಹತ್ತಿರವಿರುವ ಪರೀಕ್ಷಾ ಕೇಂದ್ರಗಳಿಗೆ ಹೋಗಿ ಬರೆಯಬೇಕು. ಭಯಭೀತರಾಗದೆ ಮನಸ್ಸನ್ನು ಸಿದ್ಧಪಡಿಸಿಕೊಳ್ಳಿರಿ.
ಇನ್ನು ಪಿಯುಸಿ ವಿದ್ಯಾರ್ಥಿಗಳಾದ ಅಬ್ಬಿಗೆರೆ ಚಿರಂಜೀವಿ ಇನ್ನಿತರರ ಪ್ರಶ್ನೆಯೆಂದರೇ, ಮೊದಲು ಬರೆದ ಪರೀಕ್ಷೆಗಳಷ್ಟು ಆಸಕ್ತಿ ಇಲ್ಲ. ಏನು ಮಾಡಬೇಕು? ಎಂದಾಗಿತ್ತು.
ಶ್ರೀಗಳು- ಮುಂದಿನ ಬದುಕನ್ನು ನಿರ್ಧರಿಸುವ ಘಟ್ಟ ಇದು. ಅಧ್ಯಯನದ ಆಸಕ್ತಿಯನ್ನು ಕಳೆದುಕೊಳ್ಳಬೇಡಿ. ಯಾವುದೇ ಪತ್ರಿಕೆಯನ್ನು ಅಲಕ್ಷ್ಯ ಮಾಡಬೇಡಿ.
ಅರಕಲಗೂಡಿನ ಪಿ. ಶ್ರೇಯ ಸೇರಿದಂತೆ ಹಲವರ ಪ್ರಶ್ನೆ ಇದಾಗಿತ್ತು. ಉತ್ತಮ ಅಂಕ ಗಳಿಸಲು ನಮ್ಮ ನೆನಪಿನ ಶಕ್ತಿ ಹೆಚ್ಚಿಸಲು ಅಧ್ಯಾತ್ಮಿಕತೆ ಸಹಕಾರಿಯಾಗುತ್ತದೆಯೇ? ಎಂದು ಕೇಳಿದ್ದರು.
ಶ್ರೀಗಳು- ಹಿಂದೆ ಗುಣಾಧಾರಿತ ಶಿಕ್ಷಣವಿತ್ತು. ಇಂದು ಅಂಕ ಆಧಾರಿತ ಶಿಕ್ಷಣವಿದೆ. ಅಂಕ ಆಧಾರಿತ ಶಿಕ್ಷಣ, ಹಣ ಆಧಾರಿತ ಶಿಕ್ಷಣವಾಗಿ ಪರಿಣಮಿಸುತ್ತಿದೆ. ಅವಸರ, ಒತ್ತಡಕ್ಕೆ ಒಳಗಾಗುತ್ತಾರೆ. ಇದರಿಂದ ಹೊರಬರಲು ಅಧ್ಯಾತ್ಮಿಕತೆ ಸಹಕಾರಿ.
ಎಸ್ಸೆಸ್ಸೆಲ್ಸಿ, ಪಿಯುಸಿ ವಿದ್ಯಾರ್ಥಿಗಳಲ್ಲದೆ, ಬಿಎ, ಬಿಎಸ್ಸಿ, ಬಿಕಾಂ, ಬಿಇ ಪದವಿ ವಿದ್ಯಾರ್ಥಿಗಳು ತಮ್ಮ ಪ್ರಶ್ನೆಗಳನ್ನು ಶ್ರೀಗಳ ಮುಂದಿಟ್ಟಿದ್ದು, ಹೂವಿನಡಗಲಿಯ ಟಿ. ಚೇತನ್, ಭರಮಸಾಗರದ ಅಕ್ಷತಾ ಇನ್ನಿತರರ ಪ್ರಶ್ನೆಯೆಂದರೆ ಸರ್ಕಾರ ನಮಗೆ ಪರೀಕ್ಷೆ ನಡೆಸಬೇಕೋ, ಬೇಡವೋ ಎಂಬ ಗೊಂದಲದಲ್ಲಿದೆ. ನಾವು ಓದಬೇಕೋ ಬೇಡವೋ ಎಂಬ ಗೊಂದಲದಲ್ಲಿದ್ದೇವೆ. ದಯವಿಟ್ಟು ಗೊಂದಲ ಪರಿಹರಿಸಿ ಸ್ವಾಮೀಜಿ…
ಪರೀಕ್ಷೆಯನ್ನು ಎದುರಿಸುತ್ತೇನೆ ಎಂಬ ವಿಶ್ವಾಸ ಬರಲು ಏನು ಮಾಡಬೇಕು? ಮತ್ತು ಹೇಗೆ?
ನಮ್ಮ ಮೇಲೆ ನಮಗೆ ಭರವಸೆ ಇರಬೇಕು. ಯಾವುದೇ ಪ್ರಶ್ನೆ ಬರಲಿ. ಅದನ್ನು ಎದುರಿಸುವಷ್ಟು ಅಧ್ಯಯನ ಮಾಡಬೇಕು.
ಅಧ್ಯಯನ ನಮ್ಮ ಲ್ಲಿ ಬದ್ಧತೆಯನ್ನು, ಭರವಸೆಯನ್ನು ಮೂಡಿಸುತ್ತದೆ. ನಿಮ್ಮಲ್ಲಿ ನಿರ್ಭೀತಿ ಮೂಡಿಸುತ್ತದೆ.
ಆಗ ನಾವು ವಾಮಮಾರ್ಗಕ್ಕೆ ಹೋಗಿ ಪರೀಕ್ಷೆ ಬರೆಯಲು ಹೋಗುವುದಿಲ್ಲ. ಅನುಭವಿಗೆ ಇರಬೇಕಾದ ಏಕಾಗ್ರತೆ ನಿಮಗೆ ಇರಬೇಕಾಗುತ್ತದೆ.
ಶ್ರೀಗಳು- ಸರ್ಕಾರಕ್ಕೆ ಗೊಂದಲ ಇರಬಹುದು. ಆದರೆ ಪರೀಕ್ಷೆ ನಡೆಸಲು ಸಿದ್ಧತೆ ಮಾಡಿಕೊಂಡಿದೆ. ನೀವು ಅಧ್ಯಯನ ಮಾಡಿರಿ. ಪರೀಕ್ಷೆ ಯಾವಾಗ ಬಂದರೂ ಚೆನ್ನಾಗಿ ಓದಿದಲ್ಲಿ ಭಯವಿಲ್ಲ ಅಲ್ಲವೇ.
ದಾವಣಗೆರೆ ದೇವೇಂದ್ರಪ್ಪ ಹಾಗೂ ಹಲವು ವಿದ್ಯಾರ್ಥಿಗಳ ಪ್ರಶ್ನೆ, ನಿರಂತರವಾಗಿ ಓದುತ್ತಿದ್ದ ನಮಗೆ ಕೊರೊನಾದಿಂದ ಓದುವ ಆಸಕ್ತಿ ಕಳೆದುಹೋಗಿದೆ ಏನು ಮಾಡುವುದು?
ಶ್ರೀಗಳು- ಅಧ್ಯಯನದ ಆಸಕ್ತಿ ಕಳೆದುಕೊಳ್ಳಬೇಡಿ. ಪ್ರಯತ್ನ ಮುಖ್ಯ. ಆಸಕ್ತಿ ಬೆಳೆಸಿಕೊಂಡು ಸಿದ್ಧತೆ ನಡೆಸಿರಿ.
ಇನ್ನು ಹಾಸನದ ಎಸ್. ಜೀವನ್ ಇನ್ನಿತರರು ಸ್ವಾಮೀಜಿ ನಮ್ಮ ಜ್ಞಾನ ವೃದ್ಧಿಗೆ ಪರೀಕ್ಷೆಯೂ ಒಂದು ಮಾಧ್ಯಮವೇ? ಎಂದು ಕೇಳಿದ್ದಾರೆ.
ಶ್ರೀಗಳು- ಕಲಿತ ವಿದ್ಯೆಯನ್ನು ಒರೆಗೆ ಹಚ್ಚಲು ಪರೀಕ್ಷೆಯೂ ಒಂದು ಮಾಧ್ಯಮ. ವಿವಿಧ ಪಠ್ಯಕ್ರಮಗಳಿಂದ ಜ್ಞಾನ ವೃದ್ಧಿಸುತ್ತದೆ. ಭಾಷಾ ಪಠ್ಯಕ್ರಮದಿಂದ ಬದುಕು ಹಸನಾಗುತ್ತದೆ. ನಿಗದಿ ಆಗಿರುವ ಪ್ರತಿ ಪಠ್ಯಗಳು ಜ್ಞಾನವೃದ್ಧಿಗೆ ಸೋಪಾನ. ಜ್ಞಾನ ಪರ್ವತ ಏರಲು ಪಠ್ಯಕ್ರಮ ಏಣಿಯಾಗುತ್ತದೆ.
ಚಿತ್ರದುರ್ಗದ ಸಹನ, ರಾಣೇಬೆನ್ನೂರು ಅಂಕಿತ ಹಾಗೂ ಕೊಟ್ಟೂರು ಅಕ್ಷಯ್ ಮುಂತಾದವರು ಆನ್‌ಲೈನ್ ಶಿಕ್ಷಣ ಹೇಗೆ ನಮ್ಮ ಯಶಸ್ಸಿಗೆ ಕಾರಣವಾಗುತ್ತದೆ?
ಶ್ರೀಗಳು- ಈ ವಿಚಾರವಾಗಿ ಸರ್ಕಾರದ ಹಂತದಲ್ಲಿ ಗೊಂದಲಗಳಿವೆ. ಮುಂದಿನ ದಿನಗಳಲ್ಲಿ ತಿಳಿಸಲಾಗುವುದು.
ಪೋಷಕ ವರ್ಗದಿಂದ…
ಕೊರೊನಾ ಭಯದಿಂದ ಮಕ್ಕಳಿಗೆ ಅಭ್ಯಾಸದ ಮೇಲೆ ಹಿಡಿತ ಸಾಧಿಸಲು ಅಸಾಧ್ಯ. ಅವರ ಭವಿಷ್ಯದ ಬಗ್ಗೆ ನಿಮ್ಮ ಅನಿಸಿಕೆ?
ಶ್ರೀಗಳು- ಅಭ್ಯಾಸದಿಂದ ವಿಮುಖರಾಗಬಾರದು. ಸಮಯವನ್ನು ಸದುಪಯೋಗ ಪಡಿಸಿಕೊಳ್ಳಬೇಕು. ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿದೆ.
ಮಕ್ಕಳು ಪರೀಕ್ಷೆ ಬಂತೆಂದರೆ ಹೆದರುತ್ತಾರೆ. ಲವಲವಿಕೆ ಮಾಯವಾಗುತ್ತದೆ. ಭಯ ಓಡಿಸಲು ಏನು ಮಾಡಬೇಕು?
ಶ್ರೀಗಳು- ನಾವು ಭಯ ಬಿಡಿಸುವವರು. ಭಯ ಬಿತ್ತುವವರ ಹಿಂದೆ ಓಡಬೇಡಿ. ಕಲಿಕೆ ಒಂದು ಕಲೆ. ಅದು ನಿರಂತರ ಕಲೆ. ಭಯವನ್ನು ಬದುಕಿನಿಂದ ಓಡಿಸಿದರೆ ಭರವಸೆ ತನ್ನಿಂದ ತಾನೇ ಬರುತ್ತದೆ.
ಮಕ್ಕಳಲ್ಲಿ ಏಕಾಗ್ರತೆ, ಶಿಸ್ತು, ಸಂಯಮ ಇಲ್ಲವಾಗಿದೆ. ಸರಿದಾರಿಗೆ ತರುವ ಪ್ರಯತ್ನ ಹೇಗೆ?
ಶ್ರೀಗಳು- ಧೈರ್ಯ ಬಹಳ ಮುಖ್ಯ. ಮಕ್ಕಳಿಗೆ ಓದಿನ ಮಹತ್ವ ತಿಳಿಸಬೇಕು. ಬಾಹ್ಯ ಸೆಳೆತಗಳಿಗೆ ಹೋಗದಂತೆ ನೋಡಿಕೊಳ್ಳಬೇಕು.
ಶ್ರೀ ಮುರುಘಾಮಠ, ಚಿತ್ರದುರ್ಗ.
[email protected]