ನಮ್ಮ ಮಿತ್ರ ಮಂಡಳಿಯ ಬೆನ್ನೆಲುಬಿನಂತಿದ್ದ ಹೆಚ್.ಎಂ.ಪ್ರಭುಲಿಂಗಯ್ಯ ಅಕಾಲಿಕ ಮರಣಕ್ಕೆ ತುತ್ತಾಗಿ ಇದೇ ಜೂನ್ 9 ಕ್ಕೆ ವರ್ಷ ಇಪ್ಪತ್ತೆರಡು.
ಜಾಹೀರಾತು ಸಂಸ್ಥೆ ನಡೆಸುತ್ತಿದ್ದ ಪ್ರಭು, ಮಾನಸ ಕನ್ನಡ ಸಂಘ ರಚಿಸಿ, ಕೆಟಿಜೆ ನಗರ ಭಾಗದ ಯುವಕರನ್ನು ಒಗ್ಗೂಡಿಸಿ, ಕನ್ನಡ ಪರ ಕಾರ್ಯಕ್ರಮಗಳಿಗೆ ಬುನಾದಿ ಹಾಕಿದರು. ಕಸಾಪ ಸೇರಿದಂತೆ, ವಿವಿಧ ಸಂಘಟನೆಗಳಲ್ಲಿ ಸಕ್ರಿಯರಾಗಿದ್ದರು. ಶಾಮನೂರು ಶಿವಶಂಕರಪ್ಪನವರ ಅಭಿಮಾನಿಯಾಗಿದ್ದು, ಸಂಘವನ್ನೇ ಹುಟ್ಟು ಹಾಕಿದರು. ಕ್ರೀಡಾ ಚಟುವಟಿಕೆಗಳಿಗೆ ಇಂಬು ಕೊಟ್ಟರು.
ನಾನಂದು ಕಾರ್ಯ ನಿರ್ವಹಿಸುತ್ತಿದ್ದ ಪತ್ರಿಕಾಲದಲ್ಲಿ ಸದಾಕಾಲ ನನ್ನೊಂದಿಗೆ, ಚಂದ್ರಶೇಖರ್ ಬೆಳವಾಡಿಯವರೊಂದಿಗಿರುತ್ತಿದ್ದು, `ಪ್ರಸಾದ್, ಪ್ರಭು, ಚಂದ್ರು’ ಎಂಬ ಹೆಸರು ಬರಲು ಕಾರಣರಾದರು. ಹೆಚ್. ಆಂಜನೇಯ, ಸಂತೋಜಿ ರಾವ್, ನೂ.ತಿ.ನಾರಾಯಣ ರಾವ್, ರಿದಂ ಪ್ರಕಾಶ್…. ಹೀಗೆ ಮುಂಜಾನೆಯಿಂದ ಮಧ್ಯರಾತ್ರಿಯವರೆಗೆ ಗುಂಪಿನೊಂದಿಗೆ ನಗೆ ಚಟಾಕಿ ಹಾರಿಸಿಕೊಂಡು ತಿರುಗುತ್ತಾ, ಉತ್ಸಾಹದ ಚಿಲುಮೆಯಾಗಿದ್ದ ಪ್ರಭು, ಇನ್ನೂ ಮದುವೆ, ಮನೆತನದ ಜವಾಬ್ದಾರಿ, ಮಿತ್ರಕೂಟಕ್ಕೆ ನೀಡುತ್ತಿದ್ದ ಅಪರೂಪದ ಒತ್ತಾಸೆ…. ಇವುಗಳು ನೆರವೇರುವ ಮುನ್ನವೇ ಸರಸರನೇ ಬಾರದ ಲೋಕಕ್ಕೆ ತೆರಳೇ ಬಿಟ್ಟರು. ಪ್ರಭು ಬೆಂಗಳೂರಿನಿಂದ ಡ್ರೈವ್ ಮಾಡಿಕೊಂಡು ಬರುವಾಗ ರಸ್ತೆಯಲ್ಲಿಯೇ ಜವರಾಯ ಲಾರಿಯ ರೂಪದಲ್ಲಿ ಹೊಂಚುಹಾಕಿ ಕಾದಿದ್ದ ! ಪ್ರಭುವಿನ ಮುಗ್ದತೆ – ಹಾಸ್ಯಪ್ರಿಯತೆಗೆ ಈ ಒಂದು ಬಾಲಂಗೋಚಿಯೊಂದಿಗೆ ಈ ಬರಹ ಮುಕ್ತಾಯಗೊಳಿಸುತ್ತೇನೆ.
ಸದಾ ಶ್ವೇತ ವಸ್ತ್ರಧಾರಿಯಾಗಿರುತ್ತಿದ್ದ ಪ್ರಭು, ಎಂದಿನಂತೆ ಅಂದೂ ಮುಂಜಾನೆಯ ಭೇಟಿಗೆಂದು ನನ್ನ ಮನೆಗೆ ಬಂದರು. ಆಗ ನಡೆದದ್ದು ಈ ಮಾತುಕತೆ.
ಏನ್ ಸ್ವಾಮೇರೇ, ನಿನ್ನೆ ಕಾಣ್ಲಿಲ್ಲವಲ್ಲ ? ಇದು ನನ್ನ ಪ್ರಶ್ನೆ.
ಇಲ್ಲಾ ಸಾರ್, ನಿನ್ನೆ ಊರಲ್ಲಿರಲಿಲ್ಲ, ನನ್ನ ತಂಗಿಗೆ ಗಂಡು ನಿಶ್ಚಯಿಸಲು ಹೋಗಿದ್ವಿ ಬಂತು ಉತ್ತರ.
ಒಹ್! ಸಂತೋಷ. ಎಲ್ಲಿಯದು ಗಂಡು ? ನನ್ನ ಪ್ರಶ್ನೆ.
ಅದೇ ಸಾರ್, ಲಕ್ಷ್ಮೀಶ್ವರ ಅಂತ ಕವಿ ಇದ್ದನಲ್ಲ….
ರೀ ಸ್ವಾಮಿಗಳೇ, ಕವಿಯ ಹೆಸರು ಲಕ್ಷ್ಮೀಶ್ವರ ಅಲ್ಲಾ, ಲಕ್ಷ್ಮೀಶ ಅಂತ. ಲಕ್ಷ್ಮೇಶ್ವರ ಅನ್ನೋದು ಊರಿನ ಹೆಸರು. ಮನುಷ್ಯರ ಹೆಸರು, ಊರಿನ ಹೆಸರು, ಪ್ರಾಣಿಗಳ ಹೆಸರು ಅಂತಾ ಬೇರೆ ಬೇರೆ ಇರ್ತಾವೆ. ಸರಿ ಈಗ ಹೇಳಿ.!
ಅಯ್ಯೊ! ಹೌದಾ ಸಾರ್ ನಾನು ಲಕ್ಷ್ಮೀಶ , ಲಕ್ಷ್ಮೀಶ್ವರ ಎಲ್ಲಾ ಒಂದೇ ಅಂದ್ಕೊಂಡುಬಿಟ್ತಿದ್ದೆ. ಇರ್ಲಿ ಬಿಡಿ ಸಾರ್, ಸಾಹಿತ್ಯದಲ್ಲಿ ಏನೇನೋ ಪಂಥಗಳಿವೆ ಅಂಥಾರಲ್ಲಾ, ಹಾಗೆ ನಮ್ದು ಮಂದಮತಿ ಸಾಹಿತ್ಯ ಪಂಥ, ನಾವೇ ಅದಕ್ಕೆ ಸ್ಥಿರ ಪಟ್ಟಾಧ್ಯಕ್ಷರು. ಖಾಯಂ ಸಮಿತಿ ಮಾಡಿದ್ರಾಯ್ತು ಬಿಡಿ, ಕಾಯಂ ಕಾರ್ಯದರ್ಶಿಯಾಗಿ ಚಂದ್ರು ಇದ್ದೇ ಇರ್ತಾರಲ್ಲ !
ಹಳೇಬೀಡು ರಾಮಪ್ರಸಾದ್
ದಾವಣಗೆರೆ.