ವಿಶ್ವದಾದ್ಯಂತ ಹಲವು ರಾಷ್ಟ್ರಗಳಲ್ಲಿ ಸಣ್ಣ ಅಣುವಿನ ರೂಪದ ಕೊರೊನಾ ವೈರಸ್ ಎಲ್ಲಾ ವರ್ಗದ ಮನುಕುಲವನ್ನೇ ತಲ್ಲಣಗೊಳಿಸಿದೆ. ಊಹೆಗೂ ಮೀರಿ ತನ್ನ ಸಾವಿನ ಕಬಂಧ ಬಾಹುವನ್ನು ರಕ್ತಬೀಜಾಸುರನಂತೆ ಎಲ್ಲೆಡೆ ವ್ಯಾಪಿಸಿ, ಜಾಗತಿಕವಾಗಿ ತೀವ್ರ ಆತಂಕ ಮೂಡಿಸಿರುವ ಆರೋಗ್ಯ ಸಮಸ್ಯೆ. ಈ ನಿಟ್ಟಿನಲ್ಲಿ ಜಾಗತಿಕ ಮಟ್ಟದಲ್ಲಿ ಹಾಗೂ ಇಡೀ ಭಾರತ ದೇಶವೇ ತಡೆಗಟ್ಟಲು ಹೋರಾಡುತ್ತಿದೆ. ಇದರಲ್ಲಿ ಗರ್ಭಿಣಿಯರು, ತಾಯಂದಿರು ಹಾಗೂ ಮಕ್ಕಳಲ್ಲಿಯೂ ಕೊರೊನಾ ವೈರಾಣುಗಳು ಇರುವುದು ದೃಢಪಟ್ಟಿದೆ.
ಈಗಾಗಲೇ ಗೊತ್ತಿರುವ ಹಾಗೆ ಇದು ಸೋಂಕಿತ ರೋಗವಾಗಿದ್ದು, ಒಬ್ಬರಿಂದ ಒಬ್ಬರಿಗೆ ಸೋಂಕಿತ ವ್ಯಕ್ತಿಯಿಂದ ಹರಡುತ್ತದೆ. ಹೀಗಿರುವಾಗ ಸೋಂಕಿತ ತಾಯಂದಿರು ತಮ್ಮ ಮಗುವಿಗೆ ಎದೆ ಹಾಲನ್ನು ಕುಡಿಸಬಹುದೇ ಹಾಗೂ ಹೇಗೆ ಇಂತಹ ಸಂದರ್ಭದಲ್ಲಿ ಮಗುವಿನ ಪೋಷಣೆ ಮಾಡಬೇಕು ಎಂಬ ಸಮಸ್ಯೆಗಳು ಕಾಡುವುದು ಸಹಜ.
ಮಾಹಿತಿಯ ಪ್ರಕಾರ ಹುಟ್ಟಿದ ಮಗುವಿಗೆ ತಾಯಿಯ ಹಾಲೇ ಅತ್ಯಂತ ಸೂಕ್ತವಾದ ಆಹಾರ ಹಾಗೂ ಹುಟ್ಟಿದ ಅರ್ಧ ಗಂಟೆಯೊಳಗೆ ಮಗುವಿಗೆ ಎದೆ ಹಾಲುಣಿಸಬೇಕು, ಮಗುವಿಗೆ ಆರು ತಿಂಗಳು ತುಂಬುವವರೆಗೆ ಎದೆ ಹಾಲನ್ನಲ್ಲದೆ ಬೇರೆ ಏನನ್ನೂ ಕೊಡಬಾರದು.
ಎದೆ ಹಾಲಿನಿಂದ ಆಗುವ ಅನೇಕ ಉಪಯೋಗಗಳ ಕುರಿತು ಮಾಹಿತಿ ಒದಗಿಸುವುದು ಅತ್ಯವಶ್ಯಕವಾಗಿದೆ. ಅದರಲ್ಲೂ ಮೊದಲ ಮೂರು ದಿನ ಸ್ರವಿಸುವ ಗಟ್ಟಿರೂಪದ ಹಳದಿ ವರ್ಣದ (ಕೊಲೆಸ್ಟ್ರಮ್) ಗೀಬಿನ ಹಾಲನ್ನು ಈ ಸಂಧರ್ಭದಲ್ಲಿ ತಪ್ಪದೇ ಮಗುವಿಗೆ ಕುಡಿಸಬೇಕು. ಇದು ಸ್ವಲ್ಪ ಪ್ರಮಾಣದಲ್ಲಿದ್ದರೂ ಇದು ಅತ್ಯಂತ ಶಕ್ತಿಯತವಾಗಿದ್ದು, ಎಲ್ಲಾ ರೋಗ ನಿರೋಧಕ ಅಂಶಗಳನ್ನು ಒಳಗೊಂಡಿದೆ ಹಾಗಾಗಿ ಇದು ಮಗುವಿಗೆ ಜೀವ ಸಂಜೀವಿನಿ ಹಾಗೂ ಮಗುವಿಗೆ ಸುರಕ್ಷಾ ಕವಚ ಒದಗಿಸುತ್ತದೆ. ಸುರಕ್ಷಿತ ಗರ್ಭದಿಂದ ಮಗುವು ಜನಿಸಿ, ರೋಗಾಣುಗಳೇ ತುಂಬಿರುವ ವಲಯಕ್ಕೆ ಬಂದಾಗ, ರೋಗಾಣುಗಳ ವಿರುದ್ಧ ಹೋರಾ ಡಲು ತಾಯಿಯ ಎದೆ ಹಾಲಿನ ಪಾತ್ರ ಮಹತ್ವದ್ದಾಗಿದೆ.
ಅನೇಕ ತಾಯಂದಿರಿಗೆ ಸಾಮಾನ್ಯವಾಗಿ ಎಲ್ಲರಿಗೂ ಈ ಸಂದರ್ಭದಲ್ಲಿ, ಮೂಡುವ ಪ್ರಶ್ನಗಳಿಗೆ ಉತ್ತರಿಸಲಾಗಿದೆ.
1. ಕೋವಿಡ್ 19 ವೈರಾಣು ಎದೆ ಹಾಲಿನ ಮುಖಾಂತರ ಮಗುವಿಗೆ ಬರಬಹುದೇ?
ಉತ್ತರ: ಇಲ್ಲಿಯವರೆಗಿನ ಸಂಶೋಧನೆಯ ಪ್ರಕಾರ ಕೋವಿಡ್ 19 ವೈರಾಣು ಎದೆಹಾಲಿನಲ್ಲಿ ಕಂಡು ಬಂದಿಲ್ಲ.
ಇದರಿಂದಾಗಿ ಮಗುವಿನ ಉಳಿಯುವಿಕೆಗೆ ಸಹಕಾರಿಯಾಗುವುದಲ್ಲದೇ ಮಗುವಿನ ಸರ್ವತೋಮುಖವಾದ ಬೆಳವಣಿಗೆಗೆ ಅನುಕೂಲವಾಗುವುದು. ಎದೆ ಹಾಲಿನಲ್ಲಿ ಎಲ್ಲಾ ರೀತಿಯ ಉತ್ತಮ ಅಂಶಗಳು ಮಗುವಿಗೆ ದೊರಕುವವು. ಸೂಕ್ತವಾದ ಸಮಯದಲ್ಲಿ ಎದೆ ಹಾಲುಣಿಸುವಿಕೆಯಿಂದಾಗಿ ಜೀವನ ಪರ್ಯಂತ ಮಗುವಿನ ಆರೋಗ್ಯದ ಮೇಲೆ ಆಗುವ ಅನುಕೂಲತೆಗಳು ತುಂಬಾ ಇವೆ.
2. ಕೋವಿಡ್ 19 ಶಂಕಿತ/ದೃಢಪಟ್ಟಿರುವ ತಾಯಂದಿರು ಮಗು ಹುಟ್ಟಿದ ತಕ್ಷಣ ಮಗುವಿಗೆ ಎದೆ ಹಾಲುಣಿಸಬಹುದೇ?
ಉತ್ತರ : ಖಂಡಿತವಾಗಿಯೂ ಕುಡಿಸಬಹುದು. ಎಲ್ಲಾ ವರ್ಗದವರೂ, ಎಲ್ಲಾ ಹಂತಗಳಲ್ಲಿಯೂ ನಿಸ್ಸಂಶಯವಾಗಿ ಎದೆ ಹಾಲುಣಿಸಬಹುದಾಗಿದೆ. ಕೋವಿಡ್ 19 ಎದೆ ಹಾಲಿನ ಮುಖಾಂತರ ಹರಡುವುದಿಲ್ಲ. ಹಾಗಾಗಿ ಎದೆ ಹಾಲುಣಿಸಬಹುದು.
ಹೆರಿಗೆಯ ನಂತರ ಹುಟ್ಟಿದ ಅರ್ಧ ಗಂಟೆಯೊಳಗೆ ತಾಯಿ ಮಗುವನ್ನು ಎದೆಗಪ್ಪಿಕೊಂಡು ಎದೆ ಹಾಲುಣಿಸುವುದರಿಂದ ಮಗುವಿನಲ್ಲಿ ಅನೇಕ ಸಹಜವಾದ ಬದಲಾವಣೆಗಳು ಉಂಟಾಗುವವು. ಮಗುವಿನ ತಾಪ ಮಾನವು ತಾಯಿಯ ಅಪ್ಪುಗೆಯಿಂದಾಗಿ ಕಾಪಾಡುವುದರಿಂದ ಮಗುವಿನ ಮರಣ ಪ್ರಮಾಣವನ್ನು ಕಡಿಮೆ ಮಾಡುವುದರಲ್ಲಿ ತಾಯಿಯ ಎದೆ ಹಾಲು ಅನುಕೂಲವಾಗುವುದು.
3. ಕೋವಿಡ್ 19 ಶಂಕಿತ/ದೃಢಪಟ್ಟಿರುವ ತಾಯಿಯ ಬಳಿ ಮೆಡಿಕಲ್ ಮಾಸ್ಕ್ ಇಲ್ಲದಿದ್ದಾಗ ಆಕೆ ಎದೆ ಹಾಲುಣಿಸಬಹುದೇ?
ನಿಸ್ಸಂಶಯವಾಗಿ ಆಕೆ ಹಾಲುಣಿಸಬಹುದು. ಎದೆ ಹಾಲುಣಿಸುವಿಕೆಯಿಂದಾಗಿ ಶಿಶು ಮರಣವನ್ನು ತಪ್ಪಿಸಬಹುದಾಗಿದೆ.
4. ಕೋವಿಡ್ 19 ಶಂಕಿತ/ದೃಢಪಟ್ಟಿರುವ ತಾಯಿಯು ಎದೆ ಹಾಲುಣಿಸುವ ಮುಂಚೆ ಎದೆಯನ್ನು ಶುಚಿಗೊಳಿಸಿ ಹಾಲುಣಿಸಬೇಕೇ?
ಉತ್ತರ: ಹಾಲುಣಿಸುವ ಎಲ್ಲಾ ಸಮಯದಲ್ಲಿ ತೊಳೆಯುವ ಅವಶ್ಯವಿಲ್ಲ. ಸೋಂಕಿತ ತಾಯಿಯ ತೆರೆದ ಎದೆಯ ಮೇಲೆ ಹಾಲುಣಿಸುವ ಮುನ್ನ ಕೆಮ್ಮಿದರೆ ಅಥವಾ ಸೀನಿದರೆ ಇಪ್ಪತ್ತು ಸೆಕೆಂಡುಗಳ ಕಾಲ ಎದೆಯ ಭಾಗವನ್ನು ಸೋಪು ನೀರಿನಿಂದ ತೊಳೆದುಕೊಳ್ಳಬೇಕು.
5. ಸೋಂಕಿತ ತಾಯಿಯು ತುಂಬಾ ಅನಾರೋಗ್ಯದಿಂದಾಗಿ ಹಾಲುಣಿಸಲು ಆಗದಿದ್ದರೆ ಬೇರೆ ಪರ್ಯಾಯವೇನು ?.
ಉತ್ತರ: ಪರ್ಯಾಯವಾಗಿ ತಾಯಿಯ ಎದೆಹಾಲನ್ನು ಕೈಯಿಂದ ಅಥವಾ ಪಂಪ್ ಅಥವಾ ಮೆಷಿನ್ ಮುಖಾಂತರ ಹಾಲನ್ನು ತೆಗೆದು ಸ್ವಚ್ಚವಾದ ಲೋಟ ಮತ್ತು ಚಮಚದಿಂದ ಮಗುವಿಗೆ ತಾಯಿಯ ಎದೆ ಹಾಲನ್ನು ಕುಡಿಸಬೇಕು. ಎದೆ ಹಾಲನ್ನು ಹೇಗೆ ಶೇಖರಿಸಬೇಕು ಎಂಬುದು ತಾಯಿಯೇ ನಿರ್ಧರಿಸಬೇಕು. ಯಾಕೆಂದರೆ ಪಂಪ್ ಹಾಗೂ ಮಷಿನ್ ಬಳಸುವುದಾದರೆ ಸರಿಯಾಗಿ ಶುಚಿಗೊಳಿಸಿ ಬಳಸಬೇಕು. ಹಾಗೆಯೇ ಅದು ಖರ್ಚನ್ನು ಒಳಗೊಂಡಿದೆ.
ತಾಯಿಯ ಹಾಲನ್ನು ತೆಗೆಯಲು ಆಗದಿದ್ದ ಸಂದರ್ಭದಲ್ಲಿ ಈಗ ಕೆಲವೆಡೆ ಎದೆ ಹಾಲಿನ ಬ್ಯಾಂಕುಗಳು ಇವೆ. ಅಲ್ಲಿಂದ ಎದೆ ಹಾಲನ್ನು ಪಡೆದು ತಾತ್ಕಾಲಿಕವಾಗಿ ತಾಯಿ ಗುಣವಾಗುವರೆಗೆ ಕುಡಿಸಬಹುದಾಗಿದೆ ಅಥವಾ (Wet Nurse) ಇನ್ನೊಬ್ಬ ಎದೆ ಹಾಲುಣಿಸುವ ಇತರೆ ತಾಯಂದಿರೂ ಮನೆಯಲ್ಲಿದ್ದರೆ ಆ ತಾಯಿಯು ಎದೆ ಹಾಲನ್ನು ಕೊಡಬಹುದು. ಇದಕ್ಕೆ ಮನೆಯವರ ಬೆಂಬಲ ಅಥವಾ ಸಹಕಾರ ಬೇಕಾಗುವುದು. ಇನ್ನೊಂದು ಗಮನಿಸಬೇಕಾದ ಅಂಶವೆಂದರೆ ಹೆಚ್.ಐ.ವಿ. ಹೆಚ್ಚಾಗಿರುವ ಕಡೆ ಹೆಚ್.ಐ.ವಿ. ಪರೀಕ್ಷೆ ಮಾಡಿಸಿಯೇ ಆಕೆ ಬೇರೆ ಮಗುವಿಗೆ ಎದೆ ಹಾಲುಣಿಸಬಹುದಾಗಿದೆ.
ಕೋವಿಡ್-19 ಶಂಕಿತ/ದೃಢಪಟ್ಟಿರುವ ತಾಯಂದಿರು ಎದೆ ಹಾಲುಣಿಸುವಾಗ ಈ ಕೆಳಕಂಡ ಶುಚಿತ್ವದ ಕ್ರಮಗಳನ್ನು ಅನುಸರಿಸಬೇಕು.
ಅ) ಮಗುವನ್ನು ಮುಟ್ಟುವ ಮೊದಲು ಕೈಗಳನ್ನು ಸೋಪ್ ಹಾಗೂ ನೀರಿನಿಂದ ಶುಚಿಯಾಗಿ ತೊಳೆದುಕೊಳ್ಳಬೇಕು. ಅಥವಾ ಆಲ್ಕೋಹಾಲ್ ಇರುವ ಸ್ಯಾನಿಟೈಜರ್‍ಗಳನ್ನು ಬಳಸಬಹುದು.
ಆ) ಎದೆ ಹಾಲುಣಿಸುವಾಗ ಮೆಡಿಕಲ್ ಮಾಸ್ಕನ್ನು ಉಪಯೋಗಿಸುವುದು ಸೂಕ್ತ ಸಾಧ್ಯವಾದಲ್ಲಿ ಬದಲಾಯಿಸುವ (Disposable) ಮಾಸ್ಕನ್ನು ಬಳಸಿ. ಪುನಃ ಉಪಯೋಗಿಸುವ ಮಾಸ್ಕನ್ನು ಬಳಸಬೇಡಿ.
ಇ) ಮಾಸ್ಕನ ಮುಂದಿನ ಭಾಗವನ್ನು ಮುಟ್ಟಬೇಡಿ, ಹಿಂದಿನಿಂದ ಕಟ್ಟಿಕೊಳ್ಳಿ.
ಈ) ಕೆಮ್ಮುವಾಗ ಅಥವಾ ಸೀನುವಾಗ ಬಿಸಾಡಬಹುದಾದ ಟಿಶ್ಯೂ ಪೇಪರ್ ಬಳಸಿ, ತಕ್ಷಣವೇ ಬಿಸಾಡಿ ಸ್ಯಾನಿಟೈಜರ್‍ನಿಂದ ಕೈ ತೊಳೆದುಕೊಳ್ಳಿ.
ಉ) ಆಗಾಗ್ಗೆ ಬಳಸುವ ಸಾಮಾನುಗಳ ಮೇಲ್ಮೈಯನ್ನು ಶುಚಿಗೊಳಿಸುತ್ತಿರಿ.
ವಿಶ್ವ ಆರೋಗ್ಯ ಸಂಸ್ಥೆ,UNICEF, ICMR ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಇವರ ಸಲಹೆ ಸೂಚನೆಗಳು
1. ಕೋವಿಡ್ 19 ಶಂಕಿತ/ದೃಢಪಟ್ಟಿರುವ ತಾಯಿಯ ಎದೆ ಹಾಲನ್ನು ಕುಡಿಸಬಹುದು. ಈ ವೈರಾಣು ಎದೆ ಹಾಲಿನಿಂದ ಹರಡುವುದಿಲ್ಲ ಹಾಗೂ ಇಲ್ಲಿಯವರೆಗೆ ಎದೆ ಹಾಲಿನಲ್ಲಿ ಪತ್ತೆಯಾಗಿಲ್ಲ, ಹಾಗಾಗಿ ಎದೆ ಹಾಲನ್ನು ಕುಡಿಸಬಹುದು.
2. ನವಜಾತ ಶಿಶುಗಳ ಹಾಗೂ ಮಕ್ಕಳಲ್ಲಿ ಸೋಂಕು ಕಡಿಮೆ ಹಾಗೂ ಕೆಲ ಮಕ್ಕಳಲ್ಲಿ ಕೋವಿಡ್ 19 ದೃಢಪಟ್ಟಿರುವ ಮಕ್ಕಳಲ್ಲಿಯೂ ಕೂಡ ರೋಗದ ತೀವ್ರತೆ ಕಡಿಮೆ ಪ್ರಮಾಣದಲ್ಲಿ ಕಂಡು ಬಂದಿದೆ ಅಥವಾ ಯಾವುದೇ ರೋಗ ಲಕ್ಷಣಗಳು ಇಲ್ಲ.
3. ತಾಯಿಯಿಂದ ಮಗುವನ್ನು ಬೇರ್ಪಡಿಸುವ ಅವಶ್ಯಕತೆ ಇಲ್ಲ. ತಾಯಿಯು ಸೋಂಕಿತಳಾಗಿದ್ದು, ಅವಳನ್ನು ಪ್ರತ್ಯೇಕಿಸಿ ಚಿಕಿತ್ಸೆ ನೀಡುತ್ತಿದ್ದರೂ ಕೂಡ ಮಗುವೂ ಅವಳೊಡನೆಯೇ ಇರಬಹುದು.
4. ತಾಯಿಗೆ ತುಂಬಾ ತೀವ್ರತರವಾದ ರೋಗ ಲಕ್ಷಣಗಳಿದ್ದಲ್ಲಿ ಆಕೆಯೇ ಎದೆ ಹಾಲು ಕುಡಿಸಲು ಸಾಧ್ಯವಾಗದ ಸಮಯದಲ್ಲಿ ಆಕೆ ಎದೆ ಹಾಲನ್ನು ತೆಗೆದು ಮಗುವಿಗೆ ಬಟ್ಟಲು/ಲೋಟದಲ್ಲಿ ಶೇಖರಿಸಿ ಚಮಚದಿಂದ ಕುಡಿಸಬೇಕು.
5. ತಾಯಿಯು ಎದೆ ಹಾಲು ಕುಡಿಸಲು ಅಥವಾ ಹಾಲು ತೆಗೆದು ಕುಡಿಸಲು ಆಗದೇ ಇದ್ದ ಪಕ್ಷದಲ್ಲಿ ಎದೆ ಹಾಲಿನ ಬ್ಯಾಂಕ್‍ನಿಂದ ಹಾಲನ್ನು ತಂದು ಕುಡಿಸಬಹುದು. ಅಥವಾ Wet-nursing ಅಂದರೆ ಬೇರೆ ಎದೆ ಹಾಲುಣಿಸುವ ತಾಯಂದಿರಲ್ಲಿ ಹಾಗೂ ಅವರ ಮನೆಯವರೂ / ಸಂಬಂಧಿಕರು / ಸಹಕರಿಸಿದಲ್ಲಿ ಆ ತಾಯಿಯ ಹಾಲುಣಿಸಬಹುದಾಗಿದೆ. (ಅವರಲ್ಲಿ ಹೆಚ್.ಐ.ವಿ. ಸೋಂಕು ಇರಬಾರದು)
6. ಯಾವುದೇ ಕಾರಣಕ್ಕೂ ಯಾವುದೇ ತರನಾದ ಪರ್ಯಾಯ ಹಾಲನ್ನು ಕೊಡತಕ್ಕದ್ದಲ್ಲ. ಅನಿವಾರ್ಯ ಸಂದರ್ಭದಲ್ಲಿ ಯಾವುದೇ ಎದೆ ಹಾಲು ಪರ್ಯಾಯವಾಗಿ ದೊರಕದಿದ್ದಲ್ಲಿ ತಜ್ಞರ ಸಲಹೆ ಪಡೆದು ಕೊಳ್ಳಿರಿ.
7. ತಾಯಿಯ ಆರೋಗ್ಯ ಸುಧಾರಿಸಿದ ತಕ್ಷಣ ಆಕೆ ಮತ್ತೆ ಎದೆ ಹಾಲುಣಿಸಬಹುದು.
8. ಎಲ್ಲಾ ಹಂತಗಳಲ್ಲಿಯೂ ಸೋಂಕಿತ ಮಹಿಳೆಯು ಸೋಂಕು ನಿಯಂತ್ರಣ ಹಾಗೂ ಸ್ವಚ್ಚತಾ ಕ್ರಮಗಳನ್ನು ಅನುಸರಿಸಬೇಕು.
9. ತಾಯಿಯಷ್ಟೇ ಅಲ್ಲ ತಾಯಿಯನ್ನು ನೋಡಿಕೊಳ್ಳುವ ಸಂಬಂಧಿಕರು, ದಾದಿಯರೂ ಹಾಗೂ ತಾಯಿಯ ಸಂಪರ್ಕ ದಲ್ಲಿರುವವರೂ ಕೂಡ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಬೇಕು. ಎಲ್ಲಾ ಸುರಕ್ಷತಾ ಕ್ರಮಗಳನ್ನು ಕಡ್ಡಾಯವಾಗಿ ಅನುಸರಿಸಿ, ನೀವೂ ಸುರಕ್ಷಿತವಾಗಿರಿ, ಬೇರೆಯವರನ್ನೂ ಸುರಕ್ಷಿತವಾಗಿರಿಸಿ.ಯಾವುದೇ ಸಂದರ್ಭದಲ್ಲಿ ನಿಮಗೆ ಅನುಮಾನವಿದ್ದಲ್ಲಿ ತಜ್ಞರ ಸಲಹೆ ಪಡೆದು ಸೂಕ್ತವಾದ ಕ್ರಮಗಳನ್ನು ಅಳವಡಿಸಿಕೊಳ್ಳಿ.
ಡಾ|| ಜಿ.ಎಸ್. ಲತಾ
ಪ್ರಾಧ್ಯಾಪಕರು, ಮಕ್ಕಳು ತಜ್ಞರು
ಎಸ್.ಎಸ್.ಐ.ಎಂ.ಎಸ್. ದಾವಣಗೆರೆ.