ಜಗತ್ತಿನಾದ್ಯಂತ ಹರಡಿರುವ ಕೊರೊನಾ ವೈರಸ್ ಎಷ್ಟೆಲ್ಲಾ ಜನರ ಬದುಕನ್ನು ಕಸಿದುಕೊಂಡಿದ್ದ ಲ್ಲದೆ, ಲಕ್ಷಾಂತರ ಜನರನ್ನು ಬಲಿ ತೆಗೆದುಕೊಂಡಿದೆ.
ದುಡಿದು ತಿನ್ನುವ ವರ್ಗದವರಿಗೆ ಕೊರೊನಾ ಕೊಟ್ಟಿರುವ ತೊಂದರೆ, ನೋವು ಹೇಳತೀರದ್ದು, ಅದೇ ಕೊರೊನಾ ಜನರಿಗೆ ಬದುಕುವ ಹೊಸ ಬಗೆ ತಿಳಿಸಿಕೊಟ್ಟಿದೆ. ಆರೋಗ್ಯದ ಬಗ್ಗೆ ಜಾಗೃತಿ ವಹಿಸುವಂತೆ ಎಚ್ಚರಿಸಿದೆ. ಕುಟುಂಬದವರ ಜೊತೆ ಇರುವಂತೆ ಮತ್ತು ಜೀವನಕ್ಕಿಂತ ಜೀವ ಮುಖ್ಯ ಎಂಬುದನ್ನು ಅರ್ಥ ಮಾಡಿಕೊಟ್ಟಿದೆ.
ಬಹಳ ಮುಖ್ಯ ಆರ್ಥಿಕ ಸಂಕಷ್ಟವನ್ನು ಉಂಟು ಮಾಡುವುದರ ಜೊತೆಗೆ ಜನರಿಗೆ ಹಲ ವಾರು ಉಳಿತಾಯದ ಪಾಠಗಳನ್ನೂ ಕಲಿಸಿದೆ. ಲಾಕ್ಡೌನ್ ಘೋಷಿಸಿರುವುದಕ್ಕೂ ಮೊದಲು ಬಹಳಷ್ಟು ಜನರ ಆದಾಯ, ವ್ಯಾಪಾರ, ವಹಿ ವಾಟು ಉತ್ತಮವಾಗಿತ್ತು. ಆದರೀಗ ಅದೆಲ್ಲವೂ ಕುಸಿದು ಆತಂಕ ಎದುರಾಗಿದೆ. ಒಳ್ಳೆಯ ಆದಾಯವಿದ್ದ ಕಾಲದಲ್ಲಿ ಬಿಂದಾಸ್ ಖರ್ಚು ಮಾಡುತ್ತಿದ್ದವರು ಈಗ ಖರ್ಚು ಮಾಡಲು ಲೆಕ್ಕಾಚಾರ ಹಾಕುತ್ತಿದ್ದಾರೆ. ಕೊರೊನಾ ಎಷ್ಟು ಕಾಲ ನಮ್ಮ ಜೊತೆಗೆ ಇರುತ್ತದೆ ಎನ್ನುವುದು ಗೊತ್ತಿಲ್ಲ. ಹಾಗಾಗಿ ಮುಂದಿನ ಜೀವನಕ್ಕೆ ಸೂಕ್ತ ವ್ಯವಸ್ಥೆ ಮಾಡಿ ಕೊಳ್ಳುವ ಅನಿವಾರ್ಯತೆ ಎಲ್ಲರಿಗೂ ಎದುರಾಗಿದೆ.
ಹಬ್ಬ, ಹರಿದಿನ, ಹೊಸ ಕಾರು, ಬೈಕ್ ಖರೀದಿ, ಮೋಜು-ಮಸ್ತಿ, ಶಾಪಿಂಗ್, ಮದುವೆ, ಸಭೆ-ಸಮಾರಂಭ ಎಂದು ಸುತ್ತಾಡಿ ಖರ್ಚು ಮಾಡುತ್ತಿದ್ದ ವರು ಅಗತ್ಯ ವಸ್ತುಗಳ ಹೊರತಾಗಿ ಅನಾವಶ್ಯಕ ಖರ್ಚುಗಳಿಗೆ ಕಡಿ ವಾಣ ಹಾಕುವಂತೆ ಕೊರೊನಾ ಮಾಡಿಬಿಟ್ಟಿದೆ.
ಅದ್ದೂರಿ ಮದುವೆಗೆ ಬ್ರೇಕ್ : ಕೊರೊನಾ ಲಾಕ್ಡೌನ್ನಿಂದಾಗಿ ಅದ್ಧೂರಿ ಮದುವೆ, ಗೃಹ ಪ್ರವೇಶ, ನಾಮಕರಣ, ತೊಟ್ಟಿಲು ಶಾಸ್ತ್ರ ಮತ್ತು ರಾಜಕೀಯ ಸಮಾವೇಶಗಳಿಗೆ ಬ್ರೇಕ್ ಹಾಕಲಾಗಿ ದ್ದು, ಲೆಕ್ಕ ಇಲ್ಲದಷ್ತು ದುಂದು ವೆಚ್ಚಗಳಿಗೂ ಕಡಿವಾಣ ಬಿದ್ದಿದೆ. ಹಾಗಂತ ಯಾವುದೇ ಮದುವೆ, ಗೃಹ ಪ್ರವೇಶ, ನಾಮಕರಣ ಸಮಾರಂಭ ನಿಂತಿಲ್ಲ. ಎಲ್ಲಾ ಕಡೆ ನಿಗದಿತ ದಿನದಂದೇ ಸರಳವಾಗಿ ಮತ್ತು ಬಹಳ ಕಡಿಮೆ ಜನರ ಸಮ್ಮುಖದಲ್ಲಿ ಹಾಗೂ ಇತಿ-ಮಿತಿ ಖರ್ಚಿನಲ್ಲಿ ನಡೆಯುತ್ತಿವೆ. ಕಲ್ಯಾಣ ಮಂಟಪ ಗಳಿಗಿಂತ ಮನೆಯಲ್ಲೇ ಸರಳವಾಗಿ ಜರುಗುವ ಮದುವೆ ಇನ್ನಿತರೆ ಶುಭ ಕಾರ್ಯಗಳಲ್ಲಿ ಸಿಗುವ ಖುಷಿ, ಆನಂದ ಹಾಗೂ ತೃಪ್ತಿ ಅದ್ಧೂರಿ ಸಮಾರಂಭಗಳಲ್ಲಿ ಸಿಗುತ್ತಿರಲಿಲ್ಲ ಎಂಬ ಮಾತುಗಳೂ ಕೇಳಿ ಬಂದಿವೆ.
ಮನೆಯ ಮುಂದೆ ಚಪ್ಪರ ಹಾಕಿ, ಮನೆಯನ್ನು ಹಸಿರು ತೋರಣಗಳಿಂದ ಸಿಂಗಾರ ಮಾಡಿ, ಎಲ್ಲಾ ಶಾಸ್ತ್ರಗಳನ್ನು ಸಮಾಧಾನವಾಗಿ ನಡೆಸಿಕೊಂಡು ಆಗುತ್ತಿರುವ ಮದುವೆಗಳು 25-30 ವರ್ಷಗಳ ಹಿಂದಿನ ಮದುವೆಗಳನ್ನು ಮರಳಿ ತಂದಿವೆ. ನಗರ, ಪಟ್ಟಣಗಳಿಗಿಂತ ಹಳ್ಳಿಗಳಲ್ಲೇ ಗೃಹ ಪ್ರವೇಶ, ನಾಮಕರಣ ಕಾರ್ಯಕ್ರಮಗಳು ಅತಿ ಹತ್ತಿರದ ಸಂಬಂಧಿಗಳು, ಬಂಧು-ಮಿತ್ರರ ಸಮ್ಮುಖದಲ್ಲಿ ಅತ್ಯಂತ ಸರಳವಾಗಿ ನಡೆದಿವೆ.
ಈ ಹಿಂದೆ ಈ ಎಲ್ಲಾ ಶುಭ ಕಾರ್ಯಕ್ರಮಗಳಿಗೆ ಸ್ಥಿತಿವಂತರು ಲಕ್ಷಾಂತರ ರೂಪಾಯಿ ಖರ್ಚು ಮಾಡಿ, ಅನಾವಶ್ಯಕ ದುಂದು ವೆಚ್ಚ ಮಾಡುತ್ತಿದ್ದರು. ಕೊರೊನಾ ಈ ಎಲ್ಲಾ ದುಂದು ವೆಚ್ಚಗಳಿಗೆ ಮಾತ್ರ ಕಡಿವಾಣ ಹಾಕಿ, ಎಲ್ಲಾ ಶುಭ ಕಾರ್ಯಗಳನ್ನು ಸುಲಲಿತವಾಗಿ ಹಾಗೂ ಸುರಕ್ಷಿತವಾಗಿ ಮಾಡುವಂತೆ ಮಾಡಿದೆ.
ಈ ಸಮಾರಂಭಗಳಿಗೆ ದುಂದು ವೆಚ್ಚ ಮಾಡುತ್ತಿದ್ದ ಹಣವನ್ನು ಕೊರೊನಾದಿಂದ ಸಂಕಷ್ಟಕ್ಕೆ ಸಿಲುಕಿರುವವರಿಗೆ ಸಹಾಯ ಮಾಡಿದರೆ ಬದುಕು ಸಾರ್ಥಕವಾಗುತ್ತದೆ.
_________________________________________________________________________________________
ಜಿಗಳಿ ಪ್ರಕಾಶ್,
9448155228, 9606588622
[email protected]