ಕಣ್ಮರೆಯಾದ ಕನ್ನಡದ ಖ್ಯಾತ ಸಹಜ ಪ್ರತಿಭೆ ನಿಸಾರ್ ಅಹ್ಮದ್

ಕನ್ನಡದ ಖ್ಯಾತ ಕವಿ, ನವ್ಯಕವಿ, ಜನಪ್ರಿಯ ಕವಿ, ಕನ್ನಡದ ಜೋಗದ ಸಿರಿ, ಸುಗಮ ಸಂಗೀತದ ಆದ್ಯ ಕವಿ, ಪ್ರೇರಣಾತ್ಮಕ ಅಧ್ಯಾಪಕ, ಸದಾ ಸ್ಮರಣೀಯ, ಸರಳ, ಸಜ್ಜನ, ಸುಸಂಸ್ಕೃತ ಶ್ರೀ ಕೆ.ಎಸ್.ನಿಸಾರ್ ಅಹಮದ್‌ ಅವರು ಇನ್ನಿಲ್ಲವಾ ಗಿದ್ದಾರೆ. ಕನ್ನಡದ ಸಾರಸ್ವತ ಲೋಕ ನಿಜಕ್ಕೂ ಬಡವಾಗಿದೆ. ಇನ್ನೂ ಅವರು ನೆನಪು ಮಾತ್ರ.
ಅವರು ನನ್ನ ಗುರುಗಳು. ನನ್ನ ಮೇಲೆ ಅಪಾರ ಪ್ರಭಾವ ಬೀರಿದ ವೈಚಾರಿಕ ಗುರುಗಳು. 1968 ರಿಂದ 1970 ರವರೆಗಿನ ಶಿವಮೊಗ್ಗದ ಸಹ್ಯಾದ್ರಿ ಕಾಲೇಜು ಶ್ರೇಷ್ಠ ಅಧ್ಯಾಪಕರುಗಳ ಶೈಕ್ಷಣಿಕ ಸ್ವರ್ಗ, ಕನ್ನಡದ ಮಹತ್ವದ ಕವಿಗಳಾದ ಜಿ.ಎಸ್.ಸಿದ್ದಲಿಂಗಯ್ಯ, ಸಾ.ಶಿ.ಮರುಳಯ್ಯ, ಪಾಂಡಿತ್ಯಕ್ಕೆ ಹೆಸರಾದ ಕೆ.ನಾಗೇಂದ್ರಪ್ಪ, ಸಿ.ಓಂಕಾರಪ್ಪ, ಎಂ.ಆರ್.ಶಾಸ್ತ್ರಿ ಮುಂತಾದವರ ಜೊತೆಗೆ ಭೂ ವಿಜ್ಞಾನದ ಅಧ್ಯಾಪಕರಾದ ಕೆ.ಎಸ್.ನಿಸಾರ್ ಅಹಮದ್ ಅವರೂ ಒಬ್ಬರು. ಅವರು ವಿಜ್ಞಾನದ ಅಧ್ಯಾಪಕರಾಗಿದ್ದರೂ ಕನ್ನಡದ ವಲಯದಲ್ಲಿ ಆಪ್ತರು ಮತ್ತು ಆತ್ಮೀಯರು ಹಾಗೂ ಗೌರವಾನ್ವಿತರು.
ನಾನು ಬಿಎ ಓದುತ್ತಿದ್ದರೂ ಆಗ ಕಲಾ ವಿಭಾಗ ದವರಿಗೆ `ಜನರಲ್ ಸೈನ್ಸ್’ ಎಂಬ ವಿಜ್ಞಾನದ ಪರಿಚಯಾತ್ಮಕ ವಿಷಯ ಅಭ್ಯಾಸ ಮಾಡಬೇಕಿತ್ತು. ಹಾಗೆಯೇ ವಿಜ್ಞಾನದ ವಿದ್ಯಾರ್ಥಿಗಳು `ಸೋಶಿಯಲ್ ಸೈನ್ಸ್’ ಓದಬೇಕಿತ್ತು. ಎಲ್ಲಾ ಭಾಗದ ಕಲಾ ವಿದ್ಯಾರ್ಥಿಗಳಿಗೆ ಒಟ್ಟಾಗಿ ಜನರಲ್ ಸೈನ್ಸ್ ತರಗತಿ. ಸುಮಾರು 120-130 ವಿದ್ಯಾರ್ಥಿಗಳು. ವಿಶಾಲವಾದ ತರಗತಿಯ ಕೋಣೆ. ಅಂದು ಶ್ರೀ ಕೆ.ಎಸ್.ನಿಸಾರ್ ಅಹಮದ್ ಅವರು `ಜಿಯಾಲಜಿ’ ತರಗತಿ ತೆಗೆದುಕೊಳ್ಳಬೇಕಿತ್ತು. ಅವರು ಬರುವುದು ಐದು ನಿಮಿಷ ವಿಳಂಬವಾಯಿತು. ಯಾಕೆಂದರೆ ವಿಭಾಗಕ್ಕೂ ತರಗತಿಯ ಕೋಣೆಗೂ ಬಹುದೂರ. ಒಬ್ಬ ವಿದ್ಯಾರ್ಥಿ ಅಟೆಂಡರ್ ತಂದಿಟ್ಟಿದ್ದ ಡಸ್ಟರ್‌ನಿಂದ ಬೋರ್ಡ್‌ ಒರೆಸಿ, ಸೀಮೆ ಸುಣ್ಣದಿಂದ ಅವರ ಹೆಸರನ್ನು `ಕೆ.ಎಸ್.ನಿಸ್ಸಾರ್ ಅಹಮದ್’ ಎಂದು ಬರೆದ. ಅಷ್ಟರಲ್ಲಿ ಮೇಷ್ಟ್ರು ಬಂದರು. ಬಂದವರೇ ಬೋರ್ಡ್ ವೀಕ್ಷಿಸಿದರು. ತಮ್ಮ ಹೆಸರು ಬೋರ್ಡ್‌ ಮೇಲೆ ಬರೆದಿದೆ. ಆದರೆ ತಪ್ಪಿದೆ! ತಕ್ಷಣ ನಮ್ಮತ್ತ ತಿರುಗಿ
`ನನ್ನ ಹೆಸರೇನೆಂಬುದು ನನಗೇ ಗೊತ್ತು
ಅದಕೇಕೆ ಹಾಕುವಿರಿ ಸ ಕೆ ಸ ಒತ್ತು’
ಎಂದು ಅಳಿಸಿದರು. ಪಾಠ ಶುರು ಮಾಡಿದರು. ಅಂದು ಮಾಡಿದ ಸೆಡಿಮೆಂಟರಿ ರಾಕ್ಸ್‌ ಎಂದು ಕಾಣುತ್ತದೆ. ಆದರೆ ಐದು ಹತ್ತು ನಿಮಿಷ ಅವರ ಪ್ರಾಸಬದ್ಧವಾದ ಪದ್ಯ ನಮಗೆ ಖುಷಿ ಕೊಟ್ಟಿತು. ಆದರೆ, ಯಾಕೆ ಹಾಗೆ ಹೇಳಿದರೆಂಬುದು ನಂತರ ಗೊತ್ತಾಯಿತು. ಅವರ ಹೆಸರು `ಕೆ.ಎಸ್.ನಿಸಾರ್ ಅಹಮದ್’ ಎಂದು. ಒಂದು ಸ ಒತ್ತು ಎಷ್ಟು ಅರ್ಥ ವ್ಯತ್ಯಾಸ ತರುತ್ತದೆಂಬುದು ಆನಂತರ ಹೊಳೆಯಿತು. ಅಂತಹ `ಆಶುಕವಿ’ ಕವಿ ಕೆ.ಎಸ್.ನಿಸಾರ್ ಅಹಮದ್ ಅವರು.
1968-70 ರ ಅವಧಿಯಲ್ಲಿ ಸೂಟು ಧರಿಸಿ, ಟೈ ಕಟ್ಟಿ, ರಾಲಿ ಸೈಕಲ್ ಮೇಲೆ ಶಿವಮೊಗ್ಗದಿಂದ ಸಹ್ಯಾದ್ರಿ ಕಾಲೇಜಿಗೆ ಬರುತ್ತಿದ್ದರು. ಆಗ ಎಲ್ಲಾ ಅಧ್ಯಾಪಕರೂ ಬಳಸುತ್ತಿದ್ದುದು ಹರ್ಕ್ಯುಲಿಸ್ ಸೈಕಲ್ ಅಥವಾ ರಾಲಿ ಸೈಕಲ್ ಅವೇ ಆಗಿನ ರಾಯಲ್ ವಾಹನಗಳು.
ನಿಸಾರ್ ಒಬ್ಬ ಕನ್ನಡದ ಅನನ್ಯ ಕವಿ. ಆಗಲೇ ಅವರ ಮನಸು ಗಾಂಧಿ ಬಜಾರು, ನಾನೆಂಬ ಪರಕೀಯ ಮುಂತಾದ ಕವನ ಸಂಕಲನಗಳು ಪ್ರಕಟವಾಗಿದ್ದವು. ಅವರು ಭಾವಗೀತೆಗಳ ಸರದಾರ. ಅನಾಯಾಸವಾಗಿ ಪ್ರಾಸ ಹೆಣೆಯುವ ಧೀರ. ಆಗಲೇ ಅಂದರೆ 1969ರಲ್ಲೇ ಮೈಸೂರು ಅನಂತ ಸ್ವಾಮಿಯವರನ್ನು ಮತ್ತು ಪಿ.ಕಾಳಿಂಗ ರಾಯರನ್ನು ನಮಗೆ ಅಂದರೆ ಸಹ್ಯಾದ್ರಿ ಕಾಲೇಜಿನ ಬಂಧು ಬಳಗಕ್ಕೆ ಪರಿಚಯಿಸಿದ್ದರು.
ಸುಗಮ ಸಂಗೀತದ ನಿತ್ಯೋತ್ಸವದ ಹರಿಕಾರ ಅವರು. ಸಹಜ ಕವಿ, ಅನುವಾದಕ, ಚಿಂತಕ, ಕನ್ನಡ ಪ್ರೇಮಿ, ನಮ್ಮೊಡನಿದ್ದೂ ನಮ್ಮಂತಾದ ಸರಳ ಸಜ್ಜನ ಸುಸಂಸ್ಕೃತ ನಿಸಾರರಿಗೆ ನಮ್ಮ ನಿಮ್ಮೆಲ್ಲರ ನಮನಗಳು. ದಾವಣಗೆರೆಯ ಪ್ರತಿಮಾ ಸಭಾದಲ್ಲಿ ನೀಡಿದ ಅವರ ಕಾವ್ಯ ವಾಚನ ಸದಾ ಸ್ಮರಣೀಯ.


ಡಾ|| ಎಂ.ಜಿ.ಈಶ್ವರಪ್ಪ
ದಾವಣಗೆರೆ.

error: Content is protected !!