ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ

ಜಗತ್ತಿನ ಎಲ್ಲಾ ಮಹಿಳೆಯರಿಗೂ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ಶುಭಾಶಯಗಳನ್ನು ಹೇಳುತ್ತಾ,  ಇಂದು ಮಹಿಳೆ ಅತ್ಯಂತ ಸದೃಢವಾಗಿ, ಸಮರ್ಥವಾಗಿ, ಪುರುಷನಿಗೆ ಸರಿಸಮಾನವಾಗಿ ಎಲ್ಲಾ ಕ್ಷೇತ್ರಗಳಲ್ಲೂ ತನ್ನದೇ ಆದ ಛಾಪು ಮೂಡಿಸಿದ್ದಾಳೆ. ಅಡುಗೆ ಮನೆಯಿಂದ ಅಂತರಿಕ್ಷದವರೆಗೆ ಅವಳ ಸೇವೆ ಗಣ ನೀಯ. ಒಂದು ದೇಶ ಅತ್ಯಂತ ಶಿಸ್ತುಬದ್ಧವಾಗಿ, ಒಂದು ವ್ಯವಸ್ಥಿತ ಚೌಕಟ್ಟಿನಲ್ಲಿ ನಡೆಯಲು ಆ ದೇಶದ ಸಂವಿಧಾನ ತುಂಬಾ ಮುಖ್ಯ ಪಾತ್ರ ವಹಿಸುತ್ತದೆ. ಹಾಗೆಯೇ ಒಂದು ಕುಟುಂಬ, ಒಂದು ಸಂಸಾರ ಶಿಸ್ತಿನಿಂದ, ವ್ಯವಸ್ಥಿತವಾಗಿ ಸಾಗಲು ಮಹಿಳೆಯ ಪಾತ್ರ ತುಂಬಾ ಮುಖ್ಯ ವಾಗುತ್ತದೆ. ಹೆಣ್ಣು ಸಹನೆಯ ಸಾಕಾರ ಮೂರ್ತಿ. ಹಾಗಾಗಿ ಒಂದು ಕುಟುಂಬದ ಸಮತೋಲನ  ಕಾಪಾಡುವ ಶಕ್ತಿ, ಚತುರತೆ ಆಕೆಗಿದೆ. ಎಲ್ಲ ಕ್ಷೇತ್ರಗಳಲ್ಲೂ ಆಕೆ ನಿಪುಣೆ. ನಮ್ಮ ಹಿರಿಯರು ಹೇಳಿದಂತೆ ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ಈ ಮಾತು ಅಕ್ಷರಶಃ ಸತ್ಯ. ಹೆಣ್ಣನ್ನು ಪ್ರಕೃತಿಗೆ ಹೋಲಿಸಲಾಗುತ್ತದೆ. ಅಂದ ಮೇಲೆ ಎಲ್ಲವನ್ನೂ ನಿಭಾಯಿಸಬಲ್ಲ ಜಾಣೆ ಈ ಮಹಿಳೆ.

ಅನಾದಿ ಕಾಲದಿಂದಲೂ ಹೆಣ್ಣನ್ನು ಅತ್ಯಂತ ಗೌರವಯುತವಾಗಿ ನಡೆಸಿಕೊಂಡು ಬರಲಾಗಿದೆ. ಆದರೆ ಇತ್ತೀಚಿನ ಪ್ರಸ್ತುತ ಕಾಲಘಟ್ಟವನ್ನು ಗಮನಿಸಿದಾಗ ಬೇಸರವಾಗದೆ ಇರಲು ಸಾಧ್ಯವೇ ಇಲ್ಲ. ಹೆಣ್ಣಿನ ಸ್ಥಿತಿ ಅತ್ಯಂತ ಶೋಚನೀಯವಾಗಿದೆ. ಶೋಷಣೆ, ಕಿರುಕುಳ, ಅತ್ಯಾಚಾರಗಳಂತಹ ದುಷ್ಕೃತ್ಯಕ್ಕೆ ಬಲಿಯಾಗಿ ಆಕೆಯ ಆಕ್ರಂದನ ಮುಗಿಲು ಮುಟ್ಟಿದೆ. ಈ ರೀತಿಯ ಹೀನ ಸ್ಥಿತಿ ಒಂದು ಕಡೆಯಾದರೆ, ಇನ್ನೊಂದು ಕಡೆ ಹೆಣ್ಣನ್ನು ಭ್ರೂಣದಲ್ಲಿಯೇ ಉಸಿರು ನಿಲ್ಲಿಸುತ್ತಿದ್ದಾರೆ ಇಂದಿನ ಮಹಾನ್ ಮೇಧಾವಿಗಳು. ನಮ್ಮದು ಪುರುಷ ಪ್ರಧಾನ ದೇಶವಾದ್ದರಿಂದ ಗಂಡು ಮಗುವಿನ ವ್ಯಾಮೋಹ ಹೆಣ್ಣನ್ನು ಭ್ರೂಣದಲ್ಲಿಯೇ ಕೊಲ್ಲುವಂತೆ ಮಾಡಿದೆ. ಪ್ರಕೃತಿಯಲ್ಲಿ ಗಂಡು ಮತ್ತು ಹೆಣ್ಣು ಇಬ್ಬರೂ ಸರಿಸಮಾನರು. ಈ ಸತ್ಯವನ್ನು ಅರಿಯದ ಅವಿವೇಕಿಗಳು ಈ ದುಷ್ಕೃತ್ಯಕ್ಕೆ ಮುಂದಾಗಿರುವುದು ಅತ್ಯಂತ ಶೋಚ ನೀಯ ಸ್ಥಿತಿ. ಅದೆಷ್ಟೋ ದೇವರುಗಳಲ್ಲಿ ಹರಕೆ ಹೊತ್ತು ಪಡೆದ ಗಂಡು ಮಕ್ಕಳು ವೃದ್ಧಾಪ್ಯದಲ್ಲಿ ತಂದೆ ತಾಯಿಯನ್ನು ವೃದ್ಧಾಶ್ರಮಕ್ಕೆ ಸೇರಿಸಿರು ವುದನ್ನು ಇಂದಿನ ಸಮಾಜದಲ್ಲಿ ಕಾಣುತ್ತಿದ್ದೇವೆ. ಹಾಗೆಯೇ ಎಷ್ಟೋ ಹೆಣ್ಣು ಮಕ್ಕಳು ತಮ್ಮ ತಂದೆ, ತಾಯಿಯನ್ನು ಪೋಷಿಸುತ್ತಿರುವುದನ್ನು ಸಹ ನೋಡುತ್ತಿದ್ದೇವೆ. ಹೆಣ್ಣು ಅಬಲೆಯಲ್ಲ ಸಬಲೆ ಎಂದು ನಾವು ಎಷ್ಟೇ ಹೇಳಿದರೂ ಸಹ ಆಕೆಗೊಂದು ವ್ಯವಸ್ಥಿತ ಭದ್ರತೆಯಿಲ್ಲ. ಜಗತ್ತಿಗೆ ಬರುವ ಮುನ್ನವೂ ಆಕೆಗೆ ಅಗ್ನಿ ಪರೀಕ್ಷೆ, ಬಂದ ಮೇಲೂ ಕೂಡ ಹೆಜ್ಜೆ ಹೆಜ್ಜೆಗೂ ಶೋಷಣೆ, ಹಿಂಸೆ, ಕಿರುಕುಳವನ್ನು ಎದುರಿಸಬೇಕಾದಂತಹ ಧಾರುಣ ಸ್ಥಿತಿ ಈ ಮಹಿಳೆಯದ್ದು.

ಭಾರತದಲ್ಲಿ ವರ್ಷಕ್ಕೆ ಐವತ್ತು ಲಕ್ಷ ಭ್ರೂಣ ಹತ್ಯೆಗಳು ನಡೆಯುತ್ತಿರುವುದಾಗಿ ವರದಿಯಾಗಿದೆ. ವಿಶ್ವಸಂಸ್ಥೆ ಸೆಪ್ಟೆಂಬರ್ 24 ನ್ನು  “ಅಂತರರಾಷ್ಟ್ರೀಯ ಹೆಣ್ಣು ಮಗುವಿನ ದಿನ “ಎಂದು ಘೋಷಿಸಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದರೂ ಸಹ ಅಷ್ಟೇ ಭರದಿಂದ ಹೆಣ್ಣಿನ ಮೇಲಿನ ಶೋಷಣೆಯೂ ಹೆಚ್ಚುತ್ತಿರುವುದು ಅಮಾನವೀಯ. ವಯಸ್ಸಿನ ತಾರತಮ್ಯವಿಲ್ಲದೇ ನಡೆಯುತ್ತಿರುವ ಅತ್ಯಾಚಾರ, ದೈಹಿಕ ಮತ್ತು ಮಾನಸಿಕ ಕಿರುಕುಳ, ವರದಕ್ಷಿಣೆ ಹೀಗೆ ಹಲವಾರು ರೀತಿಯಲ್ಲಿ ಹೆಣ್ಣು ನೋವಿನ ಬೇಗೆಯಲ್ಲಿ ಬೇಯುತ್ತಿದ್ದಾಳೆ.  ಹೀಗಿರುವಾಗ ಈ ಮಹಿಳಾ ದಿನಾಚರಣೆ, ಹೆಣ್ಣು ಮಗುವಿನ ದಿನಾಚರಣೆಗಳೆಲ್ಲ ಕೇವಲ ಆಚರಣೆಗೆ ಸೀಮಿತವಾದಂತಿವೆ .

ನಮ್ಮ ದೇಶದ ಸ್ಥಿತಿ ಹೇಗಿದೆ ಎಂದರೆ ಹೆಣ್ಣಿನ ಮೇಲೆ ದೌರ್ಜನ್ಯ ನಡೆಯುತ್ತದೆ, ಅದು ಸಾಬೀತು ಆಗುತ್ತೆ, ಅಪರಾಧಿಗಳು ಅಪರಾಧ ಎಸಗಿರುವುದಾಗಿ ಒಪ್ಪಿಕೊಳ್ಳುತ್ತಾರೆ, ಆದರೂ ಅವರಿಗೆ ಶಿಕ್ಷೆಯಾಗುವುದಿಲ್ಲ. ಇದಕ್ಕೆ ಒಂದು ಉತ್ತಮ ಉದಾಹರಣೆ ಎಂದರೆ ದೆಹಲಿಯ ನಿರ್ಭಯ ಗ್ಯಾಂಗ್ ರೇಪ್ ಕೇಸ್. ಏಳು ವರ್ಷಗಳು ಕಳೆದು ಹೋಗಿವೆ ಆ ವಿದ್ಯಾರ್ಥಿಯ ಮೇಲೆ ದುಷ್ಕೃತ್ಯ ನಡೆದು. ನಮ್ಮ ವ್ಯವಸ್ಥೆ ಇನ್ನೂ ಕಣ್ಣಿಗೆ ಕಪ್ಪು ಬಟ್ಟೆ ಕಟ್ಟಿಕೊಂಡು ವಿಚಾರಣೆ ನಡೆಸುತ್ತಿದೆ. ಇದು ನಮ್ಮ ದೇಶದ ವ್ಯವಸ್ಥೆಯ ಅಸಲಿತನ. ಹೀಗಿದ್ದಾಗ ನಿಜಕ್ಕೂ ನಾವು ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಆಚರಿಸುವ ಅಗತ್ಯವಿದೆಯಾ? ಎಂದು ನನ್ನ ಮನಸ್ಸಿನಲ್ಲಿ ಮೂಡಿದ ಪ್ರಶ್ನೆ. ಮೊದಲು ಮಹಿಳೆಗೆ ಭದ್ರತೆ ಕೊಡಿ, ನ್ಯಾಯ ಒದಗಿಸಿ, ಆಕೆಗೊಂದು ಸೇಫ್ ಜೋನ್ ಸೃಷ್ಟಿಸಿ ನಂತರ ಈ ದಿನಾಚರಣೆಗಳನ್ನು  ಆಚರಿಸುವುದು ಸೂಕ್ತ.


ಶ್ರೀಮತಿ ಸುನಿತಾಪ್ರಕಾಶ್
ಆಶ್ರಯ ಆಸ್ಪತ್ರೆ, ದಾವಣಗೆರೆ.

error: Content is protected !!