ಶಾಲೆ – ಮಕ್ಕಳ ಮೇಲೇಕೆ ಕೊರೊನಾ ಟೆಸ್ಟ್ ಅಸ್ತ್ರ…?

ಸರ್ಕಾರಕ್ಕೆ ಕೊರೊನಾ ತಡೆಯುವ ಕಳಕಳಿ ಇದ್ದರೆ, ಮೊದಲು ಬಾರ್ – ರೆಸ್ಟೋರೆಂಟ್‌ಗಳಲ್ಲಿ ಸಾಮೂಹಿಕ ಟೆಸ್ಟ್‌ ಮಾಡಿಸಲಿ. ಪರಿಷತ್ ಚುನಾವಣಾ ಪ್ರಚಾರ ಸಭೆಗಳಲ್ಲಿ ಟೆಸ್ಟ್ ಕಡ್ಡಾಯಗೊಳಿಸಲಿ. ಸಿನೆಮಾ ಸೇರಿದಂತೆ ಮೋಜಿನ ತಾಣಗಳಿಗೆ ಬರುವವರು ಟೆಸ್ಟ್‌ಗೆ ಒಳಗಾಗಲು ಹೇಳಲಿ. ಅದನ್ನೆಲ್ಲ ಬಿಟ್ಟು, ಕೊರೊನಾದ ಅತಿ ಕಡಿಮೆ ಅಪಾಯ ಇರುವ ಮಕ್ಕಳಲ್ಲಿ ಸೋಂಕು ಹುಡುಕುವ ಚಟ ಬಿಡಲಿ. 

ಅಂದ ಹಾಗೆ, ಸೋಂಕು ಹಾಗೂ ರೋಗ ಎರಡೂ ಬೇರೆ ಬೇರೆ. ವೈರಸ್ ಸಂಪರ್ಕಕ್ಕೆ ವ್ಯಕ್ತಿಗಳು ಬಂದಾಗ ಸೋಂಕು ತಗುಲುತ್ತದೆ. ಆದರೆ, ಸೋಂಕಿತರೆಲ್ಲ ರೋಗಿಷ್ಠರಾಗುವುದಿಲ್ಲ. ಹೀಗಾಗಿಯೇ ಊರು ತುಂಬ ಕೊರೊನಾ ವೈರಸ್‌ ಹರಡಿದ್ದರೂ ಆಸ್ಪತ್ರೆಗೆ ಬರುವವರ ಸಂಖ್ಯೆ ಕಡಿಮೆ ಇದೆ. ಇದನ್ನು ಸರ್ಕಾರ ಮೊದಲು ಅರ್ಥ ಮಾಡಿಕೊಳ್ಳಬೇಕಿದೆ.

ಮಾಸ್ಕ್, ಸಾಮಾಜಿಕ ಅಂತರ ಹಾಗೂ ಸ್ವಚ್ಛತೆಗಳು ಹಿಂದಿನಿಂದಲೂ ವಿಶ್ವ ಆರೋಗ್ಯ ಸಂಘಟನೆ ಹೇಳುತ್ತಾ ಬಂದಿರುವ ಮಂತ್ರವಾಗಿದೆ. ಮೊದಲು ಅಧಿಕಾರಸ್ಥರು ಈ ಸೂತ್ರಗಳನ್ನು ಪಾಲಿಸಿ ಮಾಸ್ಕ್ ಧರಿಸಲಿ. ನಂತರ ಟೆಸ್ಟ್‌ ಕಿಟ್‌ಗಳನ್ನು ಹಿಡಿದು ಶಾಲೆಗಳಿಗೆ ನುಗ್ಗಲಿ.

ಸರ್ಕಾರ ಇದೆಲ್ಲ ಮಾಡಲು ಮನಸ್ಸು ಮಾಡಿದಂತಿಲ್ಲ. ಹೀಗಾಗಿ ಸದ್ಯಕ್ಕೆ ಕೊರೊನಾದಿಂದ ಮಕ್ಕಳನ್ನು ಕಾಪಾಡಲು ಈಗ ತುರ್ತಾಗಿ §ಸಿ.ಡಿ. ಲೇಡಿ’ ಒಬ್ಬರು ಬೇಕಿದೆ ಎನ್ನಿಸುತ್ತಿದೆ. ಟಿ.ಆರ್.ಪಿ. ಹೆಚ್ಚಿಸುವ ಲೇಡಿ ಒಬ್ಬರು ಸಿಕ್ಕರೆ ಸಕಲ ಟಿ.ವಿ. – ಸಾಮಾಜಿಕ ಮಾಧ್ಯಮಗಳು ಕೊರೊನಾವನ್ನು ಕೆರೆಯಲ್ಲಿ ಮುಳುಗಿಸಿ ಲೇಡಿ ವಿವಾದದತ್ತ ಜಿಗಿಯಲಿವೆ. ಎಲ್ಲಿರುವೆ ಸಿ.ಡಿ. ಲೇಡಿಯೇ, ಬೇಗ ಅವತರಿಸಿ ಬಂದು ಮಕ್ಕಳ ಕಾಪಾಡು.


– ಎಸ್.ಎ. ಶ್ರೀನಿವಾಸ್‌
[email protected]

error: Content is protected !!