ವಿದುಷಿ ಜಯಲಕ್ಷ್ಮಿ ಕೃಷ್ಣಮೂರ್ತಿ

ಇಂದು ಶಿಕ್ಷಕರ ದಿನಾಚರಣೆ

ದಾವಣಗೆರೆಯಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತ ಗುರುಗಳ ಮುಂಚೂಣಿಯಲ್ಲಿ ಕೇಳಿ ಬರುವ ಹೆಸರು ಜಯಲಕ್ಷ್ಮಿ ಕೃಷ್ಣಮೂರ್ತಿಯವರದು. ಸಂಗೀತ ಪಾಠವನ್ನು  ಸರಸ್ವತಿಯ ಸೇವೆ ಎಂದು ಭಾವಿಸಿ ಶೃತಿಬದ್ಧವಾಗಿ, ಶಾಸ್ತ್ರೀಯ ವಾಗಿ ಪಾಠ ಮಾಡುತ್ತಿದ್ದರು. ಇವರು ದಿನಾಂಕ 12.08.2021 ರಂದು ನಿಧನರಾ ದರು. ಇಂದು ಶಿಕ್ಷಕರ ದಿನಾಚರಣೆ ಪ್ರಯುಕ್ತ ಅಪಾರ ಶಿಷ್ಯಂದಿರ ಪರವಾಗಿ ಈ ಲೇಖನ. 

ವಿದುಷಿ ಶ್ರೀಮತಿ ಜಯಲಕ್ಷ್ಮಿ ಅವರು 1934 ರಲ್ಲಿ ಬೆಂಗಳೂರಿನಲ್ಲಿ ಜನಿಸಿದರು. ತಂದೆ ಸುಬ್ಬರಾವ್, ತಾಯಿ ರುಕ್ಮಿಣಮ್ಮ.  ಉತ್ತಮ ಹಾಡುಗಾರ್ತಿಯಾದ ಇವರ ತಾಯಿಯೇ ಮೊದಲ ಸಂಗೀತ ಗುರುಗಳು.  ಇವರು  ಹತ್ತು ವರ್ಷದವರಿದ್ದಾಗ ವಿದ್ವಾನ್ ರಾಮಯ್ಯರ್ ಅವರಿಂದ ಕ್ರಮಬದ್ಧ ಸಂಗೀತ ಶಿಕ್ಷಣ ಪ್ರಾರಂಭವಾಯಿತು.  

ಇವರು ಜ್ಯೂನಿಯರ್ ಪರೀಕ್ಷೆ ಕಟ್ಟೋ ವೇಳೆಗೆ ನೂರು ಕೀರ್ತನೆ, ಮೂವತ್ತು ವರ್ಣ ಹಾಗೂ ಐದು ಪಂಚರತ್ನ  ಕೃತಿಗಳ ಕಂಠಪಾಠವಾಗಿತ್ತು.  ಬಳಿಕ ಸೀನಿಯರ್ ಹಾಗೂ ವಿದ್ವತ್ತ ಪಾಠವನ್ನು ವಿದ್ವಾನ್ ಕೆ.ಎಸ್. ವೆಂಕಟರಮಣ ಅವರಲ್ಲಿ ಮುಂದುವರೆಸಿದರು. ವಿದ್ವತ್ತಿನ ಮೂರು ಗಂಟೆ ಪ್ರಾತ್ಯಕ್ಷಿತೆ ಪರೀಕ್ಷೆಯ ಪ್ರಾರಂಭದಲ್ಲಿ  ಜಯಲಕ್ಷ್ಮಿಯವರು  ಅರ್ಧಗಂಟೆ  ಕಲ್ಯಾಣಿ ರಾಗ ಹಾಡಿದರು. ಇದನ್ನು ಕೇಳಿದ ಮೂರು ಜನ ಪರೀಕ್ಷಕರು ಇವರ ಗಾಯನದ ಬಗ್ಗೆ ಅಪಾರ ಮೆಚ್ಚುಗೆ ವ್ಯಕ್ತಪಡಿಸಿದರು.  ಸ್ವತಃ ಅವರ ಗುರುಗಳೇ ಇವರನ್ನು ಇನ್ನೊಬ್ಬ ವಿದುಷಿ ಎಂ.ಎಸ್. ಸುಬ್ಬುಲಕ್ಷ್ಮಿ ತಯಾರಾಗುತ್ತಿದ್ದಾಳೆ ಎಂದು ಹೇಳುತ್ತಿದ್ದರಂತೆ. 

ಕೃಷ್ಣಮೂರ್ತಿಯವರೊಂದಿಗೆ ವಿವಾಹವಾಗಿ ದಾವಣಗೆರೆಗೆ ಬಂದರು. ಹಿರಿ ಸೊಸೆಯಾಗಿ ಬಂದ ಇವರಿಗೆ ಹೆಚ್ಚಿನ ಜವಾಬ್ದಾರಿ ಹಾಗೂ ಸೂಕ್ತ ಸಂಗೀತ ಗುರು ಗಳು ಸಿಗದ ಕಾರಣ ಕಲಿಕೆ  ಮುಂದುವರೆ ಯಲಿಲ್ಲ. ಅನೇಕ ವರ್ಷಗಳ ನಂತರ ಇವರ ವಾರಗಿತ್ತಿಯವರಾದ ಜಯಲಕ್ಷ್ಮಿ ಚಂದ್ರ ಶೇಖರ್‍ರವರಿಗೆ ಶಾಸ್ತ್ರೀಯ ಸಂಗೀತ ಪಾಠ ಪ್ರಾರಂಭಿಸಿದರು. ನಂತರದ ದಿನಗಳಲ್ಲಿ ಇತರೆ ಶಿಷ್ಯಂದಿರಿಗೆ ಪಾಠ ಹೇಳಿಕೊಡಲು ಪ್ರಾರಂಭಿಸಿದರು.  ಇವರ ಶಿಷ್ಯಂದಿರಲ್ಲಿ ಅನೇಕರು ಉತ್ತಮ ಗಾಯಕರಾಗಿದ್ದಾರೆ.  ಬೆಂಗಳೂರಿನಲ್ಲಿ ನೆಲೆಸಿರುವ ಇವರ ಮೆಚ್ಚಿನ ಶಿಷ್ಯೆ ವಿದುಷಿ ಶ್ರೀಮತಿ ಭಾಗ್ಯ ಅವರು, ಕರ್ನಾಟಕ ಶಾಸ್ತ್ರೀಯ ಸಂಗೀತದ ಶಿಕ್ಷಕಿ ಯಾಗಿ ಹೆಸರು ಗಳಿಸಿ ಗುರು ಪರಂಪರೆಯ ಸಂಗೀತವನ್ನು  ಮುಂದುವರೆಸಿಕೊಂಡು ಹೋಗುತ್ತಿದ್ದಾರೆ.

ಮನೆ ಹಾಗೂ ಸಂಗೀತ ಪಾಠ ಇಷ್ಟಕ್ಕೆ ಸೀಮಿತವಾದ ಇವರನ್ನು,  ಶ್ರೀಮತಿ ನಾಗಮ್ಮ ಕೇಶವಮೂರ್ತಿಯವರು  ವನಿತಾ  ಸಮಾಜ ಹಾಗೂ  ಗಾಯನ  ಸಭಾ ಸಂಸ್ಥೆಗಳಿಗೆ ಸೇರಿಸಿದರು. ಇಲ್ಲಿ ಇವರು ಸಲ್ಲಿಸಿದ ಸೇವೆ ಅಪಾರ. ಗಾಯನ ಸಂವಾದ ಕಾರ್ಯದರ್ಶಿಯಾಗಿ ಅನೇಕ ವರ್ಷ ಪ್ರಾಮಾಣಿಕ ಸೇವೆ ಸಲ್ಲಿಸಿದ್ದಾರೆ. ದಾವಣಗೆರೆಯ ಜನತೆಗೆ ಪ್ರಸಿದ್ಧ ಸಂಗೀತಕಾರರು ಮತ್ತು ವಾದ್ಯಕಾರರ ಕಛೇರಿಯನ್ನು ಏರ್ಪಡಿಸಿ ಸಂಗೀತದಲ್ಲಿ ಅಭಿರುಚಿ  ಮೂಡುವಂತೆ ಮಾಡಿದರು.  ಇವರ ಸಂಗೀತ ಸೇವೆಯನ್ನು ಗುರುತಿಸಿ  ಅನೇಕ ಸಂಘ-ಸಂಸ್ಥೆಗಳು ಇವರನ್ನು ಗೌರವಿಸಿ, ಪ್ರಶಸ್ತಿ-ಬಿರುದುಗಳಿಂದ ಸನ್ಮಾನ ಮಾಡಿವೆ.  ದಾವಣಗೆರೆಯ ಗಾಯನ ಸಭಾವತಿಯಿಂದ ಗಾನಶ್ರೀ ಪ್ರಶಸ್ತಿಯನ್ನು ಉಭಯ ವಿದುಷಿ ಶ್ಯಾಮಲಾ ಭಾವೆಯವರು ಇವರಿಗೆ ಪ್ರದಾನ ಮಾಡಿ ಗೌರವಿಸಿದರು. 

ಅರವತ್ತು ವರ್ಷಗಳ ಹಿಂದೆ  ಕಲಿತ ಕೀರ್ತನೆಗಳನ್ನು  ಒಂದು ಬಾರಿಯೂ ಸಹ ನೋಡಿಕೊಳ್ಳದೆ ಪಾಠ ಮಾಡುತ್ತಿದ್ದರು. ಹಾಗಾಗಿ ವಿದ್ಯಾರ್ಥಿಗಳು ಅಭ್ಯಾಸ ಮಾಡದೆ ಹೋದರೆ  ಅಥವಾ ಪುಸ್ತಕ ನೋಡಿಕೊಂಡು ಹಾಡಿದರೆ  ಏನೆಂದರೂ ಮುಂದಿನ ಪಾಠ ಮಾಡುತ್ತಿರಲಿಲ್ಲ. 

ಸಂಪ್ರದಾಯ ಕುಟುಂಬದಿಂದ ಬಂದ ಅವರಿಗೆ ಈಗಿನ ಮಕ್ಕಳು ಹಾಗು ಇಂದಿನ ವಿದ್ಯಾರ್ಥಿಗಳ ಜೀವನ ಶೈಲಿ, ಆಚಾರ-ವಿಚಾರಗಳು ಅದರಲ್ಲೂ ಉಡುಗೆ ತೊಡುಗೆಗಳ ಬಗ್ಗೆ ತೀವ್ರ ಆಕ್ಷೇಪವಿತ್ತು. ಅವರ ಬಳಿ ಪಾಠಕ್ಕೆ ಹೋಗುವಾಗ ಇದರ ಬಗ್ಗೆ ಎಚ್ಚರವಹಿಸಬೇಕಾಗಿತ್ತು. ಇದರ ಬಗ್ಗೆ ಯಾರಾದರೂ ಪ್ರಶ್ನಿಸಿದರೆ  ಇದು ನನ್ನ ವೈಷ್ಣವಿ ಸಂಗೀತ ಶಾಲೆಯ ಸಮವಸ್ತ್ರ, ನನ್ನಲ್ಲಿ ಪಾಠಕ್ಕೆ ಬರುವುದಾದರೆ ಹೀಗೆಯೇ ಬರಬೇಕು ಎಂದು ಹೇಳುತ್ತಿದ್ದರು. ಎಂಟು ವರ್ಷ ಶ್ರೀ ತ್ಯಾಗರಾಜರ ಹಾಗೂ ಪುರಂದರದಾಸರ ಆರಾಧನೆ ಪ್ರಯುಕ್ತ ತಮ್ಮ  ಶಿಷ್ಯರೊಂದಿಗೆ  ನಡೆಸಿಕೊಟ್ಟ ಪಂಚರತ್ನ ಕೃತಿಗಳ ಗಾಯನ ಕಾರ್ಯಕ್ರಮವನ್ನು ದಾವಣಗೆರೆಯ ಸಂಗೀತಾಭಿಮಾನಿಗಳು ಮರೆಯಲು ಸಾಧ್ಯವೇ ಇಲ್ಲ. 

ಮೇಡಂ ಒಬ್ಬ ಅತ್ಯುತ್ತಮ ವಿಮರ್ಶಕಿ ಯಾಗಿದ್ದರು.  ಅತಿ ಸೂಕ್ಷಮಾತಿ ಸೂಕ್ಷ್ಮಗ ಳನ್ನು ಗಮನಿಸುತ್ತಿದ್ದರು. ಒಮ್ಮೆ ಒಬ್ಬ  ಪ್ರಸಿದ್ಧ ಗಾಯಕರ ಕಛೇರಿ ಮುಗಿದ ಬಳಿಕ ಮೇಡಂ ಅವರನ್ನು ವೈಯಕ್ತಿಕವಾಗಿ ಕಂಡು ಕೆಲವು ಸೂಕ್ಷ್ಮತೆಗಳ ಬಗ್ಗೆ ಹೇಳಿದಾಗ ಅವರು ಆಶ್ಚರ್ಯಚಕಿತರಾದರು. ದಾವಣ ಗೆರೆಯಲ್ಲಿ ಶ್ರೇಷ್ಠ ವಿಮರ್ಶಕರಿರುವುದು ನಿಜಕ್ಕೂ ಅಭಿನಂದನೀಯ ಎಂದು ಹೇಳಿದರು. 

ಎಂಭತೇಳು ವರ್ಷವಾದರೂ ಪ್ರತಿಯೊಂದು ವಿಷಯದಲ್ಲಿ ಆಸಕ್ತಿ ಹಾಗೂ ತಿಳಿದುಕೊಳ್ಳಬೇಕೆಂಬ ಹಂಬಲ. ಅದು ಕೊರೊನಾ, ರಾಜಕೀಯ, ಮೊಬೈಲ್ ಅಥವಾ  ಇನ್ಯಾವುದೇ ವಿಷಯವಾಗಿರಬ ಹುದು. ಈ ಆಸಕ್ತಿಯೇ ಅವರನ್ನು ಜೀವನ್ಮುಖಿ ಯಾಗಿ ಇಟ್ಟಿತ್ತು ಎಂದರೆ ತಪ್ಪಾಗಲಾರದು. ಕಡೆಯ ತನಕ ತಮ್ಮ ದೈನಂದಿನ ಕೆಲಸಗಳನ್ನು ತಾವೇ ಮಾಡಿಕೊಳ್ಳುತ್ತಿದ್ದರು.  ಸಾವು ಕೂಡ ಶಿಸ್ತಿನ ಸಿಪಾಯಿಯಂತೆ ಬಂದು ಅವರನ್ನು ಸದ್ದಿಲ್ಲದೇ ಕರೆದುಕೊಂಡು ಹೋಯಿತು. ಮಕ್ಕಳಿಲ್ಲದ ಅವರ ಪಾಲಿಗೆ ಶಿಷ್ಯರೇ ಮಕ್ಕಳಾ ಗಿದ್ದರು.  ತಾಯಿಯಂತೆ ಕಾಳಜಿ, ಪ್ರೀತಿ ತೋರಿಸಿ ಗುರುವಾಗಿ ಮಾರ್ಗದರ್ಶನ ನೀಡಿದರು. 

ಇವರ ಶಿಷ್ಯರು ತಾ. 29.08.2021 ರಂದು  ಗೀತಾಮಂದಿರದಲ್ಲಿ ಸಂಗೀತ ಗಾಯನದ ಮೂಲಕ ಗುರುವಂದನೆಯನ್ನು ಸಲ್ಲಿಸಿದರು.


ಸುಜಾತ ರವೀಂದ್ರ
ದಾವಣಗೆರೆ. 

 

error: Content is protected !!