2021 – ಮಕರ ರಾಶಿಯಿಂದ ಕುಂಭ ರಾಶಿಗೆ ಗುರು ಸ್ಥಾನ ಪಲ್ಲಟ – ಯಾವ ರಾಶಿಗೆ ಏನು ಫಲ

ವ್ಯಕ್ತಿಯನ್ನು ಶ್ರೀಮಂತ ಮತ್ತು ಗೌರವಾನ್ವಿತರನ್ನಾಗಿ ಮಾಡುವ ಗುರು ಗ್ರಹವು 20 ನವೆಂಬರ್ 2021 ರಂದು ರಾಶಿ ಚಕ್ರವನ್ನು ಬದಲಾಯಿಸಲಿದೆ. ಪ್ರಸ್ತುತ, ಗುರುವು ಶನಿ ಗ್ರಹದ ಅಧಿಪತ್ಯವಿರುವ ಮಕರ ರಾಶಿಯಲ್ಲಿ ಕುಳಿತಿದ್ದು, 20 ರಂದು ಶನಿಯ ಎರಡನೇ ರಾಶಿ ಕುಂಭದಲ್ಲಿ ಸಾಗಲಿದೆ. ಗುರು ಗ್ರಹವು ಕುಂಭ ರಾಶಿಯನ್ನು ಪ್ರವೇಶಿಸುವ ಮೊದಲು ಕೆಲವು ಸ್ಥಳೀಯರ ಜೀವನದಲ್ಲಿ ಧನಾತ್ಮಕತೆಯನ್ನು ತರಬಹುದು. ಕೌಟುಂಬಿಕ ಜೀವನದಲ್ಲಿ ಕೆಲವರಿಗೆ, ವೃತ್ತಿಯಲ್ಲಿ ಮತ್ತೆ ಕೆಲವರಿಗೆ ಆರೋಗ್ಯದ ದೃಷ್ಟಿಯಿಂದ, ಗುರು ಸಂತೋಷದ ಫಲಿತಾಂಶಗಳನ್ನು ಪಡೆಯಬಹುದು.


2021 - ಮಕರ ರಾಶಿಯಿಂದ ಕುಂಭ ರಾಶಿಗೆ ಗುರು ಸ್ಥಾನ ಪಲ್ಲಟ - ಯಾವ ರಾಶಿಗೆ ಏನು ಫಲ - Janathavaniಮೇಷ ರಾಶಿ :

ಈ ರಾಶಿಯವರಿಗೆ ಗುರು ಗ್ರಹವು ಲಾಭ ಸ್ಥಾನದಲ್ಲಿ ಅಂದರೆ ಹನ್ನೊಂದನೆ ಮನೆಯಲ್ಲಿ ಸಂಚರಿಸುವುದರಿಂದ ಈ ರಾಶಿಯವರು ತಮ್ಮ  ಕೆಲಸ, ಕಾರ್ಯಗಳಲ್ಲಿ ಉತ್ತಮ ಸಾಮರ್ಥ್ಯವನ್ನು ತೋರುವರು. ಪ್ರತಿಯೊಂದನ್ನೂ ಚೆನ್ನಾಗಿ ಆಲೋಚಿಸಿಯೇ ನಿರ್ಧಾರ ತೆಗೆದುಕೊಳ್ಳುವರು. ರಾಜಕಾರಣಿಗಳಾಗಿದ್ದಲ್ಲಿ ಉತ್ತಮ ಸ್ಥಾನಮಾನಗಳು ದೊರೆಯಲಿವೆ. ಕಳೆದು ಹೋಗಿರುವ ಬೆಲೆ ಬಾಳುವ ವಸ್ತುಗಳನ್ನು ಮರಳಿ ಪಡೆಯುವರು. ವಿದ್ಯಾರ್ಥಿಗಳು ಅಧ್ಯಯನದಲ್ಲಿ ಉತ್ತಮ ಫಲಿತಾಂಶವನ್ನು ಪಡೆಯುವುದರ ಜೊತೆಗೆ, ವಿದೇಶದಲ್ಲಿ ಅಧ್ಯಯನ ಮಾಡುವುದಕ್ಕೆ, ಸಕಲ ಸೌಲಭ್ಯಗಳನ್ನು ಪಡೆಯುವರು. ಶಾಸ್ತ್ರಕೋವಿದರಿಗೆ, ವಿದ್ವತ್ಸಭೆಗಳಲ್ಲಿ ಸನ್ಮಾನ, ಗುರು-ಹಿರಿಯರಿಗೆ ವಿಧೇಯರಾಗಿದ್ದು, ಅವರಾಣತಿಯಂತೆ ನಡೆದುಕೊಳ್ಳುವರು. ಹೊಸ ವಾಹನ, ಮನೆ ಅಥವಾ ಆಸ್ತಿ ಕೊಳ್ಳುವ ಯೋಗವಿದೆ. ವೈಯಕ್ತಿಕ ನಡಾವಳಿಯಲ್ಲೂ ಸಾಕಷ್ಟು ಬದಲಾವಣೆ ಕಂಡುಬರಲಿದೆ. ಆರ್ಥಿಕ ಸ್ಥಿತಿಗತಿಯಲ್ಲಿ ಹೆಚ್ಚಿನ ಏರಿಕೆ ಕಂಡುಬರಲಿದೆ. ಮಕ್ಕಳಲ್ಲಿ ನಯ ವಿನಯಗಳು ಹೆಚ್ಚಿ, ನೆಮ್ಮದಿ ಕಾಣುವರು. ಅನೇಕ ಧಾರ್ಮಿಕ ಕಾರ್ಯಗಳಲ್ಲಿ ಮುಕ್ತ ಮನಸ್ಸಿನಿಂದ ಭಾಗವಹಿಸುವರು. ಒಟ್ಟಿನಲ್ಲಿ ಹೇಳಬೇಕೆಂದರೆ ಲಾಭಸ್ಥ ಗುರು ಉತ್ತಮ ಫಲವನ್ನೇ ಕೊಡಲಿದ್ದಾನೆ.

2021 - ಮಕರ ರಾಶಿಯಿಂದ ಕುಂಭ ರಾಶಿಗೆ ಗುರು ಸ್ಥಾನ ಪಲ್ಲಟ - ಯಾವ ರಾಶಿಗೆ ಏನು ಫಲ - Janathavaniವೃಷಭ  ರಾಶಿ :

ದಶಮ ಸ್ಥಾನದಲ್ಲಿ ಗುರು ಗ್ರಹವಿರುವುದರಿಂದ ಈ ರಾಶಿಯವರ ಫಲಾಫಲಗಳನ್ನು ಹೀಗೆ ವಿವೇಚಿಸಬಹುದು.ಇಷ್ಟುದಿನಗಳ ಕಾಲ ಇದ್ದಂತಹ ಆರ್ಥಿಕ ಪರಿಸ್ಥಿತಿಯು ಸಾಕಷ್ಟು ಸುಧಾರಿಸಲಿದ್ದು, ಕೈಯಲ್ಲಿ ಹೆಚ್ಚಿನ ವ್ಯವಹಾರಗಳಿಗೆ ಸಹಾಯವಾಗಲಿದೆ. ಹಳೆಮನೆ ರಿಪೇರಿ, ವಿಶೇಷ ಅಲಂಕಾರದೊಂದಿಗೆ ಶೋಭಿಸಲಿದೆ. ಉದ್ಯಮದಲ್ಲಿ ತಂದೆಯನ್ನು ಮೀರಿಸುವಂತೆ ಮಕ್ಕಳು ಬೆಳೆಯುವರು. ಆದರೆ ಅವರಿಂದಾಗಿ, ಸದಾ ಆತಂಕದಲ್ಲೇ ಕಾಲ ಕಳೆಯಬೇಕಾದೀತು. ಮನೆಗೆ ಬಂದು ಹೋಗುವ ಅತಿಥಿಗಳ ಸಂಖ್ಯೆ ಹೆಚ್ಚು, ಶ್ರೇಷ್ಠ ಸಾಧು, ಸಂತರ ಸಮಾಗಮವಾಗಲಿದ್ದು,  ಪುಣ್ಯಾಧಿಕ್ಯ ಸಂಪಾದನೆಯಾಗಲಿದೆ. ಮನೆಯಲ್ಲಿ ಧಾರ್ಮಿಕ ಕಾರ್ಯಗಳು, ಹೋಮ ಹವನಾದಿಗಳು  ವಿಶೇಷವಾಗಿ ನಡೆಯಲಿವೆ. ಕೌಟುಂಬಿಕ ನೆಮ್ಮದಿ ಸಾಧಾರಣ. ಅನೇಕ ಸಂಘ-ಸಂಸ್ಥೆಗಳಿಗೆ ದತ್ತಿ ದಾನಗಳು ಸಂದಾಯವಾಗಲಿದೆ. ಚಿತ್ರಕಲಾವಿದರಿಗೆ  ಬೇಡಿಕೆ ಹೆಚ್ಚಲಿದೆ. ಸ್ತ್ರೀ ಸೌಖ್ಯ ಹೆಚ್ಚಲಿದ್ದು, ಸಂಸಾರದಲ್ಲಿ ನೆಮ್ಮದಿ, ಸಾಮಾಜಿಕ ಗೌರವ, ವಂಶದ ಕೀರ್ತಿ ವೃದ್ಧಿಸುವುದು. ತೀರ್ಥಕ್ಷೇತ್ರಗಳ ಪರ್ಯಟನೆ, ಸಾಧಕರಿಗೆ ಗುರುವಿನಿಂದ ಉತ್ತಮ ಮಾರ್ಗದರ್ಶನ. ಸ್ನೇಹಿತರ ನೆರವು.

2021 - ಮಕರ ರಾಶಿಯಿಂದ ಕುಂಭ ರಾಶಿಗೆ ಗುರು ಸ್ಥಾನ ಪಲ್ಲಟ - ಯಾವ ರಾಶಿಗೆ ಏನು ಫಲ - Janathavaniಮಿಥುನ ರಾಶಿ :

ನವಮ ಸ್ಥಾನದಲ್ಲಿ ಗುರುಗ್ರಹದ ಸಂಚಾರ ಆರಂಭವಾಗಲಿದ್ದು, ವಿಶೇಷವಾಗಿ ಧರ್ಮ ಕಾರ್ಯಗಳು ಬಂಧುಗಳ ನೆರವಿನಿಂದ  ನಡೆಯಲಿವೆ. ಕಷ್ಟದಲ್ಲಿರುವ ಮಿತ್ರರಿಗೆ, ಸಾಧು, ಸಂತರ ಸೇವೆ ನಿರಂತರವಾಗಿ ನಡೆಯಲಿದೆ. ಸತ್ಯಕ್ಕೋಸ್ಕರ ಎಂತಹವರನ್ನೂ ಕೂಡ ಎದುರಿಸಬಲ್ಲೆನೆಂಬ ಆತ್ಮವಿಶ್ವಾಸ, ನಿಮ್ಮಲ್ಲಿ ಮೂಡಲಿದೆ. ಬಂಧು ಜನರಿಂದ ಸಕಲ ಕಾರ್ಯಗಳಿಗೆ ಸಂಪೂರ್ಣ ಸಹಕಾರ ಸಿಗುವುದು ನಿಶ್ಚಿತ. ಮೇಲಾಧಿಕಾರಿಗಳ ಕೃಪಾಕಟಾಕ್ಷದಿಂದ ನೌಕರಿಯಲ್ಲಿ ಪದೋನ್ನತಿಯೊಂದಿಗೆ ವೇತನದಲ್ಲಿ ಹೆಚ್ಚಳ, ಖಾಸಗಿ ಕಂಪನಿ ನೌಕರರು ಉದ್ಯೋಗದಲ್ಲಿ ಬದಲಾವಣೆ ಬಯಸಿದಲ್ಲಿ ಈಡೇರಲಿದೆ. ಹೊಸಮನೆ ಕಟ್ಟಲು ಹಣಕಾಸು ಸಂಸ್ಥೆಗಳಿಂದ ಆರ್ಥಿಕ ನೆರವು, ಹೆಚ್ಚುತ್ತಿರುವ ಕೆಲಸಕಾರ್ಯಗಳಿಂದಾಗಿ ದೈನಂದಿನ ಕರ್ಮಗಳ ಲೋಪವಾಗಲಿದೆ. ವಿದ್ಯಾರ್ಥಿಗಳು ಉನ್ನತಾಧ್ಯಯನದಲ್ಲಿ ವಿಶೇಷ ಆಸಕ್ತಿ ಹೆಚ್ಚಿ, ಉತ್ತಮ ಫಲಿತಾಂಶ ಪಡೆಯುವರು. ಶಾಸ್ತ್ರಾಭ್ಯಾಸ ಮಾಡಲು ಬಯಸುವವರಿಗೆ ಉತ್ತಮ ಗುರುಗಳು ದೊರೆಯಲಿದ್ದಾರೆ. ಹಣಕಾಸಿಗೆ  ಸಂಬಂಧಿಸಿದ ವ್ಯವಹಾರಗಳು ಚೆನ್ನಾಗಿಯೇ ನಡೆಯಲಿವೆ. ಹಳೇ ಸಾಲಗಳನ್ನು ತೀರಿಸಲು, ಉತ್ತಮವಾದ ಸದವಕಾಶವೊಂದು ತಾನಾಗಿಯೇ ಒದಗಿ ಬರಲಿದೆ. ಅವಿವಾಹಿತರಿಗೆ ಕಂಕಣಭಾಗ್ಯ ಇಷ್ಟರಲ್ಲೇ ಕೂಡಿಬರಲಿದೆ.

2021 - ಮಕರ ರಾಶಿಯಿಂದ ಕುಂಭ ರಾಶಿಗೆ ಗುರು ಸ್ಥಾನ ಪಲ್ಲಟ - ಯಾವ ರಾಶಿಗೆ ಏನು ಫಲ - Janathavaniಕರ್ಕಾಟಕ ರಾಶಿ :

ಈ ರಾಶಿಯವರಿಗೆ  ಅಷ್ಟಮ ಸ್ಥಾನದಲ್ಲಿ ಗುರು ಗ್ರಹದ ಸಂಚಾರ ಆರಂಭವಾಗಲಿರುವುದ ರಿಂದ ಮಾಡುವ ಕೆಲಸಗಳಲ್ಲಿ ತೃಪ್ತಿಯಿಲ್ಲದೆ ಉದಾಸೀನತೆ ತೋರುವರು. ಇವರ ಈ ದೌರ್ಬಲ್ಯವನ್ನು ಎದುರಾಳಿಗಳು ದುರುಪಯೋಗ ಪಡಿಸಿಕೊಳ್ಳುವ ಸಂಭವವಿದೆ. ಅತಿಯಾದ ದುರಭಿಮಾನದಿಂದಾಗಿ ಬರಲಿರುವ ಅತ್ಯುತ್ತಮ ಅವಕಾಶಗಳನ್ನು ಕೈ ಚೆಲ್ಲುವರು. ಗುರು-ಹಿರಿಯರೊಂದಿಗೆ ವಿವೇಚನೆಯಿಲ್ಲದೇ ಮಾತನಾಡುವುದರಿಂದ, ಬಂಧುಗಳೊಂದಿಗೆ ನಿಷ್ಠೂರವಾಗಿ ನಡೆದುಕೊಳ್ಳುವುದರಿಂದ ಎಲ್ಲರಿಂದಲೂ ದೂರವಾಗ ಬೇಕಾದೀತು. ತಂದೆ-ತಾಯಿಗಳೊಂದಿಗೆ ಜಗಳವಾಡಿ ಬೇರೆ ಹೋಗಬಹುದು. ಆಗಿಂದಾಗ್ಗೆ ಕಾಡಬಹುದಾದ ಅನಾರೋಗ್ಯ ಸಮಸ್ಯೆ ಬಹಳ ಕಾಲ ಕಾಡಬಹುದು. ಸುದೀರ್ಘ ಕಾಲದಿಂದ ವಯೋಸಹಜ ರೋಗ ರುಜಿನಗಳಿಂದ ನರಳುತ್ತಿರುವ ವಯೋವೃದ್ಧರು ಅವುಗಳಿಂದ  ಮುಕ್ತಿ ಪಡೆಯುವರು. ಅನಾವಶ್ಯಕ ಖರ್ಚುಗಳು ಎದುರಾಗಲಿದ್ದು. ಆರ್ಥಿಕ ಪರಿಸ್ಥಿತಿ ಬಿಗಡಾಯಿಸಬಹುದು, ಕೈಮೀರಿ ಹೋದ ಮೇಲೆ ತಮ್ಮ ಕೃತ್ಯಗಳಿಗೆ ಪಶ್ಚಾತ್ತಾಪ ಪಡುವರು. ಸದ್ಯದ ಪರಿಸ್ಥಿತಿ ಹೀಗಿರುವುದ ರಿಂದ ಸಾಧ್ಯವಾದಷ್ಟು ಗುರು ಚರಿತ್ರೆ, ವಿಷ್ಣು ಸಹಸ್ರನಾಮ ಪಾರಾಯಣ ಮತ್ತು ಗುರು ಜಪ ಮಾಡುವುದು ಲೇಸು.

2021 - ಮಕರ ರಾಶಿಯಿಂದ ಕುಂಭ ರಾಶಿಗೆ ಗುರು ಸ್ಥಾನ ಪಲ್ಲಟ - ಯಾವ ರಾಶಿಗೆ ಏನು ಫಲ - Janathavaniಸಿಂಹ ರಾಶಿ :

ಸಪ್ತಮ ಭಾವದಲ್ಲಿ ಗುರುವಿನ ಸಂಚಾರ ಆರಂಭವಾಗಲಿದ್ದು, ವಿದ್ಯಾರ್ಥಿಗಳು ಅಧ್ಯಯನದಲ್ಲಿ ಹೆಚ್ಚಿನ ಶ್ರದ್ಧೆ ತೋರುವರು. ಅಧ್ಯಾತ್ಮಿಕ ರಂಗದಲ್ಲಿ ಶಾಸ್ತ್ರಾಧ್ಯಯನದಲ್ಲಿ ತೊಡಗಿಕೊಂಡವರಿಗೆ ಮಠಮಾನ್ಯಗಳಿಂದ ಗೌರವ, ಆದರೆ ವಿದ್ಯೆ ವಿನಯಕ್ಕೆ ಕಾರಣವಾಗಬೇಕೇ ವಿನಃ ಅಹಂಕಾರಕ್ಕಲ್ಲ ಎಂಬುದರ ಎಚ್ಚರವಿದ್ದರೆ ಉತ್ತಮ. ಹಲವಾರು ಮೂಲಗಳಿಂದ ಹಣಕಾಸು ಹರಿದುಬರಲಿದ್ದು, ಅದರಿಂದಾಗಿ ಅನೇಕಾರ್ಥಿಕ ಸಮಸ್ಯೆಗಳು ಬಗೆಹರಿಯಲಿವೆ. ಹಳೇ ಸಾಲಗಳನ್ನು ತೀರಿಸಿ, ಸಂತೃಪ್ತ ಭಾವನೆ ಪಡೆಯುವಿರಿ. ಕೌಟುಂಬಿಕ ಸುಖ ಅತ್ಯಲ್ಪವಾದರೂ ಕೂಡ, ವಂಶದ ಹಿರಿಯರೂ ಕೂಡ ಅವರ ಮಾತಿಗೆ ಬೆಲೆ ಕೊಡುವರು. ನವದಂಪತಿಗಳಲ್ಲಿ ಅನ್ಯೋನ್ಯತೆ ಹೆಚ್ಚಲಿದೆ. ಹೆಚ್ಚುಹೆಚ್ಚು ದೇವತಾಕಾರ್ಯಗಳು ಮನೆಯಲ್ಲಿ ನಡೆಯಲಿದ್ದು, ಪುಣ್ಯ ಸಂಪಾದನೆ ಹೆಚ್ಚಲಿದೆ. ಸಿದ್ಧಿ ಕ್ಷೇತ್ರದಲ್ಲಿರುವವರು ವಿಶೇಷ ಜಪತಪಾನುಷ್ಠಾನದಲ್ಲಿ ತೊಡಗುವರು. ಮಕ್ಕಳ ನಡೆ ನುಡಿಯಲ್ಲಿ ವಿನಯವಂತಿಕೆ ಕಂಡುಬರಲಿದೆ. ಸಾಹಿತಿಗಳಿಗೆ ಉತ್ತಮ ದಿನಗಳು. ವ್ಯಾಪಾರ ವ್ಯವಹಾರಗಳಿಗಿದ್ದ ಕಾನೂನಿನ ತೊಡಕುಗಳು ಪರಿಹಾರವಾಗಲಿದ್ದು, ಎಲ್ಲವೂ ಸುಸೂತ್ರವಾಗಿ ನಡೆದುಕೊಂಡು ಹೋಗಲಿವೆ. ಒಟ್ಟಿನಲ್ಲಿ ಅತ್ಯುತ್ತಮ ಸಮಯ.

2021 - ಮಕರ ರಾಶಿಯಿಂದ ಕುಂಭ ರಾಶಿಗೆ ಗುರು ಸ್ಥಾನ ಪಲ್ಲಟ - ಯಾವ ರಾಶಿಗೆ ಏನು ಫಲ - Janathavaniಕನ್ಯಾ ರಾಶಿ:

ಈ ರಾಶಿಯವರಿಗೆ ಷಷ್ಟಭಾವದಲ್ಲಿ ಗುರುಗ್ರಹದ ಸಂಚಾರವಾಗಲಿದ್ದು, ಅನೇಕ ಶತ್ರುಗಳನ್ನು ತಾವೇ ಹುಟ್ಟುಹಾಕಿಕೊಳ್ಳುವರು, ಎಷ್ಟೇ ಬಲಹೀನಾಗಿದ್ದರೂ ಕೂಡ, ಶತ್ರುಗಳನ್ನು ಮಣಿಸಬಲ್ಲವರಾಗಿರುತ್ತಾರೆ. ರಕ್ಷಣಾ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುವವರಿಗೆ ತಮ್ಮ ಬಲ ಪರಾಕ್ರಮ ತೋರುವ ಸದಾವಕಾಶ ದೊರೆಯಲಿದೆ. ಹಸು, ಎಮ್ಮೆ ಮೊದಲಾದ ಪಶುಸಂಪತ್ತು ಬೆಳೆಯಲಿದೆ. ಮನೆಯಲ್ಲಿ ತಾಯಿಯ ಅನಾರೋಗ್ಯ ಸಮಸ್ಯೆ ಚಿಂತೆಗೀಡು ಮಾಡಲಿದೆ. ತವರು ಮನೆ ಆಸ್ತಿಗೆ ಸಂಬಂಧಪಟ್ಟಂತೆ ಸೋದರ ಮಾವನಿಂದ ಕಾನೂನಾತ್ಮಕವಾದ ಕಿರುಕುಳ ಅನುಭವಿಸಬೇಕಾದೀತು. ಹೆಗಲೇರಲಿರುವ ಕೀರ್ತಿ ಶನಿ, ದುಹಂಕಾರಕ್ಕೆ ಕಾರಣವಾಗಬಹುದು. ಅತ್ಯುತ್ಸಾಹದಿಂದ ಆರಂಭಿಸಿದ್ದ ಕಾರ್ಯಗಳಲ್ಲಿ ಅನೇಕ ತೊಡಕುಗಳು. ಔಷಧಿ ಸಂಶೊಧನಾ ರಂಗದಲ್ಲಿರುವವರು ಮಹತ್ತರ  ಸಾಧನೆ ಮಾಡಲಿದ್ದಾರೆ. ಸಂಗೀತಗಾರರು ಆ ಶಾಸ್ತ್ರಕ್ಕೆ ಸಂಬಂಧಪಟ್ಟ ಅಧ್ಯಯನದಲ್ಲಿ ವಿಶೇಷವಾಗಿ ತೊಡಗಿಕೊಳ್ಳುವರು. ಸರ್ಕಾರಿ ನೌಕರರು, ತಾವು ಮಾಡದಿರುವ ತಪ್ಪಿಗೆ ಶಿಕ್ಷೆಯನ್ನು ಅನುಭವಿಸುವುದರೊಂದಿಗೆ ದೂರದೂರುಗಳಿಗೆ ವರ್ಗವಾಗಿ ಹೋಗಬೇಕಾದೀತು. ಮಕ್ಕಳ ವಿದ್ಯಾಭ್ಯಾಸದಲ್ಲಿ ಆರಂಭಿಕ ತೊಡಕಿದ್ದರೂ ಕ್ರಮೇಣ ಅದು ಸರಿಹೋಗಲಿದೆ. ಒಟ್ಟಿನಲ್ಲಿ ದಿನಗಳು ಸಾಧಾರಣ.

2021 - ಮಕರ ರಾಶಿಯಿಂದ ಕುಂಭ ರಾಶಿಗೆ ಗುರು ಸ್ಥಾನ ಪಲ್ಲಟ - ಯಾವ ರಾಶಿಗೆ ಏನು ಫಲ - Janathavaniತುಲಾ ರಾಶಿ:

ಪಂಚಮಭಾವದಲ್ಲಿ ಶುಭ ಗ್ರಹವಾದ ಗುರುವಿನ ಸಂಚಾರವಾಗಲಿದ್ದು, ಆಚಾರ, ವಿಚಾರಗಳಲ್ಲಿ ವಿಶೇಷ ಆಸಕ್ತಿ ಮೂಡಲಿದೆ. ಹೆಚ್ಚಲಿರುವ ಜಪತಪಾನುಷ್ಠಾಗಳು ಉತ್ತಮ ಕಾರ್ಯಗಳಿಗೆ ನೆರವಾಗಲಿವೆ. ಸಂತಾನಾಪೇಕ್ಷಿಗಳ ಬಯಕೆ ಈ ಬಾರಿ ಖಂಡಿತಾ ನೆರವೇರಲಿದೆ. ವಾಹನಗಳನ್ನು ಖರೀದಿಮಾಡುವಾಗ ತುಸು ಎಚ್ಚರದಿಂದಿರುವುದು ಉತ್ತಮ.ಗಳಿಸಿದ ಆಸ್ತಿ ಹೆಚ್ಚಳವಾಗಲಿದ್ದು, ಜೊತೆಗೆ ಸಂಪಾದನೆಯೂ ಹೆಚ್ಚಲಿದೆ. ಉಳಿತಾಯಕ್ಕೆ ಇದು ಸಕಾಲ. ಕಿರಿಯರು ಆಡುವ ಮಾತಿನಲ್ಲಿ ನಯವಿನಯ ಕಂಡುಬರುವುದು. ವ್ಯಾಪಾರವ್ಯವಹಾರದಲ್ಲಿ ನೀವು ತೋರುವ ಊಹಾಪೋಹಗಳು, ಸರಿಯಾದ ದಾರಿಯಲ್ಲಿ ಸಾಗಲಿವೆ. ಚಿಕ್ಕಮಕ್ಕಳ ಕೈಬರವಣಿಗೆ ಸುಧಾರಿಸಲಿದೆ. ಹಿಡಿದ ಕಾರ್ಯಗಳೆಲ್ಲವೂ ಯಶಸ್ವಿಯಾಗಲಿವೆ. ಸ್ನೇಹಿತರೊಂದಿಗಿದ್ದ ಭಿನ್ನಾಭಿಪ್ರಾಯಗಳು ದೂರವಾಗುವವು.ದುಗುಡಗೊಂಡ ಮನಸ್ಸು ತಿಳಿಯಾಗಲಿದ್ದು, ಬಂಧುಮಿತ್ರರೊಂದಿಗೆ ಸೌಹಾರ್ದತೆಯಿಂದ ನಡೆದುಕೊಳ್ಳುವಿರಿ. ಸಾಧು ಸಜ್ಜನರು, ವಿಶೇಷವಾದ ಸಾಮಾಜಿಕ ಸನ್ಮಾನ ಪಡೆಯುವರು. ಹೊಸಮನೆ ಕಟ್ಟಲು ಎಲ್ಲರಿಂದಲೂ ಎಲ್ಲಾ ರೀತಿಯ ಸಹಾಯ, ಸಹಕಾರ ಸಿಗಲಿದೆ.ಯುವಕರು ಉದ್ಯೋಗ ಪಡೆಯುವುದರಲ್ಲಿ ತುಸು ವಿಳಂಬವಾದರೂ ಮುಂದೆ ಉತ್ತಮ ವೇತನದ ನೌಕರಿ ದೊರೆಯಲಿದೆ. ಒಟ್ಟಿನಲ್ಲಿ ಉತ್ತಮ ದಿನಗಳು.

2021 - ಮಕರ ರಾಶಿಯಿಂದ ಕುಂಭ ರಾಶಿಗೆ ಗುರು ಸ್ಥಾನ ಪಲ್ಲಟ - ಯಾವ ರಾಶಿಗೆ ಏನು ಫಲ - Janathavaniವೃಶ್ಚಿಕ ರಾಶಿ :

ಈ ರಾಶಿಯವರಿಗೆ ಗುರುವು   ಚತುರ್ಥಭಾವದಲ್ಲಿ ಸಂಚರಿಸುವವನಾಗಿದ್ದು, ಮನೆಯಲ್ಲಿ ನಿರಂತರವಾಗಿ ದೇವತಾ ಸ್ತೋತ್ರಗಳು ಕೇಳಿಬರಲಿವೆ. ನಿತ್ಯವೂ ದೊಡ್ಡದೊಡ್ಡ ಶ್ರೀಮಂತರ ಹಾಗು ಪ್ರಭಾವಿ ವ್ಯಕ್ತಿಗಳ ವಾಹನಗಳು ಮನೆಯ ಮುಂದೆ ಹಾದು ಹೋಗಲಿವೆ. ಗೋವು ಮೊದಲಾದ ಪಶುಗಳ ಸಂಚಾರದಿಂದ ವಾತಾವರಣ ಪರಿಶುದ್ಧತೆಯ ಪ್ರಭಾವಳಿಯನ್ನೇ ಸೃಷ್ಟಿಸಲಿದೆ. ಹಿತಶತ್ರುಗಳು ನಿಮ್ಮ ದಾಸರಾಗಿ ಶರಣಾಗುವರು. ಸಮಾಜದಿಂದ ಅನೇಕ ರೀತಿಯಲ್ಲಿ ಅನೇಕ ಕಡೆ ಮಾನಸನ್ಮಾನಗಳಾಗಲಿವೆ. ರಾಜಕೀಯವಾಗಿ ಬಲಿಷ್ಠರಾದವರು ನಿಮ್ಮ ಒಂದು ಇಶಾರೆಯಿಂದಲೇ ಎಲ್ಲಾ ಕೆಲಸಗಳನ್ನು ಮಾಡಿಕೊಡುವರು. ಹಣಕಾಸಿನ ಮೂಲಗಳು ಹೆಚ್ಚಲಿದ್ದು, ಬಂಧುಗಳಿಗೆ ನೆರವಾಗುವಿರಿ. ಹೊಸ ವಾಹನ ಖರೀದಿ ಜೋರಾಗಿಯೇ ನಡೆಯಲಿದೆ. ಹಿರಿಯರಿಂದ ಬರಬೇಕಾಗಿರುವ ಆಸ್ತಿಯಲ್ಲಿ ದೊಡ್ಡ ಪಾಲೇ ನಿಮಗೆ ದೊರಕಲಿದೆ. ಮನೆಯಲ್ಲಿ ಸುಖ-ಸಂತೋಷಗಳು ಸಮೃದ್ಧವಾಗಿ ನೆಲೆಸಲಿವೆ. ಮಕ್ಕಳ ವಿದ್ಯಾಭ್ಯಾಸದಲ್ಲಿದ್ದ ಅಸ್ಥಿರತೆ ದೂರವಾಗಿ, ಮನಸ್ಸಿಗೆ ನೆಮ್ಮದಿ ಮೂಡಲಿದೆ. ಇಷ್ಟೆಲ್ಲಾ ಇದ್ದರೂ ಕೂಡ ನೀವು ನಿಮ್ಮ ಮನಸ್ಸಿನ ಆಲೋಚನೆಗಳನ್ನು ಬೇರೆಯವರಿಗೆ ಬಿಟ್ಟು ಕೊಡದೆ  ಗೌಪ್ಯವನ್ನು ಕಾಪಾಡಿಕೊಳ್ಳಲು ಹವಣಿಸುವಿರಿ. ಆತ್ಮವಿಶ್ವಾಸ ಒಳ್ಳೆಯದೇ ಆದರೆ ಅದು ಅತಿಯಾಗದಂತೆ ಎಚ್ಚರವಹಿಸುವುದು ಉತ್ತಮ.

2021 - ಮಕರ ರಾಶಿಯಿಂದ ಕುಂಭ ರಾಶಿಗೆ ಗುರು ಸ್ಥಾನ ಪಲ್ಲಟ - ಯಾವ ರಾಶಿಗೆ ಏನು ಫಲ - Janathavaniಧನುರ್‌ ರಾಶಿ:

ಈ ರಾಶಿಯವರಿಗೆ ತೃತೀಯ ಭಾವದಲ್ಲಿ ಗುರುವಿನ ಸಂಚಾರ ಆರಂಭವಾಗಲಿದ್ದು, ಈ ಸಂದರ್ಭದಲ್ಲಿ ನೀವು ಎಷ್ಟೇ ಸಂಪಾದನೆ ಮಾಡಿದರೂ ಕೂಡ ಜಿಪುಣತನ ಹೋಗುವುದಿಲ್ಲ. ಮಡದಿ, ಮಕ್ಕಳ ಮೇಲೆ ಪ್ರೀತಿಯಿದ್ದರೂ ಕೂಡ ಖರ್ಚಿನ ಬಾಬ್ತು ಬಂದಾಗ ಅಥವಾ ಅವರು ಕೋರಿಕೆಗಳನ್ನು ಮುಂದಿಟ್ಟಾಗ ಅದಕ್ಕೆ ವಿರುದ್ಧವಾಗಿ ವರ್ತಿಸುವಿರಿ. ಬಂಧು ವರ್ಗದವರೊಂದಿಗೆ ನಿಷ್ಠೂರವಾಗಿ ನಡೆದುಕೊಳ್ಳುವಿರಿ. ಶ್ವಪಚತನವು ಮೈಗೂಡಲಿದ್ದು. ಆಚಾರ-ವಿಚಾಗಳಲ್ಲಿ ಉದಾಸೀನತೆಯುಂಟಾಗಲಿದೆ. ಯಾರು ಎಷ್ಟೇ ಉಪಕಾರ ಮಾಡಿದರೂ, ಅವರಿಗೇ ಕೃತಘ್ನತೆ ತೋರುವಿರಿ.ಸ್ನೇಹಿತರೊಂದಿಗೆ ವಿನಾಕಾರಣ ಕಲಹ, ವಾಗ್ವಾದಗಳು ಬೇರೆಯವರಿಗೆ ಬೇಸರ ತರಲಿವೆ. ಅದೃಷ್ಟವು ಮನೆಯ ಬಾಗಿಲಿನವರೆಗೆ ಬಂದರೂ ಕೂಡ, ಅದು ನಿಮ್ಮ ಮನೋಚಾಂಚಲ್ಯದಿಂದಾಗಿ ಬೇರೆಯವರ ಪಾಲಾಗಬಹುದು.ರಾಜಕಾರಣಿಗಳಿಗೆ ಆಕಸ್ಮಿಕವೋ ಎಂಬಂತೆ ರಾಜಕೀಯ ಲಾಭವಾಗಲಿದೆ. ಇವರಾಡುವ ಹುಚ್ಚಾಟಗಳನ್ನು ಇಷ್ಟವಿಲ್ಲದೇ ಇದ್ದರೂ, ಸಹಿಸಲೇ ಬೇಕಾದ ಅನಿವಾರ್ಯತೆ ಉಂಟಾಗಲಿದೆ.ಇಷ್ಟೆಲ್ಲಾ ಇದ್ದರೂ ಕೂಡ ಇವರ ಬುದ್ಧಿವಂತಿಕೆಗೆ ಪ್ರತಿಯೊಬ್ಬರೂ ತಲೆದೂಗುವರು ಮತ್ತು ಇವರ ಆತಿಥ್ಯಕ್ಕೆ ಮರುಳಾಗದವರೇ ಇಲ್ಲ. ಅಗ್ನಿಮಾಂದ್ಯಾದಿ ಆರೋಗ್ಯ ಸಮಸ್ಯೆ ಇವರನ್ನು ಕಾಡಲಿದೆ.

2021 - ಮಕರ ರಾಶಿಯಿಂದ ಕುಂಭ ರಾಶಿಗೆ ಗುರು ಸ್ಥಾನ ಪಲ್ಲಟ - ಯಾವ ರಾಶಿಗೆ ಏನು ಫಲ - Janathavaniಮಕರ ರಾಶಿ :

ಗುರುವು ದ್ವಿತೀಯ ಅಂದರೆ ಧನ-ಭಾವದಲ್ಲಿ ಗುರುವಿನ ಸಂಚಾರ ಆರಂಭವಾಗಲಿದ್ದು, ಈ ರಾಶಿಯವರು ಸಾಹಿತಿಗಳಾಗಿದ್ದಲ್ಲಿ ಉತ್ತಮ ಕೃತಿಗಳು ಇವರಿಂದ ರಚನೆಯಾಗಲಿವೆ. ಅವಕ್ಕೆ ಪ್ರಶಸ್ತಿಯೂ ಸಿಗಲಿದೆ.ಪ್ರತಿಯೊಬ್ಬರನ್ನೂ ಮಾತಿನಲ್ಲಿ ದಂಡಿಸುವರು. ಮಾತ್ರವಲ್ಲದೇ, ತಮ್ಮ ವಾಚಾಳಿತನದಿಂದ ಬೇರೆಯವರನ್ನು ಮಾತಿನಲ್ಲಿ ಕಟ್ಟಿಹಾಕುವರು. ಪರಸ್ತ್ರೀಯರ ವಿಚಾರದಲ್ಲಿ ಅನಾವಶ್ಯಕ ಕುತೂಹಲ ತೋರುವರು. ಇಷ್ಟೆಲ್ಲಾ ಇದ್ದರೂ ಪುಕ್ಕಲುತನ ಸದಾ ಇವರನ್ನು ಕಾಡಲಿದೆ. ಕಂಡವರ ಮಕ್ಕಳನ್ನು ಬಾವಿಗೆ ತಳ್ಳಿ ಆಳ ನೋಡುವ ಚಟ ಇವರದು. ಹಣ ಸಂಪಾದನೆಗಾಗಿ ಹಲವು ರೀತಿಯಲ್ಲಿ ಕಷ್ಟಪಡುವರು. ಆದರೂ ಸಂಪಾದನೆ ಕಷ್ಟವೇ.ವಿದ್ಯಾರ್ಥಿಗಳು ಓದಿನಲ್ಲಿ ಸಾಕಷ್ಟು ಪ್ರಗತಿ ಸಾಧಿಸುವರು.ಅಜಾತಶತ್ರುವಿನಂತಿರುವ ಇವರಿಗೆ ಪ್ರತಿಯೊಬ್ಬರೂ, ಸ್ಫರ್ಧೆಗೆ ಬಿದ್ದವರಂತೆ ಸಹಾಯ ಮಾಡುವರು.ಮಧ್ಯಂತರದಲ್ಲಿ ಅಧ್ಯಾತ್ಮದ ಕಡೆ ತಿರುಗುವ ಇವರಿಗೆ ಉತ್ತಮ ಗುರುವಿನ ನೆರವು ಸಿಗಲಿದೆ. ಪಾಠ-ಪ್ರವಚನಗಳು ನಿರಂತರವಾಗಿ ನಡೆಯಲಿವೆ. ಆದಾಯದ ಮೂಲಗಳು ಹೆಚ್ಚಲಿದ್ದು, ಹೊಸ ಯೋಜನೆಗಳಿಗೆ ಪೂರಕವಾಗಲಿದೆ. ವ್ಯಾಪಾರ ವ್ಯವಹಾರಗಳಲ್ಲಿ ಪಾಲುದಾರರು ನಿಮ್ಮ ಮಾತನ್ನು ಬೆಂಬಲಿಸುವರು. ಅತಿಯಾದ ತಿರುಗಾಟ ಆರೋಗ್ಯದ ಮೇಲೆ ಅಡ್ಡಪರಿಣಾಮ ಬೀರದಂತೆ ಎಚ್ಚರ ವಹಿಸಿ.ಗುರು ಸೇವೆ ಉತ್ತಮ.

2021 - ಮಕರ ರಾಶಿಯಿಂದ ಕುಂಭ ರಾಶಿಗೆ ಗುರು ಸ್ಥಾನ ಪಲ್ಲಟ - ಯಾವ ರಾಶಿಗೆ ಏನು ಫಲ - Janathavaniಕುಂಭ ರಾಶಿ :

ಗುರು ಗ್ರಹವು ತನುಭಾವದಲ್ಲಿ ಸಂಚಾರ ಮಾಡಲಿದ್ದು, ಈ ರಾಶಿಯವರಿಗೆ ಅತ್ಯುತ್ತಮ ದಿನಗಳೆಂದೇ ಹೇಳಬಹುದು.ಅರ್ಧಕ್ಕೇ ನಿಂತುಹೋಗಿದ್ದ ವಿದ್ಯಾಭ್ಯಾಸವನ್ನು ಮತ್ತೆ ಮುಂದುವರೆಸಲು ಇದು ಸಕಾಲವಾಗಿದೆ. ಸರ್ಕಾರಿ ನೌಕರರು ಮೇಲಾಧಿಕಾರಿಗಳ ಇಂಗಿತರಾಗಿ ಅದಕ್ಕೆ ತಕ್ಕಂತೆ ಕೆಲಸ ಮಾಡುವರು. ಪರರು ಮಾಡಿರುವ ಉಪಕಾರವನ್ನು ಸದಾ ಸ್ಮರಿಸುತ್ತಾ ಅವರಿಗೆ ಕೃತಜ್ಞರಾಗಿರುವರು. ಕಷ್ಟದಲ್ಲಿರುವವರಿಗೆ ಶಕ್ತಿಮೀರಿ ನೆರವಾಗುವರು. ಇದ್ದುದರಲ್ಲೇ ನೆಮ್ಮದಿಯನ್ನು ಕಾಣುವ ಇವರು ನಿಶ್ಚಿಂತ ಪುರುಷರೇ ಸರಿ. ತಮ್ಮಲ್ಲಿ ಎಷ್ಟೇ ಪಾಂಡಿತ್ಯವಿದ್ದರೂ, ವಿನಯವಂತಿಕೆ ಮೈಗೂಡಿಸಿ ಕೊಂಡಿರುತ್ತಾರೆ. ಧರ್ಮ ಕಾರ್ಯಗಳಿಗಾಗಿ ತಮ್ಮ ಸಂಪಾದನೆಯಲ್ಲದೆ ಉಳಿತಾಯದ ಹಣವನ್ನೂ ಖರ್ಚು ಮಾಡಲು ಹಿಂದುಮುಂದು ನೋಡುವುದಿಲ್ಲ.ಆತ್ಮಗೌರವದಿಂದ ಬದುಕಲು ಯತ್ನಿಸುವ ಇವರಿಗೆ, ಸಾಮಾಜಿಕ ಗೌರವಗಳು ಹೆಚ್ಚಲಿವೆ, ಸಂವಾದ ಪ್ರಿಯರಾದ ಇವರಿಗೆ ಉತ್ತಮ ವಾಗ್ಮಿಗಳ ಸ್ನೇಹ ದೊರೆಯಲಿದೆ. ಬ್ಯಾಂಕ್‌ ನೌಕರರಿಗೆ ಒತ್ತಡದ ವಾತಾವರಣದಲ್ಲಿ ನಿರ್ವಹಿಸುವ ಕೆಲಸಗಳಿಂದಾಗಿ ಮಾನಸಿಕ ಖಿನ್ನತೆಗೆ ಒಳಗಾಗುವರು. ಬಂಧುಗಳಿಗೆ ನೀವು ನೀಡಲಿರುವ ಸಲಹೆ ಸಕಾಲಿಕವಾಗಿ ನೆರವಾಗಲಿದೆ. ಅತಿಥಿಗಳ ಸತ್ಕಾರ ವಿಶೇಷವಾಗಿ ನಡೆಯಲಿದೆ.

2021 - ಮಕರ ರಾಶಿಯಿಂದ ಕುಂಭ ರಾಶಿಗೆ ಗುರು ಸ್ಥಾನ ಪಲ್ಲಟ - ಯಾವ ರಾಶಿಗೆ ಏನು ಫಲ - Janathavaniಮೀನ ರಾಶಿ:

ಗುರು ಗ್ರಹವು  ಈ ರಾಶಿಯವರಿಗೆ ವ್ಯಯ ಸ್ಥಾನದಲ್ಲಿ ಅಂದರೆ ಹನ್ನೆರಡನೇ ಮನೆಯಲ್ಲಿ ಸಂಚರಿಸುವುದರಿಂದ ಅನೇಕ ವಿಧವಾದ ಚಿಂತೆ, ತಾಪತ್ರಯ, ವಿನಾಕಾರಣ ಉದ್ವೇಗಕ್ಕೆ ಒಳಗಾಗುವರು. ಹಲವು ವಿಚಾರಗಳಲ್ಲಿ ಸಾಕಷ್ಟುಗೊಂದಲಕ್ಕೆ ಒಳಗಾಗುವುದಲ್ಲದೇ, ಹಣಕಾಸುಗಳು ದುರ್ವ್ಯಯಕ್ಕೆ ಖರ್ಚಾಗಲಿವೆ. ಆರಂಭಿಸಿರುವ ಕಾರ್ಯಗಳಲ್ಲಿ ಮಂದಗತಿಯಲ್ಲದೇ, ಸಾಕಷ್ಟು ನಷ್ಟವನ್ನೂ ಭರಿಸಬೇಕಾದೀತು.ಬುದ್ಧಿ, ಯಶಸ್ಸು, ವಿಧಿ ಈ ಮೂರಕ್ಕೂ, ತದ್ವಿರುದ್ಧ ಗತಿ ಯುಂಟಾಗಲಿದೆ. ಪರರ ಸ್ವತ್ತಿಗೆ ಆಸೆಪಡುವ ಬುದ್ಧಿಯುಂಟಾ ಗಲಿದೆ. ಪ್ರತಿಯೊಂದಕ್ಕೂ ಪರಾಶ್ರಯ ಅನಿವಾರ್ಯವಾಗಿದೆ. ಮತ್ತೊಬ್ಬರಿಗೆ ತೊಂದರೆ ಕೊಡುವುದರಲ್ಲಿ ನಿಷ್ಣಾತರಾಗುವರು. ನೀಚರ ಸಹವಾಸದಲ್ಲಿ ಹಿತ ಕಾಣುವುದಲ್ಲದೇ, ಅವರ ಮಾತುಗಳೇ ಇವರಿಗೆ ವೇದವಾಕ್ಯವಾಗಲಿವೆ. ವೃಥಾ ತಿರುಗಾಟ, ಆರೋಗ್ಯದ ಮೇಲೆ ಅಡ್ಡಪರಿಣಾಮ ಬೀರಲಿದೆ. ವಿದ್ಯಾರ್ಥಿಗಳು ಆಲಸ್ಯವನ್ನು ಮೈಗೂಡಿಸಿಕೊಳ್ಳಬಹುದು. ಸರ್ಕಾರಿ ನೌಕರರು ತಮ್ಮ ಕರ್ತವ್ಯವನ್ನು ಅಲಕ್ಷಿಸಿದರೆ ಮಾಡದ ತಪ್ಪಿಗೆ ಕಠಿಣ ಶಿಕ್ಷೆ ಅನುಭವಿಸಬೇಕಾದೀತು. ಈ ರೀತಿಯಾಗಿ ಅನಿಷ್ಟ ಫಲಗಳೇ ಹೆಚ್ಚಾಗಿ ಕಂಡುಬರುವುದರಿಂದ, ಸಾಕಷ್ಟು ಪುಣ್ಯ ಸಂಪಾದನೆಗೆ ಪ್ರಯತ್ನಿಸಬೇಕು, ದುರ್ಗಾರಾಧನೆ, ವಿಷ್ಣುಸಹಸ್ರನಾಮ ಪಠಣ ಮೊದಲಾದವುಗಳಿಂದ, ಕನಿಷ್ಟ ಅನಿಷ್ಟಗಳುಂಟಾಗಿ ಕಷ್ಟಗಳು ಪರಿಹಾರವಾಗಬಹುದು.

ವಿ.ಸೂ : ಮೇಲ್ಕಂಡ ದ್ವಾದಶ ರಾಶಿಗಳ ಫಲಾಫಲಗಳ ವಿಮರ್ಶೆಯು ಸರ್ವೇಸಾಮಾನ್ಯವಾಗಿದ್ದು, ಅವರವರ ಜಾತಕ ಗಳ ದಶಾಭುಕ್ತಿಗೆ ಅನುಗುಣವಾಗಿ ಬದಲಾಗುವ ಸಂಭವವಿದ್ದು, ನಿಮ್ಮ ವಿಶ್ವಸನೀಯ ಜ್ಯೋತಿಷ್ಕರಲ್ಲಿ ವಿಶೇಷ ಫಲಗಳನ್ನು ಕೇಳಿ ತಿಳಿದುಕೊಳ್ಳಿ.


ಜಯತೀರ್ಥಾಚಾರ್‌ ವಡೇರ್‌
ದಾವಣಗೆರೆ.
94486 66678

 

error: Content is protected !!