ಸಿಗಂಧೂರು-ಕೊಲ್ಲೂರು ನಡುವೆ ದೇಶದ ಎರಡನೇ ಅತಿ ದೊಡ್ಡ ಕೇಬಲ್ ಬ್ರಿಡ್ಜ್ ಕಾಮಗಾರಿ

ಸಿಗಂಧೂರು-ಕೊಲ್ಲೂರು ನಡುವೆ ದೇಶದ ಎರಡನೇ ಅತಿ ದೊಡ್ಡ ಕೇಬಲ್ ಬ್ರಿಡ್ಜ್ ಕಾಮಗಾರಿ - Janathavaniಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಶರಾವತಿ ನದಿ ಹಿನ್ನೀರಿಗೆ (ಲಿಂಗನಮಕ್ಕಿ ಜಲಾಶಯದ ಹಿನ್ನೀರು) ಕೇಬಲ್ ಆಧಾರಿತ ಸೇತುವೆಯನ್ನು ನಿರ್ಮಿಸಲಾಗುತ್ತಿದ್ದು, ಉತ್ತರ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳನ್ನು ಅತಿ ಸಮೀಪದಲ್ಲಿ ಸಂಪರ್ಕಿಸುವ ಸಂಪರ್ಕ ಸೇತುವೆ ಇದಾಗಲಿದೆ.

2.14 ಕಿ.ಮೀ. ಉದ್ದದ ಈ ಸೇತುವೆ 16 ಮೀಟರ್ ಅಗಲವಿದ್ದು, 423 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ಕೇಬಲ್ ಆಧಾರಿತ ಸೇತುವೆ ಟೆಂಡರ್ ನಿಯಮದ ಪ್ರಕಾರ 2023ರ ಜೂನ್ ವೇಳೆಗೆ ಸಂಚಾರಕ್ಕೆ ಸಿದ್ದಗೊಳ್ಳಲಿದೆ.

ಬಿ.ಎಸ್. ಯಡಿಯೂರಪ್ಪನವರು ಮೊದಲ ಬಾರಿಗೆ ಮುಖ್ಯಮಂತ್ರಿಗಳಾದ ಸಂದರ್ಭದಲ್ಲಿ ಈ ಸಂಪರ್ಕ ಸೇತುವೆಗೆ ಬಜೆಟ್‌ನಲ್ಲಿ ಹಣ ಮೀಸಲಿಡಲಾಗಿದ್ದು,  ಕಾರಣಾಂತರಗಳಿಂದ ಕಾರ್ಯರೂಪಕ್ಕೆ ಬರದೆ, 2018ರಲ್ಲಿ ಕೇಂದ್ರ ಸಚಿವ ನಿತಿನ್‌ ಗಡ್ಕರಿ ಅವರಿಂದ ಕಾಮಗಾರಿ ಚಾಲನೆಗೊಂಡಿದ್ದು, ಸಂಸದ ಬಿ.ವೈ. ರಾಘವೇಂದ್ರ, ಶಾಸಕ ಹರತಾಳು ಹಾಲಪ್ಪ ಇವರ ನಿರಂತರ ಪ್ರಯತ್ನದ ಫಲವಾಗಿ ಈ ಸಂಪರ್ಕ ಸೇತುವೆ ಕಾಮಗಾರಿ ಪ್ರಾರಂಭವಾಗಿದೆ ಎಂಬುದು ಸ್ಥಳೀಯರ ಅಭಿಪ್ರಾಯ.

ಶ್ರೀಕ್ಷೇತ್ರ ಸಿಗಂಧೂರು, ಕೊಲ್ಲೂರು ಸೇರಿದಂತೆ ಮತ್ತಿತರೆ ಪ್ರಮುಖ ದೇವಸ್ಥಾನಗಳಿಗೆ ನಿತ್ಯ ತೆರಳುವ ಭಕ್ತರಿಗೆ ಈ ಸಂಪರ್ಕ ಸೇತುವೆ ತುಂಬಾ ಅನುಕೂಲವಾಗಿದೆ. ರಸ್ತೆ ಮೂಲಕ ಹೋಗುವುದಾದರೆ 80 ಕಿ.ಮೀ.  ಕ್ರಮಿಸಿ ಹೋಗಬೇಕಾಗಿದ್ದು, ಲಾಂಚ್ ಇರುವುದರಿಂದ ಪ್ರಯಾಣಿ ಕರಿಗೆ ಅನುಕೂಲವಾಗಿದೆ. ಸೇತುವೆ ನಿರ್ಮಾಣದಿಂದ ವಾರ್ಷಿಕ  ಸುಮಾರು 32 ಕೋಟಿ ರೂ. ಇಂಧನ ಉಳಿತಾ ಯವಾಗಲಿದೆ. ರಸ್ತೆ ಸಂಪರ್ಕ ಇಲ್ಲದೆ ಅಭಿವೃದ್ಧಿಯಿಂದ ವಂಚಿತವಾಗಿದ್ದ ಶರಾವತಿ, ಹೊಳಬಾಗಿಲು, ಸಿಗಂಧೂರು, ತುಮರಿ, ಕಳಸವಲ್ಲಿ, ಕರೂರು ಸೇರಿದಂತೆ ಇನ್ನೂ ಅನೇಕ ಗ್ರಾಮಗಳಿಗೆ ಈಗ ಜೀವಕಳೆ ಬಂದಂತಾಗಿದೆ.

1963 ರಿಂದಲೂ ಈ ಸಂಪರ್ಕ ಸೇತುವೆ  ನಿರ್ಮಾಣಕ್ಕಾಗಿ ನಿರಂತರ ಹೋರಾಟ ಮಾಡುತ್ತಿದ್ದ ಈ ಭಾಗದ ಜನರ ಕನಸು ನನಸಾಗಿದೆ. ಕೇಂದ್ರ ಸರ್ಕಾರದ ಭಾರತ್ ಮಾಲಾ ಯೋಜನೆಯಡಿ ನಿರ್ಮಾಣಗೊಳ್ಳುತ್ತಿರುವ ಈ ಸಂಪರ್ಕ ಸೇತುವೆ 18 ಗೋಪುರಗಳನ್ನು ಒಳಗೊಂಡಿದೆ. ಭಾರತದ 2ನೇ ಅತಿ ದೊಡ್ಡ ಕೇಬಲ್ ಆಧಾರಿತ ಸೇತುವೆ ಎಂಬ ಹೆಗ್ಗಳಿಕೆಗೂ ಪಾತ್ರವಾಗಲಿರುವ ಸಿಗಂಧೂರು ಸಂಪರ್ಕ ಸೇತುವೆ ಮಲೆನಾಡಿನ ಪ್ರಕೃತಿಯ ಸೊಬಗನ್ನು ಮತ್ತಷ್ಟು ಹೆಚ್ಚಿಸಲಿದೆ.


ಜಿಗಳಿ ಪ್ರಕಾಶ್‌
[email protected]

 

error: Content is protected !!