`ಬಾ ಬಾರೇ ಗುಬ್ಬಿಮರಿ, ಕೊಡುವೆನು ಕಡ್ಲೆಪುರಿ ಬಾಯಿ ತುಂಬಾ ಗರಿಗರಿ ತಿನ್ನುತಲಿ ಜಾಣಮರಿ ಬಾ ಬಾ ಬಾ..’, `ಪುರ್ ಪುರ್ ಅಂತ ಹಾರಿಕೊಂಡು ಅತ್ತ ಇತ್ತ ನೋಡಿಕೊಂಡು ಬಾ ಬಾ ಬಾ…’, `ಬಾರಲೆ ಹಕ್ಕಿ, ಬಣ್ಣದ ಹಕ್ಕಿ, ಗೆಳೆಯರು ಆಡಲು ಯಾರೂ ಇಲ್ಲ, ವೇಳೆಯನೆಂತು ಕಳೆಯುವುದೆಲ್ಲ, ಬಾರಲೆ ಹಕ್ಕಿ ಬಣ್ಣದ ಹಕ್ಕಿ’…
ನಾವು ಚಿಕ್ಕವರಿದ್ದಾಗ ನಮ್ಮ ಮನೆಯ ಅಂಗಳದ ತುಂಬಾ ಚಿಲಿಪಿಲಿ ಗುಟ್ಟುತ್ತಾ, ನಲಿಯುತ್ತಾ, ಜಿಗಿಯುತ್ತಾ ಹಾರುವುದನ್ನು ನೋಡಿದ ನಾವೇ ಧನ್ಯ.
ಮನೆಯಲ್ಲಿ ಗೋಡೆಗೆ ಹಾಕಿದ್ದ ಹಿರಿಯರ ದೊಡ್ಡ ದೊಡ್ಡ ಭಾವಚಿತ್ರದ ಹಿಂದೆ, ಗುಬ್ಬಿಗಳು ಗೂಡು ಕಟ್ಟುವ ಪ್ರಕ್ರಿಯೆಯನ್ನು ಪ್ರಾರಂಭ ಮಾಡುತ್ತಿದ್ದವು. ಒಂದೊಂದೇ ಹುಲ್ಲಿನ ಗರಿಕೆಯನ್ನು, ಇತರೇ ಪಕ್ಷಿಗಳ ಪುಚ್ಚವನ್ನು, ನಾರನ್ನು, ಹುಲ್ಲನ್ನು, ಹತ್ತಿಯನ್ನು ತಂದು ಗುಬ್ಬಿ ಸುಂದರವಾದ ಮೆತ್ತನೆಯ ಗೂಡು ಕಟ್ಟುತ್ತಿದ್ದುದನ್ನು ನಾವೆಲ್ಲರೂ ಕಂಡಿದ್ದೇವೆ.
ಗಂಡು, ಹೆಣ್ಣು ಎರಡು ಗುಬ್ಬಿಗಳು ಸೇರಿ ಈ ಗೂಡು ಕಟ್ಟುವ ಕಾಯಕವನ್ನು ಶ್ರದ್ಧೆಯಿಂದ ಮಾಡುತ್ತಿದ್ದವು. ಮನುಷ್ಯನ ಮೂಲಭೂತ ಅವಶ್ಯಕತೆಗಳಲ್ಲಿ ಒಂದು ಬೆಚ್ಚನೆಯ ಮನೆಯಂತೆ, ಗುಬ್ಬಿ ಸಂತತಿಗಳಿಗೂ ಕೂಡ ಒಂದು ಪುಟ್ಟಗೂಡು.
ನಮ್ಮ ತಾಯಂದಿರು ಪುಟ್ಟ-ಪುಟ್ಟ ಮಕ್ಕಳನ್ನು ತಮ್ಮ ಕಂಕುಳಲ್ಲಿ ಎತ್ತಿಕೊಂಡು “ಗುಬ್ಬಿಗೊಂದು ಗುಟುಕು, ಪುಟ್ಟ ಮಗುವಿನ ಬಾಯಿಗೊಂದು ಗುಟುಕು” ಎಂದು ಮಕ್ಕಳಿಗೆ ಊಟ ಮಾಡಿಸುತ್ತಿದ್ದರು. “ಗುಬ್ಬಿ, ಬೆಕ್ಕು, ನಾಯಿ, ಚಂದಮಾಮನನ್ನು ತೋರಿಸಿ ಊಟ ಮಾಡಿಸುತ್ತಿದ್ದ ದಿವಸಗಳು ಈ ಧಾವಂತದ ಬದುಕಿನಲ್ಲಿ “ಅಂಕಲ್, ಆಂಟಿ ಸಂಸ್ಕೃತಿಯಲ್ಲಿ ಚಂದಮಾಮ ಮರೆಯಾಗಿ ಹೋಗಿದ್ದಾನೆ. ಹಾಡುತ್ತಿದ್ದ ಜೋಗುಳದ ಸದ್ದು, ಮೊಬೈಲ್ ಸದ್ದುಗಳಲ್ಲಿ ಅಡಗಿ ಹೋಗಿದೆ. ಜೋಗುಳ ಕೇಳುವ ಮಕ್ಕಳ ಕೈಗೆ ಮೊಬೈಲ್ ಕೊಟ್ಟು ಮಲಗಿಸಬೇಕಾದ ಕಾಲ ಬಂದಿದೆ.!
ಕಟ್ಟಿದ್ದ ಗೂಡಿನಲ್ಲಿ ಗುಬ್ಬಿ ಮೊಟ್ಟೆಯನ್ನಿಡುತ್ತಿದ್ದವು, ಮೊಟ್ಟೆಗೆ ಕಾವು ಕೊಟ್ಟ ಮೇಲೆ ಮಾಂಸದ ಮುದ್ದೆಯಂತಹ ಮರಿಗಳು, ಪಿಳಿ-ಪಿಳಿ ಕಣ್ಣು ಬಿಟ್ಟು ಪ್ರಪಂಚವನ್ನು ನೋಡಲು ಪ್ರಾರಂಭಿಸಿದಾಗ ಅವುಗಳಿಗೆ ತಾಯಿ ಗುಬ್ಬಿ ಗುಟುಕನಿಕ್ಕುತ್ತಿದ್ದವು.
ಕುತೂಹಲದಿಂದ ಪುಟ್ಟ ಪುಟ್ಟ ಮಕ್ಕಳು ಆ ಮರಿಗಳನ್ನು ಮುಟ್ಟಲು ಹೋದರೆ, ಹಿರಿಯರು ಗುಬ್ಬಿ ಮರಿಗಳನ್ನು ಮುಟ್ಟಬೇಡಿ, ಮುಟ್ಟಿದರೆ ಸೊರಗುತ್ತೀರೆಂದು ಹೇಳುತ್ತಾ ಆ ಪುಟ್ಟ ಮರಿಗಳಿಗೆ ಹಿಂಸೆ ಕೊಡಬೇಡಿ..”ಅಹಿಂಸಾ ಪರಮೋಧರ್ಮಃ” ಎಂಬ ಸೂತ್ರವನ್ನು ನಮಗೆಲ್ಲಾ ಹೇಳಿಕೊಡುತ್ತಿದ್ದರು.
ಇತ್ತೀಚಿನ ಈ ಮೊಬೈಲ್ ಟವರ್ಗಳಿಂದ ಹೊರಹೊಮ್ಮುವ ತರಂಗಗಳಿಂದ ಇಡೀ ಗುಬ್ಬಿಯ ಸಂತತಿಯೇ ನಾಶವಾಗುತ್ತಿದೆ..
ಪ್ರಾಣಿಗಳೇ ಗುಣದಲಿ ಮೇಲು, ಮಾನವನದಕಿಂತ ಕೀಳು, ಉಪಕಾರವ ಮಾಡಲಾರ, “ಬದುಕಿದರೆ ಸೈರಿಸಲಾರ”, ಮನುಷ್ಯನ ಅತೀ ಆಸೆಗೆ ನದಿ, ಗುಡ್ಡ, ಬೆಟ್ಟ, ಪಶು ಪಕ್ಷಿ ಪ್ರಾಣಿ ಸಂಕುಲಗಳು ಬಲಿಯಾಗುತ್ತಲಿರುವುದು ದುರಂತ. ಪ್ರಕೃತಿಯ ಮೇಲೆ ಮನುಷ್ಯ ನಡೆಸುತ್ತಿರುವ ದುರಂತದ ಫಲವೇ ಸುನಾಮಿ, ಭೂಕಂಪ, ಚಂಡಮಾರುತ ಇತ್ಯಾದಿ ಹಾಗೂ ಆಹಾರ ಅರಸುತ್ತಾ ಪ್ರಾಣಿಗಳು ಕಾಡು ಬಿಟ್ಟು ನಾಡಿಗೆ ಬರುತ್ತಿರುವುದು.
ಗುಬ್ಬಿಯ ಮೇಲೆ ಅನೇಕ ಗಾದೆ ಮಾತುಗಳು ಉದಾಹರಣೆಗೆ “ಗುಬ್ಬಿ ಎಣ್ಣೆ ಕುಡಿದರೆ, ಬೀಸುವ ಕಲ್ಲು ತೋಯಿಸೀತೆ”, “ಗುಬ್ಬಿಯ ಮೇಲೆ ಬ್ರಹ್ಮಾಸ್ತ್ರವೇ”, “ಹಾರುವ ಗುಬ್ಬಿಯ ಕಾಲಿಗೆ ಗೋಧಿಯ ಹುಲ್ಲು ಕಟ್ಟಿದ ಹಾಗೆ”. ಹಿರಿಯರು ಮಕ್ಕಳೊಂದಿಗೆ ಮಾಡುತ್ತಿದ್ದ “ಕಾಗೆ- ಗುಬ್ಬಿ ಎಂಜಲಿನ ಹಣ್ಣುಗಳ ರುಚಿ ಸವಿದವರೇ ಬಲ್ಲರು ಅದರ ರುಚಿ.
ಹಿಂದೆ ಕೊಡೇಕಲ್ ಬಸವೇಶ್ವರರ ಸಂಪ್ರದಾಯದವರು `ಸುವ್ವೀ ಬಾ ಸಂಗಯ್ಯಾ, ಸುವ್ವಿ ಬಾ ಲಿಂಗಯ್ಯಾ, ಸುವ್ವೀ ಬಾ ಚನ್ನಬಸವಣ್ಣ ಸುವ್ವಿ…’ ಎಂದು ಛತ್ರಿಯನ್ನು ಹಿಡಿದು ಓಣಿ ತುಂಬಾ ಹಾಡುತ್ತಾ, ಕೂಡಲ ಸಂಗಮನಾಥನ ಗುಡಿಯ ಕಳಸದ ಮೇಲೆ ಕುಳಿತು ಗುಬ್ಬಿ ನೀರು ಕುಡಿಯುವ ಕಾಲ ಬರುತೈತೆ ಎಂದಾಗ ನಕ್ಕ ಜನರು, ಇಂದು ಮಳೆಗಾಲದಲ್ಲಿ ಮಂಟಪ ಮುಳುಗಡೆಯಾದಾಗ, ಗುಬ್ಬಿ ನೀರು ಕುಡಿಯುತ್ತಿರುವುದನ್ನು ಕಂಡು, ಬೆಚ್ಚಿ ಬೀಳುತ್ತಿದ್ದಾರೆ.
ಇಂತಹ ಗುಬ್ಬಿಗಳಿಗೆ ಕೇಳಬೇಕಾಗಿದೆ? ಗುಬ್ಬಿಯ ಸಂತತಿಯೇ, ಎಲ್ಲಿ ಮರೆಯಾದಿರಿ, ಏಕೆ ದೂರಾದಿರೀ, ಮನೆಯನು ಮರೆತು ಎಲ್ಲಿಗೆ ಹೋದಿರಿ… ನಮ್ಮ ಮನಗಳ ತೊರೆದು ಎಲ್ಲಿಗೆ ಹಾರಿದಿರಿ ಎಂದು.
ಪ್ರಾಣಿಗಳೇ ಗುಣದಲಿ ಮೇಲು, ಮಾನವನದಕಿಂತ ಕೀಳು, ಉಪಕಾರವ ಮಾಡಲಾರ, “ಬದುಕಿದರೆ ಸೈರಿಸಲಾರ”, ಮನುಷ್ಯನ ಅತೀ ಆಸೆಗೆ ನದಿ, ಗುಡ್ಡ, ಬೆಟ್ಟ, ಪಶು, ಪಕ್ಷಿ, ಪ್ರಾಣಿ ಸಂಕುಲಗಳು ಬಲಿಯಾಗುತ್ತಲಿರುವುದು ದುರಂತ. ಪ್ರಕೃತಿಯ ಮೇಲೆ ಮನುಷ್ಯ ನಡೆಸುತ್ತಿರುವ ದುರಂತದ ಫಲವೇ ಸುನಾಮಿ, ಭೂಕಂಪ, ಚಂಡಮಾರುತ ಇತ್ಯಾದಿ ಹಾಗೂ ಆಹಾರ ಅರಸುತ್ತಾ ಪ್ರಾಣಿಗಳು ಕಾಡು ಬಿಟ್ಟು ನಾಡಿಗೆ ಬರುತ್ತಿರುವುದು.
12ನೇ ಶತಮಾನದಲ್ಲಿಯೇ ಶರಣರು ನುಡಿದಿದ್ದರು “ದಯವಿರಬೇಕು ಸಕಲ ಪ್ರಾಣಿಗಳೆಲ್ಲರಲ್ಲಿ ಎಂದು”Earth has Created for all life, not just for human life” ಪ್ರತಿಯೊಂದು ಜೀವಿಗೂ ಜೀವಿಸುವ ಹಕ್ಕಿದೆ, ಆ ಹಕ್ಕನ್ನು ಕಸಿದುಕೊಂಡರೆ, ಅದರ ಫಲವನ್ನು ಮುಂದೆ ಉಣ್ಣುವವರು ನಾವೇ…
ಎಂ.ಕೆ. ಬಕ್ಕಪ್ಪ, ದಾವಣಗೆರೆ.