ಮೂತ್ರಪಿಂಡಗಳು ತಮ್ಮ ಕಾರ್ಯ ನಿರ್ವಹಿಸಲು ಅಸಮರ್ಥವಾದ ಸ್ಥಿತಿಯನ್ನು `ಮೂತ್ರಪಿಂಡ ವೈಫಲ್ಯ’ ಎನ್ನಲಾಗುತ್ತದೆ. ಮೂತ್ರದ ಮೂಲಕ ವಿಸರ್ಜನೆಗೊಳ್ಳಬೇಕಾದ ಹಾನಿಕಾರಕ ದ್ರವ್ಯಗಳು ರಕ್ತದಲ್ಲಿಯೇ ಉಳಿದು ದೇಹದ ನಾನಾ ಅಂಗಗಳ ಕೆಲಸದ ಮೇಲೆ ದುಷ್ಪರಿಣಾಮ ಬೀರುತ್ತವೆ. ಮೂತ್ರಪಿಂಡಗಳು ಶರೀರದ ಅಗತ್ಯಕ್ಕಿಂತಲೂ ಹೆಚ್ಚಿನ ಸಾಮರ್ಥ್ಯ ಹೊಂದಿರುತ್ತವೆ. ಅವುಗಳ ಕಾರ್ಯಕ್ಷಮತೆಯಲ್ಲಿ ಶೇಕಡ 50ಕ್ಕಿಂತಲೂ ಹೆಚ್ಚು ನಷ್ಟವಾಗುವವರೆಗೆ ಅವು ವಿಫಲವಾಗುತ್ತಿವೆಯೆಂಬುದು ತಿಳಿಯುವುದೇ ಇಲ್ಲ. ಮೂತ್ರಪಿಂಡದ ಕಾರ್ಯವು ಸಹಜ ಸ್ಥಿತಿಗೆ ಹೋಲಿಸಿದರೆ ಶೇಕಡ 5 ಅಥವಾ 10ರ ಮಟ್ಟವನ್ನು ತಲುಪಿದರೆ ಜೀವಕ್ಕೆ ಅಪಾಯವಾಗಬಹುದು. ಸಾಮಾನ್ಯವಾಗಿ ಮೂತ್ರಪಿಂಡ ವೈಫಲ್ಯಕ್ಕೆ ಕಾರಣವಾದ ರೋಗಗಳು ಎರಡೂ ಮೂತ್ರಪಿಂಡಗಳ ಮೇಲೆ ಪ್ರಭಾವ ಬೀರುತ್ತವೆ. ಎರಡೂ ಮೂತ್ರ ಪಿಂಡಗಳು ವಿಫಲವಾದಾಗಲೇ ಮೂತ್ರಪಿಂಡ ವೈಫಲ್ಯ ಎಂದು ಕರೆಯಲಾಗುತ್ತದೆ.
ಜನ-ಸಾಮಾನ್ಯರ ಆರೋಗ್ಯದಲ್ಲಿ ಮೂತ್ರ ಪಿಂಡಗಳ ಪ್ರಾಮುಖ್ಯತೆ, ಅದಕ್ಕೆ ಸಂಬಂಧಿಸಿದ ಕಾಯಿಲೆಗಳನ್ನು ತಡೆಗಟ್ಟುವ ಮಾಹಿತಿ ಬಗ್ಗೆ ಜಾಗೃತಿ ಮೂಡಿಸಲು ವಿಶ್ವದಾದ್ಯಂತ ಪ್ರತಿ ವರ್ಷ ಮಾರ್ಚ್ ಎರಡನೇ ಗುರುವಾರವನ್ನು `ವಿಶ್ವ ಮೂತ್ರಪಿಂಡ ದಿನ’ ವೆಂದು ಆಚರಿಸಲಾಗುತ್ತಿದೆ.
ಮೂತ್ರಪಿಂಡಗಳ ಕೆಲಸದಲ್ಲಿ ನ್ಯೂನತೆ ಹೆಚ್ಚಾದಂತೆ ಶರೀರದ ಬಾವು, ರಕ್ತಹೀನತೆ, ಸುಸ್ತು, ಆಯಾಸ, ರಕ್ತದ ಏರೊತ್ತಡ, ವಾಂತಿ, ಉಬ್ಬಳಿಕೆ, ಹಸಿವು ಕಡಿಮೆಯಾಗುವುದು ಮುಂತಾದ ತೊಂದರೆಗಳು ಕಾಣಿಸಿಕೊಳ್ಳುತ್ತವೆ.
ಮೂತ್ರಪಿಂಡ ವೈಫಲ್ಯದಲ್ಲಿ ಎರಡು ಬಗೆಗಳಿವೆ :
* ತಾತ್ಕಾಲಿಕವಾದ ತೀವ್ರ ರೂಪದ ಮೂತ್ರಪಿಂಡ ವೈಫಲ್ಯ (Acute renal failure) – ಇದು ತಾತ್ಕಾಲಿಕವಾಗಿದ್ದು, ಸ್ವಲ್ಪ ಸಮಯ ಮಾತ್ರ ಇರುತ್ತದೆ. ಕಿಡ್ನಿ ಕೆಲಸ ಕ್ರಮೇಣ ಸಹಜ ಸ್ಥಿತಿಗೆ ಬರುತ್ತದೆ. ನಂತರ ಡಯಾಲಿಸಿಸ್ ಅವಶ್ಯಕತೆ ಇರುವುದಿಲ್ಲ.
* ದೀರ್ಘಕಾಲದ ಅಥವಾ ಶಾಶ್ವತ ಮೂತ್ರಪಿಂಡ ವೈಫಲ್ಯ (Chronic renal failure) – ನಿಧಾನವಾಗಿ ಕೆಲವೊಂದು ವರ್ಷಗಳಲ್ಲಿ ಎರಡೂ ಮೂತ್ರ ಪಿಂಡಗಳು ನಿಷ್ಕ್ರಿಯವಾಗುತ್ತವೆ. ಕಿಡ್ನಿ ಕೆಲಸ ಸಹಜ ಸ್ಥಿತಿಗೆ ಬರುವ ಸಾಧ್ಯತೆ ಶೂನ್ಯ.
ಪ್ರಾರಂಭದ ಹಂತದಲ್ಲಿ ಔಷಧಿಗಳ ಸಹಾಯದಿಂದ ಕಾಯಿಲೆಯನ್ನು ಹತೋಟಿಯಲ್ಲಿಡಬಹುದು ಮತ್ತು ರೋಗದ ಬಾಧೆ ಅಷ್ಟೊಂದು ಕಾಡುವುದಿಲ್ಲ. ಹಲವಾರು ತಿಂಗಳು ಅಥವಾ ವರ್ಷಗಳ ನಂತರ ಕಿಡ್ನಿಯ ಕೆಲಸ ಕ್ರಮೇಣ ಶೇ.10 ಕ್ಕೂ ಕಡಿಮೆಯಾಗುತ್ತದೆ. ಈ ಅಂತಿಮ ಹಂತದಲ್ಲಿ ಆಜೀವ ಪರ್ಯಂತ ಡಯಾಲಿಸಿಸ್ (ರಕ್ತ ಶುದ್ಧೀಕರಣ) ಅಥವಾ ಹೊಸ ಮೂತ್ರಪಿಂಡ ಕಸಿ ಮಾಡುವುದು (Kidney Transplantation) ಒಂದೇ ಮಾರ್ಗ. ಎರಡೂ ಚಿಕಿತ್ಸಾ ಮಾರ್ಗಗಳು ಬಲು ದುಬಾರಿ. ಡಯಾಲಿಸಿಸ್‍ನಲ್ಲಿ ರಕ್ತವನ್ನು ಕೃತಕ ಫಿಲ್ಟರ್ ಸಹಾಯದಿಂದ ಶುದ್ಧೀಕರಿಸಲಾಗುತ್ತದೆ. ಪ್ರತಿ 3 ಅಥವಾ 4 ದಿನಗಳಿಗೊಮ್ಮೆ ಡಯಾಲಿಸಿಸ್ ಮಾಡಿಸಿಕೊಳ್ಳಬೇಕಾಗುತ್ತದೆ. ಮೂತ್ರಪಿಂಡ ಕಸಿ ಕೂಡ ಬಹಳ ದುಬಾರಿ ಚಿಕಿತ್ಸೆ. ಕಸಿ ಮಾಡಿದ ನಂತರವೂ ವ್ಯಕ್ತಿ ಜೀವನ ಪರ್ಯಂತ ಕೆಲವು ಔಷಧಗಳನ್ನು ಸೇವಿಸುತ್ತಲೇ ಇರಬೇಕು. ಜತೆಗೆ ಕಸಿ ಮಾಡಿದ ಮೂತ್ರಪಿಂಡ ಕಾಲ ಕ್ರಮೇಣ (ಹಲವು ವರ್ಷಗಳ ನಂತರ) ಕೆಲಸ ಮಾಡದಿರುವ ಸಾಧ್ಯತೆ ಇರುತ್ತದೆ. ಹಾಗಾಗಿ ಸಮಸ್ಯೆ ಬರದಂತೆ ತಡೆಗಟ್ಟುವುದು ಅಥವಾ ಆರಂಭಿಕ ಹಂತದ ಚಿಕಿತ್ಸೆ ಹೆಚ್ಚು ಸೂಕ್ತ.
ಮೂತ್ರಪಿಂಡ ಅಥವಾ ನಾಳದಲ್ಲಿ ಕಲ್ಲುಗಳಿ ದ್ದರೆ ಸೂಕ್ತ ಚಿಕಿತ್ಸೆ ಪಡೆಯಬೇಕು. ಕಲ್ಲುಗಳು ಮೂತ್ರ ಹರಿಯುವ ದಾರಿಯಲ್ಲಿ ತಡೆ ಉಂಟು ಮಾಡುವುದರಿಂದ, ಸೋಂಕು ಉಂಟಾಗುವ ಸಾಧ್ಯತೆ ಹೆಚ್ಚಾಗುತ್ತದೆ. ಸೋಂಕು ಪದೇ-ಪದೇ ಪುನರಾವರ್ತನೆಯಾದರೆ, ಕಿಡ್ನಿಯ ಕಾರ್ಯಕ್ಷಮತೆ ಕುಂಠಿತಗೊಳ್ಳುತ್ತದೆ. ಪಾಲಿಸಿಸ್ಟಿಕ್ ಕಿಡ್ನಿಗಳಿರುವ ವ್ಯಕ್ತಿ ಮತ್ತು ಅವರ ಮಕ್ಕಳು ಮೂತ್ರದ ಮತ್ತು ರಕ್ತದ ಕ್ರಮಬದ್ಧ ತಪಾಸಣೆ ಮಾಡಿಸಿಕೊಳ್ಳಬೇಕು. ಪ್ರೊಸ್ಟೇಟ್‍ಗ್ಲ್ಯಾಂಡ್ ಗಾತ್ರದಲ್ಲಿ ದೊಡ್ಡದಾಗಿದ್ದರೆ ಸೂಕ್ತ ಚಿಕಿತ್ಸೆ ಪಡೆಯಬೇಕು.
ಡಾ. ಪ್ರಮೋದ್ ಜಿ.ಆರ್.
ಕಿಡ್ನಿ ರೋಗ ತಜ್ಞರು, ಎಸ್.ಎಸ್. ವೈದ್ಯಕೀಯ ಮಹಾವಿದ್ಯಾಲಯ
ದಾವಣಗೆರೆ.