`ವಿಶೇಷ’ ಚೇತನೆ ಛಲಗಾತಿ ಶ್ಯಾಮಲೆ…

ಅಂಗವೈಕಲ್ಯ ಹೊತ್ತು ಹುಟ್ಟಿದ ಶ್ಯಾಮಲಾ ಜೀವನ ಕೋಮಲವಾಗಿರದೆ, ಕಲ್ಲು ಮುಳ್ಳಿನ ಹಾದಿಯಾಗಿತ್ತು. ಅದನ್ನೆಲ್ಲಾ ನಿವಾರಿಸಿಕೊಂಡು, ತಮ್ಮದೇ ಆದ ತಮ್ಮ ಬದುಕು ಕಟ್ಟಿಕೊಂಡರು. ಶ್ಯಾಮಲಾ ನಮಗೆ ಇಷ್ಟವಾಗುವುದು ವಿಶೇಷ ಚೇತನರೆಂಬ ಕಾರಣಕ್ಕಾಗಿ ಅಲ್ಲ. ವಿಶೇಷ ಚೈತನ್ಯ ಹೊಂದಿ ಸ್ವಾವಲಂಬಿ ಬದುಕಿಗೆ ಅಡಿ ಇಟ್ಟ ಕಾರಣಕ್ಕೆ. 

ಆಕೆ ಅಂಗವೈಕಲ್ಯ ಹೊತ್ತೇ ಹುಟ್ಟಿದವಳು. ಪತಿ ಸಹ ಬಾಲ್ಯದಲ್ಲಿ ಪೋಲಿಯೋ ಪೀಡಿತನಾಗಿ ಎರಡೂ ಕಾಲುಗಳ ಸ್ವಾಧೀನ ಕಳೆದುಕೊಂಡವನು. ಆದರೆ ಇವರ ಅಂಗವೈಕಲ್ಯ ಸ್ವಾವಲಂಬಿ ಜೀವನಕ್ಕೆ ಅಡ್ಡಿಯಾಗಲಿಲ್ಲ…

ಇದೇನಿದು ಯಾವುದೋ ಸಿನಿಮಾದ ಕಥೆ ಅಂದುಕೊಳ್ಳಬೇಡಿ… ತನ್ನ ವಿಕಲಾಂಗತೆಯನ್ನು ಮೆಟ್ಟಿ ನಿಂತು ತನ್ನ ಕಾಲ ಮೇಲೆ ತಾನು ನಿಂತುಕೊಂಡ ಸ್ವಾವಲಂಬಿ ಮಹಿಳೆಯ ಜೀವನವಿದು. 

§ಆತ್ಮವಿಶ್ವಾಸಕ್ಕಿಂತ ಮತ್ತೊಂದು ಶಕ್ತಿ ಇಲ್ಲ¬ ಎಂಬುದು ಸ್ವಾಮಿ ವಿವೇಕಾನಂದರ ಸ್ಫೂರ್ತಿ ತುಂಬುವ ಸಾಲುಗಳು. ಸ್ವಾವಲಂಬಿಯಾಗುವ ಛಲವಿದ್ದರೆ, ಅಂಗವೈಕಲ್ಯ  ಅಡ್ಡಿ ಬಾರದು ಎಂಬುದಕ್ಕೆ ವಿಶೇಷ ಚೇತನರಾದ ಪಿ. ಶ್ಯಾಮಲಾ ನಿದರ್ಶನ ಎನ್ನಬಹುದು. ಶ್ಯಾಮಲಾ ಇಂದು ತನ್ನದೇ ಆದ ಜೆರಾಕ್ಸ್ ಅಂಗಡಿ ತೆರೆದು, ಪತಿಯೊಂದಿಗೆ ಒಂದೇ ಕಡೆ ಕೆಲಸ ಮಾಡುತ್ತಾ ತಮ್ಮ ಬದುಕು ಕಟ್ಟಿಕೊಂಡಿದ್ದಾರೆ. 

ಶ್ಯಾಮಲಾ ಅಂಗವೈಕಲ್ಯ ಹೊತ್ತೇ ಹುಟ್ಟಿದವರು. ಬಲಗೈ ಇಲ್ಲದ ಶ್ಯಾಮಲಾ ಬದುಕು ಕೋಮಲವಾಗೇನು ಇರಲಿಲ್ಲ. ಅಷ್ಟಕ್ಕೇ ಮನೆಯಲ್ಲಿ ಕೂರದ ಶ್ಯಾಮಲಾ ಎಂ.ಎ. ಬಿಇಡಿ ಶಿಕ್ಷಣ ಮುಗಿಸಿದರು. ಶಿರಸಿ ಸಿದ್ಧಾಪುರದವರಾದ ಶ್ಯಾಮಲಾ, ಓದಿನ ನಂತರ ವಾಟರ್ ಸಪ್ಲೇ ಡಿಪಾರ್ಟ್‌ಮೆಂಟ್‌ನಲ್ಲಿ  ತಾಲ್ಲೂಕು ಸಂಯೋಜಕರಾಗಿ ಕೆಲಸ ಮಾಡಿದರು.

ವಿಕಲಚೇತನರಾದ ಶ್ಯಾಮಲಾಗೆ ಮದುವೆ ಕನಸಿನ ಮಾತಾಗಿದ್ದ ಸಂದರ್ಭದಲ್ಲಿ ಲಿಂಗಾಯತ್ ಮ್ಯಾಟ್ರಿಮೋನಿಯ ಮೂಲಕ ಹರಿಹರ ತಾಲ್ಲೂಕಿನ ಕುಣೆಬೆಳಕೆರೆ ಗ್ರಾಮದ ವಿಕಲಚೇತನ ಎಂ.ಎನ್. ರವಿ ಬಾಳ ಸಂಗಾತಿಯಾದರು. ರವಿ ಅವರು ಬೆಂಗಳೂರಿನ ಕೆಎಸ್‌ಆರ್‌ಟಿಸಿಯಲ್ಲಿ ಆನ್‌ಲೈನ್ ಬುಕ್ಕಿಂಗ್ ಕಾರ್ಯ ನಿರ್ವಹಿಸುತ್ತಿದ್ದರು. ಶ್ಯಾಮಲಾ ಮದುವೆ ನಂತರ ಯಶವಂತಪುರದಲ್ಲಿರುವ ಕಮರ್ಷಿಯಲ್ ಟ್ಯಾಕ್ಸ್ ಆಫೀಸಿನಲ್ಲಿ ಡಾಟಾ ಎಂಟ್ರಿ ಆಪರೇಟರ್ ಆಗಿ ಸೇರಿಕೊಂಡರು. ಮಗಳು ವರ್ಷಾ ಹುಟ್ಟಿದ ಬಳಿಕ ಕೆಲಸ ಬಿಟ್ಟು ಮಗುವಿನ ಪೋಷಣೆಗೆ ಆದ್ಯತೆ ನೀಡಿದರು.

ಲಾಕ್‌ಡೌನ್ ತಂದ ಸಂಕಷ್ಟ: ಹೇಗೋ ಜೀವನ ಸಾಗಿಸುತ್ತಿದ್ದ ದಂಪತಿಗಳ ಪಾಲಿಗೆ ಕೋವಿಡ್ ಲಾಕ್‌ಡೌನ್ ಬರ ಸಿಡಿಲಿನಂತೆ ಬಂದೆರಗಿ, ಅವರ ಜೀವನವನ್ನೇ ಅಸ್ತವ್ಯಸ್ತ ಮಾಡಿತು. ಬೆಂಗಳೂರು ತೊರೆದು ದಾವಣಗೆರೆಗೆ ಬಂದ   ಶ್ಯಾಮಲಾ ಸಂಸಾರ ಎರಡು ತಿಂಗಳು ಮನೆಯಲ್ಲೇ ಕೆಲಸವಿಲ್ಲದೆ ಕಳೆಯಿತು.

ಇಬ್ಬರೂ ವಿಕಲಾಂಗರಾಗಿರುವುದರಿಂದ ಯಾವುದೇ ಕೆಲಸಗಳನ್ನು ಮಾಡಲು ಸಾಧ್ಯವಿಲ್ಲದ ಪರಿಸ್ಥಿತಿ ಅವರದು. ಎಲ್ಲೆಡೆ ಅಲೆದಾಡಿದರೂ ಕೆಲಸವಿಲ್ಲ ಎಂಬ ಮಾತುಗಳು ಅಪ್ಪಳಿಸಿ, ಹೇಗಪ್ಪಾ ಜೀವನ ಸಾಗಿಸುವುದು ಎಂದು ಒದ್ದಾಡುತ್ತಿದ್ದ ವೇಳೆಯಲ್ಲಿ ದೃಢ ಮನಸ್ಸು ಮಾಡಿದ ಶ್ಯಾಮಲಾಗೆ ಬೇರೆಯವರ ಬಳಿ ಕೆಲಸ ಕೇಳುವುದಕ್ಕಿಂತ ತಾನು ಮತ್ತು  ತನ್ನ ಗಂಡ ಇಬ್ಬರೂ ಸೇರಿ ದುಡಿಯುವಂತಹ ಸ್ವಉದ್ಯೋಗವನ್ನು ಮಾಡಬೇಕು ಅಂದುಕೊಂಡಾಗ ಹುಟ್ಟಿದ್ದೇ ವರ್ಷಾ ಎಂಟರ್‌ಪ್ರೈಸಸ್ ವಿಶೇಷ ಚೇತನರ ಜೆರಾಕ್ಸ್ ಅಂಗಡಿ.

ಸಾಲ-ಸೋಲ ಮಾಡಿ ಸುಮಾರು ಒಂದೂವರೆ ಲಕ್ಷ ರೂಪಾಯಿ ಖರ್ಚು ಮಾಡಿ ಶೆಡ್ ಅಂಗಡಿ ಇಟ್ಟು ಜೆರಾಕ್ಸ್ ಯಂತ್ರ ಪ್ರತಿಷ್ಠಾಪಿಸಿದರು. ಜಿಲ್ಲಾಧಿಕಾರಿ ಗಳಿಂದ ಇದಕ್ಕೆ ಪರವಾನಿಗೆ ಸಹ ದೊರೆಯಿತು. ಆದರೆ ಶೆಡ್‌ಗೆ ವಿದ್ಯುತ್ ನೀಡಲಾಗುವುದಿಲ್ಲ ಎಂದು ಬೆಸ್ಕಾಂ ಪಟ್ಟು ಹಿಡಿಯಿತು. ಕೊನೆಗೆ ವಿಕಲಚೇತನ ದಂಪತಿಯ ಪರಿಸ್ಥಿತಿ ಅವಲೋಕಿಸಿದ ಅಧಿಕಾರಿಗಳು ವಿದ್ಯುತ್ ನೀಡಲು ಒಪ್ಪಿಗೆ ಇತ್ತರು. 

ಎಸ್‌ಓಜಿ ಕಾಲೋನಿಯಲ್ಲಿ ಮನೆ ಮಾಡಿರುವ ದಂಪತಿಗಳು ತಮ್ಮ ತ್ರಿಚಕ್ರ ವಾಹನದಲ್ಲಿ ಬೆಳಿಗ್ಗೆ 8 ಗಂಟೆಗೆ ಯುಬಿಡಿಟಿ ಕಾಲೇಜು ಬಳಿ ಇರುವ ತಮ್ಮ ಅಂಗಡಿಗೆ ಬಂದರೆ, ಸಂಜೆ 7 ಗಂಟೆವರೆಗೂ ಕೆಲಸದಲ್ಲಿ ತೊಡಗಿಕೊಳ್ಳುತ್ತಾರೆ. ಕೆಲಸದ ಅಭದ್ರತೆ ಕಾಡುವ ಪ್ರಸಂಗ ಈಗ ಅವರಿಗಿಲ್ಲ. ತಮ್ಮ ಬದುಕು ಹೀಗಾಯಿತಲ್ಲ ಎಂದು ಕೊರಗುವ ಬದಲು, ಶ್ರಮಪಟ್ಟು ಸ್ವಾವಲಂಬಿ ಬದುಕಿಗೆ ಅಡಿ ಇಟ್ಟ ಶ್ಯಾಮಲಾರ ದಿಟ್ಟತನ ಮೆಚ್ಚುಗೆಯಾಗುತ್ತದೆ. ಲಾಕ್‌ಡೌನ್ ಇವರ ಪಾಲಿಗೆ ವಿಲನ್ ಆದರೂ, ಒಂದು ರೀತಿ ಸ್ವಉದ್ಯೋಗ  ನೀಡಿದ ವರದಾತ ಎನ್ನಬಹುದು.

ಸರ್ಕಾರದ ಸೌಲಭ್ಯ ದೊರಕಿಲ್ಲ: ನಮಗೆ ಸರ್ಕಾರದ ಸೌಲಭ್ಯಗಳೇನೂ ದೊರಕಿಲ್ಲ. ಅಂಗಡಿಗೆ ಈಗಾಗಲೇ ಒಂದೂವರೆ ಲಕ್ಷ ಬಂಡವಾಳ ಹಾಕಲಾಗಿದೆ. ಅಕ್ಕ-ಪಕ್ಕ ವಿದ್ಯಾಸಂಸ್ಥೆಗಳು, ಕಾಲೇಜುಗಳಿದ್ದು, ವಿಕಲಚೇತನರೆಂದು ಪ್ರೀತ್ಯಾದರದೊಂದಿಗೆ ನಮ್ಮಲ್ಲಿಯೇ ಜೆರಾಕ್ಸ್ ಮಾಡಿಸಿಕೊಂಡು ಹೋಗುತ್ತಾರೆ. ಹೆಚ್ಚಿನ ಕೆಲಸಕ್ಕಾಗಿ ದೊಡ್ಡ ಮಿಷಿನ್‌ನ ಅಗತ್ಯವಿದೆ ಎನ್ನುತ್ತಾರೆ ಶ್ಯಾಮಲಾ.

ನನಗೆ ಯಾರೂ ದಿಕ್ಕಿಲ್ಲ, ನಮ್ಮಿಂದ ಏನನ್ನೂ ಮಾಡಲು ಸಾಧ್ಯವಿಲ್ಲ ಎಂದು ಕೊರಗಿ ಕೂರುವವರಿಗೆ ಪ್ರಯತ್ನ ಪಟ್ಟರೆ ಎಲ್ಲವೂ ಸಾಧ್ಯ ಎನ್ನುವುದಕ್ಕೆ ಶ್ಯಾಮಲಾ ಸ್ಫೂರ್ತಿಯಾಗು ತ್ತಾರೆ. ಅವರ ಹಠ, ಶ್ರಮ, ಛಲದ ಹೆಜ್ಜೆಗಳು ಇತರೆ ಮಹಿಳೆಯರಿಗೆ ಮಾರ್ಗ ತೋರಲಿ ಅಲ್ಲವೇ….


ದೇವಿಕ ಸುನೀಲ್
[email protected]

 

error: Content is protected !!