ತಮ್ಮದಲ್ಲದ ತಪ್ಪಿನಿಂದಾಗಿ ನಮ್ಮ ಜನ ಬಲಿ…!

ಈ ಬಾರಿ ಭಾರಿಸಲು ತಟ್ಟೆ, ಜಾಗಟೆಗಳು ಸದ್ದು ಮಾಡುತ್ತಿಲ್ಲ, ಮುಂಬತ್ತಿಗಳು ಉರಿಯುತ್ತಿಲ್ಲ, ಚಪ್ಪಾಳೆ ಕೇಳುತ್ತಿಲ್ಲ, ಅದರ ಬದಲು ಪ್ರಾಣ ವಾಯುವಿನ ಕೊರತೆಯಿಂದಾಗಿ ಸತ್ತ ಸಾವಿರಾರು ಜೀವಗಳ ದೇಹಗಳ ಚಿತೆಗಳು ಮೌನವಾಗಿ ಉರಿಯುತ್ತಿವೆ. 

ಕಳೆದ ವರ್ಷ ವಿದೇಶದಿಂದ ಬಂದವರಿಂದ, ಅವರಿಂದ-ಇವರಿಂದ ಕೊರೊನಾ ಬಂತು…,ಇಲ್ಲದೆ ಹೋಗಿದ್ದರೆ ಭಾರತಕ್ಕೆ ಕೊರೊನಾ ಬರುತ್ತಿರಲಿಲ್ಲ ಎಂದೆಲ್ಲಾ ಹೇಳಿದೆವು. ಉದ್ದೇಶ ಪೂರ್ವಕವಾಗಿ ಪ್ರಭುತ್ವದ ನಿರ್ಲಕ್ಷ್ಯವನ್ನು ಮರೆಮಾಚಿದೆವು. ನಮಸ್ತೆ ಟ್ರಂಪ್ ಕಾರ್ಯಕ್ರಮ ನಡೆಸಿದೆವು. ನಾವು ಆ ಬಗ್ಗೆ ಮಾತನಾಡಲಿಲ್ಲ. ಮಹಾರಾಷ್ಟ್ರದಲ್ಲಿ, ಗುಜರಾತಿನಲ್ಲಿ  ಸರ್ಕಾರ ರಚಿಸಲು ನಮ್ಮ ಪ್ರಭುತ್ವ ತಲೆಕೆಡಿಸಿಕೊಂಡಿತ್ತು. ನಾವು ಮಾತನಾಡಲಿಲ್ಲ. ಈ ಅಧಿಕಾರದ ಆಟ ಮುಗಿದ ಬಳಿಕ ರಾತ್ರೋರಾತ್ರಿ ಲಾಕ್ ಡೌನ್ ಮಾಡಿದೆವು. ಈ ಬಾರಿ ಬಾರಿಸಲು ತಟ್ಟೆ, ಜಾಗಟೆಗಳು ಸದ್ದು ಮಾಡುತ್ತಿಲ್ಲ. ಮುಂಬತ್ತಿಗಳು ಉರಿಯುತ್ತಿಲ್ಲ, ಚಪ್ಪಾಳೆ ಕೇಳುತ್ತಿಲ್ಲ. ಅದರ ಬದಲು ಪ್ರಾಣ ವಾಯುವಿನ ಕೊರತೆಯಿಂದಾಗಿ ಸತ್ತ ಸಾವಿರಾರು ಜೀವಗಳ ದೇಹಗಳ ಚಿತೆಗಳು ಮೌನವಾಗಿ ಉರಿಯುತ್ತಿವೆ. 

ಪಶ್ಚಿಮ ಬಂಗಾಳ ಸೇರಿದಂತೆ ಐದು ರಾಜ್ಯ ಗಳಲ್ಲಿ ಚುನಾವಣೆ ನಡೆದಿದೆ, ನಡೆಯುತ್ತಿದೆ. ಲಕ್ಷ ಲಕ್ಷ ಸಂಖ್ಯೆಯಲ್ಲಿ ಜನ ಸೇರುತಿದ್ದಾರೆ. ಚುನಾವಣಾ ಆಯೋಗ ಇದೆಲ್ಲಕ್ಕೂ ಕಣ್ಣುಮುಚ್ಚಿಕೊಂಡು ಅನುಮತಿ ನೀಡಿದೆ. ಕುಂಭ ಮೇಳ ನಡೆಯುತ್ತಿದೆ. ಹತ್ತಾರು ಲಕ್ಷ ಜನ ಸೇರುತ್ತಾರೆ. ಹೀಗೆ ದೇಶದ ಪ್ರತಿಷ್ಠಿತ ದೇವರುಗಳ ಜಾತ್ರೆ, ತೇರುಗಳು, ಉತ್ಸವಗಳು ಮದುವೆ ಮುಂತಾದ ಮಂಗಳ ಕಾರ್ಯಗಳು ಎಗ್ಗಿಲ್ಲದೆ ನಡೆಯುತ್ತವೆ. ಸಂಕಷ್ಟದ ಸ್ಥಿತಿಯಲ್ಲೂ ತನ್ನ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಅವಕಾಶ ಮಾಡಿಕೊಟ್ಟು, ತಮ್ಮ ಬೇಳೆ ಬೆಂದ ಮೇಲೆ ಕೊರೊನಾ ಎರಡನೇ ಅಲೆ ಬರಲು ಜನರೇ ಕಾರಣ ಎನ್ನುತ್ತಿದೆ ಪ್ರಭುತ್ವ, ದೇಶದ ಜನ ಮಾತನಾಡುತಿದ್ದಾರೆ ಸರ್ಕಾರ ನಡೆಸಿದ ಚುನಾವಣೆಗಳೇ ಕೊರೊನಾ ಎರಡನೇ ಅಲೆ ಹೆಚ್ಚಾಗಲು ಕಾರಣ ಎಂದು. ಚೆನ್ನೈ ಮತ್ತು ಕೊಲ್ಕೊತ್ತಾ ಹೈಕೋರ್ಟುಗಳು ಚುನಾವಣಾ ಆಯೋಗವನ್ನು ತರಾಟೆಗೆ ತೆಗೆದು ಕೊಂಡು, ಆಯೋಗ ಯಾರ ಆಣತಿಯಂತೆ ಕೆಲಸ ಮಾಡುತ್ತಿದೆ ಎಂದು ಬೇಸರ ವ್ಯಕ್ತಪಡಿಸಿವೆ, ನೇರವಾಗಿ ಚುನಾವಣಾ ಆಯೋಗವೇ ಹೊಣೆ ಎಂದು ಹೇಳಿವೆ. ಸರ್ಕಾರ ಮಾತ್ರ ಇದನ್ನು ಜನರ ತಲೆಗೆ ಕಟ್ಟಲು ಮುಂದಾಗಿದೆ.

ಜನವರಿ 16, 2021 ರಂದು ಪ್ರಧಾನಿಯವರು ದೇಶವನ್ನುದ್ದೇಶಿಸಿ ಮಾತನಾಡುತ್ತಾ `ದೇಶ ಕೊರೊನಾ ದಿಂದ ಮುಕ್ತವಾಗಿದೆ. ನಾವು ಕೊರಾನಾವನ್ನು ನಮ್ಮ ಆತ್ಮ ಬಲದಿಂದ ಗೆದ್ದಿದ್ದೇವೆ’ ಎಂದರು. 2021 ಏಪ್ರಿಲ್ 8 ರಂದು ಪ್ರಧಾನಿ ಮಾತನಾಡಿ, ನಾವು ಕೊರೊನಾ ವಿರುದ್ದ ಹೊರಾಡುವ ಲಸಿಕೆಯನ್ನು ಸಾಕಷ್ಟು ತಯಾರಿಸಿದ್ದೇವೆ, ನಮಗೆ ಒಂದು ವರ್ಷದ ಅನುಭವಿದೆ, ನಾವು ಈಗ ಕೊರೊನಾಕ್ಕೆ ಹೆದರ ಬೇಕಿಲ್ಲ ಎಂದು ಜನರನ್ನು ನಂಬಿಸಿದ್ದರು. ಆದರೆ ಈಗ ಪರಿಸ್ಥಿತಿ ಏನಾಗಿದೆ? ಆಸ್ಪತ್ರೆಗಲ್ಲಿ ಬೆಡ್‍ಗಳಿಲ್ಲ, ಲಸಿಕೆಯ ಕೊರತೆಯಾಗಿರುವುದು ದೇಶದ ಜನಕ್ಕೆಲ್ಲ ಗೊತ್ತಾಗಿದೆ, ಆಂಬ್ಯುಲೆನ್ಸ್‍ಗಳಿಲ್ಲ, ಆಮ್ಲಜನಕದ ಕೊರತೆ ಎಷ್ಟಾಗಿದೆ ಎಂದು ಮಾಧ್ಯಮಗಳಲ್ಲಿ ಹೆಣದ ರಾಶಿಗಳನ್ನು ನೋಡಿದಾಗ ನಮಗೆ ಗೊತ್ತಾಗಿದೆ. ಆಮ್ಲಜನಕದ ಕೊರತೆಯಿಂದಾಗಿ ತಮ್ಮವರೆದುರಿಗೆ ವಿಲಿವಿಲಿ ಒದ್ದಾಡಿ ಪ್ರಾಣಬಿಟ್ಟಿದ್ದನ್ನ ಜನ ತುಂಬಿದ ಕಂಬನಿಗಳಿಂದಲೇ ನೋಡಿ ಕೊರಗಿದ್ದಾರೆ. ಕೊನೆಗೆ ಸತ್ತ ಮೇಲೆ ಸ್ಮಶಾನದಲ್ಲಿ ಹೆಣ ಹೂಳಲು ಸ್ಥಳವಿಲ್ಲ. ಎಷ್ಟೋ ಕಡೆ ಸ್ಮಶಾನಗಳೇ ಇಲ್ಲ. ಜನ ಬದುಕಿದ್ದಾಗಲೂ ನೆಮ್ಮದಿಯ ಬದುಕು ನೀಡಲು ಸೋತು ಹೋಗಿರುವ ಪ್ರಭುತ್ವ, ಸತ್ತ ಮೇಲಾದರೂ ಗೌರವದಿಂದ ಅಂತ್ಯಸಂಸ್ಕಾರ ಮಾಡಲು ಅವಕಾಶ ಕಲ್ಪಿಸಿಕೊಡುತ್ತಿಲ್ಲ. 

ಒಂದು ಮಾಹಿತಿಯನ್ನು ಇಲ್ಲಿ ಹಂಚಿಕೊಳ್ಳುತ್ತೇನೆ, 2020 ರ ಏಪ್ರಿಲ್‍ನಿಂದ 2021 ರ ಜನವರಿಯತನಕ ಭಾರತ ವಿದೇಶಗಳಿಗೆ 9 ಸಾವಿರ ಮೆಟ್ರಿಕ್ ಟನ್ ಆಮ್ಲಜನಕವನ್ನು ರಫ್ತು ಮಾಡಿದೆ. ಅದಕ್ಕಿಂತ ಮೊದಲು ಅವರೇ ಹೇಳುವ ಹಾಗೆ ವರ್ಷಕ್ಕೆ 400 ರಿಂದ 500 ಮೆಟ್ರಿಕ್ ಟನ್ ಆಮ್ಲಜನಕವನ್ನು ರಫ್ತು ಮಾಡಲಾಗಿದೆ ಯಂತೆ. ಲಸಿಕೆ ತಯಾರಾದ ಪ್ರಾರಂಭದಲ್ಲಿ ವಿದೇಶಗಳಿಗೆ ಲಸಿಕೆಯನ್ನು ರಫ್ತು ಮಾಡಲಾಯಿತು. ಇದನ್ನೂ ಸರ್ಕಾರವೇ ಹೇಳಿ ಕೊಂಡಿತು. ಈಗ ನಮಗೆ ಲಸಿಕೆಯೂ ಇಲ್ಲ, ಆಮ್ಲಜನಕವೂ ಇಲ್ಲ. 2020 ರ ಅಕ್ಟೋಬರ್‍ನಲ್ಲಿ 286 ಕೋಟಿ ಹಣವನ್ನು ಬಿಡುಗಡೆ ಮಾಡಿ ಆರೋಗ್ಯ ಇಲಾಖೆಯ 162 ಆಸ್ಪತ್ರೆಗಳಲ್ಲಿ ಆಮ್ಲಜನಕವನ್ನು ತಯಾರು ಮಾಡಿ ನೇರವಾಗಿ ರೋಗಿಗಳ ಮಂಚಕ್ಕೆ ಆಮ್ಲಜನಕ ಸರಬರಾಜು ಮಾಡಬೇಕೆಂದು  ಹೇಳಿತು. ಇಲ್ಲಿಯ ತನಕ ಈ ಕೆಲಸ ಪ್ರಾರಂಭವಾಗಿರುವುದು ಕೇವಲ 32 ಘಟಕಗಳಲ್ಲಿ ಮಾತ್ರ. ಇಂದು ಅವುಗಳೆಲ್ಲವೂ ಕೆಲಸ ಪ್ರಾರಂಭಿಸಿದ್ದರೆ, ಕೇವಲ 286 ಕೋಟಿಗಳಲ್ಲಿ ದೇಶದ ಜನರಿಗೆಲ್ಲ ಆಮ್ಲಜನಕ ದೊರೆಯುತಿತ್ತು, ಯಾರೂ ಆಮ್ಲಜನಕದ ಕೊರತೆಯಿಂದ ಪ್ರಾಣ ಕಳೆದುಕೊಳ್ಳುತ್ತಿರಲಿಲ್ಲ. ಟಾಟಾ ಕಂಪನಿಯವರು ಮಾನವೀಯತೆ ಮೆರೆದು ತಮ್ಮ ಕಂಪನಿಗಳಿಂದ ಆಮ್ಲಜನಕ ಸರಬರಾಜು ಮಾಡಿದರು. ಆದರೆ ಇದು ಅದಾನಿ, ಅಂಬಾನಿಗಳಿಗೆ ಸಾಧ್ಯವಾಗಲಿಲ್ಲ.

ವಿಶ್ವ ಆರೋಗ್ಯ ಸಂಸ್ಥೆ 2020 ರ ಅಕ್ಟೋಬರ್‍ನಲ್ಲಿಯೇ ಎಚ್ಚರಿಕೆ ನೀಡಿ ಕೋವಿಡ್‍ನ ಎರಡನೆ ಅಲೆಯ ಬಗ್ಗೆ ಮಾಹಿತಿ ನೀಡಿದೆ. ಅದರ ಭೀಕರತೆಯನ್ನೂ ತಿಳಿಸಿದೆ. ನಮ್ಮ ಸರ್ಕಾರ ಅವುಗಳ ಬಗ್ಗೆ ನಿರ್ಲಕ್ಷ್ಯ ತೋರಿರುವುದರ ಪರಿಣಾಮ ಇಂದು ದೇಶದಲ್ಲಿ ಜನ ಬೀದಿಯ ಹೆಣಗಳಾಗ ಬೇಕಾಯಿತು. ಲಸಿಕೆ ತಯಾರಿಸುವ ವಿಷಯವನ್ನು ನೋಡಿದರೆ, ಜನರ ಸಾವಿನಲ್ಲೂ ಖಾಸಗಿಯವರಿಗೆ ಲಾಭ ಮಾಡಿಕೊಡುವ ರಾಜಕೀಯವೇ ನಡೆಯುತ್ತಿದೆ. ಭಾರತದಲ್ಲಿ ಲಸಿಕೆ ತಯಾರು ಮಾಡಲು ಸಾಮರ್ಥ್ಯವಿರುವ, ಅನುಭವವಿರುವ, ಸರ್ಕಾರಿ ಸ್ವಾಮ್ಯದ ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರೀಸರ್ಚ್ ಸೆಂಟರ್, ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿ, ಸೇರಿದಂತೆ ಅನೇಕ ಪಬ್ಲಿಕ್ ಸೆಕ್ಟರ್ ಕಂಪನಿಗಳಿದ್ದಾಗಲೂ, ಎರಡು ಖಾಸಗಿ ಕಂಪನಿಗೆ ಲಸಿಕೆ ತಯಾರು ಮಾಡಲು ಅವಕಾಶ ಮಾಡಿಕೊಡಲಾಗಿದೆ. ಭಾರತ್ ಭಯೋಟೆಕ್ ಕಂಪನಿಗೆ ಕೋವ್ಯಾಕ್ಸಿನ್ ತಯಾರು ಮಾಡಲು, ಸೀರಂ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಕಂಪನಿಗೆ ಕೋವಿಶಿಲ್ಡ್ ತಯಾರಿಸಲು ಅವಕಾಶ ಮಾಡಿಕೊಟ್ಟಿದೆ. ಸೀರಂ ಇನ್‌ಸ್ಟಿಟ್ಯೂಟ್‌ನ ಮಾಲೀಕ ಅದರ್ ಪೂನಂ ವಾಲಾ ದೇಶದ ಮೂರನೇ ದೊಡ್ಡ ಶ್ರೀಮಂತ. 

ಈಗ ಈ ಕಂಪನಿಗಳು ಸರ್ಕಾರದ ಬೇಡಿಕೆಯಷ್ಟು ವ್ಯಾಕ್ಸಿನ್ ತಯಾರಿಸಲು ಆಗುತ್ತಿಲ್ಲ. ಬೇಡಿಕೆಯ ಅಗತ್ಯಕ್ಕೆ ತಕ್ಕಂತೆ ಉತ್ಪಾದಿಸಲು ಘಟಕಗಳನ್ನು ವಿಸ್ತರಿಸಿಕೊಳ್ಳಬೇಕು. ಅದಕ್ಕೆ ನಮ್ಮಲ್ಲಿ ಹಣವಿಲ್ಲ ಎಂದವು. ಆಗ ಕೇಂದ್ರ ಸರ್ಕಾರ 4500 ಕೋಟಿ ರೂ.ಗಳನ್ನು ನೀಡಿತು, ಭಾರತ್ ಭಯೋಟೆಕ್‍ಗೆ 1500 ಕೋಟಿ, ಸೀರಂಗೆ 3000 ಕೋಟಿ ರೂಗಳನ್ನು ನೀಡಿತು. ಈಗ ಅವುಗಳ ಉತ್ಪಾದನಾ ಸಾಮರ್ಥ್ಯ ಎಷ್ಟಿದೆ ಎಂದರೆ ಸೀರಂ ಕಂಪನಿ 7 ರಿಂದ 10 ಕೋಟಿ ವ್ಯಾಕ್ಸಿನ್ ತಯಾರಿಸಿದರೆ, ಭಾರತ್ ಭಯೋಟೆಕ್ 90 ಲಕ್ಷ ವ್ಯಾಕ್ಸಿನ್‌ಗಳನ್ನು ತಯಾರಿಸುತ್ತಿವೆ.  ಹಾಲಿ ಇರುವ ಬೇಡಿಕೆ 30 ಕೋಟಿ, ಭಾರತ್ ಭಯೋಟೆಕ್ ಕಂಪನಿ ಅಮೇರಿಕಾದ ಮಲಂದಾಗಿಲ್ ಸಂಸ್ಥೆ ಯಿಂದ, ಸೀರಂ ಕಂಪನಿ ಇಂಗ್ಲೆಂಡಿನ ಅಸ್ಟ್ರಾಜನೆಕಾ ಕಂಪನಿಯಿಂದ ಲಸಿಕೆ ತಯಾರಿಸುವ ವೈರಾಣುವನ್ನು ಪಡೆದುಕೊಳ್ಳುತ್ತಿವೆ. ಇದನ್ನು ಭಾರತವೇ ತಯಾರಿ ಸುತ್ತದೆಂದು ಸರ್ಕಾರ ಬೊಗಳೆ ಬಿಡುತ್ತಿದೆ. ಇದು ಕೂಡಾ ಯುರೋಪ್‍ನಲ್ಲಿ ಮೂರನೇ ಲ್ಯಾಬೋ ರೇಟರಿ ಪರೀಕ್ಷೆ ನಡೆಯುವುದಕ್ಕಿಂತ ಮೊದಲೆ ವ್ಯಾಕ್ಸಿನ್ ತಯಾರಿಸಿದ್ದನ್ನು ನಮಗೆ ನೀಡಲಾಗಿದೆ. 

ವಿಶ್ವ ಆರೋಗ್ಯ ಸಂಸ್ಥೆಯ ವರದಿಯ ಪ್ರಕಾರ ಶೇ.60 ರಷ್ಟು ಜನರಿಗೆ ವ್ಯಾಕ್ಸಿನ್ ನೀಡಿದಾಗ ಹಾರ್ಡ್ ಇಮ್ಯೂನಿಟಿ ಬರುತ್ತದೆ. ಆಗ ಈ ಸೋಂಕನ್ನು ನಿಯಂತ್ರಿಸಬಹುದೆಂದು. ಇದರ ಪ್ರಕಾರ ನಾವು ನಮ್ಮ ದೇಶದ 85 ಕೋಟಿ ಜನರಿಗೆ ವ್ಯಾಕ್ಸಿನ್ ಹಾಕಬೇಕು. ಇಷ್ಟು ಜನರಿಗೆ ಹಾಕಲು ನಮಗೆ ಬೇಕಾಗುವ ವ್ಯಾಕ್ಸಿನ್ ಪ್ರಮಾಣ 175 ಕೋಟಿ (ಶೇ 6 ರಷ್ಟು ನಷ್ಟವನ್ನು ಸೇರಿ). ಈ ಪ್ರಮಾಣದ ವ್ಯಾಕ್ಸಿನ್‍ ತಯಾರಿಸಲು ಈ ಎರಡು ಕಂಪನಿಗಳಿಗೆ ಕನಿಷ್ಠ 14 ತಿಂಗಳುಗಳ ಕಾಲ ಬೇಕು. ಸರ್ಕಾರದಿಂದ 4500 ಕೋಟಿ ಸಹಾಯ ಧನ ಪಡೆದಿರುವ ಈ ಕಂಪನಿಗಳು, ವ್ಯಾಕ್ಸಿನ್‍ನನ್ನು ಕೇಂದ್ರ ಸರ್ಕಾರಕ್ಕೆ 156 ರಿಂದ 200 ರೂ. ಗೆ, ರಾಜ್ಯ ಸರ್ಕಾರಗಳಿಗೆ 400 ರೂ.ಗೆ, ಖಾಸಗಿಯವರಿಗೆ 600 ರೂ.ಗೆ ಮಾರುತ್ತಿದ್ದಾರೆ. ಪತ್ರಿಕಾ ಗೋಷ್ಠಿಯೊಂದರಲ್ಲಿ ಸೀರಂ ಕಂಪನಿಯ ಮಾಲೀಕ ಅದರ್ ಪೂನಾವಾಲಾರವರು ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸುತ್ತಾ 150 ರೂ.ಗೆ ಮಾರಿದರೆ ಲಾಭವಾಗುತ್ತದೆ ಎಂದಿದ್ದಾರೆ. ಹಾಗಾದರೆ ಹೆಚ್ಚಿನ ಲಾಭಕ್ಕೆ ಏಕೆ ಮಾರುತ್ತೀರಿ ಎಂದು ಮರು ಪ್ರಶ್ನೆ ಹಾಕಿದಾಗ ಆತನ ಉತ್ತರ ಹೀಗಿತ್ತು.  ಜಗತ್ತಿನ ಬೇರೆ ದೇಶಗಳು 800 ರಿಂದ  1000 ರೂಗೆ ಮಾರುತಿದ್ದಾರೆ. ಅದು ಸೂಪರ್ ಪ್ರಾಫಿಟ್. ನಾವೂ ಕೂಡಾ ಸೂಪರ್ ಪ್ರಾಫಿಟ್ ಮಾಡಬೇಕು ಎಂದಿದ್ದಾರೆ. ಸಾವಿನಲ್ಲೂ ಸುಲಿಗೆ ಮಾಡುವ ಇಂಥವರಿಗೆ ನಮ್ಮ ಸರ್ಕಾರಗಳು ಜನ ಸಾಯುತ್ತಿರುವಾಗಲೂ ಸಹಾಯ ಧನ ನೀಡುತ್ತವೆ ಎಂದರೆ ಇವರಿಗೆ ದೇಶದ ಜನತೆಯ ಪ್ರಾಣ, ಬದುಕಿನ ಬಗ್ಗೆ ಎಷ್ಟು ಕಾಳಜಿ ಇರಬೇಕು? 

ವಿದೇಶಗಳಲ್ಲಿ ಅತ್ಯಂತ ಪರಿಣಾಮಕಾರಿಯಾದ ಲಸಿಕೆಗಳೆಂದರೆ (ವಿಜ್ಞಾನಿಗಳು ಶಿಫಾರಸ್ಸು ಮಾಡಿ ರುವುದು) ಮಾರ್ಡನ್, ಪೈಜರ್, ಜಾನ್ ಸನ್ ಅಂಡ್ ಜಾನ್ ಸನ್, ಸ್ಪುತ್ನಿಕ್  ಇವು ಯಾವುದನ್ನು ಈ ಕಂಪನಿಗಳು ಪಡೆದು ಕೊಂಡಿಲ್ಲ. ಪ್ರಾರಂಭದಲ್ಲಿ ಲಸಿಕೆ ತಯಾರಾದಾಗ ದೂರ ದೃಷ್ಟಿ ಇಲ್ಲದ ಸರ್ಕಾರ ಬೇರೆ ದೇಶಗಳಿಗೆ ಲಸಿಕೆಯನ್ನು ರಫ್ತು ಮಾಡಿತು. ಇದು ತನ್ನ ಭುಜವನ್ನು ತಾನು ತಟ್ಟಿಕೊಳ್ಳಲು, ಜನರನ್ನು ನಂಬಿಸಿ ಮೋಸ ಮಾಡುವ ಕೆಲಸವಾಗಿತ್ತು. ಈಗ ಅದರ ಕೊರತೆ ಎದುರಾದಾಗ ರಷ್ಯಾದಿಂದ 1.5 ಕೋಟಿ ಸ್ಪುತ್ನಿಕ್ ವೈರಸ್‍ನಿಂದ ತಯಾರಿಸಿದ ಲಸಿಕೆಯನ್ನು  ಆಮದು ಮಾಡಿಕೊಂಡಿದೆ. ಭಾರತ ದಲ್ಲಿ ಸಾರ್ವಜನಿಕ ಕ್ಷೇತ್ರದ ಔಷಧಿ ತಯಾರಿಸುವ ಅನುಭವಿ ಕಂಪನಿಗಳಿದ್ದರೂ, ವಿಜ್ಞಾನಿಗಳು ಶಿಫಾ ರಸ್ಸು ಮಾಡಿದ ಲಸಿಕೆಗಳಿದ್ದವು,  ಇವೆಲ್ಲವನ್ನೂ ಬಿಟ್ಟು ಖಾಸಗಿ ಕಂಪನಿಯವರ ಬೆನ್ನು ಬಿದ್ದಿದ್ದು ಏಕೆ? ಇದಕ್ಕೆ ಉತ್ತರ ಹೇಳಬೇಕಿಲ್ಲ. ಇಷ್ಟಕ್ಕೆ ತೃಪ್ತಿಯಾಗದ ಸರ್ಕಾರ ಲಸಿಕೆಯನ್ನು ಖಾಸಗಿಯವರಿಗೆ ಖರೀದಿ ಸಲು ಮುಕ್ತ ಅವಕಾಶ ಮಾಡಿ ಆದೇಶ ಹೊರಡಿಸಿದೆ. ಇನ್ನು ಮುಂದೆ ಖಾಸಗಿಯವರು ಅಗತ್ಯಕ್ಕಿಂತ ಹೆಚ್ಚಿನ ದನ್ನು ದಾಸ್ತಾನು ಮಾಡಿಕೊಂಡು ಕಾಳಸಂತೆಯಲ್ಲಿ ಕೈಗೆಟುಕದ ದರಕ್ಕೆ ಮಾರಾಟ ಮಾಡಲು ಸುಲಭವಾದ ಅವಕಾಶಕ್ಕೆ ಬಾಗಿಲು ತೆರೆದಿಟ್ಟಿದೆ. 

ಕೇಂದ್ರ ಸರ್ಕಾರದ ಈ ಕ್ರಮವನ್ನು ಕರ್ನಾಟಕ, ಚನ್ನೈ. ಉತ್ತರಪ್ರದೇಶ, ದೆಹಲಿ ಹೈಕೋರ್ಟ್‌ಗಳು ತರಾಟೆಗೆ ತೆಗೆದುಕೊಂಡಿವೆ. ಸರ್ಕಾರ ವಿಶ್ವಸಂಸ್ಥೆ ಮುಂಚಿತವಾಗಿ ಎರಡನೇ ಅಲೆಯ ಮಾಹಿತಿಯನ್ನು ನೀಡಿದಾಗಲೂ, ಜನರ ಆರೋಗ್ಯವನ್ನು, ಬದುಕನ್ನು ಗಮನಿಸದೆ, ಚುನಾವಣೆಯಲ್ಲಿ ಮಗ್ನವಾಗಿತ್ತು ಎಂದಿದೆ. ಹೀಗಿದ್ದೂ ಇದು ಏನೂ ಅಲ್ಲವೆಂಬಂತೆ ಮುಖ ಒರೆಸಿಕೊಂಡಿವೆ ಸರ್ಕಾರಗಳು.  ಚುನಾವಣೆಯಲ್ಲಿ ಮತ ನೀಡಲು ಜನ ಬೇಕಾದರೆ ಹೊರತು,  ಮತ ನೀಡುವ ಜನ ಸಾಯುತ್ತಿರುವುದು ಕಣ್ಣಿಗೆ ಕಾಣಲಿಲ್ಲ. ಅವರ ಬದುಕು ಬೀದಿಗೆ ಬರುತ್ತಿರುವುದು ಕಾಣಲಿಲ್ಲ. ಜನರ ರಕ್ತಸಿಕ್ತ ಬದುಕಿನ ಮೇಲೆ, ಸತ್ತು ಕರಕಲಾದ  ಅವರ ಸಮಾಧಿಯ ಮೇಲೆ ರಾಜ್ಯ ಆಳುವ ತವಕನಾ ಎಂದು ದೇಶದ ಜನ ಹಿಡಿ ಶಾಪ ಹಾಕುತಿದ್ದಾರೆ.


ಎಸ್.ಪಿ.ಮೂಲೆಮನೆ
ಕುಕ್ಕುವಾಡ.
[email protected]

error: Content is protected !!