ಹಿರಿಯ ಜೀವಿಗಳಿಗೆ ಕ್ವಾರಂಟೈನ್ ರೀತಿ ಸಂರಕ್ಷಣೆ, ವೃದ್ಧಾಶ್ರಮಕ್ಕೆ ಹೊರಗಿನಿಂದ ಬಂದವರಿಗೆ ನೋ ಎಂಟ್ರಿ,
ಪ್ರೀತಿ ಪಾತ್ರರನ್ನೂ ಮಾತನಾಡಿಸಲಾಗದ ಸ್ಥಿತಿಯಲ್ಲಿ ಹಿರಿಯ ಜೀವಗಳು
ದಾವಣಗೆರೆ : ಕೊರೊನಾ ಮಹಾಮಾರಿಯಿಂದ ಹಿರಿಯ ನಾಗರಿಕರನ್ನು ರಕ್ಷಿಸುವುದು ಸವಾಲಿನ ಕೆಲಸ. ಅದರಲ್ಲೂ ವಿವಿಧ ಕಾರಣಗಳಿಂದಾಗಿ ವೃದ್ಧಾಶ್ರಮಗಳಿಗೆ ಬಂದ ಹಿರಿಯ ಜೀವಿಗಳನ್ನು ರಕ್ಷಿಸುವ ಹೊಣೆ ಸುಲಭದ ಮಾತಲ್ಲ.
ಸದ್ಯದ ದಿನಗಳಲ್ಲಿ ಆಶ್ರಮದಲ್ಲಿನ ವೃದ್ಧರನ್ನು ಕ್ವಾರಂಟೈನ್ ರೀತಿಯಲ್ಲಿ ಸಂರಕ್ಷಿಸಲಾಗುತ್ತಿದೆ. ಹೀಗಾಗಿ ಆಶ್ರಮದಲ್ಲಿನ ಹಿರಿಯರನ್ನು ನೋಡಲು ಆಗಾಗ ಬಂದು ಹೋಗುವ ಬಂಧು ಬಾಂಧವರನ್ನು ವೃದ್ಧಾಶ್ರಮದ ಸಿಬ್ಬಂದಿಗಳು ವೃದ್ಧರ ಬಳಿ ವಿಡುತ್ತಿಲ್ಲ. ಜೊತೆಗೆ ಸಾರ್ವಜನಿಕ ಸಾರಿಗೆಯೂ ಇಲ್ಲ. ಕಾರಣ, ಸಂಬಂಧಿಕರು, ಬಂಧು-ಬಾಂಧ ವರು ವೃದ್ಧಾಶ್ರಮಗಳ ಕಡೆಗೆ ಬರುವುದೂ ಕಡಿಮೆಯಾಗಿಬಿಟ್ಟಿದೆ. ಪ್ರೀತಿ ಪಾತ್ರರನ್ನೂ ಮಾತನಾಡಿಸ ಲಾಗದ ಸ್ಥಿತಿಯಲ್ಲಿ ಹಿರಿಯ ಜೀವಗಳು ನಿಟ್ಟುಸಿರುಬಿಡುತ್ತಿವೆ.
ನೌಕರರಿಂದ, ಸಂದರ್ಶಕ ರಿಂದ, ಅತಿಥಿಗಳಿಂದ ವೃದ್ಧಾಶ್ರಮ ದಲ್ಲಿ ಇರುವ ಹಿರಿಯ ನಾಗರಿಕರಿಗೆ ಸೋಂಕು ತಗುಲುವ ಆತಂಕ ಇದ್ದೇ ಇದೆ. ಹೀಗಾಗಿ ಬಹು ಎಚ್ಚರಿಕೆ ಅಗತ್ಯವಾಗಿದೆ. ತೀರಾ ಅನಿವಾರ್ಯ ಸಂದರ್ಭ ಹೊರತುಪಡಿಸಿದರೆ ಮಿಕ್ಕ ಯಾವ ಸಂದರ್ಭದಲ್ಲೂ ಹೊರಗಿನವರನ್ನು ಒಳಗೆ ಬಿಡುತ್ತಿಲ್ಲ. ಒಳಗೆ ಬರುವ ಅತಿಥಿಗಳು ತಮ್ಮ ಕೈಗಳನ್ನು ತೊಳೆದುಕೊಂಡು ಬರಬೇಕು, ಕಡ್ಡಾಯವಾಗಿ ಮಾಸ್ಕ್ ಧರಿಸಬೇಕೆಂಬ ನಿಯಮಗಳನ್ನು ಈಗಾಗಲೇ ಹಲವಾರು ವೃದ್ಧಾಶ್ರಮಗಳಲ್ಲಿ ಮಾಡಲಾಗಿದೆ.
ಸದ್ಯದ ಮಟ್ಟಿಗೆ ಕೆಲವು ವೃದ್ಧಾಶ್ರಮಗಳಲ್ಲಿ ವೈದ್ಯರು ಹಾಗೂ ನರ್ಸ್‌ಗಳ ಸೇವೆಯೂ ಕಷ್ಟ ಸಾಧ್ಯ. ಹೀಗಾಗಿ, ರೋಗಗಳು ಬರದಂತೆ ತಡೆಯುವುದೇ ಒಳ್ಳೆಯದು ಎಂಬ ಸೂತ್ರಕ್ಕೆ ವೃದ್ಧಾಶ್ರಮಗಳು ಮುಂದಾಗಿವೆ. ಈ ಮೂಲಕ, ಜೀವನದ ಸಂಧ್ಯಾಕಾಲದಲ್ಲಿ ಇರುವ ಹಿರಿ ಜೀವಗಳಿಗೂ ಕೊರೊನಾ ಕಂಟಕವಾಗಿ ಪರಿಣಮಿಸಿದೆ.
ನಾವು ನಡೆಸುವ ವೃದ್ಧಾಶ್ರಮದಲ್ಲಿ ಸದ್ಯ 15 ಜನರಿದ್ದಾರೆ. ಕೊರೊನಾ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಸಲುವಾಗಿ ಹೊಸಬರಿಗೆ ಒಳ ಬಿಡುತ್ತಿಲ್ಲ. ಬೆಳಿಗ್ಗೆ 6 ರಿಂದ 10ರವರೆಗೆ ಅಗತ್ಯ ವಸ್ತುಗಳ ಖರೀದಿಗೆ ಅನುಕೂಲ ಮಾಡಿರುವುದರಿಂದ ಅಷ್ಟಾಗಿ ತೊಂದರೆಯಾಗಿಲ್ಲ.
ಶಾಂತಿನಾಥ್
ಅಧ್ಯಕ್ಷರು, ಶ್ರೀಮಾತಾ ಟ್ರಸ್ಟ್, ಶಾಸ್ತ್ರಿಹಳ್ಳಿ.
ವೃದ್ಧಾಶ್ರಮಗಳಲ್ಲಿನ ಹಿರಿಯ ನಾಗರಿಕರಿಗೆ ಕೋವಿಡ್ ಲಸಿಕೆ ಕೊಡಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಈಗಾಗಲೇ ಹಲವು ಹಿರಿಯ ನಾಗರಿಕರು ಮೊದಲ ಹಂತದಲ್ಲಿ ಲಸಿಕೆ ಪಡೆದಿದ್ದಾರೆ. 2ನೇ ಹಂತದ ಲಸಿಕೆ ನೀಡಬೇಕಿದೆ.
ಜಿ.ಎಸ್. ಶಶಿಧರ್, ಉಪ ನಿರ್ದೇಶಕರು,
ವಿಕಲಚೇತನರ ಹಾಗೂ ಹಿರಿಯ
ನಾಗರಿಕರ ಸಬಲೀಕರಣ ಇಲಾಖೆ
ನಾವು ದೈಹಿಕವಾಗಿ ದುರ್ಬಲರಾದ, ಹಾಸಿಗೆ ಹಿಡಿದ ವೃದ್ದರನ್ನು ಮಾತ್ರ ನೋಡಿಕೊಳ್ಳುತ್ತಿದ್ದೇವೆ. ಸದ್ಯ 22 ಜನರಿದ್ದಾರೆ. ಕೊರೊನಾ ಕರ್ಫ್ಯೂ ಇರುವುದರಿಂದ ದಿನಸಿ, ಅಗತ್ಯ ವಸ್ತುಗಳನ್ನು ತರಲು ತುಸು ಕಷ್ಟವಾಗುತ್ತಿದೆ. ಇಲ್ಲಿನ ಹಿರಿಯರು ದೈಹಿಕವಾಗಿ ದುರ್ಬಲರಾಗಿರುವುದರಿಂದ ಇಲ್ಲಿಗೇ ಬಂದು ಲಸಿಕೆ ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದೇವೆ. ಆದರೆ ಸದ್ಯ ಲಸಿಕೆ ಕೊರತೆ ಇರುವುದರಿಂದ ಸಾಧ್ಯವಾಗಿಲ್ಲ.
ವೆಂಕಟೇಶ್, ಸಂಸ್ಥಾಪಕರು,
ಜ್ಯೋತಿ ನಿರಂತರ ಸೇವಾ ಚಾರಿಟಬಲ್
ಟ್ರಸ್ಟ್, ನಿಟುವಳ್ಳಿ, ದಾವಣಗೆರೆ.
ಸಾರ್ವಜನಿಕ ಸಾರಿಗೆ ಇಲ್ಲದ ಕಾರಣ ವೃದ್ಧಾಶ್ರಮದಲ್ಲಿ ನೌಕರರೂ ಕಡಿಮೆಯಾಗಿದ್ದಾರೆ. ವೃದ್ಧರ ಆರೋಗ್ಯ ಕಾಪಾಡುವ ಹೊಣೆಗಾರಿಕೆ ಭಾರೀ ಕಷ್ಟಕರವಾಗಿ ಪರಿಣಮಿಸಿದೆ. ವೃದ್ಧಾಶ್ರಮಗಳಲ್ಲಿ ಸ್ವಚ್ಛತೆ ಕಾಪಾಡುವುದು, ಅಡುಗೆ, ಅಗತ್ಯ ವಸ್ತುಗಳ ಸರಬರಾಜು ಸೇರಿದಂತೆ ಹಲವು ಸಮಸ್ಯೆಗಳು ಈ ಹಿಂದೆ ಲಾಕ್‌ಡೌನ್ ಸಮಯದಲ್ಲೂ ಉದ್ಭವಿಸಿದ್ದವು. ಇದೀಗ ಮತ್ತೆ ಮರುಕಳಿಸತೊಡಗಿವೆ.
ಕರ್ಫ್ಯೂ ಹಿನ್ನೆಲೆಯಲ್ಲಿ ವೃದ್ಧಾಶ್ರಮಗಳ ನಿರ್ವಹಣಾ ವೆಚ್ಚ ಕೂಡಾ ಗಗನಕ್ಕೇರಿದೆ. ಸರಬರಾಜುದಾರರು ಬೆಲೆ ಏರಿಕೆ ಮಾಡಿದ್ದಾರೆ. ಅಕ್ಕಿ, ಸಕ್ಕರೆ, ತರಕಾರಿ ಹೀಗೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದೆ. ವೃದ್ಧಾಶ್ರಮಕ್ಕೆ ಬಂದು ತಮ್ಮ ಹುಟ್ಟುಹಬ್ಬ ಸೇರಿದಂತೆ ಹಲವು ವಾರ್ಷಿಕೋತ್ಸವ ಆಚರಿಸಿಕೊಳ್ಳುವವರೇ ಹೆಚ್ಚು. ಇದೀಗ ಅವರೂ ಇಲ್ಲವಾಗಿದ್ದಾರೆ.
ಸರ್ಕಾರದ ಅನುದಾನದ ಪಡೆಯುವುದು ಜಿಲ್ಲೆಯಲ್ಲಿ ಬೆರಳೆಣಿಕೆಯಷ್ಟು ವೃದ್ದಾಶ್ರಮಗಳು ಮಾತ್ರ. ಆದರೆ ಹೆಚ್ಚಿನ ಆಶ್ರಮಗಳು ಸಂಘ-ಸಂಸ್ಥೆಗಳು ಹಾಗೂ ದಾನಿಗಳ ದೇಣಿಯಿಂದಲೇ ನಡೆಯುತ್ತದೆ. ಇದೀಗ ಅತಿಥಿಗಳು, ದೇಣಿಗೆ ನೀಡುವವರು ಕಡಿಮೆ ಆಗಿರುವ ಕಾರಣ, ವೃದ್ಧಾಶ್ರಮಗಳೂ ಆರ್ಥಿಕ ಕುಸಿತಕ್ಕೆ ಸಿಲುಕಿವೆ.
ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಿಂದ ಅನುದಾನ ಪಡೆಯುವ ವೃದ್ಧಾಶ್ರಮಗಳಾದ ದೊಡ್ಡಬಾತಿಯ ಮೈತ್ರಿ ಅಸೋಸಿಯೇಷನ್ಸ್, ಮಾಯಕೊಂಡದ ವಿವೇಕಾನಂದ ವೃದ್ಧಾಶ್ರಮ, ಗುತ್ತೂರು ಕಾಲೋನಿಯ ವೃದ್ಧಾಶ್ರಮ, ಹಾಗೂ ದಾವಣಗೆರೆಯಲ್ಲಿನ ಒಂದು ವೃದ್ಧಾಶ್ರಮದಲ್ಲಿ ಪ್ರಸ್ತುತ 74 ವೃದ್ಧರು, 69 ವೃದ್ದೆಯರು ಸೇರಿ 143 ಜನರಿದ್ದು, ಈ ಪೈಕಿ 64 ಜನರಿಗೆ ಮಾತ್ರ ಲಸಿಕೆ ನೀಡಲಾಗಿದೆ.
ಕೆ.ಎನ್. ಮಲ್ಲಿಕಾರ್ಜುನ್
9964930983
[email protected]