ಬೆಂಗಳೂರಿನಲ್ಲಿ ಸುಮಾರು 128ಕ್ಕೂ ಅಧಿಕ ಕೆರೆಗಳಿವೆ. ಬೆಂಗಳೂರು ಬೃಹತ್ ನಗರ ಪ್ರದೇಶವಾದ್ದರಿಂದ ಹೂಳು, ಫ್ಯಾಕ್ಟರಿಗಳ ತ್ಯಾಜ್ಯ ವಸ್ತುಗಳು, ಕಟ್ಟಡಗಳಿಂದ ಹೊರಬರುವ ನೀರು, ಜಲ ಕಳೆ ಇತ್ಯಾದಿಗಳಿಂದ ಕೆರೆಗಳು ಸರ್ವನಾಶವಾಗುತ್ತಿವೆ. ಈ ನಿಟ್ಟಿನಲ್ಲಿ ಕೆರೆಯ ನಿರ್ವಹಣೆ ಬಹಳ ಮುಖ್ಯ. ನಗರದಲ್ಲಿರುವ ಬಹುತೇಕ ಕೆರೆಗಳು ಜಲ ಕಳೆ ಗಿಡಗಳಿಂದ ನಾಶವಾಗುತ್ತಿರುವುದು ವಿಷಾದನೀಯ. ಹೀಗೆ ಕಳೆ ಬೆಳೆದು ಕೆರೆಗಳು ನಾಶವಾಗುತ್ತಿರುವುದರಿಂದ, ಕೆರೆಗಳಲ್ಲಿ ಮೀನುಗಾರಿಕೆ ಕೃಷಿ ಮಾಡುವವರಿಗೆ ತುಂಬಾ ತೊಡಕುಗಳು ಉಂಟಾಗಿವೆ. ಕೆರೆಗಳನ್ನು ಗುತ್ತಿಗೆಗೆ ಪಡೆದುಕೊಂಡವರು ಕಳೆ ಗಿಡಗಳ ನಿಯಂತ್ರಣಕ್ಕೆ ಅಧಿಕ ಹಣವನ್ನು ವಿನಿಯೋಗಿಸುತ್ತಿದ್ದಾರೆ. ಬೆಂಗಳೂರಿನ ಹೆಬ್ಬಾಳದ ಕೆರೆಯು ಇದಕ್ಕೆ ಹೊರತೇನಲ್ಲ.
ಕಳೆದ ವರ್ಷ ಕೊರೊನಾ ಮಹಾಮಾರಿಯಿಂದ ಸರ್ಕಾರ ವಿಧಿಸಿದ್ದ ಲಾಕ್‌ಡೌನ್, ಹೋಮ್ ಕ್ವಾರಂಟೈನ್‌ನಿಂದಾಗಿ ಬೆಂಗಳೂರಿನಲ್ಲಿರುವ ಹೆಬ್ಬಾಳದ ಕೆರೆಯ ಗುತ್ತಿಗೆದಾರರು ಕೆರೆಯ ಬಗ್ಗೆ ಹೆಚ್ಚಿನ ಗಮನ ಹರಿಸಲಾಗಿಲ್ಲ. ಹಾಗಾಗಿ ಒಂದು ತಿಂಗಳ ಹಿಂದೆ ನೂರು ಎಕರೆ ಪ್ರದೇಶವುಳ್ಳ ಹೆಬ್ಬಾಳದ ಕೆರೆಯಲ್ಲಿ 80 ಎಕರೆ ಬರೀ ಕಳೆಗಳಿಂದ ಆವರಿಸಿತ್ತು.
ಕೆರೆಯಲ್ಲಿ ಮೀನುಗಾರಿಕೆ ಕೃಷಿಯನ್ನು ಮಾಡುವುದು ಕಷ್ಟಸಾಧ್ಯವಾಗಿತ್ತು. ಇದರಿಂದ ಮೀನುಗಾರರು ಕಂಗಾಲಾಗಿದ್ದರು, ಮೀನುಗಾರರ ಸಹಕಾರ ಸಂಘದ ಸದಸ್ಯರಾದ ಪಾಪಣ್ಣ, ಆರೋಗ್ಯ ಸ್ವಾಮಿ, ಜೋಸೆಫ್, ಗೋವಿಂದ ರಾಜು ಮತ್ತು ಲೌರ್ಡ್ ಸ್ವಾಮಿ ಇವರು ಕೆರೆಯಲ್ಲಿನ ಕಳೆ ತೆಗೆಯಲು ಒಂದು ಯಂತ್ರವನ್ನು ಸಿದ್ಧಪಡಿಸಲು ಯೋಚಿಸುತ್ತಾರೆ. ಏಕೆಂದರೆ ಯಂತ್ರದ ಸಹಾಯವಿಲ್ಲದೆ ಈ ಕೆರೆಯ ಕಳೆಯನ್ನು ತೆಗೆಯಲು ಕನಿಷ್ಠ 6 ತಿಂಗಳಾದರೂ ಸಮಯ ಬೇಕಾಗಿರುತ್ತದೆ. ವಿದೇಶದಿಂದ ಯಂತ್ರ ಖರೀದಿ ಮಾಡಲು ಮೀನುಗಾರರ ಬಳಿ ಸಾಕಷ್ಟು ಬಂಡವಾಳ ಸಹ ಇರುವುದಿಲ್ಲ.
ಆಗ ಈ ಮೀನುಗಾರರ ಸಹಕಾರ ಸಂಘವು ಹೇಮಂತ್ ಕುಮಾರ್ ಅವರನ್ನು ಭೇಟಿ ಮಾಡಿ ಕೆರೆಯ ಕಳೆಯನ್ನು ತೆಗೆಯಲು `ಜಲ ಕಳೆ ನಿರ್ಮೂಲನಾ ಯಂತ್ರ’ವನ್ನು ತಯಾರಿಸಲು ಹೇಳಿದರು. ಕೆರೆಯ ಸಂರಕ್ಷಣೆ ನಮ್ಮೆಲ್ಲರ ಕರ್ತವ್ಯ ಎಂದು ತಿಳಿದ ಇವರು ತಮ್ಮ ಸಹಪಾಠಿಗಳೊಂದಿಗೆ 30 ದಿನಗಳಲ್ಲೇ ಈ ವಿನೂತನವಾದ ಯಂತ್ರವನ್ನು ಆವಿಷ್ಕಾರ ಮಾಡಿದ್ದಾರೆ.
ಆರು ತಿಂಗಳು ಮಾಡುವ ಕೆಲಸವನ್ನು ಕೇವಲ 35 ದಿನಗಳಲ್ಲಿ ಮಾಡಿ ಮುಗಿಸಬಲ್ಲ ಯಂತ್ರಕ್ಕೆ ಹಳೆಯ ವಸ್ತುಗಳನ್ನು ಬಳಸಿಕೊಂಡಿರುವುದು ವಿಶೇಷ. ಈ ಯಂತ್ರಕ್ಕೆ ಹಳೆಯ ಅಂಬಾಸಿಡರ್ ಕಾರ್ ಇಂಜಿನ್, ಟಾಟಾ ಸುಮೋ ಎಕ್ಸಿಯಲ್ ಬಾಕ್ಸ್‌ಗಳನ್ನು ಅಳವಡಿಸಲಾಗಿದ್ದು, ನೀರಿನಲ್ಲಿ ತೇಲುವಂತೆ ಯಂತ್ರಕ್ಕೆ ಎರಡು ಬದಿಯಲ್ಲಿಯೂ ತೇಲುವ ಪಟ್ಟಿಗಳನ್ನು ಅಳವಡಿಸಲಾಗಿದೆ.
ಕಳೆಯನ್ನು ದಡಕ್ಕೆ ತಳ್ಳಲು ನೆರವಾಗುವಂತೆ ಯಂತ್ರದ ಮುಂಭಾಗದಲ್ಲಿ ಕಬ್ಬಿಣದ ಸಲಾಕೆಗಳನ್ನು ನಿರ್ಮಿಸಲಾಗಿದೆ.
ಒಟ್ಟಾರೆಯಾಗಿ ಯಂತ್ರಕ್ಕೆ ತಗುಲಿದ ವೆಚ್ಚ ಕೇವಲ ಎರಡು ಲಕ್ಷ ಮಾತ್ರ.
ಜಲಕಳೆಯು ಅಕ್ಟೋಬರ್ ತಿಂಗಳಿಂದ ಫೆಬ್ರವರಿಯವರೆಗೆ ವೇಗವಾಗಿ ಬೆಳೆಯುತ್ತದೆ. ಚಳಿಗಾಲದ ಕಾರಣ ಕೆರೆಯಲ್ಲಿರುವ ಕಳೆಯನ್ನು ತೆಗೆಯುವುದು ಕಷ್ಟ. ಹಾಗಾಗಿ ಕೆಲವು ಕೆರೆಯಲ್ಲಿ ಬೆಳೆದ ಕಳೆಯನ್ನು ನಿರ್ಮೂಲನೆ ಮಾಡಲು ಕೆಮಿಕಲ್‌ಗಳನ್ನು ಬಳಸಲಾಗುತ್ತಿದೆ. ಇದರಿಂದ ಕಳೆಯು ನಾಶವಾದರೂ, ಕೆರೆಯಲ್ಲಿರುವ ಜೀವರಾಶಿಗೆ ಹಾನಿಯಾಗುತ್ತದೆ. ಕೆಮಿಕಲ್‌ಗಳ ಸಹಾಯ ಪಡೆಯದೆ ಜಲಕಳೆ ನಿರ್ಮೂಲನಾ ಯಂತ್ರವನ್ನು ಬಳಸಿಕೊಂಡು ಕಳೆಯನ್ನು ತೆಗೆಯುವುದು ಸರ್ವಕಾಲಕ್ಕೂ ಸೂಕ್ತವಾದದು.
ಈ ಜಲ ಕಳೆ ನಿರ್ಮೂಲನಾ ಯಂತ್ರದ ಸಹಾಯದಿಂದ ಕೆರೆಯ ಒಳಭಾಗದಿಂದ ಒಮ್ಮೆಲೆ 10 ಟನ್ ಕಳೆಯನ್ನು ಕೆರೆಯ ದಡಕ್ಕೆ ತಳ್ಳಿ ಕೊಡಲಾಗುತ್ತದೆ. ದಡದಲ್ಲಿರುವ ಹಿಟಾಚಿ ಯಂತ್ರಕ್ಕೆ 10 ಅಡಿ ಅಗಲವಿರುವ ಕಬ್ಬಿಣದ ಬಕೆಟ್ ಒಂದನ್ನು ಸಿಕ್ಕಿಸಲಾಗಿದ್ದು,
ಮೂರರಿಂದ ನಾಲ್ಕು ಟನ್ ಕಳೆಯನ್ನು ಒಂದೇ ಬಾರಿ ಹೊರ ತೆಗೆಯುತ್ತದೆ. ದಿನಕ್ಕೆ 20 ಲೀಟರ್ ನಷ್ಟು ಡೀಸೆಲ್ ಬೇಕಾಗುತ್ತದೆ. ಮಲೇಶಿಯಾ, ಯುರೋಪಿಯನ್‌ನಂತಹ ಅಭಿವೃದ್ಧಿ ರಾಷ್ಟ್ರಗಳಲ್ಲಿ ಇಂತಹ ಕಳೆ ತೆಗೆಯುವ ಯಂತ್ರಗಳನ್ನು ಯಥೇಚ್ಚವಾಗಿ ಬಳಸಿಕೊಳ್ಳಲಾಗುತ್ತಿದೆ. ಇಂತಹ ಯಂತ್ರಗಳಿಗೆ ಸುಮಾರು 40 ಲಕ್ಷದಿಂದ 4 ಕೋಟಿಯವರೆಗೂ ಖರ್ಚಾಗುತ್ತದೆ. ನಮ್ಮ ದೇಶದಲ್ಲಿ ಜಮ್ಮು ಮತ್ತು ಕಾಶ್ಮೀರದ ದಾಲ್ ಸರೋವರದಲ್ಲಿ ಎರಡು ಕಳೆ ತೆಗೆಯುವ ಯಂತ್ರಗಳು ಕಾರ್ಯನಿರ್ವಹಿಸುತ್ತಿದ್ದು, ಅವುಗಳನ್ನು ವಿದೇಶದಿಂದ ಆಮದು ಮಾಡಿಕೊಳ್ಳಲಾಗಿದೆ. ಈ ರೀತಿ ವಿದೇಶಗಳಿಂದ ಇಂತಹ ಯಂತ್ರಗಳನ್ನು ಆಮದು ಮಾಡಿಕೊಳ್ಳುವ ಬದಲಾಗಿ ದೇಶದಲ್ಲಿ ದೊರೆಯುವ ಸಂಪನ್ಮೂಲಗಳನ್ನು ಬಳಸಿಕೊಂಡು ಕಳೆ ತೆಗೆಯುವ ಯಂತ್ರವನ್ನು ಆವಿಷ್ಕರಿಸಿ, ಕೆರೆ ಸಂರಕ್ಷಣೆ ಮಾಡುತ್ತಿರುವುದು ನಮ್ಮ ರಾಜ್ಯಕ್ಕೆ ಹೆಮ್ಮೆ ತರುವ ವಿಷಯವಾಗಿದೆ. ಇದಕ್ಕೂ ಮೊದಲು ಒಂದು ಎಕರೆ ಪ್ರದೇಶದಲ್ಲಿ ಕಳೆಯನ್ನು ತೆಗೆಯಲು 6000 ರೂಪಾಯಿಗಳನ್ನು ವಿನಿಯೋಗಿಸಲಾಗುತ್ತಿತ್ತು. ಈ ಯಂತ್ರದ ನೆರವಿನಿಂದ 20 ಸಾವಿರ ಹಣದಿಂದ ಇಡೀ ಕೆರೆಯ ಕಳೆ ನಿರ್ಮೂಲನೆ ಮಾಡಲಾಗುತ್ತಿದೆ.
ಹೆಬ್ಬಾಳದಲ್ಲಿರುವ ಮೀನುಗಾರಿಕೆ ಮತ್ತು ಮಾಹಿತಿ ಕೇಂದ್ರ ಹಾಗೂ ಮೀನುಗಾರಿಕಾ ಇಲಾಖೆಯು ಜಂಟಿಯಾಗಿ ಈ ವಿನೂತನ ಕಳೆ ನಿರ್ಮೂಲನಾ ಯಂತ್ರವನ್ನು ಉನ್ನತೀಕರಿಸಲು ಪ್ರಯತ್ನಿಸುತ್ತಿವೆ. ಈ ರೀತಿಯ ವೈಜ್ಞಾನಿಕವಾಗಿ ಕಳೆ ತೆಗೆಯುವುದರಿಂದ ಕೆರೆಯಲ್ಲಿ ಹೆಚ್ಚು ಮೀನುಗಳನ್ನು ಉತ್ಪಾದಿಸಬಹುದು. ಇದರಿಂದ ಮೀನುಗಾರರು ಸಹ ಆರ್ಥಿಕವಾಗಿ ಸಬಲರಾಗುತ್ತಾರೆಂದು ಮೀನುಗಾರಿಕೆ ಮತ್ತು ಮಾಹಿತಿ ಕೇಂದ್ರದ ಮುಖ್ಯಸ್ಥರು ಅಭಿಪ್ರಾಯಪಟ್ಟಿದ್ದಾರೆ.
ಅನಿಲ್ ಕುಮಾರ್ ಎಂ. ಹೊಸಕೋಟೆ
[email protected]